Friday, March 11, 2011

ಸರ್ವಾಂಗ ಕಲಾವಿದ ಮಧೂರು ವೆಂಕಟಕೃಷ್ಣ

ಮನೆತುಂಬ ನೆಂಟರಿಷ್ಟರು. ಬಂಧು-ಬಾಂಧವರು. ಪ್ರತಿಯೊಬ್ಬರನ್ನು ಹುಡುಕಿ ಸ್ವಾಗತಿಸುವ ಪರಿ. ಲೋಪವಾಗದ ಆತಿಥ್ಯ. ಮೃಷ್ಟಾನ್ನ ಭೋಜನ. ಯಕ್ಷಗಾನ ಪ್ರಸಂಗಗಳ ಅನಾವರಣ. ನೆನಪು ಸಂಚಿಕೆ ಬಿಡುಗಡೆ. ಆಪ್ತರಿಗೆ ಅಭಿನಂದನೆ. ಹಿರಿಯರಿಗೆ ಸಂಮಾನ. ತಾಳಮದ್ದಳೆ - ಹಿರಿಯ ವಿದ್ವಾಂಸ, ಕಲಾವಿದ ಮಧೂರು ವೆಂಕಟಕೃಷ್ಣರು ತನ್ನ ಸಪ್ತತಿಯನ್ನು ಆಚರಿಸಿದ ಬಗೆಯಿದು. ಧಾರ್ಮಿಕ ವಿಧಿಗಳಿಗೆ ವಹಿಸಿದ ಕಾಳಜಿಯಷ್ಟೇ ಕಲೆಗೂ ಮಾನ-ಸಂಮಾನ.

ವೆಂಕಟಕೃಷ್ಣರು ವಿಶ್ರಾಂತ ಸರಕಾರಿ ಅಧಿಕಾರಿ. ಇವರು ಸಂಘಟಕ, ಕವಿ, ಪ್ರಸಂಗಕರ್ತ, ಅರ್ಥದಾರಿ, ವೇಷಧಾರಿ. ತಂದೆ ಮಾಧವ ಭಟ್. ನಾಟಿ ವೈದ್ಯರು. ವೈದಿಕ ಮನೆತನ.
ಆರಂಭದಲ್ಲಿ ಅಧ್ಯಾಪಕ ವೃತ್ತಿ. ಬಳಿಕ ಮಾರಾಟ ತೆರಿಗೆ ಇಲಾಖೆಯಲ್ಲಿ ಅಧಿಕಾರಿ. ಬಾಲ್ಯದಿಂದಲೇ ಬದುಕಿಗಂಟಿದ ಯಕ್ಷಗಾನವು ಅವರ ವಾಙ್ಮಯ ದಾಹಕ್ಕೆ ಗಟ್ಟಿಯಾದ ಅಡಿಗಟ್ಟು
.
ಎಲ್ಲಂಗಳ ಶಂಕರನಾರಾಯಣ ಶ್ಯಾನುಭೋಗರಿಂದ ಭಾಗವತಿಕೆ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ಆರಂಭಿಕ ಹೆಜ್ಜೆ. ನಂತರ ಕೂಡ್ಲು ನಾರಾಯಣ ಬಲ್ಯಾಯರಿಂದ ಯಕ್ಷಗಾನದ ನಾಟ್ಯ ಕಲಿಕೆ. ಪಗಡಿ ಮತ್ತು ಕಿರೀಟ ವೇಷಧಾರಿ. ಸುತ್ತೆಲ್ಲಾ ಜರಗುತ್ತಿದ್ದ ಕೂಟಾಟಗಳಲ್ಲಿ ವೇಷಗಾರಿಕೆ. ಜಲಂಧರ, ಶ್ರೀದೇವಿ, ಮದನ, ಇಂದ್ರಜಿತು, ಪಂದಳರಾಜ, ಶ್ವೇತಕುಮಾರ, ಭರತ, ಅತಿಕಾಯ..ಪಾತ್ರಗಳ ನಿರ್ವಹಣೆ.
ರಾಮ, ಕೃಷ್ಣ, ಭೀಷ್ಮ.. ಮುಂತಾದ ವೈಚಾರಿಕ ಪ್ರಸ್ತುತಿಗೆ ಹೆಚ್ಚು ಅವಕಾಶವಿರುವ ಪಾತ್ರಗಳು ವೆಂಕಟಕೃಷ್ಣರಿಗೆ ಪ್ರಿಯ. ಪಟ್ಟಾಭಿಷೇಕದ 'ದಶರಥ', ಕರ್ಣಪರ್ವದ 'ಕರ್ಣ', ಕೃಷ್ಣಸಂಧಾನ ಪ್ರಸಂಗದ 'ಧರ್ಮರಾಯ, ಕೃಷ್ಣ', ಮಯೂರಧ್ಜಜ, ರುಕ್ಮಾಂಗದ ಪಾತ್ರಗಳು ಒಂದು ಕಾಲಘಟ್ಟದಲ್ಲಿ ಪ್ರಸಿದ್ಧಿ ತಂದವುಗಳು.
ಇವರ ಆರ್ಥಗಾರಿಕೆ ಶುಚಿ-ರುಚಿ. ಸಂವಾದಕ್ಕೆ ಎಳೆಯುವ ಸ್ವಭಾವ. ಇದರಾಳಿ ಹೇಳುವ ವಿಚಾರ ಮರೆತಾಗ ಅದನ್ನು ನವಿರಾಗಿ ತಿಳಿಸಿಕೊಡುವ, ನೆನಪಿಸುವ ಜಾಣ್ಮೆ. ಪಾತ್ರಸ್ವಭಾವವನ್ನು ತೆರೆದಿಡುವ, ಪಾತ್ರದ ಆಂತರ್ಯವನ್ನು ಬಿಚ್ಚುವ, ಪಾತ್ರದೊಳಗೆ ಕುಬ್ಜವಾಗಿರುವ ವಿಚಾರದ ಎಳೆಯನ್ನು ಹೊರತೆಗೆವ ಸೂಕ್ಷ್ಮ. ಅಗತ್ಯವಿರುವಷ್ಟೇ ವಾದ-ತರ್ಕ. ಸರಸ-ಸಂವಾದವನ್ನು ಹೆಚ್ಚು ಇಷ್ಟಪಡುತ್ತಾರೆ. ಕಾರ್ಯಕ್ರಮದ ನಂತರವೂ ನಿರ್ವಹಿಸಿದ ಪಾತ್ರದ ಕುರಿತಾಗಿ, ಜತೆ ಕಲಾವಿದರ ನಿರ್ವಹಣೆ ಕುರಿತಾದ ವಿಮರ್ಶೆ. ಇಂತಹ ಸಂದರ್ಭಗಳಲ್ಲಿ ರಾಜಿಯ ಸುಳಿವೇ ಇಲ್ಲ!

ಸ್ವತಃ ನಾಟಕ ಕಲಾವಿದ. ಕೃತಿ ರಚನೆಯೊಂದಿಗೆ ಕಲಾವಿದನಾಗಿ, ನಿರ್ದೇಶಕನಾಗಿ ಮುನ್ನಡೆಸಿದ್ದರು. ಸ್ವತಃ ಹರಿಕಥೆ ಮಾಡುವಷ್ಟು ಗಟ್ಟಿ ಸಂಪನ್ಮೂಲ ಅವರಲ್ಲಿತ್ತು. ಪುರಾಣ ವಾಚನ-ಪ್ರವಚನದಲ್ಲೂ ಅನುಭವಿ. ಮುಂದೆ ಯಕ್ಷಗಾನ ಕ್ಷೇತ್ರದಲ್ಲೇ ಹೆಚ್ಚು ವ್ಯವಸಾಯ.

ಉತ್ತಮ ಭಾಗವತ. ಸಾಹಿತ್ಯದ ಜ್ಞಾನ, ರಾಗದ ನಿಖರತೆ, ಪಾತ್ರದ ಪೋಷಣೆಗೆ ಯಾವ್ಯಾವ ಪದ್ಯಗಳು ಬೇಕೆಂಬ ಖಚಿತ ನಿಲುವು.. ಗಮನಿಸಬಹುದಾದ ಅಂಶಗಳು. ಆರ್ಥದಾರಿಗೆ ಸ್ಫೂರ್ತಿ ತುಂಬುವ ಭಾಗವತಿಕೆ.

ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ಆರಂಭ ಕಾಲದಿಂದಲೂ ಸಕ್ರಿಯ. ಬಹುತೇಕ ಹಿರಿಯ-ಕಿರಿಯ ಕಲಾವಿದರೊಂದಿಗೆ ಒಡನಾಟ. ಒಂದು ಹಂತದಲ್ಲಿ ಸಂಘದ ಜವಾಬ್ದಾರಿಯನ್ನು ಹೆಗಲಿಗೇರಿಕೊಂಡಿದ್ದರು.

'ವೈಶಾಲಿನಿ ಪರಿಣಯ' ವೆಂಕಟಕೃಷ್ಣರ ಮೊದಲ ಯಕ್ಷಗಾನ ಕೃತಿ. ಆಟಕ್ಕೆ ಹೆಚ್ಚು ಒಗ್ಗಿಕೊಳ್ಳುವ ಪ್ರಸಂಗವಿದು. 'ದೂರ್ವಾಸಾತಿಥ್ಯ' ಅದರ ಜತೆಜತೆಯಲ್ಲಿ ಸಿದ್ಧವಾದ ಇನ್ನೊಂದು ಕೃತಿ. ತಾಳಮದ್ದಳೆಗೆ ಒಪ್ಪುವಂತಹುದು. ದೂರ್ವಾಸ ಶಾಪ, ಧನ್ವಂತರಿ ಮಹಾತ್ಮೆ, ಸಂತಾನ ಗೋಪಾಲ, ಕುಂಟಾರು ಕ್ಷೇತ್ರ ಮಹಾತ್ಮೆ, ನದಿಯಾಗಿ ಹರಿದ ನಂದಿನಿ, ದುಂಬಿಯಾಗಿ ನೆಗೆದ ಭ್ರಾಮರಿ, ಪಾವಮಾನಿಯ ಪ್ರಣಯಲೀಲೆ, ಬಂಡಿ ಹೊಡೆದ ಗಂಡುಗಲಿ, ಮಧೂರ ಮಹಿಮೆ, ಪಾಪನಾಶಿನಿ ಸರಸ್ವತಿ, ಗುರುವಾಯೂರು ಮಹಾತ್ಮೆ, ಹರಿಭಕ್ತ ಅಂಬರೀಶ; ನಂದಗೋಕುಲದ ಪೊರ್ಲೆ, ಸತ್ಯನಾರಾಯಣ ವ್ರತ ಮಹಾತ್ಮೆ ಎಂಬ ಎರಡು ತುಳು ಪ್ರಸಂಗಗಳು.. ಹೀಗೆ ಹದಿನಾರು ಪ್ರಸಂಗಗಳ ವಿರಚಿತರು.

ರಚಿಸಿದ ಭಕ್ತಿಗೀತೆಗಳು ಬಹುತೇಕ ಧ್ವನಿಸುರುಳಿಗಳಾಗಿವೆ. ಅಡಕತಟ್ಟೆಗಳಾಗಿವೆ. ಏನಿಲ್ಲವೆಂದರೂ ಇನ್ನೂರಕ್ಕೂ ಮಿಕ್ಕಿ ಪದ್ಯಗಳು ಅಕ್ಷರಕ್ಕಿಳಿದಿವೆ. ಇವೆಲ್ಲವೂ ಪದ್ಯಕ್ಕಾಗಿ ಪದ್ಯಗಳಲ್ಲ. ಎಲ್ಲದರಲ್ಲೂ ಸುಲಲಿತವಾದ ಬಂಧವಿದೆ. ಸಾಹಿತ್ಯ ಗಟ್ಟಿತನವಿದೆ. ಕ್ಷೇತ್ರಗಳ ಕುರಿತಾದ ಬರೆದ ಪದ್ಯಗಳಲ್ಲಿ ಆಯಾಯ ಕ್ಷೇತ್ರದ ಐತಿಹ್ಯವನ್ನು ಅಭ್ಯಸಿಸಿಯೇ ಪದ್ಯ ರಚಿಸುವುದು, ಪ್ರಸಂಗ ರಚಿಸುವುದು ವೆಂಕಟಕೃಷ್ಣರ ಸಾಹಿತ್ಯಗುಣ.
ಕಲೆಯಲ್ಲೂ, ಬದುಕಿನಲ್ಲೂ ಶಿಸ್ತು-ಸೌಮ್ಯಗಂಭೀರ. ಮಿತಭಾಷಿ. ಪ್ರತಿಭೆ ಪಾಂಡಿತ್ಯಗಳ ಸಮರಸ. ಆಲೋಚಿಸದೆ ಯಾವುದೇ ಉತ್ತರವನ್ನು ಕೊಡರು. ತಕ್ಷಣದ ಪ್ರತಿಕ್ರಿಯೆ ಅವರಲ್ಲಿಲ್ಲ. ಹಿರಿಯ ಕಲಾವಿದರ ಅನುಭವದ ಬುತ್ತಿಯ ಗಂಟು ಸಾಕಷ್ಟಿದೆ. ಒಮ್ಮೆ ಮಾತಿಗಿಳಿದರೆ ಸಾಕು, ತಕ್ಷಣ ಆವರಿಸಿಕೊಳ್ಳುವ ಅವರ ವ್ಯಕ್ತಿತ್ವ ಹತ್ತಿರದಿಂದ ಅನುಭವಿಸುವಂತಾದ್ದು. ಸಾಕಷ್ಟು ಪುಸ್ತಕ ಸಂಗ್ರಹವಿದ್ದರೂ, ಅವೆಲ್ಲಾ ಅವರ 'ಮಸ್ತಕ'ದಲ್ಲಿದೆ.

ಅವರ ಆಸಕ್ತಿಯ ಇನ್ನೊಂದು ತಾಣ - ಕ್ಷೇತ್ರ ಪರ್ಯಟಣೆ. ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಉತ್ತರಾಂಚಲ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳ ಪ್ರಮುಖ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ ಸಂತೃಪ್ತ ಗೃಹಸ್ಥ. ಕೇರಳದ ಉಡುಪಿ ಮಾಧ್ವ ಬ್ರಾಹ್ಮಣ ಸಭಾದವರು 'ನಾಟ್ಯ ಕಲಾ ರತ್ನ-2010' ಪ್ರಶಸ್ತಿ ನೀಡಿ ವೆಂಕಟಕೃಷ್ಣರನ್ನು ಗೌರವಿಸಿದ್ದಾರೆ.

ಪತ್ನಿ ಸುಮಿತ್ರಾ. ಮುರಳಿಮಾಧವ, ಡಾ.ನಾರಾಯಣ ಮತ್ತು ಜ್ಯೋತಿ - ಮಕ್ಕಳು. ಮೊನ್ನೆ ಜನವರಿ 29, ೨೦೧೧ರಂದು ತನ್ನ ಎಪ್ಪತ್ತರ ಸಂಭ್ರಮವನ್ನು ಆರ್ಥಪೂರ್ಣವಾಗಿ ಮಧೂರಿನ ತನ್ನ ಸ್ವಗೃಹ 'ವೃಂದಾವನ'ದಲ್ಲಿ ಆಚರಿಸಿದರು. ತನ್ನೆಲ್ಲಾ ಯಕ್ಷಗಾನ ಕೃತಿಗಳ ಸಂಕಲನ 'ಯಕ್ಷಪಲ್ಲವ' ಮತ್ತು ಅಭಿನಂದನಾ ಗ್ರಂಥ 'ರಂಗಾಂತರಂಗ'ವನ್ನು ಮುದ್ರಿಸಿ ಆತ್ಮೀಯರ ಕೈಗಿತ್ತಿದ್ದಾರೆ. ಈ ಎರಡೂ ಕೃತಿಗಳ ಪ್ರಕಟಣೆಗೆ ಮನೆಯೊಳಗಿನ ಬಂಧುಗಳೇ ಸಮಿತಿ ರೂಪಿಸಿಕೊಂಡಿರುವುದು ಗಮನಾರ್ಹ ಮತ್ತು ಮಾದರಿ.

No comments:

Post a Comment