Thursday, December 1, 2011

ಬೊಂಬೆಗಳೂ ಮಾತನಾಡುತ್ತವೆ!

'ಬೊಂಬೆ'ಗೆ ಮಾತಿಲ್ಲ. ಭಾವನೆಯಿಲ್ಲ. ಚಲನೆಯಿಲ್ಲ. ಆದರೆ ರೂಪವಿದೆ, ಆಯವಿದೆ, ಆಕಾರವಿದೆ. ಅದು ಮಾತನಾಡಿದರೆ ಬೊಂಬೆಯಲ್ಲ. (ಗೊಂಬೆ = ಬೊಂಬೆ)

ಆ ಒಂದು ದಿನ. ಬೊಂಬೆಗಳು ಮಾತನಾಡಿದುವು. ಕುಣಿದುವು, ಕೈಕಾಲುಗಳನ್ನಾಡಿಸಿದುವು. ಭಾವನೆಗಳೇ ಭಾಷೆಗಳಾದುವು. ಅದು ಸಭಾಭವನ ಪೂರ್ತಿ ಆವರಿಸಿತು. ಮತ್ತೆ ಮತ್ತೆ ಕಾಡಲು ಶುರುವಾಯಿತು. 'ಬೊಂಬೆಗಳಾದ ನಮಗೇ ಮಾತು ಬರುತ್ತವೆ. ನೀವು ಮಾತನಾಡಿದರೂ ಬದುಕಿನಲ್ಲಿ ಕೆಲವೊಂದು ಸಲ ನಮ್ಮಂತೆ ಆಗುತ್ತೀರಲ್ಲಾ' ಎಂದು ಅಣಕಿಸಿದಂತೆ ಭಾಸವಾಯಿತು.

ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಬೊಂಬೆಗಳು ಮಾತನಾಡುತ್ತಿದ್ದಾಗ (೧೫-೧೧-೨೦೧೧) ಒಂಭೈನೂರ ಐವತ್ತು ವಿದ್ಯಾರ್ಥಿಗಳು ನಿಜಕ್ಕೂ ಬೊಂಬೆಗಳಾದರು! ಚಿಕ್ಕ ವೇದಿಕೆಯಲ್ಲಿ ಹಾದು ಹೋಗುವ ಅವುಗಳ ಕಾರುಬಾರು ಕ್ಷಣಕ್ಷಣಕ್ಕೂ ಏರುಗತಿಗೆ ಬದಲಾಗುತ್ತಿತ್ತು. ಒಂದು ಘಂಟೆಯಲ್ಲಿ ಇಡೀ ಪೌರಾಣಿಕ ಬದುಕನ್ನು ಕಟ್ಟಿಕೊಟ್ಟಿತ್ತು. 'ಕಲೆಗೆ ಜಾತಿ, ಭಾಷೆ, ಅಂತಸ್ತಿನ ಬಂಧನವಿಲ್ಲ' ಎಂಬುದನ್ನು ಸಾರಿತ್ತು.

ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ) ಇವರು 'ನರಕಾಸುರ ವಧೆ' ಎಂಬ ಯಕ್ಷಗಾನ ಪ್ರಸಂಗವನ್ನು ಬೊಂಬೆಗಳಿಂದಲೇ ಆಡಿಸಿದರು. ನಿರ್ದೇಶಕರಾದ ಕೆ.ವಿ.ರಮೇಶ್ ಮತ್ತು ಸಹೋದರರ ಭಾವನೆಗಳಂತೆ ಕಿರು ವೇದಿಕೆಯಲ್ಲಿ ಕುಣಿದ ಚಿಕ್ಕ ಗೊಂಬೆಗಳು ನರಕಾಸುರ, ಕೃಷ್ಣ, ದೇವೇಂದ್ರ, ಸತ್ಯಭಾಮೆಗಳಾಗಿ ಕಾಣಿಸಿಕೊಂಡವು.

ಬೊಂಬೆಯಾಟ ಸಂಘಕ್ಕೆ ಈಗ ಮೂವತ್ತರ ಹರೆಯ. ಮೂವತ್ತು ಶಾಲೆಗಳಲ್ಲಿ ಬೊಂಬೆಯಾಟವನ್ನು ಆಡುವುದರ ಮೂಲಕ ವಿದ್ಯಾರ್ಥಿಗಳಿಗೆ ಕಳೆದುಹೋಗುತ್ತಿರುವ ಕಲೆಯೊಂದನ್ನು ಪರಿಚಯಿಸುವ ಉದ್ದೇಶ. ಪುತ್ತೂರಿನ ಫಿಲೋಮಿನಾದಲ್ಲಾದುದು ಇಪ್ಪತ್ತೆರಡನೇ ಪ್ರಯೋಗ. ಮುಂದಿನ ಜನವರಿಯಲ್ಲಿ ರಾಜಧಾನಿಯಲ್ಲಿ ಸಮಾರೋಪ. ಮೂವತ್ತು ಪ್ರದರ್ಶನಗಳಿಗೆ ಇನ್ಫೋಸಿಸ್ ಸಾರಥ್ಯ.

'ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ' ಶೀರ್ಶಿಕೆಯನ್ನು ಮುಂದಿಟ್ಟು ಅಭಿಯಾನದ ಅಖಾಡಕ್ಕಿಳಿದವರು ನಿವೃತ್ತ ಅಧ್ಯಾಪಕ, ಸಹೃದಯಿ ಎಂ.ವಿ.ಭಟ್ ಮಧುರಂಗಾನ. ಅವರು ಬೊಂಬೆಯಾಟ ತಂಡವನ್ನು ಹತ್ತಿರದಿಂದ ಬಲ್ಲವರು. ಅವರು ಒಂದೆಡೆ ಬರೆಯುತ್ತಾರೆ :
ಬೊಂಬೆಯಾಟ ಸಂಘದ ಸಾಧನೆ ಅತ್ಯದ್ಭುತ. ಸದ್ದುಗದ್ದಲವಿಲ್ಲದ ಮೌನ ಕ್ರಾಂತಿ. ಎರಡು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ನೀಡಿದೆ.

ಕಲಾ ಮೇಳಗಳಲ್ಲಿ, ಜಾನಪದ ಮೇಳಗಳಲ್ಲಿ ಭಾಗವಹಿಸಿದೆ. ಕೇರಳ, ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲಿ ಸಂಚರಿಸಿವೆ. ಪಾಕಿಸ್ತಾನದ ಲಾಹೋರ್, ದುಬೈ, ಪ್ರಾನ್ಸಿನ ಪ್ಯಾರಿಸ್, ಯುರೋಪಿನ ಜೆಕೋಸ್ಲೋವಾಕಿಯಾದ ಫ್ರಾಗ್ನಲ್ಲಿ ಬೊಂಬೆಗಳು ಕುಣಿದಿವೆ. ಆಕಾಶವಾಣಿ, ದೂರದರ್ಶನ, ಮಾಧ್ಯಮಗಳಿಂದ ಹೊಗಳಿಸಿಕೊಂಡಿದೆ. ನಮ್ಮ ಕನ್ನಾಡಿನ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.

ತಂಡದ ನಾಯಕ ಕೆ.ವಿ.ರಮೇಶ್ ಅವರಿಗೆ ಬೊಂಬೆಯಾಟ ಉಸಿರು. ಜೀವನದ ಭಾಗ. ಅದೊಂದು ಸಂಸ್ಕೃತಿ. 'ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ. ಮುಂದಿನ ಜನರೇಶನ್ಗೆ ಇಂತಹುದೊಂದು ಕಲಾಪ್ರಕಾರವಿದೆ ಎಂಬ ಅರಿವು ಉಂಟಾಗಲಿ ಎಂಬುದಕ್ಕಾಗಿ ಶಾಲೆಗಳಿಗೆ ಹೊರಟಿದ್ದೇವೆ' ಎನ್ನುತ್ತಾರೆ.

ರಮೇಶ್ ಕಳಕಳಿಯ ಹಿಂದೆ ಉದ್ದೇಶವೂ ಇದೆ - '1900ರ ಸುಮಾರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವತ್ತು ಬೊಂಬೆಯಾಟ ತಂಡಗಳಿದ್ದುವಂತೆ. 1981ರಲ್ಲಿ ಎಂಟಕ್ಕೆ ಇಳಿಯಿತು. 2010ರಲ್ಲಿ ಕೇವಲ ಎರಡು. ಒಂದು ಬಡಗಿನ ಉಪ್ಪಿನಕುದ್ರು ಭಾಸ್ಕರ ಕೊಗ್ಗ ಕಾಮತರ ತಂಡ. ಮತ್ತೊಂದು ಕಾಸರಗೋಡಿನದು..' ರಮೇಶ್ ಮಾತನಾಡುತ್ತಿದ್ದಾಗ ಸಾಂಸ್ಕೃತಿಕ ಪಲ್ಲಟವೊಂದರ ಚಿತ್ರ ಕಣ್ಮುಂದೆ ಹಾದು ಹೋಗುತ್ತದೆ.

'ಬೊಂಬೆಯಾಟದ ಸಂಘ ಏಳುಗಳೊಂದಿಗೆ ಬೀಳುಗಳನ್ನೂ ಅನುಭವಿಸಿದೆ. ಬೊಂಬೆಗಳ ತಯಾರಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಪ್ರಯಾಣ ಮತ್ತು ಪ್ರದರ್ಶನಗಳಿಗಾಗಿ ಲೆಕ್ಕಕ್ಕೆ ಸಿಗದಷ್ಟು ಖರ್ಚು ಮಾಡಿದೆ. ಸಾಲಸೋಲಗಳಿಂದ ಸೊರಗಿದೆ. ಆದರೆ ಬಳಲಿ ಕುಳಿತಿಲ್ಲ. ನಿರಾಶೆಯಿಂದ ಕೈಬಿಟ್ಟಿಲ. ಇನ್ನೂ ಉತ್ಸಾಹದಲ್ಲಿದೆ' ಎನ್ನುತ್ತಾರೆ ಎಂ.ವಿ.ಭಟ್.

'ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ'ಯ ಸಂಕಲ್ಪ ರಮೇಶರ ಮುಂದೆ ಸ್ಪಷ್ಟವಾಗಿದೆ. ಕೇರಳ ಮತ್ತು ಕರ್ನಟಕದ ಐವತ್ತು ಸಾವಿರ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಉದ್ದೇಶ. ಈ ಯೋಜನೆಗೆ ಹೆಗಲೆಣೆಯಾಗಿ ನಿಂತವರು ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥೆ ಸುಧಾಮೂರ್ತಿಯವರು. 'ಅವರ ಈ ಕೊಡುಗೆಯಿಂದ ಅಳಿವಿನಂಚಿನಲ್ಲಿರುವ ಒಂದು ಪ್ರಾಚೀನ ಜಾನಪದ ಕಲೆಯನ್ನು ಪುನಶ್ಚೇತನಗೊಳಿಸಿದಂತಾಗಿದೆ. ಮುಂದಿನ ತಲೆಮಾರಿಗೆ ಈ ವಿಶಿಷ್ಟ ಕಲೆಯನ್ನು ಪರಿಚಯಿಸಿದಂತಾಗಿದೆ' ಎಂಬ ಖುಷಿ ರಮೇಶರಿಗಿದೆ.

ರಮೇಶ್ ಅವರ ಮುಂದೆ ಹಲವು ಕನಸುಗಳಿವೆ. ಬೊಂಬೆಯಾಟದ ರಂಗಮಂದಿರ, ಬೊಂಬೆ ನಿರ್ಮಾಣ ಶಾಲೆ, ಸಾವಿರ ಬೊಂಬೆಗಳ ಒಂದು ಮ್ಯೂಸಿಯಂ, ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ ಒಂದು ಗ್ರಂಥಾಲಯ.. ನಿಕಟ ಭವಿಷ್ಯದ ಯೋಜನೆ-ಯೋಚನೆ. ಕಲೆ, ಭಾಷೆ, ಸಂಸ್ಕೃತಿಯನ್ನು ಪ್ರೀತಿಸುವ ಮನಸ್ಸುಗಳು 'ಮನಸ್ಸು ಮಾಡಿದರೆ' ಕಷ್ಟವೇನಿಲ್ಲ.

ಫಿಲೋಮಿನಾ ಪ್ರೌಢಶಾಲೆಯಲ್ಲಿ ಪ್ರದರ್ಶನದ ಬಳಿಕ ವಿದ್ಯಾರ್ಥಿಗಳ ಎದುರಿಗೆ ಬೊಂಬೆಗಳನ್ನು ತಂದರು. ಬೆರಳುಗಳ ಮೂಲಕ ಕುಣಿಸಿದರು. ಒಂದಿಬ್ಬರು ವಿದ್ಯಾರ್ಥಿಗಳನ್ನು ವೇದಿಕೆಗೆ ಬರಹೇಳಿ ಅವರ ಕೈಯಲ್ಲಿ ಬೊಂಬೆಗಳನ್ನು ಕೊಟ್ಟರು. ಅಧ್ಯಾಪಿಕೆಯರ ಕೈಗೂ ನೀಡಿದರು. ಪ್ರದರ್ಶನ ಮುಗಿಸಿ ಹೊರಡುವಾಗ ಎಲ್ಲರ ಮನದಲ್ಲೂ ಗೊಂಬೆಗಳೇ ಆವರಿಸಿದ್ದುವು.

ಪ್ರತಿ ಪ್ರದರ್ಶನದಲ್ಲಿ ಚಿಕ್ಕ ಸಭಾ ಕಾರ್ಯಕ್ರಮ. ಒಬ್ಬರು ಉದ್ಘಾಟಕರು. ಇನ್ನೊಬ್ಬರು ಮುಖ್ಯ ಅತಿಥಿಗಳು. ಮತ್ತೊಬ್ಬರು ಅತಿಥೇಯರು. ಯಾರಿಗೂ ಮಾತಿಗೆ ಅವಕಾಶವಿಲ್ಲ. ಯಕ್ಷಗಾನ ಬೊಂಬೆಯ ಕೈಯಲ್ಲಿರುವ ದೀಪವನ್ನು ಉದ್ಘಾಟಕರು ದೀಪದಲ್ಲಿರುವ ಬತ್ತಿಗೆ ಸೋಕಿಸಿದರಾಯಿತು. ಅಲ್ಲಿಗೆ ಉದ್ಘಾಟನಾ ಸಮಾರಂಭಕ್ಕೆ ಮುಕ್ತಾಯ. ಅತಿಥಿಗಳಿಗೆ ಸ್ಮರಣಿಕೆ, ಶಾಲು. ಗೌರವದ ಸ್ವಾಗತ-ಧನ್ಯವಾದ. ಈ ರೀತಿಯ ಚಿಕ್ಕ ಸಮಾರಂಭವು ಕಾಲದ ಆವಶ್ಯಕತೆ.

ಹಾಂ.. ಒಂದು ವಿಷಯ ಮರೆತುಬಿಟ್ಟೆ. ರಮೇಶರ ಬೊಂಬೆಯಾಟ ಸಂಘದ ಬೊಂಬೆಗಳಿವೆಯಲ್ಲಾ, ಇವುಗಳು ವಿಶ್ವದಲ್ಲೇ ಅತೀ ಸುಂದರ ಮತ್ತು ಅತಿ ಚಿಕ್ಕ ಗೊಂಬೆಗಳು ಎಂಬ ಖ್ಯಾತಿ ಪಡೆದಿವೆ.

No comments:

Post a Comment