ಯಕ್ಷಗಾನದ ವಿದ್ವಾಂಸ, ವಿಮರ್ಶಕ, ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಅಮೇರಿಕಾ ದೇಶಕ್ಕೆ ಹೋಗಿದ್ದಾರೆ, ಮರಳಿದ್ದಾರೆ! ಇದರಲ್ಲೇನು ವಿಶೇಷ?
ಎರಡು ತಿಂಗಳ ಖಾಸಗಿ ಪ್ರವಾಸ. ಸಮಯ, ಸಂದರ್ಭ ಸಿಕ್ಕರೆ ಸಾಹಿತ್ಯ ಉಪನ್ಯಾಸಗಳ ಒಲವಿತ್ತು. ಅಮೇರಿಕಾ ತಲಪುವಾಗ ಹತ್ತು ತಾಳಮದ್ದಳೆಗಳ ಆಯೋಜನೆಯು ಜೋಶಿಯವರಿಗೆ ಆಶ್ಚರ್ಯ ಮೂಡಿಸಿತ್ತು. ಕರಾವಳಿ ಮೂಲದ ಟೆಕ್ಸಾಸ್ನಲ್ಲಿರುವ ಪಣಂಬೂರು ವಾಸುದೇವ ಐತಾಳರ ಕ್ಷಿಪ್ರ ಆಯೋಜನೆಯ ಕಾರ್ಯಕ್ರಮ ಸರಣಿ. ಲೇಖಕ ಶ್ರೀವತ್ಸ ಜೋಷಿ, ಬಳಗದ ಹೆಗಲೆಣೆ. ಮಿಂಚಂಚೆ ಸಂಪರ್ಕದ ವ್ಯವಸ್ಥಿತ ಯಕ್ಷ ಪ್ಯಾಕೇಜ್ಗಳು!
ತಾಳಮದ್ದಳೆ ಅಂದಾಗ ಇಲ್ಲಿನ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಬೇಡಿ. ಕಡಲಾಚೆಯ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳ ಪೂರ್ಣ ಬಳಕೆ. ಯೂಟ್ಯೂಬಿನಲ್ಲಿ ಲಭ್ಯವಾಗುವ ಗುಣಮಟ್ಟದ ಕೂಟಾಟದ ಕ್ಲಿಪ್ಪಿಂಗ್ಸ್ಗಳನ್ನು ಕಂಪ್ಯೂಗೆ ಇಳಿಸಿಕೊಂಡು ಪ್ರಸಂಗ ಪದ್ಯಗಳ ಆಯ್ಕೆ. ಬೇಕಾದ ಪದ್ಯಗಳನ್ನು ಪ್ರತ್ಯೇಕವಾಗಿ ಮುದ್ರಿಸಿಕೊಂಡು ಜೋಡಣೆ. ಇದನ್ನು ನಿರ್ವಹಿಸಲೆಂದೇ ಒಬ್ಬ ನಿರ್ವಾಹಕ. ಅರ್ಥ ಮುಗಿದಾಗ ಗುಂಡಿ ಒತ್ತಿದರಾಯಿತು, 'ಇ-ಭಾಗವತಿಕೆ'ಯ ನಿರಾಕಾರ ಸೊಗಸಿನ ಸಾಕಾರ. ಎರಡು ಎರಡೂವರೆ ಗಂಟೆಗಳಿಗೆ ಹೊಂದುವಂತೆ 'ಭೀಷ್ಮ ಪರ್ವ' ಮತ್ತು 'ವಾಲಿವಧೆ' ಪ್ರಸಂಗಗಳು.
ಡಾ.ಜೋಶಿಯವರಿಗೆ ಭೀಷ್ಮ, ವಾಲಿ ಪಾತ್ರಗಳು. ಮಿಕ್ಕಂತೆ ಅರ್ಥಗಾರಿಕೆಯ ಸ್ಪರ್ಶವುಳ್ಳ ಸ್ಥಳೀಯರು! ಒಂದೆಡೆ ವಾಲಿವಧೆ ಪ್ರಸಂಗದಲ್ಲಿ 'ತಾರೆ'ಯ ಅರ್ಥವನ್ನು ಮಹಿಳೆಯೋರ್ವರು ನಿರ್ವಹಿಸಿದ್ದರು. ಬಾಲ್ಯದಲ್ಲಿ ಯಕ್ಷಗಾನದೊಂದಿಗೆ ಬೆಳೆದು ಉದ್ಯೋಗ ನಿಮಿತ್ತ ವಿದೇಶದಲ್ಲಿರುವ ಬಂಧುಗಳು ಪ್ರೇಕ್ಷಕರು. ಸರಣಿ ನಿಗದಿ ಆಗುತ್ತಿರುವಾಗಲೇ ಟೊರೆಂಟೋದಲ್ಲಿರುವ ಯಕ್ಷಗಾನದ ಮೇಳವು ಜತೆ ಸೇರಿತು. "ಬಹುಶಃ ಇದು ವಿಶ್ವದಲ್ಲಿಯೇ ಪ್ರಥಮವೇನೋ. ನನಗೂ ಅಲ್ಲೊಂದು ಮೇಳವಿದೆ ಅಂತ ಗೊತ್ತಿರಲಿಲ್ಲ. ವಿದೇಶದಲ್ಲಿ ಮೇಳ ಕಟ್ಟಿದ ನವೀನ ಹೆಗಡೆ, ರಘು ಕಟ್ಟಿನಕೆರೆ ಇವರ ಕೆಲಸ ಶ್ಲಾಘನೀಯ" ಎನ್ನುತ್ತಾರೆ ಡಾ.ಜೋಶಿ.
ವಾಶಿಂಗ್ಟನ್ನ ಆಲ್ಬನಿನ ಭಕ್ತಾಂಜನೇಯ ದೇವಸ್ಥಾನದಲ್ಲಿ ಪೂರ್ಣ ಪ್ರಮಾಣದ - ಹಿಮ್ಮೇಳ ಸಹಿತ - ತಾಳಮದ್ದಳೆ. ಪ್ರಸಂಗ 'ಭರತಾಗಮನ.' ಜೋಶಿಯವರ ರಾಮ. ದೇವಳದ ಮುಖ್ಯ ಅರ್ಚಕ, ವಿದ್ವಾನ್ ಬಾಲಕೃಷ್ಣ ಭಟ್ಟರ 'ಭರತ'ನ ಪಾತ್ರ. ಯಾರಿಗೆಲ್ಲಾ ಸರಣಿಗೆ ಬರಲಾಗಲಿಲ್ಲವೋ ಅವರೆಲ್ಲಾ ಜೋಶಿಯವರನ್ನು ಖಾಸಗಿಯಾಗಿ ಮನೆಗೆ ಆಹ್ವಾನಿಸುತ್ತಿದ್ದರು. ನನ್ನ ಶಾಲಾ ಸಹಪಾಠಿಗಳ ಕುಟುಂಬ, ಅವರ ಸಂಬಂಧಿಕರು, ಮಗಳಂದಿರ ಆಪ್ತ ವರ್ತುುಲ... ಹೀಗೆ ಪ್ರತಿ ದಿನ ಒಂದಲ್ಲ ಒಂದು ಮನೆಯಲ್ಲಿ ತುಂಬು ಆತಿಥ್ಯ. ಆವರಿಸಿಕೊಳ್ಳುವ ಆಪ್ತತೆ. ಬಹುತೇಕ ಮನೆಗಳಲ್ಲಿ ಕನ್ನಡದ ಸಂಸ್ಕೃತಿ ಜೀವಂತವಾಗಿದೆ, ಎನ್ನುತ್ತಾ ವಿದೇಶ ನೆಲದ ಅನುಭವವನ್ನು ಜೋಶಿ ಕಟ್ಟಿಕೊಡುತ್ತಾರೆ, ನಾವು ಇಲ್ಲಿ ಕುಳಿತು ವಿದೇಶವನ್ನು ಹಳಿಯುತ್ತೇವೆ. ನಾವು ಏನನ್ನು, ಎಷ್ಟನ್ನು ತಿಳಿದುಕೊಂಡಿದ್ದೇವೋ ಅದಕ್ಕಿಂತ ಭಿನ್ನವಾದ ಬದುಕು ಅಲ್ಲಿದೆ.
ನಮ್ಮೂರಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಧ್ವನಿವರ್ಧಕ ವ್ಯವಸ್ಥೆ ಭೀಕರ! ಹೈ ವಾಲ್ಯೂಮ್ನಿಂದ ಬಹುತೇಕರ ಕಿವಿ ಸ್ತಬ್ಧವಾಗಿದೆ! ಈ ಹಿನ್ನೆಲೆಯಲ್ಲಿ ಅಲ್ಲಿನ ಧ್ವನಿವರ್ಧಕದ ವ್ಯವಸ್ಥೆ ಶ್ಲಾಘನೀಯ. ಹೆಚ್ಚಿನವರು ಇಲೆಕ್ಟ್ರಾನಿಕ್ ಇಂಜಿನಿಯರ್ಗಳು. ಅವರಿಗೆ ಧ್ವನಿವರ್ಧಕದ ಬಳಕೆಯ ಜ್ಞಾನವಿದೆ. ಅದರ ಅಳವಡಿಕೆ, ನಿರ್ವಹಣೆಯ ವಿಧಾನ, ವಿಕಾರವಾಗಿ ಬೊಬ್ಬಿಡದ 'ಕೆಣಿ'ಗಳನ್ನು ನಾವು ಅಲ್ಲಿಂದ ಕಲಿಯಬೇಕಾದುದು ಬೇಕಾದಷ್ಟಿದೆ. ಪ್ರೇಕ್ಷಕರ ಶ್ರವಣ ಶಕ್ತಿಯನ್ನು ಕಾರ್ಯಕ್ರಮಗಳು ಕಸಿದುಕೊಳ್ಳುವುದಿಲ್ಲ!
ತಾಳಮದ್ದಳೆಯನ್ನು ಹೇಗೆ ಅನುಭವಿಸುತ್ತಾರೆ? ಜೋಶಿ ಹೇಳುತ್ತಾರೆ, ಏನಿಲ್ಲವೆಂದರೂ ಐವತ್ತರಿಂದ ನೂರು ಮಂದಿಯ ಉಪಸ್ಥಿತಿ ಖಾಯಂ. ಅವರಿಗೆ ತಾಳಮದ್ದಳೆಯನ್ನು ಕೇಳಲು ಹಸಿವಿದೆ. ಶೈಕ್ಷಣಿಕವಾಗಿ ಗಟ್ಟಿಯಾದ ವಿಮರ್ಶಕರು. ಕೊನೆಗೆ ಪ್ರಶ್ನೋತ್ತರ. ತಾಳಮದ್ದಳೆಯನ್ನು ಕೇವಲ ಕೌತುಕವಾಗಿ ನೋಡುವುದಲ್ಲ. ಅದನ್ನು ಅನುಭವಿಸುತ್ತಾರೆ. ಅಲ್ಲಿ ರಸಿಕತೆ ಪ್ರೌಢವಾಗಿದೆ. ಮಾತುಮಾತಿಗೆ ನಗುವುದು, ಚಪ್ಪಾಳೆಗಳು ಇಲ್ಲವೇ ಇಲ್ಲ! ಒಂದು ಕಲೆಯಾಗಿ ಸ್ವೀಕರಿಸಿದ್ದಾರೆ.
ಆಗಸ್ಟ್ 29 ರಿಂದ ಸೆಪ್ಟೆಂಬರ್19ರ ತನಕ ಸೈಂಟ್ ಲೂವಿಸ್, ಚಿಕಾಗೋ, ಮೇರಿಲ್ಯಾಂಡ್, ಸನ್ಜೋಸ್, ಬರ್ಕ್ಲೀ, ಹೂಸ್ಟನ್, ಮೈಮಿ.. ಗಳಲ್ಲಿ ತಾಳಮದ್ದಳೆ. ಕಾರ್ಯಕ್ರಮದ ಆರಂಭಕ್ಕೆ ಔಚಿತ್ಯದ ಕುರಿತು ಸಂಘಟಕರಿಂದ ಮಾತು. ನಂತರ ಕೂಟ. ಕೊನೆಗೆ 'ನೀವು ಊರಿಗೆ ಮರಳಿದಾಗ ಯಕ್ಷಗಾನಕ್ಕೆ ನೀಡಬಹುದಾದ ಪ್ರೋತ್ಸಾಹ'ದ ಟಿಪ್ಗಳ ಪ್ರಸ್ತುತಿ. ವ್ಯವಸ್ಥಿತವಾದ ಆಯೋಜನೆ.
ಕೂಟಗಳಲ್ಲದೆ ಮಂಕುತಿಮ್ಮನ ಕಗ್ಗ, ಗಣೇಶ ಮತ್ತು ಗುರು.. ಈ ವಿಚಾರಗಳ ಉಪನ್ಯಾಸ. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸ ಪ್ರೊ.ರಾಬರ್ಫ಼್ ಗೋಲ್ಡ್ಮನ್ ಸಂಘಟಿಸಿದ್ದರು. 1970ರ ಸುಮಾರಿಗೆ ಇದೇ ವಿವಿಯ ವಿದ್ಯಾರ್ಥಿನಿ ಮಾರ್ತಾ ಆಸ್ಟನ್ ಸಿಕೋರಾ ಕನ್ನಾಡಿಗೆ ಬಂದಿದ್ದರು. ಯಕ್ಷಗಾನದ ವಿಶೇಷ ಅಧ್ಯಯನ ಮಾಡಿದ್ದು ಗಮನೀಯ. ಸರಣಿಯ ಕೆಲವು ಕಾರ್ಯಕ್ರಮಗಳಲ್ಲಿ ಮಾರ್ತಾ ಉಪಸ್ಥಿತರಿದ್ದುದು ಗಮನಾರ್ಹ.
ಒಟ್ಟೂ ಸರಣಿ ಕೂಟದ ಪುಳಕವನ್ನು ಹೊತ್ತು ತಂದ ಜೋಶಿ ಹೇಳುವುದು ಹೀಗೆ : "ಹತ್ತೋ ಇಪ್ಪತ್ತು ವರುಷದ ಹಿಂದೆ ಹೋಗಬೇಕಿತ್ತು. ಯಕ್ಷಗಾನ, ಕರಾವಳಿ ಮತ್ತು ಅಲ್ಲಿನ ಮನಸ್ಸುಗಳನ್ನು ಒಂದುಗೂಡಿಸುವ ಚಿಕ್ಕ ಹೆಜ್ಜೆಯೂರಬಹುದಿತ್ತು ಅನ್ನಿಸುತ್ತದೆ. ಏನು ಮಾಡಲಿ, ಕಾಲ ಮಿಂಚಿಹೋಯಿತು. ಒಂದೆಡೆ ಸಮೃದ್ಧ ಕಲಾ ಮಜಲು, ಇನ್ನೊಂದೆಡೆ ಅದು ಬೇಕೆಂಬ ಹಪಾಹಪಿ - ಈ ಎರಡೂ ದಡಗಳನ್ನು ಸೇರಿಸಬಹುದಿತ್ತು!"
ಮಂಗಳೂರು, ಮೂಡುಬಿದಿರೆ, ಕಾರ್ಕಳ.. ಮೊದಲಾದ ಪ್ರದೇಶಗಳಲ್ಲಿದ್ದ ಈಗ ಅಲ್ಲಿನವರಾದ ಆಪ್ತರ, ಬಂಧುಗಳ ಭೇಟಿ. ಚಿಕಾಗೋದಲ್ಲಿ ಹಿರಿಮಗಳು ಶ್ವೇತಾ ಸೂರ್ಯನಾರಾಯಣ, ವರ್ಜೀನಿಯಾದಲ್ಲಿ ಕಿರಿ ಮಗಳು ಸ್ವಾತಿ ಕಾರ್ತಿಕ್ ಕುಟುಂಬ ವಾಸ್ತವ್ಯವಿದೆ. ಅವರೊಂದಿಗೆ ಕಳೆಯಲು ಜೋಶಿ ಮೊದಲ ಬಾರಿಗೆ ಅಮೇರಿಕಾಕ್ಕೆ ಹೋಗಿದ್ದರು. ಆದರೆ ಯಕ್ಷಗಾನವು ಅಲ್ಲೂ ಅವರನ್ನು ಕಾಲಯಾಪನೆಗೆ ಬಿಟ್ಟಿಲ್ಲ! "ನನ್ನ ನಿರೀಕ್ಷೆಗೂ ಮೀರಿದ ಗೌರವ, ಊಹಿಸದ ರೀತಿಯ ಸ್ಪಂದನ. ಇದೆಲ್ಲ ಬೆಳೆದು ನಿಂತ ಯಕ್ಷಗಾನ ಕಲೆಗೆ ಸಂದ ಮಾನ. ನಾನು ಅದರ ಪ್ರತಿನಿಧಿಯಷ್ಟೇ. ಕಲೆಯನ್ನು ಪ್ರೀತಿಸುವ ಅಪ್ಪಟ ಸಹೃದಯರ ಋಣವನ್ನು ಹೇಗೆ ತೀರಿಸಲಿ," ಎನ್ನುವಾಗ ಭಾವುಕರಾಗುತ್ತಾರೆ.
ಪ್ರವಾಸ ಮುಗಿಸಿ ಮರಳಿದಾಗ ಕಂಪ್ಯೂನಲ್ಲಿ ರಾಶಿ ರಾಶಿ ಮಿಂಚಂಚೆಗಳು. ಕಾರ್ಯಕ್ರಮದ ಹಿಮ್ಮಾಹಿತಿಗಳು. "ನನಗೊಂದು ಹೊಸ ಅನುಭವ. ವಿದೇಶಿ ಬಂಧುಗಳ ಕೃತಜ್ಞತೆಯ ಭಾರವನ್ನು ಹೊತ್ತು ದೇಶಕ್ಕೆ ಮರಳಿದ್ದೇನೆ. ಇನ್ನೊಂದೆರಡು ತಿಂಗಳು ಇರುತ್ತಿದ್ದರೆ ಕೂಟಗಳ, ಸಂಪರ್ಕಗಳ ಸಂಖ್ಯೆ ಹಿರಿದಾಗುತ್ತಿತ್ತು," ಎನ್ನುತ್ತಾ ಮಾತುಕತೆಗೆ ಮುಕ್ತಾಯ ಹಾಡುತ್ತಾರೆ, "ಆಟವೇ ಮಾತ್ರ ಒಂದು ಫಾರ್ಮ್ ಅಲ್ಲ, ತಾಳಮದ್ದಳೆಯೂ ಒಂದು ಫಾರ್ಮ್ ಎಂದು ತಿಳಿಸಲು ಈ ಟೂರ್ನಿಂದ ಸಾಧ್ಯವಾಯಿತು."
(ಪ್ರಜಾವಾಣಿ-ದಧಿಗಿಣತೋ ಅಂಕಣ/೨೬-೧೨-೨೦೧೫)
By the scale of success of yr US tour, you may plan to travel to that country every year.MMJoshi.
ReplyDeleteಚಿತ್ರದಲ್ಲಿ ಇರುವುದು ಯಕ್ಷಮಿತ್ರ ಟೊರೋಂಟೋ ಮತ್ತು ಆಲ್ಬನಿ ಕನ್ನಡ ಸಂಘ ಸೇರಿ ಆಯೋಜಿಸಿದ ಹಿಮ್ಮೇಳದೊಡನೆ ನೆಡೆದ ತಾಳಮದ್ದಲೆ. ಭೀಷ್ಮಭಕ್ತಿಯಲ್ಲಿ ಜೋಷಿಯವರ ಭೀಷ್ಮ.
ReplyDelete