Friday, June 22, 2018

ಕಲೆಯನ್ನು ತಲೆಮಾರಿಗೆ ದಾಟಿಸಿದ ಹೊಳ್ಳ ಮಾಸ್ಟ್ರು



                ಯಕ್ಷಗಾನದ ಹವ್ಯಾಸಿ ಸಂಘಗಳ ಉಚ್ಛ್ರಾಯದ ದಿನಮಾನಗಳು ಈಗ ಇತಿಹಾಸ. ವೃತ್ತಿ ರಂಗಭೂಮಿಗೆ ಸುಪುಷ್ಟವಾದ ಒಳಸುರಿಗಳನ್ನು ಒದಗಿಸುವ ಸಶಕ್ತತೆ ಹೊಂದಿದ್ದುವು. ಹಳ್ಳಿಯ ಸಾಂಸ್ಕತಿಕ ಸ್ಥಳೀಯತೆಗೆ ಸಂಘಗಳ ಕೊಡುಗೆ ಅನನ್ಯ. ಇಲ್ಲಿ ರೂಪುಗೊಂಡ ಕಲಾವಿದರನೇಕರು ವೃತ್ತಿ ಮೇಳಗಳಲ್ಲಿ ಪ್ರಸಿದ್ಧರಾಗಿದ್ದಾರೆ, ಪ್ರಬುದ್ಧರಾಗಿದ್ದಾರೆ. ಸಾಂಸ್ಕøತಿಕ ಗಾಢತೆಗೆ ಆಧುನಿಕ ಮನಃಸ್ಥಿತಿಯು ಮಿಳಿತವಾದಾಗ ಸಹಜವಾಗಿ ಸಂಘಗಳ ಕಾರ್ಯಹೂರಣಗಳು ನಿಧಾನಕ್ಕೆ ಪಲ್ಲಟಗೊಂಡುವು. ನಿಜಾರ್ಥದ ಸೇವೆ ಸಲ್ಲಿಸುವ ಮನಸ್ಸುಗಳು ಹಳ್ಳಿಯಿಂದ ದೂರಹೋದಾಗ ಬಹುತೇಕ ಸಂಘಗಳು ಫಲಕಗಳಲ್ಲೇ ಅಸ್ತಿತ್ವವನ್ನು ಸ್ಥಾಪಿಸುವಂತಾಯಿತು!
                ಯಾವುದೇ ಪಲ್ಲಟಗಳಿಗೆ ಅಲುಗಾಡದ ಸಂಘಗಳು ತಮ್ಮ ಕಾರ್ಯಗಳಲ್ಲಿ ರಾಜಿಮಾಡಿಕೊಳ್ಳದೆ ಸಕ್ರಿಯವಾಗಿರುವುದು ಆರಂಭದ ಕಾಲದ ಗಟ್ಟಿ ಅಡಿಗಟ್ಟು. ಅದು ಸಂಘವು ರೂಪಿಸಿದ ಸಾಂಸ್ಕತಿಕ ಮನಸ್ಸುಗಳ ಬದ್ಧತೆ. ಬಂಟ್ವಾಳ ತಾಲೂಕಿನ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘವು ಆರು ದಶಮಾನ ಮೀರಿದ, ಬೌದ್ಧಿಕವಾಗಿ ಪಕ್ವಗೊಂಡ ಸಂಘಟನೆ. ಸಂಘವನ್ನು ನೆನಪಿಸಿಕೊಂಡಾಗ ಸಂಘವನ್ನು ಸಮರ್ಪಣಾ ಭಾವದಿಂದ ಬದುಕಿನ ಅಂಗವಾಗಿ ಸ್ವೀಕರಿಸಿದ ಕೆ. ನಾರಾಯಣ ಹೊಳ್ಳ, ಆನೆಗುಂಡಿ ಗಣಪತಿ ಭಟ್ (ದಿ.), ಹೊಸಹಿತ್ಲು ಮಹಾಲಿಂಗ ಭಟ್ (ದಿ.), ಕೃಷ್ಣ ಮಾಸ್ತರ್ (ದಿ.).. ಮೊದಲಾದ ಹಿರಿಯರ ತನುಶ್ರಮಕ್ಕೆ ಶಿರವು ಬಾಗುತ್ತದೆ.
                ಒಂದು ಸಂಘವು ಗರಿಷ್ಠತಮ ಎಷ್ಟು ಸಂಪನ್ಮೂಲಗಳನ್ನು ಹೊಂದಬಹುದೋ ಅಷ್ಟನ್ನು ಕೈರಂಗಳ ಯಕ್ಷಗಾನ ಸಂಘವು ಹೊಂದಿದೆ. ಅದರಲ್ಲಿ ಯಶ ಕಂಡಿದೆ. ಕಲಾವಿದರನ್ನು ರೂಪಿಸಿದೆ. ಬೌದ್ಧಿಕ ವಿಕಾಸಕ್ಕೆ ಕಮ್ಮಟಗಳನ್ನು ಏರ್ಪಟಿಸಿದೆ. ಬಯಲಾಟ, ತಾಳಮದ್ದಳೆಗಳನ್ನು ಆಯೋಜಿಸಿದೆ. ಸ್ವಂತದ್ದಾದ ವೇಷಭೂಷಣಗಳನ್ನು ಹೊಂದಿತ್ತು. ಯಕ್ಷಗಾನದ ಸಮಗ್ರ ದರ್ಶನವನ್ನು ಹಳ್ಳಿಯಲ್ಲಿ ಪಸರಿಸುವಲ್ಲಿ, ದೂರದೂರಿನ ಕಲಾ ಮನಸ್ಸುಗಳನ್ನು ತನ್ನ ಸೂರಿನಡಿ ತರುವಲ್ಲಿ ಸಂಘದ ಅಜ್ಞಾತ ಶ್ರಮವು ಗುರುತರ.
                ಸಂಘದ ಸ್ಥಾಪನಾ ಕಾಲದಿಂದಲೂ ಸಂಘದ ಒಂದಂಗವಾಗಿದ್ದ ಕೆ. ನಾರಾಯಣ ಹೊಳ್ಳ ಇವರ ಸೇವೆಯನ್ನು ಸಂಘವು ಈಚೆಗೆ ದಾಖಲಿಸಿದೆ. ‘ಧೀಮಂತಎನ್ನುವ ಕೃತಿಯಲ್ಲಿ ಹೊಳ್ಳರ ಸಾಧನೆ ಮತ್ತು ವ್ಯಕ್ತಿತ್ವದ ನುಡಿಹಾರವನ್ನು ಪೋಣಿಸಿದೆ. ಆರು ದಶಕಗಳ ಕಾಲ ಸಂಘಕ್ಕೆ ಬೆನ್ನುನೀಡಿದ ಮಹನೀಯರಲ್ಲೊಬ್ಬರಾದ ಹೊಳ್ಳರನ್ನು ತಲೆಮಾರಿನ ಮನಸ್ಸುಗಳು ಗುರುತಿಸಿ, ಗೌರವಿಸಿದ್ದು ಕಲಾ ಕ್ಷೇತ್ರಕ್ಕೊಂದು ಹೊಸ ಹಾದಿ ತೋರಿದೆ.
                ಕೆ. ನಾರಾಯಣ ಹೊಳ್ಳರು ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ಕೈರಂಗಳಕ್ಕೆ ವೃತ್ತಿ ನಿಮಿತ್ತವಾಗಿ ಬಂದು ನೆಲೆಯಾದ ಬಳಿಕಕೈರಂಗಳ ಹೊಳ್ಳರಾದರು. ಅಧ್ಯಾಪಕರಾಗಿ (1952-1989) ವಿದ್ಯಾರ್ಥಿಗಳನ್ನು ಸಮರ್ಥವಾಗಿ ರೂಪಿಸಿದರು. ಶಿಸ್ತು ಎನ್ನುವುದು ಪದಕೋಶಕ್ಕೆ ಸೀಮಿತವಲ್ಲ, ಅದು ಅನುಷ್ಠಾನಕ್ಕೆ ಇರುವಂತಾದ್ದು ಎಂದು ವೃತ್ತಿ ಬದುಕಿನಲ್ಲಿ ಆಚರಿಸಿ ತೋರಿಸಿದರು. ಬದ್ಧತೆಯ ಬದುಕಿಗೆ ಮಾದರಿಯಾದರು. ಶಿಸ್ತಿಗೆ ಪೂರಕವಾಗಿ ಅವರ ಒಟ್ಟೂ ದೇಹಪೃಕೃತಿಯೂ ಗಂಭೀರ! ಫಕ್ಕನೆ ನೋಡುವಾಗ ತಲೆಬಾಗುವ, ಮಾತು ಮೌನವಾಗುವ ವ್ಯಕ್ತಿತ್ವ. ಮಾತಿಗೆ ತೊಡಗಿದಾಗ ಇಷ್ಟು ಗಂಬೀರ ವ್ಯಕ್ತಿತ್ವದೊಳಗೂ ಸಾತ್ವಿಕ ಭಾವ! ವಿಶ್ವಾಸಕ್ಕೆ ತೆರೆದುಕೊಳ್ಳುವ ಮುಗ್ಧತೆ.
                ಹೊಳ್ಳರು ಕೈರಂಗಳ ಶಾಲೆಗೆ ಆಧ್ಯಾಪಕರಾಗಿ ಬಂದಾಗ ವಿದ್ವಾನ್ ಕಾಂತ ರೈಗಳು ಅಧ್ಯಾಪಕರಾಗಿದ್ದರು. ಎರಡೂ ಯಕ್ಷಮನಸ್ಸುಗಳು ಒಂದಾದುವು. ಕೈರಂಗಳ ಸುತ್ತಮುತ್ತ ತಾಳಮದ್ದಳೆಯ ವಾತಾವರಣದ ಬಿಸಿಯಿದ್ದ ಕಾಲದಲ್ಲೇ ಕಾಂತ ರೈಗಳಿಗೆ ಯಕ್ಷಗಾನದ ತಂಡ ಕಟ್ಟುವ ಬಯಕೆಯಿತ್ತು. ಅವರು ಬೀಜಾಂಕುರ ಮಾಡಿದ ಕನಸನ್ನು ಹೊಳ್ಳರು ನನಸಾಗಿಸಿದರು. 1954ರಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘಕ್ಕೆ ಶ್ರೀಕಾರ. “ಸಂಘವು ಸ್ವಂತ ವೇಷಭೂಷಣಗಳನ್ನು ಹೊಂದಿರುವುದು ಮಾತ್ರವಲ್ಲ ಹವ್ಯಾಸಿ ಸಂಘ ಸಂಸ್ಥೆಗಳಿಗೆ ಬಾಡಿಗೆಗೆ ಕೊಡುತ್ತಿತ್ತು. ಆಗೆಲ್ಲಾ ವೇಷಭೂಷಣಗಳ ಸಂಪೂರ್ಣ ನಿರ್ವಹಣೆಯನ್ನು ಹೊಳ್ಳ ಮಾಸ್ಟ್ರು ಮಾಡುತ್ತಿದ್ದರು,” ಎಂದು ನೆನಪಿಸಿಕೊಳ್ಳುತ್ತಾರೆ, ಸಂಘದ ಕಾರ್ಯದರ್ಶಿ ಚಂದ್ರಹಾಸ ಕಣಂತೂರು.
                ಹೊಳ್ಳರು ವೈದ್ಯರು ಕೂಡಾ! ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಖಾಸಗಿಯಾಗಿ ಕಲಿತು ಅಲ್ಪವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದರು. ಜತೆಗೆ ಕೈಗುಣದ ಪಕ್ವತೆಯೂ ಸೇರಿ ಊರಿನ ವೈದ್ಯರೆಂದೇ ಪರಿಚಿತರಾದರು. ಪೋಸ್ಟ್ಮಾಸ್ತರ್ ಆಗಿ, ಬಿಡುವಿನ ಅವಧಿಯಲ್ಲಿ ಪಡಿತರ ಅಂಗಡಿಯಲಿ ಲೆಕ್ಕ ಪತ್ರ ಬರೆಯವ ಲೆಕ್ಕಿಗನಾಗಿ, ಸ್ವಂತದ್ದಾದ ಧ್ವನಿವರ್ಧಕ ವ್ಯವಸ್ಥೆಯನ್ನು ಹೊಂದಿ ಊರಿಗೆ ಉಪಕಾರಿಯಾದ ಹೊಳ್ಳರ ವ್ಯಕ್ತಿತ್ವ ಮತ್ತು ಆಸಕ್ತಿಗೆ ದಶಬಾಹುಗಳು.
                ಕೈರಂಗಳ ಸಂಘದ ವೇಷಭೂಷಣಗಳು ಆಗ ಹವ್ಯಾಸಿ ಸಂಘಗಳ ಪಾಲಿಗೆ ವರದಾನ. ಹೊಳ್ಳರ ಶಿಸ್ತಿನ ಮುಖದ ಪರಿಚಯ ಶಾಲೆಯಲ್ಲಿ ಮಾತ್ರವಲ್ಲ, ಯಕ್ಷಗಾನ ಕ್ಷೇತ್ರದಲ್ಲೂ ಹಲವರ ಪಾಲಿಗೆ ಆಗಿದೆ. “ಹೊಳ್ಳರ ಮಾರ್ಗದರ್ಶನದಲ್ಲೇ ಚೌಕಿಯ ಎಲ್ಲಾ ಕಲಾಪಗಳು ನಡೆಯುತ್ತಿದ್ದುವು. ಅಂದಿನ ದಿನಗಳಲ್ಲಿ ಹೆಚ್ಚಿನ ಹವ್ಯಾಸಿ ಕಲಾವಿದರು ಸ್ವತಃ ಬಣ್ಣ ಹಚ್ಚಿಕೊಳ್ಳುತ್ತಿರಲಿಲ್ಲ. ಪ್ರಸಾಧನದ ಕೆಲಸವನ್ನು ಹೊಳ್ಳ ಮಾಸ್ಟ್ರು ಸ್ವತಃ ವಹಿಸಿಕೊಳ್ಳುತ್ತಿದ್ದರು. ತನ್ನ ಮುಂದೆ ಕುಳಿತ ಕಲಾವಿದರ ಮುಖಕ್ಕೆ ಬಣ್ಣ, ರೇಖೆಗಳನ್ನು ಹಾಕುತ್ತಿದ್ದಾಗಲೂ ಅವರ ಗಮನ ಇಡೀ ಚೌಕಿಯ ಆಗು ಹೋಗುಗಳ ಕಡೆಗೆ ಇರುತ್ತಿತ್ತು,” ಎನ್ನುತ್ತಾರೆ ಕೆ.ಸದಾಶಿವ.
                ಅರ್ಥದಾರಿ ಪಕಳಕುಂಜ ಶ್ಯಾಮ ಭಟ್ ಹೊಳ್ಳರ ಒಡನಾಟದ ದಿನಗಳನ್ನು ಜ್ಞಾಪಿಸಿಕೊಂಡರುಹೊಳ್ಳರು ಮಿತಭಾಷಿ. ಅವರು ಆಡುವ ಪ್ರತಿ ಮಾತಿಗೂ ತೂಕವಿದೆ. ಸಾಮಾನ್ಯವಾಗಿ ಬಣ್ಣದ ಮನೆಯೊಳಗೆ ಹೆಚ್ಚಿನವರ ಮಾತು ತೂಕ ರಹಿತವಾಗಿರುತ್ತದೆ. ಮಾತ್ರವಲ್ಲ ಅದುಚೌಕಿಯ ಭಾಷೆಎನ್ನುವ ಪ್ರತ್ಯೇಕತೆಗೆ ಒಳಗಾದುದು! ಹೊಳ್ಳರು ಚೌಕಿಯೊಳಗೆ ಇದ್ದಾಗ ಉಳಿದವರ ಮಾತು ಹಾದಿ ತಪ್ಪುತ್ತಿರಲಿಲ್ಲ! ಅವರಂತೂ ಹಗುರವಾಗಿ ಮಾತನಾಡಿದ್ದು ಕಂಡಿಲ್ಲ. ಹೊಗಳಬೇಕಾದಲ್ಲಿ ಹೊಗಳಿ, ತೆಗಳಬೇಕಾದಲ್ಲಿ ತೆಗಳಿ, ‘ನಿಮಗೆ ಬೇಸರವಾದ್ರೂ ಚಿಂತೆಯಿಲ್ಲ. ಇನ್ನು ಮುಂದಕ್ಕಾದರೂ ತಿದ್ದಿಕೊಳ್ಳಿಎನ್ನುವ ಖಂಡಿತವಾದಿ.
                ಅಧ್ಯಾಪಕ ಜಿ.ವೆಂಕಪ್ಪ ಅಸೈಗೋಳಿ ಇವರು ಹೊಳ್ಳರೊಂದಿಗೆ ಬಹುಕಾಲ ಜತೆಗಿದ್ದವರು. ಅವರೆನ್ನುತ್ತಾರೆ - ಹೊಳ್ಳರು ತನ್ನವರ ನೆಮ್ಮದಿಗಾಗಿ ಸದಾ ಚಿಂತಿಸಿ ಸಲಹೆ, ಸೂಚನೆ ನೀಡುತ್ತಿದ್ದರು. ಅವರು ಕಿರಿಯರ ಎದುರಿಗೆ ಚಪಲತೆ ತೋರಿಸಿ ಹಗುರ ಆಗುತ್ತಿರಲಿಲ್ಲ. ಕಠಿಣ ಸಮಸ್ಯೆಗಳಲ್ಲಿ ಪರಿಹಾರ ಕಾಣದೆ ಇದ್ದರೆ ಇನ್ನೊಬ್ಬರನ್ನು ನೋಯಿಸದೆ ತಾನೇ ಮನಸ್ಸಿನಲ್ಲಿ ನೋವನ್ನು ಸಹಿಸಿಕೊಂಡು ಮೌನದಲ್ಲಿರುವುದು ಅವರ ಪ್ರವೃತ್ತಿಯಾಗಿದೆ. ಎಷ್ಟೋ ಬಾರಿ ತಪ್ಪುಗಳನ್ನು ನಿಷ್ಟುರವಾಗಿ ಹೇಳುತ್ತಿದ್ದರು. ಅದನ್ನು ತಿದ್ದಿಕೊಳ್ಳದವರಲ್ಲಿ ಯಾವತ್ತೂ ಕೇಡು ದೃಷ್ಟಿಯಿಂದ ನೋಡುತ್ತಿರಲಿಲ್ಲ.
                ಹೊಳ್ಳರಿಗೆ ಜವಾಬ್ದಾರಿಗಳನ್ನು ಎಳೆದುಕೊಳ್ಳುವ ಸ್ವ-ಭಾವ. ಮೈಮೇಲೆ ಬಂದ ಹೊಣೆಗಾರಿಕೆಯನ್ನು ಗುರಿಮುಟ್ಟಿಸುವ ಛಲ. ಅದು ಬದುಕಿನ ಬದ್ಧತೆ. ಬದುಕನ್ನು ಕಸಿದುಕೊಳ್ಳುವ ಘಟನೆಗಳು ನಡೆದಾಗ ಅಧೀರರಾಗಲಿಲ್ಲ. ಪರಿಸ್ಥಿತಿಗೆ ಅಂಜಿ ವಿಚಾರದೊಳಗೆ ರಾಜಿ ಮಾಡಿಕೊಳ್ಳಲಿಲ್ಲ. ಇಡೀ ಗ್ರಾಮಕ್ಕೆ ಅಧ್ಯಾಪಕನೊಬ್ಬ ಎಷ್ಟು ಪ್ರಭಾವಿಯಾಗಿ ಬೆಳೆಯಬಹುದೋ ಅದನ್ನೂ ಮೀರಿ ಹೊಳ್ಳರು ಬೆಳೆದರು, ಇತರರನ್ನೂ ಬೆಳೆಸಿದರು. ತ್ರಿವಿಕ್ರಮ ಕಾಯದ ನೆರಳಿನಡಿ ಹೊಸ ತಲೆಮಾರು ಊರಿನ ಸಾಂಸ್ಕತಿಕ ಸ್ಪರ್ಶದ ಸ್ಥಳೀಯತೆಯ ಉಳಿವಿಗಾಗಿ ಹೆಗಲು ನೀಡುತ್ತಿದ್ದಾರೆ. ಹೊಸ ತಲೆಮಾರಿಗೆ ದಾಟಿಸಿದ್ದಾರೆ. ಹೊಳ್ಳರ ಮತ್ತು ಹೊಳ್ಳರಂತೆ ದುಡಿದ ಅನೇಕ ಮನಸ್ಸುಗಳಿಗೆ ಊರಿನ ಸಂಘವು ಕೃತಜ್ಞವಾಗಿರುವುದು ಕಲಾ ಮನಸ್ಸಿನ ದ್ಯೋತಕ. ಎಲ್ಲಿ ಕಲಾ ಮನಸ್ಸು ರೂಪುಗೊಳ್ಳುತ್ತದೋ ಅಲ್ಲೆಲ್ಲಾ ಸಂಸ್ಕಾರ, ಸಂಸ್ಕತಿಗಳು ಮಿಳಿತಗೊಳ್ಳುತ್ತಿರುತ್ತದೆ.
                ಸ್ವಂತ ಸೂರಿನಡಿ ನೆಲೆಯಾದ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘಕ್ಕೆ ಹೊಳ್ಳರ ಚಿರಂಜೀವಿ ರಾಜಾರಾಮ ಹೊಳ್ಳ ಸಾರಥ್ಯ ನೀಡಿದ್ದಾರೆ. ಕಾರ್ಯದರ್ಶಿಯಾಗಿ ಚಂದ್ರಹಾಸ ಕಣಂತೂರು ಮತ್ತು ಇತರೆಲ್ಲಾ ಸದಸ್ಯರ ಸಕ್ರಿಯತೆ. ಸಂಘದ ಆಟ, ಕೂಟ, ಕಲಾಪಗಳಲ್ಲಿ ತಾವೆಲ್ಲೂ ಫೋಕಸ್ ಆಗದೆ ಕಲಾವಿದರನ್ನು ಸಿದ್ಧಗೊಳಿಸುವ ಹೊಳ್ಳರ ನಿರ್ಲಿಪ್ತ ಮತ್ತು ಫಲಾಪೇಕ್ಷೆ ರಹಿತ ದುಡಿಮೆಗೆ ಶರಣು. ಇಂತಹ ಧೀಮಂತ ವ್ಯಕ್ತಿತ್ವದ ಹೊಳ್ಳರ ಆಯುಷ್ಯ ವೃದ್ಧಿಯಾಗಲಿ.  ಧೀಮಂತಕೃತಿ ಅವರ ಇಳಿ ವಯಸ್ಸಿಗೆ ಸಂದ ಮಾನ-ಸಂಮಾನ. ಪುಸ್ತಕದ ಶೀರ್ಷಿಕೆಯಂತೆ ವ್ಯಕ್ತಿತ್ವವೂ ಕೂಡಾ

ಪ್ರಜಾವಾಣಿ / ದಧಿಗಿಣತೋ / 26-1-2018



No comments:

Post a Comment