Sunday, January 17, 2010

ನೆನಪಿನಂಗಳದಲ್ಲಿ : ಕೇದಗಡಿ ಗುಡ್ಡಪ್ಪ ಗೌಡ

ಕಲಾವಿದ ವಿಧಿವಶವಾದಾಗ ಆತನ ಬಗೆಗೆ ಸಂಸ್ಮರಣೆ, ಪತ್ರಿಕಾ ಲೇಖನ, ವರ್ಷ ಕಳೆದಾಗ ನೆನಪು ಸಮಾರಂಭ....ಹೀಗೆ ಒಂದೆರಡು ವರ್ಷ ನಡೆಯುತ್ತಿದ್ದಂತೆ ಮನದಿಂದ ಮರೆಯಾಗುತ್ತಾರೆ! ಆದರೆ ಮರೆಯಲಾಗದಷ್ಟು ರಂಗದಲ್ಲಿ ಬಿಟ್ಟುಹೋದ ಅವರ ಕಲಾವಂತಿಕೆಯನ್ನು ಮರೆಯಲಾದೀತೆ! ಕೆದಗಡಿ ಗುಡ್ಡಪ್ಪ ಗೌಡರು ನಿಧನರಾದಾಗ ಕಾಡಿದ ಪ್ರಶ್ನೆಗಳಿವು.

ಇಂತಹ ಹಿರಿಯರ ರಂಗಕೊಡುಗೆಗಳು ಯಕ್ಷಗಾನದ ಶ್ರೀಮಂತಿಕೆಯ ಮೂಲಸರಕುಗಳು. ಹಿಂದೆಲ್ಲಾ ಕಲಾವಿದ ಮಾಗುತ್ತಿದ್ದಂತೆ, ಆತನ ನೆರಳಲ್ಲಿ ಒಂದಿಬ್ಬರಾದರೂ ಕಲಾವಿದರು ರೂಪುಗೊಳ್ಳುತ್ತಿದ್ದರು. 'ನಾನು ಇಂತಹವರ ಜತೆಯಿದ್ದು ಕಲಿತೆ' ಎನ್ನುವಾಗ ಏನೊಂದು ಅಭಿಮಾನ! 'ನಾನು ಕುರಿಯ ಶಾಸ್ತ್ರಿಗಳ ಶಿಷ್ಯ' ಎಂದಾಗ ಒಂದು ಕಾಲಘಟ್ಟದ ರಂಗ ಮಿಂಚಿ ಮರೆಯಾಗುತ್ತದೆ. ಆದರೆ ಈಗೀಗ ಇಂತಹ ಪರಂಪರೆ ಕಡಿಮೆಯಾಗುತ್ತಿದೆ. ರಂಗದ ದೃಷ್ಟಿಯಿಂದ ಯಾಕೋ 'ಇಂತಹ ಪರಂಪರೆ' ಬೇಕೆನಿಸುತ್ತದೆ. ಗುರುಕುಲಗಳಿರಬಹುದು, ಕಲಿಕಾ ಕೇಂದ್ರಗಳಿರಬಹುದು....ಅವೆಲ್ಲಾ ಪ್ರಾಥಮಿಕ ಅಂಶವನ್ನಷ್ಟೇ ಹೇಳಿಕೊಡಬಲ್ಲುದು. ಆದರೆ 'ಜತೆಗಿದ್ದು ಕಲಿಯುವುದು' ಇದಕ್ಕಿಂತ ಎಷ್ಟೋ ಪಾಲು. ಬದಲಾದ ಕಾಲ ಪ್ರವಾಹದಲ್ಲಿ `ಇದೆಲ್ಲಾ ಸಾಧ್ಯವಿಲ್ಲ' ಎಂದು ಸುಲಭದಲ್ಲಿ ಹೇಳಬಹುದು!

ಇರಲಿ, ವಿಷಯ ಎಲ್ಲೋ ಹೋಯಿತಲ್ವಾ. ಇಂತಹ ಪರಂಪರೆಯಲ್ಲಿ ಬೆಳೆದವರು ಕೇದಗಡಿ ಗುಡ್ಡಪ್ಪ ಗೌಡರು. ಬಾಲ್ಯ ಬಡತನ. ಅರ್ಧದಲ್ಲೇ ಮೊಟಕಾದ ಶಾಲಾ ಕಲಿಕೆ. ಆದರೂ ಕಲಿಯಬೇಕೆನ್ನುವ ತುಡಿತ. ಊರಲ್ಲಿ ಅಲ್ಲಿಂದಿಲ್ಲಿಂದ ಕೇಳುತ್ತಿದ್ದ ಯಕ್ಷಗಾನದ ಸುದ್ದಿಯ ಕಿಡಿಗೆ ಕಿವಿಯರಳಿಸಿದೆ ಗುಡ್ಡಪ್ಪ ಗೌಡರು ನಿಂತುದು ಕೀರಿಕ್ಕಾಡು ವಿಷ್ಣು ಭಟ್ಟರ ಗುರುಕುಲದ ಮುಂದೆ.

ಬನಾರಿಯ ಹಳ್ಳಿಮಂದಿಗೆ ಕೀರಿಕ್ಕಾಡು ಅವರ ಪಾಠಶಾಲೆ ಆಗ ವಿಶ್ವವಿದ್ಯಾಲಯ. ಹಗಲು ದುಡಿಯುತ್ತಾ - ನಾಟ್ಯ, ಪ್ರಸಂಗ, ಪುರಾಣ ಕಥೆಗಳನ್ನು ಕಲಿವ ರೀತಿ. ಜತೆಜತೆಗೆ ಸಂಸ್ಕಾರ ಪಾಠ. ಮಣ್ಣಿನ ಮುದ್ದೆಗಳು ಮಾಸ್ತರರ ಕೈಯಲ್ಲಿ ಶಿಲ್ಪಗಳಾಗುತ್ತಿದ್ದುವು. ಕೇದಗಡಿ ಕೂಡಾ ಇಂತಹ ಶಿಲ್ಪಗಳಲ್ಲೊಬ್ಬರು. ಕಡಾರು ನಾರಾಯಣ ಭಟ್ಟರಿಂದ ನಾಟ್ಯ, ಮಾಸ್ತರರಿಂದ ಅರ್ಥಗಾರಿಕೆ ಕಲಿಕೆ. ಎಷ್ಟು ಶೀಘ್ರ ಕಲಿತರೆಂದರೆ, ರಾತ್ರಿ ಹೇಳಿದ ಪಾಠ ಬೆಳಗಾಗುವಾಗ ವಶವಾಗುವಷ್ಟು. ಹಗಲು ತೋಟದಲ್ಲಿ ದುಡಿಯುವಾಗಲೂ ಪಾಠಗಳ ಗುಣುಗುಣಿಕೆ. ಹೀಗಾಗಿ ಗುಡ್ಡಪ್ಪರ ಮಾಸ್ತರರ ಮೆಚ್ಚಿನ ಶಿಷ್ಯ.

ಮೇಳ ಸೇರಲೇ ಬೇಕು ಎಂಬಷ್ಟರ ಮಟ್ಟಿಗೆ ಯಕ್ಷಗಾನದ ಗುಂಗು ಅವರನ್ನಾವರಿಸಿತು. ತನ್ನ ಹನ್ನೆರಡನೇ ವರುಷಕ್ಕೆ ಕದ್ರಿಮೇಳದಿಂದ ಬಣ್ಣದ ಬದುಕು ಆರಂಭ. ನಿತ್ಯ ವೇಷದಿಂದ ಹೆಜ್ಜೆ ಶುರು. ಕದ್ರಿವಿಷ್ಣು, ಕುಂಬಳೆ ತಿಮ್ಮಪ್ಪ ಮೊದಲಾದ ಹಿರಿಯರಿದ್ದ ಮೇಳದ ತಿರುಗಾಟ ಕೇದಗಡಿಯವರ ಯಕ್ಷಯಶಸ್ಸಿನ ಅಡಿಗಟ್ಟು. ಮುಂದೆ ಕದ್ರಿ, ಮೂಲ್ಕಿ, ಕೂಡ್ಲು, ಮುಚ್ಚೂರು ಮೇಳಗಳಲ್ಲಿ ವ್ಯವಸಾಯ. ನಿಜವಾದ ಯಕ್ಷಗಾನ ಅರಿವು ಬರಲು ಇಷ್ಟು ಮೇಳಗಳ ತಿರುಗಾಟ ಬೇಕಾಯಿತು. ಮಾತಿನ ಮಧ್ಯೆ ಹಿಂದೊಮ್ಮೆ ಹೇಳಿದ ಮಾತು ಮಿಂಚಿಮರೆಯಾಗುತ್ತದೆ.

ಕಟೀಲು ಮೇಳದ ಪ್ರವೇಶ ಕೇದಗಡಿಯವರ ಬಣ್ಣದ ಬದುಕಿಗೆ ಹೊಸ ತಿರುವನ್ನು ನೀಡಿತು. ಮೂರು ದಶಕಕ್ಕೂ ಮಿಕ್ಕಿ ಕಟೀಲು ರಂಗಸ್ಥಳದಲ್ಲಿ ಕುಣಿದರು, ಅಭಿನಯಿಸಿದರು. ಅತಿಕಾಯ, ಹಿರಣ್ಯಕಶಿಪು, ತಾಮ್ರಧ್ವಜ, ಕರ್ಣ, ಕಂಸ, ವೀರಮಣಿ, ರಕ್ತಬೀಜ, ಅರುಣಾಸುರದಂತಹ ಪಾತ್ರಗಳು 'ಗುಡ್ಡಪ್ಪಣ್ಣನ ವೇಷ ನೋಡಬೇಕು' ಎನ್ನುವಷ್ಟರ ಮಟ್ಟಿಗೆ ಬೆಳೆಸಿದರು. 'ತಾರಾಮೌಲ್ಯ' ಅರಸಿ ಬಂತು. ಜವ್ವನದಲ್ಲಿ ಆಭಿಮನ್ಯು, ಬಬ್ರುವಾಹನ, ಶ್ರೀದೇವಿ, ಕಯಾದು ಪಾತ್ರಗಳನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.
ಗೌಡರಿಗೆ ಓದುವಿಕೆ ಸಂಗಾತಿ ಇದ್ದಂತೆ. ಹಾಗಾಗಿ ವೇಷ ನಿರ್ವಹಣೆಯಲ್ಲಿ ಸಾಹಿತ್ಯ ಪರಿಪಕ್ವತೆ. ಪಾತ್ರ ಸ್ವಭಾವಗಳ ಅನಾವರಣ ಅವರ ವೈಶಿಷ್ಟ್ಯ. ಕೇವಲ ಒಂದು ಪದ್ಯಕ್ಕೋ, ಒಂದು ’ಬಾಣ’ಕ್ಕೆ ಸಾಯುವ ಪಾತ್ರ ಅವರದ್ದಲ್ಲ!


ಕೀರಿಕ್ಕಾಡು ಮಾಸ್ತರರ ಗರಡಿಯಲ್ಲಿ ಪಡೆದ ಸಂಸ್ಕಾರಗಳು ಜೀವನದುದ್ದಕ್ಕೂ ಅವರನ್ನು ರೂಪಿಸುವಲ್ಲಿ ಸಹಕಾರಿಯಾದುವು. 'ಕಲಾವಿದ ಶುಚಿ-ರುಚಿಯಾಗಿರಬೇಕು' ಇದು ಬಹುತೇಕ ಉಪದೇಶವಾದರೂ, ಕೇದಗಡಿಯವರಿಗೆ ನಿತ್ಯಾನುಷ್ಠಾನ. ಅವರು ವೇಷ ತೊಡುವಲ್ಲಿಂದ, ಕಳಚುವ ತನಕವೂ ಈ ಶುಚಿ-ರುಚಿಗಳು ಅವರನ್ನಾವರಿಸಿತ್ತು. ಬದುಕಿನ ವೇಷ ತೊಟ್ಟು, ಕಳಚುವ ತನಕವೂ ಹಾಗೇನೇ.

ತಾಳಮದ್ದಳೆಯಲ್ಲೂ ಕೇದಗಡಿಯವರದು ಹರಿತ ಚಿಂತನೆ. ಪಾತ್ರಗಳಲ್ಲೂ ಅಷ್ಟೇ. ನಾಟ್ಯ, ಅಭಿನಯ, ಮಾತುಗಾರಿಕೆ ಎಲ್ಲವೂ ಸಮಪಾಕ. ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ಹೇಳುತ್ತಾರೆ - ಗುಡ್ಡಪ್ಪ ಗೌಡರು ವೇಷ ತೊಟ್ಟು ರಂಗಪ್ರವೇಶಿಸಿದರೆ ಸಾಕು, 'ರಂಗಸ್ಥಳ ತುಂಬುವಂತಹ' ಅಭಿವ್ಯಕ್ತಿ ಅವರದು.

ಅರುವತ್ತಕ್ಕೂ ಮಿಕ್ಕಿ ಪ್ರಶಸ್ತಿ-ಪುರಸ್ಕಾರಗಳಿಂದ ಪುರಸ್ಕೃತರಾಗಿದ್ದ ಕೇದಗಡಿ ಗುಡ್ಡಪ್ಪ ಗೌಡರು ೬-೧-೨೦೦೮ರಂದು ವಿಧಿವಶರಾದರು. ಅವರನ್ನು ನೆನಪಿಸುವ ವೇಷವೂ ಇದ್ದಿದ್ದರೆ! (ಸಾಧ್ಯವಿಲ್ಲ ಎಂಬ ಅರಿವಿನೊಂದಿಗೆ) ಲೇಖನಾರಂಭದ ನನ್ನ ಆಶಯವೂ ಅದೇ.

No comments:

Post a Comment