Tuesday, December 9, 2014

ಭಾಸ್ಕರ ಜೋಶಿ ಶಿರಳಗಿಯವರಿಗೆ 'ಪಾತಾಳ ಪ್ರಶಸ್ತಿ' ಪ್ರದಾನ


                  "ಕಲಾವಿದ ಮತ್ತು ಯಜಮಾನ ಇವರೊಳಗೆ ಬಹುತೇಕ ಮೇಳಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೊಂದಾಣಿಕೆಯ ಕೊರತೆ ಕಂಡು ಬರುತ್ತದೆ. ಇದು ಪ್ರದರ್ಶನದ ಒಟ್ಟಂದಕ್ಕೆ ತೊಂದರೆಯಾಗುತ್ತದೆ.  ಕಲಾವಿದರಲ್ಲಿ ಮೇಳದ ಯಜಮಾನನಾಗಿ ಕಷ್ಟ ಸುಖವನ್ನು ಅನುಭವಿಸಿದವರು ಕಡಿಮೆ. ಯಕ್ಷಗಾನದ ನಿಜವಾದ ಸಮಸ್ಯೆ, ಕಷ್ಟ ಅರಿವಾಗಲು ಕಲಾವಿದ ಒಮ್ಮೆಯಾದರೂ ಯಜಮಾನನಾಗಬೇಕು," ಎಂದು ಎಡನೀರು ಮಠದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
             ಅವರು ಎಡನೀರು ಶ್ರೀಮಠದಲ್ಲಿ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನವು ಆಯೋಜಿಸಿದ ಈ ಸಾಲಿನ 'ಪಾತಾಳ ಪ್ರಶಸ್ತಿ'ಯನ್ನು ಹಿರಿಯ ಸ್ತ್ರೀ ಪಾತ್ರಧಾರಿ ಭಾಸ್ಕರ ಜೋಶಿ ಶಿರಳಗಿಯವರಿಗೆ ಪ್ರದಾನ ಮಾಡಿ ಆಶೀರ್ವಚನ ನೀಡುತ್ತಾ, "ಶಿರಳಗಿಯವರು ಕಲಾವಿದನಾಗಿ, ಮೇಳದ ಯಜಮಾನನಾಗಿ ಸುಖ-ಕಷ್ಟಗಳನ್ನು ಸ್ವೀಕರಿಸಿದ ಕಲಾವಿದ. ಹಾಗಾಗಿ ಅವರಲ್ಲಿ ಸೌಜನ್ಯ, ಪ್ರಾಮಾಣಿಕತೆ ಮೇಳೈಸಿದೆ" ಎಂದರು.
             ಮಂಜೇಶ್ವರದ ಹಿರಿಯ ವೈದ್ಯ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿ, "ಕಳಪೆ ಪಾತ್ರವೊಂದನ್ನು ನೋಡಿ ಆ ಪ್ರಸಂಗವೇ ಪ್ರಯೋಜನವಿಲ್ಲ, ಆ ದೃಶ್ಯವೇ ಪ್ರಸಂಗದಲ್ಲಿ ಬೇಡ ಎನ್ನುವ ನಿರ್ಧಾರವನ್ನು ಕಲಾವಿದರು, ಸಂಘಟಕರು ಆತುರವಾಗಿ ತೆಗೆದುಕೊಳ್ಳುವುದುಂಟು. ಇದು ಪ್ರಸಂಗ, ಕವಿಗೆ ಅವಮಾನ ಮಾಡಿದಂತೆ. ಅದರ ಬದಲು ಯಾರು ಕಳಪೆ ಪಾತ್ರ ಮಾಡಿದ್ದಾನೋ, ಅವನ ಬದಲಿಗೆ ಅನುಭವಿ ಕಲಾವಿದರಿಂದ ಪಾತ್ರ ಮಾಡಿಸಿದರೆ ಪಾತ್ರದ ಘನತೆ ಉಳಿಯುತ್ತದೆ," ಎಂದರು.
            ಪೂಜ್ಯ ಶ್ರೀಗಳು ಶಿರಳಗಿ ಭಾಸ್ಕರ ಜೋಶಿಯವರಿಗೆ ಹಾರ, ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ನಿಧಿಯೊಂದಿಗೆ 'ಪಾತಾಳ ಪ್ರಶಸ್ತಿ'ಯನ್ನು ಪ್ರದಾನಿಸಿದರು. ಕರ್ನಾಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರೊ: ಎಂ.ಎಲ್.ಸಾಮಗರು ಶಿರಳಗಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾ ಅಭಿನಂದಿಸಿದರು. ಪ್ರತಿಷ್ಠಾನದ ಜತೆ ಕಾರ್ಯದರ್ಶಿ ನಾ. ಕಾರಂತ ಪೆರಾಜೆ ಪ್ರಶಸ್ತಿ ಪತ್ರವನ್ನು ವಾಚಿಸಿದರು.
              ಈ ಸಂದರ್ಭದಲ್ಲಿ ನಾ. ಕಾರಂತ ಪೆರಾಜೆಯವರು ಸಂಪಾದಿಸಿದ ಪಾತಾಳ ಪ್ರಶಸ್ತಿಯ ದಶಮಾನದ ನೆನಪು ಪುಸ್ತಿಕೆ 'ಉಪಾಯನ'ವನ್ನು ಪೂಜ್ಯ ಶ್ರೀಗಳು ಅನಾವರಣಗೊಳಿಸಿದರು.  ಹಿರಿಯ ಸ್ತ್ರೀವೇಷಧಾರಿ ಪಾತಾಳ ವೆಂಕಟ್ರಮಣ ಭಟ್, ಶ್ರೀರಾಮ ಪಾತಾಳ ಪೂಜ್ಯ ಶ್ರೀಗಳಿಗೆ ಫಲತಾಂಬೂಲ ನೀಡಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಪ್ರತಿಷ್ಠಾನದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಳಿಯ ಶಂಕರ ಭಟ್ ಪ್ರಸ್ತಾವನೆ ಗೈದರು. ಭಾಗವತ ರಮೇಶ ಭಟ್ ಪುತ್ತೂರು ಪ್ರಾರ್ಥನೆಗೈದರು. ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಬಿ.ಎನ್.ಮಹಾಲಿಂಗ ಭಟ್ ಬಿಲ್ಲಂಪದವು ನಿರ್ವಹಿಸಿ, ವಂದಿಸಿದರು.
                ಬಳಿಕ ಎಡನೀರು ಮೇಳದವರಿಂದ 'ಭೀಷ್ಮಾಭಿದಾನ ಮತ್ತು ಮೈಂದ-ದ್ವಿವಿದ' ಪ್ರಸಂಗಗಳ ಬಯಲಾಟ ಜರುಗಿತು.


No comments:

Post a Comment