Saturday, January 4, 2025

'ಸ್ಮೃತಿ ಕೃತಿಗಳು ಮುಂದಿನ ತಲೆಮಾರಿಗೆ ದೀವಿಗೆ' - ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮದಲ್ಲಿ ಪೂಜ್ಯ ಎಡನೀರು ಶ್ರೀಗಳು


“ಕುಂಬಳೆ ಶ್ರೀಧರ ರಾವ್ ಅವರು ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲವೂ ಗೌರವದ ಮಿತಿಯೊಳಗೆ ಅಭಿವ್ಯಕ್ತಿಸಲ್ಪಡುತ್ತಿತ್ತು. ಸಜ್ಜನಿಕೆ, ವಿಧೇಯತೆ ಅವರ ವ್ಯಕ್ತಿತ್ವ. ಅವರ ಸ್ಮೃತಿಯೊಂದಿಗೆ ಅವರ ಬಗೆಗಿನ ನೆನಪು ಸಂಚಿಕೆಯು ಪ್ರಕಟವಾಗಿರುವುದು ಶ್ಲಾಘನೀಯ. ಇದು ಮುಂದಿನ ತಲೆಮಾರಿಗೆ ಹಿರಿಯರೊಬ್ಬರ ಜೀವಿತದ ಕಾಲಘಟ್ಟವನ್ನು, ಅವರ ಕೊಡುಗೆಯನ್ನು ಪರಿಚಯಿಸುವ ದೀವಿಗೆಯಾಗುತ್ತದೆ.” ಎಂದು ಎಡನೀರು ಶ್ರೀಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ರವಿವಾರ ಕುಂಬಳೆಯ ಶ್ರೀ ಕಣಿಪುರ ಗೋಪಾಲಕೃಷ್ಣ ದೇವಳದ ಸಭಾಭವನದಲ್ಲಿ ಜರುಗಿದ ಕುಂಬಳೆ ಶ್ರೀಧರ ರಾವ್ (Kumble Shreedhar Rao) ಸ್ಮೃತಿ ಕಾರ್ಯಕ್ರಮದಲ್ಲಿ - 29-12-2024) ಆಶೀರ್ವಚನ ನೀಡುತ್ತಾ ಮಾತನಾಡಿದರು. ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀಧರ ರಾಯರ ವ್ಯಕ್ತಿತ್ವವನ್ನು ಜ್ಞಾಪಿಸಿಕೊಂಡರು.

ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ಮಾತನಾಡುತ್ತಾ, “ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಗಳ ಕಾಲ ನಿಷ್ಠೆಯಿಂದ ದುಡಿದವರು ಶ್ರೀಧರ ರಾಯರು. ಕಲಾನಿಷ್ಠನಾಗಿ, ಮೇಳನಿಷ್ಠನಾಗಿ ಮೃದು ಸ್ವಭಾವಗಳಿಂದ ಎಲ್ಲರ ಒಡನಾಡಿಯಾಗಿದ್ದರು. ಪಾತ್ರಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವರು ಮೇಳಕ್ಕೊಂದು ಆಸ್ತಿಯಾಗಿದ್ದರು” ಎಂದರು.

ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿಯನ್ನು ಮಾಡಿದರು. “ಶ್ರೀಧರ ರಾಯರ ದಮಯಂತಿ, ಸುಭದ್ರೆ, ಚಿತ್ರಾಂಗದೆ, ಕಯಾದು.. ಮೊದಲಾದ ಪಾತ್ರಗಳು ತುಂಬಾ ಚೆನ್ನಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬರುತ್ತಿತ್ತು. ಇನ್ನೊಂದು ನೆನಪಿಸುವ ಪಾತ್ರ. 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ'ಯ 'ಅಮ್ಮು ಬಲ್ಲಾಳ್ತಿ'. ದೊಡ್ಡ ಮನೆತನದ ರಾಣಿಯಂತಹ ಸ್ಥಾನಮಾನ. ಜಿನಭಕ್ತಿ, ಸೌಮ್ಯತೆ, ಸರಳತೆ, ಆಶ್ರಯದಾತೃತ್ವ.. ಈ ಸನ್ನಿವೇಶವನ್ನು ಅಸ್ತಿತ್ವದ ಯೋಗ್ಯತೆಯಿಂದಲೇ ಮೆರೆಸಿದರು. ಆದು ಶಾಶ್ವತವಾದ ಕಲಾಕೃತಿ” ಎಂದರು.

ಈ ಸಂದರ್ಭದಲ್ಲಿ ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಸಂಪಾದಿತ ಶ್ರೀಧರ ರಾಯರ ಸ್ಮೃತಿ ಸಂಚಿಕೆ 'ಕಲಾ ಶ್ರೀಧರ' ಕೃತಿಯನ್ನು ಪೂಜ್ಯ ಎಡನೀರು ಶ್ರೀಗಳು ಅನಾವರಣಗೊಳಿಸಿದರು. ಕೃತಿ ಪ್ರಕಟಣೆಯ ಆಶಯ ಮತ್ತು ಅದರ ರಚನೆಯ ಹಿಂದಿನ ಅನುಭವಗಳನ್ನು ನಾ. ಕಾರಂತರು ವಿವರಿಸಿದರು. ವೇದಿಕೆಯಲ್ಲಿ ಸ್ಮೃತಿ ಕೃತಿ ಸಮಿತಿಯ ಅಧ್ಯಕ್ಷ ಶ್ರೀ ಭಗವಾನ್‌ ದಾಸ್‌ ಹಾಗೂ ಶ್ರೀಧರ ರಾಯರ ಪತ್ನಿ ಸುಲೋಚನ ಉಪಸ್ಥಿತರಿದ್ದರು.

ಆರಂಭದಲ್ಲಿ ಕುಂಬ್ಳೆ ಗೋಪಾಲ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಗಣೇಶ ಪ್ರಸಾದ್ ಕುಂಬ್ಳೆ ಹಾಗೂ ದೇವಿ ಪ್ರಸಾದ್ ಕುಂಬ್ಳೆಯವರು ಯತಿದ್ವಯರಿಗೆ ಫಲಕಾಣಿಕೆ, ಹಾರದೊಂದಿಗೆ ಸ್ವಾಗತಿಸಿದರು. ಸುಕುಮಾರ್ ಅನಂತಪುರ, ರಾಮಚಂದ್ರ ಬೆಂಗಳೂರು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಕೃತಿ ಸಂಪಾದಕ ನಾ. ಕಾರಂತ ಪೆರಾಜೆ, ಮಾಣಿಲ ಮೇಳದ ಸಂಚಾಲಕ ಡಾ.ಸತೀಶ ಪುಣಿಂಚತ್ತಾಯರನ್ನು ಗೌರವಿಸಲಾಯಿತು. ಸಂಘಟಕ, ಅರ್ಥದಾರಿ ಶ್ರೀ ಉಜಿರೆ ಅಶೋಕ ಭಟ್ ನಿರ್ವಹಿಸಿದರು. ಶ್ರೀ ಭಗವಾನ ದಾಸ್‌ ವಂದಿಸಿದರು.

ಉದ್ಘಾಟನೆ : 'ಕಲಾ ಶ್ರೀಧರ' ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಿಪುರದ ಪ್ರಧಾನ ಅರ್ಚಕ ವೇ.ಮೂ.ಮಾಧವ ಅಡಿಗಳು ಉದ್ಘಾಟಿಸಿ ಶುಭ ಹಾರೈಸಿದರು. ಧರ್ಮಸ್ಥಳ ಮೇಳದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ನ್ಯಾಯವಾದಿ ಕಲಾರತ್ನ ಶಂನಾ ಅಡಿಗ ಉಪಸ್ಥಿತರಿದ್ದರು. ನಾರಾಯಣ ರಾವ್ ಬೇರಿಕೆ, ಕೃಷ್ಣ ಮುಖಾರಿ, ರಾಮ ರಾವ್ ಬೇರಿಕೆ, ಪ್ರತಾಪ ಕುಂಬ್ಳೆ, ಅಶೋಕ್ ಕುಂಬ್ಳೆ, ಗೋಪಾಲಕೃಷ್ಣ ಸೂರಂಬೈಲು.. ಮೊದಲಾದವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಶ್ರೀ ಗುರುಮೂರ್ತಿ ನಾಯ್ಕಾಪು ನಿರ್ವಹಿಸಿ, ವಂದಿಸಿದರು.

ಕುಂಬಳೆ ಶ್ರೀಧರ ಪಾತ್ರಗಳನ್ನು ನೆನಪಿಸುವ ಎರಡು ಸನ್ನಿವೇಶವನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು. ಅಪರಾಹ್ನ 'ಕೃಷ್ಣ ಸಂಧಾನ' ತಾಳಮದ್ದಳೆ ನಡೆಯಿತು. ಕಲಾವಿದರಾಗಿ - ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ ವಾದನ ಕಲಾವಿದರು), ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಗೋಪಾಲ ನಾಯಕ್ ಸೂರಂಬೈಲು, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಿದ್ದರು.

ಕೊನೆಗೆ ಶ್ರೀ ಮಹಾಲಕ್ಷ್ಮೀ ಕೃಪಾಪೋಶಿತ ಯಕ್ಷಗಾನ ಮಂಡಳಿ, ಶ್ರೀಧಾಮ-ಮಾಣಿಲ ಇವರಿಂದ 'ಕಂಸವಧೆ' ಬಯಲಾಟ ನಡೆಯಿತು. ಒಟ್ಟೂ ಕಾರ್ಯಕ್ರಮಕ್ಕೆ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನಾರಾಯಣಮಂಗಲ, ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಹಾಗೂ ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಹೆಗಲೆಣೆ ನೀಡಿದ್ದರು.

Wednesday, January 1, 2025

ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ - ಆತ್ಮಾಲಯ ಅಕಾಡೆಮಿ ಪ್ರಶಸ್ತಿ ಪ್ರದಾನ


 

     ಭಾರತದ ಸಂಪತ್ತು ಕಲೆ ಮತ್ತು ಸಾಹಿತ್ಯ. ಬದುಕಿನ ನಾಟಕದಲ್ಲಿ ಯಶಸ್ವಿಯಾಗಲು ಕಲೆ ಅಗತ್ಯ. ಜೀವನವೆಂಬುದು ಕಲೆಯ ಪ್ರತೀಕ. ಬದುಕು ಬಲೆ ಆಗಬಾರದ, ಕಲೆ ಆಗಬೇಕು. ಧರ್ಮದ ಉಳಿವಿಗೆ ಯಕ್ಷಗಾನದ ಕೊಡುಗೆ ಅನನ್ಯ” ಎಂದು ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

    ಬೆಂಗಳೂರಿನ ಆತ್ಮಾಲಯ ಕಲೆ ಮತ್ತು ಸಂಸ್ಕೃತಿ ಆಕಾಡೆಮಿಯು ಶ್ರೀಮತಿ ಶಾಂತಾ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿಯನ್ನು ಯಕ್ಷಗಾನದ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ಮಾತನಾಡುತ್ತಾ “ಬದುಕಿನ ಪಾಠಶಾಲೆಗೆ ಯಕ್ಷಗಾನವೊಂದು ಪಠ್ಯವಿದ್ದಂತೆ” ಎಂದರು.

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ 'ನಟರಾಜ ವೇದಿಕೆ'ಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 56' ಸಂದರ್ಭದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು. ಜಸ್ಟೀಸ್ ಜಗನ್ನಾಥ ಶೆಟ್ಟಿ ಇವರ ಚಿರಂಜೀವಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಡಾ. ರಮಾನಂದ ಶೆಟ್ಟಿ ಉಪಸ್ಥಿತರಿದ್ದರು.

    ಪ್ರಶಸ್ತಿ ಪುರಸ್ಕೃತರ ಕುರಿತು ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರು ನುಡಿಹಾರಗಳನ್ನು ಸಲ್ಲಿಸುತ್ತಾ,” ರಘುರಾಮ ಹೊಳ್ಳರದು ನಿಜಾರ್ಥದ ಯಕ್ಷಧ್ವನಿ. ಒಂದು ಕಾಲಘಟ್ಟದ ಕ್ರಾಂತಿಧ್ವನಿ” ಎಂದರು. ಪ್ರಶಸ್ತಿಯು ಶಾಲು, ಹಾರ, ಹಣ್ಣುಹಂಪಲು, ಪ್ರಶಸ್ತಿ ಪತ್ರ ಮತ್ತು ರೂ.25,000 ನಿಧಿಯನ್ನು ಒಳಗೊಂಡಿತ್ತು.

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಅಚ್ಯುತ ಪಾಂಗಣ್ಣಾಯ ವಂದಿಸಿದರು. ಪೂಜ್ಯ ಶ್ರೀಗಳಿಗೆ  ಹರಿಣಾಕ್ಷಿ ಜೆ.ಶೆಟ್ಟಿ ಮತ್ತು ಸಂಘದ ಸದಸ್ಯೆಯರು ಫಲ ಸಮರ್ಪಣೆಯೊಂದಿಗೆ ಪೂರ್ಣಕುಂಭ ಸ್ವಾಗತ ಕೋರಿದರು. ಶ್ರೀಮತಿ ಶಾರದಾ ಅರಸ್, ಕಿಶೋರಿ ದುಗ್ಗಪ್ಪ, ದುಗ್ಗಪ್ಪ ಎನ್. ರಂಗನಾಥ ರಾವ್ ಅತಿಥಿಗಳನ್ನು ಗೌರವಿಸಿದರು. ಗುಡ್ಡಪ್ಪ ಬಲ್ಯ ನಿರ್ವಹಿಸಿದರು.

    ಆತ್ಮಾಲಯ ಅಕಾಡೆಮಿಯು ಈ ಹಿಂದಿನ ವರುಷಗಳಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರಾದ ಪೆರುವೋಡಿ ನಾರಾಯಣ ಭಟ್, ಗಾನಕೇಸರಿ ಕುದ್ಮಾರು ವೆಂಕಟ್ರಮಣ, ಪೂಕಳ ಲಕ್ಷ್ಮೀನಾರಾಯಣ ಭಟ್, ಹೆಚ್.ದಾಸಪ್ಪ ರೈ, ಕುಂಬಳೆ ಶ್ರೀಧರ ರಾವ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.