Saturday, January 17, 2015

ಕೊಡೆಂಕಿರಿ ಕುಟುಂಬ : ಸಾಹಿತ್ಯ-ಕಲೆಗಳಿಗಿಲ್ಲಿ ಮೊದಲ ಮಣೆ


              ಪುತ್ತೂರು ಸನಿಹದ ಕೊಡೆಂಕಿರಿ ಶಾರದಾ ಭಟ್ಟರ ಮನೆಯ ಬಹುತೇಕ ಸಮಾರಂಭಗಳಲ್ಲಿ ಕಲೆ, ಸಾಹಿತ್ಯಕ್ಕೆ ಕೆಲವು ಘಂಟೆಗಳು ಸೀಮಿತ. ಆತಿಥ್ಯ, ಉಪಚಾರ, ಭೋಜನಗಳ ಜತೆಗೆ ಮೆದುಳಿಗೆ ಮೇವನ್ನು ನೀಡುವ ಉಪಕ್ರಮ. ಪ್ರಕಾಶ್ ಕುಮಾರ್ ಮತ್ತು ಉದಯಕುಮಾರ್ ಇವರ ಚಿರಂಜೀವಿಗಳು. ಪ್ರಕಾಶ್ಗೆ ಸಾಹಿತ್ಯ, ಪುಸ್ತಕ ವ್ಯಾಪಾರ ವೃತ್ತಿಯಾದರೆ ಉದಯರಿಗೆ ಪೌರೋಹಿತ್ಯ. ಪುಸ್ತಕ ಪ್ರೀತಿಗೆ, ಸರಸ್ವತಿ ಆರಾಧನೆಗೆ ಕುಟುಂಬದ ಮೊದಲ ಒಲವು.
               ಈಚೆಗೆ ಉದಯಕುಮಾರ್-ಸ್ವಪ್ನ ದಂಪತಿಯ ಪುತ್ರ ಚಿ| ನಚಿಕೇತನ ಉಪನಯನದ ಸಂದರ್ಭದಲ್ಲಿ ಯಕ್ಷಗಾನದ ಗುಂಗು. ದೂರದೂರಿಂದ ಆಗಮಿಸಿದ ಕುಟುಂಬಸ್ಥರಿಗೆ ಕಲಾಸೊಬಗಿನ ಆಸ್ವಾದನೆ. ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯರ ನೇತೃತ್ವದಲ್ಲಿ 'ಶಾಂಭವಿ ವಿಜಯ' ಎನ್ನುವ ಯಕ್ಷಗಾನ. ಪುತ್ತೂರಿನ ದೀಃಶಕ್ತಿ ಮಹಿಳಾ ಯಕ್ಷ ಬಳಗದವರಿಂದ 'ಕರ್ಣರ್ಜುನ’  ತಾಳಮದ್ದಳೆಗಳ ಪ್ರಸ್ತುತಿ.
              ಶಾರದಾ ಭಟ್ಟರ ಮನೆಯಲ್ಲಿ ಈ ಹಿಂದೆ ಜರುಗಿದ ಸಮಾರಂಭಗಳಲ್ಲೂ ಉಪನ್ಯಾಸ, ಯಕ್ಷಗಾನ, ಸಾಹಿತ್ಯಾರಾಧನೆಗಳಿಗೆ ಮೊದಲ ಮಣೆ. ಬಹಳ ಅಪರೂಪದ ಕುಟುಂಬ. ಶುಭ ಕಾರ್ಯಕ್ರಮಗಳು, ಸಭೆ-ಸಮಾರಂಭಗಳಲ್ಲಿ  ಪುಸ್ತಕ ಮಳಿಗೆಯನ್ನು ತೆರೆದು ಆಸಕ್ತರ ಕೈಗೆ ಪುಸ್ತಕವನ್ನಿಟ್ಟಾಗಲೇ ಖುಷಿ-ಸಂತೃಪ್ತಿ. ಪರೋಕ್ಷವಾಗಿ ಕನ್ನಡದ ಕಾಯಕ.
               ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಗರಡಿಯಲ್ಲಿ ಪಳಗಿದ ಪ್ರಕಾಶ್ ಕುಮಾರ್ ಪ್ರಸ್ತುತ ಶ್ರೀ ಜ್ಞಾನ ಗಂಗಾ ಪುಸ್ತಕ ಮಳಿಗೆಯನ್ನು ಹೊಂದಿದ್ದಾರೆ. ವಿವಿಧ, ವೈವಿಧ್ಯ ಪುಸ್ತಕಗಳ ಸಂಗ್ರಹ ಜ್ಞಾನಗಂಗಾದ ವೈಶಿಷ್ಯ. ಪುಸ್ತಕ ವ್ಯಾಪಾರ ಹೊಟ್ಟೆಪಾಡಾದರೂ ಅದರಲ್ಲಿ ನ್ಯಾಯಿಕವಾದ ಬದ್ಧತೆಯಿದೆ. ಜೀವನ ಧರ್ಮವಿದೆ. ಹಾದಿ ತಪ್ಪದ ಎಚ್ಚರವಿದೆ. ಬದುಕಿನ ದೂರದೃಷ್ಟಿಯಿದೆ.
              ಪ್ರಕಾಶ್ ಪುಸ್ತಕ ಓದುತ್ತಾರೆ, ವಿಮರ್ಶಿಸುತ್ತಾರೆ. ಜನರ ನಾಡಿಮಿಡಿತವನ್ನರಿತು ಓದುವಂತೆ ಪ್ರೇರೇಪಿಸುತ್ತಾರೆ. "ಪುಸ್ತಕ ವ್ಯಾಪಾರವನ್ನು ಕೀಳಾಗಿ ಕಾಣುವ ಕನ್ನಡ ಮನಸ್ಸುಗಳೂ ಇವೆ!  ಇದನ್ನು ಅವಮಾನವೆಂದು ಗ್ರಹಿಸುತ್ತಾರೆ. ಹಗುರ ಮಾತುಗಳಿಂದ ಚುಚ್ಚುತ್ತಾರೆ. ಪುಸ್ತಕ ಕಾಯಕದ ಎದುರು ಇವೆಲ್ಲಾ ಗೌಣ. ಈ ರೀತಿಯ ಮಾತನಾಡುವವರ ಮನೆಯಲ್ಲಿ ಒಂದು ಪುಸ್ತಕವೂ ಇಲ್ಲದಿರುವುದು ದುರಂತ," ಎನ್ನುತ್ತಾರೆ ಪ್ರಕಾಶ್.
                 ತಮ್ಮ ಮನೆಯಂಗಳದಲ್ಲಿ ಮನೆ ಸಾಹಿತ್ಯ ಸಮ್ಮೇಳನವನ್ನು ಪ್ರಥಮವಾಗಿ ನಡೆಸಿದ ಕೀರ್ತಿ ಕೊಡೆಂಕಿರಿ ಕುಟುಂಬದ ಹಿರಿಮೆ. ನಾಡಿನ ಖ್ಯಾತ ಸಾಹಿತಿಗಳನ್ನು  ಬರಮಾಡಿ, ಹಳ್ಳಿ ಸೊಬಗಿನ ಆತಿಥ್ಯವನ್ನು ತೋರಿಸಿದವರು. ವೈಚಾರಿಕವಾಗಿ ಯೋಚಿಸುವ, ಚಿಂತಿಸುವ ಅಪರೂಪದ ಕುಟುಂಬ. ಹಾಗೆಂತ ಇವರೇನೂ ಆರ್ಥಿಕ ಶ್ರೀಮಂತರಲ್ಲ. ಆದರೆ ಹೃದಯ ಶ್ರೀಮಂತಿಕೆಯಿದೆ. ಸಿಕ್ಕಾಗ ಮಾತನಾಡುವ ಧಾರಾಳತನವಿದೆ. ನಗುಮುಖದ ಮಾತುಕತೆಯಿದೆ. ಮನೆಯಲ್ಲಿ ಆತಿಥ್ಯದ ಧಾರಾಳತನವಿದೆ. ಇದಕ್ಕಿಂತ ದೊಡ್ಡ ಶ್ರೀಮಂತಿಕೆ ಇನ್ನೇನು ಬೇಕು? ನನ್ನ ಮಗನ ಅಂಗಡಿಯಲ್ಲಿ ಲಕ್ಷಗಟ್ಟಲೆ ಪುಸ್ತಕಗಳಿವೆ. ನಾನೂ ಲಕ್ಷಾಧೀಶೆ ಅಲ್ವಾ, ಎಂದು ಖುಷಿಯಿಂದ ಹೇಳುತ್ತಾರೆ ಶಾರದಮ್ಮ.
               ಎಲ್ಲವನ್ನೂ ಕೋಟಿಯ ಮಾನದಂಡದಲ್ಲಿ ಅಳೆದು, ತೂಗುವ; ಸಂಪತ್ತು ಬಂದಾಗ ಹಗುರವಾಗಿ ಕಾಣುವ, ಕೀರ್ತಿಗಾಗಿ ಹಪಹಪಿಸುವ ಸಮಾಜದ ಹಲವರ ಮಧ್ಯೆ ಕೊಡೆಂಕಿರಿ ಕುಟುಂಬ ವಿಭಿನ್ನವಾಗಿ ಕಾಣುತ್ತದೆ. ಇಂತಹ ಚಿಕ್ಕಪುಟ್ಟ ಕೆಲಸಗಳು-ಮನಸ್ಸುಗಳು ಕನ್ನಡ, ಸಾಹಿತ್ಯ, ಕಲೆಯನ್ನು ಉಳಿಸುವ ಉಪಾಧಿಗಳು.


No comments:

Post a Comment