Monday, June 25, 2018

ಸಾಂತಪ್ಪರ ಮೌನದೊಳಗೆ ಬದುಕಿನ ಪ್ರತಿಬಿಂಬ


        ಯಕ್ಷಗಾನದ ಎಲ್ಲಾ ಅಂಗಗಳಲ್ಲಿ ನಿಪುಣನಾದರೆ ಆತ ಸವ್ಯಸಾಚಿ. ಎಲ್ಲರಿಗೂ ಹಾದಿಯನ್ನು ಕ್ರಮಿಸಲು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ಹಾದಿ. ಕೆಲವರು ಪುಂಡುವೇಷದಲ್ಲಿ ಛಾಪು ಒತ್ತಿದರೆ, ಇನ್ನೂ ಕೆಲವರು ಕಿರೀಟದಲ್ಲಿ, ಮತ್ತೂ ಕೆಲವರು ಬಣ್ಣದ ವೇಷಗಳಲ್ಲಿ ತ್ರಿವಿಕ್ರಮ ಹೆಜ್ಜೆಯನ್ನು ಮೂಡಿಸುತ್ತಾರೆ, ಮೂಡಿಸಿದ್ದಾರೆ.
         ಕಡಬ ಸಾಂತಪ್ಪರ ಹಾದಿ ಭಿನ್ನ. ಯಾರೂ ಸಾಗದ, ಸಾಗಲು ಕಷ್ಟವಾಗುವಂತಹ ಪಾತ್ರಗಳನ್ನು ಕಡೆದ ಕಲಾವಿದ. ಶ್ರೀ ಧರ್ಮಸ್ಥಳ ಮೇಳದ ಆಟ ನೋಡಿದವರಿಗೆಲ್ಲಾ ಸಾಂತಪ್ಪರು ಪರಿಚಿತ. ಪೋಷಕ ಪಾತ್ರಗಳನ್ನು ರಂಗದಲ್ಲಿ ಕಾಣಿಸಿದ, ಅದಕ್ಕೆ ಮಾನ ತಂದ ವೇಷಧಾರಿ.
         ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಬರುವಬ್ಯಾರಿಪಾತ್ರವು ಸಾಂತಪ್ಪರಿಗೆ ತಾರಾಮೌಲ್ಯ ತಂದಿತ್ತ ಪಾತ್ರ. ಆದರೆ ಪಾತ್ರವು ಸಾಂತಪ್ಪರಿಂದಾಗಿ ಮೆರೆಯಿತು. ಅವರ ಪಾತ್ರ ರಂಗಕ್ಕೆ ಬಂದಾಗ ಅದು ಪಾತ್ರವಲ್ಲ, ಸಹಜ! ಅದು ಅಣಕವಲ್ಲ, ಅದರಲ್ಲಿ ಮತ ಸಿದ್ಧಾಂತಗಳ, ನಂಬಿಕೆ ನಡವಳಿಕೆಗಳ ಪ್ರತಿಪಾದನೆಯಿರುತ್ತಿತ್ತು. ಇಂತಹ ಪಾತ್ರಗಳನ್ನು ಕಟ್ಟಲು ಸಾಮಾಜದ ಮಧ್ಯೆ ಇರುವ ವ್ಯವಸ್ಥೆಯನ್ನು ನೋಡಿದ್ದಾರೆ, ವ್ಯಕ್ತಿಗಳನ್ನು ಮಾತನಾಡಿಸಿದ್ದಾರೆ. ಆಚಾರ-ವಿಚಾರಗಳನ್ನು ಅಭ್ಯಸಿಸಿದ್ದಾರೆ.
          ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆಯಲ್ಲಿ ಕಡಬ ಸಾಂತಪ್ಪ ಮತ್ತು ಶೀನ ಆಚಾರ್ ಇವರಿಬ್ಬರಅಬ್ಬು, ಸೇಕುಜತೆಗಾರಿಕೆ ಅನನ್ಯ. ಸಾಂತಪ್ಪರು ನಿರ್ವಹಿಸಿದ ಪೋಷಕ ಪಾತ್ರಗಳಿಗೆಪರ್ಯಾಯಇಲ್ಲ. ಅವರ ವೇಷಕ್ಕೆ ಅವರದೇ ಮಾನದಂಡ. ಹಾಗಾಗಿ ಅವರು ನಿರ್ವಹಿಸುತ್ತಿದ್ದ ಪಾತ್ರಗಳನ್ನು ಯಾರೇ ನಿರ್ವಹಿಸಿದರೂ ಅದು ಕೈಗೆಟುಕದ ಶಿಲ್ಪ.
ಸಾಂತಪ್ಪರು ಓರ್ವಪ್ರಮುಖಪೋಷಕ ಪಾತ್ರಧಾರಿ. ಪಾತ್ರಗಳಿಗೆ ಎತ್ತರದ ಸ್ಥಾನ. ಸಹಸ್ರ ಕವಚಮೋಕ್ಷ ಪ್ರಸಂಗದನರನಾರಾಯಣರು’, ದೇವಿ ಮಹಾತ್ಮೆಯಸುಗ್ರೀವ’, ಕಾಯಕಲ್ಪ ಪ್ರಸಂಗದಚ್ಯವನ’, ಮಹಾಬ್ರಾಹ್ಮಣ ಪ್ರಸಂಗದವಸಿಷ್ಠ’......ಪಾತ್ರಗಳು ರಂಗದಲ್ಲಿ ಗುರುತಿಸಿವೆ.
                ಸಾಂತಪ್ಪರು ಎಳವೆಯಲ್ಲೇ ಯಕ್ಷಗಾನವನ್ನು ನೆಚ್ಚಿಕೊಂಡವರಲ್ಲ. ತನ್ನ ಮೂವತ್ತೈದನೇ ವಯಸ್ಸಿನ ನಂತರ ಬಣ್ಣದ ನಂಟು. ಅದಕ್ಕಿಂತ ಮೊದಲು ಜವುಳಿ ವ್ಯಾಪಾರ, ದರ್ಜಿವೃತ್ತಿ, ಸೋಡಾ ಪ್ಯಾಕ್ಟರಿ, ಕಟ್ಲೇರಿ ಅಂಗಡಿ...ಹೀಗೆ ಬದುಕಿಗಾಗಿ ನಿತ್ಯ ಹೊಟ್ಟೆಪಾಡು.
                ಪುತ್ತೂರು ತಾಲೂಕಿನ ಕಡಬದವರು. ನಿತ್ಯಹಬ್ಬವಾಗಿರುತ್ತಿದ್ದ ತಾಳಮದ್ದಳೆಗಳ ಕಂಪಿನಲ್ಲಿ ಬೆಳೆದ ಸಾಂತಪ್ಪರು ಯಕ್ಷಗಾನ ನಾಟಕದ ಮೂಲಕ ರಂಗಪ್ರವೇಶಿಸಿದರು. ರೂಪ, ಸ್ವರ, ಆಳಂಗಗಳು ಸ್ತ್ರೀವೇಷಕ್ಕೆ ಸೂಕ್ತವಾದುದರಿಂದ ಹೆಚ್ಚಾಗಿ ಸ್ತ್ರೀವೇಷಗಳಲ್ಲಿ ರಂಗದಲ್ಲಿ ಕಾಣಿಸಿಕೊಂಡರು. ಬಹುಬೇಗ ಪ್ರಸಿದ್ದಿ ಅವರ ಬೆನ್ನಟ್ಟಿತು!
                ನಾಟಕದ ಸ್ತ್ರೀವೇಷ ಎಷ್ಟು ಜನಪ್ರಿಯವಾಯಿತೆಂದರೆ, ಯಕ್ಷಗಾನ ಮೇಳಕ್ಕೆ ಇವರು ಬೇಡಿಕೆಯ ಕಲಾವಿದರಾದರು! ಕೂಡ್ಲು ಮೇಳದ ಸಂಚಾಲಕರಾದ ಕೆ.ವಿ.ಖಾಂದಿಲ್ಕರ್ರು ತನ್ನ ಮೇಳಕ್ಕೆ ಸಾಂತಪ್ಪರನ್ನು ಆಹ್ವಾನಿಸಿದರು. ಯಕ್ಷಗಾನ ಪ್ರವೇಶಕ್ಕೆ ರೂಪ, ಅಭಿಯನವೇ ಮುಖ್ಯ ಕಾರಣವಾಯಿತು.
                ಮೇಳದಲ್ಲಿದ್ದ ಶಂಕರನಾರಾಯಣ ಸಾಮಗರು, ವೇದಮೂರ್ತಿ ವೆಂಕಟ್ರಮಣ ಭಟ್, ಉದ್ಯಾವರ ಬಸವ....ಇವರೊಂದಿಗಿನ ಕ್ಷಣಕ್ಷಣದ ಮೇಳಬದುಕು ಸಾಂತಪ್ಪರಿಗೆ ಪಾಠವಾಯಿತು.  ಹಿರಿಯ ಕಲಾವಿದರ ನಾಟ್ಯ, ಅಭಿನಯ, ಆರ್ಥಗಾರಿಕೆಯನ್ನು ನೋಡಿಯೇ ಅಭ್ಯಸಿಸಿದರು. ವೇಷದ ಸೌಂದರ್ಯ, ಮೇಳದ ಯಜಮಾನರ ಸ್ನೇಹಚಾರದಿಂದಾಗಿ, ಮೇಳದಲ್ಲಿ ಬೇರೆ ಮುಖ್ಯ ಸ್ತ್ರೀಪಾತ್ರಧಾರಿಯಿದ್ದರೂ ಇವರಿಗೇ ಮುಖ್ಯ ಪಾತ್ರಗಳು ಲಭ್ಯವಾಗುತ್ತಿದ್ದವು.
                ಮುಂದೆ ಮುಚ್ಚೂರು, ಇರಾ, ಸುರತ್ಕಲ್ ಮೇಳಗಳಲ್ಲಿ ಹನ್ನೊಂದು ವರುಷದ ತಿರುಗಾಟ. ಮಧ್ಯೆ ರಾಜನ್ ಅಯ್ಯರ್ರಿಂದ ಡಾನ್ಸ್ ಅಭ್ಯಾಸ. ಅಷ್ಟಿಷ್ಟು ತಿಳಿದಿದ್ದ ಯಕ್ಷಗಾನ ನಾಟ್ಯಕ್ಕೆ ಡಾನ್ಸ್ ಹೆಜ್ಜೆಗಳು ಸರಿತಾಳೆಯಾಗಿ ಪಾತ್ರಗಳಿಗೊಂದು ಹೊಸ ಸ್ವರೂಪ ಬಂದುವು. ‘ಅಂಬೆ, ಮೇನಕೆ, ದಮಯಂತಿ, ಸುಭದ್ರೆ, ರುಕ್ಮಿಣಿ’....ಪಾತ್ರಗಳು ಮೆಚ್ಚುಗೆ ಗಳಿಸಿದುವು. ಮುಂದೆ ಶ್ರೀ ಧರ್ಮಸ್ಥಳ ಮೇಳದಲ್ಲಿ ಇಪ್ಪತ್ತೆಂಟು ವರುಷಗಳ ನಿರಂತರ ವ್ಯವಸಾಯ. ಕಾಯ ಮಾಗುವಾಗ ಮಾಗಿದ ಪಾತ್ರಗಳನ್ನು ಮಾಡತೊಡಗಿದರು.
                ವೇಷಭೂಷಣಗಳ ಬಣ್ಣಗಳ (ಜೌಳಿ) ಹೊಂದಾಣಿಕೆಯಲ್ಲಿ ಸಾಂತಪ್ಪರದು ಆಳ ಅನುಭವ. ಸುರತ್ಕಲ್, ಕುಂಡಾವು ಮೇಳಗಳಲ್ಲಿದ್ದಾಗಲೇ ಯಕ್ಷಗಾನದ ವೇಷಭೂಷಣಗಳನ್ನು ಸಿದ್ಧಪಡಿಸುತ್ತಿದ್ದರು. ನಿವೃತ್ತಿಯ ನಂತರ (1991) ಅದೇ ಅವರ ಬದುಕಿಗೆ ದಾರಿಯಾಯಿತು. ಶ್ರೀ ಧರ್ಮಸ್ಥಳ ಮೇಳದ ವೇಷಭೂಷಣಗಳ ತಯಾರಿಯಲ್ಲಿ ಇವರ ಪಾಲು ಹೆಚ್ಚಿನದು.
                ಆರ್ಥಿಕವಾಗಿ ಸಾಂತಪ್ಪರು ಧನಿಕರಾಗಿದ್ದಿರಲಿಲ್ಲ. ಹಾಗೆಂತ ತನ್ನ ಸಾಂಪತ್ತಿಕ ದುಃಸ್ಥಿತಿಗೆ ಮರುಗಿದವರೂ ಅಲ್ಲ. ಸಾಮಾಜಿಕವಾಗಿ ಹಿಂಸೆ ಕೊಡುವ ಮನಃಸ್ಥಿತಿಯವರಲ್ಲ. ‘ತನ್ನ ಬದುಕಿಗೆ ತಾನೇ ಕಾರಣನಾಗಬೇಕೆನ್ನುವ ಛಲವುಳ್ಳವರು. ದುಡಿದು ತಿನ್ನಬೇಕೆಂದ ಛಾತಿಯುಳ್ಳವರು. ಪಾರಂಪರಿಕ ವೇಷಭೂಷಣಗಳನ್ನು ಹೊಂದಿರುವ ಶ್ರೀ ದೇವಕಾನ ಕೃಷ್ಣ ಭಟ್ಟರೊಂದಿಗೆ ಕಲಾ ಕೈಂಕರ್ಯದಲ್ಲಿ ಬಹುಕಾಲ ತೊಡಗಿಸಿಕೊಂಡಿದ್ದರು.
                ಸಾಂತಪ್ಪರ ಕಲಾಕೊಡುಗೆಗಳನ್ನು ಗುರುತಿಸಿ ಕರ್ನಾಟಕ ಸರಕಾರವು 1999ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಉಡುಪಿ ಕಲಾರಂಗವು ಅವರನ್ನು ಗೌರವಿಸಿದೆ. ‘ಪಾತಾಳ ಪ್ರಶಸ್ತಿಯಿಂದ ಪುರಸ್ಕøತರು. ಯಾವುದೇ ಪುರಸ್ಕಾರ ಬರಲಿ, ನಿರ್ಲಿಪ್ತ ಭಾವವು ಬದುಕು ಕಲಿಸಿದ ಪಾಠ.
         ಪಾತಾಳ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ್ದೆ. “ಕಲಾವಿದನ ವೇಷವನ್ನು ಮೆಚ್ಚಿಕೊಳ್ಳುತ್ತಾರೆ. ಸಂಮಾನ ಮಾಡುತ್ತಾರೆ. ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸುತ್ತಾರೆ. ಅವೆಲ್ಲಾ ಕ್ಷಣಿಕ ಸಂತೋಷದ ಅವತರಣಿಕೆಗಳು. ಕಲಾವಿದ ಸೋತಾಗ, ರಂಗದಿಂದ ಖಾಯಂ ಆಗಿ ನಿರ್ಗಮಿಸಿದಾಗ ಎಷ್ಟು ಮಂದಿ ಅಭಿಮಾನಿಗಳು ಆಧರಿಸುತ್ತಾರೆ? ಲೆಕ್ಕ ತೆಗೆದರೆ ಅಲ್ಲೋ ಇಲ್ಲೋ ಅಷ್ಟೇ. ನನ್ನ ಇಳಿ ವಯಸ್ಸಿಗೆ ದೇವಕಾನದವರು ಆಸರೆಯಾಗಿದ್ದಾರೆ. ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನಿಗೆ ತೋರಬೇಕಾದ ಹಾದಿ. ಮಾಡಬೇಕಾದ ಉಪಕಾರ,” ಎನ್ನುವಾಗ ಅವರ ಕಣ್ಣು ತೋಯ್ದಿತ್ತು. ಕಲಾವಿದನ ಸಂಕಟವು ಕಣ್ಣೀರಿನ ಮೂಲಕ ಕಪೋಲದಲ್ಲಿ ಹರಿದಿತ್ತು.
         ಆ ಕಣ್ಣೀರಿನಲ್ಲಿ ಸಾಂತಪ್ಪರ ಬದುಕಿನ ಪ್ರತಿಬಿಂಬವಿತ್ತು. ದುಃಖದ ದಿನಗಳ ಚಿತ್ರವಿತ್ತು. ಕಾಯಕಷ್ಟದ ಪ್ಲಾಶ್ಬ್ಯಾಕ್ ಇತ್ತು. ‘ಹೆಣ್ಣು ಅತ್ತರೆ ಮನೆಗೆ ಬೇರೆ ಶಾಪ ಬೇಕಿಲ್ಲ’, ಅಲ್ಲಿಲ್ಲಿ ಓದಿದ ನೆನಪು. ಇದನ್ನೇ ಕಲಾವಿದನಿಗೆ ಸಮೀಕರಿಸಿ - ‘ಕಲಾವಿದ ಅತ್ತರೆ ಕಲೆಗೆ ತೊಂದರೆಯಿಲ್ಲ, ಆದರೆ ಕಲಾಭಿಮಾನಿಗಳು ಇದ್ದೇನು ಪ್ರಯೋಜನ?’ ಅಲ್ವಾ.
          1999ರಲ್ಲಿ ಎಡನೀರು ಶ್ರೀಮಠದಲ್ಲಿಪಾತಾಳ ಪ್ರಶಸ್ತಿಸ್ವೀಕಾರ ಮಾಡಿದ ನಂತರಶೂನ್ಯವೇಳೆಯಲ್ಲಿ ಅವರನ್ನು ಮಾತನಾಡಿಸಿದೆ. ‘ಸಾಂತಪ್ಪಣ್ಣಾ, ಕ್ಷೇತ್ರ ಮಹಾತ್ಮೆಯ ನಿಮ್ಮ ಯವನನ ಪಾತ್ರವನ್ನು ತುಂಬಾ ಪರಿಣಾಮಕಾರಿಯಾಗಿ ಮಾಡುತ್ತಿದ್ದಿರಿ. ಅದನ್ನು ಬೇರಾರು ಮಾಡಿದರೂ ನೀವು ಮಾಡಿದಂತೆ ಆಗುವುದಿಲ್ಲ,” ಎಂದಾಗ ಮುಗುಳ್ನಕ್ಕಿದ್ದರಷ್ಟೇ.
          ಸ್ವಲ್ಪ ಹೊತ್ತಿನ ಬಳಿಕನೀವು ಮಾತಿಗೆ ತೊಡಗಿದಾಗ ಸುಮ್ಮನಿದ್ದೆ. ಕಳೆದ ರಂಗದ ದಿನಗಳೆಲ್ಲವನ್ನೂ ಮರೆಯಲು ಅಭ್ಯಾಸ ಮಾಡುತ್ತಿದ್ದೇನೆ,” ಎಂದರು. ಇಷ್ಟರಲ್ಲೇ ಕಡಬ ಸಾಂತಪ್ಪರ ಅಂತರಂಗವನ್ನು ಅರ್ಥ ಮಾಡಿಕೊಳ್ಳಬಹುದು.
           ಸಾಂತಪ್ಪರಂತೆ ಜೌಳಿಯನ್ನು ಹೊಲಿಯುವುದರಲ್ಲಿ, ವರ್ಣ ವಿನ್ಯಾಸದಲ್ಲಿ ಇನ್ನೊಬ್ಬರನ್ನು ಕಂಡಿಲ್ಲ,” ಎಂದಿದ್ದ ದೇವಕಾನ ಕೃಷ್ಣ ಭಟ್ಟರು ಕಡಬ ಸಾಂತಪ್ಪರ ವೃತ್ತಿ ಕೌಶಲ, ಜಾಣ್ಮೆ, ಜ್ಞಾನ ಮತ್ತು ಬದುಕಿನ ಬದ್ಧತೆಯ ಕೆಲವು ಕ್ಷಣಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಸಾಂತಪ್ಪರೀಗ ರಂಗದಿಂದ ದೂರ. ಸಮಾಜದಿಂದ ದೂರ. ಏಕಾಂತ ಬದುಕು. ಮೌನದೊಳಗೆ ಜಾರಿದ ಬದುಕು.
          ಕಲಾವಿದನ ನಿವೃತ್ತಿಯ ನಂತರ ಅಭಿಮಾನಿಗಳು ದೂರವಾಗುತ್ತಾರೆ. ರಂಗ ದೂರ ಮಾಡುತ್ತದೆ. ಬಣ್ಣದ ಮನೆ ಅಪರಿಚಿತವಾಗುತ್ತದೆ. ಬಂಧುಗಳೊಂದಿಗಿನ ಸ್ನೇಹ-ಬಂಧ ಸಡಿಲವಾಗುತ್ತದೆ. ನೆನಪುಗಳೂ ಸಿಹಿಯಾಗುವ ಬದಲು ಕಹಿಯಾದರೆ ಅಂತಹ ಬದುಕು ಹೇಗಿರಬಹುದು

(ಕಡತ ಚಿತ್ರ : ಯಜ್ಞ ಮಂಗಳೂರು)
Prajavani / ದಧಿಗಿಣತೋ / 4-5-2018


No comments:

Post a Comment