1998ರ ಸಮಯ. ನನಗಾಗ ಬಹುತೇಕ ರಾತ್ರಿಗಳೆಲ್ಲಾ ಹಗಲು! ಕುಳಿತಲ್ಲಿ, ನಿಂತಲ್ಲಿ ಆಟದ್ದೇ ಮಾತು, ಧ್ಯಾನ. 'ನಿನ್ನೆ ಹಾಗಾಯಿತು, ಇಂದು ಹೀಗಾಗಬಹುದು' - ಈ ವ್ಯಾಪ್ತಿಯೊಳಗೆ ಮಾತಿನ ಸುರುಳಿ. ಅವಕಾಶ, ಬಹುಬೇಡಿಕೆ ಬರುತ್ತಿರುವುದರಿಂದ ಮನದೊಳಗೆ 'ಒಣಜಂಭ'.
ಅಂದು 'ಕಂಸವಧೆ' ಪ್ರಸಂಗ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಭಾಗವತಿಕೆ. ನನ್ನ 'ಕೃಷ್ಣ'. ಹೊಸಹಿತ್ಲು ಮಹಾಲಿಂಗ ಭಟ್ಟರ 'ಅಕ್ರೂರ'. ಅವರ ಕಲಾಗಾರಿಕೆಯನ್ನು ಹೇಳಿ-ಕೇಳಿ ಗೊತ್ತಿತ್ತೇ ವಿನಾ, ನೋಡಿದ್ದಿರಲಿಲ್ಲ, ಮಾತನಾಡಿದ್ದಿರಲಿಲ್ಲ. ಎಂದಿನಂತೆ ಚೌಕಿಗೆ ಹೋದಾಗ ಮಾತನಾಡಿಸುವ ಸ್ನೇಹಿತರು(?) ಸಿಕ್ಕರು. ಒಂದಷ್ಟು ಹೊತ್ತು ನಿನ್ನೆಯದೋ, ಮೊನ್ನಿನದೋ ಆಟದ ಕುರಿತು ವ್ಯಂಗ್ಯ, ಕ್ಲೀಷೆ, ಹೊಗಳಿಕೆ.. ನಡೆಯುತ್ತಲೇ ಇತ್ತು. 'ಇಂದಿನ ಆಟದ ಸುದ್ದಿ' ಯಾರೂ ಮಾತನಾಡುತ್ತಿಲ್ಲ.
'ಕಾರಂತ್ರೆ, ಲಿಂಗಣ್ಣ ಅವರಲ್ಲಿ ಮಾತನಾಡಿದ್ರಾ' ಎಂದರು ತೆಂಕಬೈಲು. 'ಪರಿಚಯವಿಲ್ಲ' ಎಂದೆ. ದೇವರ ಪೆಟ್ಟಿಗೆಯ ಹತ್ತಿರ ವಿಶ್ರಾಂತಿಯಲ್ಲಿದ್ದ ಅವರ ಬಳಿಗೆ ಕರೆದೊಯ್ದ ಭಾಗವತರು ಪರಿಚಯ ಮಾಡಿಕೊಟ್ಟರು. 'ಇವರಾ. ಕಾರಂತ್ರು ಅಂದ್ರೆ.. ಏನಯ್ಯಾ.. ಹೇಗಿದ್ದೀರಿ' ಎಂಬ ಮೊದಲ ಮಾತು ಅವರದ್ದೇ ಆಯಿತು. 'ಈ ಪ್ರಸಂಗದಲ್ಲಿ ಎಷ್ಟು ಕೃಷ್ಣನ ವೇಷ ಮಾಡಿದ್ರಿ' ಎಂಬುದು ಮರುಪ್ರಶ್ನೆ.
ಈ ಪ್ರಶ್ನೆಯಲ್ಲಿದ್ದ ಹಿರಿತನ ನನ್ನನ್ನು ಚುಚ್ಚಿತು. ನಿಜಕ್ಕೂ ಸ್ತ್ರೀಪಾತ್ರದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ನಾನು ಪುರುಷ ಪಾತ್ರಗಳನ್ನು ಮಾಡಿದ್ದೂ ಕಡಿಮೆ. ಈ ಪ್ರಶ್ನೆ ನನ್ನ ಅರ್ಧ ಶಕ್ತಿಯನ್ನು ಉಡುಗಿಸಿತ್ತು. 'ಒಂದೆರಡು ಮಾಡಿದ್ದೇನೆ' ಎಂದೆ. 'ಊಟ ಆಯಿತಾ' ಎಂದರು. 'ಬನ್ನಿ.. ಮಾತನಾಡುತ್ತಾ ಊಟ ಮಾಡೋಣ' ಎಂದು ಎದ್ದರು.
ನನಗೆ ಆಶ್ಚರ್ಯವಾಯಿತು. ನನಗೋ 30-32 ಆದರೆ ಅವರಿಗೋ 60 ಮೀರಿದ ಹರೆಯ. 'ಇಂದು ನನ್ನನ್ನು ಲಗಾಡಿ ಕೊಡ್ತಾರೆ' ಎಂದು ಮನಸ್ಸಿನಲ್ಲೇ ಸಂಘಟಕರಿಗೆ ಹಿಡಿಶಾಪ ಹಾಕುತ್ತಾ ಹೆಜ್ಜೆ ಹಾಕಿದೆ. 'ಬನ್ನಿ.. ಒಳ್ಳೆಯ ಗಾಳಿ ಇದೆ. ಇಲ್ಲೇ ಮಾತನಾಡೋಣ.. ನಿಮ್ಮ ಬಗ್ಗೆ ಕೇಳುತ್ತಾ ಇದ್ದೇನೆ. ಪತ್ರಿಕೆಗಳಲ್ಲಿ ಲೇಖನ ಒದುತ್ತಾ ಇದ್ದೇನೆ..' ಹೀಗೆ 'ಹೊಗಳುತ್ತಾ' (ಹೊಗಳಿದಾಗ ಉಬ್ಬುವುದು ಸಹಜ ಧರ್ಮ!) ಹೋದ ಹಾಗೆ ಅಂಜಿಕೆ ದೂರವಾಗುತ್ತಾ ಹೋಯಿತು.
'ಸರಿ.. ಜಲದಿಸುತೆಯಳ.. ಈ ಪದ್ಯಕ್ಕೆ ಏನು ಅರ್ಥ ಹೇಳ್ತೀರಿ ನೋಡ್ವಾ' ಎಂದರು. ನನಗೆ ಗೊತ್ತಿರುವಷ್ಟನ್ನು ಒಪ್ಪಿಸಿದೆ. ಎರಡನೇ ಪದ್ಯ, ಮೂರನೇ ಪದ್ಯ.. ಹೀಗೆ ನನ್ನ ಸಂದರ್ಶನ ಮುಗಿಸಿದರು. ನಂತರ ಅಕ್ರೂರದ ಪದ್ಯದ ಪಾಳಿ ಬಂದಾಗ, 'ನಾನು ಏನು ಹೇಳ್ತೇನೆ ಎಂಬುದನ್ನು ಈಗ ಹೇಳುವುದಿಲ್ಲ. ನನ್ನ ಜತೆಯಲ್ಲೇ ಬಂದರೆ ಆಯಿತು' ಎಂದರು. ನಿಜಕ್ಕೂ 'ತಲೆಬುಡ' ಗೊತ್ತಾಗಲಿಲ್ಲ.
ಮೇಕಪ್ಗೆ ಕುಳಿತೆ. 'ಸ್ತ್ರೀವೇಷ ಮಾಡುವವರು ಪುರುಷ ವೇಷ ಮಾಡಬಾರದು' ಎಂದು ನನ್ನ ಮೇಕಪ್ ನೋಡಿ ಗೇಲಿ ಮಾಡಿದರು! ಆಟ ಶುರುವಾಯಿತು, ಪ್ರವೇಶವಾಯಿತು. ತೆಂಕಬೈಲು ಭಾಗವತರ 'ಬೆಟ್' ಪ್ರಸಂಗದಲ್ಲಿ 'ಕಂಸವಧೆ'ಯೂ ಒಂದು. ಅಂದಿನ ಪದ್ಯವನ್ನು ಜ್ಞಾಪಿಸಿಕೊಂಡರೆ ರೋಮಾಂಚನವಾಗುತ್ತದೆ. ಮೊದಲ ಪದ್ಯಕ್ಕೆ ಅರ್ಥ ಹೇಳಿದೆ. ಅವರೂ ಮಾತನಾಡಿದರು. ನಿರರ್ಗಳವಾದ ಮಾತುಗಾರಿಕೆ. ಶಬ್ದ ಶಬ್ದಗಳಲ್ಲಿ ಭಾವನೆಗಳು. ಅಂದಿನ ಅವರ ಅರ್ಥಗಾರಿಕೆ ಹೇಗಿತ್ತೆಂದರೆ ಅದರಲ್ಲೆಲ್ಲಾ ಪ್ರಶ್ನೆಗಳೇ ತುಂಬಿದ್ದುವು. ಅವಕ್ಕೆ ನಾನು ಉತ್ತರ ಕೊಟ್ಟರೆ ನನ್ನ ಅರ್ಥ ತುಂಬಿದಂತೆ. ಉತ್ತರ ಹೇಳಲಾಗದಿದ್ದರೆ 'ಹಾಗಲ್ವೋ ಕೃಷ್ಣ' ಎಂದು ಅವರೇ ಉತ್ತರ ಹೇಳುತ್ತಿದ್ದರು.
ಮೊದಲು ಅವರ ಬಗ್ಗೆ ನಾನು ಯಾವ ಭಾವ ಇಟ್ಟುಕೊಂಡಿದ್ದೆನೋ, ಆಟ ಮುಗಿಯುವಾಗ ನಿರಾಳ. ಅಂದಿನ ಆಟಕ್ಕೆ ನಿರೀಕ್ಷೆಗಿಂತ ಹತ್ತು ಅಂಕ ಅಧಿಕವೇ. ಅಂದಿನ 'ಕೃಷ್ಣ-ಅಕ್ರೂರ' ಜತೆಗಾರಿಕೆ ನನಗಂತೂ ಮಾಸದ ನೆನಪು. ಮುಂದೆ ಆ ಪ್ರಸಂಗದಲ್ಲಿ 'ಕೃಷ್ಣ'ನ ಪಾತ್ರ ಪಾಲಿಗೆ ಬಂದಾಗ ಲಿಂಗಣ್ಣ ನೆನಪಿಗೆ ಬರುತ್ತಾರೆ.
ನಂತರದ ಕೆಲವು ಆಟಗಳಿಗೆ ಅವರು ಕೆಲವು ಪಾತ್ರಗಳಿಗೆ ನನ್ನನ್ನೆ ಆಯ್ಕೆ ಮಾಡಿ ಸಂಘಟಕರಿಂದ ಹೇಳಿಸುತ್ತಿದ್ದರು. ಕೃಷ್ಣಾರ್ಜುನ ಕಾಳಗದ ಅವರ 'ಅರ್ಜುನ' ಪಾತ್ರಕ್ಕೆ ಮೂರ್ನಾಲ್ಕು ಬಾರಿ ನನ್ನ 'ಸುಭದ್ರೆ'ಯ ಜತೆಯಾಗಿತ್ತು. 1994-95ರ ಸುಮಾರಿಗೆ ಅಡೂರು ಶ್ರೀಧರ ರಾಯ ಮನೆಯಂಗಳದಲ್ಲಿ 'ಯಕ್ಷಗಾನ ಸಮ್ಮೇಳನ' ಜರುಗಿತ್ತು. ಅಂದು 'ದಮಯಂತಿ ಪುನರ್ ಸ್ವಯಂವರ' ಪ್ರಸಂಗದಲ್ಲಿ ಹೊಸಹಿತ್ಲು ಮಹಾಲಿಂಗ ಭಟ್ 'ಋತುಪರ್ಣ'ನ ಪಾತ್ರ, ಕೋಳ್ಯೂರು ರಾಮಚಂದ್ರ ರಾಯರ 'ದಮಯಂತಿ', ಪೆರುವಡಿ ನಾರಾಯಣ ಭಟ್ಟರ 'ಬಾಹುಕ' ಮತ್ತು ಬಲಿಪ ನಾರಾಯಣ ಭಾಗವತರ ಹಾಡುಗಾರಿಕೆ. ಆ ಹೊತ್ತಿಗೆ ಮಹಾಲಿಂಗ ಭಟ್ಟರು ಶಾರೀರಿಕವಾಗಿ ಬಳಲಿದ್ದರೂ, ಪಾತ್ರದ ಗತ್ತುಗಾರಿಕೆಯಲ್ಲಿ ಅದು ಕಂಡಿಲ್ಲ. ಬಹುಶಃ ಅವರನ್ನು ಕಂಡದ್ದು, ಮಾತನಾಡಿದ್ದು ಅದೇ ಕೊನೆ.
ಅವರ ಇಹಲೋಕ ಯಾತ್ರೆಯ ಸುದ್ದಿ ಪತ್ರಿಕೆಯಲ್ಲಿ ಕಂಡಾಗ 'ಅಕ್ರೂರ, ಋತುಪರ್ಣ, ಅರ್ಜುನ' ಪಾತ್ರಗಳೆಲ್ಲಾ ಚಿತ್ತಪಟಲದಲ್ಲಿ ಹಾದುಹೋದುವು. ಯಕ್ಷಗಾನದ ಸರ್ವಾಂಗ ಸಂಪನ್ಮೂಲವಿದ್ದರೂ ಅದರ ಪ್ರಕಾಶಕ್ಕೆ 'ವಿಧಿ'ಯ ಮಸುಕು. 'ಯೋಗ-ಯೋಗ್ಯತೆ' ಒಬ್ಬರಲ್ಲೇ ಇರುವುದಿಲ್ಲವಲ್ಲಾ!
ಮೀಯಪದವು ಹೊಸಹಿತ್ಲು ಮಹಾಲಿಂಗ ಭಟ್ (ಲಿಂಗಣ್ಣ) ಸೆಪ್ಟೆಂಬರ್ 21ರಂದು ವಿಧಿವಶರಾದರು. ಅವರಿಗೆ 76ರ ವಯಸ್ಸು. ತಂದೆ ಹೊಸಹಿತ್ಲು ಗಣಪತಿ ಭಟ್, ತಾಯಿ ವೆಂಕಮ್ಮ. ಬಾಲ್ಯದಿಂದಲೇ ಯಕ್ಷಗಾನ ಉಸಿರು. ಶ್ರೀಧರ್ಮಸ್ಥಳ ಮೇಳದಲ್ಲಿ ಹದಿನೈದು ವರುಷ, ಕಟೀಲು, ಸುರತ್ಕಲ್, ಕೂಡ್ಲು, ಬಪ್ಪನಾಡು, ಮೂಲ್ಕಿ, ಪುತ್ತೂರು ಮೇಳಗಳಲ್ಲಿ ತಲಾ ಎರಡು ವರುಷಗಳಂತೆ ವ್ಯವಸಾಯ. ನಿವೃತ್ತಿಯ ಬಳಿಕ ಹವ್ಯಾಸಿ ಸಂಘಗಳಲ್ಲಿ ಭಾಗಿ. ಯಕ್ಷಗಾನ ಶಿಕ್ಷಕನಾಗಿ ಹಲವಾರಿ ಶಿಷ್ಯರನ್ನು ರೂಪಿಸಿದ್ದಾರೆ
ಅಭಿಮನ್ಯು, ಬಬ್ರುವಾಹನ, ಕೃಷ್ಣ, ಪರಶುರಾಮ, ಮಕರಾಕ್ಷ, ಭೀಷ್ಮ, ಕಾರ್ತವೀರ್ಯ.. ಮೊದಲಾದ ಪಾತ್ರಗಳು ಹೈಲೈಟ್ಸ್. ಎಲ್ಲವೂ ಗಂಡುಗತ್ತಿನವುಗಳು. .
ಅಗಲಿದ ಹಿರಿಯ ಚೇತನಕ್ಕೆ ಕಂಬನಿ.
ಒಂದೆರಡು ವೇಶಗಳನ್ನು ಕಂಡಿದ್ದೇನೆ ....ಅದ್ಭುತ ಸರ್ವಾಂಗೀಣ ಕಲಾವಿದರು. ನುಡಿನಮನಕ್ಕೆ ಧನ್ಯವಾದಗಳು
ReplyDelete