Tuesday, December 30, 2014

ಬಿ.ಎಸ್.ಓಕುಣ್ಣಾಯ ಸಹಸ್ರಚಂದ್ರ ದರ್ಶನ : 'ಸಾರ್ಥಕ' ಅಭಿನಂದನ ಕೃತಿ ಅನಾವರಣ

               "ಕಳೆದ ಕಾಲದ ಕಥನವನ್ನು ಅಭಿನಂದನ ಕೃತಿಗಳ ಮೂಲಕ ನೆನಪು ಮಾಡಿಕೊಳ್ಳಲು ಸಾಧ್ಯ. ಸಾಗಿ ಬಂದ ಜೀವನವನ್ನು ಮೆಲುಕು ಹಾಕುವುದರಿಂದ ವರ್ತಮಾನ ಮತ್ತು ಭವಿಷ್ಯ ಜೀವನವನ್ನು ರೂಪುಗೊಳಿಸಲು ಸಹಕಾರಿ," ಎಂದು ನಿವೃತ್ತ ಅಧ್ಯಾಪಕ ಸುರತ್ಕಲ್ಲಿನ ಪ. ಶ್ರೀರಾಮ ರಾವ್ ಹೇಳಿದರು.
            ಯಕ್ಷಗಾನ ಅರ್ಥಧಾರಿ, ನಿವೃತ್ತ ಅಧ್ಯಾಪಕ ಪಾಣಾಜೆಯ ಬಿ.ಎಸ್.ಓಕುಣ್ಣಾಯರ ಸಹಸ್ರಚಂದ್ರ ದರ್ಶನ ಸಮಾರಂಭದಲ್ಲಿ ಅಂಕಣಗಾರ ನಾ. ಕಾರಂತ ಪೆರಾಜೆ ಸಂಪಾದಕತ್ವದ 'ಸಾರ್ಥಕ' ಅಭಿನಂದನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
           ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪುತ್ತೂರಿನ ಖ್ಯಾತ ನ್ಯಾಯವಾದಿ ಸುಬ್ರಹ್ಮಣ್ಯಂ ಕೊಳತ್ತಾಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಮರ್ಶಕ, ಅರ್ಥಧಾರಿ ಡಾ.ಪ್ರಭಾಕರ ಜೋಶಿ ಸುಭಾಶಂಸನೆ ಮಾಡಿದರು. ಪುತ್ತೂರು ಶಿವಳ್ಳಿ ಸಂಪದದ ಅಧ್ಯಕ್ಷ ಭಾಸ್ಕರ ಬಾರ್ಯ ಅಭಿನಂದನಾ ನುಡಿಗಳನ್ನಾಡಿದರು.
             ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಗಾದಿಯನ್ನೇರಿದ್ದ ಅನುಜ್ಞಾ, ಸಿ.ಎ.ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ಸ್ವಪ್ನಾ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಮುರಳೀ ಕಲ್ಲೂರಾಯ, ಸಾರ್ಥಕದ ಸಂಪಾದಕ ನಾ. ಕಾರಂತ ಪೆರಾಜೆ ಮತ್ತು ಅಭಿನಂದನ ಕೃತಿಯ ಲೇಖಕರನ್ನು ಬಿ.ಎಸ್.ಓಕುಣ್ಣಾಯ-ಸರೋಜ ದಂಪತಿಗಳು ಗೌರವಿಸಿದರು. ಪಾಣಾಜೆಯ ಬೊಳ್ಳಿಂಬಳ ಓಕುಣ್ಣಾಯ ಪ್ರತಿಷ್ಠಾನವು ಪುಸ್ತಕವನ್ನು ಪ್ರಕಾಶಿಸಿದೆ.
             ಈ ಸಂದರ್ಭದಲ್ಲಿ ಪುಂಡೂರು ದಿ.ದಾಮೋದರ ಪುಣಿಂಚಿತ್ತಾಯ ನೆನಪಿನ ಸಂಮಾನವನ್ನು ಬಿ.ಎಸ್.ಓಕುಣ್ಣಾಯ ದಂಪತಿಗಳಿಗೆ ಪ್ರದಾನಿಸಲಾಯಿತು. ರಾಜಗೋಪಾಲ ಪುಣಿಂಚಿತ್ತಾಯರು ಪ್ರಾರ್ಥನೆ ಮಾಡಿದರು. ಚಂದ್ರಶೇಖರ ಓಕುಣ್ಣಾಯ ಸ್ವಾಗತಿಸಿದರು. ಎಂ.ಶರತ್ ಕುಮಾರ್ ಶಿಬರೂರಾಯ ನಿರ್ವಹಿಸಿದರು. ನಾರಾಯಣ ಕಾರಂತ ವಂದಿಸಿದರು.  

No comments:

Post a Comment