Sunday, December 20, 2009

ಹಿರಿಯ ಬಣ್ಣದ ವೇಷಧಾರಿ ಕೆ.ವಿ.ನಾರಾಯಣ ರೈ



(ಯಕ್ಷಗಾನ ಕ್ಷೇತ್ರದಲ್ಲಿ ಸೇವೆಗೈದು ನಮ್ಮಿಂದ ದೂರವಾದ ಕಲಾವಿದರನ್ನು ನೆನಪಿಸುವುದು 'ಮರೆಯಾದವರು-ಮರೆಯಲಾಗದವರು' ಮಾಲಿಕೆಯ ಉದ್ದೇಶ. ಮಾಲಿಕೆ 1 ಆರಂಭ)
'ಕೀರಿಕ್ಕಾಡು' ಅಂದರೆ ಸಾಕು - ದೇಲಂಪಾಡಿ ಬನಾರಿಯ ಯಕ್ಷಗಾನ ಸಂಘ, ವಿದ್ಯಾಭ್ಯಾಸದ ಕ್ರಮಗಳು, ಪುರಾಣ ಕಲಿಕೆ, ಬದುಕನ್ನು ರೂಪಿಸುವ ಶಿಕ್ಷಣ, ಸಂಸ್ಕಾರ ಪಾಠ, ರೂಪುಗೊಳ್ಳುವ ಕಲಾವಿದರು - ಈ ಇತಿಹಾಸಗಳು ಮಿಂಚಿ ಮರೆಯಾಗುತ್ತವೆ.
ಕೆ.ವಿ.ನಾರಾಯಣ ರೈ ಇಲ್ಲ್ಲಿ ಪಕ್ವಗೊಂಡ ಬಣ್ಣದ ವೇಷಧಾರಿ. ಕೀರ್ತಿಶೇಷ ಕೀರಿಕ್ಕಾಡು ವಿಷ್ಣು ಮಾಸ್ತರರ ಪ್ರಿಯ ಶಿಷ್ಯ.
ಆಗೆಲ್ಲಾ ಯಕ್ಷಗಾನವು ಬದುಕಿಗಂಟುವ ಹವ್ಯಾಸ. ನಾಲ್ಕರಲ್ಲೇ ವಿದ್ಯಾಭ್ಯಾಸ ಸ್ಥಗಿತವಾದಾಗ, ಅವರು ನಿಂತುದು ಕೀರಿಕ್ಕಾಡು ಮಾಸ್ತರರ ಗುರುಕುಲದಲ್ಲಿ. ದಿ.ಕಡಾರು ನಾರಾಯಣ ಭಟ್ಟರಿಂದ ನೃತ್ಯಾಭ್ಯಾಸ. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯ ಮೂಲಕ ರಂಗಪ್ರವೇಶ.

ನಾರಾಯಣ ಎಂಬ ಹೆಸರಿನ ನಾಲ್ಕೈದು ಮಂದಿ ಶಿಷ್ಯರು ಗುರುಕುಲದಲ್ಲಿದ್ದರು. ಇವರನ್ನು ಕರೆಯಲು ಪ್ರತ್ಯೇಕ ಹೆಸರು ಬೇಕಲ್ವಾ. ಗುರುವಿನಿಂದಲೇ 'ಕೇವಿ' ಅಂತ ನಾಮಕರಣ! 'ಕೆ' ಅಂದರೆ ತಂದೆ ಕೊರಗಪ್ಪ ರೈ. 'ವಿ' ಅಂದರೆ ವೆಂಕಮ್ಮ. ಮುಂದೆ ಕೇವಿ ಅಂತಲೇ ಪರಿಚಿತರು.

'ಶ್ವೇತಕುಮಾರ ಚರಿತ್ರೆ' ಪ್ರಸಂಗದ 'ಕರಾಳನೇತ್ರೆ' ಪಾತ್ರವು ಕೇವಿಯವರ ಮೊದಲ ವೇಷ. ಕೊನೆಯ ವೇಷವೂ ಅದೇ! 'ಮರಣಿಸುವ ಐದಾರು ತಿಂಗಳು ಮೊದಲು ಅವರಿಗೆ ಕರಾಳನೇತ್ರೆ ಪಾತ್ರ ಮಾಡುವ ಉಮೇದು ಇತ್ತು. ವೇಷವನ್ನೂ ಮಾಡಿದ್ದರು' ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಡಾ.ವಿಶ್ವವಿನೋದ ಬನಾರಿ.

ಕೇವಿಯವರ ಪ್ರಸಿದ್ಧ ವೇಷ 'ಮಹಿಷಾಸುರ'. ಲಘುಹಾಸ್ಯ ಮಿಶ್ರಿತ ನಿರ್ವಹಣೆ. ಅವರದ್ದೇ ಆದ ಕ್ರಮ. ಸಭಾಮಧ್ಯದಲ್ಲಿ ಈ ಪಾತ್ರ ಪ್ರವೇಶವಾಗುವಾಗ ಎಷ್ಟೋ ಕಡೆ 'ತೀರಾ ಹುಡುಗ'ರಾಗುತ್ತಿದ್ದರು!

ವೀರಭದ್ರ, ರಾವಣ, ಕುಂಭಕರ್ಣ, ಯಮ, ದುರ್ಜಯ, ಶೂರ್ಪನಖಿ, ಲಂಕಿಣಿ, ಪೂತನಿ.. ರೈಗಳ 'ರೈಸು'ತ್ತಿದ್ದ ವೇಷಗಳು. ಇಂತಿಂತಿಹ ಪಾತ್ರಗಳಿಗೆ ಹೀಗೇ ಮಾತನಾಡಬೇಕು ಎಂಬುದು ಗುರೂಪದೇಶ. ಕೊನೆ ತನಕ ಕಾಪಾಡಿಕೊಂಡಿದ್ದಾರೆ.
ಶರೀರ ಸ್ವಲ್ಪ ಕುಳ್ಳಗಾದರೂ, ರಾಕ್ಷಸ ವೇಷಕ್ಕೆ ಒಗ್ಗುವ ಸ್ವಭಾವ. ಆಸಕ್ತಿಯೂ ಅದೇ. ಮೊದಮೊದಲು ಪೀಠಿಕೆ ವೇಷಗಳನ್ನು ಮಾಡಿದ್ದರು. ಎಷ್ಟೋ ಕಡೆ ಸಂಘಟಕರನ್ನು ತರಾಟೆಗೆ ತೆಕ್ಕೊಂಡು ಪಾತ್ರಗಳನ್ನು ಪಡೆದುದೂ ಇದೆ. ಇದು 'ಅಹಂಕಾರ'ವಲ್ಲ, ಪಾತ್ರದ ಮೇಲಿನ 'ಪ್ರೀತಿ'. ಎಂಭತ್ತರ ವಯಸ್ಸಿನಲ್ಲೂ - 'ಆ ಪಾತ್ರವನ್ನು ನಾನೇ ಮಾಡಬೇಕು. ಉಳಿದವರಿಗೆ ಕಷ್ಟವಾದೀತು' ಎನ್ನುವ ಕಳಕಳಿ!

ಒಂದು ಘಟನೆ ನೆನಪಾಗುತ್ತದೆ. ಪ್ರಸಂಗ ನೆನಪಿಲ್ಲ. ರಾಕ್ಷಸ ವೇಷ ರಂಗಪ್ರವೇಶಿಸಲು ಇನ್ನೇನು ಹತ್ತಿಪ್ಪತ್ತು ನಿಮಿಷ ಇದೆ ಅನ್ನುವಾಗ, 'ಪತನಸುಖಿ'ಯೊಬ್ಬರು 'ಅಜ್ಜೆರೆ, ಪಂಚಕಜ್ಜಾಯ ದೆತೊನ್ಲೆ' (ಪಂಚಕಜ್ಜಾಯ ತೆಕ್ಕೊಳ್ಳಿ) ಎಂದು 'ರಾಳದ ಹುಡಿ'ಯನ್ನು ಕೈಗಿತ್ತರು. ಕೇವಿ ನಂಬಿ, ಅದನ್ನು ಬಾಯಿಗೆ ಹಾಕಿಕೊಂಡರು. ಬಾಯೊಳಗೆ ರಾಳ ಅದರ ಕೆಲಸ ಮಾಡಿತು! ಬಾಯೆಲ್ಲಾ ಅಂಟಂಟಾಗಿ, ಕೊನೆಗೆ ವೇಷವನ್ನೇ ಕಳಚಿದರು. ಗಳಗಳತೆ ಅತ್ತುಬಿಟ್ಟರು. ರಂಗಪ್ರವೇಶ ಮಾಡದ ಆ ದಿವಸದ ಕೊರಗು ಕೆಲವು ವರುಷ ಅವರನ್ನು ಕಾಡಿತ್ತು.

ಸಾಮಾನ್ಯವಾಗಿ ರಾಕ್ಷಸ ಪಾತ್ರಧಾರಿಗಳು ತಾಳಮದ್ದಳೆಗಳಲ್ಲಿ 'ಅರ್ಥಧಾರಿ'ಯಾಗುವುದು ವಿರಳ. ಕೇವಿ ತಾರಾಮೌಲ್ಯ ಪಡೆದ ಅರ್ಥಧಾರಿಯಾಗದಿದ್ದರೂ, ಬನಾರಿ ಪರಿಸರದಲ್ಲಿ ಒಳ್ಳೆ ಹೆಸರಿದೆ. ದಿ.ಕೇದಗಡಿ ಗುಡ್ಡಪ್ಪ ಗೌಡರ ಕರ್ಣ ಮತ್ತು ಕೇವಿಯವರ ಶಲ್ಯ - ಈ ಪಾತ್ರಗಳು ಯಾವಾಗಲೂ ಜಟಾಪಟಿ. ಅಂದರೆ ನಿಗದಿತ ಅರ್ಥಗಳಲ್ಲಿ 'ಹೀಗೆಯೇ ಆಗಬೇಕು' ಎನ್ನುವ ಛಾತಿ ಡಾ.ವಿಶ್ವವಿನೋದರು ಜ್ಞಾಪಿಸುತ್ತಾರೆ.

ಬೆಳಗ್ಗಿನ ಕಾಲಕ್ಕೆ ವೇಷದ ಪ್ರವೇಶವಿದ್ದರೆ, ಸುಮಾರು ಹತ್ತು ಗಂಟೆಗೆ ಬಣ್ಣದ ವೇಷಧಾರಿಗಳು ಮುಖವರ್ಣಿಕೆಗೆ ಸಿದ್ಧರಾಗುತ್ತಾರೆ. ಈ ಪರಂಪರೆ ಕೇವಿಯಲ್ಲಿತ್ತು. ಎಷ್ಟೋ ಸಲ ಸೂರ್ಯಸ್ತಕ್ಕೆ ಮುನ್ನವೇ ಆಟದ ಜಾಗ ತಲಪುತ್ತಿದ್ದರು.

ವಯೋಸಹಜವಾದ ಆಶಕ್ತತೆ ಕಳೆದೊಂದು ದಶಕದಿಂದ ಬಾಧಿಸಿತ್ತು. ಉತ್ಸಾಹ ಹುಚ್ಚೆದು ಕುಣಿದಾಗ ಆಗಾಗ್ಗೆ 'ರಾಕ್ಷಸ'ರಾಗುತ್ತಿದ್ದರು. ಬಹುತೇಕ ಸಂದರ್ಭದಲ್ಲಿ ಪಾತ್ರದ ಹಿಡಿತ ಅವರಿಗೆ ಕೈಕೊಡುತ್ತಿತ್ತು! ದೃಷ್ಟಿ ಮಂಜಾದಾಗಲೂ ಅಭ್ಯಾಸಬಲದಲ್ಲಿ ಸ್ವ-ಮೇಕಪ್ ಮಾಡಿಕೊಳ್ಳುತ್ತಿದ್ದರು. 'ಕಲಾವಿದ ಮೇಕಪ್ ಮಾಡಲು ಇನ್ನೊಬ್ಬರಿಗೆ ಮುಖ ಒಡ್ಡಿಸಿಕೊಡಬಾರದು' - ಕಿರಿಯರಿಗೆ ಅವರ ಉಪದೇಶ.

ಕದ್ರಿ ಮೇಳದಿಂದ ವ್ಯವಸಾಯ ಶುರು. ಕೂಡ್ಲು, ಮೂಲ್ಕಿ, ಸುಬ್ರಹ್ಮಣ್ಯ, ಸೌಕೂರು, ರೆಂಜಾಳ, ಕುಕ್ಕಂದೂರು, ವೇಣೂರು, ಮುಚ್ಚೂರು, ದೇಲಂಪುರಿ, ಇರುವೈಲು, ಚೌಡೇಶ್ವರಿ, ಭಗಂಡೇಶ್ವರ ಮತ್ತು ಶ್ರೀ ಕಟೀಲು ಮೇಳಗಳಲ್ಲಿ ಐದು ದಶಕಕ್ಕೂ ಮಿಕ್ಕಿದ ಯಕ್ಷಗಾನ ಅನುಭವ.

ಮೇಳ ತಿರುಗಾಟದ ಬಳಿಕ ಆಸಕ್ತರಿಗೆ ತರಬೇತಿ ನೀಡುತ್ತಿದ್ದರು. ಕಲಿಸಿದ ಗುರುಗಳನ್ನು ಮರೆವ ಈ ಕಾಲಘಟ್ಟದಲ್ಲಿ, 'ನಾನು ಕೇವಿಯವರ ಶಿಷ್ಯ' ಎನ್ನುವ ಶಿಷ್ಯಬಳಗವಿದೆ.

ಸಾಂಸಾರಿಕೆ ಹೊಣೆಗಾರಿಕೆ. ತೀವ್ರ ಆರ್ಥಿಕ ಮುಗ್ಗಟ್ಟು. ಸಣ್ಣ ತೋಟ. ಹೇಳುವಂತಹ ಉತ್ಪತ್ತಿ ಇಲ್ಲ. ಕೊನೆಕೊನೆಗೆ ಬದುಕೇ 'ಕರಾಳ'! ಮರಣಿಸುವ ತಿಂಗಳ ಮೊದಲು ತೋಟದಲ್ಲೇ ಹೆಚ್ಚು ಹೊತ್ತು ಕಳೆಯುತ್ತಿದ್ದರಂತೆ.

ರೈಗಳ ಹುಟೂರು ದೇಲಂಪಾಡಿ. ತಂದೆ ಕಲ್ಲಡ್ಕ ಕೊರಗಪ್ಪ ರೈ. ತಾಯಿ ವೆಂಕಮ್ಮ. ಅಜ್ಜ ನಿಡ್ಪಳ್ಳಿಗುತ್ತು ದೇರಣ್ಣ ರೈ. ಪ್ರಸಿದ್ಧ ಕಲಾವಿದರು. ಹಾಗಾಗಿ ಕೇವಿಗೆ ಯಕ್ಷಗಾನವು ತಲೆಮಾರಿನ ಕೊಡುಗೆ.

ನಾರಾಯಣ ರೈಗಳು ವಿಧಿವಶರಾಗುವಾಗ (ಜನವರಿ 8, 2009) ಅವರಿಗೆ ಎಂಭತ್ತೇಳು ವರುಷ. 'ಸರಕಾರದ ಮಾಸಾಶನ ಒಂದು ತಿಂಗಳಾದರೂ ಕೈಯಲ್ಲಿ ಹಿಡಿಯಬೇಕು, ಸರಕಾರದ ಪ್ರಶಸ್ತಿ ಪಡೆಯಬೇಕು' ಅವರ ಆಶೆಯಾಗಿತ್ತು.

1 comment:

  1. ಕೆ ವಿ ಅವರ ಬಗೆಗಿನ ವಿವರವಾದ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅವರ "ರಾಳ" ದ ಹೂಡಿ ಪ್ರಕರಣ ಓದಿ ಮನಸಿಗೆ ಬೇಸರವಾಯಿತು. ಪರಮಾತ್ಮ ಅವರಿಗೆ ಸದ್ಗತಿಯನ್ನು ನೀಡಲಿ ಹಾಗೂ ಅವರ ಕುಟುಂಬದವರಿ ಒಳ್ಳೆಯದನ್ನು ಮಾಡಲಿ ಎಂದು ಹಾರೈಸೋಣ. ಲೇಖನ ಬರೆದ ಕಾರಂತರಿಗೆ ಧನ್ಯವಾದಗಳು.

    ಕೇಶವ.

    ReplyDelete