Monday, July 28, 2025

ಯಕ್ಷಶಾಂತಲೆಯ ಅಂತರಂಗ (ನಿರೂಪಣೆ : ನಾ. ಕಾರಂತ ಪೆರಾಜೆ)




{ಪಾತಾಳ ವೆಂಕಟ್ರಮಣ ಭಟ್‌ (1933-2025) ಖ್ಯಾತ ಸ್ತ್ರೀಪಾತ್ರಧಾರಿ. ಕಲಾಸಂಶೋಧಕ. 19-7-2025ರಂದು ವಿಧಿವಶರಾದರು. ಅವರ ಕುರಿತಾಗಿ 2008ರಲ್ಲಿ ಉದಯವಾಣಿಯಲ್ಲಿ ಪ್ರಕಟಗೊಂಡ ಈ ಲೇಖನದ ಮರುಓದು ಪಾತಾಳರಿಗೆ ನುಡಿ ನಮನ. ಇಲ್ಲಿರುವುದು ಅವರದೇ ಮಾತುಗಳು.}                 

ಯಕ್ಷಗಾನ ನನಗೆ ಬಾಲ್ಯದ ನಂಟು. ಮುಂದದು ಬದುಕಿಗಂಟಿತು. ಬಿಟ್ಟೆನೆಂದರೂ ಬಿಡದೆ ಹಿಂಬಾಲಿಸಿತು. ಬಣ್ಣದ ಲೋಕದ ಮೋಹಕತೆಗೆ ಮಾರುಹೋಗಿ, ಸೇರಿದ್ದು ಮೇಳದ ಅಡುಗೆ ಮನೆಗೆ! ಹಗಲು ಬಾಣಸಿಗ, ರಾತ್ರಿ ಯಕ್ಷಗಾನ ಪ್ರೇಕ್ಷಕ.

ಮೈಕಟ್ಟು, ಸ್ವರ ಹೆಣ್ಣು ಪಾತ್ರಕ್ಕೆ ಲಾಯಕ್ಕು - ಮೇಳದ ಕಲಾವಿದರ ಛೇಡನೆ(?)ಯಿಂದ ಉಬ್ಬಿ ಉದ್ದಾಗಿದ್ದೆ. ಸೌಟು ತಿರುಗಿಸುವಾಗ, ಒರೆಕಲ್ಲು ತಿರುಗುವಾಗ ಮನದ ಮೂಲೆಯಲ್ಲಿ ನನ್ನ ಕಲ್ಪನೆಯ ಸ್ತ್ರೀ ಪಾತ್ರಗಳೂ ಕುಣಿಯುತ್ತಿದ್ದುವು! ನಿತ್ಯ ಆಟ ನೋಡಿದ್ದರಿಂದ ಸಂಭಾಷಣೆಗಳು ನೆನಪಿನಂಗಳಲ್ಲಿ ಗಿರಕಿ ಹಾಕುತ್ತಿದ್ದುವು.

ಅಂದು 'ವಿಶ್ವಾಮಿತ್ರ ಮೇನಕೆ' ಕಥಾನಕ. ಹಿರಿಯ ಪಾತ್ರಧಾರಿಯೊಬ್ಬರು ಮೇಳಕ್ಕೆ ಕೈಕೊಟ್ಟ ದಿನ. ಅಂದೇ ಕಲಾ ದೇವಿ ನನ್ನ ಕೈಹಿಡಿದಳು. ಮೇನಕೆಯಾಗಿ ರಂಗವೇರಿದೆ. ನೋಡಿ ಕಲಿತಷ್ಟು ಕೈಕಾಲು ಕುಣಿಸಿದೆ, ನೆನಪಿಗೆ ಬಂದಷ್ಟು ಮಾತನಾಡಿದೆ. ಪ್ರೇಕ್ಷಕರ ಪ್ರಶಂಸೆ, ಹಿರಿಯ ಕಲಾವಿದರ ಪ್ರೋತ್ಸಾಹ-ಹಾರೈಕೆಗಳಿಂದ ಕಲಾವಿದನಾದೆ!

ಹಗಲು ತರಬೇತಿ, ಅಧ್ಯಯನ. ಕಲಿತ ನಾಟ್ಯ, ಅರ್ಥಗಾರಿಕೆ ರಂಗಸ್ಥಳದಲ್ಲಿ ಪ್ರಯೋಗ. ಮೇನಕೆಯಲ್ಲಿದ್ದ ಆತಂಕ ದಕ್ಷಾಧ್ವರ ಪ್ರಸಂಗದ 'ದಾಕ್ಷಾಯಿಣಿ', ಬ್ರಹ್ಮಕಪಾಲದ 'ಶಾರದೆ' ಪಾತ್ರಗಳಲ್ಲಿ ಉಂಟಾಗಲಿಲ್ಲ.

ಯಾವ ಕ್ಷಣ ನಾನು ರಂಗದಲ್ಲಿ ಹೆಣ್ಣಾದೆನೋ, ಅವಕಾಶಗಳ ಬಾಗಿಲುಗಳು ತೆರೆಯಿತು. ಕಾಂಚನ ಮೇಳದಿಂದ ಸೌಕೂರು ಮೇಳಕ್ಕೆ ಪಯಣ. ಪಾತ್ರ ನಿರ್ವಹಣೆಗೆ ಪೂರಕವಾಗುವಂತಹ ನೃತ್ಯ, ಭರತನಾಟ್ಯಗಳನ್ನು ಕಲಿತೆ. ತೆಂಕು-ಬಡಗಿನುದ್ದಕ್ಕೂ ವ್ಯವಸಾಯ ಮಾಡಿದೆ. ಪರಿಣಾಮ, ನನ್ನ ಸ್ತ್ರೀಪಾತ್ರವನ್ನು ನೋಡಿದ ಹೆಣ್ಮಕ್ಕಳೇ ನಾಚುತ್ತಿದ್ದರು!

ಮೂಲ್ಕಿ ಮೇಳದಿಂದ ವೃತ್ತಿ ಬದುಕಿಗೆ ಹೊಸ ತಿರುವು. ನನಗೆ 'ತಾರಾಮೌಲ್ಯ' ತಂದ ಮೇಳ. ಕಾರಣರಾದ ಪೆರುವಡಿ ನಾರಾಯಣ ಹಾಸ್ಯಗಾರರನ್ನು ಮರೆಯಲುಂಟೇ? ಮುಂದೆ ಸುರತ್ಕಲ್ ಮೇಳ. ದೊಡ್ಡ ಸಾಮಗರೆಂದೇ ಖ್ಯಾತರಾದ ಶಂಕರನಾರಾಯಣ ಸಾಮಗರೊಂದಿಗೆ ವೇಷ ಮಾಡುವ ಆ ಕ್ಷಣ ಇದೆಯಲ್ಲಾ. ಅದು ಬದುಕಿನ ದೊಡ್ಡ ಅವಕಾಶ. ತುಳುಪ್ರಸಂಗಗಳು ನನಗೆ ಸವಾಲಾದರೂ, ಸಾಮಗರ ಜತೆಯಲ್ಲಿದ್ದಾಗ ಕಲಿಕೆ. ಇದರಿಂದಾಗಿ ಶುದ್ಧ ತುಳುವನ್ನು ಕಲಿಯುವಂತಾಯ್ತು. ಧರ್ಮಸ್ಥಳ ಮೇಳದ ಸೇರ್ಪಡೆಯ ನಂತರ ನಿವೃತ್ತಿ ತನಕವೂ ಅದೇ ಮೇಳದಲ್ಲಿ ವ್ಯವಸಾಯ ಮಾಡಿದೆ.

ಮೇಳಕ್ಕೆ ಸೇರಿದ ಸಮಯದಲ್ಲಿ ರಂಗದಲ್ಲಿ ಸ್ತ್ರೀ ಪಾತ್ರಗಳು ಸಾಮಾನ್ಯ ಹೆಂಗುಸರಂತೆ ನಿರ್ವಹಿಸಲ್ಪಡುತ್ತಿತ್ತು. ಸೀರೆ, ತಲೆಗೆ ಹೂದಂಡೆ. ಮೇನಕೆ, ಮೋಹಿನಿ ಪಾತ್ರಕ್ಕಾಗುವಾಗ 'ಅರ್ಧಸಾರಿ' (ಹಾಫ್ಸಾರಿ). ಶಿರೋಭೂಷಣ ಎಂಬುದಿಲ್ಲ. ಗರತಿ ಪಾತ್ರಕ್ಕೆ ಸೆರಗನ್ನು ಶರೀರದ ಎಲ್ಲಾ ಅಂಗ ಮುಚ್ಚುವಂತೆ ಸೀರೆ ಉಟ್ಟರಾಯಿತು. ಮುಖ್ಯ ಸ್ತ್ರೀಪಾತ್ರಕ್ಕೆ ಮೇಳದಿಂದ ಬೆಳ್ಳಿಯ ಪಟ್ಟಿ ನೀಡಲಾಗುತ್ತಿತ್ತು. ಕೊರಳಲ್ಲಿ ಮೂರ್ನಾಲ್ಕು ಮಣಿಹಾರ. ಕೈಬಳೆ, ಪುಂಡುವೇಷದ ಕೈಕಟ್ಟು. ರಾಣಿ ಪಾತ್ರಕ್ಕೆ ತುರಾಯಿ. ಸ್ತ್ರೀಪಾತ್ರಕ್ಕೇ ಪ್ರತ್ಯೇಕವಾದ ವೇಷಭೂಷಗಳು ಇರಲಿಲ್ಲ.

ಗೌಡಸಾರಸ್ವತ ಅಭಿಮಾನಿಯೊಬ್ಬರು ಹದಿನೆಂಟು ಮೊಳದ ಸೀರೆಯನ್ನು ಕಚ್ಚೆ ಹಾಕಲು ನನಗೆ ಬಹುಮಾನವಾಗಿ ನೀಡಿದ್ದರು. ಅಂದಿನಿಂದ ನಾನು ಕಚ್ಚೆ ಹಾಕಿಯೇ ಸ್ತ್ರೀವೇಷ ಮಾಡಲು ಆರಂಭಿಸಿದ್ದೆ.

1958, ಶಿವರಾಮ ಕಾರಂತರು ಯಕ್ಷಗಾನದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಕಾಲಘಟ್ಟ. ಅವರ ನೇತೃತ್ವದ ಬ್ಯಾಲೆ ಸುದ್ದಿ ಮಾಡಿತ್ತು. ಕಾರಂತರ 'ಯಕ್ಷಗಾನ' ಕೃತಿ ನನ್ನನ್ನು ಆಕರ್ಶಿಸಿತು. ಯಕ್ಷಗಾನ ಸ್ತ್ರೀ ಪಾತ್ರದ ಕುರಿತು ನಾನ್ಯಾಕೆ ಬದಲಾವಣೆ ತರಬಾರದು?

ಸ್ತ್ರೀವೇಷಕ್ಕೆ ಒಪ್ಪುವ ಆಭರಣಗಳನ್ನು ಹೇಗೆ ತಯಾರಿಸುವುದು? ಹಳೆಯ ಮಾದರಿಗಳು ಎಲ್ಲಿವೆ? ಆಗ 'ಪರಂಪರೆ' - ಯಕ್ಷಗಾನ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿತ್ತು. ಹಾಗಿದ್ದರೆ ಹಿಂದೊಂದು ಪರಂಪರೆ ಉಂಟೆಂದಾಯಿತು. ಅದು ಯಾವುದು? ಯಾವುದೇ ಆಕ್ಷೇಪಗಳು ಬಾರದಂತೆ ಇರುವ ಪರಂಪರೆಯ ವೇಷಭೂಷಗಳನ್ನು ತಯಾರಿಸಿದರೆ ಹೇಗೆ?

ಅದೇ ಹೊತ್ತಿಗೆ ಡಿ.ವಿ.ಜಿ.ಯವರ ಅಂತಃಪುರ ಗೀತೆಗೆ ಮಾರುಹೋದೆ. ಒಂದೊಂದು ಪಾತ್ರಗಳನ್ನು ವಿಭಿನ್ನವಾಗಿ ನಿರ್ವಹಿಸಬಹುದಾದ ಹೊಸ ಚಿತ್ರಣಗಳು ಹೊಳೆದುವು. ನನ್ನ ನಿರೀಕ್ಷೆಯ ಶಿಲ್ಪಗಳು ಮನದಲ್ಲಿ ಮೂರ್ತರೂಪ ಪಡೆಯಲಾರಂಭಿಸಿದುವು. ಅಂತಃಪುರ ಗೀತೆಯಲ್ಲಿನ ಶಿಲ್ಪಗಳ ವಿವರಗಳು ಬೇಲೂರಿನ ಶಿಲಾಬಾಲಿಕೆಗಳ ನೆನಪನ್ನು ತಂದಿಟ್ಟಿತು. ಶಿಲಾಬಾಲಿಕೆಯರ ಅಭ್ಯಾಸಕ್ಕಾಗಿ ಬೇಲೂರಿಗೆ ಹೋದೆ.

ಹಿರಿಯ ಕಲಾವಿದ ಲಕ್ಷ್ಮಣ ಆಚಾರ್ರ ಮನೆಯಲ್ಲೇ ವಾಸ್ತವ್ಯ. ಶಿಲ್ಪಗಳ ಅಧ್ಯಯನ. ಕೆಲವು ಶಿಲ್ಪಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಎತ್ತರದ ಕಿರೀಟ, ದೊಡ್ಡ ಡಾಬು, ತೋಳ್ಕಟ್ಟು...ಹೊಂದಿದ್ದುವು. ಎಲ್ಲವೂ ಆಳಂಗದ ಅಳತೆಗಿಂತ ದೊಡ್ಡದಾಗಿದ್ದುವು.

ಹೀಗೆ ಅಧ್ಯಯನ ಮಾಡುತ್ತಿದ್ದಾಗ ಶಿಲ್ಪದ ಅಂಗಭಂಗಿಗಳು, ಬಾಗುಗಳು, ಕಣ್ಣಿನ ನೋಟಗಳನ್ನು ಜೊತೆಜೊತೆಗೆ ಕಲಿತೆ. ರಂಗದಲ್ಲಿ ನಾನೂ ಅವುಗಳಂತೆ ಯಾಕಿರಬಾರದು?

ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳ ಆಯ ಅಳತೆಯನ್ನು ತಂದು ಬ್ರಹ್ಮಾವರದ ಸುಬ್ಬಣ್ಣ ಭಟ್ಟರ ಮುಂದಿಟ್ಟು, ನನಗೂ ಇಂತಹುದೇ ಮಾಡಿಕೊಡುವಂತೆ ಬಿನ್ನವಿಸಿದೆ. ಅಂದಿನ ಪೂಜ್ಯ ಖಾವಂದರು ವೆಚ್ಚವನ್ನು ಭರಿಸಿದ್ದರು.

ಧರ್ಮಸ್ಥಳ ಮೇಳ ಸೇರುವಾಗ 'ನನ್ನ ವೇಷ ಹೀಗೆಯೇ ಇರಬೇಕು' ಎಂಬ ನಿರ್ಣಯಕ್ಕೆ ಬಂದಿದ್ದೆ. ಇದಕ್ಕೆ ಪೂರಕವಾಗಿ ವೇಷಭೂಷಗಳು ಸೊಗಸನ್ನು ತಂದುವು. ಶಿಲ್ಪಗಳಲ್ಲಿರುವ ಬಾಗು, ಬಳಕುಗಳನ್ನು ಯಥಾಸಾಧ್ಯ ಅನುಸರಿಸಿದೆ. ರಂಗಕ್ಕದು ಹೊಸದಾದುದರಿಂದ ಕಲಾವಿದರ ಗೇಲಿಗೂ ಒಳಗಾದೆ!

ವಿಟ್ಲದಲ್ಲಿ ಬಾಬುಮಾಸ್ತರ್ ಎಂಬ ಕಲಾವಿದರಿದ್ದರು. ಅವರು ಪರದೆ ವಿನ್ಯಾಸದಲ್ಲಿ ಖ್ಯಾತರು. ವರ್ಣಸಂಯೋಜನೆಯಲ್ಲಿ ಎತ್ತಿದ ಕೈ. ನನಗೆ ಕಲಿಸುವಂತೆ ದುಂಬಾಲುಬಿದ್ದೆ. ಅವರಿಂದ ಕಲಿತ ವರ್ಣಗಾರಿಕೆ ನನ್ನೆಲ್ಲಾ  ಕಲ್ಪನೆಗಳ ಸಾಕಾರಕ್ಕೆ ಪುಷ್ಟಿನೀಡಿದುವು. ವಿಭಿನ್ನ ಸ್ವಭಾವದ ಪಾತ್ರಗಳಿಗೆ ವಿವಿಧ ವರ್ಣಗಳ 'ಟಚ್ಅಪ್' ಕೊಡುತ್ತಿದ್ದೆ. ರಸ ಶೃಂಗಾರವಾದರೂ ಮೇನಕೆ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ಮೋಹಿನಿಗಳಲ್ಲಿ ಸ್ವಭಾವಕನ್ನುಗುಣವಾದ ಲಾಸ್ಯವನ್ನು ತರಲು ಸಾಧ್ಯವಾಯಿತು.

ನನಗೆ ವೇಷ ತಯಾರಾಗಲು ಕನಿಷ್ಠ ಮೂರು ಗಂಟೆಗಳಾದರೂ ಬೇಕು. ಅವಸರದಲ್ಲಿ ವೇಷ ಮಾಡಲು ಕಷ್ಟ. ನಾಜೂಕು ಬಾರದಿದ್ದರೆ ವೇಷ ಪೂರ್ಣವಾಗುವುದಿಲ್ಲ. ಗೌರವದ ಪಾತ್ರಗಳಿಗೆ ಹುಬ್ಬಿನ ಮೇಲೆ ಮಕರಿಕಾ ಪತ್ರ ಬಿಡಿಸುತ್ತಿದ್ದೆ. ತಿಲಕವು ಅವರವರ ಮುಖದ ಆಕಾರಕ್ಕೆ ತಕ್ಕುದಾಗಿರಬೇಕು. ಮುಖ ಸಣ್ಣದು, ತಿಲಕ ದೊಡ್ಡದು - ಇದು ವಿಕಾರ, ಆಭಾಸ. ಗರತಿ ಪಾತ್ರಗಳಿಗೆ ಉರುಟು ತಿಲಕ. ಗೌರಿ ಪಾತ್ರಕ್ಕೆ ಸಣ್ಣ ಅರ್ಧಚಂದ್ರ. ದೇವಿ ಪಾತ್ರಕ್ಕೆ ಹಣೆ ತುಂಬ ಬರುವಂತೆ ಅರ್ಧಚಂದ್ರ. ಮಿಕ್ಕುಳಿದ ಪಾತ್ರಗಳಿಗೆಲ್ಲಾ ಶಂಕುವಿನಾಕಾರದ ತಿಲಕ.

ಮುಖದ ಬಣ್ಣದಲ್ಲಿ ಎಷ್ಟು ವಿನ್ಯಾಸವಿರುತ್ತಿತ್ತೋ, ಅಷ್ಟೇ ಕುಸುರಿ ಜಡೆಯ ಅಲಂಕಾರದಲ್ಲಿ ಇರುತ್ತಿತ್ತು. ಮೇಳದಲ್ಲಿ ನನಗೆ ನೀಡುತ್ತಿದ್ದ ಸೀರೆ ಎರಡು ಮೂರು ವರುಷ ಬಾಳ್ವಿಕೆ ಬರುತ್ತಿತ್ತು. ಸೆರಗುಜಾರದಂತೆ ಈಗಿನವರು ಪಿನ್ ಹಾಕುತ್ತಾರೆ. ನಾನು ಪಿನ್ ಹಾಕುತ್ತಿರಲಿಲ್ಲ. ಒಮ್ಮೆ ನೆರಿ ಹಿಡಿದರೆ ಆಯಿತು. ಮತ್ತೆ ಅದೇ ಜಾಗದಲ್ಲಿ ನೆರಿ ನಿಲ್ಲುತ್ತಿತ್ತು!

ಹದಿನೇಳು ವರುಷದ ಧರ್ಮಸ್ಥಳ ಮೇಳದ ತಿರುಗಾಟ ಮರೆಯುವಂತಹುದಲ್ಲ. ಶ್ರೀ ಧರ್ಮಸ್ಥಳ ಮೇಳವು ಸ್ತ್ರೀಪಾತ್ರದ ಕುರಿತಾದ ನನ್ನೆಲ್ಲಾ ಆವಿಷ್ಕಾರಗಳಿಗೆ ತೆರೆದ ಬಾಗಿಲಾಗಿತ್ತು. ಪೂಜ್ಯ ಕಾವಂದರು ಪ್ರೋತ್ಸಾಹಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಕಥಾನಕದ 'ಅಮ್ಮುದೇವಿ', ವಿಕ್ರಮೋರ್ವಶೀಯದ 'ಊರ್ವಶಿ', ಅಶೋಕಸುಂದರಿ, ರಂಭೆ, ಕೈಕೆ, ಗುಣಸುಂದರಿ ಪಾತ್ರಗಳು ನನ್ನ ನಿರೀಕ್ಷೆಗೂ ಮಿಕ್ಕಿ ಮೆರೆದುವು. ಇದಕ್ಕೆ ಕಾರಣ ನಾನಲ್ಲ, ಕಡತೋಕ ಮಂಜುನಾಥ ಭಾಗವತರು. ಶೇಣಿಯವರು, ಪುತ್ತೂರು ನಾರಾಯಣ ಹೆಗಡೆಯವರು, ಕುಂಬಳೆ ಸುಂದರ ರಾಯರು, ಕೆ.ಗೋವಿಂದ ಭಟ್ಟರು..ಇವರೆಲ್ಲರ ಕೊಡುಗೆ ನನ್ನ ಪಾತ್ರದ ಯಶಸ್ಸಿನಲ್ಲಿತ್ತು.

ಕಡತೋಕರು ನನ್ನ ಅಮ್ಮದೇವಿ ಪಾತ್ರವನ್ನು ಮೆಚ್ಚಿಕೊಂಡು ಆಡಿದ ಮಾತು ಎಂದಿಗೂ ಮರೆಯಲಾರೆ - 'ಶೃಂಗಾರದ ಲವಲೇಶವೂ ಇಲ್ಲದ ಈ ಸಭ್ಯ ಗೃಹಿಣಿಯ ಪಾತ್ರವನ್ನು ಜೈನರೂ ಮೆಚ್ಚುವಂತೆ ನಿರ್ವಹಿಸಿದ್ದಾರೆ'.

ವಯಸ್ಸಾದಂತೆ ದೇಹವೂ ಮಾಗಿದೆ. ಒಂದು ಕಾಲಘಟ್ಟದಲ್ಲಿ ನನ್ನ ವೇಷ ರಂಗಸ್ಥಳಕ್ಕೆ ಬರುವುದನ್ನೇ ಕಾಯುತ್ತಿದ್ದ ಪ್ರೇಕ್ಷರಿದ್ದರು. ಸುಮಾರು 1981ರ ಸುಮಾರಿಗೆ ಜನರ ಸ್ಪಂದನ ಮೊದಲಿನಂತಿರಲಿಲ್ಲ! ವೇಷದ ಆಕರ್ಷಣೆ ಕುಂಠಿತವಾಗಿತ್ತು. ಮೇಳದ ವಿದಾಯಕ್ಕೆ ಮನ ಮಾಡಿದೆ. ನನ್ನ ಉತ್ಕರ್ಷಕ್ಕೆ ಕಾರಣರಾದ ಪೂಜ್ಯ ರತ್ನವರ್ಮ ಹೆಗ್ಗಡೆಯವರು, ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ನೆನೆಯುತ್ತಾ, ಶ್ರೀ ಧರ್ಮಸ್ಥಳ ಮೇಳವೆಂಬ ಕುಟುಂಬದಿಂದ ಭಾರವಾದ ಹೃದಯದೊಂದಿಗೆ ಸಂಸಾರ ಸೇರಿದೆ.

ಯಕ್ಷಗಾನದಲ್ಲಿ ಅನುಕರಣೆ ಸಾಮಾನ್ಯ. ಆದರೆ ದುರಾದೃಷ್ಟ ನೋಡಿ! ನನ್ನ ವೇಷಭೂಷಣ, ರಂಗಕ್ರಮಗಳನ್ನು ಯಾರೂ ಅನುಸರಿಸಲಿಲ್ಲ! ಬಹುಶಃ ಉಳಿದ ವೇಷಗಳಂತೆ ಸರಳವಾಗಿಲ್ಲದಿದ್ದುದೂ ಆಗಿರಬಹುದು.

ಮೇಳದಿಂದ ನಿವೃತ್ತನಾಗಿ ಇಪ್ಪತ್ತೇಳು (2008ರಲ್ಲಿ) ವರುಷಗಳೇ ಸಂದುವಲ್ಲಾ. ಅಬ್ಬಾ..ಕಾಲದ ವೈಚಿತ್ರ ನೋಡಿ. ರೆಪ್ಪೆ ಮಿಟುಕಿಸುವುದರೊಳಗೆ ಆಯಷ್ಯ ಲೆಕ್ಕಣಿಕೆಯಲ್ಲೂ ಇಳಿಲೆಕ್ಕ. ಹಲವು ಪ್ರಶಸ್ತಿಗಳು ಅರಸಿ ಬಂದುವು. ಮೊನ್ನೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ಸ್ವೀಕರಿಸಿದೆ.

ಯಕ್ಷಗಾನ ಪ್ರದರ್ಶನ ನೋಡುವ ಹಂಬಲ ಮೊದಲಿನಂತಿಲ್ಲ. ಅಪರೂಪಕ್ಕೊಮ್ಮೆ ಪ್ರದರ್ಶನಕ್ಕೆ ಹೋದರೆ ಇಡೀರಾತ್ರಿ ಆಟ ನೋಡಿ, ನನ್ನ ಅಭಿಪ್ರಾಯಗಳನ್ನು ಸಂಬಂಧಪಟ್ಟವರಲ್ಲಿ ಹೇಳುವ ಅಭ್ಯಾಸವಿಟ್ಟುಕೊಂಡಿದ್ದೇನೆ. ನಿಷ್ಠುರ ವಿಮರ್ಶೇಗಳು ಕೆಲವು ಕಲಾವಿದರನ್ನು ನೋಯಿಸಿದೆ. ಇನ್ನೂ ಕೆಲವರಿಗೆ ಸಂತೋಷ ತಂದಿದೆ.

ಯಾವುದೇ ವಿಚಾರವನ್ನು ಪರಸ್ಪರ ಹಂಚಿಕೊಳ್ಳುವ ಸ್ವಭಾವ. ಮನಸ್ಸಿನಲ್ಲೊಂದು, ಮಾತನಾಡುವುದೊಂದು - ನನ್ನ ಜಾಯಮಾನವೇ ಅಲ್ಲ. ಹುಟ್ಟು ಅಂಟಿಕೊಂಡ 'ಸಿಟ್ಟು' ಕೆಲವೊಂದು ಸಲ ಎಡವಟ್ಟು ಮಾಡಿದ್ದಿದೆ. ಫಕ್ಕನೆ ಎರಗುವ ಇದನ್ನು ದೂರಮಾಡೋಣ - ಎಷ್ಟೋ ಸಲ ಸಂಕಲ್ಪ ಮಾಡಿದ್ದೆ. ಊಹೂಂ! ಹೇಳಿದಾಕ್ಷಣ ಸಿಟ್ಟುಬಿಡಲು ನಾನೇನು ಜಮದಗ್ನಿಯೇ?

ಎಡನೀರು ಮಠಾಧೀಶ (ಬ್ರಹ್ಮೈಕ್ಯ) ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಹಿರಿತನದಲ್ಲಿ 'ಪಾತಾಳ ಪ್ರಶಸ್ತಿ'ಯನ್ನು ಸ್ಥಾಪಿಸಿದೆ. ಪ್ರತಿ ವರುಷ ಹಿರಿಯ ಕಲಾವಿದರನ್ನು ಗೌರವಿಸುವುದು ಉದ್ದೇಶ. ಈ ತೃಪ್ತಿಯೊಂದಿಗೆ ಮತ್ತೊಂದು ಉದ್ದೇಶ - ನನ್ನ ಕಲಾ ಸೇವೆ ನನಗೇ ಮರೆತುಹೋಗಬಾರದಲ್ಲಾ..!

ನನ್ನೆಲ್ಲಾ ಯಕ್ಷಬದುಕನ್ನು 'ಯಕ್ಷಶಾಂತಲಾ' ಎಂಬ ಕೃತಿಯಲ್ಲಿ ಅಭಿಮಾನಿಗಳು ಹಿಡಿದಿಟ್ಟಿದ್ದಾರೆ. ನನಗೆ 'ಬದುಕಿನ ಬಣ್ಣ' ಮತ್ತು 'ಬಣ್ಣದ ಬದುಕು' ಬೇರೆ ಬೇರೆಯಾಗಿ ಕಾಣುವುದಿಲ್ಲ. ನನಗೆ ಬದುಕನ್ನು ನೀಡಿದ್ದು ಬಣ್ಣ. ಈ ಬಣ್ಣದ ಬದುಕು ನನ್ನ ವರ್ಚಸ್ಸಿನ ಬಣ್ಣವನ್ನು ಪ್ರಕಾಶಿಸಿದೆ. ನಿಜ ಜೀವನದ ಬಣ್ಣಕ್ಕೆ ಸಂಸ್ಕಾರವನ್ನು ಕಲಿಸಿದೆ. ಅದರಿಂದಾಗಿ ಬಣ್ಣಬಣ್ಣದ ಬದುಕು ನನ್ನದಾಗಲಿಲ್ಲ.

ಪತ್ನಿ ಪರಮೇಶ್ವರಿ. ಸಣ್ಣ ಮಗ ಶ್ರೀರಾಮ. ದೊಡ್ಡವ ಅಂಬಾಪ್ರಸಾದ. ಹೊಸನಗರ ಮೇಳದ ಕಲಾವಿದ. ನಾಲ್ವರು ಹೆಣ್ಣುಮಕ್ಕಳು. ಎಲ್ಲರೂ ವಿವಾಹಿತರು. ಮೊಮ್ಮಕ್ಕಳಿಗೆ ನಾನೀಗ 'ಪಾತಾಳಜ್ಜ'. ರಂಗಕ್ಕೂ ಅಷ್ಟೇ!

(Patala Venkatramana Bhat : 16-11-1933 : 19-7-2025) 

- ನಿರೂಪಣೆ : ನಾ. ಕಾರಂತ ಪೆರಾಜೆ

Monday, July 7, 2025

ತಾಳಮದ್ದಳೆ ಸಪ್ತಾಹ ಸಮಾರೋಪ - ಕುರಿಯ ಪ್ರಶಸ್ತಿ ಪ್ರದಾನ : 'ಪ್ರಶಸ್ತಿ ಪಡೆವ ಕಲಾವಿದನ ಬದುಕು ಅದರ್ಶವಾಗಿರಬೇಕು' - ಪೂಜ್ಯ ಎಡನೀರು ಶ್ರೀಗಳು

 


  “ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು ಬದುಕಿ ತೋರಿಸಿದರು. ಒಂದು ಪ್ರಶಸ್ತಿಯನ್ನು ಸ್ಥಾಪಿಸುವುದು, ಅದಕ್ಕೆ ಕಲಾವಿದನನ್ನು ಆಯ್ಕೆ ಮಾಡುವಲ್ಲಿ ಬದ್ಧತೆ ಮುಖ್ಯ. ಹಾಗೆ ಆಯ್ಕೆ ಮಾಡಿದ ಕಲಾವಿದದ ಬದುಕು ಕೂಡಾ ಆದರ್ಶವಾಗಿರಬೇಕು. ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ತುಂಬಾ ಎಚ್ಚರದಿಂದ ಪ್ರಶಸ್ತಿಗಳಿಗೆ ಕಲಾವಿದರನ್ನು ಆಯ್ಕೆ ಮಾಡುತ್ತಾರೆ. ಇದೊಂದು ಮಾದರಿ ಉಪಕ್ರಮ. ಎಂದು ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಅವರು ಪುತ್ತೂರಿನ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಜರುಗಿದ 'ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ ಸಪ್ತಾಹ ಸಮಾರೋಪದಲ್ಲಿ ಆಶೀರ್ವಚನ ನೀಡುತ್ತಾ, ಇಡಗುಂಜಿ ಮೇಳವು ಪರಂಪರೆಯನ್ನು ಮುರಿಯದ ಸಂಘಟನೆ. ದಿ.ಶಂಭು ಹೆಗಡೆಯವರ ಕನಸನ್ನು ಅವರ ಚಿರಂಜೀವಿಗಳು ನನಸು ಮಾಡುತ್ತಿದ್ದಾರೆ. ಆ ಸಂಘಟನೆಗೆ ನೀಡಿದ ಪ್ರಶಸ್ತಿಗೇ ಗೌರವ ಬಂದಿದೆಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ  ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮಾತನಾಡುತ್ತಾ, ನಾಟ್ಯಾಚಾರ್ಯ ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನದ ಕ್ರಾಂತಿ ಪುರುಷ. ಅವರು ರಂಗದಲ್ಲಿ ತಂದ ಅನೇಕ ಪ್ರಯೋಗಗಳು ಈಗಲೂ ಪ್ರಸ್ತುತ. ತನ್ನ ಮನೆಯನ್ನೇ ಗುರುಕುಲವನ್ನಾಗಿ ಮಾಡಿ ಶಿಷ್ಯರನ್ನು ಬೆಳೆಸಿದ ಮಹಾ ಗುರುಎಂದರು.

ಈ ಸಂದರ್ಭದಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ಈ ಸಂಸ್ಥೆಯನ್ನು ಪ್ರತಿನಿಧಿಸಿದ ಶಿವಾನಂದ ಹೆಗಡೆ ಕೆರೆಮನೆ ಹಾಗೂ ಹಿರಿಯ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ಟರಿಗೆ 'ಕುರಿಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಕಲಾಪೋಷಕ, ಉದ್ಯಮಿ ಶ್ರೀ ಆರ್.ಕೆ.ಭಟ್ಟರಿಗೆ 'ಕುರಿಯ ಸ್ಮೃತಿ ಗೌರವ'ವನ್ನು ಪ್ರದಾನಿಸಲಾಯಿತು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಅಭಿನಂದನಾ ನುಡಿಗಳ ಮೂಲಕ ಸಾಧಕರ ಸಾಧನೆಗೆ ಕನ್ನಡಿ ಹಿಡಿದರು.

ಕೀರ್ತಿಶೇಷ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರ ಕಲಾಯಾನವನ್ನು ಹಿರಿಯ ಅರ್ಥದಾರಿ ವೆಂಕಟರಾಮ ಭಟ್ಟ ಸುಳ್ಯ ಸ್ಮರಿಸಿದರು. ಪುತ್ತೂರಿನ ದ್ವಾರಕಾ ಕಾರ್ಪೋರೇಶನ್ ಪ್ರೈ ಲಿ., ಇದರ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಉಪಸ್ಥಿತರಿದ್ದರು.

ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ಅವರ ಕುಟುಂಬಸ್ಥರು ತಾಳಮದ್ದಳೆ ಸಪ್ತಾಹಕ್ಕೆ ದೊಡ್ಡ ಮೊತ್ತದ ನಿಧಿಯನ್ನು ಕುರಿಯ ಪ್ರತಿಷ್ಠಾನದ ಉಜಿರೆ ಅಶೋಕ ಭಟ್ಟರಿಗೆ ಹಸ್ತಾಂತರಿಸಿದರು. ಭಾಗವತ ರಮೇಶ ಭಟ್ ಪುತ್ತೂರು ಸ್ವಾಗತಿಸಿದರು. ಸ್ವಸ್ತಿಕ್ ಪದ್ಯಾಣ ವಂದಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು 'ತಾಳಮದ್ದಳೆ ಸಪ್ತಾಹ'ವನ್ನು ಆಯೋಜಿಸಿತ್ತು.   

ಪೆರುವಡಿ ಅಶೋಕ ಸುಬ್ರಹ್ಮಣ್ಯ, ಕುಮಾರ ಸ್ವಾಮಿ ಕನ್ಯಾನ, ಪದ್ಯಾಣ ಶಂಕರನಾರಾಯಣ ಭಟ್, ಕಾಡೂರು ಸೀತಾರಾಮ ಶಾಸ್ತ್ರಿ, ರಾಮ ಜೋಯಿಸ್ ಬೆಳ್ಳಾರೆ ಸಹಕರಿಸಿದರು. ಸಮಾರಂಭದ ಬಳಿಕ  ಸಪ್ತಾಹದ ಕೊನೆಯ ತಾಳಮದ್ದಳೆ 'ಗುರುದಕ್ಷಿಣೆ' ಸಂಪನ್ನಗೊಂಡಿತು. ಏಳು ದಿವಸವೂ ರುಚಿ ಶುದ್ಧಿಯ ಪ್ರೇಕ್ಷಕರು ತಾಳಮದ್ದಳೆಗೆ ಉಪಸ್ಥಿತರಿದ್ದರು.


Friday, July 4, 2025

ಸ್ತ್ರೀಪಾತ್ರಗಳನ್ನು ಮಾತಿಗೆ ಎಳೆದ 'ಈಶಾನ'

 

(2017ರಲ್ಲಿ ಹಿರಿಯ ಕಲಾವಿದ ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಅಭಿನಂದನಾ ಸಮಾರಂಭ ಜರುಗಿತ್ತು. ಆ ಸಂದರ್ಭದಲ್ಲಿ 'ಈಶಾನ' ಎನ್ನುವ ಅಭಿನಂದನಾ ಗ್ರಂಥವನ್ನು ಅವರಿಗೆ ಸಮರ್ಪಿಸಲಾಗಿತ್ತು. ಪ್ರಜಾವಾಣಿಯ 'ದಧಿಗಿಣತೋ' ಅಂಕಣದಲ್ಲಿ - 17-2-2017 - ಪುಸ್ತಕದ ಕುರಿತ ಬರಹ ಬರೆದಿದ್ದೆ. 2025 ಜುಲೈ 6ರಂದು ಈಶ್ವರ ಭಟ್ಟರಿಗೆ 'ಕುರಿಯ ಪ್ರಶಸ್ತಿ' ಪ್ರದಾನದ ಶುಭ ಸಂದರ್ಭದ ಮುಂಚಿತವಾಗಿ ಈ ಲೇಖನದ ಮರುಓದು)

"ಇತ್ತೀಚೆಗೆ ಯಕ್ಷಗಾನದ ಸ್ತ್ರೀವೇಷಗಳು ರಂಗದಲ್ಲಿ ಡ್ಯಾನ್ಸ್ ಐಟಂ ಆಗಿ ಕಾಣುತ್ತಿವೆ." ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಅಭಿಮತ. ಸಂದರ್ಭ : ಹಿರಿಯ ಸ್ತ್ರೀಪಾತ್ರಧಾರಿ ಕೊಕ್ಕಡ ಈಶ್ವರ ಭಟ್ಟರ ಎಪ್ಪತ್ತೈದರ (2017) ಸಂಭ್ರಮ. 'ಯಕ್ಷಗಾನದ ಬಹುತೇಕ ಸ್ತ್ರೀವೇಷಗಳು ಸೀರೆ ಉಡುವುದನ್ನೇ ಮರೆತಿವೆʼ ಎಂದು ಹಿಂದೊಮ್ಮೆ ವಾಟ್ಸಪ್ಪಿನಲ್ಲಿ ಕಮೆಂಟ್ ಹಾಕಿದ್ದೆ. ಅದಕ್ಕೊಬ್ಬರು 'ಡೋಂಟ್ ವರಿ' ಎಂದು ಮರು ಉತ್ತರ ನೀಡಿದ್ದರು. ಅದನ್ನು ಡ್ಯಾನ್ಸ್ ಐಟಂ ಆಗಿಯೇ ಸ್ವೀಕರಿಸಬೇಕೋ, ಭರತನಾಟ್ಯದ ಡ್ರೆಸ್ಸನ್ನು ಹೋಲುವಂತಹ ಉಡುಗೆಗಳನ್ನು ಎಲ್ಲಾ ಪಾತ್ರಗಳಲ್ಲೂ ಒಪ್ಪಬೇಕೋ ಅಥವಾ ಇದ್ಯಾವುದರ ಚಿಂತೆ ಇಲ್ಲದೆ 'ಡೋಂಟ್ ವರಿ'ಯಾಗಿರಬೇಕೋ? ಉತ್ತರ ಸಿಕ್ಕದ ಪ್ರಶ್ನೆಗಳು.

ಡಾ.ಜೋಷಿಯವರ ಸಕಾಲಿಕ ಮಾತಿನಲ್ಲಿ ವರ್ತಮಾನದ ರಂಗದ ಮರುಕವಿದೆ. ಮೌನಕ್ಕೂ ಮಾತಿದೆ, ಭಾವಕ್ಕೂ ಭಾಷೆಯಿದೆ, ಪಾತ್ರಗಳಿಗೂ ಒಂದು ಮನಸ್ಸಿದೆ ಎನ್ನುವುದನ್ನು ಹಿರಿಯ ಸ್ತ್ರೀಪಾತ್ರಧಾರಿಗಳು ರಂಗದಲ್ಲಿ ಸ್ಥಾಪಿಸಿದ್ದಾರೆ. ಪಾತಾಳ ವೆಂಕಟ್ರಮಣ ಭಟ್, ಡಾ.ಕೋಳ್ಯೂರು ರಾಮಚಂದ್ರ ರಾವ್, ಕೊಕ್ಕಡ ಈಶ್ವರ ಭಟ್ ಮೊದಲಾದ ಕಲಾವಿದರ ಪಾತ್ರಾಭಿವ್ಯಕ್ತಿಯಲ್ಲಿ ಪುರಾಣ ಪಾತ್ರಗಳು ಮರುಜ್ಜೀವವಾಗುತ್ತಿದ್ದುವು. ಹೀಗಂದಾಗ 'ಆ ಕಾಲವೇ ಬೇರೆ' ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದರು. ಎಲ್ಲವನ್ನೂ ಕಾಲದೊಂದಿಗೆ ಸಮೀಕರಿಸುವುದು ದೌರ್ಬಲ್ಯವಾಗಿ ಬಿಟ್ಟಿದೆ. ಒಂದು ಪಾತ್ರದ ಯಶಸ್ವೀ ಅಭಿವ್ಯಕ್ತಿಯ ಹಿಂದೆ ಕಲಾವಿದನ ರಂಗತಪಸ್ಸಿದೆ ಎನ್ನುವುದನ್ನು ಮರೆಯಲಾಗದು. ಅಂತಹ ತಪಸ್ಸು ಇದ್ದರೆ ಮಾತ್ರ ಪಾತ್ರ ಒಲಿಯುತ್ತದೆ. ಇಲ್ಲದಿದ್ದರೆ ಬರೇ ವೇಷವಷ್ಟೇ.

ಕೊಕ್ಕಡ ಈಶ್ವರ ಭಟ್ಟರ ಅಭಿನಂದನಾ ಸಮಾರಂಭದ ನೆನಪಿಗಾಗಿ 'ಈಶಾನ' ಎನ್ನುವ ಅಭಿನಂದನಾ ಗ್ರಂಥವನ್ನು ಪ್ರಕಾಶಿಸಲಾಗಿತ್ತು. ಈಶಾನದ ಸಂಪಾದಕರು - ಶ್ರೀ ಗಣರಾಜ ಕುಂಬ್ಳೆ. ತುಂಬಾ ಅರ್ಥವತ್ತಾದ ಹೂರಣವನ್ನು ಪೋಣಿಸಿದ್ದಾರೆ. ಈಶಾನವನ್ನು ಸುಮಾರು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಒಂದು, ಈಶ್ವರ ಭಟ್ಟರಿಗೆ ಅಭಿನಂದನೆಯ ನುಡಿಗಳುಳ್ಳ ಲೇಖನ; ಎರಡು - ಪುರಾಣ ಸ್ತ್ರೀ ಪಾತ್ರಗಳ ಒಳತೋಟಿ ಮತ್ತು ಮೂರನೇಯದು ರಂಗ ವಿಮರ್ಶೆ. ಇದರಲ್ಲಿ ಎರಡನೇ ವಿಭಾಗವು ನನ್ನ ಮೇಲಿನ ವಿಚಾರಕ್ಕೆ ಪೂರಕ. ಕೆಲವು ಪ್ರಸಂಗಗಳ ಸ್ತ್ರೀಪಾತ್ರದ ಮಹತ್ತುಗಳನ್ನು ಲೇಖನಗಳು ಬಿಂಬಿಸಿವೆ.

ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಬರೆದ 'ದಾಕ್ಷಾಯಣಿ', ಶ್ರೀಧರ ಡಿ.ಎಸ್. ಅವರ 'ಅಂಬೆ', ಸುಳ್ಯದ ವೆಂಕಟರಾಮರು 'ಸಾಧ್ವಿ ಮಂಡೋದರಿ', ನಾರಾಯಣ ಎಂ.ಹೆಗಡೆಯವರು 'ಚಿತ್ರಾಂಗದೆ', ಅಡ್ಕ ಗೋಪಾಲಕೃಷ್ಣ ಭಟ್ಟರು 'ದುರಂತ ಶೂರ್ಪನಖಿ', ನಾರಾಯಣ ಪುತ್ತೂರು ಇವರ 'ಸುಭದ್ರೆ', ರವಿ ಅಲೆವೂರಾಯರು 'ಶ್ರೀದೇವಿ', ಎಂ.ಕೆ.ರಮೇಶ್ ಆಚಾರ್ಯರು 'ದಯಮಂತಿ, ಚಂದ್ರಮತಿ', ಅಂಬಾಪ್ರಸಾದ ಪಾತಾಳರು ಬೇರೆ ಬೇರೆ ಪ್ರಸಂಗಗಳಲ್ಲಿ ಬರುವ 'ಸುಭದ್ರೆ' ಮತ್ತು ಸೇರಾಜೆಯ ಜಿ.ಕೆ.ಭಟ್ಟರು 'ಸೀತೆ' - ಪಾತ್ರಗಳ ಕುರಿತು ಒಳನೋಟ ಬೀರಿದ್ದಾರೆ. ಎಲ್ಲವನ್ನೂ ಓದಿದಾಗ 'ಒಂದೊಂದು ಪಾತ್ರಗಳ ಒಳಹೊಕ್ಕು ಹೊರ ಬರಲು ಬಹುಶಃ ಒಬ್ಬ ಪಾತ್ರಧಾರಿಗೆ ಅರ್ಧಾಯಷ್ಯ ಬೇಕೇನೋ? ಎಂದೆನಿಸಿತು. ಡಾ.ಚಂದ್ರಶೇಖರ ದಾಮ್ಲೆಯವರು ಕೃಷ್ಣ ಸಂಧಾನದ 'ದ್ರೌಪದಿ' ಪಾತ್ರವನ್ನು ಬಹಳ ಅರ್ಥವತ್ತಾಗಿ ವಿಮರ್ಶಿಸಿದ್ದಾರೆ. ಪಾತ್ರಗಳ ಸಾಧ್ಯತೆಯೊಂದಿಗೆ ಕಲಾವಿದನು ಪಾತ್ರದೊಂದಿಗೆ ಮಿಳಿತವಾಗಲು ಉಂಟಾಗುವಂತಹ ತೊಂದರೆ ಮತ್ತು ಸವಾಲುಗಳನ್ನು ವಿಷದವಾಗಿ ವಿವರಿಸಿದ್ದಾರೆ.

ದಾಕ್ಷಾಯ(ಯಿ)ಣಿ ಪಾತ್ರವನ್ನೇ ತೆಕ್ಕೊಳ್ಳಿ. ಪ್ರವೇಶದಿಂದ ಯೋಗಾಗ್ನಿಯಲ್ಲಿ ಉರಿದುಹೋಗುವ ತನಕ ಏನಿಲ್ಲವೆಂದರೂ ಒಂದೂವರೆ ಗಂಟೆಗೂ ಮಿಕ್ಕಿ ವಿವಿಧ ಭಾವಗಳನ್ನು ಪ್ರಕಟಿಸುವುದು ಇದೆಯಲ್ಲಾ, ನಿಜಕ್ಕೂ ಇದೊಂದು ಸವಾಲು. ಪೆರಡಂಜಿಯವರು ತನ್ನ ಬರೆಹದಲ್ಲಿ ಒಂದೊಂದು ಪದ್ಯಕ್ಕೂ ಕಲಾವಿದನ ಜವಾಬ್ದಾರಿಯನ್ನು ವಿವರಿಸಿದ್ದಾರೆ. ಪಾತ್ರಗಳು ಹೇಗಿರಬೇಕು ಎನ್ನುವುದನ್ನು ಪ್ರಸ್ತುತಪಡಿಸಿದ್ದಾರೆ. ಈಶಾನದಲ್ಲಿರುವ ಎಲ್ಲಾ ಪಾತ್ರಗಳನ್ನು ಅರ್ಥಧಾರಿಯಾಗಿ, ವೇಷಧಾರಿಯಾಗಿ ಅನುಭವಿಸಿದ ಹಿನ್ನೆಲೆಯಲ್ಲಿ ಲೇಖನಗಳು ಮೂಡಿ ಬಂದಿರುವುದು ಕೃತಿಯ ಚೆಲುವನ್ನು ಹೆಚ್ಚಿಸಿದೆ.

ಡಾ.ರಾಘವ ನಂಬಿಯಾರರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ ಈ ಮಾತುಗಳು ವೇಷಧಾರಿಗೆ ದಿಕ್ಸೂಚಿಯಾಗಲಾರದೇ? "ಕಲಾವಿದ ಸತತ ಚಿಂತನ ಹಾಗೂ ವಿದ್ವಾಂಸರ ಜತೆ ಸಂವಾದ ನಡೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮುಖಸ್ತುತಿ ಮಾಡುವ ಅಭಿಮಾನಿಗಳಿಗಿಂತ ತನ್ನಲ್ಲಿ ತಪ್ಪು ಕಾಣುವ ಮತ್ತು ಹೇಳುವ ಮಂದಿಯ ಜತೆ ಮಾತಾಡುವುದರಿಂದ ಪ್ರಯೋಜನ ಹೆಚ್ಚು. ಜತೆಗೆ ಸಾಹಿತ್ಯದ ಓದು ಪಾತ್ರಧಾರಿಯ ಅರಿವಿನ ಕ್ಷಿತಿಜವನ್ನು ವಿಸ್ತರಿಸಿ ಕೊಡದಿರದು. ಎಲ್ಲಕ್ಕಿಂತ ಹಿರಿಯ ಕಲಾಕಾರರ ಹೆಚ್ಚುಗಾರಿಕೆ, ಲೋಪದೋಷ ಎರಡರ ಬಗೆಗೂ ದೃಷ್ಟಿ ಸೂಕ್ಷ್ಮತೆ ಇದರಬೇಕು."

ಅರ್ಥಗಾರಿಕೆ : ಆಕರ ನಿರ್ವಹಣೆ-ಕೆಲವು ವಿಚಾರಗಳ ವಿಮರ್ಶೆ, ಡಾ.ಪ್ರಭಾಕರ ಜೋಷಿಯವರ ಲೇಖನವು 'ಕೃಷ್ಣ ಸಂಧಾನ' ಪ್ರಸಂಗದಲ್ಲಿ ಅರ್ಥ ಹೇಳುವ ಕಲಾವಿದನಿಗಿರಬೇಕಾದ ಎಚ್ಚರ ಮತ್ತು ಜಾಣ್ಮೆಯಂತಹ ಸೂಕ್ಷ್ಮ ವಿಚಾರಗಳನ್ನು ಹೇಳಿದ್ದಾರೆ. ಅಂತೆಯೇ ರಾಧಾಕೃಷ್ಣ ಕಲ್ಚಾರರ 'ಅರ್ಥಗಾರಿಕೆ ಆಕರ, ಆಧಾರ', ಸರ್ಪಂಗಳ ಈಶ್ವರ ಭಟ್ಟರು ಬರೆದ 'ಕೃಷ್ಣ ಸಂಧಾನ - ಪೂರ್ವಭಾಗ', ಡಾ.ಕೆ.ಎಂ.ರಾಘವ ನಂಬಿಯಾರರ 'ಸ್ತ್ರೀ ವೇಷದ ಗುಣವೃದ್ಧಿ,' ತಾರಾನಾಥ ಬಲ್ಯಾಯರ 'ದಕ್ಷಿಣಾದಿ ಯಕ್ಷಗಾನದ ಸ್ತ್ರೀ ವೇಷ, ಆಹಾರ್ಯ' ಮತ್ತು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರ 'ವಾಲ್ಮೀಕಿ ಚಿತ್ರಿಸಿದ ಸೀತೆ'.. ಮೊದಲಾದ ಬರಹಗಳು ಸಕಾಲಿಕವಾದ ಚಿಂತನೆಯನ್ನು ಚಿತ್ರಿಸಿವೆ. ಭಾಸ್ಕರ ರೈ ಕುಕ್ಕುವಳ್ಳಿ, ಮೂರ್ತಿ ದೇರಾಜೆ, ಜಿ.ಎಲ್.ಹೆಗ್ಡೆ, ಆರತಿ ಪಟ್ರಮೆ, ಡಾ.ಅಮೃತ ಸೋಮೇಶ್ವರ, ಸಿಬಂತಿ ಪದ್ಮನಾಭ, ಶಾಂತಾರಾಮ ಪ್ರಭು, ಸಿತ್ಲ ರಂಗನಾಥ ರಾವ್.. ಇವರ ಯಕ್ಷಗಾನದ ಬಗೆ-ನೋಟ ಲೇಖನಗಳು.

ಈಶ್ವರ ಭಟ್ಟರು ಸ್ತ್ರೀಪಾತ್ರಧಾರಿಯಾಗಿ ರಂಗದಲ್ಲಿ ದೊಡ್ಡ ಹೆಜ್ಜೆಯನ್ನು ಮೂಡಿಸಿದವರು. ಹಾಗಾಗಿ ಸಂಪಾದಕರು ಪುಸ್ತಕದಲ್ಲಿ ಪುರಾಣ ಸ್ತ್ರೀಪಾತ್ರಗಳ ಮಾತುಗಳಿಗೆ ಮತ್ತು ಆ ರಂಗಕ್ಕೆ ಅಪೇಕ್ಷಣೀಯವಾದ ವಿಚಾರಗಳಿಗೆ ಹೆಚ್ಚು ಸ್ಥಳ ಮೀಸಲಿರಿಸಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಂಗದಲ್ಲಿ ಬರುವ ಒಂದೊಂದು ಪಾತ್ರಗಳಿಗೆ ಮಾತು ಕೊಟ್ಟಿರುವುದು 'ಈಶಾನ'ದ ಹೆಚ್ಚುಗಾರಿಕೆ. ಸಂಪಾದಕ ಗಣರಾಜ ಕುಂಬ್ಳೆಯವರ ಯೋಚನೆಯು ಯೋಜನಾಬದ್ಧವಾಗಿ ಪೋಣಿತವಾಗಿದೆ.

ಈಶ್ವರ ಭಟ್ಟರ ಚಿರಂಜೀವಿ ಉಮೇಶ್, ತನ್ನ ತೀರ್ಥರೂಪರ ಕಲಾ ಸೇವೆಗೆ ಗೌರವ ತಂದಿದ್ದಾರೆ. ಅವರ ಕಲಾಯಾನವನ್ನು ದಾಖಲಿಸಿದ್ದಾರೆ. ಶ್ರದ್ಧೆಯಿಂದ 'ಈಶಾನ'ದ ಬೆಳಕಿಗೆ ಕಾರಣರಾಗಿದ್ದಾರೆ. ಮಗನಾಗಿ ಇಳಿ ವಯಸ್ಸಿನ ತಂದೆಗೆ ಖುಷಿ ನೀಡಿದ್ದಾರೆ. ಈಶ್ವರ ಭಟ್ಟರ ಮನಸ್ಸು ಯೌವನವಾಗಿದೆ! ಇವರ ಅಭಿನಂದನಾ ಗ್ರಂಥ 'ಈಶಾನ'ಕ್ಕೆ ಯಕ್ಷಗಾನದ ಸ್ತ್ರೀಭೂಮಿಕೆಯನ್ನು ಪ್ರತಿನಿಧಿಸುವ ಗ್ರಂಥ ಎನ್ನುವ ಹೆಗ್ಗಳಿಕೆಯು ಅತಿಶಯವಾಗಲಾರದು.

ಪಾತ್ರಗಳಿಗೆ ಮಾನ ತಂದ ಸ್ತ್ರೀಪಾತ್ರಧಾರಿ : ಕೊಕ್ಕಡ ಈಶ್ವರ ಭಟ್





 ದಿನಾಂಕ 6-7-2025ರಂದು ಪುತ್ತೂರಿನಲ್ಲಿ ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಪ್ರತಿಷ್ಠಿತ ʼಕುರಿಯ ಪ್ರಶಸ್ತಿʼ ಪ್ರದಾನ 

 (ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಪುತ್ತೂರಿನಲ್ಲಿ 11-2-2017ರಂದು ಅಭಿನಂದನಾ ಸಮಾರಂಭ ಜರುಗಿತ್ತು. ಈ ಸಂದರ್ಭದಲ್ಲಿ ಪ್ರಜಾವಣಿಯ 'ದಧಿಗಿಣತೋ' ಅಂಕಣದಲ್ಲಿ ಬರೆದ ಲೇಖನದ ಮರುಓದು ಈಗ) 

ಪಾತ್ರಗಳಿಗೆ ಮಾನ ತಂದ ಸ್ತ್ರೀಪಾತ್ರಧಾರಿ : ಕೊಕ್ಕಡ ಈಶ್ವರ ಭಟ್

ಲೇ: ನಾ. ಕಾರಂತ ಪೆರಾಜೆ

     ಮುಖದಲ್ಲಿ ನೆರಿಗೆ ಕಟ್ಟಿದರೆ ಮತ್ತೆ ಸ್ತ್ರೀಪಾತ್ರ ಮಾಡಬಾರದು. ತನಗೆ ವಯಸ್ಸಾಯಿತು ಎನ್ನುವ ಮಾನಸಿಕ ಸ್ಥಿತಿಯು ಆತನನ್ನು ರಂಗದಲ್ಲಿ ಯಶಸ್ವಿಗೊಳಿಸದು. ಆತ ಎಷ್ಟೇ ಪ್ರಸಿದ್ಧನಾದರೂ ಆತನ ಅಭಿವ್ಯಕ್ತಿಯು ಪ್ರೇಕ್ಷಕರಿಗೆ ಇಷ್ಟವಾಗದು. ಅಭಿಮಾನದಿಂದ ಒಪ್ಪಿಕೊಳ್ಳುತ್ತಾರಷ್ಟೇ,” ಮಾತಿನ ಮಧ್ಯೆ ಹಿರಿಯ ಸ್ತ್ರೀಪಾತ್ರಧಾರಿ ಕೊಕ್ಕಡ ಈಶ್ವರ ಭಟ್ಟರು ತನ್ನನ್ನೇ ಟಾ‍ರ್ಗೆಟ್‌  ಮಾಡುತ್ತಾ ಮಾತು ಮುಂದುವರಿಸುತ್ತಿದ್ದರು. 'ತನಗೆ ವಯಸ್ಸಾಯಿತು' ಎನ್ನುವಂತಹ ಸ್ವ-ಪ್ರಜ್ಞೆಯು ರಂಗಾನುಭವದಿಂದ ಪಕ್ವವಾದಾಗ ಮಾತ್ರ ಕಲಾವಿದನ ಅನುಭವಕ್ಕದು ನಿಲುಕುವುದು. ಆದರೆ ಈಶ್ವರ ಭಟ್ಟರು ಎಪ್ಪತ್ತೈದರ ಅಂಚು ದಾಟಿದರೂ ಅವರ ವೇಷವನ್ನು ಈಗಲೂ ರಂಗವು ಒಪ್ಪುತ್ತದೆ.

     ಉಪ್ಪಿನಂಗಡಿ ಸನಿಹದ ತಾಳ್ತಜೆಯಲ್ಲಿ ಜರುಗಿದ ಹೇಮಂತ ಹಬ್ಬದಲ್ಲಿ ಜರುಗಿದ 'ರತಿ ಕಲ್ಯಾಣ' ಪ್ರಸಂಗದಲ್ಲಿ ಭಟ್ಟರು 'ದ್ರೌಪದಿ'ಯಾಗಿ ಇಳಿ ವಯಸ್ಸಲ್ಲೂ ನಯ ನಾಜೂಕಿನ ಸ್ತ್ರೀಪಾತ್ರಧಾರಿಯಾಗಿ ಮೆರೆದಿದ್ದರು. ಅವರ ಜತೆಗೆ ಪಾತ್ರ ಮಾಡುವ ಅವಕಾಶ ಪ್ರಾಪ್ತವಾದರೂ ಭಟ್ಟರ ಮೇರು ವ್ಯಕ್ತಿತ್ವದ ಮುಂದೆ ಕುಬ್ಜನಾಗಿದ್ದೆ. ಜತೆಗೆ ಭಟ್ಟರೊಂದಿಗೆ ವೇಷ ಮಾಡಿದ ಹೆಮ್ಮೆಯೂ! ಈ ಹೆಮ್ಮೆಯು ಕೋಡು ಮೂಡಿಸಲಿಲ್ಲ. ಬದಲಿಗೆ ನನಗೆ ಬಾಗಲು ಕಲಿಸಿತು. ಕಳೆದ ವರುಷವೂ ದಮಯಂತಿ ಪುನರ್‌ ಸ್ವಯಂವರ ಪ್ರಸಂಗದಲ್ಲಿ 'ಚೇದಿ ರಾಣಿ'ಯಾಗಿ ಹಳೆಯ ನೆನಪನ್ನು ರಂಗದಲ್ಲಿ ದಾಖಲಿಸಿದ್ದರು. ಅಂದು ಎಂ.ಕೆ.ರಮೇಶ ಆಚಾರ್ಯರು 'ದಯಮಂತಿ'ಯಾಗಿ ಕೊಕ್ಕಡದವರಿಗೆ ಸಾಥ್ ಆಗಿದ್ದರು.

“ರಂಗದಲ್ಲಿ ಕಸುಬು ಮಾಡುವ ಕಲಾವಿದನಿಗೆ ತನ್ನ ಪಾತ್ರ ನಿರ್ವಹಣೆಯಲ್ಲಿ 'ತೃಪ್ತಿ' ಬೇಕು. ಸ್ತ್ರೀಪಾತ್ರಗಳಿಗೆ ರಂಗದಲ್ಲಿ ಅವಕಾಶ ಹೆಚ್ಚಿದ್ದಾಗ ಕಸುಬಿನಲ್ಲಿ ತೃಪ್ತಿ ಸಹಜವಾಗಿ ಬರುತ್ತದೆ. ಬೆಳಗ್ಗಿನವರೆಗೆ ಆಗಾಗ್ಗೆ ಬಂದು ಮರೆಯಾಗುವ ಸ್ತ್ರೀಪಾತ್ರಗಳು ರಂಗದಲ್ಲಿ ಮೆರೆಯುವುದಿಲ್ಲ. ಆತನಿಂದ ಉತ್ತಮ ಅಭಿವ್ಯಕ್ತಿಯನ್ನು ನಿರೀಕ್ಷಿಸುವಂತಿಲ್ಲ. ಕಲಾವಿದನನ್ನು ಪ್ರೇಕ್ಷಕ ಬಹುಬೇಗ ಮರೆಯುತ್ತಾನೆ,” ಎನ್ನುತ್ತಾ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾರೆ.

     ಈಶ್ವರ ಭಟ್ಟರು ಅರ್ಧ ಶತಮಾನಕ್ಕೂ ಮಿಕ್ಕಿ ರಂಗದಲ್ಲಿ ತರುಣಿಯಾಗಿದ್ದಾರೆ. 'ಮೋಹಿನಿ'ಯಿಂದ 'ಚಂದ್ರಮತಿ' ತನಕ. ಒಂದು ಕಾಲಘಟ್ಟದ ಪ್ರದರ್ಶನಗಳನ್ನು ನೆನಪಿಸಿಕೊಂಡಾಗ ನಿವೃತ್ತಿಯಾಗುವಲ್ಲಿಯ ತನಕವೂ ಇವರ ಪಾತ್ರಾಭಿವ್ಯಕ್ತಿಯಲ್ಲಿ 'ಪಾತ್ರದ ಹಿರಿತನ'ದ ಗಟ್ಟಿತನವಿದ್ದುದನ್ನು ಗಮನಿಸಬಹುದು. ಗಟ್ಟಿ ಸಂಪನ್ಮೂಲವನ್ನು ಹೊಂದಿದ ಅನುಭವಿಗಳ ಮಧ್ಯದಲ್ಲಿ ಬೆಳೆದ ಪರಿಣಾಮ; ಈಗಲೂ ಕೊಕ್ಕಡದವರನ್ನು ನೆನಪಿಸಿಕೊಡರೆ ಸಾಕು, 'ದಾಕ್ಷಾಯಿಣಿ, ಮಾಯಾ ಶೂರ್ಪನಖಿ' ಪಾತ್ರಗಳು ಮಿಂಚುತ್ತವೆ.

     ಓದಿದ್ದು ಆರನೇ ತರಗತಿ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಒಂದಷ್ಟು ಕಾಲ ಭರತನಾಟ್ಯದ ಕಲಿಕೆ. ಮಧ್ಯೆ ಬಡಗುತಿಟ್ಟಿನ ಹೆಜ್ಜೆಗಳ ಅಭ್ಯಾಸ. ಮುಂದೆ ಕೆರೆಮನೆ ಮೇಳದಲ್ಲಿ ಒಂದು ವರುಷದ ತಿರುಗಾಟ. ಬಡಗು ಹಜ್ಜೆಗಳಿಗೆ ದಯಾನಂದ ನಾಗೂರು ಮತ್ತು ಮೊಳಹಳ್ಳಿ ಕೃಷ್ಣ ಇವರಿಗೆ ಗುರು. ಭಟ್ಟರ ತಂದೆ ಮಹಾಲಿಂಗ ಭಟ್. ತಾಯಿ ಪರಮೇಶ್ವರಿ. ಅಳಿಕೆ ಸನಿಹದ ಮುಳಿಯದಲ್ಲಿ ಹುಟ್ಟು. ಕಡೆಂಗೋಡ್ಲಿನಲ್ಲಿ ಬದುಕು. ಆರನೇ ತರಗತಿ ತನಕ ಶಾಲಾಭ್ಯಾಸ. ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿ ಮಿಕ್ಕ ಯಕ್ಷಗಾನದ ವಿವಿಧಾಂಗಗಳ ಆರ್ಜನೆ.

     ಪೆರುವಡಿ ಕೃಷ್ಣ ಭಟ್ಟರ ಸಾರಥ್ಯದ ಮೂಲ್ಕಿ ಮೇಳದಲ್ಲಿ 'ಬಾಲಕೃಷ್ಣ' ಪಾತ್ರದ ಮೂಲಕ ಬಣ್ಣದ ಮೊದಲ ಹೆಜ್ಜೆ. ಮೂಲ್ಕಿಯೂ ಸೇರಿದಂತೆ ಕೂಡ್ಲು, ಸುರತ್ಕಲ್, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ. ಚಂದ್ರಮತಿ, ಶಾರದೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಪ್ರಭಾವತಿ, ಮಾಯಾ ಶೂರ್ಪನಖಿ, ಮಾಯಾಹಿಡಿಂಬಿ, ಮೋಹಿನಿ.. ಹೀಗೆ ಅನೇಕಾನೇಕ ಪಾತ್ರಗಳು ಭಟ್ಟರ ನೆಚ್ಚಿನವುಗಳು. ಖ್ಯಾತಿ ತಂದವುಗಳು. ಕೂಡ್ಲು ಮೇಳದಲ್ಲಿ ಪ್ರದರ್ಶನವಾಗುತ್ತಿದ್ದ 'ಶ್ರೀದೇವಿ ಲಲಿತೋಪಾಖ್ಯಾನ' ಪ್ರಸಂಗದ 'ಶ್ರೀಲಲಿತೆ' ಪಾತ್ರವು ಈಶ್ವರ ಭಟ್ಟರಿಗೆ ತಾರಾಮೌಲ್ಯ ತಂದಿತ್ತು.

     ವೈಯಾರದ ನಾಟ್ಯ, ನಯನಾಜೂಕಿನ ಅಭಿವ್ಯಕ್ತಿ. ಮನಮೋಹಕ ಚಿತ್ರ. ಪಾತ್ರಕ್ಕನುಚಿತವಾದ ಸಂಭಾಷಣೆ ಇವರದು. 'ಮೂಲ್ಕಿ ಮೇಳದಲ್ಲಿ ನನ್ನ ಬಾಹುಕ, ಪಾಪಣ್ಣ ಪಾತ್ರಗಳಿಗೆ ಈಶ್ವರ ಭಟ್ಟರು  ದಮಯಂತಿಯಾಗಿ, ಗುಣಸುಂದರಿಯಾಗಿ ಜತೆಯಾಗಿದ್ದಾರೆ. ಮೇಳಕ್ಕೂ ಹೆಸರು ತಂದಿದ್ದಾರೆ. ಅವರದು ಮೋಹಕ ಪಾತ್ರ. ಲಾಲಿತ್ಯದ ನಡೆ. ಎಷ್ಟೊ ಕಡೆ ಹೆಣ್ಣುಮಕ್ಕಳು ಇವರ ವಯ್ಯಾರದ ಮುಂದೆ ನಾಚಿದ್ದೂ ಇದೆ, ಎಂದು ತನ್ನ ಮೇಳದ ತಿರುಗಾಟದ ಕ್ಷಣಗಳನ್ನು ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ನೆನಪಿಸಿಕೊಂಡಿದ್ದರು.

     'ಕಲಾವಿದನಿಗೆ ದುಡ್ಡು ಮುಖ್ಯ ಹೌದು. ಜತೆಗೆ ಅಭಿಮಾನವೂ ಕೂಡಾ. ರಂಗದಲ್ಲಿ ಸರಿಯಾದ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಹೋದಾಗ ಅಭಿಮಾನಿಗಳಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ. ಜತೆಗೆ ರಂಗದಲ್ಲಿ ಸಹಪಾತ್ರಧಾರಿಗಳ ಹೊಂದಾಣಿಕೆಯೂ ಕೈಕೊಟ್ಟಾಗ ಆಗುವ ಫಜೀತಿ ಯಾರಲ್ಲಿ ಹೇಳುವುದು ಹೇಳಿ,ʼ ರಂಗಸುಖದ ಕುರಿತಾದ ಅವರ ವಿಷಾದ ಬಹುತೇಕ ಸ್ತ್ರೀಪಾತ್ರಧಾರಿಗಳು ಅನುಭವಿಸುವಂತಾದ್ದು. 

     ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಮಾನ, ಕೆರೆಮನೆ ಶಂಭು ಹೆಗಡೆ ಜಯಂತಿ ಸಂಮಾನ, ಮಂಗಳೂರು ಹವ್ಯಕ ಸಭಾ, ಶ್ರೀ ಎಡನೀರು ಮಠ, ಕಲಾರಂಗ ಉಡುಪಿ, ಪಾತಾಳ ಪ್ರಶಸ್ತಿ.. ಹೀಗೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಈಶ್ವರ ಭಟ್ಟರ ಕಲಾ ಸೇವೆಗೆ ಸಂದ ಮಾನಗಳು. ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಕಡೆಂಗೋಡ್ಲು ನನಗೆ ಬಾಲ್ಯವನ್ನು ಕೊಟ್ಟದ್ದರಿಂದ ಈ ಊರು ನನ್ನ ಹೆಸರಿನೊಂದಿಗೆ ಹೊಸೆಯಬೇಕಿತ್ತು. ಈಗ ಕೊಕ್ಕಡ ಸಮೀಪವಿರುವುದರಿಂದಲೋ ಏನೋ ನಾನೀಗ ಕೊಕ್ಕಡ ಈಶ್ವರ ಭಟ್.

     ವರ್ತಮಾನದ ರಂಗದ ಪೌರಾಣಿಕ ಸ್ತ್ರೀಪಾತ್ರಗಳು ತನ್ನ ಪೌರಾಣಿಕ ನೆಲೆಯನ್ನು ಮರೆತಿವೆ. ಪಾತ್ರಗಳಿಗೂ ಮತಿಯಿದೆ, ಮಾತಿದೆ, ಗೌರವದ ಸ್ಥಾನವಿದೆ. ಅಲ್ಲಿ ಬರುವ ಪಾತ್ರಗಳು ಬದುಕಿನಲ್ಲಿ ಕಾಣ ಸಿಗುವ ಹೆಣ್ಣುಮಕ್ಕಳಂತೆ ಅಲ್ಲ. ಪೌರಾಣಿಕ ಪಾತ್ರಗಳಲ್ಲಿ ಉದಾತ್ತತೆಯನ್ನು ತನ್ನ ಅಭಿವ್ಯಕ್ತಿಯ ಮೂಲಕ ಕಲಾವಿದ ತುಂಬಬೇಕು. ಹಿರಿಯ ಕಲಾವಿದರನೇಕರಲ್ಲಿ ಇಂತಹ ಪ್ರಜ್ಞೆ ಸದಾ ಎಚ್ಚರದಲ್ಲಿರುತ್ತಿತ್ತು. ರಂಗದ ಗೌರವವನ್ನು ಕಾಪಾಡುತ್ತಾ, ಅಭಿವ್ಯಕ್ತಿ-ಮಾತಿನಲ್ಲಿ ಹಿಡಿತ ಸಾಧಿಸುತ್ತಾ ಪಾತ್ರವನ್ನು ಜನಮನದತ್ತ ಒಯ್ಯುವುದು ಸುಲಭದ ಮಾತಲ್ಲ” - ಕೊಕ್ಕಡ ಈಶ್ವರ ಭಟ್ಟರ ಹಿರಿನುಡಿ.

     ಹಿರಿಯರು ಹೀಗೆಂದಾಗ ಬಹಳಷ್ಟು ಮಂದಿ ವರ್ತಮಾನದ ರಂಗದಲ್ಲಿ ತೊಡಗಿಸಿಕೊಂಡಿರುವ - ಹವ್ಯಾಸಿ, ವೃತ್ತಿ - ಕಲಾವಿದರು ಅಲ್ಲಗೆಳೆಯುವುದನ್ನು ಗಮನಿಸಿದ್ದೇನೆ. ಒಂದೊಂದು ಪದ್ಯಕ್ಕೆ ಕಾಲು, ಅರ್ಧ ಗಂಟೆ ಕುಣಿಯುವುದೇ ಸ್ತ್ರೀಪಾತ್ರದ ಅರ್ಹತೆ ಎಂದು ಸ್ಥಾಪಿಸುವ ಕಾಲಮಾನದಲ್ಲಿ ಈಶ್ವರ ಭಟ್ಟರಂತಹ ಹಿರಿಯರ ಮಾತು ಅಪಥ್ಯದಂತೆ ಕಾಣಬಹುದು. ಆದರೆ ಇಂದು ರಂಗದಲ್ಲಿ ನಾವು ಏನಾದರೂ ಹೆಜ್ಜೆ ಊರಿದ್ದೇವೆ, ಊರುತ್ತಿದ್ದೇವೆ ಎಂದಾದರೆ ಅದು ಈಶ್ವರ ಭಟ್ಟರಂತಹ ಹಿರಿಯರು ರಂಗದಲ್ಲಿ ಮೂಡಿಸಿದ ನಡೆಯಿಂದ ಎನ್ನುವುದನ್ನು ವರ್ತಮಾನದ ವೃತ್ತಿ-ಹವ್ಯಾಸಿ ಕಲಾವಿದರು ಮರೆಯಕೂಡದು.

     2017 ಫೆಬ್ರವರಿ 11ರಂದು ಪುತ್ತೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಈಶ್ವರ ಭಟ್ಟರಿಗೆ ಅಭಿನಂದನಾ ಗ್ರಂಥವನ್ನು ಗೌರವಪೂರ್ಣವಾಗಿ ಸಮರ್ಪಣೆಯಾಗಿದೆ.

          ದಿನಾಂಕ 6-7-2025ರಂದು ಪುತ್ತೂರಿನಲ್ಲಿ ನಡೆಯುವ ತಾಳಮದ್ದಳೆ ಸಪ್ತಾಹದ ಸಮಾರೋಪದಂದು ಕೊಕ್ಕಡ ಈಶ್ವರ ಭಟ್ಟರಿಗೆ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ನೀಡುವ ʼಕುರಿಯ ಪ್ರಶಸ್ತಿʼ ಪ್ರದಾನ.

_

Wednesday, July 2, 2025

ಯಕ್ಷಗಾನ ತಾಳಮದ್ದಳೆ ಸಪ್ತಾಹ ಶುಭಾರಂಭ : 'ಕಲಾವಿದರಿಗೆ ಯಕ್ಷಗಾನ ಅರ್ಥಗಾರಿಕೆಯು ತಪಸ್ಸು' - ಕೆ. ಗೋವಿಂದ ಭಟ್

 

  “ಕಲಾವಿದರಿಗೆ ಯಕ್ಷಗಾನ ಅರ್ಥಗಾರಿಕೆ ಎನ್ನುವುದು ತಪಸ್ಸಾಗಬೇಕು. ಪುರಾಣ ಲೋಕದ ಅನಾವರಣವು ಅರ್ಥದಾರಿಯಿಂದಾಗಬೇಕು. ಆತ ಅದಕ್ಕೆ ಶಕ್ತನಾಗಿರಬೇಕು. ಸುಂದರ ಪದಪ್ರಯೋಗಳ ಮೂಲಕ ನೀಡುವ ಪುರಾಣದ ಸಂದೇಶಗಳು ಜೀವನದ ಉತ್ಕರ್ಷಕ್ಕೆ ದಾರಿ. ಯಕ್ಷಗಾನದಲ್ಲಿ ವಾಚಿಕವು ಪ್ರಧಾನವೆಂದು ನನ್ನ ಅನುಭವದಿಂದ ತಿಳಿದುಕೊಂಡಿದ್ದೇನೆ. ಇಲ್ಲವಾದರೆ ಆಂಗಿಕ, ಆಹಾರ್ಯ, ಸಾತ್ವಿಕಗಳು ಚೇಷ್ಟೆಯಾಗಿ ಕಾಣುತ್ತದೆ. ಅದು ತುಂಬಿ ಬರಬೇಕಾದರೆ ವಾಚಿಕ ಅತ್ಯಾವಶ್ಯಕವಾಗಿ ಬೇಕು” ಎಂದು ಯಕ್ಷಗಾನ ದಶಾವತಾರಿ ಕೆ. ಗೋವಿಂದ ಭಟ್ ಹೇಳಿದರು.

ಅವರು ಪುತ್ತೂರಿನ 'ಶ್ರೀ ಸುಕೃತಿಂದ್ರ ಕಲಾ ಮಂದಿರದಲ್ಲಿ' ಜರುಗಿದ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು (Thalamaddale sapthaha) ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿ (30-6-2025) ಮಾತನಾಡುತ್ತಿದ್ದರು. ರಾಜಾ ಹಾಸ್ಯ ಬಿರುದಾಂಕಿತ ಕೀರ್ತಿಶೇಷ ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ನಡೆಯುವ ಸಪ್ತಾಹವನ್ನು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ಜಂಟಿಯಾಗಿ ಆಯೋಜಿಸಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ಇದರ ಮ್ಹಾಲಕ ಶ್ರೀ ಬಲರಾಮ ಆಚಾರ್ಯರು ವಹಿಸಿ ಮಾತನಾಡುತ್ತಾ, “ಯಕ್ಷಗಾನವೆಂಬುದು ವಿಶಿಷ್ಟ ಕಲಾ ಪ್ರಾಕಾರ. ಅಲ್ಲಿ ಉತ್ಪತ್ತಿಯಾಗುವ ರಸ ಏನಿದೆಯೋ ಅದು ಜ್ಞಾನಸದೃಶ” ಎಂದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಹಾಗೂ ಪುತ್ತೂರು ಶ್ರೀ ರಾಘವೇಂದ್ರ ಮಠದ ಕಾರ್ಯದರ್ಶಿ ಶ್ರೀ ಯು. ಪೂವಪ್ಪ ಸಂದರ್ಭೋಚಿತವಾಗಿ ಮಾತನಾಡಿದರು.

ಕುರಿಯ ಪ್ರತಿಷ್ಠಾನದ ಸಂಚಾಲಕ ಶ್ರೀ ಉಜಿರೆ ಅಶೋಕ ಭಟ್ ಸ್ವಾಗತಿಸಿ, ನಿರ್ವಹಿಸಿದರು. ಶ್ರೀಗಳಾದ ವೆಂಕಟರಾಮ ಭಟ್ ಸುಳ್ಯ, ಸ್ವಸ್ತಿಕ ಪದ್ಯಾಣ, ಅಶೋಕ ಸುಬ್ರಹ್ಮಣ್ಯ ಪೆರುವಡಿ, ರಮೇಶ ಭಟ್ ಪುತ್ತೂರು ಸಹಕರಿಸಿದರು. ಬಳಿಕ ಸಪ್ತಾಹದ ಮೊದಲ ತಾಳಮದ್ದಳೆ 'ತರಣಿಸೇನ ಕಾಳಗ' ಸಂಪನ್ನಗೊಂಡಿತು.