Monday, July 27, 2020

ಪ್ರಣತಿ

ಸಂಪಾದಕನ ಮಾತು
          ಪದ್ಯಾಣ ಗಣಪತಿ ಭಟ್ಟರು - ಗಣಪಣ್ಣ, ಗಣಪ್ಪಣ್ಣ, ಗಣಪ್ಪ, ಗೆಣಪ್ಪ - ಯಕ್ಷಗಾನದ ಸವರ್ಾದರಣೀಯ ಭಾಗವತ. ಹಲವು ದಶಕಗಳ ಯಕ್ಷಧ್ವನಿ. ಈ ಶಾರೀರಕ್ಕೆ ಗಾನವೇ ಮೆಚ್ಚಿದೆ, ಬೆಚ್ಚಿದೆ; ಲಯವೇ ಒಗ್ಗಿದೆ, ತಗ್ಗಿದೆ. ಬೇರೆಲ್ಲಾ ಧ್ವನಿಗಳನ್ನು ತನ್ನೊಳಗೆ ಸೇರಿಸಿಕೊಳ್ಳುವ ಮಾಂತ್ರಿಕ ಶಕ್ತಿಯೇ ಅದು ಪದ್ಯಾಣ ಶೈಲಿ.
          ಗಣಪಣ್ಣ ಈಗ ಅರುವತ್ತರ ಖುಷಿಯಲ್ಲಿದ್ದಾರೆ. ಈ ಸಂಭ್ರಮವು ಯಕ್ಷಲೋಕದ ಸಂಭ್ರಮವಾಗಬೇಕು. ಪದ್ಯಾಣರು ಗೌರವಿಸಲ್ಪಡಬೇಕು. ಪದ್ಯಾಣ ಶೈಲಿಯು ಮಾನಿಸಲ್ಪಡಬೇಕು. ಅದು ನಮ್ಮೆಲ್ಲರ ಉತ್ಸವವಾಗಬೇಕು. ಈ ಆಶಯದಿಂದ ಪದಯಾನ ಅಭಿನಂದನಾ ಸಮಿತಿ ರೂಪುಗೊಂಡಿದೆ. ವಿವಿಧ ಕಾರ್ಯಹೂರಣಗಳನ್ನು ಹಮ್ಮಿಕೊಂಡಿದೆ.
          ಅವರ ಬದುಕಿನ ಯಾನಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನು ಸಮಿತಿಯು ವಹಿಸಿದೆ. ಜವಾಬ್ದಾರಿ ಹೆಗಲೇರಿದಾಗ ಅಧೀರನಾಗಿದ್ದೆ. ಸಾಕಾರದ ಸಾಧುತ್ವಕ್ಕೆ ಒದ್ದಾಡಿದೆ. ಮಿತಿಯನ್ನು ಪ್ರಶ್ನಿಸಿದೆ. ಅರ್ಹತೆ ಜತೆಗೆ ಮಾತನಾಡಿದೆ. ಯೋಗ್ಯತೆಯನ್ನು ಮಾತಿಗೆಳೆದೆ. ಉಹೂಂ... ಉತ್ತರವಿಲ್ಲ.
          ಖ್ಯಾತ ಭಾಗವತರು. ಗಟ್ಟಿಯಾದ ಪದಯಾನ ಸಮಿತಿ. ಸಂಭ್ರಮದ ದೂರದೃಷ್ಟಿ. ಎಲ್ಲಕ್ಕಿಂತಲೂ ಮುಖ್ಯವಾಗಿ ಪದ್ಯಾಣರೊಳಗಿನ ಭಾಗವತನಿಗೆ ನ್ಯಾಯ ಸಲ್ಲಬೇಕು. ನನ್ನಿಂದ ಸಾಧ್ಯವಾ? ತಿಂಗಳುಗಳು ಉರುಳಿದುವು.
           ಖ್ಯಾತ ಭಾಗವತ ಎನ್ನುವ ಅಭಿದಾನವು ಮಾನಸಿಕ ತಡೆಯಾಗಿತ್ತು. ಯಾಕೆಂದರೆ ಖ್ಯಾತರಲ್ಲಿ ಮಾತನಾಡುವುದೇನನ್ನು? ಅವರೊಳಗಿದ್ದ ಖ್ಯಾತಿ ಮಾತಿಗೆ ಅಡ್ಡಿಪಡಿಸದೇ? ನನ್ನೆಲ್ಲಾ ಸಂಶಯವನ್ನು ಪದ್ಯಾಣರು ಹುಸಿಗೊಳಿಸಿದರು. ಮಾತಿಗೆಳೆಯುವ ಕ್ಷಣಕ್ಕೆ ಶ್ರೀಕಾರ. ಮಾತನಾಡುತ್ತಾ ಹೋದರು. ಮತ್ತೆ ತಿಳಿಯಿತು - ಅವರಿಗೂ, ಅವರೊಳಗಿದ್ದ ಖ್ಯಾತಿಗೂ ಮುನಿಸು!
          ಪದ್ಯಾಣರು ಬದುಕಿನೊಳಗೆ ಇಳಿಯಲು ಅನುವು ಮಾಡಿಕೊಟ್ಟರು. ತಮ್ಮ ಶೈಲಿಯಲ್ಲಿ ಅನುಭವವನ್ನು ಬಿಚ್ಚಿಟ್ಟರು. ಬಿಡಬೇಕಾದುದನ್ನು ಬಿಟ್ಟು, ಮತ್ತೆಲ್ಲವನ್ನೂ ಪದಯಾನದಲ್ಲಿ ಪೋಣಿಸಿದ್ದೇನೆ.
          ಪದ್ಯಾಣರ ಅಭಿಮಾನಿಗಳ ಅಭಿಮಾನವೂ ಅಕ್ಷರರೂಪ ತಾಳಬೇಕು, ಸಮಿತಿಯ ಆಶಯ. ಮಿತ್ರ, ಕಲಾವಿದ ವಾಸುದೇವ ರಂಗಾಭಟ್, ಮುರಳಿ ಶೇಣಿ, ರಾಮ ಜೋಯಿಸರು ಲೇಖಕರನ್ನು ಗೊತ್ತು ಮಾಡಿ, ವಿಷಯವನ್ನು ನೀಡಿ, ಸಂಪಕರ್ಿಸುವ ಹೊಣೆ ಹೊತ್ತುಕೊಂಡರು. ಸಕಾಲಕ್ಕೆ ಲೇಖನಗಳು ಕೈಗೆ ಬರುವಂತೆ ನಿಗಾ ವಹಿಸಿದರು. ಪುಸ್ತಕದ ಒಟ್ಟಂದದ ಆಶಯದಿಂದ ಬೇಕಾದ ಚಿತ್ರಗಳು, ಸಂದೇಶಗಳ ಸಂಗ್ರಹಗಳಲ್ಲಿ ಪದ್ಯಾಣರ ಚಿರಂಜೀವಿ ಸ್ವಸ್ತಿಕ್ ಬಿಡುವಿಲ್ಲದೆ ದುಡಿದರು. ಎಲ್ಲರೂ ತಂದ ಪರಿಕರದಿಂದ ಅಡುಗೆ ಮಾಡಿದ್ದೇನೆ. ರುಚಿ ಹೇಗಾಗಿದೆಯೋ ಗೊತ್ತಿಲ್ಲ.
          ಜಾಲತಾಣಗಳಲ್ಲಿ ಪದ್ಯಾಣರ ಚಿತ್ರಗಳು ಅಪ್ಲೋಡ್ ಆಗಿದ್ದುವು. ಛಾಯಾಚಿತ್ರಗಾರರ ಹೆಸರು ಅರಿಯದ ಕಾರಣ ಅನುಮತಿ ಪಡೆಯಲಾಗಲಿಲ್ಲ. ಪುಸ್ತಕದ ಸೌಂದರ್ಯವರ್ಧನೆಗಾಗಿ ಚಿತ್ರಗಳನ್ನು ಇಳಿಸಿಕೊಂಡಿದ್ದೇವೆ. ಪದ್ಯಾಣರ ಮೇಲಿನ ಅಭಿಮಾನದಿಂದ ನಿಮ್ಮ ಅನುಮತಿ ಇದೆ ಎಂದು ಭಾವಿಸಿದ್ದೇನೆ. ತಪ್ಪಾದರೆ ಕ್ಷಮಿಸಿ.
          ದೊಡ್ಡ ಜವಾಬ್ದಾರಿಯನ್ನು ನೀಡಿ ಪ್ರೋತ್ಸಾಹಿಸಿದ ಪದಯಾನ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾದ ಟಿ.ಶ್ಯಾಮ ಭಟ್, ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಮತ್ತು ಸಮಿತಿಯ ಎಲ್ಲಾ ಸುಮನಸ್ಸಿನ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
          ಸಕಾಲಕ್ಕೆ ಲೇಖನಗಳನ್ನು ಒದಗಿಸಿದ ಲೇಖಕರಿಗೆ ಗೌರವ ನಮನಗಳು. ಶೈಲಿಗಿಂತ ವಿಚಾರ ಪ್ರಸ್ತುತಿ ಮುಖ್ಯ ಮತ್ತು ಪುನರಾವರ್ತನೆಯನ್ನು ಸ್ವಲ್ಪವಾದರೂ ಕಡಿಮೆಗೊಳಿಸುವ ನೆಲೆಯಲ್ಲಿ ಕೆಲವು ಲೇಖನಗಳಲ್ಲಿ ಕೈಯಾಡಿಸಿದ್ದೇನೆ. ಬೇಸರವಾಗದು ತಾನೆ.
          ಪದಯಾನ ನಿಮ್ಮ ಕೈಯಲ್ಲಿದೆ. ಭಾಗವತ ಪದ್ಯಾಣ ಗಣಪತಿ ಭಟ್ಟರಿಗೆ ಶುಭ ಕಾಮನೆಗಳು.

- ನಾ. ಕಾರಂತ ಪೆರಾಜೆ
ಸಂಪಾದಕ, ಪದಯಾನ
ಮತ್ತು ಸಂಪಾದಕೀಯ ಸಮಿತಿ

No comments:

Post a Comment