Friday, May 20, 2011

ಹಿರಿಯ ಅರ್ಥದಾರಿ : ಅಡೂರು 'ಸೂರ್ಯಜ್ಜ'

ಅಡೂರು ಸೂರ್ಯನಾರಾಯಣ ಕಲ್ಲೂರಾಯರನ್ನು ಜ್ಞಾಪಿಸಿದಾಗಲೆಲ್ಲಾ 'ದಕ್ಷಾಧ್ವರ' ಪ್ರಸಂಗ ನೆನಪಾಗುತ್ತದೆ. ಇವರ ಮೊಮ್ಮಗ ಪ್ರಕಾಶ್ ಕೊಡೆಂಕಿರಿಯರ ಮನೆಯಲ್ಲೊಂದು ಸಮಾರಂಭ. ಅಂದು 'ದಕ್ಷಾಧ್ವರ' ಪ್ರಸಂಗದ ಆಟ. ಕಲ್ಲೂರಾಯರದು ವೃದ್ಧವಿಪ್ರನ ಪಾತ್ರ. ದಾಕ್ಷಾಯಿಣಿ ಪಾತ್ರವನ್ನು ನಾನೇ ನಿರ್ವಹಿಸಿದ್ದೆ.

ಸರಿ, ದಾಕ್ಷಾಯಿಣಿಯನ್ನು ಕಂಡ ವೃದ್ಧವಿಪ್ರನಿಗೆ ಏನಾಯ್ತೋ ಗೊತ್ತಿಲ್ಲ. ದೇವಿಸ್ತುತಿಯನ್ನು ಮಾಡುತ್ತಾ, ಸ್ತ್ರೋತ್ರ ಪಠಿಸುತ್ತಾ, ಕರಗಳೆರಡನ್ನು ಮೇಲೆತ್ತಿ ದಾಕ್ಷಾಯಿಣಿಗೆ ಮೂರು ಪ್ರದಕ್ಷಿಣೆ ಬಂದು ದೀರ್ಘದಂಡ ಪ್ರಣಾಮ ಸಲ್ಲಿಸಿದಲ್ಲಿಗೆ ಕಲ್ಲೂರಾಯರ ವಿಪ್ರ ಸಾವರಿಸಿಕೊಳ್ಳುತ್ತಿದ್ದ! ಒಂದರೆಕ್ಷಣ ಎಲ್ಲರಿಗೂ ಗಲಿಬಿಲಿ. ರಂಗದಲ್ಲಿ ಗಾಢ ಮೌನ. ಪ್ರೇಕ್ಷಕರಲ್ಲೂ ಕುತೂಹಲ. ನಂತರ ಹೇಗೋ ಪ್ರಸಂಗ ಮುಂದೆ ಹೋಯಿತೆನ್ನಿ.

'ನೋಡಿ, ದಾಕ್ಷಾಯಿಣಿಯನ್ನು ಎದುರುಗೊಳ್ಳುವ ವಿಪ್ರನಲ್ವಾ. ಆಕೆ ಶಿವನ ಮಡದಿ. ಲೌಕಿಕನಾದ ವಿಪ್ರನು ದೇವಿಯನ್ನು ನೋಡಿ ಅಷ್ಟು ತಲ್ಲೀನನಾಗದಿದ್ದರೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಹಾಗಾಗ್ತದೋ' ಎಂದರು. ಸೂರ್ಯಜ್ಜನ ಪಾತ್ರ ತಲ್ಲೀನತೆ ಎಲ್ಲರ ಹಣೆಯಲ್ಲಿ ಬೆವರು ತರಿಸಿತ್ತು.

ಮೂಲತಃ ಕಲ್ಲೂರಾಯರು ಕಾಸರಗೋಡು ಜಿಲ್ಲೆಯ ಅಡೂರಿನ ತಲ್ಪಚ್ಚೇರಿಯವರು. ಎಳವೆಯಿಂದಲೇ ಯಕ್ಷಗಾನದ ಆಸಕ್ತಿ. ದೊಡ್ಡ ಸಂಸಾರ. ಮಕ್ಕಳು ನಿದ್ರಿಸಿದ ಬಳಿಕ ಹತ್ತಿರದ ಯಕ್ಷಗಾನದ ಕೂಟಾಟಗಳಿಗೆ ಹೋಗಿ, ಅವರು ಎಚ್ಚರವಾಗುವುದರೊಳಗೆ ಪುನಃ ಮನೆ ಸೇರಿಬಿಡುವಷ್ಟು ಕಲಾ ಸೆಳೆತ.

ಕಲ್ಲೂರಾಯರು ಅರ್ಥದಾರಿಯಾಗಿ ಹೆಚ್ಚು ಕಾಣಿಸಿಕೊಂಡದ್ದು. ಹಾಗೆಂತ ಅವರಿಗೆ ಭಾಗವತಿಕೆ ಗೊತ್ತಿತ್ತು. ಚೆಂಡೆ, ಮದ್ದಳೆ ನುಡಿಸುತ್ತಿದ್ದರು. ಸಂದರ್ಭ ಬಂದರೆ ವೇಷವನ್ನೂ ಮಾಡುತ್ತಿದ್ದರು.

ಭೀಷ್ಮಪರ್ವದ 'ಭೀಷ್ಮ', ಕೃಷ್ಣ ಸಂಧಾನದ 'ಕೃಷ್ಣ', ಕರ್ಣಪರ್ವದ 'ಕರ್ಣ' ಮತ್ತು 'ಕೃಷ್ಣ'.. ಮುಂತಾದ ಪಾತ್ರಗಳು ಪ್ರಿಯ. ಅದರಲ್ಲೂ 'ಕರ್ಮಬಂಧ'ದ ಕೃಷ್ಣ, ಭೀಷ್ಮ ಪಾತ್ರದತ್ತ ಹೆಚ್ಚು ಒಲವು.

'ಇವರ ಅರ್ಥಗಾರಿಕೆಯಲ್ಲಿ ತರ್ಕ ಜಾಸ್ತಿ. ವಾದ ಶುರು ಮಾಡಿದರೆ ಅರ್ಧದಲ್ಲಿ ರಾಜಿಯಿಲ್ಲ. ತನ್ನ ನಿಲುವಿಗೆ ಅಂಟಿಕೊಳ್ಳುವ ಹಠವಾದಿ. ಕೆಲವೊಂದು ಪಾತ್ರಚಿತ್ರಣಗಳು ಅದ್ಭುತವಾಗಿ ಮೂಡಿಬರುತ್ತಿದ್ದುವು. ಬಹುತೇಕ ಪಾತ್ರಗಳಿಗೆ ಬೇಕಾಗುವ ಸಾಹಿತ್ಯ ಸ್ಟಾಕ್ ಬತ್ತುತ್ತಲೇ ಇರಲಿಲ್ಲ' ಎಂದು ಅವರ ಒಡನಾಡಿ ಅಡೂರು ಶ್ರೀಧರ ರಾವ್ ಜ್ಞಾಪಿಸಿಕೊಳ್ಳುತ್ತಾರೆ. 'ರಘುವಂಶ' ಎಂಬ ಪ್ರಸಂಗದ ರಚಯಿತರು.

ಕಲ್ಲೂರಾಯರು ಕಿರಿಯರಿಗೆ 'ಸೂರ್ಯಜ್ಜ'. ಇನ್ನೂ ಕೆಲವರಿಗೆ 'ಸೂರ್ಯಣ್ಣ'. ಅವರ ಜವ್ವನದ ಸಮಯದಲ್ಲಿ ನರಸಿಂಹಯ್ಯನವರ ಬಹುತೇಕ ಎಲ್ಲಾ ಪತ್ತೇದಾರಿ ಕಾದಂಬರಿಯ ಅಪ್ಪಟ ಓದುಗ. 'ಲಾಟನ್ ಬೆಳಕಿನಲ್ಲಿ ಅಜ್ಜ ರಾತ್ರಿಯಿಡೀ ಓದುತ್ತಿದ್ದುದು ನನಗೆ ನೆನಪಿದೆ' ಪ್ರಕಾಶ್ ಅಜ್ಜನ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾರೆ.

ಆ ಬಳಿಕ ಆಧ್ಯಾತ್ಮದತ್ತ ಒಲವು. ಭಾರತ ದರ್ಶನ ಪ್ರಕಾಶನದವರ ಮಹಾಭಾರತ ಕೃತಿಯನ್ನು ಹಲವು ಸಲ ಓದಿದ್ದಾರಂತೆ. ಬೇರೆ ಬೇರೆ ಭಾರತ, ರಾಮಾಯಣ, ಭಾಗವತಗಳನ್ನೂ ಓದಿದ್ದಾರೆ. ವೈಚಾರಿಕ ಸಾಹಿತ್ಯದಲ್ಲಿ ಮೋಹ. ಹಾಗಾಗಿ ಪುರಾಣದ ಸೂಕ್ಷ್ಮ ವಿಚಾರಗಳ ಕುರಿತ ವಾದಗಳಲ್ಲಿ ಅವರು ಸೋತದ್ದಿಲ್ಲ.

ಕಲ್ಲೂರಾಯರ ಮೆಮೊರಿ 'ಎಂಬಿ'ಯಲ್ಲಿಲ್ಲ. ಅದು 'ಜಿಬಿ'ಯಲ್ಲಿದೆ! 'ಪ್ರತಿದಿನ ತೋಟ ಸುತ್ತುವುದು ಅಪ್ಪನಿಗೆ ರೂಢಿ. ನಮ್ಮಲ್ಲಿ ಏನಿಲ್ಲವೆಂದರೂ ಒಂದು ಸಾವಿರಕ್ಕೂ ಮಿಕ್ಕಿ ಅಡಿಕೆ ಮರಗಳಿದ್ದುವು. ಅದರಲ್ಲಿ ಒಂದು ಮರದ ಅಡಿಕೆ ಗೊನೆ ಕಳವಾದರೂ ಗೊತ್ತಾಗಿಬಿಡುತ್ತಿತ್ತು' ಎನ್ನುತ್ತಾರೆ ಪುತ್ರಿ ಶಾರದಾ ಭಟ್.

ಊರಿನ ರಾಜಿ ಪಂಚಾಯಿತಿಕೆ, ದಾನಧರ್ಮ, ಆರ್ತರಿಗೆ ನೆರವಾಗುವುದು, ಉಪನಯನವಾದ ವಟುಗಳಿಗೆ ಸಂಧ್ಯಾವಂದನೆ ಕಲಿಕೆ.. ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೂರ್ಯಜ್ಜ ಮುಂದು. ಬದುಕಿನಲ್ಲಿ ನಿರಂತರ ಚಲನಶೀಲ. ಅವರು ಸಿಕ್ಕಾಗಲೆಲ್ಲಾ ಹಿಂದೆ ನಡೆಯುತ್ತಿದ್ದ ತಾಳಮದ್ದಳೆಗಳ ಸುದ್ದಿ, ಪಾತ್ರಧಾರಿಗಳ ಪರಿಚಯ, ಅವರು ಮಾಡುತ್ತಿದ್ದ ವಾದಗಳು, ಸೋಲು-ಗೆಲುವು, ಹಾಸ್ಯ ಪ್ರಸಂಗಗಳನ್ನು ಅವರ ಮಾತಲ್ಲೇ ಕೇಳುವುದಿದೆಯಲ್ಲಾ, ಒಂದು ಕಾಲ ಘಟ್ಟದ ಯಕ್ಷಗಾನ ಮರುಸೃಷ್ಟಿಯಾಗುತ್ತದೆ.

'ಅನ್ನ ಆಹಾರದಲ್ಲಿ ಶುಚಿ. ಉಡುವ ಪಂಚೆ, ಜುಬ್ಬಾವೂ ಅಷ್ಟೇ ಕ್ಲೀನ್. ಅದಕ್ಕೆ ಚಿನ್ನದ ಗುಂಡಿಗಳು. ಹೆಗಲಲ್ಲೊಂದು ಶಾಲು. ಹಣೆಯಲ್ಲಿ ತಿಲಕ. ತನ್ನ ಕೊನೆ ಕಾಲದ ತನಕವೂ ಈ ಶುಚಿತ್ವವನ್ನು ಕಾಪಾಡಿಕೊಂಡಿದ್ದರು.' ಎನ್ನುತ್ತಾರೆ ಅವರ ಪುತ್ರ ಶಂಕರ ನಾರಾಯಣ.

ನಾವಿಂದು ಸಂದುಹೋದ ಬಹುತೇಕ ಹಿರಿಯರ ಬದುಕನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ನೋಡುತ್ತೇವೆ, ಓದುತ್ತೇವೆ. 'ಯಕ್ಷಗಾನ ಹುಚ್ಚಿನಿಂದಾಗಿ ಆಸ್ತಿ ಕಳಕೊಂಡರಂತೆ, ಮನೆ ಮಾರಿದರಂತೆ'.. ಹೀಗೆ. ಆದರೆ ಕಲ್ಲೂರಾಯರು ಮನೆಮಂದಿ, ಕುಟುಂಬ, ತೋಟ, ಆಸ್ತಿ, ಮನೆಯ ಆಗುಹೋಗು.. ಇವುಗಳ ಬಗ್ಗೆ ನಿಗಾ ಇಟ್ಟುಕೊಂಡು' ಮಕ್ಕಳಿಗೆಲ್ಲಾ ವಿದ್ಯಾಭ್ಯಾಸ ನೀಡುತ್ತಾ ಯಕ್ಷಗಾನದ 'ವಿಪರೀತ' ಗೀಳನ್ನು ಅಂಟಿಸಿಕೊಂಡಿದ್ದರು. 'ತಾನೊಬ್ಬ ಗೃಹಸ್ಥ' ಎಂಬ ಅರಿವು ನಿತ್ಯ ಜಾಗೃತವಾಗಿದ್ದಿತ್ತು.

ಸೂರ್ಯನಾರಾಯಣ ಕಲ್ಲೂರಾಯರು ವಿಧಿವಶರಾಗಿ ಮೇ 19ಕ್ಕೆ ಒಂದು ವರುಷ. ತೊಂಭತ್ತು ವರುಷಗಳ ದೀರ್ಘಕಾಲೀನ ಬದುಕಿನಲ್ಲಿ 'ಲವಲವಿಕೆ'ಯೇ ಅವರ ಆರೋಗ್ಯದ ಗುಟ್ಟು. ಅಗಲಿದ ಚೇತನಕ್ಕೆ ಅಕ್ಷರ ನಮನ.

Tuesday, May 10, 2011

ಖ್ಯಾತ ಮದ್ದಳೆ ವಾದಕ ಗೋರೆ ನಿಧನ

ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಖ್ಯಾತ ಮದ್ದಳೆ ವಾದಕ ಪ್ರಭಾಕರ ಗೋರೆ ಮೇ 9ರಂದು ಕುಂಜಿಬೆಟ್ಟು ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಅಸ್ವಸ್ಥರಾಗಿ ಬಳಿಕ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಖ್ಯಾತ ಭಾಗವತ ಕೀರ್ತಿಶೇಷ ದಾಮೋದರ ಮಂಡೆಚ್ಚ ಅವರ ಪ್ರೇರಣೆಯಿದ ಕರ್ನಾಟಕ ಮೇಳಕ್ಕೆ ಸೇರಿದ ಗೋರೆಯವರು ಸುಮಾರು ಮೂರು ದಶಕಗಳ ಕಾಲದ ವ್ಯವಸಾಯ ಮಾಡಿದ್ದರು. ಬಳಿಕ ಐದು ವರುಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ. ಕಳೆದ ಆರು ವರುಷದಿಂದ ಎಡನೀರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು.

ಇವರು ತಬಲಾ ವಾದಕರಾಗಿಯೂ ಪ್ರಾವಿಣ್ಯ ಪಡೆದಿದ್ದರು.

Monday, May 9, 2011

ಯಕ್ಷಗಾನಕ್ಕೆ ಶೈಕ್ಷಣಿಕ ಸ್ಪರ್ಶ


ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ. ಕೆಲವರು ಅಜ್ಜಿಮನೆ ಸೇರಿದ್ದಾರೆ. ಕೆಲವರನ್ನು ವಿವಿಧ ಕೋರ್ಸ್, ಶಿಬಿರ, ಇಂಗ್ಲಿಷ್ ಕ್ಲಾಸ್ಗಳು ಆವರಿಸಿವೆ. ಇನ್ನು ಯಕ್ಷಗಾನದತ್ತ ಹೊರಳಿದರೆ ಅಲ್ಲಲ್ಲಿ ಯಕ್ಷಗುರುಗಳಿಂದ ಯಕ್ಷಾಭ್ಯಾಸ ನಡೆಯುತ್ತಲೇ ಇದೆ. ಯಕ್ಷಗಾನ ಕೇಂದ್ರಗಳ ಚಟುವಟಿಕೆಗಳು ನಿರಂತರ.

ಇಲ್ನೋಡಿ, ಒಂದು ವಾರದ ವಿಶಿಷ್ಟ 'ಯಕ್ಷಶಿಕ್ಷಣ ಕಾರ್ಯಾಗಾರ' ಯಾ ಶಿಬಿರ. ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪರಿಕಲ್ಪನೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಾರಥ್ಯ. ಅರುವತ್ತೈದು ವಿದ್ಯಾರ್ಥಿಗಳು. ಯಾವುದೇ ಶುಲ್ಕವಿಲ್ಲ.

ಯಕ್ಷಗಾನದ ಕುರಿತಾದ ಮೂಲಭೂತ ಸಂಗತಿಗಳನ್ನು ತಿಳಿಸಿಕೊಡುವುದು ಉದ್ದೇಶ. ಇಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ಜತೆಜತೆಗೆ ನಡೆದಿದೆ. ಕಾರ್ಯಾಗಾರದುದ್ದಕ್ಕೂ ಶಿಬಿರಾರ್ಥಿಗಳ ಉಪಸ್ಥಿತಿ ಶಿಬಿರ ಯಶಕ್ಕೆ ಕನ್ನಡಿ.
'ಒಂದು ವಾರದಲ್ಲಿ ಏನು ಗೊತ್ತಾಗುತ್ತದೆ' ಶಿಬಿರಪೂರ್ವದಲ್ಲಿ ಕೇಳಿಬಂದ ಅಡ್ಡಪ್ರಶ್ನೆ. ಸಹಜವೂ ಕೂಡ. 'ಒಂದು ವಾರದಲ್ಲಿ ಕಲಾವಿದನಾಗಿಯೋ, ಕಲಾವಿದೆಯಾಗಿಯೋ ರೂಪುಗೊಳ್ಳಲಾರರು. ಆದರೆ ಎಲ್ಲೂ ಸಿಗದ ಬೇಸಿಕ್ ಮಾಹಿತಿಗಳು ಸಿಕ್ತವಲ್ಲಾ. ಮಕ್ಕಳು ಮುಂದೆ ಯಕ್ಷಗಾನದ ಒಲವು ಮೂಡಿಸಿಕೊಳ್ಳಲು ಇದು ಸಹಕಾರಿ' ಎಂಬ ಉತ್ತರ ನೀಡಿದರು, ಶಿಬಿರದ ನಿರ್ದೇಶಕ, ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್.

ಪ್ರಕೃತ 'ಬದಲಾವಣೆ' ಎಂದು ನಾವು ಒಪ್ಪಿಕೊಂಡ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿಯನ್ನು ಕುದುರಿಸಲು, ಇದ್ದ ಆಸಕ್ತಿಯನ್ನು ಗಟ್ಟಿಮಾಡಲು ಇಂತಹ ಕಾರ್ಯಾಗಾರ ಹೆಚ್ಚು ಸೂಕ್ತ.

ಶಿಬಿರದಲ್ಲಿ ತೆಂಕುತಿಟ್ಟಿನ ವಿವಿಧ ವೇಷಗಳ ವೈವಿಧ್ಯವನ್ನು ಪವರ್ ಪಾಯಿಂಟ್ ಮೂಲಕ ವಿವರಣೆ, ಕಲಾವಿದ ದಿವಾಣ ಶಿವಶಂಕರ ಭಟ್ಟರಿಂದ ಕಿರೀಟ ವೇಷಗಳ ಮಾಹಿತಿ, ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರಿಂದ ಪುಂಡು ವೇಷಗಳ ಮತ್ತು ಶಿಕ್ಷಕ ಚಂದ್ರಶೇಖರ್ ಅವರಿಂದ ರಾಕ್ಷಸ ವೇಷಗಳ ಮಾಹಿತಿ ನೀಡಿಕೆ.

ರಂಗದಲ್ಲಿ ಹಾಸ್ಯ ಹೊಮ್ಮುವ ಪರಿಯನ್ನು ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ತಾನೇ ಅಭಿನಯಿಸಿ, ಪಾತ್ರ ಸ್ವಭಾವಕ್ಕನುಗುಣವಾದ ಸ್ವರ ಬದಲಾವಣೆಯನ್ನು ಮಾಡಿ ತೋರಿಸಿದರು. ಕಲಾವಿದ, ಉಪನ್ಯಾಸ ವೆಂಕಟರಾಮ ಭಟ್ ಸುಳ್ಯ ಇವರಿಂದ ಸ್ತ್ರೀ ಪಾತ್ರಗಳ ವಿವರಣೆ. ಪಾತ್ರಗಳು, ಅವುಗಳ ಸ್ವಭಾವಗಳು, ಮುಖವರ್ಣಿಕೆಯ ರೀತಿ, ಯಾವ್ಯಾವ ಪಾತ್ರಗಳು ಯಾವ್ಯಾವ ಗುಣಗಳನ್ನು ಪ್ರತಿನಿಧಿಸುತ್ತವೆ ಎಂಬ ವಿಚಾರಗಳ ಕುರಿತು ಥಿಯರಿ.

ಮಹಾಬಲ ಕಲ್ಮಡ್ಕರಿಂದ ಯಕ್ಷಗಾನದ ಮುಖವರ್ಣಿಕೆಯ ಪ್ರಾತ್ಯಕ್ಷಿಕೆ. ಎಲ್ಲಾ ಮಕ್ಕಳ ಮುಖದಲ್ಲೂ ಅಂದು ಯಕ್ಷಗಾನದ ಕಳೆ. ಶಿಕ್ಷಕ ರುಕ್ಮಯ ಪೂಜಾರಿ ಯಕ್ಷ ಮುಖವಾಡಗಳ ರಚನೆಯನ್ನು ಶಿಬಿರಾರ್ಥಿಯಿಂದಲೇ ಮಾಡಿಸಿದ್ದರು. ಅರ್ಥಗಾರಿಕೆ ಮತ್ತು ಪುರಾಣ ಜ್ಞಾನವನ್ನು ಉಪನ್ಯಾಸಕ ರಾಧಾಕೃಷ್ಣ ಕಲ್ಚಾರ್ ವಿವರಿಸಿ, ಅರ್ಥಗಾರಿಕೆ ಮೂಡುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಿ. ಕಲಾವಿದ ರಾಮ ಜೋಯಿಸ್ ಬೆಳ್ಳಾರೆ ಸಾಥಿ. ಮನೋವಿಶ್ಲೇಷಕರಾದ ಗಂಗಾಧರ ಬೆಳ್ಳಾರೆ ನಿರ್ವಹಣೆ. ಬಯಲಾಟ ಅಕಾಡೆಮಿಯ ಸದಸ್ಯ ಡಾ.ಸುಂದರ ಕೇನಾಜೆಯವರ 'ಯಕ್ಷಗಾನ-ಸಾಮಾಜಿಕ ಪ್ರೇರಣೆ' ವಿಚಾರಗಳು ಶಿಬಿರಾರ್ಥಿಗಳಲ್ಲಿ ಕುತೂಹಲ ಮೂಡಿದುದಕ್ಕೆ ಅವರಿಂದ ಬಂದ ಹಲವು ಪ್ರಶ್ನೆಗಳೇ ಸಾಕ್ಷಿ.

ಅಪರಾಹ್ನದ ಅವಧಿಯಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷ ನಡೆಗಳ ಶಿಕ್ಷಣ. ನಡೆದ ಥಿಯರಿ ಸೆಶನ್ಗಳಲ್ಲೂ ಕರ್ಗಲ್ಲು ಅವರ ಭಾಗಿ. ಹುಬ್ಬುಗಳು ಹೇಗಿರಬೇಕು, ವೇಷಗಳಿಗೆ ಕಣ್ಣು ಬರೆಯುವ ಕ್ರಮ, ಮುದ್ರೆಗಳ ವೈವಿಧ್ಯ, ತಿಲಕಗಳ ರೀತಿ, ಯಾವ್ಯಾವ ಪಾತ್ರಗಳು ಯಾವ್ಯಾವ ತಿಲಕವನ್ನು ಧರಿಸಬೇಕು.. ಮುಂತಾದ ಸೂಕ್ಷ್ಮ ವಿಚಾರಗಳನ್ನು ರೇಖಾಚಿತ್ರ ಸಹಿತ ವಿವರಣೆ.

ಶಿಬಿರದ ಕಲಿಕೆ ಮಕ್ಕಳಲ್ಲಿ ಹೆಚ್ಚು ಪರಿಣಾಮ ಬೀರಿದೆ. 'ಯಕ್ಷಗಾನದ ಬೇರೆ ಬೇರೆ ಪಾತ್ರಗಳ ಉಡುಗೆ ತೊಡುಗೆಗಳು ಹೇಗಿರುತ್ತವೆ ಎಂದು ತಿಳಿಯಿತು. ಅದರಲ್ಲೂ ವಾನರ ಪಾತ್ರಗಳ ಮುಖವರ್ಣಿಕೆ, ಉಡುಗೆಗಳು ಮನದಲ್ಲಿ ಅಚ್ಚೊತ್ತಿವೆ' ಎಂದು ಶ್ವೇತಾ ಜೆ. ಹೇಳಿದರೆ; ನಿಶ್ಮಿತಾಳ ಅನುಭವವೇ ಬೇರೆ - 'ಮೊದಲು ನನಗೆ ಯಕ್ಷಗಾನದಲ್ಲಿ ಆಸಕ್ತಿ ಇರಲಿಲ್ಲ. ಇಲ್ಲಿನ ಮಾಹಿತಿಯಿಂದ ಒಲವು ಮೂಡಿದೆ'.

ಶಿಬಿರದಲ್ಲಿ ಯಕ್ಷಗಾನದ ಪರಿಚಯವಿದ್ದ ಒಂದಷ್ಟು ಮಂದಿ ವಿದ್ಯಾರ್ಥಿಗಳಿದ್ದರು. ಅವರಲ್ಲಿ ಕೆಲವರು ಪಾತ್ರಗಳನ್ನೂ ನಿರ್ವಹಿಸಿದ್ದರು. ಯಕ್ಷಗಾನವೇ ಗೊತ್ತಿಲ್ಲದ ಮಂದಿಯೂ ಇದ್ದರು. 'ಶಿಬಿರದಿಂದ ಯಕ್ಷಗಾನದ ಕುರಿತು ವಿಚಾರಗಳು ತಿಳಿಯಿತು. ಕಲಾವಿದೆಯಾಗಬೇಕೆನ್ನುವ ತುಡಿತ ಮೂಡಿಸಿದೆ' ಎನ್ನುತ್ತಾಳೆ ಪವಿತ್ರಾ ಜೆ.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬಳೆ ಸುಂದರ ರಾಯರು ಸಮಾರೋಪದಂದು ಪೂರ್ತಿಯಾಗಿ ಶಿಬಿರದಲ್ಲಿ ಭಾಗವಹಿಸಿ ಅನುಭವ ಹಂಚಿಕೊಂಡರು. 'ಯಕ್ಷಗಾನ ಯಾವಾಗ ಆರಂಭವಾಯಿತು?' 'ಯಕ್ಷಗಾನವನ್ನು ಯಾರು ಶುರು ಮಾಡಿದರು?' 'ಒಂದು ಯಕ್ಷಗಾನ ನೋಡಿದರೆ ಹಲವು ರಂಗಪೂಜೆ ಯಾಕೆ ನೋಡಬೇಕು?'.. ಮುಂತಾದ ಫಕ್ಕನೆ ಉತ್ತರಿಸಲಾಗದ ಪ್ರಶ್ನೆಗಳಿಗೆ ನವಿರಾದ ಉತ್ತರವನ್ನು ಕುಂಬಳೆಯವರು ನೀಡಿದರು.

'ಒಂದು ವಾರ ಯಕ್ಷ ಶಿಕ್ಷಣದೊಂದಿಗೆ ಯೋಗಾಸನ, ಯೋಗಗಳನ್ನು ಕೂಡಾ ಮಕ್ಕಳಿಗೆ ತರಬೇತಿ ನೀಡಿದ್ದೇವೆ. ಯಕ್ಷಶಿಕ್ಷಣ ಎನ್ನುವ ಶಿಬಿರ ಒಂದು ಕಲ್ಪನೆ. ಯಕ್ಷಗಾನಕ್ಕೆ ಶೈಕ್ಷಣಿಕ ಸ್ಪರ್ಶ ನೀಡುವ ಪ್ರಯತ್ನ. ಇನ್ನಷ್ಟು ಬೆಳೆಸಲು ಅವಕಾಶವಿದೆ' ಎನ್ನುತ್ತಾರೆ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ.

'ಯಕ್ಷಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಎಲ್ಲರೂ ಕಲಾವಿದರಾಗಲು ಆಸಾಧ್ಯ. ಆದರೆ ಒಳಿತು. ಕೊನೇಪಕ್ಷ ಯಕ್ಷಗಾನದ ಸಹೃದಯೀ ಪ್ರೇಕ್ಷಕರಾದರೂ ಆದಾರಲ್ಲ.' ಎಂದರು ಕರ್ಗಲ್ಲು. ಸಮಾರೋಪದಲ್ಲಿ ಹಿರಿಯ ವಿದ್ವಾಂಸ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿಯವರು 'ಯಕ್ಷಗಾನದ ಕಲಿಕೆ ಎನ್ನುವುದು ಸಮಗ್ರ ಕಲಿಕೆಗೆ ಪೂರಕವಾಗಬೇಕು. ಶಿಕ್ಷಣದ ವಿಸ್ತರಣೆಯಾಗುವಾಗ ಅದರ ಸ್ವರೂಪ ಬದಲಾಗುವುದು ಸಹಜ. ಅನಿವಾರ್ಯ ಕೂಡಾ. ಈ ನಿಟ್ಟಿನಲ್ಲಿ ಯಕ್ಷಶಿಕ್ಷಣದ ಯೋಜನೆ, ಯೋಚನೆ ಶ್ಲಾಘ್ಯ' ಎಂದರು.

ಯಕ್ಷ ಶಿಕ್ಷಣದಂತಹ ಶಿಬಿರಗಳು ಶಾಲಾ ಮಟ್ಟದಲ್ಲಿ ನಡೆಯಬೇಕು. ಹದಿನೈದು ದಿವಸಕ್ಕೆ ಒಮ್ಮೆಯಾದರೂ ಯಕ್ಷಗಾನದ ಕುರಿತು ಒಂದು ಅವಧಿ ಪಾಠವನ್ನು ರೂಪಿಸಬೇಕಾಗಿದೆ. ಇದರಿಂದಾಗಿ ಕೂಟಾಟಗಳ ಹೊರತಾಗಿ ಒಂದಷ್ಟು ಯಕ್ಷಗಾನೀಯ ವಿಚಾರಗಳ ಕುರಿತು ಮಾಹಿತಿ ಹರಿದಂತಾಗುತ್ತದೆ. ಇಲ್ಲದಿದ್ದರೆ ಯಕ್ಷಗಾನವೆಂದರೆ 'ವೇಷ ಮಾಡುವುದು, ಅರ್ಥ ಹೇಳುವುದು' ಇಷ್ಟಕ್ಕೇ ಮೈಂಡ್ ಸೆಟ್ ಆಗುತ್ತದೆ. ಅದರ ಸುತ್ತಲೇ ಸುತ್ತುತ್ತಿರುತ್ತದೆ.

ಡಾ.ಕೋಳ್ಯೂರು ರಾಮಚಂದ್ರ ರಾಯರು ಕಾರ್ಯಾಗಾರವನ್ನು ಉದ್ಘಾಟಿಸುತ್ತಾ, 'ಮುಂದಿನ ದಿನಗಳಲ್ಲಿ ಯಕ್ಷಗಾನದ ಪ್ರೇಕ್ಷಕರಿಗೂ ಕೂಡ ಕಾರ್ಯಾಗಾರ ಬೇಕಾಗಬಹುದು' ಎಂದಿರುವುದು ವರ್ತಮಾನ ಮತ್ತು ಭವಿಷ್ಯದ ಕರೆಗಂಟೆ.