Friday, May 20, 2011

ಹಿರಿಯ ಅರ್ಥದಾರಿ : ಅಡೂರು 'ಸೂರ್ಯಜ್ಜ'

ಅಡೂರು ಸೂರ್ಯನಾರಾಯಣ ಕಲ್ಲೂರಾಯರನ್ನು ಜ್ಞಾಪಿಸಿದಾಗಲೆಲ್ಲಾ 'ದಕ್ಷಾಧ್ವರ' ಪ್ರಸಂಗ ನೆನಪಾಗುತ್ತದೆ. ಇವರ ಮೊಮ್ಮಗ ಪ್ರಕಾಶ್ ಕೊಡೆಂಕಿರಿಯರ ಮನೆಯಲ್ಲೊಂದು ಸಮಾರಂಭ. ಅಂದು 'ದಕ್ಷಾಧ್ವರ' ಪ್ರಸಂಗದ ಆಟ. ಕಲ್ಲೂರಾಯರದು ವೃದ್ಧವಿಪ್ರನ ಪಾತ್ರ. ದಾಕ್ಷಾಯಿಣಿ ಪಾತ್ರವನ್ನು ನಾನೇ ನಿರ್ವಹಿಸಿದ್ದೆ.

ಸರಿ, ದಾಕ್ಷಾಯಿಣಿಯನ್ನು ಕಂಡ ವೃದ್ಧವಿಪ್ರನಿಗೆ ಏನಾಯ್ತೋ ಗೊತ್ತಿಲ್ಲ. ದೇವಿಸ್ತುತಿಯನ್ನು ಮಾಡುತ್ತಾ, ಸ್ತ್ರೋತ್ರ ಪಠಿಸುತ್ತಾ, ಕರಗಳೆರಡನ್ನು ಮೇಲೆತ್ತಿ ದಾಕ್ಷಾಯಿಣಿಗೆ ಮೂರು ಪ್ರದಕ್ಷಿಣೆ ಬಂದು ದೀರ್ಘದಂಡ ಪ್ರಣಾಮ ಸಲ್ಲಿಸಿದಲ್ಲಿಗೆ ಕಲ್ಲೂರಾಯರ ವಿಪ್ರ ಸಾವರಿಸಿಕೊಳ್ಳುತ್ತಿದ್ದ! ಒಂದರೆಕ್ಷಣ ಎಲ್ಲರಿಗೂ ಗಲಿಬಿಲಿ. ರಂಗದಲ್ಲಿ ಗಾಢ ಮೌನ. ಪ್ರೇಕ್ಷಕರಲ್ಲೂ ಕುತೂಹಲ. ನಂತರ ಹೇಗೋ ಪ್ರಸಂಗ ಮುಂದೆ ಹೋಯಿತೆನ್ನಿ.

'ನೋಡಿ, ದಾಕ್ಷಾಯಿಣಿಯನ್ನು ಎದುರುಗೊಳ್ಳುವ ವಿಪ್ರನಲ್ವಾ. ಆಕೆ ಶಿವನ ಮಡದಿ. ಲೌಕಿಕನಾದ ವಿಪ್ರನು ದೇವಿಯನ್ನು ನೋಡಿ ಅಷ್ಟು ತಲ್ಲೀನನಾಗದಿದ್ದರೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಹಾಗಾಗ್ತದೋ' ಎಂದರು. ಸೂರ್ಯಜ್ಜನ ಪಾತ್ರ ತಲ್ಲೀನತೆ ಎಲ್ಲರ ಹಣೆಯಲ್ಲಿ ಬೆವರು ತರಿಸಿತ್ತು.

ಮೂಲತಃ ಕಲ್ಲೂರಾಯರು ಕಾಸರಗೋಡು ಜಿಲ್ಲೆಯ ಅಡೂರಿನ ತಲ್ಪಚ್ಚೇರಿಯವರು. ಎಳವೆಯಿಂದಲೇ ಯಕ್ಷಗಾನದ ಆಸಕ್ತಿ. ದೊಡ್ಡ ಸಂಸಾರ. ಮಕ್ಕಳು ನಿದ್ರಿಸಿದ ಬಳಿಕ ಹತ್ತಿರದ ಯಕ್ಷಗಾನದ ಕೂಟಾಟಗಳಿಗೆ ಹೋಗಿ, ಅವರು ಎಚ್ಚರವಾಗುವುದರೊಳಗೆ ಪುನಃ ಮನೆ ಸೇರಿಬಿಡುವಷ್ಟು ಕಲಾ ಸೆಳೆತ.

ಕಲ್ಲೂರಾಯರು ಅರ್ಥದಾರಿಯಾಗಿ ಹೆಚ್ಚು ಕಾಣಿಸಿಕೊಂಡದ್ದು. ಹಾಗೆಂತ ಅವರಿಗೆ ಭಾಗವತಿಕೆ ಗೊತ್ತಿತ್ತು. ಚೆಂಡೆ, ಮದ್ದಳೆ ನುಡಿಸುತ್ತಿದ್ದರು. ಸಂದರ್ಭ ಬಂದರೆ ವೇಷವನ್ನೂ ಮಾಡುತ್ತಿದ್ದರು.

ಭೀಷ್ಮಪರ್ವದ 'ಭೀಷ್ಮ', ಕೃಷ್ಣ ಸಂಧಾನದ 'ಕೃಷ್ಣ', ಕರ್ಣಪರ್ವದ 'ಕರ್ಣ' ಮತ್ತು 'ಕೃಷ್ಣ'.. ಮುಂತಾದ ಪಾತ್ರಗಳು ಪ್ರಿಯ. ಅದರಲ್ಲೂ 'ಕರ್ಮಬಂಧ'ದ ಕೃಷ್ಣ, ಭೀಷ್ಮ ಪಾತ್ರದತ್ತ ಹೆಚ್ಚು ಒಲವು.

'ಇವರ ಅರ್ಥಗಾರಿಕೆಯಲ್ಲಿ ತರ್ಕ ಜಾಸ್ತಿ. ವಾದ ಶುರು ಮಾಡಿದರೆ ಅರ್ಧದಲ್ಲಿ ರಾಜಿಯಿಲ್ಲ. ತನ್ನ ನಿಲುವಿಗೆ ಅಂಟಿಕೊಳ್ಳುವ ಹಠವಾದಿ. ಕೆಲವೊಂದು ಪಾತ್ರಚಿತ್ರಣಗಳು ಅದ್ಭುತವಾಗಿ ಮೂಡಿಬರುತ್ತಿದ್ದುವು. ಬಹುತೇಕ ಪಾತ್ರಗಳಿಗೆ ಬೇಕಾಗುವ ಸಾಹಿತ್ಯ ಸ್ಟಾಕ್ ಬತ್ತುತ್ತಲೇ ಇರಲಿಲ್ಲ' ಎಂದು ಅವರ ಒಡನಾಡಿ ಅಡೂರು ಶ್ರೀಧರ ರಾವ್ ಜ್ಞಾಪಿಸಿಕೊಳ್ಳುತ್ತಾರೆ. 'ರಘುವಂಶ' ಎಂಬ ಪ್ರಸಂಗದ ರಚಯಿತರು.

ಕಲ್ಲೂರಾಯರು ಕಿರಿಯರಿಗೆ 'ಸೂರ್ಯಜ್ಜ'. ಇನ್ನೂ ಕೆಲವರಿಗೆ 'ಸೂರ್ಯಣ್ಣ'. ಅವರ ಜವ್ವನದ ಸಮಯದಲ್ಲಿ ನರಸಿಂಹಯ್ಯನವರ ಬಹುತೇಕ ಎಲ್ಲಾ ಪತ್ತೇದಾರಿ ಕಾದಂಬರಿಯ ಅಪ್ಪಟ ಓದುಗ. 'ಲಾಟನ್ ಬೆಳಕಿನಲ್ಲಿ ಅಜ್ಜ ರಾತ್ರಿಯಿಡೀ ಓದುತ್ತಿದ್ದುದು ನನಗೆ ನೆನಪಿದೆ' ಪ್ರಕಾಶ್ ಅಜ್ಜನ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾರೆ.

ಆ ಬಳಿಕ ಆಧ್ಯಾತ್ಮದತ್ತ ಒಲವು. ಭಾರತ ದರ್ಶನ ಪ್ರಕಾಶನದವರ ಮಹಾಭಾರತ ಕೃತಿಯನ್ನು ಹಲವು ಸಲ ಓದಿದ್ದಾರಂತೆ. ಬೇರೆ ಬೇರೆ ಭಾರತ, ರಾಮಾಯಣ, ಭಾಗವತಗಳನ್ನೂ ಓದಿದ್ದಾರೆ. ವೈಚಾರಿಕ ಸಾಹಿತ್ಯದಲ್ಲಿ ಮೋಹ. ಹಾಗಾಗಿ ಪುರಾಣದ ಸೂಕ್ಷ್ಮ ವಿಚಾರಗಳ ಕುರಿತ ವಾದಗಳಲ್ಲಿ ಅವರು ಸೋತದ್ದಿಲ್ಲ.

ಕಲ್ಲೂರಾಯರ ಮೆಮೊರಿ 'ಎಂಬಿ'ಯಲ್ಲಿಲ್ಲ. ಅದು 'ಜಿಬಿ'ಯಲ್ಲಿದೆ! 'ಪ್ರತಿದಿನ ತೋಟ ಸುತ್ತುವುದು ಅಪ್ಪನಿಗೆ ರೂಢಿ. ನಮ್ಮಲ್ಲಿ ಏನಿಲ್ಲವೆಂದರೂ ಒಂದು ಸಾವಿರಕ್ಕೂ ಮಿಕ್ಕಿ ಅಡಿಕೆ ಮರಗಳಿದ್ದುವು. ಅದರಲ್ಲಿ ಒಂದು ಮರದ ಅಡಿಕೆ ಗೊನೆ ಕಳವಾದರೂ ಗೊತ್ತಾಗಿಬಿಡುತ್ತಿತ್ತು' ಎನ್ನುತ್ತಾರೆ ಪುತ್ರಿ ಶಾರದಾ ಭಟ್.

ಊರಿನ ರಾಜಿ ಪಂಚಾಯಿತಿಕೆ, ದಾನಧರ್ಮ, ಆರ್ತರಿಗೆ ನೆರವಾಗುವುದು, ಉಪನಯನವಾದ ವಟುಗಳಿಗೆ ಸಂಧ್ಯಾವಂದನೆ ಕಲಿಕೆ.. ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೂರ್ಯಜ್ಜ ಮುಂದು. ಬದುಕಿನಲ್ಲಿ ನಿರಂತರ ಚಲನಶೀಲ. ಅವರು ಸಿಕ್ಕಾಗಲೆಲ್ಲಾ ಹಿಂದೆ ನಡೆಯುತ್ತಿದ್ದ ತಾಳಮದ್ದಳೆಗಳ ಸುದ್ದಿ, ಪಾತ್ರಧಾರಿಗಳ ಪರಿಚಯ, ಅವರು ಮಾಡುತ್ತಿದ್ದ ವಾದಗಳು, ಸೋಲು-ಗೆಲುವು, ಹಾಸ್ಯ ಪ್ರಸಂಗಗಳನ್ನು ಅವರ ಮಾತಲ್ಲೇ ಕೇಳುವುದಿದೆಯಲ್ಲಾ, ಒಂದು ಕಾಲ ಘಟ್ಟದ ಯಕ್ಷಗಾನ ಮರುಸೃಷ್ಟಿಯಾಗುತ್ತದೆ.

'ಅನ್ನ ಆಹಾರದಲ್ಲಿ ಶುಚಿ. ಉಡುವ ಪಂಚೆ, ಜುಬ್ಬಾವೂ ಅಷ್ಟೇ ಕ್ಲೀನ್. ಅದಕ್ಕೆ ಚಿನ್ನದ ಗುಂಡಿಗಳು. ಹೆಗಲಲ್ಲೊಂದು ಶಾಲು. ಹಣೆಯಲ್ಲಿ ತಿಲಕ. ತನ್ನ ಕೊನೆ ಕಾಲದ ತನಕವೂ ಈ ಶುಚಿತ್ವವನ್ನು ಕಾಪಾಡಿಕೊಂಡಿದ್ದರು.' ಎನ್ನುತ್ತಾರೆ ಅವರ ಪುತ್ರ ಶಂಕರ ನಾರಾಯಣ.

ನಾವಿಂದು ಸಂದುಹೋದ ಬಹುತೇಕ ಹಿರಿಯರ ಬದುಕನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ನೋಡುತ್ತೇವೆ, ಓದುತ್ತೇವೆ. 'ಯಕ್ಷಗಾನ ಹುಚ್ಚಿನಿಂದಾಗಿ ಆಸ್ತಿ ಕಳಕೊಂಡರಂತೆ, ಮನೆ ಮಾರಿದರಂತೆ'.. ಹೀಗೆ. ಆದರೆ ಕಲ್ಲೂರಾಯರು ಮನೆಮಂದಿ, ಕುಟುಂಬ, ತೋಟ, ಆಸ್ತಿ, ಮನೆಯ ಆಗುಹೋಗು.. ಇವುಗಳ ಬಗ್ಗೆ ನಿಗಾ ಇಟ್ಟುಕೊಂಡು' ಮಕ್ಕಳಿಗೆಲ್ಲಾ ವಿದ್ಯಾಭ್ಯಾಸ ನೀಡುತ್ತಾ ಯಕ್ಷಗಾನದ 'ವಿಪರೀತ' ಗೀಳನ್ನು ಅಂಟಿಸಿಕೊಂಡಿದ್ದರು. 'ತಾನೊಬ್ಬ ಗೃಹಸ್ಥ' ಎಂಬ ಅರಿವು ನಿತ್ಯ ಜಾಗೃತವಾಗಿದ್ದಿತ್ತು.

ಸೂರ್ಯನಾರಾಯಣ ಕಲ್ಲೂರಾಯರು ವಿಧಿವಶರಾಗಿ ಮೇ 19ಕ್ಕೆ ಒಂದು ವರುಷ. ತೊಂಭತ್ತು ವರುಷಗಳ ದೀರ್ಘಕಾಲೀನ ಬದುಕಿನಲ್ಲಿ 'ಲವಲವಿಕೆ'ಯೇ ಅವರ ಆರೋಗ್ಯದ ಗುಟ್ಟು. ಅಗಲಿದ ಚೇತನಕ್ಕೆ ಅಕ್ಷರ ನಮನ.

No comments:

Post a Comment