Monday, September 17, 2012

ಹಿರಿಯ ಸ್ನೇಹಿತ, ಕಲಾವಿದ ಮಧೂರು ಗಣಪತಿ ರಾವ್



          ಹಿರಿಯ ಯಕ್ಷಗಾನ ಕಲಾವಿದ ಮಧೂರು ಗಣಪತಿ ರಾವ್ 16 ಸೆಪ್ಟೆಂಬರ್ 2012ರಂದು ವಿಧಿವಶರಾದರು. ಅವರಿಗೆ 88 ವರುಷ ಪ್ರಾಯ.
           ತಂದೆ ಸುಬ್ಬರಾವ್. ತಾಯಿ ರುಕ್ಮಿಣಿ. 1924ರಲ್ಲಿ ಜನನ. ಸಹೋದರ ನಾರಾಯಣ ಹಾಸ್ಯಗಾರರ ಪೂರ್ಣ ಬೆಂಬಲ, ಪ್ರೇರಣೆ. ನಿತ್ಯ ವೇಷಧಾರಿಯಾಗಿ ಶ್ರೀ ಧರ್ಮಸ್ಥಳ ಮೇಳದಿಂದ ಬಣ್ಣದ ಬದುಕು ಆರಂಭ. 
              ಕೂಡ್ಲು, ಕುದ್ರೋಳಿ, ಮೂಲ್ಕಿ, ಕುಂಡಾವು, ಸುರತ್ಕಲ್, ಉಪ್ಪಳ ಮೇಳಗಳಲ್ಲಿ ಐದು ದಶಕದ ಕಲಾ ಸೇವೆ. ಬಬ್ರುವಾಹನ, ಧರ್ಮಾಂಗದ, ಚಂದ್ರಸೇನ, ಸುದರ್ಶನ, ಅರ್ಜುನ, ಕರ್ಣ, ತಾಮ್ರಧ್ವಜ, ಇಂದ್ರಜಿತು, ರಕ್ತಬೀಜ.. ಹೀಗೆ ವಿವಿಧ ಸ್ವಭಾವದ ಪಾತ್ರಗಳಲ್ಲಿ ಮಿಂಚಿದವರು. ತಾಳಮದ್ದಳೆಯಲ್ಲೂ ಪ್ರತ್ಯೇಕ ಛಾಪು.
              ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದಲ್ಲಿ ಸಕ್ರಿಯರಾಗಿದ್ದರು. ಸ್ಥಳೀಯವಾಗಿ ಕೂಟಾಟಗಳನ್ನು ನಡೆಸಿದ್ದಾರೆ. ಆಕಾಶವಾಣಿ, ದೂರದರ್ಶನ ಮತ್ತು ವಿವಿಧ ವಾಹಿನಿಗಳಲ್ಲಿ ತೊಡಗಿಸಿಕೊಂಡವರು.
                ಕೇರಳ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದರು. ತಾನು ಸಂಯೋಜಿಸುವ ಎಲ್ಲಾ ಕೂಟಾಟಗಳಲ್ಲಿ ಅಚ್ಚುಕಟ್ಟುತದತ್ತ ಅವರ ಒಲವು ಹೆಚ್ಚು. ಕಾರ್ಯಕ್ರಮ ಶುರುವಾಗುವ ತನಕ ಚಡಪಡಿಕೆ. 'ಆಹ್ವಾನಿತ ಕಲಾವಿದರು ಬರ್ತಾರೋ, ಇಲ್ವೋ' ಎಂಬ ಒತ್ತಡ. 'ಕಾರ್ಯಕ್ರಮ ಒಳ್ಳೆಯದಾಗಬೇಕು' ಎನ್ನುವುದು ಹಿಂದಿರುವ ಕಾಳಜಿ. ಅವರೊಂದಿಗೆ ವೇಷ ಮಾಡುವ ಅನುಭವ ಇದೆಯಲ್ಲಾ, ಅದೊಂದು ರೋಚಕ! ಅನುಭವಿಸಿದವರಿಗೆ ಗೊತ್ತು.
               ಪಾಪಣ್ಣ ವಿಜಯ ಪ್ರಸಂಗದದಲ್ಲಿ ಅವರದು 'ಚಂದ್ರಸೇನ', ನನ್ನ ಪಾತ್ರ 'ಗುಣಸುಂದರಿ'. ಪ್ರಸಂಗದ ಆರಂಭಕ್ಕೆ 'ತಂದೆ ಮೇಲೋ, ಗಂಡ ಮೇಲೋ' ಎಂಬ ವಾದ ಶುರುವಾಗುತ್ತದೆ. ಅವರ ಅನುಭವದ ಮಾತಿನ ಪರಿಪಕ್ವತೆಯ ಮುಂದೆ ನಾನು ಮೂಕನಾದಾಗ, ಪ್ರಶ್ನೆಗಳ ಮೂಲಕ ಮಾತನಾಡಿಸುತ್ತಿದ್ದರು. ಧೈರ್ಯ ತುಂಬುತ್ತಿದ್ದರು. ಆ ಬಳಿಕದ ಅವರ ಒಡನಾಟಗಳೆಲ್ಲಾ ಇನ್ನು ನೆನಪು ಮಾತ್ರ.
             ಒಂದು ಕ್ಷಣಕ್ಕೆ ಸಿಟ್ಟಾಗುವ, ಮತ್ತೊಂದು ಕ್ಷಣದಲ್ಲಿ ರಾಜಿ ಮಾಡಿಕೊಳ್ಳುವ ಮಗುವಿನ ಮನಸ್ಸು. ಹೇಳುವ ವಿಚಾರವನ್ನು ನೇರವಾಗಿ ಹೇಳುತ್ತಾರೆ. ಹೀಗಾಗಿ ಕೆಲವೊಮ್ಮೆ ಒರಟಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಒಡನಾಟವಿರುವ, ಅವನ ಮನಸ್ಸನ್ನು ಅರಿತ ಮಂದಿಗೆ ಅವರು ಒರಟಲ್ಲ. ಮೃದು.
               ಒಮ್ಮೆ ಅವರ ಪರಿಚಯವಾದರೆ ಸಾಕು, ಮತ್ತೆಂದೂ ನಿಮ್ಮನ್ನು ಬಿಡರು. ಅಷ್ಟೊಂದು ಸ್ನೇಹಬಂಧ. ಕಳೆದ ಮೂರು ವರುಷದಿಂದ ಶಾರೀರಿಕವಾಗಿ ಸೊರಗಿದ್ದ ಗಣಪತಿ ರಾಯರು, ಮೂಡ್ ಬಂದಾಗ ತಾಳಮದ್ದಳೆಗಳಲ್ಲಿ ಭಾಗವಹಿಸಿದುದನ್ನು ಅವರ ಒಡನಾಡಿ ವಿಷ್ಣು ಭಟ್, ಬಾಲಚಂದ್ರ ಕಲ್ಲೂರಾಯ, ವೆಂಕಟಕೃಷ್ಣರು ಜ್ಞಾಪಿಸಿಕೊಳ್ಳುತ್ತಾರೆ.
ಹಿರಿಯ ಸ್ನೇಹಿತ, ಕಲಾವಿದ ಗಣಪತಿ ರಾಯರಿಗೆ ಅಕ್ಷರ ನಮನ.  

ಚಿತ್ರ : ಪ್ರದೀಪ್ ಕುಮಾರ್ ಬೇಕಲ್


No comments:

Post a Comment