Wednesday, January 6, 2016

ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ

              ಜನವರಿ 14. ಮಕರ ಸಂಕ್ರಮಣ. ಕೇರಳದ ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಪೂಜಾ ವೈಭವ. ಕ್ಷೇತ್ರ ಸಂದರ್ಶನಕ್ಕೆ ಪೂರ್ವಭಾವಿಯಾಗಿ ವೃತಧಾರಿಗಳಾಗುವುದು ಪದ್ಧತಿ. ದೇಶಾದ್ಯಂತ ವೃತಧಾರಿ ಅಯ್ಯಪ್ಪ ಭಕ್ತರು ಜೀವನ ಬದ್ಧತೆಯನ್ನು ರೂಢಿಸಿಕೊಂಡು ಶಬರಿಮಲೆ ಯಾತ್ರೆ ಹೊರಡುತ್ತಾರೆ. ಇದಕ್ಕೆ ಮುನ್ನ ಧಾರ್ಮಿಕ, ಬೌದ್ಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಊರಿನಲ್ಲಿ ಜರುಗಿಸುವುದು ವಾಡಿಕೆ.
            ಇಂತಹ ಸಂದರ್ಭಗಳಲ್ಲಿ 'ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ' ಎನ್ನುವ ಯಕ್ಷಗಾನ ಪ್ರಸಂಗವನ್ನು ಯಕ್ಷಗಾನಪ್ರಿಯ ಭಕ್ತರು ವ್ಯವಸ್ಥೆಗೊಳಿಸುತ್ತಾರೆ.  ಹವ್ಯಾಸಿ, ವೃತ್ತಿ ಮೇಳಗಳಲ್ಲಿ ಜನಪ್ರಿಯವಾದ ಯಕ್ಷಗಾನ ಪ್ರಸಂಗವಿದು. ಧರ್ಮ ಸಮನ್ವಯ, ಬಾಂಧವ್ಯಗಳ ಸಂದೇಶ ಸಾರುವ ಈ ಆಖ್ಯಾನಕ್ಕೆ ಶ್ರೀ ಧರ್ಮಸ್ಥಳ ಮೇಳವು 1964-65ರಲ್ಲಿ ಶ್ರೀಕಾರ ಬರೆಯಿತು. ಐವತ್ತು ವರುಷಗಳಲ್ಲಿ ಸಾವಿರಾರು ಪ್ರದರ್ಶನವನ್ನು ಪ್ರಸಂಗ ಅನುಭವಿಸಿದೆ. ಸುಳ್ಯದಲ್ಲಿ ಜರುಗಿದ ಮೊದಲ ಪ್ರದರ್ಶನ, ಜನಸ್ವೀಕೃತಿ, ಕಲಾಸ್ವೀಕೃತಿ ಮತ್ತು ಪ್ರಸಂಗ ವೈಭವವನ್ನು ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರ ಮಾತಲ್ಲಿ ಕೇಳೋಣ :
            ಕದಿರುದ್ಯಾವರ ವಾಸುದೇವ ನಾಯ್ಕ್ ಎನ್ನುವ ಕವಿ 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವನ್ನು ರಚಿಸಿದ್ದರು. ಆಗಿನ ಧರ್ಮಾಧಿಕಾರಿ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಪ್ರಸಂಗವನ್ನು ಓದಿ, ಅಧ್ಯಯನ ಮಾಡಿ ಒಪ್ಪಿಗೆ ನೀಡಿದ್ದರು. ನಾರಾಯಣ ಕಾಮತ್ ಆಗ ಮೇಳದ ವ್ಯವಸ್ಥಾಪಕರಾಗಿದ್ದರು. ಕಡತೋಕ ಮಂಜುನಾಥ ಭಾಗವತರು  ಮತ್ತು  ಪುತ್ತೂರು ನಾರಾಯಣ ಹೆಗ್ಡೆಯವರು ಪ್ರಸಂಗದ ಸನ್ನಿವೇಶ, ಪದ್ಯಗಳು, ವೇಷಭೂಷಣ, ರಂಗನಡೆಗಳ ಕುರಿತು ನಿರ್ದೇಶನ ಮಾಡಿದ್ದರು. ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಮೊದಲ ಪ್ರದರ್ಶನ ಜರುಗಿತ್ತು.
            'ಭಸ್ಮಾಸುರ ಮೋಹಿನಿ' ಪ್ರಸಂಗ ಆಗಲೇ ಚಾಲ್ತಿಯಲ್ಲಿತ್ತು. 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ' ಪ್ರಸಂಗವೂ ಮನೆಮಾತಾಗಿತ್ತು. ಹಾಗಾಗಿ ನಾಟಕೀಯ ಮತ್ತು ಸಮಸಾಮಯಿಕ ವ್ಯಕ್ತಿ ಪಾತ್ರಗಳನ್ನು ಚಿತ್ರಿಸಲು ಕಷ್ಟವಾಗಲಿಲ್ಲ. ರಾತ್ರಿ ಒಂದು ಗಂಟೆಯ ತನಕ 'ಭಸ್ಮಾಸುರ ಮೋಹಿನಿ' ಪ್ರಸಂಗ. ನಂತರ 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗ. ಟೆಂಟ್ನೊಳಗೆ ಜರುಗಿದ ಮೊದಲ ಪ್ರದರ್ಶನವೇ ಜಯಭೇರಿ. ಎಲ್ಲಾ ಕಲಾವಿದರ ಶ್ರಮ, ಸಮಾಲೋಚನೆ, ಅಧ್ಯಯನದ ಫಲವಾಗಿ ಪ್ರಸಂಗ ಜನಮನ್ನಣೆ ಪಡೆಯಿತು.
              ಧರ್ಮಸ್ಥಳ ಮೇಳವೆಂದರೆ ನಂ.1 ವೈಭವದ ಮೇಳ. ಭಾಗವತಿಕೆಯಲ್ಲಿ ಕಡತೋಕ ಮಂಜುನಾಥರು ಮತ್ತು ದೇರಣ್ಣ ರೈ. ಪಾತ್ರಧಾರಿಗಳು ಕೂಡಾ ಗಟ್ಟಿಗರೇ. ಕುಂಬಳೆ ಸುಂದರ ರಾವ್ (ಈಶ್ವರ), ಪುತ್ತೂರು ನಾರಾಯಣ ಹೆಗ್ಡೆ (ಭಸ್ಮಾಸುರ), ಪಾತಾಳ ವೆಂಕಟ್ರಮಣ ಭಟ್ (ಮೋಹಿನಿ ಮತ್ತು ಅಯ್ಯಪ್ಪ), ಮೂಡಬಿದ್ರೆ ಮಾಧವ ಶೆಟ್ಟಿ (ಕೇತಕಿ ವರ್ಮ), ಕೋಟ ವೈಕುಂಠ (ಸುಮುಖಿ), ಶ್ರೀಧರ ಭಂಡಾರಿ (ಮಣಿಕಂಠ), ಎಂಪೆಕಟ್ಟೆ ರಾಮಯ್ಯ ರೈ (ವಾವರ), ವಿಟ್ಲ ಗೋಪಾಲಕೃಷ್ಣ ಜೋಶಿ (ಕೇಳು ಪಂಡಿತ), ಚಂದ್ರಗಿರಿ ಅಂಬು (ಶಬರಾಸುರ), ಪಕಳಕುಂಜ ಕೃಷ್ಣ ನಾಯ್ಕ್ (ಕುಂಭ), ಕಡಬ ಸಾಂತಪ್ಪ ಮತ್ತು ಶೀನ ಆಚಾರ್ (ಅಬ್ಬು, ಸೇಕು)... ’ಕೇತಕಿವರ್ಮ ಮತ್ತು ಶಬರಾಸುರ’ ಪಾತ್ರಗಳು ಒಂದು ಸನ್ನಿವೇಶದಲ್ಲಿ ಮಲೆಯಾಳ ಭಾಷೆಯಲ್ಲೇ ಸಂಭಾಷಣೆ ನಡೆಸಿದುದು ನೆನಪಿದೆ. ಇಬ್ಬರು ಕಲಾವಿದರು ಮಲೆಯಾಳ ಭಾಷೆಯನ್ನು ಪ್ರಬುದ್ಧವಾಗಿ ಮಾತನಾಡಬಲ್ಲವರಾಗಿದ್ದರು.
            ಎಂಪೆಕಟ್ಟೆಯವರ 'ವಾವರ' ಪಾತ್ರವು ತುಂಬಾ ಪರಿಣಾಮಕಾರಿಯಾಗಿ ಮೂಡಿ ಬರುತ್ತಿತ್ತು. ಆ ಬಳಿಕ ಅದೇ ದಾರಿಯನ್ನು ಉಳಿದವರೂ ಕ್ರಮಿಸಿದರು. ಆ ಪ್ರಸಂಗದಲ್ಲಿ 'ಮಣಿಕಂಠ' ಪಾತ್ರವನ್ನು ನಾನು ಮಾಡುತ್ತಿದ್ದೆ. ಸಭೆಯ ಮಧ್ಯದಲ್ಲಿ ಹುಲಿಯನ್ನೇರಿ ಪ್ರವೇಶ ಮಾಡುವಾಗ ಖುಷಿಯಿಂದ ಪ್ರೇಕ್ಷಕರು ಎತ್ತಿ ಆಡಿಸಿದ ಆ ಕ್ಷಣಗಳನ್ನು ಹೇಗೆ ಮರೆಯಲಿ? ಮುಸ್ಲಿಂ ಬಂಧುಗಳು ಕೂಡಾ ಪ್ರಸಂಗವನ್ನು ಇಷ್ಟಪಟ್ಟಿದ್ದರು. ಪ್ರಸಂಗದ ಎಲ್ಲಾ ಪದ್ಯಗಳು ಕಂಠಪಾಠವಾಗಿತ್ತು.
            ವಿಟ್ಲ ಜೋಷಿಯವರ 'ಕೇಳುಪಂಡಿತ' ಪಾತ್ರವು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತು. ಪ್ರಸಂಗದ ಕೊನೆಗೆ ಅಯ್ಯಪ್ಪ ಮತ್ತು ಕೇಳುಪಂಡಿತ ಯುದ್ಧದ ಸಂದರ್ಭದ ಚಿತ್ರಣಕ್ಕೆ ಪ್ರೇಕ್ಷಕರು ನಿಬ್ಬೆರಗಾಗುತ್ತಿದ್ದರು. ರಬ್ಬರ್ ಚೆಂಡನ್ನು ಸ್ವಲ್ಪ ಕೊರೆದು, ಅದರೊಳಗೆ ಕೆಂಪು ಬಣ್ಣದ ನೀರನ್ನು ತುಂಬಿಸಿ, ತನ್ನನ್ನು ತಾನೇ ಕೊಂದುಕೊಳ್ಳುವ ಸಂದರ್ಭದಲ್ಲಿ ಆ ಚೆಂಡನ್ನು ಹಣೆಗೆ ಜೋಷಿಯವರು ಹೊಡೆದುಕೊಳ್ಳುತ್ತಿದ್ದರು. ಚೆಂಡಿನೊಳಗಿದ್ದ ಕೆಂಪು ವರ್ಣವು ಇಡೀ ಶರೀರವನ್ನು ವ್ಯಾಪಿಸಿ ರಕ್ತಮಯವಾದಂತೆ ಭಾಸವಾಗುತ್ತಿತ್ತು.
             ಕೆಲವು ವರುಷಗಳ ಬಳಿಕ ನನ್ನ ತೀರ್ಥರೂಪರ ಸುಬ್ರಹ್ಮಣ್ಯ ಮೇಳ ಸೇರಿದೆ. ಪದ್ಯಗಳು ಹೇಗೂ ಕಂಠಸ್ಥವಾಗಿದ್ದುವಲ್ಲಾ. ಅದನ್ನು ಲಿಪೀಕರಿಸಿದೆ. ಈ ಪ್ರಸಂಗವು ಭಾಗಮಂಡಲದಲ್ಲಿ ಪ್ರದರ್ಶಿತವಾಯಿತು. ಆಗ ನಾರಂಪಾಡಿ ಸುಬ್ಬಯ್ಯ ಶೆಟ್ಟರು ಮೇಳದಲ್ಲಿದ್ದರು. ಸುಮುಖಿಗೆ ದುರ್ಬೋಧೆ ಮಾಡುವ 'ದುರ್ಮುುಖಿ' ಎನ್ನುವ ಪಾತ್ರವನ್ನು ಹೊಸತಾಗಿ ಸೇರ್ಪಡೆ ಮಾಡಲಾಯಿತು. ಕೈಕೆಯಿ-ಮಂಥರೆಯ ಸಂಭಾಷಣೆಯ ಮಾದರಿಯಂತೆ ದೃಶ್ಯ ಸಂಯೋಜನೆ. ಅದು ತುಂಬಾ ಕ್ಲಿಕ್ ಆಯಿತು. ಆಗ ಸುಮುಖಿ ಪಾತ್ರವನ್ನು ಪೊಳಲಿ ಲೋಕಯ್ಯ ಮತ್ತು ದುರ್ಮುುಖಿ ಪಾತ್ರವನ್ನು ಬೆಳಾಲು ಈಶ್ವರ ಆಚಾರಿ ನಿರ್ವಹಿಸಿದ್ದರು. ಆಗ ಮೇಳದಲ್ಲಿ ಕಳಿಯೂರು ನಾರಾಯಣ ಆಚಾರ್ ಭಾಗವತರು.
              ಭಾವೈಕ್ಯದ ಸಂದೇಶವನ್ನು ಸಾರುವ 'ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವು ಸಾರ್ವಕಾಲಿಕವಾಗಿ ಪ್ರದರ್ಶನ ಮಾಡಬಹುದಾದ ಗಟ್ಟಿ ಹೂರಣವನ್ನು ತನ್ನೊಡಲಲ್ಲಿ ತುಂಬಿಕೊಂಡಿದೆ. ಕಳೆದ ಎರಡು ದಶಕದೀಚೆಗೆ ಈ ಪ್ರಸಂಗದ ಪದ್ಯಗಳು ಅಲ್ಲಿಲ್ಲಿ ತಿರುಚಿದಂತೆ ಭಾಸವಾಗುತ್ತಿದೆ. ಕೆಲವು ಮೂಲ ಪದ್ಯಗಳೇ ಮಾಯವಾಗಿವೆ. ಪಾತ್ರಗಳು ಸಂದೇಶ ಕೊಡಲು ಹಿಂಜರಿಯುತ್ತಿವೆ! ಪಾತ್ರ ಸೌಂದರ್ಯ ಅಭಿವ್ಯಕ್ತಿ ಮರೆತು ನಗಿಸುವುದೇ ಉದ್ದೇಶವಾಗಿದೆ. ಪ್ರಸಂಗವು ಐವತ್ತು ವರುಷಗಳನ್ನು ಪೂರೈಸಿದೆ. ಮೊದಲ ಪ್ರದರ್ಶನದಲ್ಲಿ ವೇಷ ಮಾಡಿದ್ದೇನೆಂಬ ಹೆಮ್ಮೆ ಮತ್ತು ಖುಷಿಯಿದೆ.
 (ಚಿತ್ರ : ಸಂದೀಪ್ ಫೊಟೋಗ್ರಫಿ / ಸಾಂದರ್ಭಿಕ ಚಿತ್ರ)


No comments:

Post a Comment