Sunday, January 17, 2010

ನೆನಪಿನಂಗಳದಲ್ಲಿ : ಕೇದಗಡಿ ಗುಡ್ಡಪ್ಪ ಗೌಡ

ಕಲಾವಿದ ವಿಧಿವಶವಾದಾಗ ಆತನ ಬಗೆಗೆ ಸಂಸ್ಮರಣೆ, ಪತ್ರಿಕಾ ಲೇಖನ, ವರ್ಷ ಕಳೆದಾಗ ನೆನಪು ಸಮಾರಂಭ....ಹೀಗೆ ಒಂದೆರಡು ವರ್ಷ ನಡೆಯುತ್ತಿದ್ದಂತೆ ಮನದಿಂದ ಮರೆಯಾಗುತ್ತಾರೆ! ಆದರೆ ಮರೆಯಲಾಗದಷ್ಟು ರಂಗದಲ್ಲಿ ಬಿಟ್ಟುಹೋದ ಅವರ ಕಲಾವಂತಿಕೆಯನ್ನು ಮರೆಯಲಾದೀತೆ! ಕೆದಗಡಿ ಗುಡ್ಡಪ್ಪ ಗೌಡರು ನಿಧನರಾದಾಗ ಕಾಡಿದ ಪ್ರಶ್ನೆಗಳಿವು.

ಇಂತಹ ಹಿರಿಯರ ರಂಗಕೊಡುಗೆಗಳು ಯಕ್ಷಗಾನದ ಶ್ರೀಮಂತಿಕೆಯ ಮೂಲಸರಕುಗಳು. ಹಿಂದೆಲ್ಲಾ ಕಲಾವಿದ ಮಾಗುತ್ತಿದ್ದಂತೆ, ಆತನ ನೆರಳಲ್ಲಿ ಒಂದಿಬ್ಬರಾದರೂ ಕಲಾವಿದರು ರೂಪುಗೊಳ್ಳುತ್ತಿದ್ದರು. 'ನಾನು ಇಂತಹವರ ಜತೆಯಿದ್ದು ಕಲಿತೆ' ಎನ್ನುವಾಗ ಏನೊಂದು ಅಭಿಮಾನ! 'ನಾನು ಕುರಿಯ ಶಾಸ್ತ್ರಿಗಳ ಶಿಷ್ಯ' ಎಂದಾಗ ಒಂದು ಕಾಲಘಟ್ಟದ ರಂಗ ಮಿಂಚಿ ಮರೆಯಾಗುತ್ತದೆ. ಆದರೆ ಈಗೀಗ ಇಂತಹ ಪರಂಪರೆ ಕಡಿಮೆಯಾಗುತ್ತಿದೆ. ರಂಗದ ದೃಷ್ಟಿಯಿಂದ ಯಾಕೋ 'ಇಂತಹ ಪರಂಪರೆ' ಬೇಕೆನಿಸುತ್ತದೆ. ಗುರುಕುಲಗಳಿರಬಹುದು, ಕಲಿಕಾ ಕೇಂದ್ರಗಳಿರಬಹುದು....ಅವೆಲ್ಲಾ ಪ್ರಾಥಮಿಕ ಅಂಶವನ್ನಷ್ಟೇ ಹೇಳಿಕೊಡಬಲ್ಲುದು. ಆದರೆ 'ಜತೆಗಿದ್ದು ಕಲಿಯುವುದು' ಇದಕ್ಕಿಂತ ಎಷ್ಟೋ ಪಾಲು. ಬದಲಾದ ಕಾಲ ಪ್ರವಾಹದಲ್ಲಿ `ಇದೆಲ್ಲಾ ಸಾಧ್ಯವಿಲ್ಲ' ಎಂದು ಸುಲಭದಲ್ಲಿ ಹೇಳಬಹುದು!

ಇರಲಿ, ವಿಷಯ ಎಲ್ಲೋ ಹೋಯಿತಲ್ವಾ. ಇಂತಹ ಪರಂಪರೆಯಲ್ಲಿ ಬೆಳೆದವರು ಕೇದಗಡಿ ಗುಡ್ಡಪ್ಪ ಗೌಡರು. ಬಾಲ್ಯ ಬಡತನ. ಅರ್ಧದಲ್ಲೇ ಮೊಟಕಾದ ಶಾಲಾ ಕಲಿಕೆ. ಆದರೂ ಕಲಿಯಬೇಕೆನ್ನುವ ತುಡಿತ. ಊರಲ್ಲಿ ಅಲ್ಲಿಂದಿಲ್ಲಿಂದ ಕೇಳುತ್ತಿದ್ದ ಯಕ್ಷಗಾನದ ಸುದ್ದಿಯ ಕಿಡಿಗೆ ಕಿವಿಯರಳಿಸಿದೆ ಗುಡ್ಡಪ್ಪ ಗೌಡರು ನಿಂತುದು ಕೀರಿಕ್ಕಾಡು ವಿಷ್ಣು ಭಟ್ಟರ ಗುರುಕುಲದ ಮುಂದೆ.

ಬನಾರಿಯ ಹಳ್ಳಿಮಂದಿಗೆ ಕೀರಿಕ್ಕಾಡು ಅವರ ಪಾಠಶಾಲೆ ಆಗ ವಿಶ್ವವಿದ್ಯಾಲಯ. ಹಗಲು ದುಡಿಯುತ್ತಾ - ನಾಟ್ಯ, ಪ್ರಸಂಗ, ಪುರಾಣ ಕಥೆಗಳನ್ನು ಕಲಿವ ರೀತಿ. ಜತೆಜತೆಗೆ ಸಂಸ್ಕಾರ ಪಾಠ. ಮಣ್ಣಿನ ಮುದ್ದೆಗಳು ಮಾಸ್ತರರ ಕೈಯಲ್ಲಿ ಶಿಲ್ಪಗಳಾಗುತ್ತಿದ್ದುವು. ಕೇದಗಡಿ ಕೂಡಾ ಇಂತಹ ಶಿಲ್ಪಗಳಲ್ಲೊಬ್ಬರು. ಕಡಾರು ನಾರಾಯಣ ಭಟ್ಟರಿಂದ ನಾಟ್ಯ, ಮಾಸ್ತರರಿಂದ ಅರ್ಥಗಾರಿಕೆ ಕಲಿಕೆ. ಎಷ್ಟು ಶೀಘ್ರ ಕಲಿತರೆಂದರೆ, ರಾತ್ರಿ ಹೇಳಿದ ಪಾಠ ಬೆಳಗಾಗುವಾಗ ವಶವಾಗುವಷ್ಟು. ಹಗಲು ತೋಟದಲ್ಲಿ ದುಡಿಯುವಾಗಲೂ ಪಾಠಗಳ ಗುಣುಗುಣಿಕೆ. ಹೀಗಾಗಿ ಗುಡ್ಡಪ್ಪರ ಮಾಸ್ತರರ ಮೆಚ್ಚಿನ ಶಿಷ್ಯ.

ಮೇಳ ಸೇರಲೇ ಬೇಕು ಎಂಬಷ್ಟರ ಮಟ್ಟಿಗೆ ಯಕ್ಷಗಾನದ ಗುಂಗು ಅವರನ್ನಾವರಿಸಿತು. ತನ್ನ ಹನ್ನೆರಡನೇ ವರುಷಕ್ಕೆ ಕದ್ರಿಮೇಳದಿಂದ ಬಣ್ಣದ ಬದುಕು ಆರಂಭ. ನಿತ್ಯ ವೇಷದಿಂದ ಹೆಜ್ಜೆ ಶುರು. ಕದ್ರಿವಿಷ್ಣು, ಕುಂಬಳೆ ತಿಮ್ಮಪ್ಪ ಮೊದಲಾದ ಹಿರಿಯರಿದ್ದ ಮೇಳದ ತಿರುಗಾಟ ಕೇದಗಡಿಯವರ ಯಕ್ಷಯಶಸ್ಸಿನ ಅಡಿಗಟ್ಟು. ಮುಂದೆ ಕದ್ರಿ, ಮೂಲ್ಕಿ, ಕೂಡ್ಲು, ಮುಚ್ಚೂರು ಮೇಳಗಳಲ್ಲಿ ವ್ಯವಸಾಯ. ನಿಜವಾದ ಯಕ್ಷಗಾನ ಅರಿವು ಬರಲು ಇಷ್ಟು ಮೇಳಗಳ ತಿರುಗಾಟ ಬೇಕಾಯಿತು. ಮಾತಿನ ಮಧ್ಯೆ ಹಿಂದೊಮ್ಮೆ ಹೇಳಿದ ಮಾತು ಮಿಂಚಿಮರೆಯಾಗುತ್ತದೆ.

ಕಟೀಲು ಮೇಳದ ಪ್ರವೇಶ ಕೇದಗಡಿಯವರ ಬಣ್ಣದ ಬದುಕಿಗೆ ಹೊಸ ತಿರುವನ್ನು ನೀಡಿತು. ಮೂರು ದಶಕಕ್ಕೂ ಮಿಕ್ಕಿ ಕಟೀಲು ರಂಗಸ್ಥಳದಲ್ಲಿ ಕುಣಿದರು, ಅಭಿನಯಿಸಿದರು. ಅತಿಕಾಯ, ಹಿರಣ್ಯಕಶಿಪು, ತಾಮ್ರಧ್ವಜ, ಕರ್ಣ, ಕಂಸ, ವೀರಮಣಿ, ರಕ್ತಬೀಜ, ಅರುಣಾಸುರದಂತಹ ಪಾತ್ರಗಳು 'ಗುಡ್ಡಪ್ಪಣ್ಣನ ವೇಷ ನೋಡಬೇಕು' ಎನ್ನುವಷ್ಟರ ಮಟ್ಟಿಗೆ ಬೆಳೆಸಿದರು. 'ತಾರಾಮೌಲ್ಯ' ಅರಸಿ ಬಂತು. ಜವ್ವನದಲ್ಲಿ ಆಭಿಮನ್ಯು, ಬಬ್ರುವಾಹನ, ಶ್ರೀದೇವಿ, ಕಯಾದು ಪಾತ್ರಗಳನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.
ಗೌಡರಿಗೆ ಓದುವಿಕೆ ಸಂಗಾತಿ ಇದ್ದಂತೆ. ಹಾಗಾಗಿ ವೇಷ ನಿರ್ವಹಣೆಯಲ್ಲಿ ಸಾಹಿತ್ಯ ಪರಿಪಕ್ವತೆ. ಪಾತ್ರ ಸ್ವಭಾವಗಳ ಅನಾವರಣ ಅವರ ವೈಶಿಷ್ಟ್ಯ. ಕೇವಲ ಒಂದು ಪದ್ಯಕ್ಕೋ, ಒಂದು ’ಬಾಣ’ಕ್ಕೆ ಸಾಯುವ ಪಾತ್ರ ಅವರದ್ದಲ್ಲ!


ಕೀರಿಕ್ಕಾಡು ಮಾಸ್ತರರ ಗರಡಿಯಲ್ಲಿ ಪಡೆದ ಸಂಸ್ಕಾರಗಳು ಜೀವನದುದ್ದಕ್ಕೂ ಅವರನ್ನು ರೂಪಿಸುವಲ್ಲಿ ಸಹಕಾರಿಯಾದುವು. 'ಕಲಾವಿದ ಶುಚಿ-ರುಚಿಯಾಗಿರಬೇಕು' ಇದು ಬಹುತೇಕ ಉಪದೇಶವಾದರೂ, ಕೇದಗಡಿಯವರಿಗೆ ನಿತ್ಯಾನುಷ್ಠಾನ. ಅವರು ವೇಷ ತೊಡುವಲ್ಲಿಂದ, ಕಳಚುವ ತನಕವೂ ಈ ಶುಚಿ-ರುಚಿಗಳು ಅವರನ್ನಾವರಿಸಿತ್ತು. ಬದುಕಿನ ವೇಷ ತೊಟ್ಟು, ಕಳಚುವ ತನಕವೂ ಹಾಗೇನೇ.

ತಾಳಮದ್ದಳೆಯಲ್ಲೂ ಕೇದಗಡಿಯವರದು ಹರಿತ ಚಿಂತನೆ. ಪಾತ್ರಗಳಲ್ಲೂ ಅಷ್ಟೇ. ನಾಟ್ಯ, ಅಭಿನಯ, ಮಾತುಗಾರಿಕೆ ಎಲ್ಲವೂ ಸಮಪಾಕ. ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ಹೇಳುತ್ತಾರೆ - ಗುಡ್ಡಪ್ಪ ಗೌಡರು ವೇಷ ತೊಟ್ಟು ರಂಗಪ್ರವೇಶಿಸಿದರೆ ಸಾಕು, 'ರಂಗಸ್ಥಳ ತುಂಬುವಂತಹ' ಅಭಿವ್ಯಕ್ತಿ ಅವರದು.

ಅರುವತ್ತಕ್ಕೂ ಮಿಕ್ಕಿ ಪ್ರಶಸ್ತಿ-ಪುರಸ್ಕಾರಗಳಿಂದ ಪುರಸ್ಕೃತರಾಗಿದ್ದ ಕೇದಗಡಿ ಗುಡ್ಡಪ್ಪ ಗೌಡರು ೬-೧-೨೦೦೮ರಂದು ವಿಧಿವಶರಾದರು. ಅವರನ್ನು ನೆನಪಿಸುವ ವೇಷವೂ ಇದ್ದಿದ್ದರೆ! (ಸಾಧ್ಯವಿಲ್ಲ ಎಂಬ ಅರಿವಿನೊಂದಿಗೆ) ಲೇಖನಾರಂಭದ ನನ್ನ ಆಶಯವೂ ಅದೇ.

Friday, January 15, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕೊನೆಯ ಕಂತು)

ಸಾಮಾನ್ಯವಾಗಿ ಪದ್ಯ ಹೇಳಿದ ಬಳಿಕ 'ಬಚ್ಚುಂಡು' ಅಂತ ಹೇಳುತ್ತಿದ್ದ ನಾಯ್ಕರಂದು, 'ಆಟ ಪೊರ್ಲು ಆಯಿಜಾ' (ಅಟ ಒಳ್ಳೆಯದಾಗಲಿಲ್ಲವಾ) ಅಂತ ಅಭಿಪ್ರಾಯ ಕೇಳಿದರು. ಎಂದೂ ಅವರು ಆಟ ಕಳೆದಾದ ಬಳಿಕ ಹೀಗೆ ಕೇಳಿದವರಲ್ಲ. ಯಾರ ಮಾತಿಗೂ ಕಿವಿಗೊಡುವವರಲ್ಲ. ಚೌಕಿಯಲ್ಲಿ ಮಂಗಲವಾದ ನಂತರ ತನ್ನ ಚೀಲ ಹೆಗಲಿಗೆ ಹಾಕಿ ಹೊರಡುತ್ತಿದ್ದರು.

ದೇವಿಮಹಾತ್ಮೆ ಪ್ರಸಂಗದ ಗುಂಗಿನಲ್ಲೇ ಇದ್ದರು. ಸರಿ, ಸ್ನಾನ, ಉಪಾಹಾರ ಮುಗಿಸುತ್ತಿದ್ದಂತೆ, ಕೃ.ಶಾ.ಶಾಸ್ತ್ರಿಗಳು ಜೀಪಿನೊಂದಿಗೆ ಹಾಜರ್. ಸುಮಾರು ಎಂಟು ಗಂಟೆಗೆ ಮಂಗಳೂರಿಗೆ ನಮ್ಮ ಪ್ರಯಾಣ. ಅಂದು ಕಲಾವಿದ ಚೇಕೋಡು ಕೃಷ್ಣ ಭಟ್ಟರು ತಮ್ಮ ತಾಳಮದ್ದಳೆ ರೆಕಾರ್ಡಿಂಗ್ ಇಟ್ಟುಕೊಂಡಿದ್ದರು. ಅದರ ಮಧ್ಯೆ ನಾಯ್ಕರ ಮೇಲಿನ ಅಭಿಮಾನದಿಂದ ಒಂದು ಗಂಟೆ ಅವರ ವೆಚ್ಚದಲ್ಲೇ ನಮಗಾಗಿ ಬಿಟ್ಟುಕೊಟ್ಟಿದ್ದರು.

ಮಂಗಳೂರಿಗೆ ಹೋಗುವ ದಾರಿಮಧ್ಯದಲ್ಲಿ ಆಟದ್ದೇ ಸುದ್ದಿ. ಹಳೆಯ ನೆನಪುಗಳನ್ನು ನಾಯ್ಕರು ಬಿಚ್ಚುತ್ತಿದ್ದರು. ಅದರಲ್ಲಿ ಸಿಹಿಯಿತ್ತು, ಕಹಿಯಿತ್ತು. ಬದುಕಿನ ನಡೆಯಿತ್ತು. ಕುಟುಂಬದ ಸುಖ-ದುಃಖವಿತ್ತು.

ಮಂಗಳೂರು ತಲುಪಿದೆವು. ರೆಕಾರ್ಡಿಂಗ್ ರೂಂ ನಿಗದಿನ ಸಮಯಕ್ಕೆ ಸಿಕ್ಕಿತು. ಮದ್ದಳೆಗೆ ಪದ್ಯಾಣ ಜಯರಾಮ ಭಟ್ ಮತ್ತು ಚೆಂಡೆಗೆ ಪೆರುವಾಯಿ ನಾರಾಯಣ ಭಟ್ಟರ ಸಾಥಿ. ಒಂದೊಂದು ಪದ್ಯವನ್ನು ಬಹಳ ಚೆನ್ನಾಗಿ ಹಾಡಿದರು. ಒಂದು ಗಂಟೆ ಸ್ಟುಡಿಯದೊಳಗೆ ಕಳೆದದ್ದೇ ಗೊತ್ತಾಗಿಲ್ಲ. ದಕ್ಷಾಧ್ವರ, ಕರ್ಣಾವಸಾನ, ತಮ್ಮ ಗುರು ಅಜ್ಜನಗದ್ದೆ ಗಣಪಯ್ಯನವರ ಕೆಲವು ಕೃತಿಗಳು, ದೇವೇಂದ್ರನ ಒಡ್ಡೋಲಗ.. ಹೀಗೆ 'ವೆರೈಟಿ' ಪದ್ಯಗಳಿದ್ದುವು.

ಕ್ಯಾಸೆಟ್ಟಿನ ಕವರನ್ನು ವರ್ಣದಲ್ಲಿ ಚೇಕೋಡು ಕೃಷ್ಣ ಭಟ್ರು ಉಚಿತವಾಗಿ ಮುದ್ರಸಿ ಕೊಟ್ಟಿದ್ದರು. ಒಳಗಿನ ಧ್ವನಿಸುರುಳಿ ವೆಚ್ಚವನ್ನು ಮಾತ್ರ ಪಡೆದಿದ್ದರು. ಆದರೆ ವಿಧಿ ಹೇಗೆ ಮನುಷ್ಯನನ್ನು ಅಟ್ಟಿಸಿಕೊಂಡು ಬರುತ್ತದೆ ಅಂತ! ಉತ್ತಮ ಧ್ವನಿಮುದ್ರಣದ ಸ್ಟುಡಿಯೋ. ಯಾವುದೆ ಲೋಪದೋಷಗಳಿಲ್ಲ. ಇಂತಹ ಸ್ಟುಡಿಯೋದಲ್ಲಿ ನಾಯಕರು ಹಾಡಿದಾಗ ಮದ್ದಳೆಯ ದನಿ 'ಇಳಿಸ್ವರ'ದಲ್ಲಿ ರೆಕಾರ್ಡಿಂಗ್ ಆಗಬೇಕೇ? ಏನೇನು 'ಸರ್ಕಸ್' ಮಾಡಿದರೂ ಸರಿಮಾಡಲಾಗಲೇ ಇಲ್ಲ! 'ಅಷ್ಟಾದರೂ ಆಯಿತಲ್ಲಾ' ಅಂತ ಸಮಾಧಾನ.

24-3-1999. ನಾಯ್ಕರ ಶಿಷ್ಯ ದಾಮೋದರ ಪಾಠಾಳಿಯವರು ಮಿತ್ತಡ್ಕದಲ್ಲಿ ಕಟೀಲು ಮೇಳದ ಆಟ ಆಡಿಸಿದ್ದರು. ಅಂದು ಧ್ವನಿಸುರಳಿಯ ಬಿಡುಗಡೆ ಸಮಾರಂಭ. ವೇದಿಕೆ ಸಂಪನ್ನಗೊಂಡಿತ್ತು. ಗಣ್ಯರು ಉಪಸ್ಥಿತರಿದ್ದರು. ಧ್ವನಿಸುರುಳಿಯನ್ನು ಹಿರಿಯ ಮತ್ತು ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರು ಬಿಡುಗಡೆ ಮಾಡಿ, ಶುಭ ಹಾರೈಸಿದ್ದರು.

ಬಲಿಪರು ತಮ್ಮ ಮಾತು ಮುಗಿಸಿ ಇನ್ನೇನು ತಮ್ಮ ಆಸನದಲ್ಲಿ ಕುಳಿತುಕೊಳ್ಳಬೇಕು ಎಂದಿರುವಾಗ, ಚನಿಯ ನಾಯ್ಕರು ಅವರ ಬಳಿಗೆ ಹೋಗಿ, ನಮಸ್ಕರಿಸಿ, ಅವರಿಗೆ 'ತಾನು ಬಳಸುತ್ತಿದ್ದ ಜಾಗಟೆ ಮತ್ತು ಜಾಗಟೆ ಕೋಲು' ಪ್ರದಾನ ಮಾಡಿದರು! ಈ ಜಾಗಟೆ ಕೋಲು ಚನಿಯರಿಗೆ ಪರಂಪರಾ ಹಿನ್ನೆಲೆಯ ಭಾಗವತರಿಗೇ ನೀಡುವುದು ಔಚಿತ್ಯವೆಂದು ಬಗೆದು ಬಲಿಪರಿಗೇ ನೀಡಿರಬೇಕು. ಅಂದಿನಿಂದ ಚನಿಯರ ಜಾಗಟೆ ಹಿಡಿದೇ ಇಲ್ಲ!

ನನ್ನ ತೀರ್ಥರೂಪರು ಆಸ್ಪತ್ರೆಯಲ್ಲಿ ಬದುಕಿನ ಇಳಿಲೆಕ್ಕದಲ್ಲಿದ್ದರು. ಅವರನ್ನು ನೋಡಲು ಬಂದ ಚನಿಯರು ಮಾತನಾಡುತ್ತಿದ್ದಂತೆ, ಕಣ್ಣನ್ನು ಒರೆಸಿಕೊಳ್ಳುತ್ತಿದ್ದರು. ನಮ್ಮ ಸಂಬಂಧಿಕರಲ್ಲೂ ಬಾರದ ಕಣ್ಣೀರು ಚನಿಯರಲ್ಲಿ ಬಂದಿತ್ತು.

ಚನಿಯರ ಆರೋಗ್ಯದ ಕ್ಷೀಣತೆಯನ್ನ ಕಂಡು ಅಡೂರು ಶ್ರೀಧರ ರಾಯರು ಪರೀಕ್ಷೆಗಾಗಿ ಹುಬ್ಬಳ್ಳಿಯ ಅವರ ಮಗನ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆ ಮುಗಿಸಿ ಒಂದಷ್ಟು ಮಾತ್ರೆಗಳನ್ನು ಕಟ್ಟಿಕೊಟ್ಟು ಅವರ ಮನೆಗೆ ಬಿಟ್ಟು, ನೇರವಾಗಿ ನಮ್ಮನೆಗೆ ಬಂದರು. 'ಕೆಲಸ ಕೆಟ್ಟು ಹೋಯಿತು. ಭಾಗವತರಿಗೆ ಗಂಟಲಿನ ಸಮಸ್ಯೆ. ಅದಿನ್ನು ಗುಣವಾಗದು. ಎರಡೇ ತಿಂಗಳು' ಎಂದು ಕಣ್ಣೀರು ಹಾಕಿದರು. ಈ ವಿಚಾರ ಅವರಿಗೆ ಗೊತ್ತಿಲ್ಲ.

ದಿನ ಸರಿಯುತ್ತಿತ್ತು. ಒಂದೆರಡು ಬಾರಿ ಅವರನ್ನು ನೋಡಿ ಬಂದೆವು. ಕೃಶರಾಗಿದ್ದರು. ಮಾತುಕತೆಯೂ ದಿನೇ ದಿನೇ ಕಡಿಮೆಯಾಗುತ್ತಿತ್ತು. ಜತೆಗೆ ಆಹಾರ.. ನಿದ್ರೆ.. ಎಲ್ಲವೂ. 'ಆಯಿತು, ನಮ್ಮ ಭಾಗವತರ ಕತೆ ಮುಗಿಯಿತು' ಎನ್ನುತ್ತಾ ಬಂದೆವು.

ಮರುದಿನ ಅಂದರೆ 7-8-1999. 'ಚನಿಯ ನಾಯ್ಕರು ಹೋದರು' - ಫೋನ್ ಕರೆ. 20-25 ವರುಷದಿಂದ ಮನದಲ್ಲೆಲ್ಲಾ ಸುಳಿದಾಡುತ್ತ ಇದ್ದ ನಾಯ್ಕರ ಬದುಕಿನ ಅಂತ್ಯ. ಈ ವಿಚಾರವನ್ನು ಪೆರಾಜೆಯ ಅವರ 'ಅಭಿಮಾನಿಗಳೆಂದು ಗುರುತಿಸಿಕೊಂಡ' ಕೆಲವರನ್ನು ವಿಚಾರ ತಿಳಿಸಿದಾಗ 'ಹೌದಾ. ಛೇ.' ಉತ್ತರಕ್ಕೇ ಸೀಮಿತ.

ಚನಿಯ ನಾಯ್ಕರು ನನಗೆ ಬಂಧುವಲ್ಲ. ಆದರೆ ಬಂಧುಗಳಿಗಿಂತ ಹೆಚ್ಚಿನ ಅಭಿಮಾನವಿತ್ತು. ಅವರು ನನಗೆ ಅಣ್ಣನಲ್ಲ. ಆದರೆ ಒಡಹುಟ್ಟಿದ ಅಣ್ಣನಂತೆ ಅವರ ವ್ಯವಹಾರವಿತ್ತು. ನಾಕರು ರಕ್ತಸಂಬಂಧಿಯಲ್ಲ. ಆದರೆ ನನ್ನ ರಕ್ತಸಂಬಂಧಿಕರಿಗಿಂತಲೂ ಹೆಚ್ಚಿನ ಪ್ರೀತಿ-ವಿಶ್ವಾಸವಿತ್ತು.

ಚನಿಯರು ಕುಟುಂಬದ ಓರ್ವ ಸದಸ್ಯನಂತಿದ್ದರು. ಹಾಗಾಗಿ ಅವರ ಮರಣದಂದು ನನಗರಿವಿಲ್ಲದೇ ಬಿದ್ದ ನಾಲ್ಕು ಹನಿ ಕಣ್ಣೀರು ಅವರಿಗೆ ಸಂದ ಶೃದ್ಡಾಂಜಲಿ. ಸಂಬಂಧಿಕರು ಅಸ್ತಂಗತರಾದಾಗಲೂ ಅಷ್ಟು ಅಧೀರನಾಗಲಿಲ್ಲ.

ಚನಿಯರು ದೂರವಾಗಿ ಹನ್ನೆರಡು ವರುಷವಾಯಿತು. ಆದರೆ ಅವರ ಒಡನಾಡ, ನೆನಪು ನಿತ್ಯ ಜೀವಂತ. ಭಾಗವತಿಕೆಯಲ್ಲಿ ಯಾರೂ ಅನುಕರಿಸದ ಛಾಪು ಮೂಡಿಸಿದ ಚನಿಯರು ಯಕ್ಷಗಾನ ಮರೆಯದ ಯಕ್ಷಕೋಗಿಲೆ.

Wednesday, January 6, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕಂತು ೪)

ಪೆರಾಜೆ ಸುತ್ತಮುತ್ತ ಕನಿಷ್ಠ ಐದಾರು ಬಯಲಾಟಗಳು ನಡೆಯುತ್ತಿದ್ದುವು. ತಾಳಮದ್ದಳೆಗಳೂ ಸಾಕಷ್ಟು ಆಗುತ್ತಿದ್ದುವು. ಬಯಲಾಟಕ್ಕೆ ಅತಿಥಿ ಕಲಾವಿದರನ್ನು ಆಹ್ವಾನಿಸಲಾಗುತ್ತಿತ್ತು. ಆಟದ ಪ್ರದರ್ಶನದಂದು ಕೆಲವು 'ಗಮ್ಮತ್ತು' ಕಲಾವಿದರು, ಅಭಿಮಾನಿಗಳು 'ಭಾಗವತೆರೆ ಚಾ(!) ಪರ್ಕ' ಎಂದು ಅವರನ್ನು 'ಗರಂ' ಮಾಡಲು ಯತ್ನಿಸಿದರೂ ಚನಿಯರು ಅವರ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿ ಕೇವಲ 'ಬೀಡಾ' ತಿನ್ನುತ್ತಿದ್ದರಷ್ಟೇ. ಬಹುಶಃ ಅವರ ಕಲಾಜೀವನದ ಉತ್ತರಾರ್ಧದಲ್ಲಿ ಅವರಿಗೆ ಸಿಕ್ಕ ಆತ್ಮೀಯರ ಸಹವಾಸ.

ತಾಳಮದ್ದಳೆ ನಡೆಯುತ್ತಿದ್ದಾಗ ಅಸಹನೆಯಿಂದ ಜಾಗಟೆಯನ್ನು ಕೆಳಗಿಟ್ಟು ನಡೆದ ಭಾಗವತರಿದ್ದಾರೆ! ಮದ್ದಳೆ ಬಾರಿಸುತ್ತಿದ್ದಂತೆ ಮದ್ದಳೆಯನ್ನು ಬಿಟ್ಟು ಓಡಿದ ವಾದಕರನ್ನೂ ಗೊತ್ತು. ಇಂತಹ ಕಲಾ ದ್ರೋಹ ಚನಿಯರ ಹತ್ತಿರ ಸುಳಿಯುವುದಿಲ್ಲ. ಅದು ಅವರ ಸಂಸ್ಕಾರ. ರಂಗಕ್ಕೆ ತೆರಳುವಾಗ ಸ್ವಸ್ತಿಕಕ್ಕೆ ನಮಸ್ಕರಿಸಿ, ರಂಗದಲ್ಲಿ ಚೆಂಡೆ-ಮದ್ದಳೆಗಳಿಗೆ ವಂದಿಸಿ ಭಾಗವತರ ಮಣೆಯೇರುತ್ತಿದ್ದರು. ಅವರಿಗದು ಆರಾಧ್ಯಕಲೆ.

ನನ್ನ ಯಕ್ಷಗಾನಾಸಕ್ತಿಯ ಆರಂಭ ಕಾಲದಲ್ಲಿ (1986) 'ಪುಂಡುವೇಷ'ವೆಂದರೆ ಪ್ರಿಯವಾಗಿತ್ತು. ಕುಣಿಯಲು, ಹಾರಲು, ಮಾತನಾಡಲು ಹರಸಾಹಸ ಪಡುತ್ತಿದ್ದರೂ ಸಂಘದ ಆಟಗಳಲ್ಲಿ ನನಗೆ ಮೊದಲ ಮಣೆ! ಒಮ್ಮೆ ಶಿವಪಂಚಾಕ್ಷರಿ ಮಹಾತ್ಮೆ ಪ್ರಸಂಗದಲ್ಲಿ ನನಗೆ 'ಶ್ವೇತಕುಮಾರ'ನ ಪಾತ್ರ. ಚನಿಯರದ್ದೇ ಭಾಗವತಿಕೆ. ಆಟವೇನೋ ಮುಗಿಯಿತು. ಮನೆಗೆ ಬಂದೆವು. ವಿಶ್ರಾಂತಿಯಾಗಿ ಉಭಯಕುಶಲೋಪರಿ ಮಾತನಾಡುತ್ತಿದ್ದಾಗ, 'ಈರೆಗ್ ಪುಂಡು ವೇಷ ಒಲಿಯಂದ್. ಸ್ತ್ರೀವೇಷ ಮಲ್ಪೊಳಿ' ಅಂದರು. ನನ್ನ ಪುಂಡುವೇಷದ 'ಮರ್ಲ್’ ಅಲ್ಲಿಗೆ ಮುಕ್ತಾಯ.

98-99ರ ಸಮಯ. ಯಾಕೋ ಅಶಕ್ತತೆ ಅವರನ್ನು ಕಾಡತೊಡಗಿತ್ತು. ಒಪ್ಪಿದ ಕಾರ್ಯಕ್ರಮಗಳಿಗೆ ಗೈರುಹಾಜರಾಗುತ್ತಿದ್ದರು. ಅವರ ಉತ್ಸಾಹವನ್ನು ಅಸೌಖ್ಯತೆ ನಿಯಂತ್ರಿಸುತ್ತಿತ್ತು. ಆಗಾಗ ಜ್ವರ, ಶಾರೀರದಲ್ಲಿ ಕರ್ಕಶತೆ ಬಾಧಿಸುತ್ತಿತ್ತು. 'ಇವರಲ್ಲಿ ಏನೋ ಬದಲಾವಣೆಯಾಗುತ್ತಿದೆ. ಟೆಸ್ಟ್ ಮಾಡಿಸಬೇಕು' ಅಡೂರು ಶ್ರೀಧರ ರಾಯರು ನೆನಪಿಸುತ್ತಿದ್ದರು.

ಚನಿಯರ ಹಾಡುಗಾರಿಕೆಯ ಧ್ವನಿಸುರುಳಿಯೊಂದನ್ನು ತಯಾರಿಸಿದರೆ ಹೇಗೆ? ಮರ್ಕಂಜದ ಕೃ.ಶಾ.ಶಾಸ್ತ್ರಿ, ಜಗನ್ಮೋಹನ ರೈ, ದಾಮೋದರ ಪಾಟಾಳಿ.. ಹೀಗೆ ಸಮಾನಾಸಕ್ತರ ಸಮಾಲೋಚನೆ. ಚನಿಯರ ಮನದ ಬಯಕೆಯೂ ಇತ್ತೆನ್ನಿ.

ಒಂದು ಕ್ಯಾಸೆಟ್ಟಿಗೆ ಐವತ್ತು ರೂಪಾಯಿಯಂತೆ ಹಣ ಸಂಗ್ರಹವಾಯಿತು. ಕೆಲವರು ನೂರು, ಇನ್ನೂರು ನೀಡಿದರು. ಇದರಿಂದಾಗಿ ಪ್ರಯಾಣ, ಸ್ಟುಡಿಯೋ ಬಾಡಿಕೆ ಹೊಂದಾಣಿಕೆಯಾಯಿತು. ಇದರಲ್ಲಿ ಉಳಿದ ಅಲ್ಪಸ್ವಲ್ಪ ಮೊತ್ತ ಮತ್ತು ಕ್ಯಾಸೆಟ್ ಮಾರಾಟದಿಂದ ಸಿಗುವ ಮೊತ್ತವೆಲ್ಲವೂ ಚನಿಯರಿಗೆ ನೀಡುವುದೆಂದು ನಿಶ್ಚಯವಾಯಿತು. ಇದಕ್ಕವರ ವಿರೋಧವಿತ್ತಾದರೂ, ಒತ್ತಾಯಕ್ಕೆ ಮಣಿದರು.

ಕ್ಯಾಸೆಟ್ಟಿಗೆ - ಮದ್ದಳೆಗೆ ಪದ್ಯಾಣ ಜಯರಾಮ ಭಟ್, ಚೆಂಡೆಗೆ ಪೆರುವಾಯಿ ನಾರಾಯಣ ಭಟ್ಟರನ್ನು ಗೊತ್ತುಮಾಡಲಾಯಿತು. ಅವರಿಬ್ಬರೂ ಚನಿಯರ ಮೇಲಿನ ಅಭಿಮಾನದಿಂದ ಸಂಭಾವನೆ ರಹಿತವಾಗಿ ರೆಕಾರ್ಡಿಂಗ್ನಲ್ಲಿ ಭಾಗವಹಿಸಿದ್ದರು. ನಿರೂಪಣೆಗೆ ಕೃ.ಶಾ.ಮರ್ಕಂಜ. ಈ ಮಧ್ಯೆ ಒಂದು ಅಪಸ್ವರ ಎದ್ದಿತು. ಕ್ಯಾಸೆಟ್ಟಿನ ರಕ್ಷಾಪುಟದಲ್ಲಿ ಇವೆಲ್ಲವನ್ನೂ ಸಂಘಟಿಸಿದ ನನ್ನ ಹೆಸರನ್ನೂ ಸೇರಿಸಿದ್ದೆ. 'ಐವತ್ತು ರೂಪಾಯಿ ಕೊಟ್ಟ ನಾವೆಲ್ಲರೂ ಸಂಘಟಕರಲ್ವಾ' ಅಂತ ಒಂದಿಬ್ಬರು ಕೇಳಿಬಿಟ್ಟರು. ಈ ವಾದದ ಮುಂದೆ ನನ್ನ ಹೆಸರನ್ನು ನಾನೇ ಕೈಬಿಟ್ಟೆ! ಇದು ಚನಿಯ ನಾಯ್ಕರಿಗೆ ತುಂಬಾ ನೋವುಂಟುಮಾಡಿತ್ತು. ಸಿಕ್ಕಗಲೆಲ್ಲಾ 'ಈರ್ ಅಂಚ ಮಾಲ್ತ್ನೆ ಸರಿಯತ್ತ್' ಎನ್ನುತ್ತಿದ್ದರು.

ಧ್ವನಿಸುರುಳಿಗಾಗಿ ಚನಿಯರೇ ಪದ್ಯಗಳನ್ನು ಗೊತ್ತುಮಾಡಿದ್ದರು. ದಕ್ಷಾಧ್ವರ, ಕರ್ಣಪರ್ವ ಪ್ರಸಂಗಗಳ ಅವರ 'ಹಿಟ್' ಪದ್ಯಗಳತ್ತ ಅವರಿಗೆ ಮೋಹವಿತ್ತು. ಒಂದು ಸೋಮವಾರ ರೆಕಾರ್ಡಿಂಗ್ ಅಂತ ನಿಶ್ಚಯವಾಯಿತು. ಅದರ ಮುನ್ನಾ ದಿನ ಅರಂಬೂರಿನಲ್ಲಿ ದೇವಿಮಹಾತ್ಮೆ ಬಯಲಾಟ. ಮರುದಿನದ ರೆಕಾರ್ಡಿಂಗ್ ಗುಂಗಿನಲ್ಲಿದ್ದ ನಾಯ್ಕರ ಅಂದಿನ ಭಾಗವತಿಗೆ ನಿಜಕ್ಕೂ 'ಅದ್ಭುತ'. ಸೊರಗಿದ ಕಂಠಕ್ಕೆ ಮತ್ತೊಮ್ಮೆ ಮರುಜೀವ. ಚಂಡಮುಂಡರು ದೇವಿಯನ್ನು ವರ್ಣಿಸುವ ಸಂದರ್ಭದ ಪದ್ಯಗಳನ್ನು ನಾನು ಆ ವರೆಗೆ ಕೇಳಿರಲಿಲ್ಲ.
(ಮುಂದುವರಿಯುತ್ತದೆ)

Tuesday, January 5, 2010

'ಹಿರಿಯಣ್ಣ'ನ ಒಡನಾಟದ ನೆನಪು (ಕಂತು 3)

ಪೆರಾಜೆ ಶ್ರೀ ಶಾಸ್ತಾವೇಶ್ವರ ಯಕ್ಷಗಾನ ಕಲಾ ಸಂಘವು 1988ರಲ್ಲಿ ಚನಿಯ ನಾಯ್ಕರಿಗೆ 'ಸಂಮಾನ'ವೊಂದನ್ನು ಆಯೋಜಿಸಿತ್ತು. ಶ್ರೀ ಕೆ.ಡಿ.ಕುಶಾಲಪ್ಪನವರ ಸಾರಥ್ಯದಲ್ಲಿ ಅದ್ದೂರಿಯಾಗಿಯೇ ಸಮಾರಂಭ ನಡೆದಿತ್ತು. ಬಹುಶಃ ಪೆರಾಜೆಯ ಇತಿಹಾಸದಲ್ಲಿಯೇ 'ಸಂಮಾನ' ಎಂಬ ಕಲ್ಪನೆಯೇ ಹೊಸತು.

ಶಾಲು, ಹಣ್ಣುಹಂಪಲು, ಸ್ಮರಣಿಕೆ, ಗುಣಕಥನಫಲಕ, ಹಾರ... ಇತ್ಯಾದಿ ವಸ್ತುಗಳು ಸಂಮಾನಕ್ಕೆ ಬೇಕೆಂಬುದೇ ಅಲ್ಲಿ ಗೊತ್ತಿರಲಿಲ್ಲ. ಇದನ್ನೆಲ್ಲಾ ಬೆರಗು ಕಣ್ಣುಗಳಿಂದ ನೋಡದ ಅನೇಕ ಹಿರಿಯರ ಶ್ಲಾಘನೆ ನೆನಪಾಗುತ್ತದೆ. ಈ ಅದ್ದೂರಿ ವ್ಯವಸ್ಥೆಯ ನೊಣಭಾರವನ್ನು ನಾನೂ ಹೊತ್ತಿದ್ದೆ. ಕೆಲವು ಪಾನಪ್ರಿಯ ಬಂಧುಗಳಿಂದ ಸಂಮಾನದ ಬಳಿಕ ನನಗೂ 'ಅದ್ದೂರಿ ಸಂಮಾನ'ವೂ ಸಿಕ್ಕಿತೆನ್ನಿ. ಇದು ಪೆರಾಜೆ ಕಲಾಬದುಕಿನ ಒಂದಂಗ. ಇದನ್ನು ಹೇಂಗೆ ಮರೆಯಲಿ? 'ಈರೆಗ್ ಬೋಡ್ಚಾಂಡ್' ಚನಿಯರೇ ಹೇಳಿದ್ದರು.

ಹಲವು ದಶಕಗಳಿಂದ ಚನಿಯ ನಾಯ್ಕರಿಗೆ ಪೆರಾಜೆಯ ನಂಟಿತ್ತು. ಸುಳ್ಯ, ಪುತ್ತೂರು, ಕಾಸರಗೋಡು..ಮೊದಲಾದೆಡೆ ಇವರ ಭಾಗವತಿಕೆ ಇಲ್ಲದೆ ಆಟವಿಲ್ಲ! ಹೀಗೆ ಸಿಕ್ಕಾಗಲೆಲ್ಲಾ 'ಆಕಾಶವಾಣಿಗೊಮ್ಮೆ ಹೋಗಬೇಕು' ಎಂಬ ಆಶೆ ತೋಡಿಕೊಳ್ಳುತ್ತಿದ್ದರು. ಅದಕ್ಕಾಗಿಯೇ 'ಯಕ್ಷರಂಜಿನಿ ಸುಳ್ಯ' ಅಂತ ತಂಡವೊಂದನ್ನು ರೂಪಿಸಿದ್ದೆ. ಸಮಾನ ಮನಸ್ಕ ಹವ್ಯಾಸಿ ಕಲಾವಿದರನ್ನು ಸೇರಿಸಿದ್ದೆ. ಪೃಥುರಾಜ ವಿಜಯ, ನರಕಾಸುರ.. ಮೊದಲಾದ ನಾಲ್ಕಾರು ಪ್ರಸಂಗಗಳು ಪ್ರಸಾರವಾಗಿದ್ದುವು. ಶ್ರೋತೃಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಂಭಾವನೆ ವಿಚಾರದಲ್ಲಿ ಒಬ್ಬ ಕಲಾವಿದರ ಅಪಸ್ವರ ಬಂದಾಗ 'ನಮ ಈಡೆಗ್ ಉಂತಾಕೋ' ಎಂದು ಬಿಟ್ಟರು. ಎರಡೇ ವರುಷದಲ್ಲಿ ಯಕ್ಷರಂಜಿನಿಗೆ ವಿದಾಯ!

ಸಲುಗೆಯ ಕವಚದೊಳಗೆ ನಾಯ್ಕರಲ್ಲಿ ಲಘುವಾಗಿ ವ್ಯವಹರಿಸಿ, ಅನಾವಶ್ಯಕವಾಗಿ ವಾಚಾಳಿತನ ತೋರಿ, ತಾನೊಬ್ಬ 'ಯಕ್ಷಬ್ರಹ್ಮ' ನೆಂದೆಣಿಕೊಳ್ಳುವ ಹವ್ಯಾಸಿ ಕಲಾವಿದರನೇಕರು ಅವರ ಬದುಕಿನಲ್ಲಿ ಹಾದು ಹೋಗಿದ್ದಾರೆ. ಈ ಕುರಿತು ಅವರನ್ನೊಮ್ಮೆ ಪ್ರಶ್ನಿಸಿದ್ದಾಗ ಅವರದು ಒಂದೇ ಪದದ ಉತ್ತರ - 'ಸಯ್ಯಡ್'! ಈ ಪದದಲ್ಲಿ ಖಚಿತ ನಿಲುವಿತ್ತು. ಉದಾಸೀನತೆಯಿತ್ತು. ಸ್ವಷ್ಪ ನಿಲುವಿತ್ತು.

(ಮುಂದಿನ ಕಂತಲ್ಲಿ ಮುಂದುವರಿಯುವುದು)

Sunday, January 3, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕಂತು-೨)

ನಮ್ಮ ಹವ್ಯಾಸಿ ಚೌಕಿಯನ್ನೊಮ್ಮೆ ನೋಡುವಾ.

ಇಂದಿನ ಆಟದಂದು ನಿನ್ನೆಯ-ಮೊನ್ನೆಯ ಆಟದ ಸುದ್ದಿಯನ್ನೋ, ವಿಕಾರಗಳನ್ನೋ, ಪಾತ್ರಧಾರಿಗಳ ನಿಂದೆಯನ್ನೋ ಮಾಡುತ್ತಾ ತಮ್ಮನ್ನು ತಾವೇ ಉದ್ಘಾಟಿಸಿಕೊಳ್ಳುವ 'ಪತನಸುಖಿ' ಕಲಾವಿದರು ಎಷ್ಟಿಲ್ಲ? ನಾಳೆಯ ಆಟದ ಬಗ್ಗೆ, ಅವರು ನೀಡುವ ಸಂಭಾವನೆ ಬಗ್ಗೆ, ಅಲ್ಲಿನ ವ್ಯವಸ್ಥೆಗಳ ಕುರಿತು ವಿಮರ್ಶೆ ನಡೆಯುತ್ತದೇ ವಿನಾ, ಇಂದು ನಡೆಯುತ್ತಿರುವ ಪ್ರದರ್ಶನದ ಕುರಿತಾಗಿ ಯಾರೂ ಮಾತನಾಡುವುದಿಲ್ಲ. ಪೂರ್ವಸಿದ್ಧತೆಯಂತೂ ಇಲ್ಲವೇ ಇಲ್ಲ.

ಇಂತಹ ಚೌಕಿಯಲ್ಲಿ ಚನಿಯ ನಾಯ್ಕರು 'ಅವರಿಗೇ ಮೀಸಲಾದ ಜಾಗದಲ್ಲಿ' ಕುಳಿತು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚೆಂದರೆ ಒಂದು ಕಿರುನಗೆ. ಅವರಿಗೆ ಮತ್ತೂ ಅಸಹನೆಯಾದರೆ, ತಾವು ನಂಬಿದ ಆಪ್ತರನ್ನು ಹತ್ತಿರ ಕುಳ್ಳಿರಿಸಿಕೊಂಡು ವೀಳ್ಯ ಮೆಲ್ಲುತ್ತಾ ಇರುವುದು ನಾಯ್ಕರದೇ ಸ್ಟ್ರೈಲ್.

ಶ್ವೇತವಸ್ತ್ರಧಾರಿಯಾದ ನಾಯ್ಕರು ಕೆಂಪು ಯಾ ಹಸಿರು ಶಾಲನ್ನು ಹೆಗಲಿಗೇರಿಸಿ, ಕಪ್ಪಂಚಿನ ಚಷ್ಮಾವನ್ನು ಧರಿಸಿ, ಕೆಂಪು ತಿಲಕವಿಟ್ಟು ರಂಗದಲ್ಲಿ ಕುಳಿತಾಗಲೇ 'ಅವ್ಯಕ್ತ ಶಿಸ್ತು' ಆವರಿಸಿಬಿಡುತ್ತದೆ. (ಶೇಣಿಯವರು ಅರ್ಥಗಾರಿಗೆ ಬಂದಾಗ ಉಂಟಾಗುತ್ತಿದ್ದಂತೆ!) ಆ ನಂತರದ ಆಟದ ಕಳೆಯೇ ಬೇರೆ. ಇದು ಅನುಭವವೇದ್ಯ.

ಪೆರಾಜೆಯ ಯಕ್ಷಗಾನ ಇತಿಹಾಸದಲ್ಲಿ ಚನಿಯ ನಾಯ್ಕರ ಹೆಸರು ಅಜರಾಮರ. ಸುಮಾರು ಏಳರ ದಶಕದಲ್ಲಿ ಇವರ ಸಮರ್ಥ ನಿರ್ದೇಶನ ಮತ್ತು ಪ್ರಕಾಶ್ಚಂದ್ರ ರಾವ್ ಬಾಯಾರು ಇವರ ಗುರುತ್ವದಲ್ಲಿ ರೂಪುಗೊಂಡ ತಂಡಗಳ ಪ್ರದರ್ಶನ ಮತ್ತು ಅವು ಬಾಚಿದ ಪುರಸ್ಕಾರಗಳು ಕಾಲದ ದಾಖಲೆಗಳು. ಮತ್ತೆ ಪುನಃ 87-88ರ ಸುಮಾರಿಗೆ ಚಿಗುರೊಡೆದು ಗಿಡವಾಗಿತ್ತು. ಆದರೆ ಗಿಡದ ಆರೋಗ್ಯ ಮಾತ್ರ ಮೊದಲಿನಂತಿರಲಿಲ್ಲ!

ಚನಿಯರು ಅಜಾತ ಶತ್ರು. ಅವರು ಪೆರಾಜೆಯಲ್ಲಿ ಬಸ್ಸಿಳಿದು ಹೋಟೆಲ್ ಬಾಬಣ್ಣದ ಹೋಟೆಲಿನಲ್ಲಿ ಚಹಾ ಕುಡಿದಾದ ಬಳಿಕವೇ ಮುಂದಿನ ಪ್ರಯಾಣ. ನಮ್ಮ ಮನೆಗೆ ಒಂದೂವರೆ ಕಿಲೋಮೀಟರ್ ದೂರವಷ್ಟೇ. ನಾಯಕರು ನಮ್ಮನೆಗೆ ತಲಪುವಾಗ ಭರ್ತಿ ಎರಡು ಗಂಟೆ! ಕಾರಣ, ಅವರನ್ನು ಮಾತನಾಡಿಸುವ, ಅವರಿಗೆ ಚಹ-ಬೀಡಿ ನೀಡಿ ಗೌರವಿಸುವ ಅಭಿಮಾನಿಗಳಿದ್ದರು.

ಪೆರಾಜೆಯಲ್ಲಿ ನಾಯ್ಕರ ಹೆಸರು, ಅವರ ಭಾಗವತಿಕೆ ಮನೆಮಾತು. ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು. ಅಸೌಖ್ಯದಿಂದ ಒಂದು ಬರಲಾಗದಿದ್ದರೆ ಊರಿನವರಿಗೆ ಏನೋ ಕಳಕೊಂಡ ಭಾವ. ಹೀಗಾದಾಗ ಇನ್ನೊಂದು ದಿವಸ ಬಂದು, ಅಲ್ಲಿನ ಸಂಘದ ಕೆಲವರ ಮನೆಗೆ ಹೋಗಿ ಚಹಾ ಕುಡಿದು, ಮಾತನಾಡಿಸುವ ದೊಡ್ಡಗುಣ.
(ಮುಂದಿನ ಕಂತಲ್ಲಿ ಮುಂದುವರಿಯುವುದು)

Saturday, January 2, 2010

'ಹಿರಿಯಣ್ಣ'ನ ಒಡನಾಟದ ನೆನಪುಮರೆಯಾದವರು-ಮರೆಯಲಾಗದವರು ಮಾಲಿಕೆ - ೨


(ದಾಸರಬೈಲು ಚನಿಯ ನಾಯ್ಕರು ಸುಳ್ಯ ಸನಿಹದ ಮರ್ಕಂಜದವರು. ಯಕ್ಷಗಾನ ಭಾಗವತರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕರ ಗರಡಿಯಲ್ಲಿ ಪಳಗಿದವರು. ಅವರು ಮರಣಿಸಿ ದಶಕಗಳು ಸಂದಿವೆ. ಅವರ ಒಡನಾಟದ ನೆನಪನ್ನು ಮೆಲುಕು ಹಾಕುವುದು ಬರೆಹದ ಉದ್ದೇಶ. 2004 ರಲ್ಲಿ ಅವರ ಕುರಿತಾದ ಸಂಸ್ಮರಣ ಕೃತಿ 'ಯಕ್ಷಕೋಗಿಲೆ' ಎಂಬುದನ್ನು ಸಂಪಾದಿಸಿದ್ದೆ. ಅದರಲ್ಲಿರುವ ನನ್ನ ಬರೆಹವನ್ನು ಮೂರ್ನಾಲ್ಕು ಕಂತುಗಳಲ್ಲಿ ಇಲ್ಲಿ ನಿರೂಪಿಸುತ್ತಿದ್ದೇನೆ.)

ಒಂದು ಕಾಲಘಟ್ಟದಲ್ಲಿ ಸುಳ್ಯ ತಾಲೂಕಿನಲ್ಲಿ ನಡೆಯುತ್ತಿದ್ದ ಕೂಟಾಟಗಳಲ್ಲಿ ದಾಸರಬೈಲು ಚನಿಯ ನಾಯ್ಕರಿಗೆ ಮೊದಲ ಮಣೆ. ಅವರಿಲ್ಲದೆ ಕಾರ್ಯಕ್ರಮಗಳಿಲ್ಲ. ಯಾವುದೇ ಯಕ್ಷಗಾನ ಸಂಬಂಧಿ ಕರಪತ್ರದಲ್ಲಿ ಚನಿಯರ ಹೆಸರು ಇಲ್ಲದಿರುವುದು ವಿರಳ.
ಚನಿಯರು ಗತಿಸಿ (7-8-1999) ದಶಕಗಳೇ ಸಂದುವು. ಅವರು ಜಾಗಟೆ ಹಿಡಿಯುತ್ತಿದ್ದಷ್ಟು ಕಾಲ ರಂಗೇರುತ್ತಿದ್ದ ರಂಗವೀಗ ಮಸುಕು.

ಚೌಕಿಯಲ್ಲಿ ಸದ್ದಿಲ್ಲದೆ, ಸದ್ದುಮಾಡದೆ ಇರುವ ನಾಯ್ಕರು ಏನೂ ಅರಿಯದವರಂತೆ ಇದ್ದು ಬಿಡುವುದು ಜಾಯಮಾನ. ಆದರೆ ಜಾಗಟೆ ಹಿಡಿದಾಗ ಅವರೊಳಗಿನ 'ಸಮರ್ಥ ನಿರ್ದೇಶಕ' ಅನಾವರಣಗೊಳ್ಳುತ್ತಾನೆ. 'ನಿರ್ದೇಶನ’ ಎಂಬುದು ಹೇರುವ ಸರಕಾಗಬಾರದು. ಅದು ಸ್ವ-ರೂಢವಾಗಿ ಬರಬೇಕು. ಚನಿಯರು ರಂಗದಲ್ಲಿದ್ದರೆ ವೇಷಧಾರಿಗೆ ಅರಿವಾಗದಂತೆ ರಂಗವನ್ನು ನಿರ್ದೇಶಿಸುತ್ತಿದ್ದರು. ಇದು ಅವರ ಜಾಣ್ಮೆ. ನಿರ್ದೇಶನ ಎಂಬುದು ಅಹಂಕಾರ ಪ್ರಕಟಣೆಯ ಹುದ್ದೆಯಲ್ಲ ಎಂಬುದನ್ನು ನಾಯ್ಕರು ನಡೆದು ತೋರಿದವರು.

ಹತ್ತು ಗಂಟೆಗೆ ಆಟ ಶುರುವೆಂದರೆ, ಹವ್ಯಾಸಿ ರಂಗದಲ್ಲಿ ಭಾಗವತನಾದವ 9-55ಕ್ಕೆ ಚೌಕಿಗೆ ಬಂದು ಗಡಿಬಿಡಿ ಮಾಡುವ ಸ್ಥಿತಿ ಎಷ್ಟೋ ಸಲ ನೋಡಿದ್ದೆ. ಇದಕ್ಕೆ 'ಬ್ಯುಸಿ'ಯ ಲೇಪ! ಚನಿಯರು ಇಂತಹ ಅಪವಾದದಿಂದ ದೂರ. ಆಟ ಎಷ್ಟು ಹೊತ್ತಿಗೆ ಶುರುವಾಗಲಿ, ಎಂಟು ಗಂಟೆಗೆಲ್ಲಾ ಚೌಕಿಯಲ್ಲಿ ಹಾಜರ್. ಇದು ಭಾಗವತನ ಶಿಸ್ತು, ನಿಯಮ. ಪೆರಾಜೆಯಲ್ಲಿ ನಡೆಯುತ್ತಿದ್ದ ಆಟ, ಕೂಟಗಳಿಗೆ ಚನಿಯರು ಬೆಳಿಗ್ಗೆಯೇ ಬರುತ್ತಿದ್ದರು. ನಮ್ಮಲ್ಲಿ ವಿಶ್ರಾಂತಿಯಾಗಿ ಆಟಕ್ಕೆ ಹೋಗುತ್ತಿದ್ದರು. ಇದು ಕೆಲವರ ಕಂಗೆಣ್ಣಿಗೂ ಗುರಿಯಾಗಿತ್ತು!

ಒಂದು ರಾತ್ರಿ ಎರಡ್ಮೂರು ಕಾರ್ಯಕ್ರಮಕ್ಕೆ ಒಪ್ಪಿ, ಸಂಘಟಕರ ಚಿತ್ತಸ್ಥೈರ್ಯವನ್ನು ಪರೀಕ್ಷಿಸುವ ಭಾಗವತರುಗಳನ್ನು ಹತ್ತಿರದಿಂದ ಬಲ್ಲೆ. ಎಷ್ಟು ಹೊತ್ತಿಗೇ ಬರಲಿ 'ಕವರ್ ಮಾತ್ರ ಫುಲ್' ಇರಲೇಬೇಕು! ಇಲ್ಲದಿದ್ದಲ್ಲಿ ಜಗಳ ತೆಗೆವವರ ನೆನಪಿನ್ನೂ ಮಾಸಿಲ್ಲ. ಚನಿಯರು ಎಂದೂ 'ಕವರಿಗಾಗಿ' ಭಾಗವತಿಗೆ ಮಾಡಿಲ್ಲ. ಭಾಗವತನ ಶಿಸ್ತು ಮತ್ತು ಗೌರವವನ್ನು ಕವರಿಗೆ ಒತ್ತೆಯಿಡುತ್ತಿರಲಿಲ್ಲ.

ಒಂದು ರಾತ್ರಿಗೆ ಒಂದೇ ಕಾರ್ಯಕ್ರಮ. ಅನಿವಾರ್ಯವೆಂದಾದಲ್ಲಿ ಸಂಘಟಕರಿಗೆ ಹೊರೆಯಾಗದಂತೆ ವ್ಯವಹಾರ.
ಚನಿಯ ನಾಯಕರಿಗೆ ಬೆಳಗ್ಗಿನ ಜಾವ ಭಾಗವತಿಕೆ ಇದೆಯೆನ್ನಿ. ಮೊದಲು ಒಬ್ಬರೋ, ಇಬ್ಬರೋ ಭಾಗವತರ ಪಾಳಿ ಇದ್ದೇ ಇದೆ. ಆ ಹೊತ್ತಲ್ಲಿ ಚೌಕಿಯಲ್ಲಿ ಮುಸುಕೆಳೆದು, ಗೊರಕೆ ಹೊಡೆದು, ಚೌಕಿಯ ಪಾವಿತ್ರ್ಯತೆಯನ್ನು ಎಂದೂ ಕೆಡಿಸುತ್ತಿರಲಿಲ್ಲ. ಇತರರ ಭಾಗವತಿಕೆಯನ್ನು ಕೇಳುವ, ಪ್ರಶಂಸಿಸುವ ದೊಡ್ಡ ಗುಣ ಇತ್ತು.
(ಮುಂದಿನ ಕಂತಲ್ಲಿ ಮುಂದುವರಿಯುವುದು)