Friday, September 2, 2016

'ಬಪ್ಪ' ಸಾರಿದ ಸಹಿಷ್ಣುತೆ

                           Dr.Sheni Gopalakrihna Bhat (Bappa) and Vittal Gopalakrishna Joshi (usman)
         
              ಸುರತ್ಕಲ್ ಮೇಳದ ಉಚ್ಚ್ರಾಯ ಕಾಲದ ಪ್ರದರ್ಶನಗಳು ಯಕ್ಷಗಾನ ಕಂಡ ಅನನ್ಯತೆ. ನಗರದಿಂದ ಹಳ್ಳಿ ತನಕ ವ್ಯಾಪಿಸಿದ ಮೇಳದ ತಿರುಗಾಟಗಳು, ಹಳ್ಳಿ ಮಂದಿ ಮೇಳವನ್ನು ಸ್ವೀಕರಿಸಿದ ರೀತಿ, ಕಲಾವಿದರ ಸ್ಪಂದನ.. ಇವೆಲ್ಲಾ 'ಹೀಗೂ ಇತ್ತೇ' ಎಂದು ಬೆರಗು ಮೂಡಿಸುವ ಘಟನೆಗಳು.
           'ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗವು ಮೇಳಕ್ಕೆ ಹೆಸರನ್ನು ತಂದಿತ್ತ ಆಖ್ಯಾನ. ಪ್ರಸಂಗದಲ್ಲಿ ಬರುವ 'ಬಪ್ಪ ಬ್ಯಾರಿ' ಪಾತ್ರಕ್ಕೆ ಶೇಣಿ ಗೋಪಾಲಕೃಷ್ಣ ಭಟ್ಟರು ಧಾರ್ಮಿಕ ಆಯಾಮ, ಧರ್ಮಸಹಿಷ್ಣು ಮನೋಭಾವ, ಶಾಸ್ತ್ರೀಯ ಅಡಿಗಟ್ಟನ್ನ ಹಾಕಿದವರು. ಶೇಣಿಯವರು ದೂರವಾಗಿ ಇಷ್ಟು ವರುಷವಾದರೂ ಆ ಪಾತ್ರವನ್ನು ನೆನಪಿಸಿಕೊಂಡರೆ ಶೇಣಿಯವರಲ್ಲದೆ ಇನ್ನೊಬ್ಬರು ನೆನಪಾಗುವುದಿಲ್ಲ.
           ಶೇಣಿಯವರ 'ಬಪ್ಪ' ಪಾತ್ರವು ಜನಮನದಲ್ಲಿ ನೆಲೆಯೂರಿತ್ತು. ಮುಸ್ಲಿಂ ಬಂಧುಗಳು ಮೆಚ್ಚಿಕೊಂಡಿದ್ದರು. ಪಾತ್ರದ ಮೂಲಕ ನೀಡುವ ಶಾಸ್ತ್ರೀಯ ಸಂದೇಶಗಳು ಪಾತ್ರವನ್ನು ಔನ್ನತ್ಯಕ್ಕೇರಿಸಿತ್ತು. ಈ ಪಾತ್ರವನ್ನು ಶೇಣಿಯವರಲ್ಲದೆ ಇನ್ನೊಬ್ಬ ಕಲಾವಿದ ಮಾಡಿದರೂ ಪಾತ್ರವು ಮಾತ್ರ ಶೇಣಿಯವರನ್ನೇ ಅಪೇಕ್ಷಿಸುತ್ತಿತ್ತು.
             ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರು ಸುರತ್ಕಲ್ ಮೇಳದಲ್ಲಿನ ಒಂದು ಘಟನೆಯನ್ನು ಜ್ಞಾಪಿಸಿಕೊಳ್ಳುತ್ತಾರೆ -     ಬಣಕಲ್ನಲ್ಲಿ 'ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗದ ಆಟ. ಆಗ 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವೂ ಪ್ರಸಿದ್ಧಿಯಾಗಿತ್ತು.  ಅದರಲ್ಲಿ ಬರುವ 'ಅಬ್ಬು, ಶೇಕು' ಪಾತ್ರಗಳು ಕೆಲವೆಡೆ ಔಚಿತ್ಯದ ಎಲ್ಲೆಯನ್ನೂ ಮೀರಿತ್ತು ಕಾಣ್ತದೆ. ಈ ಸುದ್ದಿ ಮುಸ್ಲಿಂ ಬಂಧುಗಳ ಕಿವಿಗೆ ಯಾರೋ ಸುರಿದಿದ್ದರು. 'ಪ್ರಸಂಗದಲ್ಲಿ ನಮ್ಮನ್ನು ಗೇಲಿ ಮಾಡುತ್ತಾರೆ' ಎಂದು ಮುಖ್ಯಸ್ಥರಿಗೆ ದೂರನ್ನು ನೀಡಿದ್ದರು. 
            ಅದು ಮಧಾಹ್ನ ಒಂದಷ್ಟು ಮಂದಿ ಮುಸ್ಲಿಮರು ಬಿಡಾರಕ್ಕೆ ಬಂದರು.  'ಇದು ಆಟ ಆಡಲು ಬಿಡುವುದಿಲ್ಲ. ನಮ್ಮನ್ನು ಗೇಲಿ ಮಾಡುತ್ತೀರಿ' ಎಂದು ಬೆದರಿಕೆ ಹಾಕಿದರು. 'ಹಾಗೇನಿಲ್ಲ. ಇಂದು ಬಂದು ಆಟ ನೋಡಿ' ಎಂದ ದನಿಗಳು ಸಮಜಾಯಿಷಿಕೆ ನೀಡಿದರು. 'ಏನಾದರೂ ಗೇಲಿ ಮಾಡಿದರೆ ಪರಿಣಾಮ ನೆಟ್ಟಗಾಗದು,' ಎಂದು ಪುನಃ ಎಚ್ಚರಿಸಿದರು. ಮೇಳದ ದನಿಗಳು ಶೇಣಿಯವರಿಗೆ ತಿಳಿಸಿದಾಗ 'ಅಷ್ಟೇ ಅಲ್ವಾ' ಎಂದರು.
            ಈ ವಿಷಯ ನಾಲ್ದಸೆ ಹರಡಿತು. ಅಂದಿನ ಆಟದಲ್ಲಿ ಟೆಂಟ್ ತುಂಬಿತ್ತು ಕೂಡಾ. ಅಗರಿಯವರ ಭಾಗವತಿಕೆ. ಎರಡೂವರೆ ಗಂಟೆಯಾಗುವಾಗ ಸುಮಾರು ಅರುವತ್ತು ಮಂದಿ ಟೆಂಟಿನೊಳಗೆ ಆಗಮಿಸಿದರು. ಅವರಿಗೆ ಪ್ರತ್ಯೇಕವಾದ ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು.
            ಸರಿಯಾಗಿ ಮೂರು ಗಂಟೆಗೆ ಅಗರಿಯವರು 'ಬಪ್ಪನೆಂದೆನುವ ಮುಸಲ್ಮಾನ ವ್ಯಾಪಾರಿ ತಪ್ಪದೆ ಕುಲಧರ್ಮವ....' ಪದ್ಯ ಎತ್ತುಗಡೆ ಮಾಡಿದರು. ಶೇಣಿಯವರ 'ಬಪ್ಪ'ನ ಪ್ರವೇಶ. ಅಂದಿನ ಅವರ ವೇಷಗಾರಿಕೆಯು ಥೇಟ್ ಧರ್ಮಿಷ್ಟ ಗುರುವೊಬ್ಬರನ್ನು ನೆನಪಿಸುತ್ತಿತ್ತು. ಮುಸ್ಲಿಂ ಬಂಧುಗಳು ನಿಬ್ಬೆರಗಾದರು. ಕುರಾನನ್ನು ಉಲ್ಲೇಖಿಸಿದ ಧರ್ಮಸೂಕ್ಷ್ಮದ ವಿಚಾರಗಳು ಬಪ್ಪ ಪಾತ್ರವನ್ನು ಎತ್ತರಕ್ಕೇರಿಸಿತ್ತು. ಶಾಸ್ತ್ರೀಯವಾದ 'ಮಾಪಿಳೆ ಪಾಟ್'ನ್ನು ಹೇಳಿದ್ದರು. ಶಾಸ್ತ್ರಗಳನ್ನು ಓದಿದ, ಬೌದ್ಧಿಕ ಗಟ್ಟಿತನವನ್ನು ಹೊಂದಿದ, ಸಾತ್ವಿಕ ಧಾರ್ಮಾನುಯಾಯಿ 'ಬಪ್ಪ'ನ ಪಾತ್ರಕ್ಕೆ ಮುಸ್ಲಿಂ ಬಂಧುಗಳು ತಲೆದೂಗಿದರು.
ಪಾತ್ರ ಮುಗಿದು ಶೇಣಿಯವರು ಚೌಕಿಗೆ ನಿರ್ಗಮಿಸಿದರು. ಆಟ ನೋಡುತ್ತಿದ್ದವರು ಚೌಕಿಗೆ ಬಂದು ಶೇಣಿಯವರನ್ನು ಅಭಿನಂದಿಸಿದರು. ಕೈ ಕುಲುಕಿದರು. ಕೆಲವರು ಆಶೀರ್ವಾದ ಬೇಡಿದರು. ನಮಗೆ ಇದೆಲ್ಲಾ ಹೊಸತು. ನೀವು ಎಲ್ಲಿ ಕಲಿತಿರಿ. ನಮ್ಮ ಧರ್ಮಗ್ರಂಥವನ್ನು ಎಲ್ಲಿ ಅಭ್ಯಾಸ ಮಾಡಿದಿರಿ, ಎಂದು ತಂಡದ ಮುಖ್ಯಸ್ಥರು ಹೇಳಿದಾಗ ಶೇಣಿಯವರ ಕಣ್ಣಂಚಲ್ಲಿ ಆನಂದದ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಶೇಣಿಯವರಿಗೆ ಬಹುಮಾನವನ್ನು ನೀಡಿ, 'ಯಾರದ್ದೋ ಮಾತನ್ನು ಕೇಳಿ ತಪ್ಪಾಗಿ ಅರ್ಥ ಮಾಡಿಕೊಂಡೆವು' ಎಂದು ತೆರಳಿದರು.
                ಇದು ಶೇಣಿಯವರ ತಾಕತ್ತು. ವಿಪತ್ತು ಬಂದಾಗ ಅದನ್ನು ಶಾಸ್ತ್ರಾಧಾರಗಳನ್ನು ಮುಂದಿಟ್ಟು ಮಂಡಿಸುವ ಕ್ರಮ ಇದೆಯಲ್ಲಾ, ಶೇಣಿಯವರಿಗೆ ಮಾತ್ರ ಸಾಧ್ಯ. ನಂತರದ ದಿವಸಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಟೆಂಟಿನ ಒಳಗಡೆ ಪ್ರತ್ಯೇಕ ವ್ಯವಸ್ಥೆ ಮಾಡಿ ಬಪ್ಪ ಪಾತ್ರವನ್ನು ತೋರಿಸಲಾಗಿತ್ತಂತೆ.
             ಕೂಡ್ಲು ಮೇಳಕ್ಕೆ ಕಟಪಾಡಿಯಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮೆಯನ್ನು ಮೊದಲ ಬಾರಿಗೆ ಪ್ರದರ್ಶನ ಮಾಡಿದ ಹಿರಿಮೆ. ಪ್ರಸಂಗ ಕರ್ತ ಭಾಗವತರಾದ ಅಗರಿ ಶ್ರೀನಿವಾಸ ಭಾಗವತರು. ಶೇಣಿಯವರಿಗೆ ಆರಂಭದಲ್ಲಿ 'ದಾರುಕಾಸುರ'ನ ಪಾತ್ರ. ಬಳಿಕ 'ಬಪ್ಪ'ನ ಪಾತ್ರವನ್ನೂ ನಿರ್ವಹಿಸಿದ್ದರು. ಹಾಸ್ಯಗಾರ ವಿಟ್ಲ ಗೋಪಾಲಕೃಷ್ಣ ಜೋಶಿಯವರದು 'ಉಸ್ಮಾನ್' ಪಾತ್ರ. ಈ ಜತೆಗಾರಿಕೆಯು ಬಹಳ ವರುಷ ರಂಗದಲ್ಲಿ ಮೆರೆದಿತ್ತು.
           ಅಂಗಡಿಮೊಗರಿನ ಮುಹಮ್ಮದ್ ಶೆರೂಲ್ ಆ ಕಾಲದ ಧರ್ಮಿಷ್ಟ. ಗಾಂಧಿವಾದಿ. ವಿದ್ಯಾಪ್ರೇಮಿ. ಅವರೊಂದಿಗಿನ ಒಡನಾಟವು 'ಮುಸ್ಲೀಮ್ ಗೃಹಸ್ಥ ಹೇಗಿರುತ್ತಾನೆ' ಎಂಬುದನ್ನು ಅನುಭವದಿಂದ ತಿಳಿದಿದ್ದೆ. ಬಪ್ಪ ಬ್ಯಾರಿಯ ವೇಷದಲ್ಲಿ ಸಹಜತೆಯನ್ನು ತರುವುದಕ್ಕೆ ಸಾಧ್ಯವಾಯಿತು. ಬಪ್ಪನ ಪಾತ್ರದಲ್ಲಿ ಶೆರೂಲರಂಥ ಸರ್ವಮತ ಸಹಿಷ್ಣುತೆಯುಳ್ಳ ವ್ಯಕ್ತಿಯ ನೆನಪಿನೊಂದಿಗೆ ಅವರದೇ ಕೃತಿಯಾದ ಅರ್ಥಪೂರ್ಣವಾದ ಮಾಪಿಳಾ ಪಾಟನ್ನೂ ಹಾಡುವುದನ್ನು ಬಳಸಿಕೊಂಡು ಬಂದೆ. ನನಗೆ ಆ ಪಾತ್ರವು ಹೆಸರನ್ನು ತಂದಿದೆ. ಜತೆಗೆ ಮುಸಲ್ಮಾನ ಬಂಧುಗಳಿಗೂ ತೃಪ್ತಿಯನ್ನು ತಂದಿದೆ, ಎಂದು ಶೇಣಿಯವರು ತನ್ನ 'ಯಕ್ಷಗಾನ ಮತ್ತು ನಾನು' ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
             ಶೇಣಿಯವರು ಸುರತ್ಕಲ್ ಮೇಳದಲ್ಲಿ ಇದ್ದಾಗ ಬಣಕಲ್ಲಿನ ಘಟನೆ ನಡೆಯಿತಷ್ಟೇ. ಅದಕ್ಕಿಂತ ಹಿಂದೆ ಕೂಡ್ಲು ಮೇಳದಲ್ಲೂ ಒಂದು ಘಟನೆಯು ಅರ್ಕುುಳದಲ್ಲಿ ನಡೆದಿತ್ತು. ಈ ಘಟನೆಯ ಪರಿಣಾಮವನ್ನು ಶೇಣಿಯವರ ಮಾತಲ್ಲೇ ಕೇಳೋಣ, ರಂಗನಿರ್ವಹಣೆ ಮುಗಿಸಿದ ನಾನು ಮತ್ತು ಜೋಷಿಯವರು ಚೌಕಿಗೆ ನಿರ್ಗಮಿಸಿದಾಗ ನಮ್ಮನ್ನು ಹಿಂಬಾಲಿಸಿದರು. ಹಸ್ತಲಾಘವ ಮಾಡಿದರು. ಕೆಲವರು ಸಿಗರೇಟು ಪೆಟ್ಟಿಗೆಗಳನ್ನು, ಯಾರೋ ಒಬ್ಬಿಬ್ಬರು ಫೌಂಟನ್ ಪೆನ್ನುಗಳನ್ನು ಉಡುಗೊರೆಯಾಗಿ ನೀಡಿದರು.
             'ದೇವನೊಬ್ಬ ನಾಮ ಹಲವು. ಮತ ಯಾವುದಾದರೇನು? ಮನುಷ್ಯ ಒಳ್ಳೆಯವನಾದರೆ ಸಾಕು, ಎಂಬ ತತ್ತ್ವದ ಜೀವಂತ ಸಾಕ್ಷಿ 'ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗ.
(ಚಿತ್ರ : ಯಜ್ಞ, ಮಂಗಳೂರು)No comments:

Post a Comment