Wednesday, January 6, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕಂತು ೪)

ಪೆರಾಜೆ ಸುತ್ತಮುತ್ತ ಕನಿಷ್ಠ ಐದಾರು ಬಯಲಾಟಗಳು ನಡೆಯುತ್ತಿದ್ದುವು. ತಾಳಮದ್ದಳೆಗಳೂ ಸಾಕಷ್ಟು ಆಗುತ್ತಿದ್ದುವು. ಬಯಲಾಟಕ್ಕೆ ಅತಿಥಿ ಕಲಾವಿದರನ್ನು ಆಹ್ವಾನಿಸಲಾಗುತ್ತಿತ್ತು. ಆಟದ ಪ್ರದರ್ಶನದಂದು ಕೆಲವು 'ಗಮ್ಮತ್ತು' ಕಲಾವಿದರು, ಅಭಿಮಾನಿಗಳು 'ಭಾಗವತೆರೆ ಚಾ(!) ಪರ್ಕ' ಎಂದು ಅವರನ್ನು 'ಗರಂ' ಮಾಡಲು ಯತ್ನಿಸಿದರೂ ಚನಿಯರು ಅವರ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿ ಕೇವಲ 'ಬೀಡಾ' ತಿನ್ನುತ್ತಿದ್ದರಷ್ಟೇ. ಬಹುಶಃ ಅವರ ಕಲಾಜೀವನದ ಉತ್ತರಾರ್ಧದಲ್ಲಿ ಅವರಿಗೆ ಸಿಕ್ಕ ಆತ್ಮೀಯರ ಸಹವಾಸ.

ತಾಳಮದ್ದಳೆ ನಡೆಯುತ್ತಿದ್ದಾಗ ಅಸಹನೆಯಿಂದ ಜಾಗಟೆಯನ್ನು ಕೆಳಗಿಟ್ಟು ನಡೆದ ಭಾಗವತರಿದ್ದಾರೆ! ಮದ್ದಳೆ ಬಾರಿಸುತ್ತಿದ್ದಂತೆ ಮದ್ದಳೆಯನ್ನು ಬಿಟ್ಟು ಓಡಿದ ವಾದಕರನ್ನೂ ಗೊತ್ತು. ಇಂತಹ ಕಲಾ ದ್ರೋಹ ಚನಿಯರ ಹತ್ತಿರ ಸುಳಿಯುವುದಿಲ್ಲ. ಅದು ಅವರ ಸಂಸ್ಕಾರ. ರಂಗಕ್ಕೆ ತೆರಳುವಾಗ ಸ್ವಸ್ತಿಕಕ್ಕೆ ನಮಸ್ಕರಿಸಿ, ರಂಗದಲ್ಲಿ ಚೆಂಡೆ-ಮದ್ದಳೆಗಳಿಗೆ ವಂದಿಸಿ ಭಾಗವತರ ಮಣೆಯೇರುತ್ತಿದ್ದರು. ಅವರಿಗದು ಆರಾಧ್ಯಕಲೆ.

ನನ್ನ ಯಕ್ಷಗಾನಾಸಕ್ತಿಯ ಆರಂಭ ಕಾಲದಲ್ಲಿ (1986) 'ಪುಂಡುವೇಷ'ವೆಂದರೆ ಪ್ರಿಯವಾಗಿತ್ತು. ಕುಣಿಯಲು, ಹಾರಲು, ಮಾತನಾಡಲು ಹರಸಾಹಸ ಪಡುತ್ತಿದ್ದರೂ ಸಂಘದ ಆಟಗಳಲ್ಲಿ ನನಗೆ ಮೊದಲ ಮಣೆ! ಒಮ್ಮೆ ಶಿವಪಂಚಾಕ್ಷರಿ ಮಹಾತ್ಮೆ ಪ್ರಸಂಗದಲ್ಲಿ ನನಗೆ 'ಶ್ವೇತಕುಮಾರ'ನ ಪಾತ್ರ. ಚನಿಯರದ್ದೇ ಭಾಗವತಿಕೆ. ಆಟವೇನೋ ಮುಗಿಯಿತು. ಮನೆಗೆ ಬಂದೆವು. ವಿಶ್ರಾಂತಿಯಾಗಿ ಉಭಯಕುಶಲೋಪರಿ ಮಾತನಾಡುತ್ತಿದ್ದಾಗ, 'ಈರೆಗ್ ಪುಂಡು ವೇಷ ಒಲಿಯಂದ್. ಸ್ತ್ರೀವೇಷ ಮಲ್ಪೊಳಿ' ಅಂದರು. ನನ್ನ ಪುಂಡುವೇಷದ 'ಮರ್ಲ್’ ಅಲ್ಲಿಗೆ ಮುಕ್ತಾಯ.

98-99ರ ಸಮಯ. ಯಾಕೋ ಅಶಕ್ತತೆ ಅವರನ್ನು ಕಾಡತೊಡಗಿತ್ತು. ಒಪ್ಪಿದ ಕಾರ್ಯಕ್ರಮಗಳಿಗೆ ಗೈರುಹಾಜರಾಗುತ್ತಿದ್ದರು. ಅವರ ಉತ್ಸಾಹವನ್ನು ಅಸೌಖ್ಯತೆ ನಿಯಂತ್ರಿಸುತ್ತಿತ್ತು. ಆಗಾಗ ಜ್ವರ, ಶಾರೀರದಲ್ಲಿ ಕರ್ಕಶತೆ ಬಾಧಿಸುತ್ತಿತ್ತು. 'ಇವರಲ್ಲಿ ಏನೋ ಬದಲಾವಣೆಯಾಗುತ್ತಿದೆ. ಟೆಸ್ಟ್ ಮಾಡಿಸಬೇಕು' ಅಡೂರು ಶ್ರೀಧರ ರಾಯರು ನೆನಪಿಸುತ್ತಿದ್ದರು.

ಚನಿಯರ ಹಾಡುಗಾರಿಕೆಯ ಧ್ವನಿಸುರುಳಿಯೊಂದನ್ನು ತಯಾರಿಸಿದರೆ ಹೇಗೆ? ಮರ್ಕಂಜದ ಕೃ.ಶಾ.ಶಾಸ್ತ್ರಿ, ಜಗನ್ಮೋಹನ ರೈ, ದಾಮೋದರ ಪಾಟಾಳಿ.. ಹೀಗೆ ಸಮಾನಾಸಕ್ತರ ಸಮಾಲೋಚನೆ. ಚನಿಯರ ಮನದ ಬಯಕೆಯೂ ಇತ್ತೆನ್ನಿ.

ಒಂದು ಕ್ಯಾಸೆಟ್ಟಿಗೆ ಐವತ್ತು ರೂಪಾಯಿಯಂತೆ ಹಣ ಸಂಗ್ರಹವಾಯಿತು. ಕೆಲವರು ನೂರು, ಇನ್ನೂರು ನೀಡಿದರು. ಇದರಿಂದಾಗಿ ಪ್ರಯಾಣ, ಸ್ಟುಡಿಯೋ ಬಾಡಿಕೆ ಹೊಂದಾಣಿಕೆಯಾಯಿತು. ಇದರಲ್ಲಿ ಉಳಿದ ಅಲ್ಪಸ್ವಲ್ಪ ಮೊತ್ತ ಮತ್ತು ಕ್ಯಾಸೆಟ್ ಮಾರಾಟದಿಂದ ಸಿಗುವ ಮೊತ್ತವೆಲ್ಲವೂ ಚನಿಯರಿಗೆ ನೀಡುವುದೆಂದು ನಿಶ್ಚಯವಾಯಿತು. ಇದಕ್ಕವರ ವಿರೋಧವಿತ್ತಾದರೂ, ಒತ್ತಾಯಕ್ಕೆ ಮಣಿದರು.

ಕ್ಯಾಸೆಟ್ಟಿಗೆ - ಮದ್ದಳೆಗೆ ಪದ್ಯಾಣ ಜಯರಾಮ ಭಟ್, ಚೆಂಡೆಗೆ ಪೆರುವಾಯಿ ನಾರಾಯಣ ಭಟ್ಟರನ್ನು ಗೊತ್ತುಮಾಡಲಾಯಿತು. ಅವರಿಬ್ಬರೂ ಚನಿಯರ ಮೇಲಿನ ಅಭಿಮಾನದಿಂದ ಸಂಭಾವನೆ ರಹಿತವಾಗಿ ರೆಕಾರ್ಡಿಂಗ್ನಲ್ಲಿ ಭಾಗವಹಿಸಿದ್ದರು. ನಿರೂಪಣೆಗೆ ಕೃ.ಶಾ.ಮರ್ಕಂಜ. ಈ ಮಧ್ಯೆ ಒಂದು ಅಪಸ್ವರ ಎದ್ದಿತು. ಕ್ಯಾಸೆಟ್ಟಿನ ರಕ್ಷಾಪುಟದಲ್ಲಿ ಇವೆಲ್ಲವನ್ನೂ ಸಂಘಟಿಸಿದ ನನ್ನ ಹೆಸರನ್ನೂ ಸೇರಿಸಿದ್ದೆ. 'ಐವತ್ತು ರೂಪಾಯಿ ಕೊಟ್ಟ ನಾವೆಲ್ಲರೂ ಸಂಘಟಕರಲ್ವಾ' ಅಂತ ಒಂದಿಬ್ಬರು ಕೇಳಿಬಿಟ್ಟರು. ಈ ವಾದದ ಮುಂದೆ ನನ್ನ ಹೆಸರನ್ನು ನಾನೇ ಕೈಬಿಟ್ಟೆ! ಇದು ಚನಿಯ ನಾಯ್ಕರಿಗೆ ತುಂಬಾ ನೋವುಂಟುಮಾಡಿತ್ತು. ಸಿಕ್ಕಗಲೆಲ್ಲಾ 'ಈರ್ ಅಂಚ ಮಾಲ್ತ್ನೆ ಸರಿಯತ್ತ್' ಎನ್ನುತ್ತಿದ್ದರು.

ಧ್ವನಿಸುರುಳಿಗಾಗಿ ಚನಿಯರೇ ಪದ್ಯಗಳನ್ನು ಗೊತ್ತುಮಾಡಿದ್ದರು. ದಕ್ಷಾಧ್ವರ, ಕರ್ಣಪರ್ವ ಪ್ರಸಂಗಗಳ ಅವರ 'ಹಿಟ್' ಪದ್ಯಗಳತ್ತ ಅವರಿಗೆ ಮೋಹವಿತ್ತು. ಒಂದು ಸೋಮವಾರ ರೆಕಾರ್ಡಿಂಗ್ ಅಂತ ನಿಶ್ಚಯವಾಯಿತು. ಅದರ ಮುನ್ನಾ ದಿನ ಅರಂಬೂರಿನಲ್ಲಿ ದೇವಿಮಹಾತ್ಮೆ ಬಯಲಾಟ. ಮರುದಿನದ ರೆಕಾರ್ಡಿಂಗ್ ಗುಂಗಿನಲ್ಲಿದ್ದ ನಾಯ್ಕರ ಅಂದಿನ ಭಾಗವತಿಗೆ ನಿಜಕ್ಕೂ 'ಅದ್ಭುತ'. ಸೊರಗಿದ ಕಂಠಕ್ಕೆ ಮತ್ತೊಮ್ಮೆ ಮರುಜೀವ. ಚಂಡಮುಂಡರು ದೇವಿಯನ್ನು ವರ್ಣಿಸುವ ಸಂದರ್ಭದ ಪದ್ಯಗಳನ್ನು ನಾನು ಆ ವರೆಗೆ ಕೇಳಿರಲಿಲ್ಲ.
(ಮುಂದುವರಿಯುತ್ತದೆ)

2 comments:

  1. ದಾಸರಬೈಲು ಚನಿಯ ನಾಯ್ಕ ಸರಳ ವ್ಯಕ್ತಿತ್ವ ದ ಅನುಭವಿ ಭಾಗವತ. ಯಾವ ಅಹಂ ಇಲ್ಲದೇ ಕಾರ್ಯಕ್ರಮ ದ ಸಮಯಕ್ಕೆ ಬಹು ಮುಂಚಿತವಾಗಿ ಸ್ಥಳದಲ್ಲಿ ಹಾಜರಿದ್ದು, ಪ್ರಸಂಗದ ಬಗ್ಗೆ ಕಲಾವಿದರೊಂದಿಗೆ ಚರ್ಚೆ ಮಾಡಿ, ಪೂರ್ಣ ರಾತ್ರಿ ಪದ್ಯ ಹೇಳಿ, ಆಟವನ್ನು ಯಶಸ್ವಿಗೊಳಿಸಿ, ಸಂಘಟಕರಿಂದ ಯಾವುದೇ ರೀತಿಯಲ್ಲಿ ಸಂಭಾವನೆಯ ಬಗ್ಗೆ ಅಪೇಕ್ಷೆ ಪಡೆಯದ ಮುಗ್ದ ಭಾಗವತ. ಇವರು ನಮ್ಮ ಮನೆಗೆ ಖಾಯಂ ಅತಿಥಿ, ನನ್ನ ಚಿಕ್ಕಪ್ಪ ಪಟ್ಟಾಜೇ ಗಣೇಶ ಭಟ್ ರ ಒಡನಾಡಿ. ಕಾವು, ಕಲ್ಮಡ್ಕ ಹೀಗೆ ಹಲವಾರು ಕಡೆ ಚನಿಯ ನಾಯ್ಕ ರ ಪದಕ್ಕೆ ನಾನು ಹೆಜ್ಜೆ ಹಾಕಿದವ ಚಿಕ್ಕವನಿರುವಾಗ. ಇವರ "ಯಕ್ಷ ಕೋಗಿಲೆ" ಧ್ವನಿ ಸುರುಳಿ ಅತ್ಯಂತ ಉತ್ತಮವಾಗಿ ಮೂಡಿ ಬಂದಿದೆ. ಇವರ ನೆನಪು ಸದಾ ನಮ್ಮಲ್ಲಿರಲಿ ಎಂದು ಬಯಸುತ್ತಾ, ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.

    ReplyDelete
  2. ನಿರೂಪಣೆ ಸೊಗಸಾಗಿದೆ,ದಾಖಲಾತಿ ಅಭಿನ೦ದನಾರ್ಹ.

    ReplyDelete