Sunday, December 13, 2009

ಅಭಯಾರಣ್ಯದ 'ದೊಂದಿಯಾಟ ಚಿತ್ರೀಕರಣ'


ಅಶೋಕವರ್ಧನರ ಅಭಯಾರಣ್ಯ ಸೇರಿದಾಗ ಕತ್ತಲಾಗುತ್ತಿತ್ತು. ಯಕ್ಷಗಾನದ ಪಾರಂಪರಿಕ ಸೊಗಸಿಗೆ ಕವಿದಿದ್ದ ಕತ್ತಲನ್ನು ಸರಿಸುವ ಪ್ರಯತ್ನ! ಕತ್ತಲು-ಬೆಳಕಿನಾಟದ 'ದೊಂದಿ'ಯಾಟ -ಅಂದಿನ ರಂಗವೈಭವವನ್ನು ಮರಳಿ ತರುವ ಸಿದ್ಧತೆ!

ಯಕ್ಷಗಾನದಲ್ಲಿ 'ಬೆಳಕು' ಇದೆ! ಕತ್ತಲು ಇಲ್ವಾ? ಈ ಕತ್ತಲೆಗೆ ಕಾರಣ ಯಾರು? ಕಲಾವಿದರಾ, ಪ್ರೇಕ್ಷಕರಾ, ಸಂಘಟಕರಾ, ಮೇಳದ ಯಜಮಾನರಾ? ಮಾತಿಗೆ ಮಾತು ಬೆಳೆಯುವ ಪ್ರಶ್ನೆಯಷ್ಟೇ. 'ಕಂಠತ್ರಾಣ'ಕ್ಕೆ ಅವಕಾಶ.

ಕತ್ತಲು ಸರಿಸುವ ಅನೇಕ ಗೋಷ್ಠಿಗಳೋ, ಪ್ರಾತ್ಯಕ್ಷಿಕೆಯೋ ನಡೆದಿದೆ, ನಡೆಯುತ್ತಿದೆ. ಅದರಿಂದ ಇನ್ನಷ್ಟು ಕತ್ತಲೆಯೇ ಹೊರತು ಬೆಳಕನ್ನು ಕಾಣುವ, ಅಲ್ಲ-ಬೆಳಕಿನ ಕಿರಣವನ್ನಾದರೂ ನೋಡುವ ಸಂದರ್ಭ ಎಷ್ಟು ಸಲ ಬಂದಿದೆ? 'ಬೆಳಕು ನೋಡಿದ್ದೇವೆ' ಎಂದೆನುತ್ತಾ ಬೀಗುತ್ತೇವೆ, 'ಗಂಡು ಕಲೆ' ಅಂತ ಲೇಖನಾರಂಭ ಮಾಡುತ್ತೇವೆ.

ಕಾಲ ಸರಿಯುತ್ತಿದೆ. ಯಕ್ಷಗಾನದ 'ರಂಗ'ವೂ ಮಾಸುತ್ತಿದೆ. ಕ್ಷಣಿಕ ಢಾಂಢೂಂಗಳ ಸುಳಿಯಲ್ಲಿ ಸುತ್ತುತ್ತಾ ಬಿಡುಗಡೆಗಾಗಿ ಅಂಗಲಾಚುತ್ತಿದೆ! ಬಡಗಿನಲ್ಲಾದರೋ ಅಧ್ಯಯನ ಕೇಂದ್ರಗಳು ಮರೆತುಹೋದ, ಬುದ್ಧಿಪೂರ್ವಕವಾಗಿ ಮರೆತವುಗಳನ್ನು ಪುನಃ ರಂಗಕ್ಕೆ ಎಳೆದು ತರುತ್ತಿದೆ.

ತೆಂಕಿನಲ್ಲಿ? ಪತ್ರಿಕಾ ಸ್ನೇಹಿತ ಪೃಥ್ವಿರಾಜ್ ಹೇಳುತ್ತಾರೆ - 'ಹೌದು ಮಾರಾಯ್ರೆ. ನಮ್ಮ ತೆಂಕಿನಲ್ಲಿ ಬಡಗಿನಲ್ಲಿದ್ದಂತೆ ಅಧ್ಯಯನ ಕೇಂದ್ರಗಳಿರುತ್ತಿದ್ದರೆ ಹೀಗಾ?'. ಇಂತಹ ಅಧ್ಯಯನ ಕೇಂದ್ರಗಳ ಸ್ಥಾನಗಳನ್ನು ಹವ್ಯಾಸಿಗಳು ತುಂಬುತ್ತಿದ್ದಾರೆ. (ಹವ್ಯಾಸಿಗಳೆಂದರೆ ಯಕ್ಷಗಾನ ಹವ್ಯಾಸ- ತುಡಿತವಿದ್ದು ಈ ಕ್ಷೇತ್ರಕ್ಕೆ ಒಂದಷ್ಟು ಕೊಡುಗೆ ಕೊಡಬೇಕೆನ್ನುವವರು - ವೃತ್ತಿಪರರಂತೆ ವೇಷ ಹಾಕುವವರಲ್ಲ!)

ಮಂಗಳೂರಿಗೆ ಹೋದಾಗಲೆಲ್ಲಾ ಅತ್ರಿ ಬುಕ್ ಸೆಂಟರಿನಲ್ಲಿ ಒಂದರ್ಥ ಗಂಟೆಯಾದರೂ ಕಳೆಯದಿದ್ದರೆ ಪ್ರವಾಸ ಅಪೂರ್ಣ. ಹೀಗೆ ಹೋದಾಗಲೆಲ್ಲಾ ಒಣ ಹರಟೆಯಾಗುತ್ತಿರಲಿಲ್ಲ. ಬುದ್ಧಿಗೆ ಒಂದಷ್ಟು ಮೇವು ಹಾಕುತ್ತಿದ್ದರೆ ಅಶೋಕವರ್ಧನರು. ಆ ಮೇವು ಒಂದು ತಿಂಗಳಿಗೆ ಧಾರಾಳ. ಇರಲಿ.

ದೊಂದಿಯಾಟಕ್ಕೆ ಬರೋಣ. ಸೀಮಿತ ಪ್ರೇಕ್ಷಕರು. ಎರಡು ಪ್ರಸಂಗಗಳು. ತೆಂಕಿನದು 'ಕುಂಭಕರ್ಣ ಕಾಳಗ' ಬಡಗಿನದು 'ಹಿಡಿಂಬಾ ವಿವಾಹ'. ತೆಂಕಿನ ಕಲಾವಿದರನ್ನು ಪ್ರಥ್ವಿರಾಜ್ ಗೊತ್ತುಮಾಡಿ, 'ಹಿಡಿದು' ತಂದಿದ್ದರೆ, ಬಡಗನ್ನು ಯಕ್ಷಗಾನ ಅಧ್ಯಯನ ಕೇಂದ್ರವು ಸಂಘಟಿಸಿತ್ತು.

ಬಣ್ಣದ ವಾಸನೆಯಿದ್ದವರಿಗೆ ಪ್ರಸಂಗ ಮಾಮೂಲಿ. ವೀಡಿಯೋ ಚಿತ್ರೀಕರಣವಿದ್ದುದರಿಂದ ತೆಂಕಿನಾಟದಲ್ಲಿ 'ಶಿಸ್ತು' ಎದ್ದುಕಾಣುತ್ತಿತ್ತು! ಬಡಗನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರಖರ ಬೆಳಕಿನಲ್ಲಿ, ಮೈಕ್ ಮುಂದೆ ಅಭಿನಯ ಮಾಡಿ ರೂಢಿಯಾದರೆ, ಇಂತಹ ದಾಖಲಾತಿಗಳಲ್ಲಿ ಮನಸ್ಸು ಹಿಮ್ಮುಖವಾಗುವುದು ಸಹಜ. ಆದರಿಲ್ಲಿ 'ಕ್ಯಾಮೆರಾ ಮುಂದಿರುವ' ಅರಿವು ಎಲ್ಲರಿಗಿತ್ತು.

ಹಿಂದಿನ ದೊಂದಿಯಾಟವನ್ನು ಮರಳಿ ತರುವುದು ಒಟ್ಟೂ ಉದ್ದೇಶ. ದೊಂದಿಯ ಪರಿಣಾಮ ಕೊಟ್ಟರಾಯಿತಷ್ಟೇ. ಅದಕ್ಕಾಗಿ ಅಶೋಕವರ್ಧನ, ಅಭಯಸಿಂಹ ಮತ್ತು ಡಾ. ಮನೋಹರ ಉಪಾಧ್ಯರ 'ಗ್ಯಾಸ್ ದೊಂದಿ' ಐಡಿಯಾ ನನಗಂತೂ ಖುಷಿ ಕೊಟ್ಟಿತು. ನಿಜಕ್ಕೂ 'ಬೆನ್ನು ತಟ್ಟಬೇಕಾದ' ವಿಚಾರ. ಒಂದೇ ರೀತಿಯ ಬೆಳಕಿನ ಹರಹನ್ನು ಗ್ಯಾಸ್ ದೊಂದಿಯಲ್ಲಿ ಪಡೆಯಲು ಸಾಧ್ಯ. ಎಣ್ಣೆ ಎರೆಯುವ ದೊಂದಿಯಾದರೆ ದೊಂದಿಯಲ್ಲಿದ್ದ ಎಣ್ಣೆಯ ಅಂಶವನ್ನಷ್ಟೇ ಹೊಂದಿಕೊಂಡು ಬೆಳಕು. ಅದರಿಂದ ಹೊರ ಬರುವ ಹೊಗೆ, ಕಿಡಿ.. ಇನ್ನಿಲ್ಲದ ರಾದ್ದಾಂತ!

ನಾನಿಲ್ಲಿ ವಿಮರ್ಶೆಗೆ ತೊಡಗಿಲ್ಲ. ಇಂತಹ ಪ್ರಯೋಗಗಳು ಕಾಲದ ಆವಶ್ಯಕತೆ. ಹದಿನೈದು ವರುಷದ ಹಿಂದೊಮ್ಮೆ ಅಡೂರಿನಲ್ಲಿ ಪ್ರದರ್ಶನವೊಂದರ ಚಿತ್ರೀಕರಣ ನಡೆದಿತ್ತು. ನಾನೂ ಕಲಾವಿದನಾಗಿ ಭಾಗವಹಿಸಿದ್ದೆ. ಆಗ ಆಟದಲ್ಲಿ ವೀಡಿಯೋ ಶೂಟಿಂಗ್ ಅಂದರೆ ಕಲಾವಿದರೂ ಡಿಮ್ಯಾಂಡ್ ಮಾಡುತ್ತಿದ್ದರು. 'ದಾಖಲಾತಿಗಾಗಿ' ಅಂದರೂ 'ನನಗಿಷ್ಟು ಸಿಗಲೇ ಬೇಕು' ಎಂಬ ಹಠ. ಶೂಟಿಂಗ್ ಏನೋ ನಡೆಯಿತು. ಕಲಾವಿದರ ಅಸಹಕಾರ ಪೃವೃತ್ತಿಯನ್ನು ಹತ್ತಿರದಿಂದ ಕಂಡ ಭಾಗ್ಯಶಾಲಿ ನಾನು!
ಆದರೆ ಈಗ ಹಾಗಿಲ್ಲ. ಗೋವಿಂದ ಭಟ್ಟರಂತಹ ಹಿರಿಯ ಕಲಾವಿದರಿಗೆ ಗೊತ್ತು - 'ಇದನ್ನು ಉಳಿಸಬೇಕಾದ - ನಿಜ ಸ್ವರೂಪವನ್ನು ದಾಖಲಿಸಬೇಕಾದ ಅನಿವಾರ್ಯತೆ' ಇದೆ ಅಂತ. ಕೆಲವು ಮಂದಿ (ಎಲ್ಲರೂ ಅಲ್ಲ) ವೃತ್ತಿ ಕಲಾವಿದರೂ ಬದಲಾದ ಕಾಲಘಟ್ಟದಲ್ಲಿ ಯಕ್ಷಗಾನದ ಉಳಿವಿಗೆ ಮನಸ್ಸನ್ನು ಸಜ್ಜುಗೊಳಿಸಿರುವುದು ಸಂತೋಷದ ಸಂಗತಿ.

ಇಂತಹ ದಾಖಲಾತಿಗಳು ಭವಿಷ್ಯದ ಆಕರಗಳು. ರಂಗದ ಮಾಸಿದ ಬೆಳಕನ್ನು ಒರೆಸುವ ಕಾಲವಿದು. ಕೀರ್ತಿಶೇಷ ಶಂಭು ಹೆಗಡೆಯವರು ವೇದಿಕೆಯೊಂದರಲ್ಲಿ ಆಡಿದ ಮಾತು ನೆನಪಾಗುತ್ತದೆ - 'ಯಕ್ಷಗಾನಕ್ಕೆ ಈಗ ಬೇಕಾಗಿರುವುದು ಹಿತೋಪದೇಶವಲ್ಲ, ಗೋಷ್ಠಿ-ಕಾರ್ಯಾಗಾರವಲ್ಲ. ಬೇಕಾಗಿರುವುದು ಸಮಾನ ಮನಸ್ಸುಗಳ ಸಮ್ಮಿಲನ'.

ಅಭಯಾರಣ್ಯದ ದೊಂದಿಯಾಟ ಚಿತ್ರೀಕರಣದ (ನವೆಂಬರ ೨೮, ೨೦೦೯) ಹಿಂದೆ ಇಂತಹ ಸಮಾನಮನಸ್ಸುಗಳು ಒಟ್ಟಾಗಿವೆ. ಅಭಿನಂದನೆಗಳು.

1 comment:

  1. ಹ್ವಾಯ್,
    ನಮಸ್ಕಾರ.ಗ್ಯಾಸ್ ದೊನ್ದಿ ಕಲ್ಪನೆ ಶ್ರೀ ಅಶೋಕವರ್ಧನ ಮತ್ತು ಅಭಯಸಿಮ್ಹ ಅವರದ್ದು.ವಿವರಗಳು athree.wordpress.com ಇಲ್ಲಿವೆ.
    ಮನೋಹರ ಉಪಾಧ್ಯ.

    ReplyDelete