Monday, July 27, 2020

ಪದಯಾನಕ್ಕೊಂದು ಉಪಕ್ರಮ

(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ವು 2016ರಲ್ಲಿ ಅನಾವರಣಗೊಂಡಿತ್ತು. ಅದರ ಪ್ರತಿಗಳು ಅಲಭ್ಯ. ಸೀಮಿತ ಪ್ರತಿಗಳು ಮಾತ್ರ ಅಂದು ಮುದ್ರಣಗೊಂಡಿದ್ದು, ಈಗ ಪ್ರತಿಗಳು ಅಲಭ್ಯ. ಈ ಹಿನ್ನೆಲೆಯಲ್ಲಿ ಪದಯಾನ ಕೃತಿಯಲ್ಲಿರುವ ಪದ್ಯಾಣರ ಸ್ವಗತ ಲೇಖನವು ಇಂದಿನಿಂದ ಪ್ರಕಟಗೊಳ್ಳುತ್ತಿದೆ.)

ಅಪೂಜ್ಯೋ ಪೂಜ್ಯತೇ ಯತ್ರ ಪೂಜ್ಯೋ ಯತ್ರ ಪೂಜ್ಯತೇ |
ತ್ರೀಣಿ ತತ್ರ ಭವಿಷ್ಯಂತಿ ದುರ್ಭಿಕ್ಷಾ ಮರಣಮ್ ಭಯಮ್ ||
ಎನ್ನುವುದೊಂದು ನಲ್ನುಡಿ.
                ಪೂಜ್ಯನನ್ನು ಪೂಜಿಸಲೇಬೇಕಂತೆ. ಅದಕ್ಕರ್ಹನಲ್ಲದವನನ್ನು ಖಂಡಿತ ಗೌರವಿಸಬಾರದಂತೆ. ಇದಕ್ಕೆ ವಿರುದ್ಧವಾಗಿ ನಡೆದಲ್ಲಿ ದುರ್ಭಿಕ್ಷೆ,  ಮರಣ ಹಾಗೂ ಭಯವು ತನ್ನಿಂದ ತಾನೇ ಉದ್ಭವಿಸಲು ಕಾರಣವಾಗುತ್ತದೆಯಂತೆ. ಆದ್ದರಿಂದ ಲಾಘವವುಳ್ಳವನನ್ನು ಗೌರವಿಸದೇ ಉಳಿಯುವಲ್ಲಿ ಹಿಂಜರಿಕೆಯಿರುವಂತೆಯೇ, ಮಾನ್ಯನನ್ನು ಮಾನಿಸುವಲ್ಲಿಯೂ ಹೊಣೆಗಾರಿಕೆಯು ಇರಲೇಬೇಕು.
                ಭಾಗವತ ಪದ್ಯಾಣ ಗಣಪತಿ ಭಟ್ಟರು ಯಕ್ಷಗಾನೀಯವಾಗಿ ನಡೆದುಬಂದ ದಾರಿಯೇ ಅವರನ್ನು ಮಾನ್ಯರೆಂದು ನಿರ್ವಿವಾದವಾಗಿ ಸ್ವಯಂಪ್ರೇರಿತವಾಗಿ ಅಂಗೀಕೃತಗೊಳಿಸಿದೆ. ಆದುರಿಂದಲೇ ಸಹೃದಯ ಮಾನ್ಯರಾದ ಭಾಗವತರನ್ನು ಮಾನಿಸಬೇಕೆಂದು ಬಂಧುಗಳಿಗೆ ಮನ ತುಂಬಿ ಬಂದದ್ದು.
                ವಿಚಾರದಲ್ಲಿ ಪದ್ಯಾಣರ ಆಭಿಮಾನಿಗಳು ಒಟ್ಟು ಸೇರಿ ಚರ್ಚಿಸುವಾಗ ಭಾಗವತರೂ, ಅರುವತ್ತರ ವಯಸ್ಸಿನ ಕಾಲಘಟ್ಟದಲ್ಲಿರುವುದು ತಿಳಿಯಿತು. ಸಮಯವೇ ಅವರನ್ನು ಮಾನಿಸಲು ಸೂಕ್ತವೆಂದು, ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಯೋಚಿಸಿದೆವು. ಅದಕ್ಕಾಗಿ ಸಾರ್ವಜನಿಕವಾಗಿ ಸಭೆಯೂ ನಡೆಯಿತು. ಸಹೃದಯರ ಅಭಿಪ್ರಾಯವನ್ನು ಕಲೆ ಹಾಕಲಾಯಿತು.
                ಅಲ್ಲಿ ಭಾಗವತರಿಗೆ ಕೇವಲ ಸಮಾರಂಭದ ಮುಖೇನ ಗೌರವಿಸಿದಲ್ಲಿ ಅದು ತತ್ಕಾಲಕ್ಕೆ ಮಾತ್ರ ಮನಃಪಟಲದಲ್ಲಿ ಉಳಿಯುವುದರಿಂದ ಅವರ ಗೌರವವು ಅಕ್ಷರವಾಗಬೇಕೆಂಬುದೂ ವಿದ್ವಜ್ಜನರ, ಅಭಿಮಾನಿಗಳ ಬೇಡಿಕೆಯಾಯಿತು. ಅದಕ್ಕಾಗಿ ಅವರ ಗೌರವಾರ್ಥ ಅಕ್ಷರದ ಪುಸ್ತಕವನ್ನು ಹೊರ ತರುತ್ತಿದ್ದೇವೆ.
                ಮಹಾತ್ಮೋ ಯೇನ  ಗತಾಃ    ಪಂಥಾಃ ಎಂಬ ವಾಕ್ಯದಂತೆ ಪದ್ಯಾಣರ ಜೀವನದ ವರೆಗಿನ ನೆನಪುಗಳು ಮುಂದೆ ಲೋಕಕ್ಕೆ ದಾರಿಯಾಗಲಿ, ದಾರಿದೀಪವಾಗಲಿ ಎನ್ನುವುದೇ ಇದರ ಉದ್ದೇಶ.
                ಸಹೃದಯರು, ಕಲಾವಿದರು, ಕಲಾಭಿಜ್ಞರು, ಕಲಾಪೋಷಕರು, ಕಲಾಸಂಘಟಕರು ಮಹತ್ಕಾರ್ಯದಲ್ಲಿ ತೊಡಗಿದ್ದಾರೆ, ತೊಡಗಿಸಿಕೊಂಡಿದ್ದಾರೆ. ಓದುಗರಾದ ನೀವೂ ಇದನ್ನು ಹೃದ್ಗತವಾಗಿಸಿದಲ್ಲಿ ನಮ್ಮ ಪ್ರಯತ್ನ ಸಾರ್ಥಕ.

- ಶ್ರೀಹರಿನಾರಾಯಣದಾಸ ಆಸ್ರಣ್ಣ
ಅಧ್ಯಕ್ಷ,  ಪದಯಾನ ಅಭಿನಂದನಾ ಸಮಿತಿ
21-05-2016


No comments:

Post a Comment