Thursday, February 3, 2011

'ಸಾಮಗ ಪಡಿದನಿ' ಅನಾವರಣ



'ನಮ್ಮ ಕಾಲದ ಓರ್ವ ಶ್ರೇಷ್ಠ ಕಲಾವಾಗ್ಮಿ, ಮಾತಿನ ಲೋಕದ ಭಾವಾವೇಶಜೀವಿ ಮಲ್ಪೆ ರಾಮದಾಸ ಸಾಮಗರ ಒಡನಾಟ, ನೆನಪು, ರಂಗದ ಮೇಲಣ ಸಹವರ್ತಿತ್ವ - ಇವೆಲ್ಲ ಒಂದೊಂದು ವಿಶಿಷ್ಟ ಆಪ್ಯಾಯಮಾನ ಅನುಭವಗಳು. ಆರ್ಧ ಶತಮಾನಗಳ ಕಾಲ ಯಕ್ಷಗಾನದ ಮಾತುಗಾರಿಕೆಗೆ, ಹರಿಕಥಾ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ ಸಾಮಗರು ಓರ್ವ ವಿಶಿಷ್ಟ, ವಿಚಿತ್ರ ಪ್ರತಿಭಾವಂತ. ವಾಚಿಕದ ಅಂಗದಲ್ಲಿ ಅವರೋರ್ವ ಅಸಾಮಾನ್ಯ ಸಿದ್ಧಿಯಿದ್ದ ಪ್ರತಿಭಾಶಾಲಿ. ಸನ್ನಿವೇಶ ನಿರ್ಮಾಣ, ವಿವರಗಳ ಪೋಣಿಕೆ, ಪೂರಕ ಪಾಂಡಿತ್ಯ, ಭಾಷಾಸೌಂದರ್ಯ, ಶಬ್ದಾಲಂಕಾರ, ಅರ್ಥಾಲಂಕಾರ, ಧ್ವನಿಸೌಂದರ್ಯ, ಉತ್ಕಟಭಾವದ ಅವರ ಮಾತುಗಾರಿಕೆ ಒಂದು ಅಸಾಮಾನ್ಯ ಅನುಭವ' ಎಂದು ಯಕ್ಷಗಾನ ವಿಮರ್ಶಕ, ಅರ್ಥದಾರಿ, ವಿದ್ವಾಂಸ ಡಾ| ಎಂ.ಪ್ರಭಾಕರ ಜೋಶಿ ಹೇಳಿದರು.

ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿದ ಯಕ್ಷಗಾನದ ಮೇರು ಮಲ್ಪೆ ರಾಮದಾಸ ಸಾಮಗರ ಕುರಿತಾಗಿ ಪತ್ರಕರ್ತ, ಕಲಾವಿದ ಶ್ರೀ ನಾ. ಕಾರಂತ ಪೆರಾಜೆ ಸಂಪಾದಿಸಿದ 'ಸಾಮಗ ಪಡಿದನಿ' ಕೃತಿಯನ್ನು ಅನಾವರಣ ಗೊಳಿಸಿ ಮಾತನಾಡುತ್ತಾ, 'ಈ ಕೃತಿಯು ಸಾಮಗರ ಕಲಾಭಾವಜೀವನದ ದಾಖಲೆ. ಸಾಮಗರ ಮಾತಿನ ಲೋಕವೊಂದರ ದರ್ಶನ' ಎಂದರು.

ಅವಿನಾಶ್ ಕೊಡೆಂಕಿರಿ ಲೇಖಕರಾಗಿರುವ ಭರ್ತ್ಹರಿಯ ಶತಕಗಳು ಕೃತಿಯನ್ನು ಉಡುಪಿ ಎಂ.ಜಿ.ಎಂ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ಅರ್ಥದಾರಿ, ವಿದ್ವಾಂಸ ಪ್ರೊ:ಎಂ.ಎಲ್.ಸಾಮಗ ಬಿಡುಗಡೆ ಮಾಡಿ ಮಾತನಾಡುತ್ತಾ, 'ಜೀವನಕ್ಕೊಂದು ದಿಕ್ಕನ್ನು ಸೂಚಿಸುವ ಇಂತಹ ಕೃತಿಯ ಪ್ರಕಟಣೆ ಸ್ವಾಗತಾರ್ಹ' ಅಂದರು. ಲೇಖಕ ಅವಿನಾಶ್ ಕೊಡೆಂಕಿರಿ ಕೃತಿಯನ್ನು ಪರಿಚಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಸಭಾಧ್ಯಕ್ಷತೆಯನ್ನು ವಹಿಸಿ, 'ಪುಸ್ತಕ ಕೊಂಡು ಓದುವ ಪ್ರವೃತ್ತಿಯನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ರೂಢಿಸುವ ಕೆಲಸವನ್ನು ಹೆತ್ತವರು ಮಾಡಲೇಬೇಕಾದ ಅನಿವಾರ್ಯವಿದೆ' ಎಂದರು.

ಕೀರ್ತಿಶೇಷ ರಾಮದಾಸ ಸಾಮಗರಿಗೆ 'ಭೀಷ್ಮ ಮತ್ತು ಮಯೂರಧ್ವಜ' ಪ್ರಸಂಗಗಳನ್ನು ತಾಳಮದ್ದಳೆ ಮೂಲಕ ಪ್ರಸ್ತುತಪಡಿಸಿ 'ಯಕ್ಷನಮನ' ಸಲ್ಲಿಸಲಾಯಿತು. ಶ್ರೀಗಳಾದ ಹೊಸಮೂಲೆ ಗಣೇಶ ಭಟ್, ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಜಗನ್ನಿವಾಸ ರಾವ್ ಪಿ.ಜಿ., ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣಪ್ರಕಾಶ ಉಳಿತ್ತಾಯ, ಡಾ.ಜೋಶಿ, ಪ್ರೊ:ಎಂ.ಎಲ್.ಸಾಮಗ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಾಭಟ್, ಭಾಸ್ಕರ ಬಾರ್ಯ ಕಲಾವಿದರಾಗಿ ಭಾಗವಹಿಸಿದ್ದರು.

ಆರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಶ್ರೀ ಪಾತಾಳ ವೆಂಕಟ್ರಮಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು. ಕೊಡೆಂಕಿರಿ ಪ್ರಕಾಶನದ ಪ್ರಕಾಶ್ ಕುಮಾರ್ ಕೊಡೆಂಕಿರಿ ಸ್ವಾಗತಿಸಿದರು. ದೀಪಾ ಬುಕ್ ಹೌಸ್ನ ಸತ್ಯಮೂರ್ತಿ ಹೆಬ್ಬಾರ್ ಅತಿಥಿಗಳಿಗೆ ಪುಸ್ತಕ ನೀಡಿ ಗೌರವಿಸಿದರು. ಉಪನ್ಯಾಸಕ ಡಾ.ಬಿ.ಎನ್.ಮಹಾಲಿಂಗ ಭಟ್ ನಿರ್ವಹಿಸಿದರು. ಸಾಮಗ ಪಡಿದನಿ ಕೃತಿಯ ಲೇಖಕ ನಾ. ಕಾರಂತ ಪೆರಾಜೆ ವಂದಿಸಿದರು. ಆರಂಭದಲ್ಲಿ ಸ್ವಪ್ನಾ ಉದಯಕುಮಾರ್ ಕೊಡೆಂಕಿರಿ ಪ್ರಾರ್ಥಿಸಿದರು.

No comments:

Post a Comment