Thursday, September 3, 2020

ಪದ್ಯಾಣ - ‘ಪದಯಾನ' - ಎಸಳು 39


 ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ -  (ಎಸಳು 39)

ನನ್ನಪ್ಪ ಹೀಗೆ...!

ಲೇ: ಕಾರ್ತಿಕೇಯ ಪದ್ಯಾಣ

(ಪದ್ಯಾಣರ ಪುತ್ರ)

          ಯಕ್ಷಗಾನವನ್ನು ಹುಟ್ಟಿನಿಂದಲೇ ನೋಡುತ್ತಾ ಬೆಳೆದು ಬಂದವನು. ತಂದೆಯೊಂದಿಗೆ ಆಟ, ಕೂಟಗಳಿಗೆ ಹೋದರೂ ಮಕ್ಕಳಾಟಿಕೆಯಿಂದಾಗಿ ಎಂಜಾಯ್ ಮಾಡಿಕೊಳ್ಳುತ್ತಿದ್ದೆ ಅಷ್ಟೆ.

          ನನಗೆ ಕಾರು ಚಾಲನೆ ಇಷ್ಟ. ತಂದೆಯವರು ಯಕ್ಷಗಾನಕ್ಕೆ ಹೋಗುವಾಗ ಅವರಿಗೆ ಡ್ರೈವರ್ ನಾನಾಗುತ್ತಿದ್ದೆ. ಹೀಗೆ ಹೋಗುತ್ತಾ ಹೋಗುತ್ತಾ ಯಕ್ಷಗಾನದ ಒಲವು ಮೂಡಿತು. ಅಲ್ಲಿನ ಹಾಸ್ಯ ಸನ್ನಿವೇಶ ಇಷ್ಟವಾಯಿತು. ಹಿರಿಯ ವೇಷಧಾರಿಗಳ ಮಾತಿಗೆ ಕಿವಿಯಾಗುತ್ತಿದ್ದೆ. ನಿಧಾನವಾಗಿ ಹಿಮ್ಮೇಳದತ್ತ ಒಲವು ವಾಲಿತು.

          ಯಾವುದೇ ಕ್ಷೇತ್ರಕ್ಕೆ ಹೋಗಲಿ, ಪದ್ಯಾಣ ಅಂದರೆ ಸಾಕು, ಸಿಗುವ ಗೌರವವೇ ಬೇರೆ. ನಿನಿಗೆ ಪದ್ಯಾಣ ಗಣಪತಿ ಭಟ್ ಏನಾಗಬೇಕು ಎಂಬ ಪ್ರಶ್ನೆಯನ್ನು ನೂರಾರು ಬಾರಿ ಎದುರಿಸಿದ್ದೆ. ಅವರ ಮಗ ಅಂದಾಗ ಅರ್ಹತೆಗೆ ಮೀರಿದ ಗೌರವವನ್ನು ಪಡೆದಿದ್ದೆ! ಇದು ಮನೆತನದ ಹಿರಿಮೆ. ಸಮಾಜದಲ್ಲಿ ಅವರು ಪಡೆದ ಸ್ಥಾನ, ಗೌರವ ಕ್ರಮೇಣ ಅರ್ಥವಾಗತೊಡಗಿತು.

          ನಾವೆಲ್ಲಾ ಆಗ ಚಿಕ್ಕವರು. ತಂದೆಯವರು ಸುರತ್ಕಲ್ ಮೇಳದ ತಿರುಗಾಟದಲ್ಲಿದ್ದಾಗ ಮನೆಗೆ ಬರುವುದೇ ಅಪರೂಪ. ಮನೆವಾರ್ತೆಯನ್ನು ಸಮರ್ಥವಾಗಿ ಅಮ್ಮ ನಿಭಾಯಿಸುತ್ತಿದ್ದರು. ಅಪ್ಪನ ಸ್ಥಾನದ ಶೂನ್ಯತೆ ಬಾರದಂತೆ ನನ್ನನ್ನೂ, ಅಣ್ಣನನ್ನೂ ಸಾಕಿದ್ದರು. ಪ್ರಾಥಮಿಕ ಶಾಲಾ ಕಲಿಕೆಯ ಹಂತದಲ್ಲಿ ಅಪ್ಪನ ಮುಖ ನೋಡಿದ್ದೇ ಕಡಿಮೆ!

          ಮನೆಯ ಜವಾಬ್ದಾರಿ, ಮಕ್ಕಳ ಪಾಲನೆಯನ್ನು ಅಮ್ಮ ಒಬ್ಬರೇ ನಿಭಾಯಿಸಿದ್ದಾರೆ. ಕಷ್ಟವನ್ನು ಒಂದಿನವೂ ಹೇಳಿಕೊಂಡವರಲ್ಲ. ಅಪರೂಪಕ್ಕೆ ಮನೆಗೆ ಬರುತ್ತಿದ್ದ ತಂದೆಯನ್ನು ಸರಿಯಾಗಿ ಮಾತನಾಡಿಸಲೂ ಅವರಿಗೆ ಸಮಯ ಸಾಕಾಗುತ್ತಿರಲಿಲ್ಲ. ತಂದೆಯವರು ಹಗಲು ನಿದ್ರಿಸುವಾಗ ನಿದ್ರೆಗೆ ಭಂಗ ಆಗದಂತೆ ಅಮ್ಮ ನೋಡಿಕೊಳ್ಳುತ್ತಿದ್ದರು.

          ಎಷ್ಟೆಷ್ಟೊ ಮಂದಿ ಹಿರಿಯ ಕಲಾವಿದರು ತಾರಾಮೌಲ್ಯ ಗಳಿಸಿರುತ್ತಾರೆ. ಅವರಿಗೆ ಸೀಮಿತ ಗಳಿಕೆಯಲ್ಲಿ ಸ್ವಂತದ್ದಾದ ಮನೆಯನ್ನು ಹೊಂದಿಸಿಕೊಳ್ಳಲು ಪರದಾಡುವುದನ್ನು ನೋಡಿವೆ. ನಮ್ಮ ಸ್ಥಿತಿಯೂ ಹಾಗಿತ್ತು. ಆದರೆ ಅಮ್ಮನ ಛಲ ಮತ್ತು ಯತ್ನ, ತಂದೆಯವರ ಸಹಕಾರದಿಂದ ಸ್ವಂತದ್ದಾದ ‘ಗಂಧರ್ವ ನಿಲಯ’ವನ್ನು ಹೊಂದಿದ ಭಾಗ್ಯಶಾಲಿಗಳು ನಾವು.

          ಕಲಾವಿದನ ಆದಾಯ, ಸಮಯ ತುಂಬಾ ಕಡಿಮೆ. ಅವರೆಡನ್ನು ಜಾಣ್ಮೆಯಿಂದ ನಿಭಾಯಿಸಿದ ಅಮ್ಮ, ರಿಯಲಿ ಗ್ರೇಟ್. ತಂದೆಯ ಎಲ್ಲಾ ಅಭಿವೃದ್ಧಿ, ಕೀರ್ತಿಯ ಹಿಂದೆ ಅಮ್ಮನ ಕೊಡುಗೆ ಸಿಂಹಪಾಲು. ಜತೆಗೆ ಅಪ್ಪನಿಗೆ ತನ್ನ ವೃತ್ತಿಯಲ್ಲಿದ್ದ ಪ್ರೀತಿ, ಬದ್ಧತೆ. ಪ್ರತಿಫಲಾಪೇಕ್ಷೆಯಿಲ್ಲದ ಸ್ವ-ಭಾವ.

          ವರುಷಕ್ಕೊಮ್ಮೆ ಹೊಸನಗರ ಮೇಳದ ಆಟ ಊರಲ್ಲಿ ಆದಾಗ ಕಲಾವಿದರಿಗೆ ಮನೆಯೇ ಬಿಡಾರ. ಅಮ್ಮನಿಗೆ ಅವರೆಲ್ಲರ ಆತಿಥ್ಯದ ಹೊಣೆ. ಮೃಷ್ಟಾನ್ನ ಭೋಜನ ಮಾಡಿ ಬಡಿಸುತ್ತಿದ್ದರು. ಕಲಾವಿದನ ಹೆಂಡತಿಯಾಗಿ, ಇನ್ನೊಬ್ಬ ಕಲಾವಿದನ ಬವಣೆಯನ್ನು ಹತ್ತಿರದಿಂದ ಅರಿತ ಅಮ್ಮನಿಗೆ ಕಲಾವಿದರ ಆತಿಥ್ಯದಲ್ಲಿ ಖುಷಿಯಿದೆ. ಅವರ ಕಷ್ಟಗಳಿಗೆ ಮರುಗುತ್ತಾರೆ.

          ಅಮ್ಮನಿಗೆ ಊರಲ್ಲಿ ತುಂಬು ಗೌರವ. ಸುತ್ತಮುತ್ತ ಜರಗುವ ಯಾವುದೇ ಕಾರ್ಯಕ್ರಮವಿರಲಿ ಅವರ ಕೈಯಿಂದಾದಷ್ಟು ದೇಣಿಗೆ, ಪ್ರೋತ್ಸಾಹ ನೀಡುತ್ತಾರೆ. ಅದರಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾರೆ. ತನ್ನದೇ ಒಂದು ಭಜನಾ ತಂಡವನ್ನು ಕಟ್ಟಿದ್ದಾರೆ. ಯುವತಿಯರನ್ನು ನಾಚಿಸುವಂತೆ ಕಾರು, ಸ್ಕೂಟರ್ ಚಲಾವಣೆ ಮಾಡುವ ಅಮ್ಮನ ಕುರಿತು ಎಷ್ಟು ಹೇಳಿದರೂ ಕಡಿಮೆಯೇ.

          ಅಪ್ಪ ಸಹೃದಯಿ. ಕೊಡುಗೈ ದಾನಿ. ಕೆಲಸದವರೂ ಅವರಿಗೆ ಮನೆಯ ಸದಸ್ಯರಂತೆ. ಬಹುಬೇಗ ನಂಬುವ ಗುಣ. ಯಾರೇ ಬರಲಿ, ಬರಿಗೈಯಲ್ಲಿ ಕಳುಹಿಸರು. ತೋರಿಕೆ ಪ್ರೀತಿಯ ಮುಖವಾಡ ತಂದೆಯಲ್ಲಿಲ್ಲ. ಆ ಪ್ರೀತಿಯ ಗಾಢತೆಯು ಮನೆಯವರಿಗೆ ಕಾಣಿಸುತ್ತದೆ. ಸಾಕುಪ್ರಾಣಿಗಳೆಂದರೆ ಇಷ್ಟ. ಅವುಗಳ ಮೇಲಿನ ಪ್ರೀತಿ, ಸ್ಪಂದನ ವಿಚಿತ್ರವಾಗಿ ಕಾಣಿಸುತ್ತದೆ.

          ಮನೆಯಲ್ಲಿದ್ದಾಗ ಅವರು ಭಾಗವತಿಕೆಯನ್ನು ನಿರಂತರ ಅಭ್ಯಾಸ ಮಾಡುತ್ತಾರೆ. ಬೇಸಿಗೆಯಿಡೀ ತಿರುಗಾಟ ಮಾಡಿದ ಭಾಗವತರಿಗೆ ಅಭ್ಯಾಸ ಯಾಕೆ? ಅಂತ ನನಗೆ ತೋರಿದ್ದೂ ಇತ್ತು. ಹಲವಾರು ಪ್ರಸಂಗಗಳನ್ನು ರಂಗಕ್ಕೆ ಬೇಕಾದಂತೆ ಪರಿಷ್ಕರಿಸಿ, ಹಸ್ತಪ್ರತಿಯನ್ನು ಮಾಡಿಟ್ಟುಕೊಳ್ಳುತ್ತಾರೆ. ಪುಸ್ತಕಗಳಿಗೆಲ್ಲಾ ಕ್ರಮಸಂಖ್ಯೆ ಕೊಟ್ಟು ಅಚ್ಚುಕಟ್ಟಾಗಿ ಜೋಡಿಸಿಟ್ಟುಕೊಳ್ಳುತ್ತಾರೆ.

          ಪುಸ್ತಕದ ಸ್ಟಾಂಡ್, ಜಾಗಟೆ, ಹಾರ್ಮೋನಿಯಂ ಮತ್ತು ಅವರ ಬ್ಯಾಗ್ ಅವರಿಗೆ ಸರ್ವಸ್ವ. ಅದರ ಹೊರತು ಬೇರೆ ಯಾವ ವಸ್ತುವಿನಲ್ಲೂ ಮೋಹವಿಲ್ಲ. ಉಡುವ ಬಟ್ಟೆ, ತೊಡುವ ಆಭರಣಗಳನ್ನು ಅಮ್ಮ, ಅಣ್ಣ ಒತ್ತಾಯದಿಂದ ಧರಿಸುವಂತೆ ಒತ್ತಾಯಿಸುತ್ತಾರೆ. ಆ ವಿಚಾರದಲ್ಲಿ ಮನೆಯಲ್ಲಿ ಗಲಾಟೆಯೋ.. ಗಲಾಟೆ!  ಅಪ್ಪನಿಗೆ ಅಮ್ಮನೆಂದರೆ (ನನ್ನ ಅಜ್ಜಿ) ಪ್ರೀತಿ. ಅವರೊಡನೆ ಹೆಚ್ಚು ಹೊತ್ತು ಕಳೆಯುತ್ತಿದ್ದರು. ಸುತ್ತಮುತ್ತಲಿನ ಯಕ್ಷಗಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು.

          ಪದ್ಯಾಣರು ಸಮರ್ಥ ಭಾಗವತ ಎಂದು ಎಲ್ಲರೂ ಹೇಳುವಾಗ ಮುಖಮುಖ ನೋಡುತ್ತಿದ್ದೆ. ಅದರ ಅರ್ಥ ತಿಳಿಯುತ್ತಿರಲಿಲ್ಲ. ಕ್ರಮೇಣ ಮನವರಿಕೆಯಾಗುತ್ತಾ ಬಂತು. ಕಲ್ಯಾಣಿ, ವಾಸಂತಿ, ಮೋಹನ, ಮಾಂಡ್, ವೃಂದಾವರ ಸಾರಂಗ್.. ರಾಗಗಳು, ಆಕರ್ಷಕ ಸ್ವರ ಸಂಚಾರ, ತುಂಬು ಶಾರೀರಗಳು ಮನಮುಟ್ಟುತ್ತಿದ್ದುವು. ಹಲವಾರು ಸಂಗೀತ ವಿದ್ವಾಂಸರು ಭಾಗವತಿಕೆಯನ್ನು, ರಾಗಸಂಚಾರಗಳನ್ನು ಮೆಚ್ಚಿ ಹರಸಿದುದನ್ನು ನೋಡಿದ್ದೇನೆ.

          ಅವರು ವೀಳ್ಯ ಪ್ರಿಯ. ಅದುವೇ ಪ್ರಾಣ, ತ್ರಾಣ. ಈಚೆಗೆ ಸ್ವರಕ್ಕೆ ತೊಂದರೆಯಾದಾಗ ವೀಳ್ಯ ಬಿಡುವಂತೆ ವೈದ್ಯರು ಸೂಚಿಸಿದರು. ಮುಂದುವರಿಸಿದರೆ ಸ್ವರಕ್ಕೆ ಸಂಚಕಾರವಾದೀತು ಎಂದೂ ಎಚ್ಚರಿಸಿದರು.  ಆ ಕ್ಷಣವೇ ಭೀಷಣ ಪ್ರತಿಜ್ಞೆ. ವೀಳ್ಯಕ್ಕೆ ವಿದಾಯ. ತನ್ನ ಹಳೆ ಸ್ವರ ಇನ್ನು ಬರುವುದಿಲ್ಲವಲ್ಲಾ ಎಂಬ ಖೇದ ತಂದೆಯಲ್ಲಿದೆ.

          ತಂದೆಗೆ ಅರುವತ್ತರ (2016) ಖುಷಿ. ಆ ಸಂಭ್ರಮವನ್ನು ಹಂಚಿಕೊಳ್ಳುವುದು ನಮಗೆಲ್ಲಾ ಸಂಭ್ರಮ. ಬದುಕು ಕೊಟ್ಟ ಅಪ್ಪ, ಅದನ್ನು ನೀರೆರೆದು ಪೋಶಿಸಿದ ಅಮ್ಮ, ಬೆನ್ನು ತಟ್ಟುವ ಅಣ್ಣ-ಅತ್ತಿಗೆ - ಈ ಯೋಗವು ನನಗೆ ಭಾಗ್ಯವಾಗಿ ಪರಿಣಮಿಸಿದೆ. ಇದಕ್ಕಿಂತ ಹೆಚ್ಚಿನ ಖುಷಿ ಇನ್ನೇನು ಬೇಕಿದೆ?

 

No comments:

Post a Comment