Friday, January 2, 2015

ಹತ್ತನೇ ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದ (2-1-2015) ಉದ್ಘಾಟನೆಯ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಮೂಡಂಬೈಲು ಶ್ರೀ ಸಿ.ಗೋಪಾಲಕೃಷ್ಣ ಶಾಸ್ತ್ರಿಯವರು ಮಾಡಿದ ಅಧ್ಯಕ್ಷೀಯ ಭಾಷಣದ ಆಯ್ದ ಭಾಗ : -

          ".. ಕಲೆಯು ಧನ ಸಂಪಾದನೆಯ ಉದ್ಯಮವಾಗುವಾಗ ಅವನತಿಗೆ ಅವಕಾಶ ಹೆಚ್ಚು. ದೇಶಮಟ್ಟದಲ್ಲಿ ಸಿನೆಮಾ ಹಣ ಗಳಿಸುವ ಅತ್ಯಂತ ದೊಡ್ಡ ಕ್ಷೇತ್ರ. ಅಲ್ಲಿಯೂ ಕಲಾತ್ಮಕತೆ ನಷ್ಟವಾಗುತ್ತಾ ಬಂದಿದೆ. ಆ ಪರಿಸ್ಥಿತಿ ಯಕ್ಷಗಾನಕ್ಕೆ ಬರಬಾರದು. ಈಗ ದಿನಪತ್ರಿಕೆಗಳಲ್ಲಿ ಕಾಣುವಂತೆ, 30-35 ವೃತ್ತಿನಿರತ ಮೇಳಗಳು ಪ್ರತಿದಿನ ಪ್ರದರ್ಶನವನ್ನೀಯುತ್ತಿವೆ. ಜಾತ್ರೆ, ವಾರ್ಶಿಕೋತ್ಸವ, ಬ್ರಹ್ಮಕಲಶ.. ಇತ್ಯಾದಿಗಳಲ್ಲಿ ಬೇರೆಯೇ ಬಯಲಾಟಗಳಿರುತ್ತವೆ. ಕಾಲಬೇಧವಿಲ್ಲದೆ ಪ್ರತಿದಿನ ನೂರಾರು ತಾಳಮದ್ದಳೆಗಳು ಜರುಗುತ್ತಿವೆ. ಮುಂಬಯಿ, ಬೆಂಗಳೂರು, ಮೈಸೂರು ಮುಂತಾದ ದೂರದ ಪಟ್ಟಣಗಳನ್ನೂ ಗಣಿಸಿದರೆ, ಪ್ರತಿದಿನ 200-300ಕ್ಕಿಂತ ಹೆಚ್ಚು ಪ್ರದರ್ಶನಗಳೂ, ಕೂಟಗಳೂ ಜರಗುತ್ತಿವೆ ಎಂಬುದರಲ್ಲಿ ಸಂದೇಹವಿಲ್ಲ. ಗತ ಶತಮಾನದಲ್ಲಿ ಟೆಂಟ್ ಮೇಳಗಳು ಬಹು ಸಂಖ್ಯಾತವಾಗಿದ್ದು, ಪ್ರತಿದಿನ ಲಕ್ಷಾಂತರ ರೂಪಾಯಿ ಗಳಿಕೆಯ ಕೇಂದ್ರಗಳಾಗಿದ್ದುವು. ಕನ್ನಡ ಮಾತ್ರವಲ್ಲದೆ ತುಳು ಭಾಷಾ  ಪ್ರೇಮವೂ ಆಟಗಳಲ್ಲಿ ಬೆಸೆದು ಹೋಗಿತ್ತು. ಯಕ್ಷಗಾನ ಕಲೆಗಾಗಿ ಅಲ್ಲ, ಹಣಕ್ಕಾಗಿ ಎಂಬಂತಾಗಿತ್ತು. ಆಗ ಆಟದ ಪೂರ್ವರಂಗ ಪೂರ್ಣಮಯವಾಗಿ, ನೃತ್ಯ, ಕೋಲಾಟ ಇತ್ಯಾದಿಗಳೂ ಆ ಸ್ಥಾನಕ್ಕೆ ಬಂದಿದ್ದುವು. ಕೆಲವರು ಕೋಳಿ ಕಾಳಗ, ಕಂಬಳದ ಕೋಣ, ಭೂತದ ವೇಷ.. ಇತ್ಯಾದಿಗಳಿಗೂ ಅವಕಾಶ ಕಲ್ಪಿಸಿದ್ದರು. ಏಳು ಮಂದಿ ಭಾಗವತರು, ಒಬ್ಬನೇ ಏಕಕಾಲದಲ್ಲಿ 7-8 ಮದ್ದಳೆ ನುಡಿಸುವುದು, ದೇವಿಯ ವೇಷ ಆಕಾಶದಿಂದ ಇಳಿಯುವುದು, ಸಂಶಪ್ತಕರು ಏಳು ಮಂದಿ ಎಂಬ ತಪ್ಪು ಕಲ್ಪನೆ ಮಾಡಿಕೊಂಡು, ಏಳು ಕೇಸರಿ ತಟ್ಟಿ ವೇಷಗಳೂ ರಂಗಸ್ಥಳಕ್ಕೆ ಬಂರುವುದು (ಸಂಶಪ್ತಕರು ಏಳು ಮಂದಿ ಅಲ್ಲ. ಅವರು ರಾಕ್ಷಸರೂ ಅಲ್ಲ. ತ್ರಿಗರ್ತರಾಜ ಸಹೋದರರು) - ಹೀಗೆ ಇನ್ನೆಷ್ಟೋ ಅಸಂಬದ್ಧ, ಹೊಸ ಎಂಬ ವಿಶೇಷಣಯುಕ್ತ ಆಕರ್ಷಣೆಗಳು, ಪರಂಪರಾಗತ ಯಕ್ಷಗಾನ ಕಲೆಯನ್ನೂ ಮುರಿದು, ಮುಕ್ಕಿ ತೇಗಿದುವು! ಹಣ ಸಂಪಾದನೆಗಾಗಿ ಮಾಡುತ್ತಿದ್ದ ಈ ರೀತಿಯ ಕುತ್ಸಿತ ಪ್ರದರ್ಶನಗಳನ್ನು, ಪ್ರಾರಂಭದಲ್ಲಿ ಪ್ರೇಕ್ಷಕರು ಸಹಜ ಕುತೂಹಲದಿಂದ ಪ್ರೋತ್ಸಾಹಿಸಿದರೂ ಅನಂತರ ಸಾರಾಸಗಟಾಗಿ ತಿರಸ್ಕರಿಸಿದರು...
        ..ಜಾತಿಯತೆ ಒಂದು ಅಂಟು ಜಾಡ್ಯ. ಅದು ಸಾಮಾಜಿಕ ಕ್ಷೇತ್ರವನ್ನು ಸಾವಿರಾರು ವರ್ಷ ಹಾಳು ಮಾಡಿತು. ರಾಜಕೀಯ ಕ್ಷೇತ್ರವಂತೂ ಈ ಪಿಡುಗಿಗೆ ಬಲಿಯಾಗಿ ದೇಶವನ್ನೇ ಬಲಿಕೊಟಿತು. ಇದೀಗ ಯಕ್ಷಗಾನವನ್ನೂ ಆಕ್ರಮಿಸುತ್ತಿದೆಯೇ ಎಂಬ ಭಯಕ್ಕೆ ಕಾರಣವಾಗಿದೆ. ಜಾತಿ, ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ಎಂಬ ಸರ್ವಜ್ಞನ ವಚನವನ್ನು ರಂಗಸ್ಥಳದಲ್ಲಿ, ವೇದಿಕೆಗಳಲ್ಲಿ ಸಾರುತ್ತಿರುವ ಯಕ್ಷಗಾನ ಕಲಾವಿದರನ್ನು ಒಡೆದು, ಕಲಾಕ್ಷೇತ್ರವನ್ನೇ ಆಳುವ ಹುನ್ನಾರ, ಕೆಲವು ಸ್ಥಾಪಿತ ಹಿತಾಸಕ್ತರಿಂದ ನಡೆಯುತ್ತಿರುವುದು ವಿಷಾದನೀಯ ಹಾಗೂ ಖಂಡನೀಯ. ನೂರಾರು ವರ್ಷಗಳಿಂದ ಪಂಡಿತ ಪಾಮರನ್ನೆಲ್ಲಾ ರಂಜಿಸುತ್ತಾ, ಕಾಂತಾ ಸಮ್ಮಿತ ಮಾರ್ಗದಿಂದ, ಸಮಾಜದ ನೈತಿಕ ಮಟ್ಟವನ್ನೂ, ಸಂಸ್ಕಾರ ಸಾರವನ್ನೂ ಕಾಯ್ದುಕೊಡು ಬಂದಿರುವ ಯಕ್ಷಗಾನ, ಕೆಲವೇ ಮಂದಿ ಸ್ವಾರ್ಥ, ಸಂಕುಚಿತ ಮನೋಭಾವವುಳ್ಳವರ ಕೈಗೆ ಸಿಲುಕಿ, ಸರ್ವನಾಶವಾಗುವ ಸ್ಥಿತಿಗೆ ಬಂದಿರುವುದು, ಅತ್ಯಂತ ದುಃಖಕಾರಕ ವಿಚಾರ. ಯಕ್ಷಗಾನದಲ್ಲಿ ಬ್ರಾಹ್ಮಣ, ಬಂಟ, ಬೋವಿ, ಕುಡುಬಿ, ಕೋಲಾರಿ, ಗಾಣಿಗ, ನೇಕಾರ, ಹೆಗ್ಗಡೆ, ವಿಶ್ವಕರ್ಮ ಎಂಬ ಯಾವ ವರ್ಗ ವ್ಯತ್ಯಾಸವೂ ಇಲ್ಲದೆ, ಒಂದೇ ಚೌಕಿಯಲ್ಲಿ, ಒಂದೇ ವೇದಿಕೆಯಲ್ಲಿ ಮೇಲು ಕೀಳನ್ನು ಪರಿಗಣಿಸದೆ, ಅಣ್ಣ-ತಮ್ಮ, ಗಂಡ-ಹೆಂಡತಿ, ತಂದೆ-ಮಗನ ಪಾತ್ರ ವಹಿಸುತ್ತಿದ್ದ, ಹೃದಯ ವೈಶಾಲ್ಯವುಳ್ಳ ಕಲಾವಿದರನ್ನು ಪ್ರತ್ಯೇಕಿಸುವುದು. ಜಾತಿ ವರ್ಗವೆಂಬ ವಿಷಕನ್ಯೆಯನ್ನು ಬೆಳೆಸುತ್ತಿರುವುದು, ಕಲಾವೇದಿಕೆಯಲ್ಲೂ ಜಾತೀಯ ಸಂಘರ್ಷವನ್ನು ಹುಟ್ಟು ಹಾಕುವುದು - ಸುಸಂಸ್ಕೃತ ಸಮಾಜಕ್ಕೆ ಶೋಭೆಯಲ್ಲ. ಆದುದರಿಂದ ಇಂತಹ ಅನಿಷ್ಟಕಾರಕ, ಅವಾಂತರಕಾರಿ ಮುಳ್ಳುಕಂಟೆಗಳನ್ನು, ಮೊಳಕೆಯಲ್ಲೇ ಚಿವುಟಬೇಕೆಂದು ಎಲ್ಲಾ ಕಲಾವಿದರಲ್ಲೂ, ಪ್ರಾಯೋಜಕರಲ್ಲೂ ನನ್ನ ಕಳಕಳಿಯ ಪ್ರಾರ್ಥನೆ.


1 comment: