Thursday, September 29, 2011

ಮನ ಸೆಳೆಯುವ 'ತದ್ರೂಪಿ ಯಕ್ಷ'ರು

'ಪುತ್ತೂರಿನ ಕಾನಾವು ಮನೆಯಲ್ಲಿ ಯಕ್ಷಗಾನ ವೇಷಗಳಿವೆ,' ಮಿತ್ರ ಪ್ರಕಾಶ್ ಕೊಡೆಂಕಿರಿ ಸುಳಿವು ಕೊಟ್ಟರು. 'ಹತ್ತರೊಟ್ಟಿಗೆ ಹನ್ನೊಂದು' ಎನ್ನುತ್ತಾ ಉದಾಸೀನ ತೋರಿದೆ. ಅವರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಹೋಗಿ ನೋಡ್ತೇನೆ, ಕಲಾವಿದರೇ ವೇಷತೊಟ್ಟು ಅಲ್ಲಿ ನಿಂತಿದ್ದರು!

ಅಲ್ಲಿದ್ದುದು ಯಕ್ಷಗಾನದ ವೇಷಗಳ ಮುಖವಾಡವಲ್ಲ, ತದ್ರೂಪಿ ಪ್ರತಿಕೃತಿ. 'ಯಕ್ಷಗಾನದ ವೇಷವೊಂದನ್ನು ನಮ್ಮ ಕಣ್ಣುಗಳು ಹೇಗೆ ನೋಡ್ತದೋ, ಅದರಂತೆ ಈ ರಚನೆ' ಎಂದು ಪರಿಚಯಿಸಿದರು, ಕಲಾವಿದ ಕುಂದಾಪುರದ ಪ್ರಕಾಶ್ ಕೋಣಿ.

ಯಕ್ಷಗಾನ ಮುಖವಾಡಗಳಿಂದು ಸಮಾರಂಭಗಳಲ್ಲಿ ಸ್ಮರಣಿಕೆಗಳಾಗಿ ಪ್ರಸಿದ್ಧಿಯಾಗಿವೆ. ಮಂಗಳೂರು, ಕಾರ್ಕಳಗಳಲ್ಲಿ ವೇಷದ ಪ್ರತಿಕೃತಿಗಳು ಮ್ಯೂಸಿಯಂಗಳಲ್ಲಿವೆ. ಅಡೂರು ಶ್ರೀಧರ ರಾಯರು ಸ್ವತಃ ಯಕ್ಷಗೊಂಬೆಗಳನ್ನು ಪಾರಂಪರಿಕ ರೀತಿಯನ್ನು ತಯಾರಿಸುತ್ತಾರೆ. ಪ್ರಕಾಶ್ ಕೋಣಿಯವರ 'ತದ್ರೂಪಿ ಯಕ್ಷ'ರು ಈ ಎಲ್ಲಾ ಕಲಾಗಾರಿಕೆಗಳಿಗಿಂತ ಭಿನ್ನ. ರಚನೆಗಳಲ್ಲಿ ವ್ಯತ್ಯಾಸವಿಲ್ಲದಿದ್ದರೂ ವಿನ್ಯಾಸಗಳಲ್ಲಿ ತುಸು ಭಿನ್ನ.

ವೇಷಧಾರಿಯು ಪಾತ್ರಕ್ಕೆ ಸಿದ್ಧವಾಗಲು ಏನೆಲ್ಲಾ ಪರಿಕರಗಳನ್ನು ಬಳಸಿಕೊಳ್ಳುತ್ತಾರೋ ಅವೆಲ್ಲಾ ಇಲ್ಲಿವೆ ಉದಾ. ಸಾಕ್ಸ್, ಗೆಜ್ಜೆ, ಕಚ್ಚೆ, ಕಿರೀಟ, ಆಭರಣಗಳು.. ಇತ್ಯಾದಿ. ಹಾಗಾಗಿ ತದ್ರೂಪಿಯ ಮುಂಭಾಗ ಎಷ್ಟು ಸೌಂದರ್ಯವಾಗಿ ಕಾಣುತ್ತದೋ, ಅಷ್ಟೇ ಹಿಂಭಾಗವೂ ಕೂಡಾ. ತದ್ರೂಪಿಯನ್ನು ನಿಲ್ಲಿಸಿದಾಗ ಕಲಾವಿದನೇ ವೇಷತೊಟ್ಟು ನಿಂತಂತೆ ಭಾಸವಾಗುತ್ತದೆ.

ಬಳಸುವ ಬಟ್ಟೆ, ತೊಡುವ ಆಭರಣದ ಗಾತ್ರ, ಕಿರೀಟ, ಕೇಶ.. ವಿನ್ಯಾಸಗಳಲ್ಲಿ ರಾಜಿಯಿಲ್ಲ. ಹಾಗಾಗಿ ಒಂದು ತದ್ರೂಪಿ ಸೃಷ್ಟಿಯಾಗಲು ವಾರಗಟ್ಟಲೆ ಬೇಕಂತೆ. ಖರ್ಚೂ ಅಧಿಕ. ಈಗಾಗಲೇ ಬಹಳಷ್ಟು ಮಂದಿ ಮೆಚ್ಚಿಕೊಂಡು, ಪ್ರಕಾಶರ ಬೆನ್ನುತಟ್ಟಿದ್ದಾರೆ, ತದ್ರೂಪಿ ಯಕ್ಷರನ್ನು ಮನೆಯೊಳಗೆ ಸೇರಿಸಿಕೊಂಡಿದ್ದಾರೆ.

'ತದ್ರೂಪಿ ಆಕರ್ಷಕವಾಗಿದೆ. ನನ್ನ ಕ್ಲಿನಿಕ್ನಲ್ಲಿ ಇಟ್ಟಿದ್ದೇನೆ. ಎಲ್ಲರೂ ಇದರ ನೋಟಕ್ಕೆ ಮಾರುಹೋಗಿ ವಿಚಾರಿಸುತ್ತಿದ್ದಾರೆ' ಎನ್ನುತ್ತಾರೆ ಪುತ್ತೂರಿನ ವೈದ್ಯ ಡಾ.ವಿಶ್ವನಾಥ ಭಟ್ ಕಾನಾವು.

ತದ್ರೂಪಿಗಳ ಎತ್ತರ ಎರಡೂವರೆ ಅಡಿ. ಐದರಿಂದ ಆರು ಕಿಲೋ ಭಾರ. ಮುಖ ರಚನೆಯಲ್ಲಿ ಪೈಬರ್ ಬಳಸಿದ್ದರಿಂದ ಅಂದ ಹೆಚ್ಚು. ಗ್ಲಾಸ್ಮನೆ(ಚೌಕಟ್ಟು)ಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು.

ಪ್ರಕಾಶರಿಗೆ ಬಾಲ್ಯದಿಂದಲೇ ಯಕ್ಷಗೀಳು. ಚೌಕಿಯಲ್ಲಿ ರಾತ್ರಿ ಹೋಗಿ ಕುಳಿತರೆ, ಬೆಳಿಗ್ಗೆಯೇ ಹೊರಬರುವುದು! ಪಾತ್ರಧಾರಿ ಬಣ್ಣ ಹಾಕುವಲ್ಲಿಂದ, ರಂಗಕ್ಕೆ ಹೋಗಿ ಪುನಃ ವೇಷ ಬಿಚ್ಚುವ ತನಕ ನೋಡಿ ಆನಂದಿಸುವ ಅಪರೂಪದ ಚಾಳಿ! 'ಇಲ್ಲೇನು ಮಾಡ್ತೆ. ಆಟ ನೋಡು' ಎಂದು ಕಲಾವಿದರು ಅಬ್ಬರಿಸಿದರೂ, ಪ್ರಕಾಶ್ ಜಪ್ಪೆನ್ನುತ್ತಾ ಬಣ್ಣದ ಮನೆಯಲ್ಲೇ ಆಟ ನೋಡ್ತಾರೆ.

ಯಕ್ಷಗಾನದ ವೇಷ ತಯಾರಿಯನ್ನು ನೋಡುವ ಅವರ ಚಪಲವೇ 'ತದ್ರೂಪಿ ಯಕ್ಷ'ರ ಸೃಷ್ಟಿಯ ಹಿನ್ನೆಲೆ. ಬಣ್ಣದ ಮನೆಯಲ್ಲಿ ನೋಡಿದ ದೃಶ್ಯಗಳು ಮಸ್ತಕದ ಕಂಪ್ಯೂಟರಿನಲ್ಲಿ ದಾಖಲು. 'ಆರಂಭದ ದಿವಸಗಳಲ್ಲಿ ಇದಕ್ಕೆ ಬೇಕಾದ ಪರಿಕರಗಳು ಅಂಗಡಿಯಲ್ಲಿ ಸಿಕ್ತದೆ ಅಂತ ಗೊತ್ತಿರಲಿಲ್ಲ. ನಂತರ ತಿಳಿಯಿತು' ಎನ್ನುತ್ತಾರೆ.

ಏಕಲವ್ಯ ಅಭ್ಯಾಸ. ಮಾಡುತ್ತಾ ಕಲಿತರು. ತದ್ರೂಪಿಗಳ ಆಕರ್ಷಕ ವಿನ್ಯಾಸ ಮತ್ತು ನೋಟಕ್ಕೆ ಮಾರು ಹೋದ ಕಲಾವಿದರನ್ನು ಪ್ರಕಾಶ್ ಜ್ಞಾಪಿಸಿಕೊಳ್ಳುತ್ತಾರೆ. ಪ್ರಕಾಶರ ಅಕ್ಕ ದ.ಕ.ಜಿಲ್ಲೆಯ ಸವಣೂರಿನಲ್ಲಿ ಅಧ್ಯಾಪಿಕೆ. ಅವರ ಮೂಲಕ ಕಾನಾವು ಶ್ರೀದೇವಿಯವರ ಪರಿಚಯ. ಪ್ರಕಾಶರ ಕಲಾಗಾರಿಕೆಯನ್ನು ನೋಡಿದ ಇವರು ಮುಂದಿನ ಅಭ್ಯಾಸಕ್ಕಾಗಿ ಸುಳ್ಯದ ಕಲಾವಿದ ಜೀವನರಾಂ ಗುರುಕುಲಕ್ಕೆ ಹಾದಿ ತೋರಿದರು. ’ನನಗೆ ಕಲಾ ಕಲಿಕೆಯ ಬಾಲಪಾಠದ ಶೈಕಣಿಕ ಕೊರತೆಯಿದೆ ಎಂದು ಇಲ್ಲಿಗೆ ಬಂದ ಮೇಲೆ ತಿಳಿಯಿತು' ಎನ್ನುತ್ತಾರೆ ಪ್ರಕಾಶ್.

ಬೆಂಗಳೂರು ಸನಿಹದ ಬಿಡದಿಯ ಕಲಾಶಾಲೆಯಲ್ಲಿ ಅಕಾಡೆಮಿಕ್ ಅಭ್ಯಾಸ. ಶಿಲ್ಪಕಲೆಯಲ್ಲಿ ವಿಶೇಷ ಕಲಿಕೆ. ಒಂದೂವರೆ ವರುಷ ಕಲಿಕೆಯೊಂದಿಗೆ ಪ್ರಾಕ್ಟಿಕಲ್. 'ನಿಜಕ್ಕೂ ನನಗೊಂದು ಟರ್ನಿಂಗ್ ಪಾಯಿಂಟ್. ಮೊದಲೇ ಬರಬೇಕಿತ್ತು.' ಎಂದಾಗ ಅವರ ಕಲಿಕಾ ಹಸಿವು ಅರ್ಥಮಾಡಿಕೊಳ್ಳಬಹುದು.

ತದ್ರೂಪಿಗಳ ಸೃಷ್ಟಿಗೆ ಇನ್ನಷ್ಟು ವೇಗ. ಆಯ-ಆಕಾರ ಫಿನಿಶಿಂಗ್ ಪಡೆಯಿತು. 'ತದ್ರೂಪಿಗಳ ರಚನೆಗೆ ಬಹಳಷ್ಟು ಸಮಯ ಹಿಡಿಯುತ್ತದೆ. ವೆಚ್ಚವೂ ಅಧಿಕ. ಹಾಗಾಗಿ ಐದಾರು ಸಾವಿರ ದರವಿಟ್ಟರೂ ಕಡಿಮೆಯೇ. ಅಷ್ಟೊಂದು ಮೊತ್ತ ಕೊಟ್ಟು ಕೊಳ್ಳುವ ಕಲಾ ಹೃದಯವಂತರು ಇದ್ದಾರೆ. ಹೆಚ್ಚು ಬಂಡವಾಳ ಬೇಡುವ ಉದ್ದಿಮೆ. ಆದರೆ ಹೊಟ್ಟೆಪಾಡಿಗಾಗಿ ಚಾಲ್ತಿಯಲ್ಲಿರುವ ಮುಖವಾಡ ತಯಾರಿ ಕಾರ್ಯಾಗಾರವನ್ನು ಆರಂಭಿಸಬೇಕು' ಎನ್ನುತ್ತಾರೆ ಪ್ರಕಾಶ್.

ತದ್ರೂಪಿಗಳ ರಚನೆಗೆ ಬಳಸುವ ಪರಿಕರಗಳಲ್ಲಿ ರಾಜಿಯಿಲ್ಲ. ರಂಗದಲ್ಲಿ ವೇಷವನ್ನು ನೋಡಿದ ಹಾಗೆ ಇರಬೇಕು. ಆದರೆ ಮನುಷ್ಯದ ಬದಲಿಗೆ ಬೊಂಬೆ. ಉಳಿದುದೆಲ್ಲಾ ಯಥಾವತ್.

ಪ್ರಕಾಶ್ ಮುಗ್ಧ. ಸರಳ. ಮುಜುಗರದ ವ್ಯಕ್ತಿ. ಹತ್ತು ಮಾತನಾಡಿದರೆ ಒಂದು ಮಾತನಾಡಿಯಾರು. ಕಲೆಯತ್ತಲೇ ಅವರ ಮೈಂಡ್ ಸೆಟ್. 'ಎಷ್ಟೇ ಖರ್ಚು ಬೀಳಲಿ, ಕಷ್ಟವಾಗಲಿ, ತದ್ರೂಪಿ ಕೆಲಸವನ್ನು ಬಿಡುವುದಿಲ್ಲ' ಎಂದಾಗ ಇವರಿಂದ ಕಲಾಕೃತಿಯನ್ನು ಕೊಂಡು ಪ್ರೋತ್ಸಾಹಿಸೋಣ ಎಂದು ಅನ್ನಿಸುತ್ತದೆ.

(7353258662)

No comments:

Post a Comment