Wednesday, September 30, 2015

ಕಲಾವಿದ ಕುಟುಂಬದ ಕಾಣ್ಕೆ : ಪೂರ್ವರಂಗಕ್ಕೆ ಹೊಳಪು


            ಯಕ್ಷಗಾನದ ಪೂರ್ವರಂಗವು ಕಾಲಮಿತಿಯ ಜಂಝಾವಾತಕ್ಕೆ ತೂರಿಹೋಗುವ ಆಪಾಯಕ್ಕೆ ಸಾಕ್ಷಿಯಾಬೇಕಾದುದು ಕಾಲ ತಂದಿಟ್ಟ ಕಾಣ್ಕೆ!  'ಬೇಕೋ-ಬೇಡ್ವೋ' ನಿಲುವುಗಳು ಮಾತಿನಲ್ಲಿ ಹಾರಿಹೋಗುತ್ತಿವೆ. ಪೂರ್ವರಂಗವನ್ನು ಕುಣಿವ ಕಲಾವಿದರ ಅಭಾವವೂ ಇಲ್ಲದಿಲ್ಲ. ಕುಣಿಸುವ ಹಿಮ್ಮೇಳದ ಶಕ್ತತೆಯೂ ವಿರಳ. ಈ ತಲ್ಲಣಗಳ ಮಧ್ಯೆ ಕೆಲವು ಮೇಳಗಳಲ್ಲಿ ಪೂರ್ವರಂಗ ಜೀವಂತವಾಗಿರುವುದು ಸಮಾಧಾನ. ಈಚೆಗಂತೂ ಪೂರ್ವರಂಗವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಪ್ರದರ್ಶನಗಳು ನಡೆದಿರುವುದು ಉಳಿವಿನತ್ತ ಮಹತ್ತರ ಹೆಜ್ಜೆ.
            ಹಿರಿಯ ಕಲಾವಿದರ ಮಾತಿನ ಮಧ್ಯೆ ಪೂರ್ವರಂಗದ ವಿಚಾರಗಳು ಹಾದುಹೋಗುತ್ತವೆ. "ಡೌರು, ಬಾಲಗೋಪಾಲ, ನಿತ್ಯ ವೇಷ..ಗಳನ್ನು ಕುಣಿದು ಹದವಾದ ಬಳಿಕವೇ ಪ್ರಸಂಗಗಳಲ್ಲಿ ಪಾತ್ರ ಮಾಡಲು ಅರ್ಹತೆ ಬಂತು," ಯಕ್ಷಗುರು ದಿವಾಣ ಶಿವಶಂಕರ ಭಟ್ಟರ ಅನುಭವ ಪೂರ್ವರಂಗದ ಗಟ್ಟಿತನವನ್ನು ತೋರಿಸುತ್ತದೆ.  ಬಹುತೇಕ ಹಿರಿಯರು ಈ ಹಂತವನ್ನು ಯಶಸ್ವಿಯಾಗಿ ದಾಟಿ ಕಲಾವಿದರಾದವರೇ. ಹಿಮ್ಮೇಳದ ಎಲ್ಲಾ ಕಲಾವಿದರಿಗೂ ಪೂರ್ವರಂಗದ ಜ್ಞಾನವು ಮುಂದಿನ ಕಲಾ ಹೆಜ್ಜೆಗೆ ಸುಭಗತನ ತರುತ್ತದೆ.
            ನಾಟ್ಯದ ಹದಗಾರಿಕೆಗೆ, ಲಯದ ಅರಿವಿಗೆ, ಬಿಡ್ತಿಗೆ-ಮುಕ್ತಾಯದ ಜ್ಞಾನಕ್ಕೆ, ಪದ್ಯಗಳ ಭಾವಕ್ಕೆ ಅಭಿನಯ ಮಾಡಲು ಪೂರ್ವರಂಗ ಒಂದು ಕಲಿಕಾ ಶಾಲೆ. ಇದಕ್ಕೆ ನಿರ್ದಿಷ್ಟ ಪಠ್ಯಕ್ರಮಗಳಿವೆ. ರಾತ್ರಿ ಎಂಟು ಎಂಟೂವರೆ ಗಂಟೆಯಿಂದ ಹತ್ತೂವರೆ ತನಕ ಲಂಬಿಸುವ ಪೂರ್ವರಂಗದ ವೈವಿಧ್ಯಗಳ ಆವರಣದೊಳಗೆ ರೂಪುಗೊಂಡ ಕಲಾವಿದ ಎಂದೆಂದೂ ಪರಿಪಕ್ವ. ಪಾತ್ರಕ್ಕೆ ಬೇಕಾದ ಅರ್ಥಗಳನ್ನು ಬಳಿಕ ಹೊಸೆದುಕೊಂಡರಾಯಿತು.
            ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು (ಲೀಲಕ್ಕ) ಮತ್ತು ಹರಿನಾರಾಯಣ ಬೈಪಾಡಿತ್ತಾಯ   - ಯಕ್ಷಸಾಧಕರು. ಇವರಿಗೆ ಯಕ್ಷಗಾನವೇ ಉಸಿರು. ತಮ್ಮ ಸುದೀರ್ಘ ಅನುಭವಗಳಲ್ಲಿ ಪರಿಪಕ್ವಗೊಂಡ 'ಪೂರ್ವರಂಗ'ದ ಹಾಡುಗಳ ದಾಖಲಾತಿಯು (ಅಡಕ ತಟ್ಟೆ - ಸಿ.ಡಿ.) ಕಲಿಕಾ ಆಸಕ್ತರಿಗೆ ಕೈಪಿಡಿ. ಪಾರ್ತಿಸುಬ್ಬನ ಯಕ್ಷಗಾನದ ಪೂರ್ವರಂಗದ ಹಾಡುಗಳನ್ನು ಬಳಸಿಕೊಂಡಿದ್ದಾರೆ. ಸಿಡಿ ಜತೆಗೆ ಹಾಡುಗಳ ಲಿಖಿತ ಪುಸ್ತಿಕೆಯನ್ನೂ ಅಭ್ಯಾಸಿಗಳಿಗೆ ಅನುಕೂಲವಾಗಲೆಂದು ಮುದ್ರಿಸಿದ್ದಾರೆ.
           ಚೌಕಿ ಪೂಜೆಯಲ್ಲಿ ಹಾಡುವ 'ಗಜಮುಖದವಗೆ ಗಣಪಗೆ, ಮುದದಿಂದ ನಿನ್ನಾ', ರಂಗಸ್ಥಳದಲ್ಲಿ 'ಮುಖತೋ ಪೂರ್ಣಚಂದ್ರಸ್ಯ, ಸರ್ವೇಶಾಂ ಪರಿಪೂಜಿತಾಂ, ರಾಮಭದ್ರಾ ಗೋವಿಂದಾ, ಆದೌ ದೇವಕೀ ಗರ್ಭ ಜನನಂ, ವಿಘ್ನಧ್ವಾಂತ ನಿವಾರಣೈಕತರಣೀ; ಷಣ್ಮುಖ ಸುಬ್ರಾಯ ಕುಣಿತ, ಮುಖ್ಯ ಸ್ತ್ರೀವೇಷದ 'ಚಿಕ್ಕ ಪ್ರಾಯದ ಬಾಲೆ ಚದುರೆ, ಕಾಮಿನಿ ಕರೆದು ತಾರೆ..', ಪ್ರಸಂಗ ಪೀಠಿಕೆ, ಪೀಠಿಕಾ ಸ್ತ್ರೀವೇಷ, ಒಡ್ಡೋಲಗ, ತೆರೆಕುಣಿತ, ಸಭಾಕುಣಿತ... ಹೀಗೆ ಪೂರ್ವರಂಗದ ಬಹುತೇಕ ಎಲ್ಲಾ ಹಾಡುಗಳು. ಲೀಲಾವತಿ ಬೈಪಾಡಿತ್ತಾಯರ ಹಾಡುಗಾರಿಕೆ. ಕು.ಸ್ವಾತಿ ಬೈಪಾಡಿತ್ತಾಯರ ಸಾಥ್. ಮದ್ದಳೆ-ಚೆಂಡೆಯಲ್ಲಿ ಹರಿನಾರಾಯಣ ಬೈಪಾಡಿತ್ತಾಯ, ಅವಿನಾಶ್ ಬೈಪಾಡಿತ್ತಾಯ. ಸಂಯೋಜನೆ ಗುರುಪ್ರಸಾದ್ ಬೈಪಾಡಿತ್ತಾಯ. ಪೂರ್ವರಂಗದ ಈ ದಾಖಲಾತಿಯು ಇಡೀ ಕುಟುಂಬದ ಕೊಡುಗೆ.
           "ಕೀರ್ತಿಶೇಷರಾದ ಗುರಿಕಾರ್ ನೆಡ್ಲೆ ನರಸಿಂಹ ಭಟ್, ಕುದ್ರೆಕೂಡ್ಲು ರಾಮಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ದಿವಾಣ ಭೀಮ ಭಟ್ಟರ ಒಡನಾಟದ ಸಂದರ್ಭಗಳಲ್ಲಿ ಹಾಗೂ ಶ್ರೀ ಧರ್ಮಸ್ಥಳದ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ದಶಕಕ್ಕೂ ಹೆಚ್ಚು ಕಾಲ ಗುರುಗಳಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ಈ ದಾಖಲಾತಿ ಮಾಡಲಾಗಿದೆ. ರಾಗ ಮತ್ತು ಹಾಡುಗಳಲ್ಲಿ ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳಾಗಿದ್ದರೂ, ಪೂರ್ವರಂಗದ ಮೂಲ ಚೌಕಟ್ಟಿನಡಿ ರೂಢಿಯಲ್ಲಿರುವ, ಹೆಚ್ಚಿನ ಹಿರಿಯ ಕಲಾವಿದರು ಒಪ್ಪಿಕೊಂಡಂತೆ ಪೂರ್ವರಂಗವನ್ನು ಪ್ರಸ್ತುತಪಡಿಸಿದ್ದೇವೆ" ಎನ್ನುತ್ತಾರೆ ಹರಿನಾರಾಯಣ ಬೈಪಾಡಿತ್ತಾಯರು. ಅಡಕ ತಟ್ಟೆಯ ರಕ್ಷಾಕವಚದಲ್ಲೂ ಆಶಯವನ್ನು ಮುದ್ರಿಸಿದ್ದಾರೆ.
           ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಈ ಯತ್ನವನ್ನು ಶ್ಲಾಘಿಸಿದ್ದಾರೆ, "ಪ್ರಕೃತ ಲಭ್ಯವಿರುವ ಪೂರ್ವರಂಗದ ಕ್ರಿಯಾರೂಪವನ್ನು ಪ್ರದರ್ಶಿಸಲು ಬೇಕಾದ ರಂಗ ಸಾಹಿತ್ಯವೆನಿಸಿದ, ವಾದನ ಕ್ರಿಯೆಗೆ ಸಂಬಂಧಿಸಿದ ತಾಳಗಳ ಸ್ವರೂಪ, ಬಿಡ್ತಿಗೆ, ಮುಕ್ತಾಯ, ತುಂಡು ಮುಕ್ತಾಯ, ಕಟ್ಟು ಮುಕ್ತಾಯ, ಮೂರು ಮುಕ್ತಾಯ, ಒಂಭತ್ತು ಮುಕ್ತಾಯ, ದೊಡ್ಡ ಬಿಡ್ತಿಗೆ, ಏಳು ತಾಳಗಳ ಬಿಡ್ತಿಗೆ, ಏರು ಬಿಡ್ತಿಗೆ, ಧಿತ್ತ, ದಿಗಿಣ ತೈತ ತಕತ, ತದ್ದೀಂಕಿಟ, ಕೌತುಕ.... ಮೊದಲಾದವುಗಳನ್ನು ಬಳಸುವ ಸಾಧನದ ಖಚಿತ ಮಾಹಿತಿಯನ್ನು ದೇಸೀಯ ಪದ್ಧತಿಯಲ್ಲಿ ಒದಗಿಸಿದ್ದಾರೆ."
           ವಿದ್ಯಾರ್ಥಿಗಳಿಗೆ ನಾಲ್ಕು ತಾಳ ಬಂದರೆ ಸಾಕು, ಪ್ರಸಂಗಕ್ಕೆ ಪದ್ಯ ಹೇಳಲು ಆತುರ. ಪೂರ್ವರಂಗದ ಎಲ್ಲಾ ಮಟ್ಟುಗಳನ್ನು ಕಲಿತ ಬಳಿಕವೇ ಪ್ರಸಂಗಕ್ಕೆ ಪದ್ಯ ಹೇಳಿದರೆ ರಾಗ, ಲಯ, ಮಟ್ಟುಗಳು ಗಟ್ಟಿಯಾಗುತ್ತವೆ - ಹಿಂದೊಮ್ಮೆ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಹೇಳಿದ ನೆನಪು. ಈ ಹಿನ್ನೆಲೆಯಲ್ಲಿ ಲೀಲಕ್ಕ ಅವರ ಶ್ರಮ ಸಾರ್ಥಕ. ಇದನ್ನು ಕರಗತ ಮಾಡಿಕೊಳ್ಳುವ ಹೊಣೆ  ಅಭ್ಯಾಸಿಗಳದು.
            ಯಕ್ಷಗಾನವೇ ಬದುಕಾಗಿರುವ ಬೈಪಾಡಿತ್ತಾಯ ಕುಟುಂಬದ ಈ ಸಾಹಸ, ಸಾಧನೆ ಶ್ಲಾಘನೀಯ. ಯಕ್ಷಗಾನದ ಕಾಳಜಿ ಮತ್ತು ತಮ್ಮ ಜ್ಞಾನದ ದಾಖಲಾತಿಯ ಉದ್ದೇಶವರಿಸಿದ 'ಪೂರ್ವರಂಗ'ದ ಈ ದಾಖಲಾತಿ ನಮ್ಮ ಸಂಗ್ರಹದಲ್ಲಿರಬೇಕು. ಎರಡು ಸಿಡಿಗಳಲ್ಲಿ (ಆಡಿಯೋ) ಪೂರ್ವರಂಗ ವಿಸ್ತೃತವಾಗಿದೆ. ಬೆಲೆ ಒಂದು ನೂರ ನಲವತ್ತೊಂಭತ್ತು ರೂಪಾಯಿಗಳು. ಆಸಕ್ತರು ಸಂಪರ್ಕಿಸಬಹುದು. (9945967337)
             ಸುಳ್ಯದ ತೆಂಕುತಿಟ್ಟು ಯಕ್ಷಗಾನದ ಹಿತರಕ್ಷಣಾ ವೇದಿಕೆಯು ಹಿಂದೆ ಬಲಿಪ ನಾರಾಯಣ ಭಾಗವತರ ಕಂಠಶ್ರೀಯಲ್ಲಿ ಪೂರ್ವರಂಗದ ಆಡಿಯೋ ಧ್ವನಿಸುರುಳಿಯನ್ನು ರೂಪಿಸಿರುವುದು ಉಲ್ಲೇಖನೀಯ.


No comments:

Post a Comment