Wednesday, October 13, 2021

ಪ್ರಣತಿ


 

(2016ರಲ್ಲಿ ಪದ್ಯಾಣ ಗಣಪತಿ ಭಟ್ಟರಿಗೆ ಸಾರ್ವಜನಿಕ ಸಂಮಾನ. ‘ಪದಯಾನ’ ಅಭಿನಂದನಾ ಕೃತಿ ಅರ್ಪಣೆ. ಈ ಕೃತಿಯ ‘ಸಂಪಾದಕ’ ಜವಾಬ್ದಾರಿಯನ್ನು ಅಭಿನಂದನಾ ಸಮಿತಿಯು ನನಗೆ ನೀಡಿತ್ತು. ಪುಸ್ತಕ ಮತ್ತು ಅದರ ಹೂರಣವನ್ನು ಅನೇಕ ಮಂದಿ ಸುಮನಸಿಗರು ಮೈತುಂಬಿಸಿದ್ದರು. ನಿನ್ನೆ ಪದ್ಯಾಣರು ದೂರವಾದಾಗ ಪುಸ್ತಕದ ರಕ್ಷಾಪುಟವನ್ನು ನೇವರಿಸಿದೆ. ಆ ದಿನಗಳು ನೆನಪಾದುವು... ಕೃತಿಯಲ್ಲಿ ಸಂಪಾದಕನ ನೆಲೆಯಲ್ಲಿ ಬರೆದ ಬರಹದ ಸಾರ ಇಲ್ಲಿದೆ.. ಪದ್ಯಾಣರ ನೆನಪಿಗಾಗಿ...)

 

ಪದ್ಯಾಣ ಗಣಪತಿ ಭಟ್ಟರು - ಗಣಪಣ್ಣ, ಗಣಪ್ಪಣ್ಣ, ಗಣಪ್ಪ, ಗೆಣಪ್ಪ - ಯಕ್ಷಗಾನದ ಸರ್ವಾದರಣೀಯ ಭಾಗವತ. ಹಲವು ದಶಕಗಳ ಯಕ್ಷಧ್ವನಿ. ಶಾರೀರಕ್ಕೆ 'ಗಾನ'ವೇ ಮೆಚ್ಚಿದೆ, ಬೆಚ್ಚಿದೆ; 'ಲಯ'ವೇ ಒಗ್ಗಿದೆ, ತಗ್ಗಿದೆ. ಬೇರೆಲ್ಲಾ ಧ್ವನಿಗಳನ್ನು ತನ್ನೊಳಗೆ ಸೇರಿಸಿಕೊಳ್ಳುವ ಮಾಂತ್ರಿಕ ಶಕ್ತಿಯೇ ಅದು 'ಪದ್ಯಾಣ ಶೈಲಿ'.

 

 

ಗಣಪಣ್ಣ ಈಗ ಅರುವತ್ತರ ಖುಷಿಯಲ್ಲಿದ್ದಾರೆ. ಸಂಭ್ರಮವು ಯಕ್ಷಲೋಕದ ಸಂಭ್ರಮವಾಗಬೇಕು. ಪದ್ಯಾಣರು ಗೌರವಿಸಲ್ಪಡಬೇಕು. ಪದ್ಯಾಣ ಶೈಲಿಯು ಮಾನಿಸಲ್ಪಡಬೇಕು. ಅದು 'ನಮ್ಮೆಲ್ಲರ' ಉತ್ಸವವಾಗಬೇಕು. ಆಶಯದಿಂದ 'ಪದಯಾನ ಅಭಿನಂದನಾ ಸಮಿತಿ' ರೂಪುಗೊಂಡಿದೆ. ವಿವಿಧ ಕಾರ್ಯಹೂರಣಗಳನ್ನು ಹಮ್ಮಿಕೊಂಡಿದೆ

 

ಅವರ ಬದುಕಿನ ಯಾನಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನು ಸಮಿತಿಯು ವಹಿಸಿದೆ. ಜವಾಬ್ದಾರಿ ಹೆಗಲೇರಿದಾಗ ಅಧೀರನಾಗಿದ್ದೆ. ಸಾಕಾರದ ಸಾಧುತ್ವಕ್ಕೆ ಒದ್ದಾಡಿದೆ. 'ಮಿತಿ'ಯನ್ನು ಪ್ರಶ್ನಿಸಿದೆ. 'ಅರ್ಹತೆ' ಜತೆಗೆ ಮಾತನಾಡಿದೆ. 'ಯೋಗ್ಯತೆ'ಯನ್ನು ಮಾತಿಗೆಳೆದೆ. ಉಹೂಂ... ಉತ್ತರವಿಲ್ಲ

 

ಖ್ಯಾತ ಭಾಗವತರು. ಗಟ್ಟಿಯಾದ ಪದಯಾನ ಸಮಿತಿ. ಸಂಭ್ರಮದ ದೂರದೃಷ್ಟಿ. ಎಲ್ಲಕ್ಕಿಂತಲೂ ಮುಖ್ಯವಾಗಿ ಪದ್ಯಾಣರೊಳಗಿನ 'ಭಾಗವತ'ನಿಗೆ ನ್ಯಾಯ ಸಲ್ಲಬೇಕು. ನನ್ನಿಂದ ಸಾಧ್ಯವಾ? ತಿಂಗಳುಗಳು ಉರುಳಿದುವು

 

'ಖ್ಯಾತ ಭಾಗವತ' ಎನ್ನುವ ಅಭಿದಾನವು ಮಾನಸಿಕ ತಡೆಯಾಗಿತ್ತು. ಯಾಕೆಂದರೆ 'ಖ್ಯಾತ'ರಲ್ಲಿ ಮಾತನಾಡುವುದೇನನ್ನು? ಅವರೊಳಗಿದ್ದ ಖ್ಯಾತಿ ಮಾತಿಗೆ ಅಡ್ಡಿಪಡಿಸದೇ? ನನ್ನೆಲ್ಲಾ ಸಂಶಯವನ್ನು ಪದ್ಯಾಣರು ಹುಸಿಗೊಳಿಸಿದರು. ಮಾತಿಗೆಳೆಯುವ ಕ್ಷಣಕ್ಕೆ ಶ್ರೀಕಾರ. ಮಾತನಾಡುತ್ತಾ ಹೋದರು. ಮತ್ತೆ ತಿಳಿಯಿತು - ಅವರಿಗೂ, ಅವರೊಳಗಿದ್ದ ಖ್ಯಾತಿಗೂ ಮುನಿಸು!

        ಪದ್ಯಾಣರು ಬದುಕಿನೊಳಗೆ ಇಳಿಯಲು ಅನುವು ಮಾಡಿಕೊಟ್ಟರು. ತಮ್ಮ 'ಶೈಲಿ'ಯಲ್ಲಿ ಅನುಭವವನ್ನು ಬಿಚ್ಚಿಟ್ಟರು. ಬಿಡಬೇಕಾದುದನ್ನು ಬಿಟ್ಟು, ಮತ್ತೆಲ್ಲವನ್ನೂ 'ಪದಯಾನ'ದಲ್ಲಿ ಪೋಣಿಸಿದ್ದೇನೆ.

No comments:

Post a Comment