Wednesday, January 1, 2025

ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ - ಆತ್ಮಾಲಯ ಅಕಾಡೆಮಿ ಪ್ರಶಸ್ತಿ ಪ್ರದಾನ


 

     ಭಾರತದ ಸಂಪತ್ತು ಕಲೆ ಮತ್ತು ಸಾಹಿತ್ಯ. ಬದುಕಿನ ನಾಟಕದಲ್ಲಿ ಯಶಸ್ವಿಯಾಗಲು ಕಲೆ ಅಗತ್ಯ. ಜೀವನವೆಂಬುದು ಕಲೆಯ ಪ್ರತೀಕ. ಬದುಕು ಬಲೆ ಆಗಬಾರದ, ಕಲೆ ಆಗಬೇಕು. ಧರ್ಮದ ಉಳಿವಿಗೆ ಯಕ್ಷಗಾನದ ಕೊಡುಗೆ ಅನನ್ಯ” ಎಂದು ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

    ಬೆಂಗಳೂರಿನ ಆತ್ಮಾಲಯ ಕಲೆ ಮತ್ತು ಸಂಸ್ಕೃತಿ ಆಕಾಡೆಮಿಯು ಶ್ರೀಮತಿ ಶಾಂತಾ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿಯನ್ನು ಯಕ್ಷಗಾನದ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ಮಾತನಾಡುತ್ತಾ “ಬದುಕಿನ ಪಾಠಶಾಲೆಗೆ ಯಕ್ಷಗಾನವೊಂದು ಪಠ್ಯವಿದ್ದಂತೆ” ಎಂದರು.

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ 'ನಟರಾಜ ವೇದಿಕೆ'ಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 56' ಸಂದರ್ಭದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು. ಜಸ್ಟೀಸ್ ಜಗನ್ನಾಥ ಶೆಟ್ಟಿ ಇವರ ಚಿರಂಜೀವಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಡಾ. ರಮಾನಂದ ಶೆಟ್ಟಿ ಉಪಸ್ಥಿತರಿದ್ದರು.

    ಪ್ರಶಸ್ತಿ ಪುರಸ್ಕೃತರ ಕುರಿತು ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರು ನುಡಿಹಾರಗಳನ್ನು ಸಲ್ಲಿಸುತ್ತಾ,” ರಘುರಾಮ ಹೊಳ್ಳರದು ನಿಜಾರ್ಥದ ಯಕ್ಷಧ್ವನಿ. ಒಂದು ಕಾಲಘಟ್ಟದ ಕ್ರಾಂತಿಧ್ವನಿ” ಎಂದರು. ಪ್ರಶಸ್ತಿಯು ಶಾಲು, ಹಾರ, ಹಣ್ಣುಹಂಪಲು, ಪ್ರಶಸ್ತಿ ಪತ್ರ ಮತ್ತು ರೂ.25,000 ನಿಧಿಯನ್ನು ಒಳಗೊಂಡಿತ್ತು.

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಅಚ್ಯುತ ಪಾಂಗಣ್ಣಾಯ ವಂದಿಸಿದರು. ಪೂಜ್ಯ ಶ್ರೀಗಳಿಗೆ  ಹರಿಣಾಕ್ಷಿ ಜೆ.ಶೆಟ್ಟಿ ಮತ್ತು ಸಂಘದ ಸದಸ್ಯೆಯರು ಫಲ ಸಮರ್ಪಣೆಯೊಂದಿಗೆ ಪೂರ್ಣಕುಂಭ ಸ್ವಾಗತ ಕೋರಿದರು. ಶ್ರೀಮತಿ ಶಾರದಾ ಅರಸ್, ಕಿಶೋರಿ ದುಗ್ಗಪ್ಪ, ದುಗ್ಗಪ್ಪ ಎನ್. ರಂಗನಾಥ ರಾವ್ ಅತಿಥಿಗಳನ್ನು ಗೌರವಿಸಿದರು. ಗುಡ್ಡಪ್ಪ ಬಲ್ಯ ನಿರ್ವಹಿಸಿದರು.

    ಆತ್ಮಾಲಯ ಅಕಾಡೆಮಿಯು ಈ ಹಿಂದಿನ ವರುಷಗಳಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರಾದ ಪೆರುವೋಡಿ ನಾರಾಯಣ ಭಟ್, ಗಾನಕೇಸರಿ ಕುದ್ಮಾರು ವೆಂಕಟ್ರಮಣ, ಪೂಕಳ ಲಕ್ಷ್ಮೀನಾರಾಯಣ ಭಟ್, ಹೆಚ್.ದಾಸಪ್ಪ ರೈ, ಕುಂಬಳೆ ಶ್ರೀಧರ ರಾವ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.

No comments:

Post a Comment