Tuesday, March 2, 2010

ಪೆರುವೋಡಿ ನಾರಾಯಣ ಭಟ್ಟರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

ತೆಂಕುತಿಟ್ಟು ಯಕ್ಷಗಾನ ಅಗ್ರಮಾನ್ಯ ಹಾಸ್ಯ ಕಲಾವಿದ ಪುತ್ತೂರಿನ ಶ್ರೀ ಪೆರುವೋಡಿ ನಾರಾಯಣ ಭಟ್ಟರಿಗೆ ಈ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ. ಪೆರುವೋಡಿಯವರು ಕುಂಡಾವು ಮೇಳದಲ್ಲಿ ಕುರಿಯ ವಿಠಲ ಶಾಶ್ತ್ರಿಗಳ `ಕೃಷ್ಣ' ವೇಷಕ್ಕೆ ಮಾರುಹೋಗಿ, ಅದೇ ಮೇಳದಿಂದ ತಿರುಗಾಟ ಆರಂಭ. ಮುಂದೆ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. ಮೂಲ್ಕಿಮೇಳ, ಕೂಡ್ಲು ಮೇಳ, ಸುರತ್ಕಲ್ ಮೇಳ, ಬಡಗಿನ ಅಮೃತೇಶ್ವರೀ ಮೇಳ, ನಂದಾವರ ಮೇಳ, ಕದ್ರಿ ಮೇಳ, ಕುಂಬಳೆ ಮೇಳ, ಬಪ್ಪನಾಡು...ಹೀಗೆ ವಿವಿಧ ಮೇಳಗಳಲ್ಲಿ 47 ವರುಷ ತಿರುಗಾಟ.

ದಕ್ಷಾಧ್ವರ ಪ್ರಂಗದ `ಬ್ರಾಹಣ', ನಳದಮಯಂತಿ ಪ್ರಸಂಗದ `ಬಾಹುಕ', ಪಾರಿಜಾತದ `ಮಕರಂದ', ಕೃಷ್ಣಲೀಲೆ-ಕಂಸವಧೆ ಪ್ರಸಂಗದ `ಪಂಡಿತ ಮತ್ತು ಅಗಸ',ಕೊಕ್ಕೆಚಿಕ್ಕನ ಹಾಸ್ಯ, ಗುಹ, ಸಾರಥಿ, ದೇವಲೋಕದ ದೂತ, ಬೇಟೆಗಾರರು, ಹನುಮನಾಯಕ, ಪರಾಕು ಹಾಸ್ಯ, ಬೈರಾಗಿ, ಪಾಪಣ್ಣ....ಯಕ್ಷಲೋಕದ ಎಲ್ಲಾ ಪಾತ್ರಗಳು ಪೆರುವೋಡಿಯವರಲ್ಲಿ ಮರುಹುಟ್ಟು ಪಡೆದಿದೆ.

ಯಕ್ಷಗಾನದ `ರಾಜಾ ಹಾಸ್ಯ' ಎಂಬ ನೆಗಳ್ತೆಗೆ ಪಾತ್ರರಾಗಿ, `ಪಾಪಣ್ಣ ಭಟ್ರು' ಎಂದೇ ಜನಪ್ರಿಯ. ತನ್ನ ಯಜಮಾನಿಕೆಯ ಮೂಲ್ಕಿ ಮೇಳದಲ್ಲಿ ಪಾದೆಕಲ್ಲು ವೆಂಕಟ್ರಮಣ ಭಟ್ಟರ ಯಕ್ಷಗಾನ ಪ್ರಸಂಗ `ಪಾಪಣ್ಣ ವಿಜಯ - ಗುಣಸುಂದರಿ' ಪ್ರಸಂಗದ ಪ್ರದರ್ಶನದ ವಿಜೃಂಬಣೆ. ಇದರಿಂದ ತನಗೂ, ಜತೆ ಕಲಾವಿದರಿಗೂ ಸಾರ್ವತ್ರಿಕ ಮನ್ನಣೆ, ಗೌರವ. ಮುಂದೆ ಸುರತ್ಕಲ್ ಮೇಳದಲ್ಲಿ `ಟೆಂಟ್ ಫುಲ್' ಮಾಡಿದ ಈ ಪ್ರಸಂಗ ಇಂದಿಗೂ ಜನಪ್ರಿಯ.

ರಂಗದಲ್ಲಿ ಅವರ ಅಭಿನಯ, ನಡೆನುಡಿಗಳಲ್ಲಿ ಹಾಸ್ಯ ಉನ್ನತ ಮಟ್ಟದಲ್ಲಿರುತ್ತಿತ್ತು. ಹಾಸ್ಯಕ್ಕಾಗಿ ಕೆಳಮಟ್ಟದಲ್ಲಿ ವರ್ತಿಸುವ ಹಾಸ್ಯವಲ್ಲ ಅಭಿನಯದಲ್ಲಿ ಸಹಜತೆ, ಅರ್ಥಗಾರಿಕೆಯಲ್ಲಿ ಪಾತ್ರೌಚಿತ್ರ....ಗಳನ್ನು ಸದಾ ಕಾಪಾಡಿಕೊಂಡು ಬಂದ, ಒಬ್ಬ ಅಭಿಜಾತ ಹಾಸ್ಯಗಾರ. ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ `ಯಕ್ಷಗಾನ ಸಿನಿಮಾ' ಒಂದರಲ್ಲಿ ಕಲಾವಿದನಾಗಿ ಭಾಗವಹಿಸಿದ್ದರು.

ಶೇಣಿ ದತ್ತಿ ಪುರಸ್ಕಾರ, ಕುರಿಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಕರ್ಗಲ್ಲು ಸುಬ್ಬಣ್ಣ ಭಟ್ ಪ್ರಶಸ್ತಿ, ಪಾತಾಳ ಪ್ರಶಸ್ತಿಯಂತಹ ಪ್ರತಿಷ್ಠಿತ ಗೌರವಗಳನ್ನು ಪಡೆದ ನಾರಾಯಣ ಭಟ್ಟರ ಜೀವನಗಾಥೆ `ಹಾಸ್ಯಗಾರನ ಅಂತರಂಗ' ಕೃತಿ ಪ್ರಕಟವಾಗಿದೆ.(ಲೇಖಕ : ನಾ. ಕಾರಂತ ಪೆರಾಜೆ). ಪುತ್ತೂರಿನ ಕರ್ನಾಟಕ ಸಂಘವು ಇದನ್ನು ಪ್ರಕಟಿಸಿದೆ.
ಪ್ರಶಸ್ತಿ ಪುರಸ್ಕೃತ ಪೆರುವೋಡಿಯವರಿಗೆ ಅಭಿನಂದನೆಗಳು.

1 comment:

  1. ಅರ್ಹರಿಗೆ ಕೊನೆಗೂ ಪ್ರಶಸ್ತಿ ಸ೦ದಿರುವುದು ಅಭಿನ೦ದನೀಯ.ಸಕಾಲಿಕವಾಗಿ ವಿಷಯವನ್ನು ತಿಳಿಸಿದ ನಿಮಗೂ ಅಭಿನ೦ದನೆಗಳು

    ReplyDelete