Saturday, February 3, 2018

ಗಾನದೊಳಗೆ ಮಿಂದ ಕವಿಮನಸ್ಸಿನ ಪುಳಕ


  ಯಕ್ಷಗಾನವೊಂದರಲ್ಲೇ ಸಾವಿರಕ್ಕೂ ಮಿಕ್ಕಿ ಪ್ರಸಂಗ ರಚನೆಯ ಕವಿಗಳಿರುವುದು ಕಲೆಯೊಂದರ ಶ್ರೀಮಂತಿಕೆಗೆ ಸಾಕ್ಷಿ. ಬಹುಶಃ ದೇಶದಲ್ಲಿರುವ ಇತರ ಯಾವ ಕಲೆಗಳಲ್ಲೂ ಇಷ್ಟೊಂದು ಸಂಖ್ಯೆಯ ಕವಿಗಳಿರುವುದು ಸಂಶಯ. ಹೀಗಿದ್ದೂ ಯಕ್ಷಗಾನವೇ ಕವಿಗಳನ್ನು ಮರೆತಿರುವುದು ದುರಂತ. ಕವಿಗಳ ಪರಿಚಯವು ಕಲಾವಿದರಿಗೆ ತಿಳಿದಿರುವುದು ತೀರಾ ಕಡಿಮೆ.” ಪ್ರಸಂಗಕರ್ತ, ವಿಮರ್ಶಕ ಶ್ರೀಧರ ಡಿ.ಎಸ್. ಅವರ ಮಾತಿನಲ್ಲಿ ಯಕ್ಷಗಾನ ಕ್ಷೇತ್ರದ ಕಾವ್ಯ ಸಂಪನ್ನತೆಯ ಅರಿವಾಯಿತು.
       .25ರಂದು ಶ್ರೀ ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಐವತ್ತರ ಹುಟ್ಟುಹಬ್ಬ. ಕಾಸರಗೋಡು ಜಿಲ್ಲೆಯ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿಸುವರ್ಣ ಗಾನಾರ್ಚನೆ ಎನ್ನುವ ವಿಶೇಷ ಕಲಾಪದ ಮೂಲಕ ಹಬ್ಬದ ಸಂಪನ್ನತೆ. ಪ್ರಸಂಗಕರ್ತ, ವಿಮರ್ಶಕ ಶ್ರೀಧರ ಡಿ.ಎಸ್. ಇವರು ಯಕ್ಷಗಾನ ಕವಿಗಳನ್ನು ಪ್ರತಿನಿಧಿಸಿದ್ದರು. ಐವತ್ತು ಕವಿಗಳು ರಚಿಸಿದ ವಿಶಿಷ್ಟ ಛಂದಸ್ಸಿನ ರಚನೆಗಳನ್ನು, ವಿಭಿನ್ನ ಮಟ್ಟುಗಳಲ್ಲಿ ಮಯ್ಯರು ಹಾಡಿದ್ದರು. ಪ್ರತೀ ಹಾಡಿನ ಪೂರ್ವದಲ್ಲಿ ಕವಿಪರಿಚಯ, ಕವಿನಮನ.
       ಪ್ರಸಂಗವೊಂದರ ಪ್ರದರ್ಶನ ನೋಡುತ್ತಾ ಸಂತೋಷಪಡುತ್ತೇವೆ. ಪ್ರಸಂಗವನ್ನು ಬರೆದ ಕವಿಯನ್ನು ಮರೆಯುತ್ತೇವೆ. ನೆನಪಿಸಿಕೊಳ್ಳಬೇಕೆಂಬ ಸೌಜನ್ಯವು ಎಂದೋ ಉಸಿರು ಕಳೆದುಕೊಂಡಿದೆ! ಕೆಲವು ಪ್ರಸಂಗ ಪುಸ್ತಕದಲ್ಲಿ ಕವಿಗಳ ಉಲ್ಲೇಖವಿರುವುದಿಲ್ಲ. ಹಿಂದಿನ ಕವಿಗಳು ಪ್ರಚಾರ ಬಯಸದವರು. ‘ಪ್ರಸಂಗಗಳು ಪ್ರದರ್ಶನಗೊಂಡರೆ ಕವಿಗಳು ಜನಮನದಲ್ಲಿ ಉಳಿಯುತ್ತಾರೆ - ಶ್ರೀಧರರ ಡಿ.ಎಸ್. ಅವರ ಆಶಯವನ್ನು ಸಿರಿಬಾಗಿಲು ಮಯ್ಯರು ಅರ್ಥಮಾಡಿಕೊಂಡಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ಕವಿ ನಮನವನ್ನೇ ಪ್ರಧಾನವಾಗಿ ಬಿಂಬಿಸಿದ್ದಾರೆ. ಗಾನಕ್ಕೆ ಅರ್ಚನೆಯ ಆರಾಧನಾ ಭಾವವನ್ನು ಮಿಳಿತಗೊಳಿಸಿದ್ದಾರೆ. ಯಕ್ಷಗಾನವು ಕಲಾವಿದರ ಪಾಲಿಗೆ ಆರಾಧನೆಯಾಗದೆ ಅದು ಉಳಿಯದು ಎನ್ನುವ ಎಚ್ಚರ ಮಯ್ಯರಲ್ಲಿದೆ.
       ಹತ್ತೊಂಭತ್ತನೇ ಶತಮಾನದಲ್ಲಿ ದೇವಿಮಹಾತ್ಮೆ ಪ್ರಸಂಗ ರಚನೆಯಾಗಿದೆ. ಪ್ರಸಂಗವೊಂದು ರಚನೆಯಾಗಿರಬೇಕಾದರೆ ಪ್ರದರ್ಶನವೂ ಆಗಿರಬೇಕು. ಹಾಗಾಗಿ ದೇವಿಮಹಾತ್ಮೆಗೆ ಪ್ರಾಚೀನತೆಯಿದೆ. ಸಂಕಯ್ಯ ಭಾಗವತರ  ಕಿಟ್ನರಾಜಿ ಪ್ರಸಂಗೊ ಬಹುಶಃ ತುಳುವಿನಲ್ಲಿ ಪ್ರಥಮ. ಯಾವುದೇ ಸಾಹಿತ್ಯ ರಚನೆಗೂ ಸರಿಮಿಗಿಲೆನಿಸುವ ಯಕ್ಷಗಾನದ ರಚನೆಗಳನ್ನು ಸಾಹಿತ್ಯವೆಂದು ಸ್ವೀಕರಿಸಲು ನಮ್ಮ ಸಾಹಿತ್ಯ (ಸಾಹಿತಿ) ವಲಯಕ್ಕೆ ಹಿಂಜರಿಕೆ ಯಾಕೋ ಗೊತ್ತಾಗುತಿಲ್ಲ. ಪ್ರಸಂಗಗಳಿಗೆ ಅದನ್ನು ಕಾವ್ಯವಾಗಿಯೇ ಓದುವ ಸುಪುಷ್ಟತೆಯಿದೆ - ಗಾನಾರ್ಚನೆಯ ಮಧ್ಯೆ ಹಾದು ಹೋದ ವಿಷಾದ, ವಿಚಾರಗಳಿವು.
       ಅಜಪುರ ಸುಬ್ರಹ್ಮಣ್ಯ, ಮಟ್ಟಿ ವಾಸುದೇವ ಪ್ರಭು, ಮುಂಡೋಡು ನಾರಾಯಣ, ದೇವಿದಾಸ, ಅದ್ಯಪ್ಪಾಡಿ ರಾಮಕೃಷ್ಣಯ್ಯ, ಅಜ್ಜನಗದ್ದೆ ಗಣಪಯ್ಯ ಭಾಗವತರು, ಕಡಂದಲೆ ರಾಮರಾವ್, ತಲೆಂಗಳ ರಾಮಕೃಷ್ಣ ಭಟ್, ಹಟ್ಟಿಯಂಗಡಿ ರಾಮ ಭಟ್, ಮುದ್ದಣ, ಪಾರ್ತಿಸುಬ್ಬ.. ಹೀಗೆ ಐವತ್ತು ಕವಿಗಳ ನಮನ ಮತ್ತು ಗಾಯನ ಜತೆಜತೆಯಾಗಿ ನಡೆದಿರುವುದು ವಿರಳ. ಗಾನಾರ್ಚನೆಯಲ್ಲಿ ಮಧೂರು ವೆಂಕಟಕೃಷ್ಣ, ಯೋಗೀಶ ರಾವ್ ಚಿಗುರುಪಾದೆ.. ಉಪಸ್ಥಿತರಿದ್ದು, ತಮ್ಮ ರಚನೆಯ ಗಾಯನವನ್ನು ಆಸ್ವಾದಿಸಿದ್ದರು.
       ಕವಿಯೊಬ್ಬ ಬದುಕಿರುವಾಗಲೇ ಆತನ ರಚನೆಯ ಗಾಯನಕ್ಕೆ ಕಿವಿಯಾಗುವುದು ನಿಜಕ್ಕೂ ಪುಳಕದ ಅನುಭವ. ಓರ್ವ ಕವಿಗೆ ಸಂಮಾನ, ಪ್ರಶಸ್ತಿಗಿಂತ ಕವಿ ನಮನ ಹಿರಿದು. ಕವಿತೆ ಬರೆಯುವಾಗ ಸಾಹಿತ್ಯಕ್ಕೆ ಹೊಂದಿಕೊಂಡು ಭಾವ ಸೃಷ್ಟಿಯಾಗುತ್ತದೆ. ಅದು ರಂಗದಲ್ಲಿ ಹಾಡಾಗಿ, ನಾದವಾಗಿ ಕೇಳಿದಾಗ ಆಗ ಕಟ್ಟಿಕೊಡುವ ಅನುಭವ ಇದೆಯಲ್ಲಾ, ಅದು ಅವರ್ಣನೀಯ - ಪ್ರಸಂಗಕರ್ತ ಮಧೂರು ವೆಂಕಟಕೃಷ್ಣರ ಅನುಭವ.
       ಸಿರಿಬಾಗಿಲು ಮಯ್ಯರು ಐವತ್ತು ಕವಿಗಳ ರಚನೆಗಳನ್ನು ಹಾಡಿದ್ದಾರೆ. ಹಿರಿ-ಕಿರಿಯ ಭಾಗವತರುಗಳನ್ನು, ಚೆಂಡೆ-ಮದ್ದಳೆ ವಾದಕರನ್ನು ಆಹ್ವಾನಿಸಿದ್ದರು. ಅಪರಾಹ್ನ ಒಬ್ಬೊಬ್ಬ ಭಾಗವತರಿಂದ ಐದಾರು ಹಾಡುಗಳ ಪ್ರಸ್ತುತಿ. ಅವರವರ ಆಯ್ಕೆಯ ಹಾಡುಗಳ ಗಾಯನವು ನಿಜಾರ್ಥದ ಗಾನಾರ್ಚನೆಯಾಗಿ ಮೂಡಿಬಂತು. ಬಲಿಪ ನಾರಾಯಣ ಭಾಗವತ, ಪ್ರಸಾದ ಬಲಿಪ, ಶಿವಶಂಕರ ಬಲಿಪ, ದಿನೇಶ ಅಮ್ಮಣ್ಣಾಯ, ಲೀಲಾವತಿ ಬೈಪಾಡಿತ್ತಾಯ, ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ, ಪಟ್ಲ ಸತೀಶ ಶೆಟ್ಟಿ, ರಮೇಶ ಭಟ್ ಪುತ್ತೂರು, ಸುಬ್ರಾಯ ಸಂಪಾಜೆ, ತೆಂಕಬೈಲು ಮುರಳಿ ಶಾಸ್ತ್ರಿ, ಪುರುಷೋತ್ತಮ ಭಟ್, ಹೊಸಮೂಲೆ ಗಣೇಶ ಭಟ್, ಗೋಪಾಲಕೃಷ್ಣ ಮಯ್ಯ ಪೆಲತ್ತಡ್ಕ, ತಲ್ಪಣಾಜೆ ವೆಂಕಟ್ರಮಣ ಭಟ್.. ಇವರೆಲ್ಲರ ವಿವಿಧ ಶೈಲಿಗಳು, ಮಟ್ಟುಗಳ ವೈವಿಧ್ಯಗಳು ಗಾನವಾಗಿ ಹರಿದುವು.
ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ ರಾವ್, ಮುರಾರಿ ಕಡಂಬಳಿತ್ತಾಯ, ಗಣೇಶ್ ಭಟ್ ನೆಕ್ಕರೆಮೂಲೆ  ಹರಿನಾರಾಯಣ ಬೈಪಾಡಿತ್ತಾಯ, ಲಕ್ಷ್ಮೀಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾಯ, ಚೇವಾರು ಶಂಕರ ಕಾಮತ್, ಅಡೂರು ಲಕ್ಷ್ಮೀನಾರಾಯಣ, ಕೊಂಕಣಾಜೆ ಚಂದ್ರಶೇಖರ ಭಟ್, ಗುರುಪ್ರಸಾದ್ ಬೊಳಿಂಜಡ್ಕ, ಚೈತನ್ಯಕೃಷ್ಣ ಪದ್ಯಾಣ, ಪ್ರಶಾಂತ ಶೆಟ್ಟಿ ವಗೆನಾಡು, ಕೃಷ್ಣಪ್ರಕಾಶ್ ಉಳಿತ್ತಾಯ,  ಲವಕುಮಾರ್ ಐಲ, ಪಿ.ಜಿ.ಜಗನ್ನಿವಾಸ ರಾವ್, ಉದಯ ಕಂಬಾರು, ಮುರಳಿಮಾಧವ ಮಧೂರು, ಗಣೇಶ ಭಟ್ ಬೆಳಾಲು.. ಗಾನಾರ್ಚನೆಗೆ ನಾದಗಳ ಪುಷ್ಪಾರ್ಚನೆಯನ್ನು ಮಾಡಿದ ಅನುಭವಿಗಳು. ಹೀಗೆ ಪೂರ್ಣ ಪ್ರಮಾಣದ ಹಿಮ್ಮೇಳವು ವಿಭಿನ್ನವಾಗಿ ಸಂಪನ್ನಗೊಂಡಾಗ ಅದರ ಸಿಹಿಯ ಗಾಢತೆಯು ಪ್ರೇಕ್ಷಕರ ಭಾವಕೋಶದ ಸದೃಢತೆಯ ಮೇಲೆ ಅನುಭವ ವೇದ್ಯವಾಗುತ್ತದೆ.
       ಗಾನಾರ್ಚನೆಯನ್ನು ಉದ್ಘಾಟಿಸಿದ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮಾತಿಗೆ ಸಿಕ್ಕಿದರು. “ಭಾಗವತಿಕೆ, ಚೆಂಡೆ, ಮದ್ದಳೆಗಳ ಮೂಲಪಾಠವನ್ನು ಬದಲಿಸುವ ಧೈರ್ಯ ಹಿಂದಿನ ಕಲಾವಿದರಲ್ಲಿದ್ದಿರಲಿಲ್ಲ. ಯಾಕೆಂದರೆ ಕಲೆಯೊಂದರ ಕುರಿತ ಭಯ ಮತ್ತು ಶ್ರದ್ಧೆ. ಮೂಲಪಾಠವನ್ನಿಟ್ಟುಕೊಂಡು ಮಾಡುವ ವಿನ್ಯಾಸಗಳು ಯಕ್ಷಗಾನವಾಗಿಯೇ ಉಳಿಯುತ್ತದೆ, ಕಾಣುತ್ತದೆ. ಮೂಲಪಾಠದಿಂದ ಕಳಚಿಕೊಂಡ ಯಾವ ವಿನ್ಯಾಸಗಳೂ ಯಕ್ಷಗಾನವಾಗಿ ಉಳಿಯುವುದಿಲ್ಲ.” ಸುವರ್ಣ ಗಾನಾರ್ಚನೆಯ ಅಪರಾಹ್ನದ ಕಲಾಪಗಳಲ್ಲಿ ಮಾಂಬಾಡಿಯವರ ಮಾತುಗಳು ರಂಗವನ್ನು ಪ್ರವೇಶಿಸಿ ನಿರ್ಗಮಿಸುತಿತ್ತು, ಕೆಲವೊಮ್ಮೆ ಸಪ್ಪೆಮೋರೆ ಹಾಕುತ್ತಿತ್ತು! 
       ಬಯಲಾಟ, ತಾಳಮದ್ದಳೆ, ಗಾನವೈಭವ, ನೃತ್ಯ ವೈಭವ.. ಇಲ್ಲೆಲ್ಲಾ ಹೊಸ ಹೊಸ ವಿನ್ಯಾಸಗಳ ಗಾನವನ್ನೋ, ಚೆಂಡೆ-ಮದ್ದಳೆಗಳ ವೈಭವವನ್ನೋ ನೋಡುತ್ತೇವೆ. ಬಳಿಕ ಕಲಾವಿದರ ಮುಂದೆ ಅವರನ್ನು ಹೊಗಳುತ್ತೇವೆ, ಹೊನ್ನಶೂಲಕ್ಕೇರಿಸುತ್ತೇವೆ. ವೈಯಕ್ತಿಕವಾಗಿ ಮಾತಿಗೆ ಸಿಕ್ಕಾಗ ಗೊಣಗುತ್ತೇವೆ. ಇದೇ ಗೊಣಗಾಟವನ್ನು ಆಯಾಯಾ ಕಲಾವಿದರಲ್ಲಿ ಏಕಾಂತವಾಗಿ ಹಂಚಿಕೊಳ್ಳುವುದಿಲ್ಲ. ವಿಮರ್ಶೆಯನ್ನು ಸ್ವೀಕರಿಸುವ ಮನಃಸ್ಥಿತಿ ಬಹುತೇಕ ಕಲಾವಿದರಲ್ಲಿದೆ. ಬಹುಶಃ ಕಲೆಯೊಂದರ ಪ್ರಸ್ತುತಿಯು ಮೇಲ್ನೋಟಕ್ಕೆ ವೈಭವವಾಗಿ ಕಾಣುತ್ತದೆ. ಕಲೆಯ ಅಂತರಂಗದಲ್ಲಿರುವ ವಿಷಾದಕ್ಕೆ ಕಲಾವಿದರು ಮಾತ್ರವಲ್ಲ, ಪ್ರಜ್ಞಾವಂತ ಪ್ರೇಕ್ಷಕರೂ ಕಾರಣ ಅಲ್ವಾ. ಗಾನಾರ್ಚನೆಯಂತಹ ವಿಶಿಷ್ಟ ಕಲಾಪದಲ್ಲಿ ಮಾಂಬಾಡಿಯವರೆಂದಂತೆ ಯಕ್ಷಗಾನವನ್ನು ಮರೆಯದ ಗಾನವೋ, ಚೆಂಡೆಯ ನಾದವೋ, ಮದ್ದಳೆಯ ಉಲಿತವೋ ಕಾಣಿಸಿಕೊಳ್ಳುವುದು ಹಳೆಯ ಜಾಡನ್ನು ನೆನಪಿಸಿಕೊಂಡಂತೆ. ಒಂದರ್ಥದಲ್ಲಿ ಪ್ರಾತಃಸ್ಮರಣೀಯ ಕಲಾವಿದರಿಗೆ ನಮನ ಸಲ್ಲಿಸಿದಂತೆ.
       ಕಲಾವಿದನೊಬ್ಬ ಹತ್ತು, ಇಪ್ಪತ್ತು, ಇಪ್ಪತ್ತೈದು ವರುಷದ ರಂಗ ವ್ಯವಸಾಯ ಪೂರ್ತಿಗೊಂಡಾಗ ಗೌರವ ಪಡೆಯುತ್ತಾನೆ. ಸಂಮಾನ ಸ್ವೀಕರಿಸುತ್ತಾನೆ. ಸಮಾಜವು ಆತನನ್ನು ಗುರುತಿಸುತ್ತದೆ. ಕಲೆ, ಕಲಾವಿದ ಎಲ್ಲಿ ಗೌರವಿಸಲ್ಪಡುತ್ತಾನೋ ಅಲ್ಲಿನ ಸಾಂಸ್ಕøತಿಕ ಉಸಿರು ಜೀವಂತವಿದೆ ಎಂದರ್ಥ. ಸಿರಿಬಾಗಿಲು ರಾಮಕೃಷ್ಣ ಮಯ್ಯರು ಇಂತಹ ಗೌರವಗಳಿಗೆಗಾನಾರ್ಚನೆ ಎನ್ನುವ ವಿಶಿಷ್ಟ ಕಲ್ಪನೆಯ ವಿನ್ಯಾಸವನ್ನು ನೀಡಿದ್ದಾರೆ. ಹಾರ, ತುರಾಯಿಗಳನ್ನು ದೂರವಿರಿಸಿ ಗಾನಖುಷಿಯನ್ನು, ರಂಗಸುಖವನ್ನುಸಂಭ್ರಮಿಸಬಹುದು ಎಂದು ತೋರಿದ್ದಾರೆ. ಯಕ್ಷಗಾನವನ್ನು ಪ್ರೀತಿಸುವ ಮತ್ತು ಭಾಗವತ ಮಯ್ಯರ ಅಭಿಮಾನ ಹೊಂದಿದ ಪ್ರೇಕ್ಷಕರು ದಿನಪೂರ್ತಿ ಭಾಗವಹಿಸಿದ್ದಾರೆ. ಕಲಾವಿದರೆಲ್ಲೂ ಗಾನ-ಅರ್ಚನೆಯಲ್ಲಿ ಭಾಗವಹಿಸಿ ಮಯ್ಯರನ್ನು ಅಭಿನಂದಿಸಿದ್ದಾರೆ. ಕಲಾವಿದನೊಬ್ಬ ಗರಿಷ್ಠ ಎಷ್ಟು ಖುಷಿಯನ್ನು ಪಡೆಯಬಹುದೋ ಅಷ್ಟನ್ನು ಮಯ್ಯರು ಅನುಭವಿಸಿದ್ದಾರೆ.
       ವರ್ತಮಾನದ ಕಾಲಘಟ್ಟದಲ್ಲಿ ಓರ್ವ ವೃತ್ತಿ ಕಲಾವಿದ ಪೂರ್ತಿಯಾಗಿಸೇವೆ ಮಾಡುವುದು ಕಷ್ಟ ಮತ್ತು ಅಸಂಭವ. ಆದರೆ ಮನದೊಳಗೆ ಸೇವಾ ಭಾವ ಜಾಗೃತವಾಗಿರುವುದು ಕಲೆ ಮತ್ತು ಕಲಾವಿದನಿಗೆ ಭೂಷಣ. ಆಗ ಆತನೊಳಗಿನ ಕಲೆಯ ಹೊಳಪು ಹೆಚ್ಚಾಗುತ್ತದೆ. ಯಕ್ಷಗಾನವು ಮಯ್ಯರಿಗೆ ಸ್ವ-ಹಿತ. ಅದು ಬದುಕು. ಹಾಗೆಂದು ಬದುಕಿಗಾಗಿ ನಂಬಿದ ಕಲೆಯನ್ನು ಪ್ರೀತಿಸುತ್ತಾ, ಅರಾಧಿಸುತ್ತಾ ಬಂದಿರುವುದು ಅವರು ಕಲೆಗೆ ನೀಡುವ ಮಾನ-ಸಂಮಾನ. ಅವಕಾಶ ಮತ್ತು ಆರ್ಥಿಕತೆಯನ್ನೇ ಭಾವವಾಗಿಸಿಕೊಳ್ಳದೆ ತನ್ನನ್ನು ಸಾಕುತ್ತಿರುವ ರಂಗದ ಕುರಿತು ಸು-ಮನಸ್ಸನ್ನು ಹೊಂದಬಹುದು ಎನ್ನುವುದಕ್ಕೆ ಮಯ್ಯರ ಹುಟ್ಟುಹಬ್ಬದಗಾನಾರ್ಚನೆಯೊಂದು ಉತ್ತಮ ನಿದರ್ಶನ
    
(ಚಿತ್ರ : ಉದಯ ಕಂಬಾರು, ನೀರ್ಚಾಲು)
ಪ್ರಜಾವಾಣಿಯ ‘ದಧಿಗಿಣತೋ’ ಅಂಕಣ / 27-10-2017


No comments:

Post a Comment