Wednesday, March 2, 2016

ಪುರಭವನ ಇಳಿಬಿಟ್ಟ ಸಾಂಸ್ಕೃತಿಕ ಬೇರುಗಳು

               'ಮಂಗಳೂರು ಪುರಭವನ' - ಅದೊಂದು ಸರಕಾರಿ ಸಭಾಭವನ. ಬಾಡಿಗೆ ಪಾವತಿಸಿದರೆ ಆಯಿತು, ಕಾರ್ಯಕ್ರಮಗಳನ್ನು ಯಾರಿಗೂ ಮಾಡಬಹುದು. ಅಂತಸ್ತಿಗೆ ತಕ್ಕಂತೆ ಗೌಜಿ-ಗಮ್ಮತ್ತು ಏರ್ಪಡಿಸಬಹುದು. 'ಯಾಕೆ ಮಾಡಿದಿರಿ' ಅಂತ ಯಾರೂ ಕೇಳುವವರಿಲ್ಲ. ಯಾಕೆ ಹೇಳಿ? ನೀವು ಬಾಡಿಗೆ ನೀಡಿದ್ದೀರಿ. ನಿಮ್ಮ ಖುಷಿ. ಸರಕಾರಕ್ಕೆ ಯಾರಾದರು ಏನು? ಇಂದು ನೀವು, ನಾಳೆ ಇನ್ನೊಬ್ಬರು. ಸರಕಾರಿ ಪೋಶಿತ ಪುರಭವನದ ವ್ಯವಹಾರಕ್ಕೆ ಇಷ್ಟು ಪೀಠಿಕೆ ಸಾಕು.
               ಕರಾವಳಿಯ ಸಾಂಸ್ಕೃತಿಕ ಇತಿಹಾಸದೊಳಗೆ ಇಣುಕಿದರೆ ಪುರಭವನದ ಕಲಾಭಾವಗಳ ತರಂಗಗಳು ಸುತ್ತುತ್ತಿರುವುದನ್ನು ಕಾಣಬಹುದು. ಸಂಸ್ಕೃತಿಯ ವೈವಿಧ್ಯಗಳು ಗೋಚರಿಸುತ್ತವೆ. ಭಾಷಾ ಬಾಂಧವ್ಯವನ್ನು ಗಟ್ಟಿಗೊಳಿಸಿದ ದಿನಮಾನಗಳು ಕಾಣುತ್ತವೆ. ಉಭಯ ಜಿಲ್ಲೆಗಳ ಕಲಾ ಮನಸ್ಸುಗಳನ್ನು ಒಗ್ಗೂಡಿಸಿದ ಚಿತ್ರಗಳಿವೆ. ಅಕ್ಷರ ಲೋಕವನ್ನು ಕಟ್ಟಿಕೊಟ್ಟ ಕ್ಷಣಗಳಿವೆ. ಗೆಜ್ಜೆಗಳ ನಾದಗಳಿಗೆ ಮಾತನ್ನು ಕೊಟ್ಟಿದೆ. ವಾಗ್ದೇವಿ ನಲಿದಾಡಿದ್ದಾಳೆ. ಸಿದ್ಧಿ-ಸಾಧನೆಗಳಿಗೆ ಗೌರವ ಪ್ರಾಪ್ತವಾಗಿದೆ.
               1986ನೇ ಇಸವಿ. ಹೊಟ್ಟೆಪಾಡಿಗಾಗಿ ಮಂಗಳೂರಿನಲ್ಲಿದ್ದೆ. ಪುರಭವನ, ನೆಹರು ಮೈದಾನದ ಯಕ್ಷಗಾನ ಸುದ್ದಿಗಳ ರೋಚಕ ಮಾತುಗಳಿಗೆ ಕಿವಿಯಾಗುತ್ತಿದ್ದೆ. ಪುರಭವನದ ಎದುರು ಯಕ್ಷಗಾನದ ದೊಡ್ಡ ಗಾತ್ರದ ಫಲಕವೊಂದು ಸೆಳೆಯಿತು. ಖ್ಯಾತನಾಮ ಕಲಾವಿದರಿಂದ ಅದ್ದೂರಿ ಪ್ರದರ್ಶನ - 'ದಕ್ಷಾಧ್ವರ-ದಮಯಂತಿ ಪುನ:ಸ್ವಯಂವರ - ಗದಾಯುದ್ಧ'. ಒಬ್ಬನೇ ಒಬ್ಬ ಕಲಾವಿದರ ಪರಿಚಯವಿಲ್ಲ. ಯಕ್ಷಗಾನದ ಮೊದಲಾಕ್ಷರದ ಪರಿಚಯವಿರಲಿಲ್ಲ. ಐದು ರೂಪಾಯಿ ಬಾಲ್ಕನಿ ಟಿಕೇಟು ಪಡೆದು ಪುರಭವನ ಹೊಕ್ಕಿದ್ದೆ. ಆಟ ನೋಡಿ ಮರಳುವಾಗ ಯಕ್ಷಗಾನದ ಗುಂಗು ಅಂಟಿತ್ತು. ಅಲ್ಲಿಂದ ಪುರಭವನಕ್ಕೂ ನನಗೂ ನಂಟು-ಅಂಟು. ನಡೆಯುತ್ತಿದ್ದ ಬಹುತೇಕ ಆಟ-ಕೂಟಗಳಿಗೆ ಖಾಯಂ ಹಾಜರ್.
               ಯಕ್ಷಗಾನಕ್ಕೂ ಪುರಭವನಕ್ಕೂ ಬಿಗಿಯಾದ ಬಂಧ-ಸಂಬಂಧ. ಕಾರ್ಯಕ್ರಮಗಳನ್ನು ಸಂಯೋಜಿಸುವುದು 'ಪ್ರತಿಷ್ಠೆ'. ಮಳೆಗಾಲದ ಶನಿವಾರಗಳ ಪ್ರದರ್ಶನಗಳು ಐದಾರು ತಿಂಗಳ ಮೊದಲೇ ಮುಂಗಡವಾಗಿ ಕಾದಿರಿಸಲಾಗುತ್ತಿತ್ತು. ಕೆಲವೊಮ್ಮೆ ಕಲಾವಿದರೇ ಆಯೋಜಕರಾಗುವುದುಂಟು. ತಮ್ಮ ಮೇಳ ತಿರುಗಾಟದ ಅವಧಿಯಲ್ಲಿ 'ಪುರಭವನದ ಆಟ'ದ ಟಿಕೇಟ್ ಮಾರಾಟ ಮಾಡಲು ಖುಷಿ. ದೊಡ್ಡದಾದ ಕರಪತ್ರ. ಭಾಗವಹಿಸುವ ಕಲಾವಿದರೆಲ್ಲರ ವಿವರ. ತಮ್ಮ ಹೆಸರು 'ನೋಟೀಸಿನಲ್ಲಿ ಬಿದ್ದಿದೆ' ಎನ್ನಲು ಕಲಾವಿದರಿಗೂ ಹೆಮ್ಮೆ. 'ಗೌರವ ಪ್ರವೇಶ' ಪ್ರವೇಶಿಕೆಗಳನ್ನು ಪ್ರತಿಷ್ಠಿತರಿಗೆ ಮುಜುಗರದಿಂದ ಹಂಚುತ್ತಿದ್ದ ಆ ಮುಖಗಳು ನೆನಪಾಗುತ್ತವೆ.
                ಹಿರಿಯರಿಗೆ ಸಂಮಾನ, ಪ್ರಶಸ್ತಿ ಪ್ರದಾನ, ಪುರಸ್ಕಾರ, ಪುಸ್ತಕ ಬಿಡುಗಡೆ, ಗೋಷ್ಠಿ, ಸಂಸ್ಮರಣೆಗಳಿಗೆ ಪುರಭವನ ಸಾಕ್ಷಿಯಾಗಿದೆ.  'ಟೌನ್ಹಾಲಿನ ಸನ್ಮಾನ'ವೆಂದರೆ ಅದನ್ನು ಸ್ವೀಕರಿಸುವ ಸಾಧಕನಿಗೂ ಪುಳಕ. ವೇದಿಕೆಯಲ್ಲಿ ನಿಂತು ಮಾತನಾಡುವುದೂ ಪ್ರತಿಷ್ಠೆ. ನೇಪಥ್ಯದಲ್ಲಿ 'ಪುರಭವನದಲ್ಲೇ ಆಗಬೇಕು' ಎನ್ನುವ ಪ್ರೀತಿಯ ಹಠವೂ ಆಯೋಜಕರಲ್ಲಿದೆ. ದಾಖಲೆ ಬರೆದ ತಾಳಮದ್ದಳೆಗಳು ಪುರಭವನಕ್ಕೆ ಮಾತ್ರ ಇತಿಹಾಸವಲ್ಲ. ಯಕ್ಷಗಾನಕ್ಕೂ ಕೂಡಾ.
               ಪುರಭವನವು  ಯಕ್ಷಗಾನ ವಾಹಿನಿಯೊಳಗೆ ಮಿಳಿತವಾಗಿರುವುದರಿಂದ ಇದರ ಹೊರತಾಗಿ ಬೇರೆ ಯೋಚನೆಯಿಲ್ಲ. ನೂರಾರು ಕಲಾವಿದರಿಗೆ ಅವಕಾಶವನ್ನು ನೀಡಿದೆ. ತಾರಾಮೌಲ್ಯ ತಂದಿದೆ. ಪ್ರೇಕ್ಷಕರಿಗೂ ಕಲಾವಿದರನ್ನು ನೋಡುವ, ಮಾತನಾಡಿಸುವ ಆನಂದ. ಶೇಣಿ-ಸಾಮಗ, ಕಡತೋಕ-ಕಾಳಿಂಗ ನಾವಡ, ಕೆರೆಮನೆ ಸಹೋದರರು.. ಹೀಗೆ ಸಂದುಹೋದ ಹಿರಿಯರು ಮೂಡಿಸಿದ ಯಶೋಹೆಜ್ಜೆಯು ಪುರಭವನದ ರಂಗವೇದಿಕೆಯಲ್ಲಿ ಅಚ್ಚಾಗಿವೆ. ಸಿನಿಮಾ ಥಿಯೇಟರಿನಂತೆ 'ಟಿಕೇಟು ಇಲ್ಲ' ಎನ್ನುವ ಫಲಕವನ್ನು ತೂಗುಹಾಕಿದ್ದನ್ನು ನೋಡಿದ್ದೇನೆ.
                 ಮೇಳದ ಯಜಮಾನ ಕೀರ್ತಿಶೇಷ ಕರ್ನೂರು ಕೊರಗಪ್ಪ ರೈಗಳು ಪುರಭವನದಲ್ಲಿ ಮಳೆಗಾಲದಲ್ಲಿ ತೆಂಕು-ಬಡಗು ತಿಟ್ಟುಗಳ ಪ್ರದರ್ಶನಕ್ಕೆ ಶ್ರೀಕಾರ ಹಾಕಿದವರು ಎಂದು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ಕಲಾವಿದರಿಗೆ 'ಲಕೋಟೆ(ಕವರ್)ಯೊಳಗೆ ಸಂಭಾವನೆ ತುಂಬಿಸಿ' ನೀಡುವ ಪರಿಪಾಠ ರೈಗಳಿಂದ ಆರಂಭವಾಯಿತು ಎನ್ನುತ್ತಾರೆ.  ಯಕ್ಷಗಾನ ಕ್ಷೇತ್ರಕ್ಕೆ ಅಪರೂಪವಾದ ಇಂತಹ ವ್ಯವಸ್ಥೆಗಳ ಮೊದಲಾರಂಭಕ್ಕೆ ಪುರಭವನ ಸಾಕ್ಷಿಯಾಗಿದೆ. ತೆಂಕು-ಬಡಗಿನ ಕಲಾವಿದರೊಳಗೆ ಸ್ನೇಹ-ಸೇತುವನ್ನು ಕಟ್ಟಿದೆ.
                  ಕಳೆದ ಒಂದು ವರುಷ ನವೀಕರಣಕ್ಕಾಗಿ ಪುರಭವನ ಮುಚ್ಚಿತ್ತು. ಎಷ್ಟೋ ಕಲಾ ಕಾರ್ಯಕ್ರಮಗಳು ರಜೆ ಮಾಡಿದುವು! ಇಲ್ಲಿನ ಸೊಬಗು, ಸೊಗಸು ಇತರೆಡೆ ಸಿಗದ ಭಯದಿಂದ ಆಟ-ಕೂಟಗಳು ರದ್ದಾದುವು. ಕೆಲವು ಬೇರೆಡೆ ಸ್ಥಳಾಂತರಗೊಂಡುವು. ಹೋದಲ್ಲಿ, ಬಂದಲ್ಲಿ ಪುರಭವನದ ಅಲಭ್ಯತೆಯ ಮಾತುಕತೆ. ಕಲಾ ಕಾರ್ಯಕ್ರಮಕ್ಕೆ ಬಾಡಿಗೆ ಕಡಿಮೆ ಎನ್ನುವ ಕಾರಣವಲ್ಲ. 'ನಮಗೆ ಪುರಭವನ ಬೇಕು. ಅಲ್ಲೇ ಕಾರ್ಯಕ್ರಮ ಆಗಬೇಕು' ಎನ್ನುವ ಸಾಂಸ್ಕೃತಿಕ ನರಜಾಲ.
               'ಬಣ್ಣದ ಮನೆಯ ಗಾತ್ರ ದೊಡ್ಡದಾಗಬೇಕು' ಎನ್ನುವುದು ಕಲಾವಿದರ ಬೇಡಿಕೆ. ಈಗ ಹವಾನಿಯಂತ್ರಿತ ವ್ಯವಸ್ಥೆ ಹೊಸೆದಿದೆ. ಆರ್ಥಿಕವಾಗಿ ದುಬಾರಿ. ಯಕ್ಷಗಾನ, ನಾಟಕ, ನೃತ್ಯ.. ಮೊದಲಾದ ಕಲಾ ಸಂಬಂಧಿ ಚಟುವಟಿಕೆಗಳಿಗೆ ಹೊರೆಯಾಗದಂತೆ ಆಡಳಿತ ನೋಡಿಕೊಳ್ಳಬೇಕಿದೆ. ಬಣ್ಣದ ಮನೆಯಲ್ಲಿ ಇರುವಷ್ಟು ಹೊತ್ತು ಯಥಾಸಾಧ್ಯ ಶುಚಿಯಾಗಿಟ್ಟುಕೊಳ್ಳುವುದು ಕಲಾವಿದರ ಜವಾಬ್ದಾರಿ. ಶುಚಿತ್ವದ ಕಾರಣಕ್ಕಾಗಿಯೇ ಹಲವು ಸಭಾಭವನಗಳು ಕಲಾ ಕಾರ್ಯಕ್ರಮಕ್ಕೆ ಒದಗದಿರುವ ಸುದ್ದಿಗಳನ್ನು ಅಲ್ಲಿಲ್ಲಿ ಕೇಳುತ್ತೇವೆ.
               ಪುರಭವನಕ್ಕಿಂತ ಹೆಚ್ಚು ಸ್ಥಳಾವಕಾಶವಿರುವ ಸಭಾಭವನಗಳು ಮಂಗಳೂರಿನಲ್ಲಿ ಎಷ್ಟಿಲ್ಲ? ಆದರೂ ಸಂಘಟಕರು ಇದನ್ನೇ ಯಾಕೆ ಆಯ್ಕೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ! ಕಲೆಯ ಸ್ಪರ್ಶವಿರುವ ಸುಮನಸ್ಸಿನೊಳಗೆ ಪುರಭವನವು ಸಾಂಸ್ಕೃತಿಕ ಬೇರುಗಳನ್ನು ಇಳಿಯಬಿಟ್ಟಿದೆ. ಸುವರ್ಣ ಹೊಳಪಿನ ಪುರಭವನವು ನವೀಕೃತಗೊಂಡಿದೆ. ಬದಲಾಗುತ್ತಿರುವ ಆಡಳತ ವ್ಯವಸ್ಥೆಗಳು ಈ ಕಲಾ ಪರಂಪರೆಯನ್ನು ಮುಂದುವರಿಸಬೇಕು.
                  ಆಗಿನ ಮುನಿಸಿಪಲ್ ಅಧ್ಯಕ್ಷ ಮಣೇಲ್ ಶ್ರೀನಿವಾಸ ನಾಯಕರ ಪುರಭವನ ನಿರ್ಮಾಣದ ಸಂಕಲ್ಪವು ಒಂದು ಪ್ರದೇಶದ ಸಂಸ್ಕೃತಿಯ ದ್ಯೋತಕವಾಗಿ ಎದ್ದು ನಿಂತಿದೆ.
(ಪ್ರಜಾವಾಣಿ/ದಧಿಗಿಣತೋ/27-3-2016 ಅಂಕಣ)


No comments:

Post a Comment