Monday, October 5, 2015

ಚಿತ್ರ ಸಾರಿದ ಯಕ್ಷಪಯಣ


            ಹಳೆಯ ಕಡತಗಳನ್ನು ಜಾಲಾಡುತ್ತಿದ್ದಾಗ ಅವಿತುಕೊಂಡಿದ್ದ ಚಿತ್ರವೊಂದು ಗೋಚರವಾಯಿತು. ಅದು ವಿಂಶತಿಯ ಖುಷಿಯಲ್ಲಿ ನಗುತ್ತಿತ್ತು! 'ನೀನು ಮರೆತರೂ ನಾನು ಮರೆತಿಲ್ಲ' ಎಂದು ಅಣಕಿಸಿತು. ಆಗಿನ ರೀಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರ. ಗುಣಮಟ್ಟ ಅಷ್ಟಕ್ಕಷ್ಟೇ. ಚಿತ್ರವನ್ನು ನೋಡುತ್ತಾ ಇದ್ದಂತೆ ನೆನಪುಗಳು ರಾಚಿದುವು. ಶುರುವಾಯಿತು, ಯಕ್ಷ ಪಯಣದ ಸೈಡ್ರೀಲ್. 
            1995 ಮಾರ್ಚ್ ತಿಂಗಳ ಎರಡನೇ ವಾರ. ದೆಹಲಿಯಲ್ಲಿ ಅಂತಾರಾಷ್ಟ್ರೀಯ ಕೃಷಿ ಮೇಳ. ಅದರಲ್ಲಿ ಪುತ್ತೂರಿನ 'ಕರ್ನಾಟಕ ಯಕ್ಷ ಭಾರತಿ' ತಂಡದ ಯಕ್ಷಗಾನ ಪ್ರದರ್ಶನ. ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿಯವರ ನೇತೃತ್ವ. ದ.ಕ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯೋಜನೆ. ತೋನ್ಸೆ ಪುಷ್ಕಳ ಕುಮಾರ್, ರಮೇಶ ಶೆಟ್ಟಿ ಬಾಯಾರ್, ಕೃಷ್ಣಪ್ಪ ಕಿನ್ಯ, ಜಲಂಧರ ರೈ, ಕೆ.ಯು.ಬಸ್ತಿ, ಭಾಸ್ಕರ ರೈ, ನಾ. ಕಾರಂತ, ಹರಿಶ್ಚಂದ್ರ ನಾಯ್ಗ - ಕಲಾವಿದರು. ನರಕಾಸುರ ಮೋಕ್ಷ, ಸುಧನ್ವ ಮೋಕ್ಷ, ಘೋರ ಮಾರಕ ಪ್ರಸಂಗಗಳ ಪ್ರಸ್ತುತಿ.
             ಪ್ರಯಾಣವು ಪ್ರಯಾಸದ ಕಾಲಘಟ್ಟ. ಇಲಾಖೆ ಕೊಡುವ ವೀಳ್ಯ ಅಲ್ಲಿಂದಲ್ಲಿಗೆ ಚುಕ್ತಾ. ಬಸ್ ಪ್ರಯಾಣ ದುಬಾರಿ. ವಿಮಾನ ಊಹಿಸುವಂತಿಲ್ಲ ಬಿಡಿ. ಕೊನೆಯ ಆಯ್ಕೆ ರೈಲು. ಆಗ ದೆಹಲಿ ಪ್ರಯಾಣವೆಂದರೆ ಈಗ ವಿದೇಶಕ್ಕೆ ಹಾರಿದಂತೆ! ರೈಲಿನಲ್ಲಿ ಹೋಗಲು, ಬರಲು ಆರು ದಿನ. ದೆಹಲಿಯಲ್ಲಿ ಪ್ರದರ್ಶನ ಮೂರು ದಿವಸ. ಹೀಗೆ ಸುಮಾರು ಹತ್ತು ದಿವಸದ ಯಕ್ಷಟೂರ್.
            ಯಕ್ಷಗಾನದ ಡ್ರೆಸ್ನೊಂದಿಗೆ ತಂಡ ರೈಲೇರಿದಾಗ ಪುಳಕದ ಅನುಭವ! ಕಲಾವಿದರೊಂದಿಗೆ ಇಲಾಖೆಯ ವರಿಷ್ಠರು ಸೇರಿ ಹತ್ತು ಮಂದಿ. ಮೂರು ದಿವಸದ ರೈಲು ವಾಸ. ಪ್ರಯಾಣವಿಡೀ ಯಕ್ಷಗಾನದ್ದೇ ಗುಂಗು ಗೆಜಲುವಿಕೆ. ಮಾತುಕತೆಗಳಿಗೆ ಅಕ್ಕಪಕ್ಕದವರು ಕಿವಿಯಾದರೂ ಭಾಷೆಯ ತೊಡಕಿತ್ತು. ಜಲಂಧರ ರೈ, ಕೆ.ಯು.ಬಸ್ತಿ, ಕೃಷ್ಣಪ್ಪ ಇವರ ಲೈವ್ ಅನುಭವಗಳು! ಬೋಗಿಯಲ್ಲೇ ತಾಳಮದ್ದಳೆಯ ಅಣಕು. ವೇಷಭೂಷಣದೊಂದಿಗೆ ಆಯುಧಗಳೂ ಇದ್ದುವಲ್ಲ. ಕತ್ತಿ, ಗದೆ ಹಿಡಿದು ಪ್ರಾತ್ಯಕ್ಷಿಕೆ!
            ರೈಲ್ವೇ ನಿಲ್ದಾಣದಲ್ಲಿ ವೇಷಭೂಷಣವನ್ನು ಇಳಿಸುವುದು, ಏರಿಸುವುದು; ಅಲ್ಲಿಂದ ಟ್ಯಾಕ್ಸಿ ಮೂಲಕ ಸಭಾಭವನ ತಲುಪಿಸುವ ಸ್ಥಿತಿ ಇದೆಯಲ್ಲಾ... ಶತ್ರುವಿಗೂ ಬೇಡ. ರೈಲ್ವೇ ನಿಲ್ದಾಣದ ಶ್ರಮಜೀವಿಗಳ ಉಡಾಫೆಗಳನ್ನು ಹೆಜ್ಜೆ ಹೆಜ್ಜೆಗೂ ಅನುಭವಿಸಿದ ನೆನಪಿನ್ನೂ ಹಸಿಯಾಗಿದೆ. ಕತ್ತಿ, ಬಿಲ್ಲು-ಬಾಣ, ಗದೆಗಳು ಆರಕ್ಷಕರ ಕಂಗೆಣ್ಣಿಗೆ ಗುರಿಯಾಗಿತ್ತು. ಒಂದೆರಡು ಬಾರಿ ಪರೀಕ್ಷೆಗೂ ಒಳಪಟ್ಟಿತ್ತು. ಸಾರಥಿ ಕುಕ್ಕುವಳ್ಳಿಯವರ ಜಾಣ್ಮೆಗಳಿಗೆ ಸವಾಲು!   
              ಹಿಂದಿ ಭಾಷೆಯ ಇರುನೆಲೆ ದೆಹಲಿ. ಸಾಕಷ್ಟು ಕನ್ನಡಗರೂ ಇದ್ದರೆನ್ನಿ. ಅವರಿಗೆಲ್ಲಾ ಯಕ್ಷಗಾನ ಗೊತ್ತಷ್ಟೇ. ಒಂದು ಗಂಟೆಯಲ್ಲಿ ಪ್ರಸಂಗವನ್ನು ಮುಗಿಸುವ ವೇಳಾಪಟ್ಟಿ. ವೇಷ, ಹಿಮ್ಮೇಳದ ನಾದಕ್ಕೆ ದೆಹಲಿಗರ ಖುಷಿಯ ಪ್ರೋತ್ಸಾಹ. ಅರ್ಥಗಾರಿಕೆಯನ್ನು ಸೀಮಿತ ಗೊಳಿಸಿ ಪದ್ಯಕ್ಕೆ ಹೆಚ್ಚು ಸಮಯ ನಿಗದಿ. ಕರ್ನಾಟಕ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪೂರ್ತಿ ಕನ್ನಡಿಗರಿದ್ದರು. ಕೃಷಿ ಮೇಳದ ಕಾರ್ಯಕ್ರಮಕ್ಕೆ ಆಗಮಿಸಿದ ಪತ್ರಕರ್ತ ಮಿತ್ರ ರವಿಪ್ರಸಾದ್ ಕಮಿಲ ಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಅವರು ಆಗ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದರು.
            ಹೇಳುವಂತಹ ಯಾವುದೇ ಆಧುನಿಕ ಸೌಲಭ್ಯ, ಸವಲತ್ತುಗಳಿಲ್ಲದ ಆ ದಿವಸಗಳ ದೆಹಲಿ ಪ್ರದರ್ಶನ ಮಾಸದ ನೆನಪಾಗಿ ಉಳಿದಿದೆ. ದೆಹಲಿಯ ಹಿಂದಿ ಭಾಷಿಗರು ಯಕ್ಷಗಾನದ ವೇಷಭೂಷಣಕ್ಕೆ ಮನಸೋತಿದ್ದರು. ಪ್ರದರ್ಶನದ ನಂತರ ಬಣ್ಣದ ಮನೆಗೆ ಬಂದು ಕಿರೀಟ, ಚೆಂಡೆ, ಮದ್ದಳೆಗಳ ವಿವರಗಳನ್ನು ಪಡೆಯುತ್ತಿದ್ದರು. ಅಲ್ಲಿನ ಪತ್ರಿಕೆಗಳು ವರದಿಯೊಂದಿಗೆ ನುಡಿಚಿತ್ರಗಳನ್ನು ಪ್ರಕಟಿಸಿದ್ದುವು. ಪ್ರದರ್ಶನದ ಪ್ರಸ್ತುತಿಗಿಂತಲೂ ಕರಾವಳಿಯನ್ನು ಪ್ರತಿನಿಧಿಸಿದ ಯಕ್ಷಗಾನ ತಂಡ ಎನ್ನುವ ಆನಂದ ನಮ್ಮೆಲ್ಲರಲ್ಲಿತ್ತು. 
          ಒಂದು ವಿಚಾರ ಮರೆತೆ. ರೈಲು ಪ್ರಯಾಣದಲ್ಲಿ ಕಲಾವಿದರಲ್ಲಿ ಓರ್ವರಾದ ಜಲಂಧರ ರೈಯವರ ಶ್ರೀಮತಿ ಮತ್ತು ಪುಟ್ಟ ಮಗು ಜತೆಗಿದ್ದರು. ಬಟ್ಟೆಯನ್ನೇ ತೊಟ್ಟಿಲಿನಂತೆ ಮಾಡಿ ಮಗುವನ್ನು ತೂಗುವ, ಆರೈಕೆ ಮಾಡುವ ಸರದಿ ತಂಡದ್ದು! ಅಂದಿನ ಎಂಟು ಮಂದಿ ತಂಡದಲ್ಲಿದ್ದ ಇಬ್ಬರು ಈಗ ಕೀರ್ತಿಶೇಷ. ಅವರಿಬ್ಬರ ಕುರಿತು ಎರಡು ಮಾತು.
           ಎಸ್. ಜಲಂಧರ ರೈ : ಚಿಮ್ಮು ಉತ್ಸಾಹಿ. ಕಿರೀಟ ವೇಷಗಳಿಗೆ ಒಪ್ಪುವ ಆಭಿವ್ಯಕ್ತಿ. ತುಂಬು ಶಾರೀರ. ಕಾರ್ತವೀರ್ಯ, ಅರ್ಜುುನ, ಅತಿಕಾಯ, ಇಂದ್ರಜಿತು..ಮೊದಲಾದ ಪಾತ್ರಗಳಲ್ಲಿ ಗಮನೀಯ ರಂಗನಿರ್ವಹಣೆ. ನಿರ್ವಹಿಸಿದ ಪಾತ್ರಗಳಲ್ಲಿ ವೃತ್ತಿಪರತೆಯ ಸ್ಪರ್ಶ. ಮುಖ್ಯವಾಗಿ ಸ್ನೇಹಕ್ಕೆ ಒಡ್ಡಿಕೊಳ್ಳುವ ಆಪ್ತತೆ. ಕೋಟೆಕಾರಿನ ಆನಂದಾಶ್ರಮದಲ್ಲಿ ಅಧ್ಯಾಪಕರಾಗಿದ್ದರು. ಉತ್ತಮ ಶಿಕ್ಷಕನೆಂಬ ನೆಗಳ್ತೆ. ವಿವಿಧ ಸಂಸ್ಥೆಗಳಲ್ಲಿ ಸೇವಾ ಕೈಂಕರ್ಯ. 9 ಮೇ 2000ರಂದು ವಿಧಿವಶ.
            ಕುಂಞಪ್ಪ ಬಸ್ತಿ : ಕೋಟೆಕಾರು-ಉಚ್ಚಿಲ ಕಲಾಗಂಗೋತ್ರಿ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದರು. ಯಾವುದೇ ಪೂರ್ವ ತಯಾರಿ ಇಲ್ಲದೆ ರಂಗ ಪ್ರವೇಶಿಸಬಾರದು, ಎನ್ನುವ ಖಚಿತ ನಿಲುವಿನವರು. ಹಾಗಾಗಿ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲಾ ನಿರುಮ್ಮಳ. ಹೆಣ್ಣು ಬಣ್ಣಗಳ ಪಾತ್ರಗಳಲ್ಲಿ ಮಿಂಚಿದ್ದು ಹೆಚ್ಚು. ದಕ್ಷ, ಪರೀಕ್ಷಿತ, ಕರ್ಣ, ಅರ್ಜುನ ಮೊದಲಾದ ಕಿರೀಟಿ ವೇಷಗಳಲ್ಲಿ ಸ್ವಂತಿಕೆಯ ನಿಲುವು. 4 ಸೆಪ್ಟೆಂಬರ್ 1998ರಲ್ಲಿ ವಿಧಿವಶ.
            ಚಿತ್ರ ತಂದಿತ್ತ ನೆನಪುಗಳು ಕಾಲದ ದಾಖಲೆ.


No comments:

Post a Comment