Monday, July 2, 2018

ಬೆಳೆಯುವ ಕಲಾವಿದನಿಗೆ ಪ್ಲಾಟಿನ ಹಂಗಿಲ್ಲ!

             ಅಂದುದೇವಿಮಹಾತ್ಮೆಪ್ರಸಂಗ. ತುಂಬು ಪ್ರೇಕ್ಷಕರು. ರಕ್ತಬೀಜ ಮತ್ತು ಶ್ರೀದೇವಿಯ ಸಂವಾದದ ಸಂದರ್ಭ. ರಕ್ತಬೀಜ ಪಾತ್ರಧಾರಿಯ ನಿರರ್ಗಳ ಅರ್ಥಗಾರಿಕೆಗೆ ಬೆರಗಾಗಿದ್ದೆ! ದೇವಿಯೊಂದಿಗಿನ ಸಂವಾದದಲ್ಲಿ ಎನೋ ಎಡವಟ್ಟಾದಂತೆ ಭಾಸವಾಯಿತು. ಮೊದಲಿನ ಮಾತಿನ ಓಘವಾಗಲೀ, ಗತ್ತುಗಾರಿಕೆಯಾಗಲೀ ಉಳಿದಂತಿಲ್ಲ.  ಮುಂಜಾನೆಯ ಹೊತ್ತಲ್ವಾ, ಸಭಾಸದರೂ ತಲ್ಲೀನರಾಗಿ ಆಟವನ್ನು ನೋಡುತ್ತಿರಲಿಲ್ಲ! ಕೊನೆಗೆ ತಿಳಿಯಿತು, ದೇವಿ ಪಾತ್ರಧಾರಿ ತನ್ನ ಎಂದಿನ ಸಿದ್ಧ ಅರ್ಥವನ್ನು (Plot, ಪ್ಲಾಟ್)  ಹೇಳದೆ ಅದೇ ಭಾವ ಬರುವಂತೆ ಮಾತನಾಡಿದ್ದರು. ಇದು ರಕ್ತಬೀಜ ಪಾತ್ರಧಾರಿಯ ಚಿತ್ತವನ್ನು ಚಿತ್ತುಮಾಡಿತ್ತು! ಕೊನೆಗೆ ಚೌಕಿಯಲ್ಲಿ ಅವರಿಬ್ಬರೊಳಗೆ ವಾಗ್ಯುದ್ಧ ನಡೆಯುವುದನ್ನೂ ಗಮನಿಸಿದೆ.
                ದೇವಿ ಪಾತ್ರಧಾರಿಯು ಸಿದ್ಧ ಮಾತುಗಾರಿಕೆಯಿಂದ ಹೊರಳಿದಾಗ, ಅದೇ ಜಾಡಿನಲ್ಲಿ ರಕ್ತಬೀಜನೂ ಯಾಕೆ ಸಾಗಬಾರದು? ಇದಿರು ವೇಷಧಾರಿಯ ಅರ್ಥದಲ್ಲಿ ಹೊಸ ಹೊಳಹುಗಳು ಬಂದಾಗ ತನ್ನ ಅರ್ಥವು ಢಾಳಾಗುವುದೇಕೆ?  ಮೂಡ್ ಕೆಡುವುದೇಕೆ? ಎನ್ನುವ  ಪ್ರಶ್ನೆಗಳಿಗೆ ಉತ್ತರ ಕಷ್ಟ. ಇದುಸಿದ್ಧ ಅರ್ಥಗಾರಿಕೆಯು ತರುವ ಫಜೀತಿ. ಕೆಲವೆಡೆ ಬಾಲ ಕಲಾವಿದರನ್ನು ನೋಡುತ್ತಿದ್ದೇನೆ. ಏಳೆಂಟು ವರುಷದಿಂದ ಅವರುದೇವೇಂದ್ರನ ಬಲ (ಅಗ್ನಿ, ವರುಣ) ವೇಷಗಳನ್ನೇ ಮಾಡುತ್ತಿದ್ದಾರೆ. ಅರ್ಥವನ್ನು ಕಣ್ಣು ಮುಚ್ಚಿ ಬಿಡಿಸುವುದರೊಳಗಾಗಿ ಪಟಪಟನೆ ಹೇಳುತ್ತಾರೆ.  ಉಳಿದ ಪಾತ್ರಗಳು ಬಂದಾಗ ಕಂಠಸ್ಥವಾಗಿರುವುದಕ್ಕೆ ಅಲ್ಲಿಲ್ಲಿ ಕಸಿ ಮಾಡಿದರೆ ಆಯಿತು. ಇದರ ಹೊರತು ಹೊಸತಾದ ಪದಗಳನ್ನಾಗಲೀ, ವಾಕ್ಯಗಳನ್ನಾಗಲೀ ಹೊಸೆಯಲಾರರು. ಪಾತ್ರಗಳ ಹೊರತಾಗಿ ಕುಶ, ಭಾರ್ಗವ, ಅಭಿಮನ್ಯು, ಬಬ್ರುವಾಹನ, ಪ್ರಹ್ಲಾದ.. ವೇಷಗಳನ್ನು ನಿರ್ವಹಿಸಿದುದನ್ನು ನಾನು ಕಂಡಿಲ್ಲ!
                ಹವ್ಯಾಸಿ, ವೃತ್ತಿ ರಂಗದಲ್ಲಿ ವೇಷದ ಬಳಿಕ ಆಟ ನೋಡುವ ಪ್ರವೃತ್ತಿಯಿಂದ ಬಾಲ ಕಲಾವಿದರಿಗೆ ದೂರ, ಬಹುದೂರ. ದೇವೇಂದ್ರ ಬಲದ ಸ್ಥಾನದಿಂದ ಮೇಲೆರುವ ಛಲವೂ ಇಲ್ಲ. ಚೌಕಿಯಲ್ಲಿ ಹಿರಿಯರೊಂದಿಗೆ  ಒಡನಾಟವಿಟ್ಟುಕೊಂಡು ಅರ್ಥವನ್ನು ಕಲಿಯುವ ಹುಮ್ಮಸ್ಸು ಇದ್ದಂತಿಲ್ಲ. ವೇಷವಿಲ್ಲದ ಹೊತ್ತಲ್ಲಿ ಮೊಬೈಲು ಅಂಗೈಗೆ ಬಂದುಬಿಡುತ್ತದೆ. ಮೊಬೈಲಿನೊಳಗಿನ ತಲ್ಲೀತನೆಯ ಸ್ವಲ್ಪಭಾಗವಾದರೂ ಅನ್ನ ನೀಡುವ ವೃತ್ತಿಯಲ್ಲಿ ಬರುತ್ತಿದ್ದರೆ ಪಾತ್ರಾಭಿವ್ಯಕ್ತಿಯಲ್ಲಿ ಮೇಲ್ಮೆ ಸಾಧಿಸಬಹುದಿತ್ತು. ಇಂತಹ ಮನಸ್ಥಿತಿಯ ಯುವ ಮನಸ್ಸುಗಳಿಗೆ ಅನಾಸಕ್ತಿಯೇ ಜೀವನ. ಮೊಬೈಲ್ ಸರ್ವಸ್ವ. ವೃತ್ತಿ ಕಲಾವಿದ ತನ್ನ ಮೇಳದ ಆಟವನ್ನು ಕುಳಿತು ನೋಡುವುದೆಂದರೆ ಹವ್ಯಾಸಿ ಮಟ್ಟದಿಂದ ಆಟ ಮೇಲೇರಲೇ ಇಲ್ಲ ಎಂದು ಗ್ರಹಿಸಲಾಗುತ್ತದಂತೆ!
                ದಕ್ಷಾಧ್ವರ ಪ್ರಸಂಗದವಿಪ್ರ ಮತ್ತು ದಕ್ಷಾಯಿಣಿ, ಕೃಷ್ಣಾರ್ಜುನ ಪ್ರಸಂಗದರುಕ್ಮಿಣಿ-ಮಕರಂದ, ಕೃಷ್ಣ ಲೀಲೆ ಪ್ರಸಂಗದಕೃಷ್ಣ ಮತ್ತು ವಿಜಯ.. ಇಂತಹ ಪಾತ್ರಗಳ ಮಾತುಗಳಲ್ಲಿ ಬಿಂದು, ವಿಸರ್ಗ ಬಿಡುವಂತಿಲ್ಲ! ಹಿಂದಿನವರು ಕಟ್ಟಿಕೊಟ್ಟ ಮಾತಿನ ಮಾಲೆಯನ್ನೇ ನವೀಕರಿಸಲಾಗುತ್ತದೆ. ಅದಕ್ಕೆ ಪರ್ಯಾಯವಾದುದು  ಪರಿಣಾಮ ಕೊಡುವುದಿಲ್ಲ ಎನ್ನುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರು ಕೂಡಾ ಇಂತಹ ಅರ್ಥ ವಿನ್ಯಾಸವನ್ನು ಮೆಚ್ಚಿಕೊಳ್ಳುತ್ತಾರೆ. ಇದೇ ಜಾಡಿನಲ್ಲಿ ಕಲಾ ಯಾನವನ್ನು ಮಾಡುವ ಕಲಾವಿದ ಆರಕ್ಕೇರದೆ, ಮೂರಕ್ಕಿಳಿಯದೇ ಸಮಸ್ಥಿತಿಯನ್ನು ಕಾಪಾಡಿಕೊಂಡು ತಿರುಗಾಟ ಪೂರೈಸುತ್ತಾ ಇರುತ್ತಾರೆ. ಅರ್ಥಗಾರಿಕೆಯ ಸಿದ್ಧ ಮಾದರಿಗಳನ್ನು ಬಾಲ ಕಲಾವಿದರ ತಂಡಗಳೂ ಅನುಕರಿಸುವುದನ್ನು ಕಾಣುತ್ತೇವೆ.
           ಪೆರುವಡಿ ನಾರಾಯಣ ಹಾಸ್ಯಗಾರರುಹಾಸ್ಯಗಾರನ ಅಂತರಂಗಕೃತಿಯಲ್ಲಿ ಸಿದ್ಧ ಸಂಭಾಷಣೆಯ ಅನುಭವವನ್ನು ಉಲ್ಲೇಖಿಸುತ್ತಾರೆ - “ಮೇಳದ ತಿರುಗಾಟದಲ್ಲಿ ಯಾವುದೇ ಪಾತ್ರವಿರಲಿ, ನಾಟಕದಂತೆ ಸ್ಥಿರ ಸಂಭಾಷಣೆ ಮಾಡಲು ನನ್ನ ಸಹಮತವಿರಲಿಲ್ಲ. ಪ್ರತಿದಿನ ಸಂಭಾಷಣೆಗಳು ಬೇರೆ ಬೇರೆಯಾಗಿದ್ದರೆ ಪಾತ್ರಧಾರಿಗೂ ಒಳ್ಳೆಯದು. ಒಂದೇ ಪ್ರಸಂಗವಾದರೂ ನಿನ್ನೆಯಂತೆ ಇಂದು ಸಂಭಾಷಣೆಯನ್ನು ಗಿಳಿಪಾಠ ಒಪ್ಪಿಸುತ್ತಿರಲಿಲ್ಲ. ಇದನ್ನು ಸಹಿಸಲಾಗದ ಕೆಲವು ಸಹ ಕಲಾವಿದರು ಮೇಳದ ಯಜಮಾನರಿಗೆ ದೂರು ನೀಡಿದ ಪ್ರಕರಣಗಳು ಹಲವಿವೆ. ಅರ್ಥಗಾರಿಕೆಯಲ್ಲಿ ಪ್ಲಾಟ್ ಎನ್ನುವಂತಹ ಮನಸ್ಥಿತಿ ಇದ್ದುಬಿಟ್ಟರೆ ಕಲಾವಿದ ಬೆಳೆಯುವುದಿಲ್ಲ.” 
           ಪೆರುವಡಿಯವರ ಮಾತನ್ನು ಮನನಿಸುತ್ತಿದ್ದಂತೆ ಸುಮಾರು ಎರಡು ದಶಕಗಳ ಹಿಂದಿನ ಘಟನೆ ನೆನಪಾಗುತ್ತದೆ. ಕೋಡಪದವಿನಲ್ಲಿನಳದಮಯಂತಿಪ್ರಸಂಗದ ಪ್ರದರ್ಶನ. ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆ. ಗೋವಿಂದ ಭಟ್ಟರಋತುಪರ್ಣ. ಕೀರ್ತಿಶೇಷ ನಯನಕುಮಾರ್ ಅವರಬಾಹುಕ. ನನ್ನ ಪಾಲಿಗೆದಮಯಂತಿ. ಆಗಲೇ ಮೇಳದ ಕಲಾವಿದರಪ್ಲಾಟ್ಗಳ ಮಾದರಿಗಳನ್ನು ಕೇಳಿದ್ದೆ. ಅವರ ಜತೆಯಲ್ಲಿ ಪಾತ್ರ ನಿರ್ವಹಿಸಿದ ಹವ್ಯಾಸಿಗಳನ್ನು ರಂಗದಲ್ಲಿ ಮೂರಾಬಟ್ಟೆ ಮಾಡಿದ ಕ್ಷಣಗಳಿಗೆ ಸಾಕ್ಷಿಯಾಗಿದ್ದೆ. ಹಿನ್ನೆಲೆಯಲ್ಲಿ ಪಾತ್ರ ಮಾಡಲು ಹಿಂಜರಿದಿದ್ದೆ. ಕೊನೆಗೂ ಒಪ್ಪಿಕೊಂಡೆ.
           ನಯನಕುಮಾರ್ ಅವರಲ್ಲಿ ಅರ್ಥಗಾರಿಕೆ, ರಂಗದ ನಡೆಯನ್ನು ಸಮಾಲೋಚಿಸಿದೆ. ತುಂಬಾ ಪ್ರೀತಿಯಿಂದ ಮಾತನಾಡುವ ಅರ್ಥ, ಅದಕ್ಕೆ ಇದಿರಾಗಿ ಬರುವ ಮಾತುಗಳನ್ನು ಅರ್ಥವಾಗುವಂತೆ ಹೇಳಿಕೊಟ್ಟರು. ಪುತ್ತಿಗೆ ಹೊಳ್ಳರು ಹವ್ಯಾಸಿಯಾಗಿ ನಡೆಸಿಕೊಂಡಿಲ್ಲ. ದಮಯಂತಿ-ಬಾಹುಕ ಸನ್ನಿವೇಶಗಳು ಪರಿಣಾಮಕಾರಿಯಾಯಿತು ಎನ್ನುವ ಹಿಮ್ಮಾಹಿತಿಯೂ ಸಿಕ್ಕಿತ್ತು. ಹೊಳ್ಳರೂ ಬೆನ್ನು ತಟ್ಟಿದಾಗ ಮುಜುಗರದಿಂದ ನಾಚಿ ಮುದ್ದೆಯಾಗಿದ್ದೆ! ಯಾಕೆಂದರೆ ಸ್ವ-ಪಾತ್ರವು ನನಗೆ ಕನ್ನಡಿ ಹಿಡಿಯುತ್ತಿತ್ತು!  ಅರ್ಥಗಾರಿಕೆಯಲ್ಲಿ ಪ್ಲಾಟ್ ಇರುತ್ತಿದ್ದರೆ ಇನ್ನೂ ಚೆನ್ನಾಗಿ ಆಗುತ್ತಿತ್ತಲ್ವಾ ಎಂದು ನಯನಕುಮಾರರಲ್ಲಿ ಕೇಳಿದ್ದೆ-
             ಮೇಳಗಳಲ್ಲಿ ಪ್ಲಾಟ್ ಎನ್ನುವುದು ಅನಿವಾರ್ಯ. ಅರ್ಥಗಾರಿಕೆಯಲ್ಲಿ ಒಂದು ಪದ ತಪ್ಪಿದರೂ ಸನ್ನಿವೇಶ ಹಾಳಾಗುತ್ತದೆ. ಇದಿರು ಅರ್ಥದಾರಿಯ ಕಂಠ ಕಟ್ಟುತ್ತದೆ. ಅದಕ್ಕಿಂತ ಹೆಚ್ಚು ಮಾತನಾಡಲಾರ. ಪ್ಲಾಟ್ ಎನ್ನುವುದು ಒಂದೇ ಪಾತ್ರವನ್ನು ನಿರಂತರ ನಿರ್ವಹಿಸಿದ್ದರಿಂದ ಕಂಠಸ್ಥವಾಗುತ್ತದೆ. ಯಾವಾಗ ಕಂಠಸ್ಥವಾಯಿಯೋ ನಂತರ ಬದಲಾವಣೆಯಾಗದೆ ಸ್ಥಾಯಿಯಾಗುತ್ತದೆ. ತಿಂಗಳುಗಟ್ಟಲೆ ಒಂದೇ ಪ್ರಸಂಗ ಎಂದಾದರೆ ಅರ್ಥವನ್ನು ಎಷ್ಟು ವ್ಯತ್ಯಾಸ ಮಾಡಬಹುದು? ಅದಕ್ಕೆ ಪುರುಸೊತ್ತು ಯಾರಿಗಿದೆ? ಬದಲಾವಣೆ ಮಾಡಿದರೆ ಒಳ್ಳೆಯದು. ಸಹಕಲಾವಿದರು ಒಪ್ಪಿಯಾರೆ?”
           ಪ್ಲಾಟ್ ತಪ್ಪಲ್ಲ, ಸರಿ. ಆದರೆ ಪ್ಲಾಟಿಗೆ ಜೋತುಬಿದ್ದರೆ? ವೇಷಧಾರಿ ಬೆಳೆಯುವುದು ಯಾವಾಗ? ವರುಷದಿಂದ ವರುಷಕ್ಕೆ ಅತನ ವಯಸ್ಸು ಏರಿದಂತೆ ಪಾತ್ರಾಭಿವ್ಯಕ್ತಿಯ ಗುಣಮಟ್ಟದಲ್ಲೂ ಏರಿಕೆ ಕಾಣಬೇಡವೇ? ಪ್ರೇಕ್ಷಕರಿಗೆ ಪ್ಲಾಟ್ ತರುವವೈರಸ್ ಪರಿಚಯವಿರುವುದಿಲ್ಲ. ಒಮ್ಮೆ ಶ್ರೀಧರ್ಮಸ್ಥಳ ಮೇಳದ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರೊಂದಿಗೆ ವೇಷ ಮಾಡುವ ಸಂದರ್ಭ ಬಂದಾಗ ಹೇಳಿದ್ದರು, “ಪ್ಲಾಟ್ ಎನ್ನುವುದು ಕಲಾವಿದನಿಗೊಂದು ರಕ್ಷಣೆ. ಯಾವುದೇ ಸಿದ್ಧತೆಯಿಲ್ಲದೆ ನಿರ್ಭೀತಿಯಿಂದ ಪಾತ್ರ ನಿರ್ವಹಿಸಬಹುದು. ಆದರೆ ನಮ್ಮ ಪಾತ್ರವನ್ನು ನಿರಂತರವಾಗಿ ನೋಡುವ ಪ್ರೇಕ್ಷಕರಿದ್ದಾರೆ. ಅವರಿಗೆ ನಿರಾಶೆಯಾಗುತ್ತದೆ. ಅವರು ಕಲಾವಿದನಲ್ಲಿ ಬದಲಾವಣೆಯನ್ನು ಬಯಸುತ್ತಾರೆ.”
          ಹಲವು ಬಾರಿ ಮೇಳದ ಕಲಾವಿದರೊಂದಿಗೆ ಸಹಪಾತ್ರಧಾರಿಯಾಗುವ ಅವಕಾಶ ಪ್ರಾಪ್ತವಾಗಿದೆ. ಪ್ಲಾಟ್ ಏನಿದೆಯೋ ಅದನ್ನು ಚೌಕಿಯ ಒಂದೆರಡು ಗಂಟೆಯಲ್ಲಿ ಕಂಠಸ್ಥವಾಗಿಸುವುದು ಕಷ್ಟವೇ. ರಂಗದಲ್ಲಿ ಅವರ ದಾರಿಗೆ ಹೋಗಲು ಆಗುತ್ತಿಲ್ಲ. ಹವ್ಯಾಸಿಯ ಹಾದಿ ಅವರಿಗೆ ಅರ್ಥವಾಗುತ್ತಿಲ್ಲ! ರಂಗದಲ್ಲೇ ತಾನೋರ್ವಮೇಳದ  ಕಲಾವಿದಎನ್ನುವ ಛಾಪನ್ನು ಮೂಡಿಸಿ ಬಿಡುತ್ತಾರೆ! ಕಥಾ ಜಾಡಿನಲ್ಲಿರುವ ಹೊಳಹು, ಅಂತರಾರ್ಥಗಳನ್ನು ಒಪ್ಪದೆ ಕೊನೆಗೆ ಹವ್ಯಾಸಿಗಳ ಜತೆಗೆ ವೇಷಮಾಡಬಾರದುಎನ್ನುವ ತೀರ್ಪು ನೀಡಿ ಮುಖದ ಬಣ್ಣ ತೆಗೆಯಲು ಉದ್ಯುಕ್ತರಾಗುತ್ತಾರೆ! ಹವ್ಯಾಸಿ ಎನ್ನುವ ಅನಾದರ ಭಾವಕ್ಕೆ ಹಲವು ಬಾರಿ ಒಳಗಾಗಿದ್ದೇನೆ ಎಂಬ ಹೆಮ್ಮೆ ನನಗಿದೆ! ಇಂತಹ ಭಾವಗಳಿಗೆ ಕಾಲದ ಋಣವಿಲ್ಲ. ಹಿಂದೆ ಇತ್ತು, ಈಗಲೂ ಇದೆ. ಮುಂದೆಯೂ ಇರುತ್ತದೆ.
         ಈಚೆಗೆಪಾಪಣ್ಣ ವಿಜಯಪ್ರಸಂಗವೊಂದರಲ್ಲಿ ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಹೇಳಿದ್ದರು – “ಒಮ್ಮೆ ಬಳಸಿದ ವಿಷಯವನ್ನು ಮತ್ತೊಮ್ಮೆ ಬಳಸದಂತೆ ಎಚ್ಚರ ಬೇಕು. ಸ್ವಗತದಂತಹ ಸಂದರ್ಭದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸಬೇಕು. ಪ್ಲಾಟ್ ತಪ್ಪಲ್ಲ. ಆದರೆ ಅದೇ ಯಕ್ಷಗಾನ ಅಲ್ಲವಲ್ಲಾ. ಹಿಂದನವರಲ್ಲೂ ಪ್ಲಾಟ್ ಇತ್ತು. ಕೆಲವೊಂದು ಪ್ರಸಂಗವನ್ನು ಹೊರತುಪಡಿಸಿ ಬದಲಾಗುತ್ತಿತ್ತು. ಅಧ್ಯಯನದ ಕೊರತೆ, ತಿಳಿದುಕೊಳ್ಳಬೇಕೆಂಬ ಛಲ ಮತ್ತು ಪಾತ್ರಾಭಿವ್ಯಕ್ತಿಯಲ್ಲಿ ಅಭಿವೃದ್ಧಿ ತೋರಿಸಬೇಕೆನ್ನುವ ಕಲಾವಿದನಿಗೆ ಪ್ಲಾಟಿನ ಹಂಗಿಲ್ಲ!”. ನನ್ನ ಚೋದ್ಯಕ್ಕೆ ಪೂಕಳರಲ್ಲಿ ಉತ್ತರ ಸಿಕ್ಕಿತ್ತು

(ಸಾಂದರ್ಭಿಕ ಚಿತ್ರ)
Prajavani / ದಧಿಗಿಣತೋ / 1-6-2018




No comments:

Post a Comment