Saturday, July 20, 2013

ಉಪನಯನದ ಬೌದ್ಧಿಕ ಉಪಾಯನ


            ದೇವರ ನಾಡಿನ ಊರಲ್ಲಿ ಮಾಹಿತಿಯೊಂದರ ಬೆನ್ನೇರಿದ್ದೆ. ಹಿರಿಯರನ್ನು ಮಾತನಾಡಿಸುತ್ತಿದ್ದೆ. ತಿಂಗಳಲ್ಲಿ ಇಪ್ಪತ್ತು ದಿವಸ ಒಂದಲ್ಲ ಒಂದು ಮನೆಯಲ್ಲಿ ತಾಳಮದ್ದಳೆಗಳು ಆಗುತ್ತಿದ್ದುವು, ಬಹುತೇಕರು ಕಾಲ ಶತಮಾನದ ಹಿಂದಿನ ದವಸಗಳನ್ನು ನೆನಪು ಮಾಡಿಕೊಳ್ಳುತ್ತಾ, 'ಈಗ ತಾಳಮದ್ದಳೆಗಳು ಅಪರೂಪ. ಸಿಡಿಯಲ್ಲೋ, ಕ್ಯಾಸೆಟ್ಟಿನಲ್ಲೋ ಇದೆಯಷ್ಟೇ,' ಎಂಬ ವಿಷಾದ.

             ಆಗ ಗ್ರಹಿಸಿದಾಗ ಎಟಕುವ ಸಾಂಸ್ಕೃತಿಕ ಆಯ್ಕೆಗಳಿರಲಿಲ್ಲ ಎಂಬುದು ನಿಜ. ಆದರೆ ತಾಳಮದ್ದಳೆಗಳು ಹಳ್ಳಿಯಲ್ಲಿ, ಕುಟುಂಬದಲ್ಲಿ ಪೌರಾಣಿಕವಾದ ಗುಂಗನ್ನು ಉಂಟುಮಾಡುತ್ತಿತ್ತು. ಜ್ಞಾನ ಪ್ರಸಾರವೂ ಉಂಟಾಗುತ್ತಿತ್ತು. ಪುರಾಣ ಪುಸ್ತಕಗಳನ್ನು ಓದದೆ ಪೌರಾಣಿಕ ವಿಚಾರಗಳನ್ನು ಗ್ರಹಿಸಬಲ್ಲರು, ಮಾತನಾಡಬಲ್ಲರು, ಚರ್ಚೆ ಮಾಡಬಲ್ಲರು. ಅದು ಯಕ್ಷಗಾನದ ಗಟ್ಟಿತನ.

             ಈಚೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 'ನಟರಾಜ ವೇದಿಕೆ'ಯಲ್ಲಿ ಜರುಗಿದ ತಾಳಮದ್ದಳೆಯನ್ನು ಆಲಿಸುತ್ತಿದ್ದಾಗ ಹಿರಿಯರ ಮೇಲಿನ ಮಾತುಗಳು ನೆನಪಾದುವು. ಈಗಲೂ ಅಲ್ಲೋ ಇಲ್ಲೋ ನಡೆವ ಮನೆ ತಾಳಮದ್ದಳೆಗಳ ನೆನಪು ಕಾಡುತ್ತದೆ. ಸಮಾರಂಭಗಳಲ್ಲಿ ತಾಳಮದ್ದಳೆಗಳನ್ನು ಹಮ್ಮಿಕೊಳ್ಳುವ ಮನಸ್ಸು ಈಗೀಗ ರೂಪುಗೊಳ್ಳುತ್ತಿರುವುದು ಶ್ಲಾಘನೀಯ. 

           ಪುತ್ತೂರಿನ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ (ಜಗ್ಗಣ್ಣ) ಮತ್ತು ಶ್ರೀವಿದ್ಯಾ ದಂಪತಿಗಳ ಪುತ್ರ ಶ್ರೀಕೃಷ್ಣನ ಉಪನಯನ. (3-6-2013) ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಸಾನ್ನಿಧ್ಯ. ನಟರಾಜ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾಪ. ಜಗನ್ನಿವಾಸರ ಸ್ನೇಹಿತರ, ಆಪ್ತರ ಹೆಗಲೆಣೆ. ಉಪನಯನದ ಮುನ್ನಾದಿನ ಬೆಂಗಳೂರಿನ ಸುಪ್ರಿತಾ ರಾವ್ ಅವರಿಂದ ಹಾಡುಗಾರಿಕೆ. ಬಳಿಕ ಪುತ್ತೂರಿನ ಪಶುಪತಿ ಶರ್ಮ ಮತ್ತು ಕೃಷ್ಣಮೋಹನ್ ಇವರಿಂದ ಮೆದುಳಿಗೆ ಮೇವನ್ನು ನೀಡುವ ಹಲವು ಸಂಗತಿಗಳ ಪ್ರಸ್ತುತಿ.

           ಮರುದಿವಸ ಪೂರ್ವಾಹ್ನ ಯಕ್ಷಕೂಟ ಪುತ್ತೂರು ಇವರ ಸಾರಥ್ಯದಲ್ಲಿ 'ಜಾಂಬವತಿ ಕಲ್ಯಾಣ', ಅಪರಾಹ್ನ 'ಸುಧನ್ವ ಮೋಕ್ಷ' ತಾಳಮದ್ದಳೆ. ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಮತ್ತು ರಮೇಶ ಭಟ್ ಪುತ್ತೂರು ಇವರ ಭಾಗವತಿಕೆ. ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣಪ್ರಕಾಶ್ ಉಳಿತ್ತಾಯ, ವದ್ವ ರಾಮ್ಪ್ರಸಾದ್, ರಮೇಶ್ ಕಜೆ.. ಹಿಮ್ಮೇಳ ಸಾಥಿ. ಡಾ.ಎಂ. ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಾಭಟ್ಟ, ಕಾರನ್ತ, ರಮಾನಂದ ನೆಲ್ಲಿತ್ತಾಯ, ರಾಮ ಜೋಯಿಸ್ ಬೆಳ್ಳಾರೆ, ಹರೀಶ ಬೊಳಂತಿಮೊಗರು.. ಅರ್ಥಧಾರಿಗಳು.

              'ಸಮಾರಂಭಗಳಲ್ಲಿ ತಾಳಮದ್ದಳೆ, ಆಟಗಳನ್ನು ಆಯೋಜಿಸಿದ್ದರೆ ಜನ ನಿಲ್ಲುವುದಿಲ್ಲ ಮಾರಾಯ್ರೆ,' ಬಹುತೇಕ ಯಕ್ಷಪ್ರಿಯ ಸಂಘಟಕರ ಪೂರ್ವನಿರ್ಧಾರ! ಆದರೆ ಕಾರ್ಯಕ್ರಮ ಏರ್ಪಡಿಸಿದರೆ ಬದುಕಿನ ತೀವ್ರ ಒತ್ತಡದ ಮಧ್ಯೆಯೂ ತಾಸುಗಟ್ಟಲೆ ಕುಳಿತು ಕೇಳುವವರಿದ್ದಾರೆ ಎನ್ನುವುದಕ್ಕೆ ಶ್ರೀಕೃಷ್ಣನ ಉಪನಯನ ಸಾಕ್ಷಿ.

             ತಾಳಮದ್ದಳೆ ಬಿಸಿಯೇರುವುದಿಲ್ಲ, ಪ್ರದರ್ಶನ ಕುಲಗೆಟ್ಟಿತು.. ಎಂದು ನಾಲ್ಕು ಮಂದಿ ಸೇರುವಲ್ಲಿ ಸಂಭಾಷಣೆಗಳು ಆರಂಭವಾಗುತ್ತವೆ. ಕಾರ್ಯಕ್ರಮದಲ್ಲಿ ಭಾಗವಹಿಸದೆ ಗಂಭೀರ ಸಂಭಾಷಣೆ ಯಾ ಆರೋಪಗಳು ನಿತ್ಯ ನಡೆಯುತ್ತಲೇ ಇರುತ್ತದೆ! ಇವೆಲ್ಲಾ ಸಮಯ ಕೊಲ್ಲುವ ಮಾತುಕತೆಗಳಷ್ಟೇ.

             ಮದುವೆ, ಉಪನಯನದಂತಹ ಶುಭ ದಿವಸದಂದು ಧಾರ್ಮಿಕ ಪ್ರಕ್ರಿಯೆಯೊಂದಿಗೆ ಕಲಾರಾಧನೆಯೂ ಮಿಳಿತಗೊಳ್ಳಬೇಕು. ಸಾಂಸ್ಕೃತಿಕ ಆಯ್ಕೆಗಳು ಕೈಬೆರಳಿನಲ್ಲಿ ಕುಣಿಯುತ್ತಿರುವ ಕಾಲಘಟ್ಟದಲ್ಲಿ ಬೌದ್ಧಿಕ ಗಟ್ಟಿತನಕ್ಕೆ ಸಹಾಯವಾಗುವ ಯಕ್ಷಗಾನ ಮಾಧ್ಯಮವನ್ನು ಸಾಮಾಜಿಕವಾಗಿ ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರಲ್ಲಿ ಇಲ್ವಾ. ಈ ಹಿನ್ನೆಲೆಯಲ್ಲಿ ಪಿ.ಜಿ. ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ರಾವ್ ಕುಟುಂಬ ಅಭಿನಂದನಾರ್ಹರು. ಇಂತಹ ಸಾಂಸ್ಕೃತಿಕ ಮನಸ್ಸುಗಳು ರೂಪುಗೊಳ್ಳಬೇಕಾದುದು ಕಾಲದ ಅನಿವಾರ್ಯ.

No comments:

Post a Comment