Friday, September 7, 2018

ಸಂಮಾನಕ್ಕೂ ಮಾನವಿದೆ, ಪಡೆದವರಿಗೂ ಗೌರವವಿದೆ

        ರಾಜಧಾನಿಯೊಳಗೊಂದು ಯಕ್ಷಗಾನದ ಪ್ರಶಸ್ತಿ ಪ್ರದಾನ ಸಮಾರಂಭ. ಅದ್ದೂರಿ ವ್ಯವಸ್ಥೆ. ಫ್ಲೆಕ್ಸಿಗಳ ಭರಾಟೆ. ರಂಗುರಂಗಿನ ಪ್ರಚಾರ. ಪತ್ರಿಕೆಗಳ ಪುಟಗಳಲ್ಲಿ ಸಾಧಕರ ಪರಿಚಯಗಳು. ಪ್ರಶಸ್ತಿಯೊಳಗೆ ಪ್ರಶಸ್ತಿ ಪುರಸ್ಕøತರಿಗೆ ಇಪ್ಪತ್ತೈದೋ ಐವತ್ತೋ ಸಾವಿರ ರೂಪಾಯಿ ಧನ. ಶಾಲು, ಹಾರ, ಗುಣಕಥನ ಫಲಕ, ಸ್ಮರಣಿಕೆ.. ಇತ್ಯಾದಿ. ಅಭಿಮಾನಿಗಳಿಂದ ಹಾರಾರ್ಪಣೆ. ಸಾಧಕರ ಸಾಧನೆಗಳ ಸಾಕ್ಷ್ಯಚಿತ್ರ ಪ್ರಸ್ತುತಿ. ಫೋಟೋ, ವೀಡಿಯೋಗಳ ಝಳಕ್. ಉತ್ತಮ ಕಾರ್ಯಕ್ರಮ. ಪ್ರಶಸ್ತಿ ಪಡೆಯುವ ಸಾಧಕರು ಖುಷಿ ಪಡುವ ಕ್ಷಣ.
        ಸರಿ, ಪ್ರತಿಷ್ಠಿತರಿಂದ ಪ್ರಶಸ್ತಿ ಪ್ರದಾನವೂ ಜರುಗಿತು. ಪುರಸ್ಕ್ರತರ ಮಾತುಗಳು ತನ್ನ ಬಯೋಡಾಟದ ರಂಗಿನಾಟಕ್ಕೆ ಸೀಮಿತವಾಯಿತು. ಅಭಿನಂದನಾಗಾರರು ನುಡಿ ಗೌರವದ ಮೂಲಕ ಏನೆಲ್ಲಾ ಹೇಳಿದ್ದರೋ, ಅದನ್ನೇ ಇನ್ನೊಂದು ಮಗ್ಗುಲಿನಲ್ಲಿ ಹೇಳುತ್ತಾ ನಲವತ್ತು ನಿಮಿಷ ನುಂಗಿಬಿಟ್ಟರು! ಕೊನೆಗೆಪ್ರಶಸ್ತಿಯೊಂದಿಗೆ ನೀಡಿದ ಧನವನ್ನು ಸಂಘಟಕರಿಗೆ ಹಿಂತಿರುಗಿಸುತ್ತಿದ್ದೇನೆ. ಅದು ಸಂಘಟನೆಗೆ ನನ್ನ ದೇಣಿಗೆ ಎಂದು ಘೋಷಿಸಿದರು. ಯಾಕೋ ಸಂಮಾನಿತರ ವರ್ತನೆ ನನಗಂತೂ ಸರಿಕಾಣಲಿಲ್ಲ.
          ಪ್ರಶಸ್ತಿಯೊಂದಿಗೆ ಧನ ನೀಡಬೇಕೇಂದೇನೂ ಇಲ್ಲ. ಪ್ರಶಸ್ತಿ ಎನ್ನುವುದು ಗೌರವ. ಈಗ ಸಂಮಾನವೂ ಪ್ರಶಸ್ತಿಯಾಗಿ ಬಿಟ್ಟಿದೆ! ಓರ್ವ ಸಾಧಕನನ್ನು ಗುರುತಿಸುವುದು ಸುಸಂಸ್ಕತ ಸಮಾಜದ ಜವಾಬ್ದಾರಿ. ಅದನ್ನು ಬದ್ಧತೆಯಿಂದ ಮಾಡುವ ಅನೇಕ ಸಂಸ್ಥೆಗಳಿವೆ, ವ್ಯಕ್ತಿಗಳಿದ್ದಾರೆ. ಪ್ರಶಸ್ತಿಯೊಂದಿಗೆ ಧನವನ್ನೂ ಕೊಡುವ ಪರಿಪಾಠ ಈಚೆಗಿನದು. ಬೇಕೋ ಬೇಡ್ವೋ ಎನ್ನುವುದು ಬೇರೆ ವಿಚಾರ. ಅದು ಪ್ರಶಸ್ತಿಯ ಒಂದು ಭಾಗ. ಧನವನ್ನು ತನಗೆ ಸಂಮಾನ ಮಾಡಿದ ವೇದಿಕೆಯಲ್ಲೇ ಹಿಂತಿರುಗಿಸುವುದೆಂದರೆ ಸಂಘಟಕರಿಗೆ ಮಾಡುವ ಅವಮಾನ! ಪ್ರಶಸ್ತಿಗೆ ತೋರುವ ಅನಾದರ!
           ಪ್ರಶಸ್ತಿ ಪಡೆದಾತ ಧನಿಕನಿರಬಹುದು. ಆರ್ಥಿಕ ಅವಶ್ಯಕತೆಯಿಲ್ಲದಿರಬಹುದು. ಅಥವಾ ವಿರಾಗಿಯಾಗಿರಬಹುದು. ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆಯೇ ವಿನಾ ಅವರ ವೈಯಕ್ತಿಕ ಆರ್ಥಿಕ ಭಾರದ ಮಾನದಂಡದಿಂದಲ್ಲ. ತನ್ನ ಸಾಧನೆಯನ್ನು ಗುರುತಿಸಿ ಮಾಡುವ ಸಂಮಾನ ಎನ್ನುವುದು ಮರೆತು ಹೋಗಿ, ಕ್ಷಣ ಆತನೊಳಗಿರುವ ಶ್ರೀಮಂತಿಕೆ ಹೆಡೆತೆಗೆಯುವುದೋ ಏನೋ! ಒಂದು ವೇಳೆ ಸಿಕ್ಕಿದ ಮೊತ್ತವನ್ನು ಸಂಘಟಕರಿಗೆ ನೀಡುವುದಾದರೆ ಮರುದಿನ ಎನ್ನುವ ದಿನ ಒಂದಿದೆಯಲ್ವಾ. ಅಂದು ಮೊತ್ತ ನೀಡಿ ರಶೀದಿ ಪಡೆದರೆ ಆಯಿತು. ಬೇಕಾದರೆ ಪತ್ರಿಕೆಯಲ್ಲೂ ವರದಿ ಪ್ರಕಟವಾಗಲಿ. ಜಾಹೀರಾತು ಪ್ರಕಟಿಸಲಿ ಆದರೆ ವೇದಿಕೆಯಲ್ಲೇ ಹಿಂತಿರುಗಿಸುವುದು ಶಿಷ್ಟತೆಯಾಗಿ ಕಾಣುವುದಿಲ್ಲ. ಪ್ರಶಸ್ತಿಯೊಂದಿಗೆ ನೀಡುವ ಮೊತ್ತ ಎಷ್ಟೇ ಇರಲಿ ಅದು ಸಾಧನೆಗೆ ಸಲ್ಲಿಸಲ್ಪಡುವ ಪ್ರಶಸ್ತಿಯ ಜತೆಗಿನ ಒಂದು ವ್ಯವಸ್ಥೆ.
           ಕೆಲವೊಮ್ಮೆ ನಿಧಿಯ ಬದಲಿಗೆ ಚಿನ್ನದ ಉಂಗುರವನ್ನೋ, ಹಾರವನ್ನೋ, ಕೈಗೆ ಕಡಗವನ್ನೋ ನೀಡುವುದೂ ಇದೆ. ಇಂತಹ ಸಂದರ್ಭಗಳಲ್ಲಿ ಎಲ್ಲಾದರೂ ಚಿನ್ನದ ಆಭರಣಗಳನ್ನು ಸಂಘಟಕರಿಗೆ ಹಿಂತಿರುಗಿಸಿದ ದೃಷ್ಟಾಂತವಿದೆಯೇ? ಇಲ್ಲವೇ ಇಲ್ಲ. ಇದ್ದರೆ ಗ್ರೇಟ್! ಈಚೆಗೆ ಜರುಗಿದ ಪ್ರಶಸ್ತಿ ಸಮಾರಂಭವೊಂದರಲ್ಲೂ ರಾಜಧಾನಿಯ ಪ್ರಕರಣ ಮರುಕಳಿಸಿತು. ‘ನಿಧಿಯನ್ನು ಸ್ವೀಕರಿಸುವುದಿಲ್ಲ’ ಎನ್ನುವ ಬದ್ಧತೆ ಶ್ಲಾಘನೀಯ. ಆದರೆ ವಿಚಾರವನ್ನು ಮೊದಲೇ ಸಂಘಟಕರಲ್ಲಿ ಮನವಿ ಮಾಡಿಕೊಳ್ಳಬಹುದು. ವ್ಯಕ್ತಿ ಬದ್ಧತೆಯನ್ನು ಮೀರುವ ದಾಷ್ಟ್ರ್ಯವನ್ನು ಯಾವ ಸಂಘಟಕರೂ ತೋರಲಾರರು.
            ಓರ್ವ ಪ್ರಶಸ್ತಿ ಪುರಸ್ಕತ ವೇದಿಕೆಯಲ್ಲೇ ಧನವನ್ನು ಮರಳಿಸಿದ್ದು ಸರಿ ಎನ್ನುವ ಸಮರ್ಥನೆ ಕೊಡಬಹುದು. ಮುಂದಿನ ವರುಷ ಇನ್ನೋರ್ವ ಸಾಧಕರಿಗೆ ಪ್ರಶಸ್ತಿ ನೀಡಿದಾಗ ಅವರು ಧನವನ್ನು ಮರಳಿಸುವುದಿಲ್ಲ. ಅವರ ಬದುಕಿಗದು ಅಗತ್ಯವಾಗಿದೆ. ಸಂಘಟಕರೂ ಬಯಸುವುದಿಲ್ಲ. ಆದರೆ ಭಾಗವಹಿಸುವ  ಪ್ರೇಕ್ಷಕ ಹಿಂದಿನ ವರುಷ ನೋಡಿದ್ದಾನಲ್ವಾ. ಆತನ ದೃಷ್ಟಿಯಲ್ಲಿ ಸಂಮಾನಿತರ ಸ್ಥಾನ-ಮಾನ? “ಕಳೆದ ವರುಷ ಧನವನ್ನು ಹಿಂದಿರುಗಿಸಿದ್ದಾರೆ. ವರುಷ ಇವರು ಇಟ್ಟುಕೊಂಡಿದ್ದಾರೆಎನ್ನುವ ಹಗುರ ಮಾತುಗಳಿಗೆ ಸಂಮಾನಿತ ಒಳಗಾಗಿರುವುದನ್ನು ಕೇಳಿ, ನೋಡಿ ವಿಷಾದಿಸಿದ್ದೆ. ವಿಷಾದ ಗಾಳಿಯ ಗುದ್ದಾಟವಷ್ಟೇ!
           ಬಹುಶಃ 1992-93 ಕಾಲಘಟ್ಟ. ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಾಲಮಾನ. ಪ್ರಶಸ್ತಿ ಪಡೆದ ತಿಂಗಳೊಳಗೆ ಪುತ್ತೂರಿನ ಅವರ ಭಾವನ (ಪ್ರೊ.ವಿ.ಬಿ.ಮೊಳೆಯಾರ) ಮನೆಗೆ ಆಗಮಿಸಿದ್ದರು. ಅವರೊಂದಿಗೆ ಮಾತುಕತೆಗೆ ತೊಡಗಿದ್ದೆ. ಒಂದು ಸಂದರ್ಭದಲ್ಲಿ ಅರ್ಧದಲ್ಲಿ ಮಾತನ್ನು ತುಂಡರಿಸಿದರು. ತನಗೆ ಪ್ರಾಪ್ತವಾದ ರಾಜ್ಯೋತ್ಸವ ಪ್ರಶಸ್ತಿಯ ಚಿನ್ನದ ಪದಕವನ್ನು ತೋರಿಸಲು ಉತ್ಸುಕರಾದರು. ಪದಕವನ್ನು ಅಂಗೈಯಲ್ಲಿಟ್ಟು ಆನಂದಿಸಿದ ಶೇಣಿಯವರ ಮಂದಸ್ಮಿತ ನಗು, ಅದು ನಿಜಕ್ಕೂ ಮನದ ನಗು.
          ಉಂಗುರ, ಚೈನ್.. ಮೊದಲಾದವುಗಳನ್ನು ಸಂಮಾನದ ಮೂಲಕ ಉಡುಗೊರೆಗಳನ್ನು ಪಡೆದ ಶೇಣಿಯವರಿಗೆ ರಾಜ್ಯ ಸರಕಾರದ ಗೌರವ ಖುಷಿ ನೀಡಿತ್ತು. ಹೊತ್ತಲ್ಲಿ ಸುಮ್ಮನೆ ಒಂದು ಕೀಟಲೆ ಪ್ರಶ್ನೆಯನ್ನು ಕೇಳಿದ್ದೆ. “ಚಿನ್ನದ್ದು ಅಲ್ವಾ.. ಒಳ್ಳೆಯ ಆಭರಣ ಮಾಡಿಸಬಹುದಲ್ವಾ?” ಶೇಣಿಯವರು ಏನೆಂದಿರಬಹುದು? “ಆಭರಣ ಮಾಡಬಹುದು. ಕಾಣುವುದಕ್ಕೆ ಇದು ಚಿನ್ನ. ಇದು ಸರಕಾರದ ಗೌರವ. ಕರಗಿಸಿದರೆ ಕರಗಬಹುದು. ಅದು ಮೊದಲಿನಂತೆ ಆಗದು. ಅದು ಪ್ರಶಸ್ತಿಯಾಗಿಯೇ ಇರುವುದು ನಾವು ಅದಕ್ಕೆ ನೀಡುವ ಗೌರವ. ಪ್ರಶಸ್ತಿ ಪಡೆಯಲು ಮಾತ್ರ ತಿಳಿದರೆ ಸಾಲದಲ್ವಾ, ಅದರ ಮಾನದ ಮೌಲ್ಯವನ್ನೂ ತಿಳಿದರೆ ಪ್ರಶಸ್ತಿಯನ್ನು ಅನುಭವಿಸಲು ಸಾಧ್ಯ..” ಹೀಗೆ ಅವರ ಅಭಿಪ್ರಾಯ ಸಾಗುತ್ತಾ ಇತ್ತು. ತೀರಾ ಅಸ್ವಸ್ಥರಾಗಿದ್ದಾಗ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಾಪ್ತವಾಗಿತ್ತು. ‘ಇದನ್ನೆಲ್ಲಾ ಸ್ವಸ್ಥ ಇರುವಾಗಲೇ ಪ್ರದಾನಿಸಬೇಕುಎಂದು ವಿನೋದವಾಗಿ ಹೇಳಿದ್ದರು ಕೂಡಾ.
          ಪ್ರಶಸ್ತಿಯೋ, ಸಂಮಾನವೋ ಕಾಟಾಚಾರಕ್ಕೆ ಮಾಡುವುದಕ್ಕೆ ಇರುವ ಉಪಾಧಿಯಲ್ಲ. ಅದರ ಹಿಂದೆ ಶಬ್ದಕ್ಕೆ ಸಿಗದ ಭಾವನೆಗಳಿವೆ. ಸಂದುಹೋದ ಚೇತನಗಳ ನೆನಪಿದೆ. ಸಾಧನೆಗೆ ಮಾನ ಕೊಡುವ ವಿನೀತತೆಯಿದೆ. ಸಾಮಾಜಿಕ ಬದ್ಧತೆಗಳಿವೆ. ಪ್ರಶಸ್ತಿಗಳ ಆಯ್ಕೆಗೆ ಧನಿಕ, ಬಡವ ಎನ್ನುವ ಪ್ರಬೇಧಗಳಿಲ್ಲ ಸಾಧನೆಯೇ ಮಾನದಂಡ. ಯಕ್ಷಗಾನ ಕ್ಷೇತ್ರದಲ್ಲಿ ಹಲವು ಪ್ರಶಸ್ತಿ, ಸಂಮಾನಗಳಿವೆ. ಹಿರಿಯರ ನೆನಪಿನ ಗೌರವ ಪ್ರದಾನಗಳಿವೆ. ಅವರವರ ಸಾಮಥ್ರ್ಯಕ್ಕೆ ಹೊಂದುವಂತೆ ಪ್ರಶಸ್ತಿಗಳ ಮೌಲ್ಯ, ಪರಿಕರಗಳನ್ನು ಹೊಂದಿಸಿಕೊಳ್ಳುತ್ತಾರೆ. ಪ್ರಶಸ್ತಿ ಪಡೆದಾತ ರಂಗದಲ್ಲೇ ಮರಳಿಸಿದರೆ ಕೆಲವು ಸಂಘಟಕರಿಗೆ ಖುಷಿಯಾಗಬಹುದೇನೋ! ಆದರೆ ಪ್ರಶಸ್ತಿ ಪಡೆದಾತನ ಅವಸ್ಥೆ! ವೇದಿಕೆಯಲ್ಲಿ ಗಣ್ಯತೆಯನ್ನು ಆತನಲ್ಲಿ ಕಂಡು ಸಂಮಾನಿಸಿದ ಬಳಿಕ ಆತ ಹಗುರವಾಗಬಾರದು.
           ಸಂಘಟಕರಿಗೂ ಪ್ರಶಸ್ತಿ, ಸಂಮಾನದ ಕುರಿತು ಬದ್ಧತೆಯಿರಬೇಕಾಗುತ್ತದೆ. ಹಲವಾರು ವರುಷಗಳಿಂದ ನಡೆಸಿಕೊಂಡು ಬರುತ್ತಿದ್ದ ಸಂಘಟಕರಿಗೆ ಗೊತ್ತಿದೆ. ಈಚೆಗೆ ಹಲವು ಕಾರ್ಯಕ್ರಮಗಳನ್ನು ಗಮನಿಸುತ್ತಿದ್ದೇನೆ. ಸಮಾರಂಭ ಸಂಘಟಿತವಾಗಿದೆ ಎನ್ನುವುದಕ್ಕಾಗಿ ಪ್ರಶಸ್ತಿ, ಸಂಮಾನ! ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಗರಿಷ್ಠ ಮೊತ್ತದ ದೇಣಿಗೆ ನೀಡಿದವರಿಗೆ ಅದೇ ಸಂಘಟನೆಯವರು ಪ್ರಶಸ್ತಿಯನ್ನೋ, ಸಂಮಾನವನ್ನು ಮಾಡುವ ಉಪಕ್ರಮ ಇದೆಯಲ್ಲಾ... ಯೋಚಿಸಿ.. ಹೇಗನ್ನಿಸುತ್ತದೆ. ಅವರ ಹಣದಿಂದಲೇ ಅವರಿಗೆ ಸಂಮಾನ! ಹೀಗೆ ಸಂಮಾನ ಮಾಡಿದ್ದರಿಂದ ಪ್ರೇಕ್ಷಕರಿಗೋ, ಸಮಾಜಕ್ಕೋ ತೊಂದರೆಯಿಲ್ಲ. ಬೇಕಾದರೆ ಇನ್ನೊಂದು ಸಂದರ್ಭದಲ್ಲಿ ಗೌರವಿಸಿ, ಸಾಧನೆಗೆ ಬೆಳಕು ಹಾಕಿದರಾಯಿತು.
            ನಮ್ಮ ಮಧ್ಯೆ ಇರುವ ಕಲೆ, ಸಾಹಿತ್ಯ ಮೊದಲಾದ ಕ್ಷೇತ್ರಗಳತ್ತ ಒಮ್ಮೆ ಹೊರಳಿ. ಸ್ವತಃ ಹಣ ನೀಡಿ ಪ್ರಶಸ್ತಿ ಪಡೆದುಕೊಳ್ಳುವ ಮನಸ್ಸುಗಳು ಎಷ್ಟು ಬೇಕು? ಅದನ್ನು ನೀಡುವ ಫಲಕ ರಹಿತ ಸಂಘಟನೆಗಳು ನೂರಾರು. ಸಾವಿರಾರು ರೂಪಾಯಿಯ ಬೇಡಿಕೆಯನ್ನು ಮುಂದಿಟ್ಟು ಸಂಮಾನವೋ, ಪ್ರಶಸ್ತಿಯನ್ನು ನೀಡುತ್ತಾರೆ. ಸಂಮಾನಿತರು ನೀಡುವ ಮೊತ್ತದಿಂದ ಇಡೀ ಕಾರ್ಯಕ್ರಮದ ವೆಚ್ಚ ಸರಿಹೊಂದಿಸಿಕೊಳ್ಳುವ ಸಂಘಟನೆ ಎಷ್ಟು ಬೇಕು? ಅಂತಹ ಸಂಸ್ಥೆಗಳ ಜಾತಕ ಗೊತ್ತಾಗುವಾಗ ಹೊತ್ತು ಕಳೆದಿರುತ್ತದೆ. ಇಂತಹವರು ನಿಜ ಕಾಳಜಿಯ, ಬದ್ಧತೆಯ, ಕಲಾ ಪ್ರೀತಿಯಿಂದ ಹಮ್ಮಿಕೊಳ್ಳುವ ಪ್ರಾಮಾಣಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಕಳಂಕಪ್ರಾಯರಾಗಿರುತ್ತಾರೆ. 
(ಅಪರೂಪದ ಚಿತ್ರ : ಡಾ.ಶೇಣಿ ಗೋಪಾಲಕೃಷ್ಣ ಭಟ್ಟರಿಗೆ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾದ ಸಂದರ್ಭ)

No comments:

Post a Comment