Friday, July 26, 2013

ಶೀನಪ್ಪ ಭಂಡಾರಿಗಳ ಮೇಳ - ಹಳ್ಳಿಗಳ ಸಾಂಸ್ಕೃತಿಕ ಉಸಿರು


                 ಕೃಷ್ಣ ವರ್ಣದ ಕಲಾವಿದರೊಬ್ಬರು ಕಂಕುಳಲ್ಲಿ ಆಟದ ವಾಲ್ಪೋಸ್ಟ್ ಇಟ್ಟುಕೊಂಡು ಬಸ್ಸಿಳಿದರೆ ಸುತ್ತುಮುತ್ತ ಶ್ರೀ ಸುಬ್ರಹ್ಮಣ್ಯ ಮೇಳದ ಆಟವಿದೆ ಎಂದರ್ಥ. ಚಹದಂಗಡಿ, ಸೆಲೂನ್, ಸ್ಫೂರ್ತಿ ರಸಾಯನ ಸೇವಿಸುವ ಅಂಗಡಿಗಳ ಗೋಡೆಗಳಲ್ಲಿ ವಾಲ್ಪೋಸ್ಟ್ ಅಂಟಿಸಿ, ಕರಪತ್ರಗಳನ್ನಿಟ್ಟು ಮುಂದಿನ ಬಸ್ಸಲ್ಲಿ ತೆರಳುತ್ತಾರೆ. ಈ ಮೂರು ಸ್ಥಳಗಳಲ್ಲಿ ಒಂದಕ್ಕಾದರೂ ಜನ ಬಾರದಿರರು ಎಂಬ ನಂಬುಗೆ ಕಲಾವಿದ ಅಂಬು ಶೆಟ್ಟರದು. ಅಂಟಿಸಿದ ಬ್ಯಾನರ್ ಪ್ರದರ್ಶನ ಮುಗಿಯುವಲ್ಲಿಯ ತನಕ ಸಾಂಸ್ಕೃತಿಕ ಗುಂಗನ್ನು ಜೀವಂತ ಹಿಡಿದಿಡುತ್ತಿತ್ತು.

             ಪುತ್ತೂರು ಶೀನಪ್ಪ ಭಂಡಾರಿ (ಶೀನಪ್ಪಣ್ಣ, ಶೀನಣ್ಣ) ಇನ್ನಿಲ್ಲ. ಜೂನ್ 24ರಂದು ವಿಧಿವಶ. ಅರ್ಧ ಶತಮಾನಕ್ಕೂ ಮಿಕ್ಕಿ ಸದ್ದಿಲ್ಲದೆ ಕರಾವಳಿಯುದ್ದಕ್ಕೂ ಯಕ್ಷಗಾನ ಮೇಳವನ್ನು ಒಯ್ದಿದ್ದಾರೆ. ಸಾರಿಗೆಯ ತೊಂದರೆಯಿಂದಾಗಿ ದೊಡ್ಡ ಮೇಳಗಳು ಹೋಗಲಾಗದ ಸ್ಥಳಗಳಲ್ಲಿ ಟೆಂಟ್ ಊರಿದ್ದಾರೆ. ಇವರ ಮೇಳದ ಸರಕು ಸಾಗಾಟಕ್ಕೆ ಎತ್ತಿನ ಗಾಡಿ ಹೋಗುವಷ್ಟು ದಾರಿ ಸಾಕು. ಹೀಗಾಗಿ ನಗರಕ್ಕಿಂತಲೂ ಹಳ್ಳಿಯ ಜನ ಸುಬ್ರಹ್ಮಣ್ಯ ಮೇಳವನ್ನು ಒಪ್ಪಿಕೊಂಡಿದ್ದರು, ಅಪ್ಪಿಕೊಂಡಿದ್ದರು. ಇದು ಒಂದು ಕಾಲಘಟ್ಟದ ಚಿತ್ರಣ.

             ಸಾರಿಗೆ ಬಂತು. ವ್ಯವಸ್ಥೆಗಳು ದಾಂಗುಡಿಯಿಟ್ಟವು. ಮೇಳಗಳ ಸಂಖ್ಯೆ ಬೆಳೆದುವು. ವೈವಿಧ್ಯ ಪ್ರಸಂಗಗಳು ಪ್ರದರ್ಶಿತಗೊಂಡುವು. ರಂಗುರಂಗಿನ ವೇಷಭೂಷಣಗಳು, ರಂಗವೇದಿಕೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುವು. ಇವುಗಳ ಮಧ್ಯೆ ಭಂಡಾರಿಗಳ ಮೇಳ ಯಾವ ಪ್ರಚಾರ ರಂಪಾಟಕ್ಕೂ ಸಿಕ್ಕದೆ ಹಳ್ಳಿಯ ಪ್ರೇಕ್ಷಕರನ್ನು ನಂಬಿತು. ಕಿಸೆ ತುಂಬಿ ತುಳುಕದಿದ್ದರೂ, ಎಂದೂ ಖಾಲಿಯಾದುದಿಲ್ಲ; ಅರೆಹೊಟ್ಟೆಯಲ್ಲಿ ನಿದ್ರಿಸಲಿಲ್ಲ, ಮನೆಮಂದಿ ಉಪವಾಸ ಕೂರಲಿಲ್ಲ ಎನ್ನುವುದು ಗಮನಾರ್ಹ.

              ಶೀನಣ್ಣ ತುಳು ಪ್ರಸಂಗಗಳ ಮೂಲಕ ಹಳ್ಳಿಯ ಮನಸ್ಸು ಗೆದ್ದಿದ್ದರು. ಒಂದು ಪ್ರಸಂಗದ ಪ್ರದರ್ಶನದಲ್ಲಂತೂ ರಾತ್ರಿ ಪ್ರೇಕ್ಷಕರಿಗೆ ಚಹ ವಿತರಿಸಿ ಟೆಂಟ್ ಫುಲ್ ಮಾಡಿದುದು ಇತಿಹಾಸಕ್ಕೆ ಸೇರಿದ ಸಂಗತಿ. ಹಿತಮಿತವಾದ ವೇಷಭೂಷಣವಿದ್ದರೂ ಪ್ರೇಕ್ಷಕರಿಗೆ ಗೊಂದಲವಾಗದಂತೆ ಸರಿದೂಗಿಸುವ ಜಾಣ್ಮೆ ಮೇಳ ಕಲಿಸಿದ ಅನುಭವ. ಪ್ರದರ್ಶನದ ಮಧ್ಯೆ ಜನರೇಟರಿನಲ್ಲಿ ಡೀಸಿಲ್ ಕೈಕೊಟ್ಟಾಗ, ವಿದ್ಯುತ್ ಕಣ್ಣುಮುಚ್ಚಾಲೆಯಾಡಿದಾಗ ಭಂಡಾರಿಗಳು ಅಧೀರರಾದುದಿಲ್ಲ. ಪ್ರೇಕ್ಷಕರಿಗೆ ನಿರಾಶೆ ಮಾಡದೆ ಬೆಳಗ್ಗಿನವರೆಗೆ ಆಟ ರೈಸುವಂತೆ ಮಾಡುವಲ್ಲಿ ಪರಿಣತ!

               ಆಟಕ್ಕೆ ಜನ ಕಡಿಮೆಯಾಗಿ ವೆಚ್ಚಕ್ಕೆ ಹಣ ಸಾಕಾಗದ ಸಂದರ್ಭಗಳಲ್ಲಿ ಹಳ್ಳಿಯ ಅಭಿಮಾನಿಗಳು ಆಧರಿಸಿ, ಹಣ ಸಂಗ್ರಹಿಸಿ ಕೈಗಿತ್ತುದನ್ನು ನೆನಪಿಸಿಕೊಳ್ಳುತ್ತಿದ್ದರು. ಚೌಕಿಯೊಳಗೆ ಇಣುಕಿದರೆ ಐದೋ ಹತ್ತೋ ಮಂದಿ ಕಲಾವಿದರು. ಬೆಳಗ್ಗಿನವರೆಗೆ ದೇವಿ ಮಹಾತ್ಮೆ ಪ್ರಸಂಗವನ್ನು ನಿರ್ವಹಿಸುವಷ್ಟು ಅನುಭವಿಗಳು. ಶೀನಪ್ಪಣ್ಣನ ಗರಡಿಯಲ್ಲಿ ಪಳಗಿದ ಚಾಣಾಕ್ಷರಿವರು. ಒಂದು ರಾತ್ರಿ ಮೂರೋ ನಾಲ್ಕೋ ವೇಷವನ್ನು ನಿರ್ವಹಿಸುವಷ್ಟು ಗಟ್ಟಿಗರು.

                ಶ್ರೀ ಸುಬ್ರಹ್ಮಣ್ಯ ಮೇಳವು ಕಲಾವಿದರನ್ನು ಸೃಷ್ಟಿಸುವ ಒಂದು ಕಾರ್ಖಾನೆ. ಇಲ್ಲಿ ಗೆಜ್ಜೆ ಕಟ್ಟಿ ಕುಣಿಯದ ಕಲಾವಿದರು ವಿರಳ. ಒಂದೆರಡು ವರುಷ ವ್ಯವಸಾಯ ಮಾಡಿದರೆ ಸಾಕು, ಕಷ್ಟ-ಸುಖಗಳ ಆರ್ಜನೆಯಾಗುತ್ತಿತ್ತು. ರಂಗಮಾಹಿತಿಗಳು ಕರಗತವಾಗುತ್ತಿತ್ತು. ತೆಂಕಿನ ಬಹುತೇಕ ಮೇಳಗಳಲ್ಲಿ ಭಂಡಾರಿಗಳ ಗರಡಿಯಲ್ಲಿ ಪಳಗಿದ ಕಲಾವಿದರು ಒಬ್ಬಿಬ್ಬರಾದರೂ ಮಾತಿಗೆ ಸಿಗುತ್ತಾರೆ.

              ಮೇಳದ ಬದುಕು ಹೂವಿನ ಹಾಸಿಗೆ ಕೊಟ್ಟಿಲ್ಲ, ಆದರೆ ಮುಳ್ಳಿನಲ್ಲಿ ನಡೆದಿಲ್ಲ. ಕಾಂಚಾಣ ಸದ್ದುಮಾಡಿಲ್ಲ, ಆದರೆ ಬದುಕು ನಲುಗಲಿಲ್ಲ. ಕೊನೆಯವರೆಗೂ ಯಕ್ಷಗಾನದ್ದೇ ಮಂತ್ರ. ರಂಗದಲ್ಲಿ ಕೌರವನಾಗಿ, ಹಿರಣ್ಯಾಕ್ಷನಾಗಿ ಮೆರೆದ ಭಂಡಾರಿಗಳಿಗೆ ಪುರಾಣ ಪಾತ್ರಗಳ ಸೂಕ್ಷ್ಮಾತಿಸೂಕ್ಷ್ಮಗಳ ಅರಿವಿತ್ತು. ಮೇಳ ಮುನ್ನಡೆಸುವ, ಕಲಾವಿದರನ್ನು ಪೋಶಿಸುವ ದೃಷ್ಟಿಯಿಂದ ತುಳು ಪ್ರಸಂಗಗಳನ್ನು ನೆಚ್ಚಿಕೊಳ್ಳಬೇಕಾಯಿತು.

              ಶೀನಪ್ಪಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತರು. ಸರಕಾರಿ ವಲಯದಲ್ಲಿ ಯಕ್ಷಗಾನದ ಹೆಸರು ಬಂದಾಗಲೆಲ್ಲಾ ವರಿಷ್ಠರಿಗೆ ಭಂಡಾರಿಗಳು ಪರಿಚಿತ. ಬಹಳ ಆಪ್ತ ಸಂಬಂಧವಿತ್ತು. ಅಷ್ಟೇ ಅಂತರವನ್ನು ಕಾಪಾಡಿಕೊಂಡಿದ್ದರು. ಸರಕಾರಿ ಆಯೋಜಿತ ಯಕ್ಷಗಾನ ಪ್ರದರ್ಶನಗಳನ್ನು ನಿರುಮ್ಮಳವಾಗಿ ನಡೆಸಿಕೊಡುತ್ತಿದ್ದರು. ಕಚೇರಿಗಳ ಕೆಂಪುಪಟ್ಟಿ ವ್ಯವಸ್ಥೆಯ ಹತ್ತಿರದ ಪರಿಚಯವಿತ್ತು.

              ನಯ ವಿನಯ ಮಾತುಗಳು ಜನ್ಮದತ್ತ. ವ್ಯವಹಾರ ಕುಶಲಿ. ಅರ್ಧ ಶತಮಾನಕ್ಕೂ ಮಿಕ್ಕಿದ ಯಕ್ಷಬದುಕಿನ ಯಶದ ಕಾರಣವಿದು. ಮೇಳದ ಪ್ರದರ್ಶನಗಳಲ್ಲಿ, ವ್ಯವಸ್ಥೆಗಳಲ್ಲಿ ವ್ಯತ್ಯಾಸ ಬಂದಾಗ ಪ್ರೇಕ್ಷಕರು ಶೀನಪ್ಪಣ್ಣನ ಬೆನ್ನ ಹಿಂದೆ ಇರುತ್ತಿದ್ದರು. ಆಕ್ಷೇಪಿಸುತ್ತಿರಲಿಲ್ಲ. ಒಮ್ಮೆ ಅವರ ಸ್ನೇಹ ತೆಕ್ಕೆಗೆ ಸಿಕ್ಕರೆ ಸಾಕು, ಮತ್ತೆಂದು ಬಿಡದಷ್ಟು ಆಪ್ತತೆ.

               ಆಜಾನುಬಾಹು ದೇಹ, ಧರಿಸಿದ ಶುಚಿ ಉಡುಪು, ಹಣೆಯ ತಿಲಕ, ಹೊಳಪು ಕಂಗಳುಗಳಿಗೆ ಸೆಳೆಮಿಂಚಿನ ತಾಕತ್ತು. ಕಲಾವಿದರ ವರ್ತನೆ, ಅಭಿವ್ಯಕ್ತಿಗಳು ದಾರಿತಪ್ಪಿದಾಗ ತಿಳಿಹೇಳುವ ಹಿರಿಯಜ್ಜ. ಮಾತು ಕೇಳದಿದ್ದರೆ ಮನಸ್ಸಿನಲ್ಲಿ ಕೊರೆಯುವ ತಾತ. ಮಾತಿಗೆ ತೊಡಗಿದರೆ ಮನದ ಮೌನ ಮಾತಾಗುತ್ತಿತ್ತು. ಅಲ್ಲಿ ಅಸಹಾಯಕತೆ, ಚಡಪಡಿಕೆಗಳಿರುತ್ತಿತ್ತು. ವಿಷಾದವಿರುತ್ತಿರಲಿಲ್ಲ.

               ತಮ್ಮ ಮಕ್ಕಳಿಗೆಲ್ಲಾ ಯಕ್ಷಗಾನವನ್ನು ಬಾಲ್ಯದಲ್ಲೇ ಅಂಟಿಸಿದ್ದರು. ಅವರಲ್ಲೊಬ್ಬರಾದ ಪುತ್ತೂರು ಶ್ರೀಧರ ಭಂಡಾರಿಯವರು ತೆಂಕುತಿಟ್ಟು ರಂಗದ ಸಿಡಿಲಮರಿ! ಮೇಳದ ತಿರುಗಾಟ ನಿರ್ವಹಣೆಗಿಂತಲೂ ಮಗ ಶ್ರೀಧರರನ್ನು ಯಕ್ಷಗಾನನಲ್ಲಿ ಬೆಳೆಸಿರುವುದು ಶೀನಣ್ಣದ ಯಕ್ಷಗಾನದ ದೊಡ್ಡ ಕೊಡುಗೆ. 'ದೊಡ್ಡ ಮೇಳದ ಕಲಾವಿದ' ಎಂದು ಮಗನನ್ನು, 'ಯಜಮಾನ್ರ (ತಂದೆಯ) ಮೇಳ' ಎಂಬ ಭಾವಸಂಚಾರಗಳು ಅವರಿಬ್ಬರ ಸಂಭಾಷಣೆಯಲ್ಲಿ ನೋಡಿದ್ದೇನೆ.

               ಶೀನಪ್ಪಣ್ಣ ಈಗಿಲ್ಲ. ಪ್ರಚಾರ ಜವಾಬ್ದಾರಿ ಹೊತ್ತ ಅಂಬು ಶೆಟ್ರೂ ಇಲ್ಲ. ಅಂದು ವಾಲ್ಪೋಸ್ಟ್ ಅಂಟಿಸುತ್ತಿದ್ದ ಗೋಡೆಗಳೆಲ್ಲಾ ನುಣುಪಾಗಿ ಮಿರಿಮಿರಿಯಾಗಿವೆ. ಅಲ್ಲಿ ಮೊಬೈಲ್ ಕಂಪೆನಿಗಳ ವಾಲ್ಪೋಸ್ಟ್ ರಾರಾಜಿಸುತ್ತಿವೆ. ಒಂದೆಡೆ ಕಾಲದ ಓಟದ ಅನುಭವ. ಮತ್ತೊಂದೆಡೆ ಕಳೆದು ಹೋದ ಸಾಂಸ್ಕೃತಿಕ ದಿನಗಳು. ಬದುಕಿನ ದ್ವಂದ್ವಗಳಿವು.

              ಇವರ ಯಕ್ಷ ಬದುಕಿನ ಅನುಭವವನ್ನು 'ಯಕ್ಷ ಭಂಡಾರಿ' ಕೃತಿಯಲ್ಲಿ ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಪೋಣಿಸಿದ್ದಾರೆ. ಶೀನಪ್ಪಣ್ಣನ ಕಲಾ ಸಾಕ್ಷಿಗೆ ಇದೊಂದೇ ದಾಖಲೆ ಈಗ ಉಳಿದಿರುವುದು. ಯಕ್ಷಗಾನವನ್ನು ಪ್ರೀತಿಸುವ ಎಲ್ಲರ ಮನದಲ್ಲೂ ಸಾಕ್ಷಿಯಾಗಿ ಶೀನಪ್ಪಣ್ಣ ಸ್ಥಾಯಿಯಾಗಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ಅಕ್ಷರ ನಮನ.

No comments:

Post a Comment