Saturday, December 28, 2024

ದಶಂಬರ 29ರಂದು ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ - ‘ಕಲಾ ಶ್ರೀಧರ' ಕೃತಿ ಅನಾವರಣ

 


      ಯಕ್ಷಗಾನದ ಹಿರಿಯ ಕಲಾವಿದ, ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಕ್ಕೂ ಮಿಕ್ಕಿ ಸೇವೆಗೈದ ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮವು 2024ರ ದಶಂಬರ 29, ರವಿವಾರರಂದು ಕುಂಬಳೆಯಲ್ಲಿ ಜರುಗಲಿದೆ. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ವಿವಿಧ ಕಲಾಪಗಳು ಸಂಪನ್ನವಾಗಲಿವೆ.

    ಸಂಜೆ ಗಂಟೆ 4ಕ್ಕೆ ಶ್ರೀಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಶ್ರೀಧಾಮ-ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನದಲ್ಲಿ 'ಶ್ರೀಧರ ಸ್ಮೃತಿ' ಕಾರ್ಯಕ್ರಮ ಜರುಗಲಿದೆ.

    ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಬಹುಶ್ರುತ ವಿದ್ವಾಂಸ, ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿಯವರು 'ಶ್ರೀಧರ ಸ್ಮೃತಿ'ಯನ್ನು ಮಾಡಲಿದ್ದಾರೆ.  ಈ ಸಂದರ್ಭದಲ್ಲಿ ಪತ್ರಕರ್ತ, ಕಲಾವಿದ ಶ್ರೀ ನಾ. ಕಾರಂತ ಪೆರಾಜೆ ಇವರ ಸಂಪಾದಕತ್ವದ 'ಕಲಾ ಶ್ರೀಧರ' ಸ್ಮೃತಿ-ಕೃತಿಯನ್ನು ಪೂಜನೀಯ ಯತಿದ್ವಯರು ಅನಾವರಣಗೊಳಿಸಲಿದ್ದಾರೆ.

    ಪೂರ್ವಾಹ್ನ ಗಂಟೆ 9ಕ್ಕೆ ಶ್ರೀ ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ಮಾಧವ ಅಡಿಗ, ಸಾಮಾಜಿಕ ಸೇವಾ ಕಾರ್ಯಕರ್ತ ಹಾಗೂ ಕಲಾಪೋಷಕ ಶ್ರೀ ಮಂಜುನಾಥ ಆಳ್ವ, ಶ್ರೀ ಧರ್ಮಸ್ಥಳ ಮೇಳದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕಲಾರತ್ನ ಶಂ.ನಾ.ಅಡಿಗ ಇವರ ಉಪಸ್ಥಿತಿಯಲ್ಲಿ 'ಶ್ರೀಧರ ಸ್ಮೃತಿ' ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.

ಬೆಳಿಗ್ಗೆ ಗಂಟೆ 9-30ರಿಂದ ಕುಂಬಳೆ ಶ್ರೀಧರ ರಾವ್ ಅವರ ಪ್ರಧಾನ ಪಾತ್ರಗಳ ನೆನವರಿಕೆಯ 'ಸಂವಾದದ ತಾಳಮದ್ದಳೆ' ಹಾಗೂ 'ಕೃಷ್ಣ ಸಂಧಾನ' ಆಖ್ಯಾನದ ತಾಳಮದ್ದಳೆ ಜರುಗಲಿದೆ. ಶ್ರೀಗಳಾದ ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ); ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಆಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ಗೋಪಾಲ ನಾಯಕ್ ಸೂರಂಬೈಲು, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ್ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಲಿದ್ದಾರೆ. ಈ ಕಲಾಪವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರು ಸಂಯೋಜಿಸಿದ್ದಾರೆ.

    ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀಧಾಮ, ಮಾಣಿಲ ಇವರಿಂದ ಶ್ರೀ ಸತೀಶ ಪುಣಿಂಚತ್ತಾಯ, ಪೆರ್ಲ ಇವರ ಸಂಯೋಜನೆಯಲ್ಲಿ 'ಕಂಸವಧೆ' ಬಯಲಾಟ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ, ನಾರಾಯಣ ಮಂಗಲ, ಕುಂಬಳೆ;  ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ, ಶೇಡಿಕಾವು-ಕುಂಬಳೆ, ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಆಯೋಜಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಸ್ವಾಗತ. 

(ಚಿತ್ರಗಳು : ಶ್ಯಾಮಪ್ರಸಾದ್‌ ಕುಂಚಿನಡ್ಕ ಮತ್ತು ಮಧುಸೂದನ ಅಲೆವೂರಾಯ)

No comments:

Post a Comment