(2017ರಲ್ಲಿ ಹಿರಿಯ ಕಲಾವಿದ ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಅಭಿನಂದನಾ ಸಮಾರಂಭ ಜರುಗಿತ್ತು. ಆ ಸಂದರ್ಭದಲ್ಲಿ 'ಈಶಾನ' ಎನ್ನುವ ಅಭಿನಂದನಾ ಗ್ರಂಥವನ್ನು ಅವರಿಗೆ ಸಮರ್ಪಿಸಲಾಗಿತ್ತು. ಪ್ರಜಾವಾಣಿಯ 'ದಧಿಗಿಣತೋ' ಅಂಕಣದಲ್ಲಿ - 17-2-2017 - ಪುಸ್ತಕದ ಕುರಿತ ಬರಹ ಬರೆದಿದ್ದೆ. 2025 ಜುಲೈ 6ರಂದು ಈಶ್ವರ ಭಟ್ಟರಿಗೆ 'ಕುರಿಯ ಪ್ರಶಸ್ತಿ' ಪ್ರದಾನದ ಶುಭ ಸಂದರ್ಭದ ಮುಂಚಿತವಾಗಿ ಈ ಲೇಖನದ ಮರುಓದು)
"ಇತ್ತೀಚೆಗೆ ಯಕ್ಷಗಾನದ ಸ್ತ್ರೀವೇಷಗಳು ರಂಗದಲ್ಲಿ ಡ್ಯಾನ್ಸ್ ಐಟಂ ಆಗಿ ಕಾಣುತ್ತಿವೆ." ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಅಭಿಮತ. ಸಂದರ್ಭ : ಹಿರಿಯ ಸ್ತ್ರೀಪಾತ್ರಧಾರಿ ಕೊಕ್ಕಡ ಈಶ್ವರ ಭಟ್ಟರ ಎಪ್ಪತ್ತೈದರ (2017) ಸಂಭ್ರಮ. 'ಯಕ್ಷಗಾನದ ಬಹುತೇಕ ಸ್ತ್ರೀವೇಷಗಳು ಸೀರೆ ಉಡುವುದನ್ನೇ ಮರೆತಿವೆʼ ಎಂದು ಹಿಂದೊಮ್ಮೆ ವಾಟ್ಸಪ್ಪಿನಲ್ಲಿ ಕಮೆಂಟ್ ಹಾಕಿದ್ದೆ. ಅದಕ್ಕೊಬ್ಬರು 'ಡೋಂಟ್ ವರಿ' ಎಂದು ಮರು ಉತ್ತರ ನೀಡಿದ್ದರು. ಅದನ್ನು ಡ್ಯಾನ್ಸ್ ಐಟಂ ಆಗಿಯೇ ಸ್ವೀಕರಿಸಬೇಕೋ, ಭರತನಾಟ್ಯದ ಡ್ರೆಸ್ಸನ್ನು ಹೋಲುವಂತಹ ಉಡುಗೆಗಳನ್ನು ಎಲ್ಲಾ ಪಾತ್ರಗಳಲ್ಲೂ ಒಪ್ಪಬೇಕೋ ಅಥವಾ ಇದ್ಯಾವುದರ ಚಿಂತೆ ಇಲ್ಲದೆ 'ಡೋಂಟ್ ವರಿ'ಯಾಗಿರಬೇಕೋ? ಉತ್ತರ ಸಿಕ್ಕದ ಪ್ರಶ್ನೆಗಳು.
ಡಾ.ಜೋಷಿಯವರ ಸಕಾಲಿಕ ಮಾತಿನಲ್ಲಿ ವರ್ತಮಾನದ ರಂಗದ ಮರುಕವಿದೆ. ಮೌನಕ್ಕೂ ಮಾತಿದೆ, ಭಾವಕ್ಕೂ ಭಾಷೆಯಿದೆ, ಪಾತ್ರಗಳಿಗೂ ಒಂದು ಮನಸ್ಸಿದೆ ಎನ್ನುವುದನ್ನು ಹಿರಿಯ ಸ್ತ್ರೀಪಾತ್ರಧಾರಿಗಳು ರಂಗದಲ್ಲಿ ಸ್ಥಾಪಿಸಿದ್ದಾರೆ. ಪಾತಾಳ ವೆಂಕಟ್ರಮಣ ಭಟ್, ಡಾ.ಕೋಳ್ಯೂರು ರಾಮಚಂದ್ರ ರಾವ್, ಕೊಕ್ಕಡ ಈಶ್ವರ ಭಟ್ ಮೊದಲಾದ ಕಲಾವಿದರ ಪಾತ್ರಾಭಿವ್ಯಕ್ತಿಯಲ್ಲಿ ಪುರಾಣ ಪಾತ್ರಗಳು ಮರುಜ್ಜೀವವಾಗುತ್ತಿದ್ದುವು. ಹೀಗಂದಾಗ 'ಆ ಕಾಲವೇ ಬೇರೆ' ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದರು. ಎಲ್ಲವನ್ನೂ ಕಾಲದೊಂದಿಗೆ ಸಮೀಕರಿಸುವುದು ದೌರ್ಬಲ್ಯವಾಗಿ ಬಿಟ್ಟಿದೆ. ಒಂದು ಪಾತ್ರದ ಯಶಸ್ವೀ ಅಭಿವ್ಯಕ್ತಿಯ ಹಿಂದೆ ಕಲಾವಿದನ ರಂಗತಪಸ್ಸಿದೆ ಎನ್ನುವುದನ್ನು ಮರೆಯಲಾಗದು. ಅಂತಹ ತಪಸ್ಸು ಇದ್ದರೆ ಮಾತ್ರ ಪಾತ್ರ ಒಲಿಯುತ್ತದೆ. ಇಲ್ಲದಿದ್ದರೆ ಬರೇ ವೇಷವಷ್ಟೇ.
ಕೊಕ್ಕಡ ಈಶ್ವರ ಭಟ್ಟರ ಅಭಿನಂದನಾ ಸಮಾರಂಭದ ನೆನಪಿಗಾಗಿ 'ಈಶಾನ' ಎನ್ನುವ ಅಭಿನಂದನಾ ಗ್ರಂಥವನ್ನು ಪ್ರಕಾಶಿಸಲಾಗಿತ್ತು. ಈಶಾನದ ಸಂಪಾದಕರು - ಶ್ರೀ ಗಣರಾಜ ಕುಂಬ್ಳೆ. ತುಂಬಾ ಅರ್ಥವತ್ತಾದ ಹೂರಣವನ್ನು ಪೋಣಿಸಿದ್ದಾರೆ. ಈಶಾನವನ್ನು ಸುಮಾರು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಒಂದು, ಈಶ್ವರ ಭಟ್ಟರಿಗೆ ಅಭಿನಂದನೆಯ ನುಡಿಗಳುಳ್ಳ ಲೇಖನ; ಎರಡು - ಪುರಾಣ ಸ್ತ್ರೀ ಪಾತ್ರಗಳ ಒಳತೋಟಿ ಮತ್ತು ಮೂರನೇಯದು ರಂಗ ವಿಮರ್ಶೆ. ಇದರಲ್ಲಿ ಎರಡನೇ ವಿಭಾಗವು ನನ್ನ ಮೇಲಿನ ವಿಚಾರಕ್ಕೆ ಪೂರಕ. ಕೆಲವು ಪ್ರಸಂಗಗಳ ಸ್ತ್ರೀಪಾತ್ರದ ಮಹತ್ತುಗಳನ್ನು ಲೇಖನಗಳು ಬಿಂಬಿಸಿವೆ.
ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಬರೆದ 'ದಾಕ್ಷಾಯಣಿ', ಶ್ರೀಧರ ಡಿ.ಎಸ್. ಅವರ 'ಅಂಬೆ', ಸುಳ್ಯದ ವೆಂಕಟರಾಮರು 'ಸಾಧ್ವಿ ಮಂಡೋದರಿ', ನಾರಾಯಣ ಎಂ.ಹೆಗಡೆಯವರು 'ಚಿತ್ರಾಂಗದೆ', ಅಡ್ಕ ಗೋಪಾಲಕೃಷ್ಣ ಭಟ್ಟರು 'ದುರಂತ ಶೂರ್ಪನಖಿ', ನಾರಾಯಣ ಪುತ್ತೂರು ಇವರ 'ಸುಭದ್ರೆ', ರವಿ ಅಲೆವೂರಾಯರು 'ಶ್ರೀದೇವಿ', ಎಂ.ಕೆ.ರಮೇಶ್ ಆಚಾರ್ಯರು 'ದಯಮಂತಿ, ಚಂದ್ರಮತಿ', ಅಂಬಾಪ್ರಸಾದ ಪಾತಾಳರು ಬೇರೆ ಬೇರೆ ಪ್ರಸಂಗಗಳಲ್ಲಿ ಬರುವ 'ಸುಭದ್ರೆ' ಮತ್ತು ಸೇರಾಜೆಯ ಜಿ.ಕೆ.ಭಟ್ಟರು 'ಸೀತೆ' - ಪಾತ್ರಗಳ ಕುರಿತು ಒಳನೋಟ ಬೀರಿದ್ದಾರೆ. ಎಲ್ಲವನ್ನೂ ಓದಿದಾಗ 'ಒಂದೊಂದು ಪಾತ್ರಗಳ ಒಳಹೊಕ್ಕು ಹೊರ ಬರಲು ಬಹುಶಃ ಒಬ್ಬ ಪಾತ್ರಧಾರಿಗೆ ಅರ್ಧಾಯಷ್ಯ ಬೇಕೇನೋ? ಎಂದೆನಿಸಿತು. ಡಾ.ಚಂದ್ರಶೇಖರ ದಾಮ್ಲೆಯವರು ಕೃಷ್ಣ ಸಂಧಾನದ 'ದ್ರೌಪದಿ' ಪಾತ್ರವನ್ನು ಬಹಳ ಅರ್ಥವತ್ತಾಗಿ ವಿಮರ್ಶಿಸಿದ್ದಾರೆ. ಪಾತ್ರಗಳ ಸಾಧ್ಯತೆಯೊಂದಿಗೆ ಕಲಾವಿದನು ಪಾತ್ರದೊಂದಿಗೆ ಮಿಳಿತವಾಗಲು ಉಂಟಾಗುವಂತಹ ತೊಂದರೆ ಮತ್ತು ಸವಾಲುಗಳನ್ನು ವಿಷದವಾಗಿ ವಿವರಿಸಿದ್ದಾರೆ.
ದಾಕ್ಷಾಯ(ಯಿ)ಣಿ ಪಾತ್ರವನ್ನೇ ತೆಕ್ಕೊಳ್ಳಿ. ಪ್ರವೇಶದಿಂದ ಯೋಗಾಗ್ನಿಯಲ್ಲಿ ಉರಿದುಹೋಗುವ ತನಕ ಏನಿಲ್ಲವೆಂದರೂ ಒಂದೂವರೆ ಗಂಟೆಗೂ ಮಿಕ್ಕಿ ವಿವಿಧ ಭಾವಗಳನ್ನು ಪ್ರಕಟಿಸುವುದು ಇದೆಯಲ್ಲಾ, ನಿಜಕ್ಕೂ ಇದೊಂದು ಸವಾಲು. ಪೆರಡಂಜಿಯವರು ತನ್ನ ಬರೆಹದಲ್ಲಿ ಒಂದೊಂದು ಪದ್ಯಕ್ಕೂ ಕಲಾವಿದನ ಜವಾಬ್ದಾರಿಯನ್ನು ವಿವರಿಸಿದ್ದಾರೆ. ಪಾತ್ರಗಳು ಹೇಗಿರಬೇಕು ಎನ್ನುವುದನ್ನು ಪ್ರಸ್ತುತಪಡಿಸಿದ್ದಾರೆ. ಈಶಾನದಲ್ಲಿರುವ ಎಲ್ಲಾ ಪಾತ್ರಗಳನ್ನು ಅರ್ಥಧಾರಿಯಾಗಿ, ವೇಷಧಾರಿಯಾಗಿ ಅನುಭವಿಸಿದ ಹಿನ್ನೆಲೆಯಲ್ಲಿ ಲೇಖನಗಳು ಮೂಡಿ ಬಂದಿರುವುದು ಕೃತಿಯ ಚೆಲುವನ್ನು ಹೆಚ್ಚಿಸಿದೆ.
ಡಾ.ರಾಘವ ನಂಬಿಯಾರರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ ಈ ಮಾತುಗಳು ವೇಷಧಾರಿಗೆ ದಿಕ್ಸೂಚಿಯಾಗಲಾರದೇ? "ಕಲಾವಿದ ಸತತ ಚಿಂತನ ಹಾಗೂ ವಿದ್ವಾಂಸರ ಜತೆ ಸಂವಾದ ನಡೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮುಖಸ್ತುತಿ ಮಾಡುವ ಅಭಿಮಾನಿಗಳಿಗಿಂತ ತನ್ನಲ್ಲಿ ತಪ್ಪು ಕಾಣುವ ಮತ್ತು ಹೇಳುವ ಮಂದಿಯ ಜತೆ ಮಾತಾಡುವುದರಿಂದ ಪ್ರಯೋಜನ ಹೆಚ್ಚು. ಜತೆಗೆ ಸಾಹಿತ್ಯದ ಓದು ಪಾತ್ರಧಾರಿಯ ಅರಿವಿನ ಕ್ಷಿತಿಜವನ್ನು ವಿಸ್ತರಿಸಿ ಕೊಡದಿರದು. ಎಲ್ಲಕ್ಕಿಂತ ಹಿರಿಯ ಕಲಾಕಾರರ ಹೆಚ್ಚುಗಾರಿಕೆ, ಲೋಪದೋಷ ಎರಡರ ಬಗೆಗೂ ದೃಷ್ಟಿ ಸೂಕ್ಷ್ಮತೆ ಇದರಬೇಕು."
ಅರ್ಥಗಾರಿಕೆ : ಆಕರ ನಿರ್ವಹಣೆ-ಕೆಲವು ವಿಚಾರಗಳ ವಿಮರ್ಶೆ, ಡಾ.ಪ್ರಭಾಕರ ಜೋಷಿಯವರ ಲೇಖನವು 'ಕೃಷ್ಣ ಸಂಧಾನ' ಪ್ರಸಂಗದಲ್ಲಿ ಅರ್ಥ ಹೇಳುವ ಕಲಾವಿದನಿಗಿರಬೇಕಾದ ಎಚ್ಚರ ಮತ್ತು ಜಾಣ್ಮೆಯಂತಹ ಸೂಕ್ಷ್ಮ ವಿಚಾರಗಳನ್ನು ಹೇಳಿದ್ದಾರೆ. ಅಂತೆಯೇ ರಾಧಾಕೃಷ್ಣ ಕಲ್ಚಾರರ 'ಅರ್ಥಗಾರಿಕೆ ಆಕರ, ಆಧಾರ', ಸರ್ಪಂಗಳ ಈಶ್ವರ ಭಟ್ಟರು ಬರೆದ 'ಕೃಷ್ಣ ಸಂಧಾನ - ಪೂರ್ವಭಾಗ', ಡಾ.ಕೆ.ಎಂ.ರಾಘವ ನಂಬಿಯಾರರ 'ಸ್ತ್ರೀ ವೇಷದ ಗುಣವೃದ್ಧಿ,' ತಾರಾನಾಥ ಬಲ್ಯಾಯರ 'ದಕ್ಷಿಣಾದಿ ಯಕ್ಷಗಾನದ ಸ್ತ್ರೀ ವೇಷ, ಆಹಾರ್ಯ' ಮತ್ತು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರ 'ವಾಲ್ಮೀಕಿ ಚಿತ್ರಿಸಿದ ಸೀತೆ'.. ಮೊದಲಾದ ಬರಹಗಳು ಸಕಾಲಿಕವಾದ ಚಿಂತನೆಯನ್ನು ಚಿತ್ರಿಸಿವೆ. ಭಾಸ್ಕರ ರೈ ಕುಕ್ಕುವಳ್ಳಿ, ಮೂರ್ತಿ ದೇರಾಜೆ, ಜಿ.ಎಲ್.ಹೆಗ್ಡೆ, ಆರತಿ ಪಟ್ರಮೆ, ಡಾ.ಅಮೃತ ಸೋಮೇಶ್ವರ, ಸಿಬಂತಿ ಪದ್ಮನಾಭ, ಶಾಂತಾರಾಮ ಪ್ರಭು, ಸಿತ್ಲ ರಂಗನಾಥ ರಾವ್.. ಇವರ ಯಕ್ಷಗಾನದ ಬಗೆ-ನೋಟ ಲೇಖನಗಳು.
ಈಶ್ವರ ಭಟ್ಟರು ಸ್ತ್ರೀಪಾತ್ರಧಾರಿಯಾಗಿ ರಂಗದಲ್ಲಿ ದೊಡ್ಡ ಹೆಜ್ಜೆಯನ್ನು ಮೂಡಿಸಿದವರು. ಹಾಗಾಗಿ ಸಂಪಾದಕರು ಪುಸ್ತಕದಲ್ಲಿ ಪುರಾಣ ಸ್ತ್ರೀಪಾತ್ರಗಳ ಮಾತುಗಳಿಗೆ ಮತ್ತು ಆ ರಂಗಕ್ಕೆ ಅಪೇಕ್ಷಣೀಯವಾದ ವಿಚಾರಗಳಿಗೆ ಹೆಚ್ಚು ಸ್ಥಳ ಮೀಸಲಿರಿಸಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಂಗದಲ್ಲಿ ಬರುವ ಒಂದೊಂದು ಪಾತ್ರಗಳಿಗೆ ಮಾತು ಕೊಟ್ಟಿರುವುದು 'ಈಶಾನ'ದ ಹೆಚ್ಚುಗಾರಿಕೆ. ಸಂಪಾದಕ ಗಣರಾಜ ಕುಂಬ್ಳೆಯವರ ಯೋಚನೆಯು ಯೋಜನಾಬದ್ಧವಾಗಿ ಪೋಣಿತವಾಗಿದೆ.
ಈಶ್ವರ ಭಟ್ಟರ ಚಿರಂಜೀವಿ ಉಮೇಶ್, ತನ್ನ ತೀರ್ಥರೂಪರ ಕಲಾ ಸೇವೆಗೆ ಗೌರವ ತಂದಿದ್ದಾರೆ. ಅವರ ಕಲಾಯಾನವನ್ನು ದಾಖಲಿಸಿದ್ದಾರೆ. ಶ್ರದ್ಧೆಯಿಂದ 'ಈಶಾನ'ದ ಬೆಳಕಿಗೆ ಕಾರಣರಾಗಿದ್ದಾರೆ. ಮಗನಾಗಿ ಇಳಿ ವಯಸ್ಸಿನ ತಂದೆಗೆ ಖುಷಿ ನೀಡಿದ್ದಾರೆ. ಈಶ್ವರ ಭಟ್ಟರ ಮನಸ್ಸು ಯೌವನವಾಗಿದೆ! ಇವರ ಅಭಿನಂದನಾ ಗ್ರಂಥ 'ಈಶಾನ'ಕ್ಕೆ ಯಕ್ಷಗಾನದ ಸ್ತ್ರೀಭೂಮಿಕೆಯನ್ನು ಪ್ರತಿನಿಧಿಸುವ ಗ್ರಂಥ ಎನ್ನುವ ಹೆಗ್ಗಳಿಕೆಯು ಅತಿಶಯವಾಗಲಾರದು.
No comments:
Post a Comment