Friday, September 4, 2020

ಪದ್ಯಾಣ - ‘ಪದಯಾನ - ಎಸಳು 40


 ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ - 

ಬೇಕು, ಅಪ್ಪನ ಸಾಂಗತ್ಯ – ಭಾಗ 1

ಲೇ : ಸ್ವಸ್ತಿಕ್ ಪದ್ಯಾಣ

(ಪದ್ಯಾಣರ ಹಿರಿಮಗ)

           ತೆಂಕುತಿಟ್ಟಿನ ಭಾಗವತ ಪದ್ಯಾಣ ಗಣಪತಿ ಭಟ್ಟರ ಹಿರಿಮಗ ಎನ್ನಲು ಖುಷಿಯಾಗುತ್ತದೆ, ಅಭಿಮಾನವಾಗುತ್ತದೆ.

          ತಂದೆಯವರ ಬದುಕಿನ ಯಾನದಲ್ಲಿ ಕಷ್ಟಗಳದ್ದೇ ಹೆಜ್ಜೆಗಳು. ಕಲಾವಿದನನ್ನು ಸಮಾಜ ಸ್ವೀಕರಿಸಿದ ರೀತಿ, ಮನೆಮಂದಿಯಿಂದ ದೂರವಿರಬೇಕಾದ ಪರಿಸ್ಥಿತಿ, ತಿರುಗಾಟದ ಬವಣೆ, ಆರ್ಥಿಕತೆ.. ಇವೇ ಕಾರಣಗಳಿಂದ ಇರಬಹುದು, ತನ್ನ ಮಕ್ಕಳು ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎನ್ನುವ ಕಠಿನ ನಿಲುವನ್ನು ಹೊಂದಿದ್ದರು.

          ಒಂದು ಸಂದರ್ಭದಲ್ಲಿ ನಾಟ್ಯ ಕಲಿಯಲು ಮುಂದಾಗಿದ್ದೆ. ತಂದೆಯವರು ತಡೆದಿದ್ದರು. ಬಳಿಕ ಅವರಿಗೆ ಗೊತ್ತಿಲ್ಲದಂತೆ ಯಕ್ಷ ಶಿಕ್ಷಕ ಜಯಪ್ರಕಾಶ್ ಕಲ್ಮಡ್ಕರಲ್ಲಿ ಹೆಜ್ಜೆಗಾರಿಕೆ, ವೇಷಗಾರಿಕೆ ಕಲಿತೆ. ಗೊತ್ತಾದಾಗ ಕೆರಳಲಿಲ್ಲ, ಮುಗುಳ್ನಕ್ಕು ಸುಮ್ಮನಾದರು.

          ಬಳಿಕ ಅವರ ಭಾಗವತಿಕೆಯಲ್ಲಿ ವೇಷ ಮಾಡಿದೆ. ಯಾವಾಗ ಹವ್ಯಾಸಿಯಾಗಿ ವೇಷ ಮಾಡುತ್ತಾ ಬಂದೆನೋ, ಅವರಿಗದು ಅರಿವಾಯಿತೋ, ಆ ಬಳಿಕ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಕಾಲೇಜು ಕಲಿಕೆಯ ಸಂದರ್ಭದಲ್ಲಿ ಯಕ್ಷಗಾನದ ಗುಂಗು ಜೋರಾಗಿತ್ತು. ಉಜಿರೆ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅಲ್ಲಿ ಯಕ್ಷಗಾನದ ವಾತಾವರಣವೂ ಅನುಕೂಲಕರವಾಗಿತ್ತು.

          ಹಲವು ಸಂಘಸಂಸ್ಥೆಗಳಲ್ಲಿ ವೇಷಧಾರಿಯಾಗಿ ಭಾಗವಹಿಸಿದ್ದೇನೆ. ;ಪದ್ಯಾಣರ ಮಗ’ ಎಂಬ ಕಾರಣಕ್ಕಾಗಿ ಮಾನ್ಯತೆ ಸಿಗುತ್ತಿತ್ತು. ರಂಗಾಭಿವ್ಯಕ್ತಿಯನ್ನು ಶ್ಲಾಘಿಸುತ್ತಿದ್ದರು. ಆದರೆ ನನ್ನ ಕತೆ ನನಗೆ ಗೊತ್ತು! ಒಂದು ಹಂತದಲ್ಲಿ ಒಟ್ಟು ಯಕ್ಷಗಾನ ವಾತಾವರಣದಿಂದ ರೋಸಿಹೋದೆ! ವೇಷದ ಆಸಕ್ತಿಗಳು ಮುರುಟಿದುವು. ರಂಗದಿಂದ ದೂರವಾದೆ. ಜತೆಗೆ ಜವಾಬ್ದಾರಿಯುತವಾದ ಉದ್ಯೋಗವೂ ದೊರೆಯಿತು.

ನಾನು ಅಪ್ಪನ ಅಭಿಮಾನಿ

          ಇದನ್ನು ಎಲ್ಲೂ ಹೇಳಿಕೊಂಡವನಲ್ಲ. ಅವಕಾಶವೂ ಒದಗಲಿಲ್ಲ. ಇಂದಿಗೂ ಆಟ, ಕೂಟ, ಗಾನವೈಭವಗಳಿಗೆ ಹೋಗುತ್ತೇನಾದರೆ, ಅದು ಅಪ್ಪನ ಪದ್ಯ ಕೇಳುವುದಕ್ಕೆ, ಕೇಳಿ ಸಂತೋಷ ಪಡುವುದಕ್ಕೆ ಮಾತ್ರ.  ನನಗೆ ಯಕ್ಷಗಾನ ಸ್ಪರ್ಶವಾದ ಬಳಿಕ ಅಪ್ಪನ ರಂಗಾಳ್ತನವನ್ನು ಗಮನಿಸುತ್ತಾ ಬಂದಿದ್ದೇನೆ. ರಂಗ ಏರಿದ ಕೂಡಲೇ ಮೊದಲ ಪದ್ಯಕ್ಕೇ ಒಂದು ರೀತಿಯ ಯಕ್ಷಲೋಕ ನಿರ್ಮಾಣ, ಸನ್ನಿವೇಶ ಸೃಷ್ಟಿ, ರಂಗದ ಹಿಡಿತ.. ಇವೆಲ್ಲವೂ ನನ್ನಲ್ಲಿ ಸಂಚಲನವನ್ನು ಮೂಡಿಸಿವೆ.

          ಮುಖ್ಯವಾಗಿ ರಾಗಗಳ ಪರಿಣಾಮಕಾರಿಯಾದ ಬಳಕೆ. ಆ ರಾಗಗಳ ಹೃದಯವನ್ನರಿತು ಹಾಡುವ ಸಾಮರ್ಥ್ಯಕ್ಕೆ ದಿಗಿಲುಗೊಂಡಿದ್ದೇನೆ. ಪಾತ್ರ ಮತ್ತು ಕಲಾವಿದನ ಮನೋಧರ್ಮವನ್ನರಿತು ಪದ್ಯಗಳನ್ನು ರಂಗದಲ್ಲಿ ಬೆಳೆಸುವಂತಹ ರೀತಿ ಅನನ್ಯ. ಎರಡು ದಶಕಗಳಿಂದ ಅಪ್ಪನ ಯಕ್ಷಧ್ವನಿಗೆ ಕಿವಿಯಾಗುತ್ತಾ ಬಂದಿದ್ದೇನೆ.

          ಕೆಲವು ವರುಷಗಳ ಹಿಂದೆ ಸ್ವರ ಸಾಮಥ್ರ್ಯ ಕುಂಠಿತವಾಗಿತ್ತು. ಆ ಹೊತ್ತಲ್ಲಿ ರಂಗದಲ್ಲಿ ಪದ್ಯಾಣ ಶೈಲಿಯನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾಗ ಅತ್ತಿದ್ದೆ. ತನಗೆ ಪದ್ಯ ಹೇಳಲು ಕಷ್ಟವಾಗುತ್ತದೆ ಎಂದು ಅವರಿಗೂ ಗೊತ್ತಿತ್ತು. ಮನಸ್ಸಿನಲ್ಲೇ ಮರುಗುತ್ತಿದ್ದರು, ಕೊರಗುತ್ತಿದ್ದರು.

          ‘ಇನ್ನು ಯಕ್ಷಗಾನ ಸಾಕು,’ ಮನೆಯವರೆಲ್ಲಾ ಒತ್ತಾಯಿಸಿದೆವು. ಮನದಟ್ಟು ಮಾಡಿದೆವು. ಆದರೆ ಅಭಿಮಾನಿಗಳ ಪ್ರೀತಿ, ಸಹಕಲಾವಿದರ ಪ್ರೋತ್ಸಾಹ, ಯಜಮಾನರ ಅಭಿಮಾನಗಳು ತಂದೆಯವರನ್ನು ಯಕ್ಷಗಾನದಲ್ಲಿ ಉಳಿಸಿದೆ. ‘ಪದ್ಯಾಣರು ಯಕ್ಷಗಾನದ ಆಸ್ತಿ’ ಎಂದು ಹೇಳುವ ಅಭಿಮಾನಿಗಳ ಅಭಿಮಾನಕ್ಕೆ ಮೂಕರಾಗಿದ್ದೇವೆ. ‘ಪದ್ಯಾಣ ಶೈಲಿ’ ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿದೆ.

 (ಸಶೇಷ)


No comments:

Post a Comment