Saturday, January 2, 2010

'ಹಿರಿಯಣ್ಣ'ನ ಒಡನಾಟದ ನೆನಪುಮರೆಯಾದವರು-ಮರೆಯಲಾಗದವರು ಮಾಲಿಕೆ - ೨


(ದಾಸರಬೈಲು ಚನಿಯ ನಾಯ್ಕರು ಸುಳ್ಯ ಸನಿಹದ ಮರ್ಕಂಜದವರು. ಯಕ್ಷಗಾನ ಭಾಗವತರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕರ ಗರಡಿಯಲ್ಲಿ ಪಳಗಿದವರು. ಅವರು ಮರಣಿಸಿ ದಶಕಗಳು ಸಂದಿವೆ. ಅವರ ಒಡನಾಟದ ನೆನಪನ್ನು ಮೆಲುಕು ಹಾಕುವುದು ಬರೆಹದ ಉದ್ದೇಶ. 2004 ರಲ್ಲಿ ಅವರ ಕುರಿತಾದ ಸಂಸ್ಮರಣ ಕೃತಿ 'ಯಕ್ಷಕೋಗಿಲೆ' ಎಂಬುದನ್ನು ಸಂಪಾದಿಸಿದ್ದೆ. ಅದರಲ್ಲಿರುವ ನನ್ನ ಬರೆಹವನ್ನು ಮೂರ್ನಾಲ್ಕು ಕಂತುಗಳಲ್ಲಿ ಇಲ್ಲಿ ನಿರೂಪಿಸುತ್ತಿದ್ದೇನೆ.)

ಒಂದು ಕಾಲಘಟ್ಟದಲ್ಲಿ ಸುಳ್ಯ ತಾಲೂಕಿನಲ್ಲಿ ನಡೆಯುತ್ತಿದ್ದ ಕೂಟಾಟಗಳಲ್ಲಿ ದಾಸರಬೈಲು ಚನಿಯ ನಾಯ್ಕರಿಗೆ ಮೊದಲ ಮಣೆ. ಅವರಿಲ್ಲದೆ ಕಾರ್ಯಕ್ರಮಗಳಿಲ್ಲ. ಯಾವುದೇ ಯಕ್ಷಗಾನ ಸಂಬಂಧಿ ಕರಪತ್ರದಲ್ಲಿ ಚನಿಯರ ಹೆಸರು ಇಲ್ಲದಿರುವುದು ವಿರಳ.
ಚನಿಯರು ಗತಿಸಿ (7-8-1999) ದಶಕಗಳೇ ಸಂದುವು. ಅವರು ಜಾಗಟೆ ಹಿಡಿಯುತ್ತಿದ್ದಷ್ಟು ಕಾಲ ರಂಗೇರುತ್ತಿದ್ದ ರಂಗವೀಗ ಮಸುಕು.

ಚೌಕಿಯಲ್ಲಿ ಸದ್ದಿಲ್ಲದೆ, ಸದ್ದುಮಾಡದೆ ಇರುವ ನಾಯ್ಕರು ಏನೂ ಅರಿಯದವರಂತೆ ಇದ್ದು ಬಿಡುವುದು ಜಾಯಮಾನ. ಆದರೆ ಜಾಗಟೆ ಹಿಡಿದಾಗ ಅವರೊಳಗಿನ 'ಸಮರ್ಥ ನಿರ್ದೇಶಕ' ಅನಾವರಣಗೊಳ್ಳುತ್ತಾನೆ. 'ನಿರ್ದೇಶನ’ ಎಂಬುದು ಹೇರುವ ಸರಕಾಗಬಾರದು. ಅದು ಸ್ವ-ರೂಢವಾಗಿ ಬರಬೇಕು. ಚನಿಯರು ರಂಗದಲ್ಲಿದ್ದರೆ ವೇಷಧಾರಿಗೆ ಅರಿವಾಗದಂತೆ ರಂಗವನ್ನು ನಿರ್ದೇಶಿಸುತ್ತಿದ್ದರು. ಇದು ಅವರ ಜಾಣ್ಮೆ. ನಿರ್ದೇಶನ ಎಂಬುದು ಅಹಂಕಾರ ಪ್ರಕಟಣೆಯ ಹುದ್ದೆಯಲ್ಲ ಎಂಬುದನ್ನು ನಾಯ್ಕರು ನಡೆದು ತೋರಿದವರು.

ಹತ್ತು ಗಂಟೆಗೆ ಆಟ ಶುರುವೆಂದರೆ, ಹವ್ಯಾಸಿ ರಂಗದಲ್ಲಿ ಭಾಗವತನಾದವ 9-55ಕ್ಕೆ ಚೌಕಿಗೆ ಬಂದು ಗಡಿಬಿಡಿ ಮಾಡುವ ಸ್ಥಿತಿ ಎಷ್ಟೋ ಸಲ ನೋಡಿದ್ದೆ. ಇದಕ್ಕೆ 'ಬ್ಯುಸಿ'ಯ ಲೇಪ! ಚನಿಯರು ಇಂತಹ ಅಪವಾದದಿಂದ ದೂರ. ಆಟ ಎಷ್ಟು ಹೊತ್ತಿಗೆ ಶುರುವಾಗಲಿ, ಎಂಟು ಗಂಟೆಗೆಲ್ಲಾ ಚೌಕಿಯಲ್ಲಿ ಹಾಜರ್. ಇದು ಭಾಗವತನ ಶಿಸ್ತು, ನಿಯಮ. ಪೆರಾಜೆಯಲ್ಲಿ ನಡೆಯುತ್ತಿದ್ದ ಆಟ, ಕೂಟಗಳಿಗೆ ಚನಿಯರು ಬೆಳಿಗ್ಗೆಯೇ ಬರುತ್ತಿದ್ದರು. ನಮ್ಮಲ್ಲಿ ವಿಶ್ರಾಂತಿಯಾಗಿ ಆಟಕ್ಕೆ ಹೋಗುತ್ತಿದ್ದರು. ಇದು ಕೆಲವರ ಕಂಗೆಣ್ಣಿಗೂ ಗುರಿಯಾಗಿತ್ತು!

ಒಂದು ರಾತ್ರಿ ಎರಡ್ಮೂರು ಕಾರ್ಯಕ್ರಮಕ್ಕೆ ಒಪ್ಪಿ, ಸಂಘಟಕರ ಚಿತ್ತಸ್ಥೈರ್ಯವನ್ನು ಪರೀಕ್ಷಿಸುವ ಭಾಗವತರುಗಳನ್ನು ಹತ್ತಿರದಿಂದ ಬಲ್ಲೆ. ಎಷ್ಟು ಹೊತ್ತಿಗೇ ಬರಲಿ 'ಕವರ್ ಮಾತ್ರ ಫುಲ್' ಇರಲೇಬೇಕು! ಇಲ್ಲದಿದ್ದಲ್ಲಿ ಜಗಳ ತೆಗೆವವರ ನೆನಪಿನ್ನೂ ಮಾಸಿಲ್ಲ. ಚನಿಯರು ಎಂದೂ 'ಕವರಿಗಾಗಿ' ಭಾಗವತಿಗೆ ಮಾಡಿಲ್ಲ. ಭಾಗವತನ ಶಿಸ್ತು ಮತ್ತು ಗೌರವವನ್ನು ಕವರಿಗೆ ಒತ್ತೆಯಿಡುತ್ತಿರಲಿಲ್ಲ.

ಒಂದು ರಾತ್ರಿಗೆ ಒಂದೇ ಕಾರ್ಯಕ್ರಮ. ಅನಿವಾರ್ಯವೆಂದಾದಲ್ಲಿ ಸಂಘಟಕರಿಗೆ ಹೊರೆಯಾಗದಂತೆ ವ್ಯವಹಾರ.
ಚನಿಯ ನಾಯಕರಿಗೆ ಬೆಳಗ್ಗಿನ ಜಾವ ಭಾಗವತಿಕೆ ಇದೆಯೆನ್ನಿ. ಮೊದಲು ಒಬ್ಬರೋ, ಇಬ್ಬರೋ ಭಾಗವತರ ಪಾಳಿ ಇದ್ದೇ ಇದೆ. ಆ ಹೊತ್ತಲ್ಲಿ ಚೌಕಿಯಲ್ಲಿ ಮುಸುಕೆಳೆದು, ಗೊರಕೆ ಹೊಡೆದು, ಚೌಕಿಯ ಪಾವಿತ್ರ್ಯತೆಯನ್ನು ಎಂದೂ ಕೆಡಿಸುತ್ತಿರಲಿಲ್ಲ. ಇತರರ ಭಾಗವತಿಕೆಯನ್ನು ಕೇಳುವ, ಪ್ರಶಂಸಿಸುವ ದೊಡ್ಡ ಗುಣ ಇತ್ತು.
(ಮುಂದಿನ ಕಂತಲ್ಲಿ ಮುಂದುವರಿಯುವುದು)

No comments:

Post a Comment