Monday, December 14, 2009

ಹಿರಿಯ ಕಲಾವಿದ ಕುಡಾನ ಗೋಪಾಲಕೃಷ್ಣ ಭಟ್

ಯಕ್ಷಗಾನ ಕ್ಷೇತ್ರದಲ್ಲೂರಿದ 'ಕುಡಾನ'ರ ಹಿರಿದಾದ ಹೆಜ್ಜೆ ಗುರುತು ಮಾಸದಷ್ಟು ಗಟ್ಟಿ. ಅದು ಸದ್ದು ಮಾಡಿಲ್ಲ, ಸುದ್ದಿ ಮಾಡಿಲ್ಲ. ಕೆಲವೊಂದು ಪಾತ್ರಗಳು ಸ್ಪುರಣೆಗೆ ಬಂದಾಗ, 'ಕುಡಾನ'ರನ್ನು ಬಿಟ್ಟು ಮಾತನಾಡುವುದು ಕಷ್ಟ.
ಕುಡಾನ ಗೋಪಾಲಕೃಷ್ಣ ಭಟ್ಟರು 'ಗೋಪಿಯಣ್ಣ, ಗೋಪಿ ಭಟ್ಟರು' ಎಂದೇ ಪರಿಚಿತರು. ಕಾಸರಗೋಡು ಜಿಲ್ಲೆಯ ಮುಳಿಗದ್ದೆ ಬೆರಿಪದವು ಸನಿಹದ ಕುಡಾನದವರು..

ಒಂದಷ್ಟು ಓದಲು ಬಂದರೆ ಸಾಕು - ಯಕ್ಷಗಾನದ ಹೆಜ್ಜೆಗೆ, ಸದ್ದಿಗೆ ಕಿವಿಯರಳುತ್ತಿದ್ದ ಕಾಲದಲ್ಲೇ ಭಟ್ಟರನ್ನು ಯಕ್ಷಗಾನ ಅಪ್ಪಿಕೊಂಡಿತು. ನಲವತ್ತು ವರ್ಷಗಳಷ್ಟು ಕಾಲ ಅಪ್ಪುಗೆಯ ಬಿಗಿ ಸಡಿಲವಾಗಲೇ ಇಲ್ಲ!

ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆ. ಕೋಳ್ಯೂರು ರಾಮಚಂದ್ರ ರಾಯರಿಂದ ಹೆಚ್ಚಿನ ಕಲಿಕೆ. ಕುರಿಯ ವಿಠಲ ಶಾಸ್ತ್ರಿಗಳ ಧರ್ಮಸ್ಥಳ ಮೇಳದಿಂದ ಬಣ್ಣದ ನಂಟು. ಅವರಿಂದಲೇ ರಂಗಮಾಹಿತಿ-ಕಲಿಕೆ. ಕೇರಳದ ಪಾಲ್ಘಾಟ್ನಲ್ಲಿ ಭರತನಾಟ್ಯ ಅಭ್ಯಾಸ.

ಏಳು ವರುಷಗಳ ಧರ್ಮಸ್ಥಳ ಮೇಳದ ತಿರುಗಾಟದ ಬಳಿಕ, ಮೂಲ್ಕಿ ಮೇಳದಲ್ಲಿ ಹದಿಮೂರು ವರುಷ ನೆಲೆ. ಪಕ್ವಗೊಂಡ ಪಾಕ ಪರಿಪಕ್ವತೆಗೆ ನಾಂದಿ. ಪ್ರತಿಭಾ ಅನಾವರಣದ ತಾಣ.

ಸ್ತ್ರೀಪಾತ್ರಧಾರಿಯಾಗಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಭಟ್ಟರ ಪಾಲಿಗೆ 'ಜವಾಬ್ದಾರಿಯುತ' ಪಾತ್ರಗಳು ಬೆನ್ನಟ್ಟಿ ಬಂದುವು. 'ಜವಾಬ್ದಾರಿ ಹೆಚ್ಚದೆ ಪ್ರಗತಿ ಕಾಣುವುದೆಂತು?'. ಅಭಿಮನ್ಯು, ಲಕ್ಷ್ಮಣ, ಪರಶುರಾಮ, ಚಂಡಮುಂಡ..ಪಾತ್ರಗಳು ತಮ್ಮ ಮೂಲ್ಕಿ ಮೇಳದಲ್ಲಿ 'ನಿಜಾರ್ಥ'ದಲ್ಲಿ ಮಿಂಚಿದ್ದ ಕಾಲವನ್ನು ಪೆರುವಡಿ ನಾರಾಯಣ ಭಟ್ಟರು ಜ್ಞಾಪಿಸಿಕೊಳ್ಳುತ್ತಾ, 'ರಂಗದಲ್ಲಿ ಅವರು ಪಾತ್ರವೇ ಆಗುತ್ತಿದ್ದರು' ಎನ್ನುತ್ತಾರೆ. ಕಡತೋಕ ಭಾಗವತರ ಎಲ್ಲಾ ಪ್ರಯೋಗಗಳಿಗೆ ಒಳಗಾಗಿ, ಮೆಚ್ಚುಗೆ ಗಳಿಸಿದರು.

ಪುಂಡುವೇಷ ಮತ್ತು ಸ್ತ್ರೀಪಾತ್ರಗಳಲ್ಲಿ 'ಗೋಪಿಯಣ್ಣ' ಮಿಂಚಿದ ದಿನಗಳು ಇವೆಯಲ್ಲಾ, ಅವೀಗಲೂ 'ಮಾತಿನ ವಸ್ತು.' ಮುಖ್ಯವಾಗಿ ಕೆಲವೇ ಕೆಲವು ಶೃಂಗಾರ ಪಾತ್ರಗಳು ರೈಸುತ್ತಿತ್ತು ಎಂದು ಅವರನ್ನು ಹತ್ತಿರದಿಂದ ಬಂದ ಪೆರುವಡಿ ಹೇಳುತ್ತಾರೆ - 'ಹಗಲು ಹೊತ್ತಲ್ಲಿ ಕಂಡರೆ ಇವರು ವೇಷಧಾರಿಯೇ ಅಂತ ಸಂಶಯ ಪಡಬೇಕು. ಅಷ್ಟು ಮುಗ್ಧ. ತೋರಿಸಿಕೊಳ್ಳುವ ಅಹಮಕೆ ಇಲ್ಲ. ವೇಷ ರಂಗಕ್ಕೆ ಬಂದರೆ ಅಷ್ಟು ಚಂದ. ಮುದ್ದುಮುದ್ದು.'

ಪೀಠಿಕೆಯ ಮುನ್ನ ವಿಶೇಷ ಆಕರ್ಷಣೆಯಾಗಿ ಇವರ ಮತ್ತು ಕೊಕ್ಕಡ ಈಶ್ವರ ಭಟ್ಟರ 'ಭರತನಾಟ್ಯ' ಪ್ರದರ್ಶನವಿರುತ್ತಿತ್ತು. 'ಆ ಕಾಲಕ್ಕೆ ಅದು ಜನಾಕರ್ಷಣೆ ಪಡೆದಿತ್ತು' ಪೆರುವಡಿಯವರು ನೆನಪಿಸುತ್ತಾರೆ. ಭರತನಾಟ್ಯದ ನಡೆಗಳು ತಪ್ಪಿಯೂ ಯಕ್ಷಗಾನ ನಡೆಯೊಂದಿಗೆ ಮಿಳಿತವಾಗುತ್ತಿರಲಿಲ್ಲ.

ಆಯದ ಕುಣಿತ. ರಂಗದ ಕಾಲೋಚಿತ ನಡೆ. ಅಚ್ಚುಕಟ್ಟಿನ ವೇಷ. ನಾಟ್ಯ, ಆಂಗಿಕಾಭಿನಯ, ಹದವರಿತ ಮಾತುಗಾರಿಕೆ. ರಂಗದಲ್ಲೋ, ವೇಷದಲ್ಲೋ 'ಯಕ್ಷಗಾನದ ಪದ್ದತಿ' ಅಂತ ಏನಿದೆಯೋ ಅದನ್ನು ಮುರಿಯದ ಕಲಾವಿದ. ತನ್ನ ವಿಚಾರಕ್ಷಮತೆ, ಕಲಾಪ್ರತಿಭೆ, ಶರೀರ-ಶಾರೀರಗಳ ಅರಿವಿದ್ದು; ಪ್ರ್ರತಿಷ್ಠೆ-ಪ್ರಚಾರಗಳಿಗೆ ಅಂಟಿಕೊಳ್ಳದವರು. ಹಾಗಾಗಿಯೇ ಇರಬೇಕು, 'ಮಿರಿಮಿರಿ ಮಿಂಚುವ ತಾರಾಮೌಲ್ಯ' ಅವರ ಬಳಿಗೆ ಬಂದಿಲ್ಲ!

ಕುಡಾನ ಓರ್ವ ನಿರುಪದ್ರವಿ ಕಲಾವಿದ. ತಾನಾಯಿತು, ತನ್ನಪಾಡಾಯಿತು. ಪರದೂಷಣೆಯಿಂದ ದೂರ. ಯಾವುದೆ ಪಾತ್ರಗಳಿಗೆ 'ಸೀಮಿತ'ಗೊಳ್ಳದೆ ಕಲಾಪ್ರದರ್ಶನದ ಒಟ್ಟಂದವನ್ನು ಲಕ್ಷ್ಯವಾಗಿರಿಸಿದ ಅಜಾತಶತ್ರು. ಚಿಕ್ಕ ಪಾತ್ರವಹಿಸಿದರೂ, ಅದನ್ನು 'ಎದ್ದು ಕಾಣಿಸುವ' ಪ್ರೌಢಿಮೆ.

ಧರ್ಮಸ್ಥಳ, ಮೂಲ್ಕಿ ತಿರುಗಾಟದ ನಂತರ ಇರಾ(ಕುಂಡಾವು), ಕೂಡ್ಲು, ಸುಂಕದಕಟ್ಟೆ, ಕಟೀಲು..ಹೀಗೆ ವಿವಿಧ ಮೇಳಗಳಲ್ಲಿ ವ್ಯವಸಾಯ. ವಯೋಧರ್ಮ, ದೇಹಧರ್ಮವು ಕಲೆಯ ಕಸುಬಿಗೆ ತೊಡಕಾದಾಗ ವೃತ್ತಿ ಸಂತೋಷದಿಂದ ಗೆಜ್ಜೆ-ಕುಣಿತವನ್ನು ನಿಲ್ಲಿಸಿ ಹದಿನಾಲ್ಕು ವರುಷವಾಯಿತು.

ತಂದೆ ನಾರಾಯಣ ಭಟ್, ತಾಯಿ ಗಂಗಮ್ಮ. ಮಡದಿ ಸಾವಿತ್ರಿ. ನಾಲ್ವರು ಮಕ್ಕಳು. ಮುಳಿಗದ್ದೆ, ಪೈವಳಿಕೆ, ಚಿಪ್ಪಾರು ಶಾಲೆಗಳಲ್ಲಿ ಯಕ್ಷಗಾನ ತರಗತಿಯನ್ನು ನಡೆಸಿದ್ದಾರೆ. ಹಲವಾರು ಶಿಷ್ಯರನ್ನು ರೂಪಿಸಿದ್ದಾರೆ. ವಿವಿಧ ಸಂಘಸಂಸ್ಥೆಗಳು ಇವರನ್ನು 'ಹುಡುಕಿ' ಗೌರವಿಸಿದ್ದಾರೆ. 'ಪಾತಾಳ ಪ್ರಶಸ್ತಿ' ಪುರಸ್ಕೃತರು. 'ತನಗೆ ಇಂತಹ ಪ್ರಶಸ್ತಿ ಬರಬೇಕಿತ್ತು' ಅಂತ ಒಂದು ದಿನವೂ ಕೊರಗದ ಹಿರಿಯ ಕಲಾವಿದ - ಕುಡಾನ.

No comments:

Post a Comment