Monday, November 21, 2016

ಐದೇ ವರುಷದಲ್ಲಿ ಐನೂರು!




              ಮಂದಾರ್ತಿ ಮೇಳದ ಪ್ರಧಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್.  ಇವರ ಕಲ್ಪನೆಯ 'ನಡುಮನೆ ಗಾಯನ'ಕ್ಕೆ ಐನೂರರ ಖುಷಿ. ಯಕ್ಷಗಾನದ ಗಾಯನ ಸೊಗಸನ್ನು ಕಲಾ ಮನಸ್ಸುಗಳಿಗೆ ತಲುಪಿಸುವ ಉದ್ದೇಶ. ಬೇಸಿಗೆಯಲ್ಲಿ ಮೇಳದ ವ್ಯವಸಾಯ. ಮಳೆಗಾಲದಲ್ಲಿ ನಡುಮನೆ ಗಾಯನ. ಹೀಗೆ ವರುಷಪೂರ್ತಿ ಯಕ್ಷಗಾನವೇ ಬದುಕು. ಐನೂರು ಕಾರ್ಯಕ್ರಮದ ಹಿಂದೆ ಐದು ವರುಷದ ಶ್ರಮವಿದೆ.
               ಆ ದಿನ. ಉಡುಪಿ-ಪುತ್ತೂರು ಶ್ರೀ ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 'ನಡುಮನೆ ಗಾಯನ'ಕ್ಕೆ ಬೀಜಾಂಕುರ.  ಉಡುಪಿ ಕೆಳಾರ್ಕಳಬೆಟ್ಟು 'ನಗರ ಯಕ್ಷಬಳಗ'ದ ರೂಪೀಕರಣ. ಗಾಯನಕ್ಕೆ ಭಾಗವತ ಮತ್ತು ಓರ್ವ ಮದ್ದಳೆಗಾರ. ದಿವಸಕ್ಕೆ ಆರೇಳು ಮನೆಗಳ ಆಯ್ಕೆ. ಒಂದೊಂದು ಮನೆಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷ ಗಾಯನ. ಪುರಾಣ ಪ್ರಸಂಗಗಳ ಪದ್ಯಗಳ ಆಯ್ಕೆ. ಯಾವುದೇ ಸಂಭಾವನೆಯ ನಿರೀಕ್ಷೆಯಿರಲಿಲ್ಲ. ಪಾಲಿಗೆ ಬಂದಷ್ಟು ಸ್ವೀಕಾರ.
               ಒಂದು ವಾರ ಆಗಿರಬಹುದಷ್ಟೇ. ಕೊಡಂಕೂರಿನ ಕಲಾಪ್ರಿಯರೊಬ್ಬರಿಂದ ಆಹ್ವಾನ. ಕಾಲು ಗಂಟೆ ಸಾಲದು. ಎರಡು ಗಂಟೆಯಾದರೂ ಗಾಯನ ಬೇಕು. ಜತೆಗೆ ಚೆಂಡೆಯ ವಾದನವೂ ಬೇಕು. ಮಾಡಲು ಸಾಧ್ಯವೇ? ಎಂದು ವಿನಂತಿಸಿದರು. ಧ್ವನಿವರ್ಧಕ, ಪ್ರಚಾರದ ವ್ಯವಸ್ಥೆಯನ್ನೂ ಮಾಡಿದರು. ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು. ಅಂದಿನಿಂದ ದಿವಸಕ್ಕೆ ಒಂದೇ ಕಾರ್ಯಕ್ರಮ! ಅದೂ ಶಾಲೆ, ದೇವಾಲಯ, ಮನೆಗಳಲ್ಲಿ.
              ಮೂರು ವರುಷದಲ್ಲಿ ಮುನ್ನೂರೈವತ್ತು 'ನಡುಮನೆ ಗಾಯನ'! ಪ್ರಥಮ ವರುಷವೇ ನೂರರ ಸಂಭ್ರಮದ ಆಚರಣೆ. ಮುನ್ನೂರೈವತ್ತು ಕಾರ್ಯಕ್ರಮವೆಂದರೆ ಅದರ ಹಿಂದಿನ ಶ್ರಮ ಕಾಣದು. ಮನೆಗಳ ಆಯ್ಕೆ, ಪ್ರಚಾರ, ಆತಿಥ್ಯ.. ಇವೆಲ್ಲವೂ ಜೋಡಿಸಿಕೊಂಡು, ಕಲಾವಿದರನ್ನೂ ಸೇರಿಸಿಕೊಂಡು ಮಾಡಬೇಕಷ್ಟೇ. ಇದರಿಂದ ಯಕ್ಷಗಾನದ ಪದ್ಯಗಳ ಸೊಗಸನ್ನು ಜನರಿಗೆ ತಲುಪಿಸಲು ಸಹಕಾರಿಯಾಯಿತು, ಎನ್ನುತ್ತಾರೆ ಯಕ್ಷಗಾಯನದ ರೂವಾರಿ ನಗರ ಸುಬ್ರಹ್ಮಣ್ಯ ಆಚಾರ್.
              ಎರಡು ವರುಷದ ಹಿಂದೆ ಮಂದಾರ್ತಿಯ ಯಕ್ಷಗಾಯನ ಕಾರ್ಯಕ್ರಮಕ್ಕೆ ತೆಂಕಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿಯವರು ಆಮಂತ್ರಿತರಾಗಿದ್ದರು. 'ಯಕ್ಷಗಾಯನದೊಂದಿಗೆ ಯಕ್ಷನೃತ್ಯವನ್ನೂ ಅಳವಡಿಸಿದರೆ ಪರಿಣಾಮಕಾರಿಯಲ್ವಾ,' ಸಲಹೆ ನೀಡಿದರು. ಯಕ್ಷನೃತ್ಯದ ಪರಿಕಲ್ಪನೆ ಮತ್ತು ವಿನ್ಯಾಸ ಇಲ್ಲಿಗೆ ಹೊಸತು. ಸ್ತ್ರೀಪಾತ್ರಧಾರಿ ಸಂತೋಷ ಕುಲಶೇಖರರಿಂದ ಜರುಗಿದ ಆದರೆ ಜರುಗಿದ ನೃತ್ಯ ಕಲಾಪ ಕ್ಲಿಕ್ ಆಯಿತು. ಕಲಾ ಪ್ರೇಕ್ಷಕರ ಸ್ವೀಕೃತಿಯೂ ದೊರೆಯಿತು. ಅಂದಿನಿಂದ ಗಾಯನದೊಂದಿಗೆ ನೃತ್ಯವೂ ಹೊಸೆಯಿತು. ಎರಡು ವರುಷದಲ್ಲಿ ನೂರೈವತ್ತು ಕಾರ್ಯಕ್ರಮಗಳಾಗಿವೆ.
                 ಒಟ್ಟು ಎರಡೂವರೆ ಗಂಟೆ. ಅದರಲ್ಲಿ ಒಂದೂಕಾಲು ಗಂಟೆ ಯಕ್ಷಗಾಯನ.  ಉಳಿದರ್ಧ ನೃತ್ಯ. ಪೌರಾಣಿಕ ಪ್ರಸಂಗಗಳ ಕಥಾಭಾಗಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ವಿನ್ಯಾಸಕ್ಕೆ ಭಂಗ ಬಾರದಂತೆ ಪುಟ್ಟ ಸಂಭಾಷಣೆಗಳು.  ಹೋದೆಡೆ ಎಲ್ಲಾ ಬಂಧುಗಳು ಸ್ವಾಗತ ಕೋರಿದ್ದಾರೆ. ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಯಕ್ಷಗಾನವನ್ನು ಗೌರವಿಸಿದ್ದಾರೆ, ಎನ್ನುತ್ತಾರೆ ಆಚಾರ್.
            ಒಂದು ಕಾರ್ಯಕ್ರಮಕ್ಕೆ ಹದಿಮೂರುವರೆ ಸಾವಿರ ರೂಪಾಯಿ ವೀಳ್ಯ. ವೈಯಕ್ತಿಕವಾಗಿ ಭರಿಸುವವರೂ ಇದ್ದಾರೆ. ಸಾರ್ವಜನಿಕವಾಗಿ ಅಷ್ಟಿಷ್ಟು ಸಂಗ್ರಹಮಾಡಿ ಆಯೋಜಿಸುವವರೂ ಇದ್ದಾರೆ. ಧ್ವನಿವರ್ಧಕ, ವೇದಿಕೆ, ಜನರೇಟರ್.. ಎಲ್ಲಾ ವ್ಯವಸ್ಥೆಗಳನ್ನು ತಂಡ ಹೊಂದಿದೆ. ನಮ್ಮಲ್ಲಿಗೆ ಬನ್ನಿ ಎಂದು ಆಹ್ವಾನಿಸುವವರ ಸಂಖ್ಯೆ ಬೆಳೆದಿದೆ. ಇದು ಯಕ್ಷಗಾನದ ಹಿರಿಮೆಯಲ್ವಾ ಎಂದು ಸಂತೋಷಿಸುವ ಸುಬ್ರಹ್ಮಣ್ಯ ಆಚಾರ್, ಗೇಲಿ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ನನಗೆ ಬೇರೆ ಆರ್ಥಿಕ ಮೂಲವಿಲ್ಲ. ಯಕ್ಷಗಾನವೇ ಬದುಕು. ಬದುಕೇ ಯಕ್ಷಗಾನ. ನನಗಿದು ಅನ್ನದ ದಾರಿ. ಯಕ್ಷಗಾನವನ್ನು ಮನೆಗೆ, ಹಳ್ಳಿಗೆ ಕೊಂಡೊಯ್ದ ತೃಪ್ತಿ, ಸಮಾಧಾನವಿದೆ, ಎನ್ನುತ್ತಾರೆ.
            ಮೇಳದ ತಿರುಗಾಟದ ಅವಧಿಯಲ್ಲೂ ನಡುಮನೆ ಗಾಯನವಿದೆ. ಅಂತಹ ಹೊತ್ತಲ್ಲಿ ಅದರ ಜವಾಬ್ದಾರಿಯನ್ನು ಆಯೋಜಕರೇ ವಹಿಸಿಕೊಳ್ಳುತ್ತಾರೆ. ಸಂಘ ಸಂಸ್ಥೆಗಳು ಗಾಯನ ಕಲಾಪಕ್ಕೆ ತುಂಬು ಬೆಂಬಲ ನೀಡಿವೆ. ಹಿರಿಯ ಕಲಾವಿದರು ಬೆನ್ನು ತಟ್ಟಿದ್ದಾರೆ. ಮಣಿಪಾಲದ ಉಪನ್ಯಾಸಕ, ಲೇಖಕ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿಯವರು ತುಂಬು ಪ್ರೋತ್ಸಾಹ ನೀಡಿದ್ದಾರೆ, ಎನ್ನುತ್ತಾರೆ. ಐನೂರು ಕಾರ್ಯಕ್ರಮದಲ್ಲೂ ನಗರ ಸುಬ್ರಹ್ಮಣ್ಯ ಆಚಾರ್ ಅವರೇ ಭಾಗವತರು. ಮಹೇಶ್ ಮಂದಾರ್ತಿ ಮದ್ದಳೆಗಾರರು. ರಾಮಕೃಷ್ಣ ಮಂದಾರ್ತಿ ಚೆಂಡೆ ವಾದಕರು. ಅಗತ್ಯ, ಒತ್ತಡ, ಅಪೇಕ್ಷೆಯಿದ್ದಾಗ ಅತಿಥಿ ಕಲಾವಿದರನ್ನು ಹೊಂದಿಸಿಕೊಳ್ಳುತ್ತಾರೆ.
          ಮಳೆಗಾಲದಲ್ಲಿ ಚಿಕ್ಕ ಮೇಳಗಳು ಹಿಮ್ಮೇಳ, ವೇಷಗಳೊಂದಿಗೆ ತಿರುಗಾಟ ಮಾಡುತ್ತಿವೆ. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಗಳು ಜನಮಾನಸದಲ್ಲಿ ದಾಖಲಾಗಿವೆ. ಗಾನವೈಭವಗಳು ಯಥೇಷ್ಟವಾಗಿದೆ. ಪ್ರದರ್ಶನಗಳಿಗೆ ಅದ್ದೂರಿತನ ಹೊಸೆದಿದೆ. ಊಟೋಪಚಾರ, ಆತಿಥ್ಯಕ್ಕೆ ಮೊದಲ ಮಣೆ. ಪ್ರಕೃತ ಯಕ್ಷಗಾನದ ಸುದ್ದಿಗಳು ಮಾತಿಗೆ ವಸ್ತುವಾಗಿದೆ.
           ಇಂತಹ ಹೊತ್ತಲ್ಲಿ ನಗರ ಸುಬ್ರಹ್ಮಣ್ಯ ಆಚಾರ್ ತಂಡವು ಯಾವುದೇ ಗಿಮಿಕ್ ಇಲ್ಲದೆ, ಗಾಯನಸುಧೆಯನ್ನು ಉಣಿಸುತ್ತಿರುವುದು ಶ್ಲಾಘ್ಯ.  ಅವರಿಗೆ ಇದು ಹೊಟ್ಟೆಪಾಡಾದರೂ, ಈ ಹಾದಿಯಲ್ಲಿ ಗೌರವವಿದೆ. ಮಾನ-ಸಂಮಾನಗಳು ಪ್ರಾಪ್ತವಾಗಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಯಕ್ಷಗಾನವನ್ನು ಗೌರವದ ಕಣ್ಣಿನಿಂದ ನೋಡುತ್ತಾ, ಮನದಲ್ಲಿ ಮಾನಿಸುತ್ತಾ, ಸಮಾಜದಿಂದಲೂ ಗೌರವವನ್ನು ಅಪೇಕ್ಷಿಸುತ್ತಾ, ಅದರಂತೆ ನಡೆಯುವ ಮತ್ತು ಈ ವಿನ್ಯಾಸವನ್ನು ಜನರ ಮಧ್ಯೆ ಒಯ್ಯುವ ಸಾಧನೆ ಸಣ್ಣದಲ್ಲ.
              ಅಕ್ಟೋಬರ್ 28ರಂದು ಅಪರಾಹ್ನ 3 ರಿಂದ ನಡುಮನೆ ಯಕ್ಷಗಾನ ಗಾಯನ ಮತ್ತು ಯಕ್ಷ ನಾಟ್ಯದ ಐನೂರರ ಸಂಭ್ರಮ. ಪುತ್ತೂರು ಉಡುಪಿ ಶ್ರೀ ಭಗವತಿ ಕ್ಷೇತ್ರದಲ್ಲಿ ಸಮಾರಂಭ. ಈ ಸಮಾರಂಭದಲ್ಲಿ ಸ್ತ್ರೀಪಾತ್ರಧಾರಿ ಸಂತೋಷ ಕುಲಶೇಖರರಿಗೆ 'ಯಕ್ಷಮೇನಕೆ' ಪ್ರಶಸ್ತಿ ಪ್ರದಾನ. ಸುಬ್ರಹ್ಮಣ್ಯ ಭಾಗವತರ ಆಶಯಗಳಿಗೆ ಪೂರ್ಣಪ್ರಮಾಣದಲ್ಲಿ ಸ್ಪಂದಿಸಿದ ಕಲಾವಿದ. ಪ್ರಕೃತ ಮಂದಾರ್ತಿ ಮೇಳದ ಪ್ರಧಾನ ಸ್ತ್ರೀಪಾತ್ರಧಾರಿ. ಸಮಾರಂಭದ ಬಳಿಕ ನಡುಮನೆ ಯಕ್ಷಗಾನ, ಯಕ್ಷ ನಾಟ್ಯ.
             ಹಸಿವಿದ್ದಲ್ಲಿ ಪ್ರೀತಿಯಿದೆ, ವಿಶ್ವಾಸವಿದೆ. ಹಸಿದ ಮನಸ್ಸಿಗೆ ಬೇಕು, ಮುದ ನೀಡುವ ನಾದ-ಗಾಯನ. ಇದರಲ್ಲಿ ಕಲಾವಿದನೂ ಮೀಯುತ್ತಾನೆ, ಪ್ರೇಕ್ಷಕರನ್ನೂ ಮೀಯಿಸುತ್ತಾನೆ. ಮೀಯಲು ತಿಳಿಯದಿದ್ದರೆ ಮೀಯಿಸುವುದೇನನ್ನು? ಸಾಗಿ ಬಂದ ಹಾದಿಗೆ, ಬೆರಳು ತೋರಿದ ಪರಂಪರೆಗೆ ಯಾಕೆ ಕೃತಘ್ನರಾಗುತ್ತೇವೆ ಎಂದು ಅರ್ಥವಾಗುತ್ತಿಲ್ಲ. ವರ್ತಮಾನದ ರಂಗಭೂಮಿಯ ಭಾವ ನನ್ನೊಳಗೆ ಗೂಡು ಕಟ್ಟಿದ್ದು ಹೀಗೆ.
              ಸಾಗಿ ಬಂದ ಹಾದಿಯನ್ನು ಮರೆಯದ, ಪರಂಪರೆಗೆ ಮುಖತಿರುಗಿಸದೆ, ಎರಡನ್ನೂ ಗೌರವ ಭಾವದಿಂದ ಕಾಣುವ ನಗರ ಸುಬ್ರಹ್ಮಣ್ಯ ಆಚಾರ್ ಅವರ ನಡುಮನೆ ಯಕ್ಷಗಾಯನ, ಯಕ್ಷನಾಟ್ಯ ವಿನ್ಯಾಸಗಳು ಕಲಾಮನಸ್ಸುಗಳನ್ನು ಕಟ್ಟಿವೆ, ಕಟ್ಟುತ್ತಿವೆ.

No comments:

Post a Comment