Sunday, December 13, 2009

ಮನದ ಮಾತು-ಯಕ್ಷಮಾತು!
ಯಕ್ಷಗಾನದ ಕುರಿತು ಮನಃಪೂರ್ತಿ ಬರೆಯದೆ ಮೂರು ವರುಷವಾಯಿತು. 2006ರ ಮಧ್ಯಭಾಗದಲ್ಲಿ ವೃತ್ತಿ ಸಂಬಂಧಿ ಕಾರಣಗಳಿಗಾಗಿ ಒಂದು ವರುಷ 'ಯಕ್ಷಗಾನದ ಗುಂಗಿನಿಂದ' ಹೊರಗೆ ಬರಬೇಕು ಎಂಬ ನಿರ್ಧಾರ ಮಾಡಿದ್ದೆ.
ಹದಿನೆಂಟು ವರುಷಗಳ ಬಣ್ಣದ ನಂಟು ಬದುಕಿನಲ್ಲಿ ಅಂಟಾಗಿತ್ತು! ಅದರಿಂದ ಕಳಚಿಕೊಳ್ಳುವುದೇ ಕಷ್ಟ. ಹಾಗಾಗಿ ಒಂದು ವರುಷದ 'ಅಜ್ಞಾತ' ಹೇಗೆ ಕಳೆಯಲಿ? ಯಕ್ಷಗಾನವನ್ನು ನೋಡುವ, ಮಾತನಾಡುವ, ಬರೆಯುವ ವಿಚಾರವನ್ನೇ ಬಿಟ್ಟುಬಿಟ್ಟೆ. ಹತ್ತಿರದಲ್ಲಿ ಚೆಂಡೆ ಸದ್ದು ಕೇಳುತ್ತಿದ್ದರೂ ಕೇಳದವನಂತಿದ್ದೆ. ಇದರಿಂದಾಗಿ ನಾನು 'ಸ್ನೇಹಿತರೆಂದು ನಂಬಿದ'ವರು ದೂರವಾದರು! ಒಂದಷ್ಟು ಯಕ್ಷಗಾನೀಯ ಸಂಪರ್ಕ ದೂರವಾಯಿತು.

ಇದರಿಂದಾಗಿ ಯಾವುದೇ ಮರುಕವಾಗಲಿಲ್ಲ. ಸಂಕಟವಾಗಲಿಲ್ಲ. ಸಂತೋಷವೇ ಆಯಿತು. ಹವ್ಯಾಸಿ ಪ್ರದರ್ಶನದಲ್ಲಿ ಗುಣಮಟ್ಟವನ್ನು ಕೊಡಲಾಗದ ಅಸಹಾಯಕತೆ, ವಿಮರ್ಶೆಗೆ ಒಡ್ಡಿಕೊಳ್ಳದ ಪಾತ್ರಧಾರಿಗಳು, ಕೇವಲ ಹೊಗಳಿಕೆಯನ್ನೇ ಬಯಸುವ ಮಂದಿಗಳು, ವಿಮರ್ಶೆ ಬರೆದಾಗ ಕೆಂಗಣ್ಣಿಗೆ ಒಳಗಾದ ಪರಿಸ್ಥಿತಿ, ಹಾಗಲ್ಲ ಹೀಗೆ ಅಂದಾಗ 'ಕರೆದದ್ದೇ ತಪ್ಪು' ಎಂದು ವರ್ತಿಸುವ ಸಂಘಟಕರು.. ಇದನ್ನೆಲ್ಲಾ ನೋಡಿ, ಅನುಭವಿಸಿ ರೋಸಿಹೋಗಿತ್ತು. 'ಹೊರಗೆ ಬರಲು' ಮನಸ್ಸು ಚಡಪಡಿಸುತ್ತಿತ್ತು. ಇದಕ್ಕೆ ಪೂರಕವಾಗಿ ಕಚೇರಿಯ ಹೊಸ ಜವಾಬ್ದಾರಿ ಬಂದಾಗ ಮನಸಾ ಸ್ವೀಕರಿಸಿದೆ. ನನ್ನ ಬದುಕಿಗೆ ಅನಿವಾರ್ಯವೂ ಕೂಡಾ.

ಬರೇ ಟೈಂ ಪಾಸಿಗಾಗಿ ಯಕ್ಷಗಾನ ಬೇಕಾಗಿಲ್ಲ. ಆ ಕ್ಷೇತ್ರದಲ್ಲಿದ್ದು 'ಗುಣಮಟ್ಟ'ವನ್ನಾದರೂ ಕೊಡೋಣ ಎಂದರೆ ಅದಕ್ಕೂ ಬಾಲಗ್ರಹ! ಒಂದಷ್ಟು ಸಮಾನಾಸಕ್ತ 'ಎನ್ನುವ' ಸ್ನೇಹಿತರು ಈ ಬಗ್ಗೆ ಮೊದಲ ಮೆಟ್ಟಿಲು ಏರಿದರೂ, ಅ ಮೆಟ್ಟಲೂ ಜಾರಬೇಕೇ?

ಹವ್ಯಾಸಿಗಿರಬೇಕಾದ ಗುಣಗಳು! 'ಅರ್ಥವಿಲ್ಲದ ಹೊಗಳಿಕೆ'ಯಿಂದ ಸಮಾಧಾನ ಪಡಬೇಕು. ತಪ್ಪನ್ನೂ 'ಸರಿ' ಎಂದು ಒಪ್ಪಿಕೊಳ್ಳಬೇಕು. ರಂಗದಲ್ಲಿ ಹೊಂದಾಣಿಕೆಯಾಗದೆ ಚಡಪಡಿಸುತ್ತಾ ಇದ್ದಾಗ, ಚೌಕಿಗೆ ಬಂದು ಜತೆ ಕಲಾವಿದನ ಬೆನ್ನು ತಟ್ಟಬೇಕು, ಹಲ್ಕಿರಿಯುವ ಸ್ವಭಾವವನ್ನು ರೂಢಿಸಿಕೊಳ್ಳಬೇಕು, 'ನೀವೇ ಇಂದ್ರ, ಚಂದ್ರ' ಎನ್ನುವ ಚಾಳಿಯನ್ನು ಅಂಟಿಸಿಕೊಳ್ಳಬೇಕು. ರಂಗದಲ್ಲಿ ಕೆಲವೊಮ್ಮೆ ವೃತ್ತಿ ಕಲಾವಿದರೂ ಪಾತ್ರಧಾರಿಯಾಗಿ ಸಿಕ್ಕಾಗ ಅವರ ವಿಕಾರವನ್ನು ಸ್ವೀಕಾರ ಮಾಡಬೇಕು. ರಂಗದ ಹೊರಗೆ ಅವರೊಂದಿಗೆ ಚಹಾ ವಿನಿಮಯ ಮಾಡಿಕೊಳ್ಳಬೇಕು - ಪರದೂಷಣೆಯನ್ನು ಅಭ್ಯಾಸ ಮಾಡಬೇಕು. ಇವೆಲ್ಲವನ್ನೂ ಒಂದು ಹಂತದ ತನಕ ಸಹಿಸಿಕೊಳ್ಳಬಹುದು. ಆದರೆ ಬದುಕು ಪೂರ್ತಿ ಸಾಧ್ಯನಾ? ನನ್ನ ಈ ಗೊಂದಲಗಳು ಆಪ್ತ ವಲಯದಲ್ಲಿ 'ಕಿರಿಕಿರಿ'ಯಾಗಿ ಪರಿಣಮಿಸಿದುವು. ದಶಕಕ್ಕೂ ಮಿಕ್ಕಿ 'ದೇಹವೊಂದು-ಜೀವ ಎರಡು' ಎಂತಿದ್ದ, ಸ್ನೇಹಿತರೆಂದು ನಂಬಿದವರು ಕೈಬಿಟ್ಟರೋ ಅಥವಾ ನಾನು ದೂರವುಳಿದೆನೋ!

ಯಾವುದೇ ಕ್ಷೇತ್ರದಲ್ಲಾದರೂ ಅಷ್ಟೇ. ಆಯಾಯ ರಂಗದಲ್ಲಿ ಸಕ್ರಿಯವಾಗಿದ್ದಷ್ಟೂ ಹೊತ್ತು ಸ್ನೇಹಿತರು, ಹೊಗಳುಭಟರು, ಚಹಾವನ್ನು ಅರ್ಧರ್ಧ ಮಾಡಿ ಕುಡಿವ ಪ್ರಾಣ ಪ್ರಿಯರು ಸೃಷ್ಟಿಯಾಗುತ್ತಾರೆ! ನನಗೂ ಇದು ಸ್ವಾನುಭವ.

ಯಕ್ಷಗಾನಕ್ಕೆ ನನ್ನ ಕೊಡುಗೆ ಏನಿಲ್ಲ? ಪೂರ್ತಿ ನಾಟ್ಯ ಕರಗತವೂ ಆತಿಲ್ಲ. ಮಾತೂ ಅಷ್ಟೇ. ಆದರೆ 'ಹಾಗಲ್ಲ-ಹೀಗೆ' ಅನ್ನುವಷ್ಟು ಅನುಭವಿಗಳ ಒಡನಾಟದಿಂದ ಅರ್ಥಮಾಡಿಕೊಂಡಿದ್ದೆ. ಬಣ್ಣದ ಬದುಕಿನಲ್ಲಿ ಇದು ಮಾರಕವೇ ಆಯಿತು!
ಪುಸ್ತಕ ಪ್ರಿಯ ಪ್ರಕಾಶ್ ನನಗೆ ಆಗಾಗ ಹೇಳುವುದಿದೆ - 'ನೀವು ಯಕ್ಷಗಾನದಲ್ಲಿ ಕಳೆದು ಹೋದಿರಲ್ಲಾ'? 'ಆ ಕುರಿತು ನನಗೆ ಪರಿತಾಪವಿಲ್ಲ, ನಿಮಗ್ಯಾಕೆ' ಎಂದು ಅವರಿಗೆ ವಿನೋದದಿಂದ ಹೇಳಿದ್ದಿದೆ.

ಕಲಾವಿದ ಎಸ್ಸಾರ್ ಆಗಾಗ ಹೇಳುತ್ತಾ ಇರುತ್ತಾರೆ 'ಈ ಹಿಂದೆ ಬರೆದ ಬರೆಹಗಳನ್ನು ಯಾಕೆ ಬ್ಲಾಗಿಗೆ ಹಾಕಬಾರದು?. ಪುತ್ತೂರಿನ ಕೆ.ಕೆ.ವೆಂಕಟಕೃಷ್ಣರದೂ ಇದೇ ದನಿ. ಈ ವಿಚಾರ ಮಾತಿನ ಮಧ್ಯೆ ಡಾ.ಪ್ರಭಾಕರ ಜೋಷಿಯವರಲ್ಲಿ ಪ್ರಸ್ತಾಪಿಸಿದಾಗ 'ಶಹಬ್ಬಾಸ್' ಅಂದರು.

- ಹೀಗೆ ರೂಪಿತವಾಗಿದೆ 'ಯಕ್ಷಮಾತು'. ಇದರಿಂದಾಗಿ ಬಣ್ಣದ ನಂಟು ಖಂಡಿತಾ ಅಂಟಾಗದು! ಅಂತರವನ್ನು ಕಾಪಾಡಿಕೊಂಡಿದ್ದೇನೆ.

ಎಷ್ಟೋ ಸಲ ಬರೆಯಬೇಕು ಅಂತ ಅಪರೂಪಕ್ಕೆ ಮೂಡ್ ಬಂದಾಗ ಬರೆದುದಿದೆ. 'ಅದನ್ನು ಎಲ್ಲಿ ಪಬ್ಲಿಷ್' ಮಾಡೋಣ? ಪತ್ರಿಕೆಯೇ ಇಲ್ಲವಲ್ಲಾ! ಇಂತಹ ಸಂದರ್ಭದಲ್ಲಿ ಯಕ್ಷಮಾತಿನ ಬಳಕೆ. ಒದುತ್ತೀರಲ್ಲಾ.

1 comment:

 1. ಒಳ್ಳೆಯ ಕೆಲಸ.
  ಕಲೆಯ ಬಲೆಯೊಳಗೆ ಒಮ್ಮೆ ಬಂದವರು ,
  ಮರಳಿ ಮರಳಿ
  ಅಲ್ಲೇ ಹೊರಳುವುದ ಬಿಡುವುದು ಉಂಟೇ?
  ವೇಷ ಬದಲಾದರೂ,ಉದ್ದೇಶ ಒಂದೇ ಅಲ್ಲವೇ ?
  ಬರೀತಿರಿ.ಇಂದಿನ,ಮುಂದಿನ ಜನಕ್ಕೆ ಬೇಕಾದರೆ
  ಓದಿಕೊಳ್ಳಲಿ.

  ReplyDelete