Wednesday, August 5, 2015

ಕೂಟ ಸೌಂದರ್ಯಕ್ಕೆ ಬದ್ಧತೆಯ ಬೇಲಿ ಹಾಕಿದ - 'ಯಕ್ಷಲಹರಿ'

ದಶಮಾನೋತ್ಸವದ ತಾಳಮದ್ದಳೆ - ಅರ್ಥಧಾರಿಯಾಗಿ ಡಾ.ಶೇಣಿ ಗೋಪಾಲಕೃಷ್ಣ ಭಟ್, ಮದ್ದಳೆವಾದಕರಾಗಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ (ಇಬ್ಬರೂ ದಿವಂಗತ)
     ತಾಳಮದ್ದಳೆ ಸಪ್ತಾಹ - ಬಲತುದಿಯಲ್ಲಿ ಸತ್ಯಮೂರ್ತಿ ದೇರಾಜೆ (ಈಗ ದಿವಂಗತ)  

             ಕಿನ್ನಿಗೋಳಿಯ ಯಕ್ಷಲಹರಿ ಆಯೋಜಿಸಿದ ತಾಳಮದ್ದಳೆ ಸ್ಪರ್ಧೆ. ಯಕ್ಷಕೂಟ ಪುತ್ತೂರು ತಂಡದಿಂದ ಭಾಗವಹಿಸಿದ್ದೆ. ಸ್ಪರ್ಧಾ ಪೂರ್ವದ ಸಿದ್ಧತೆಗಳು, ನಿಯಮಗಳಿಗೆ ದಂಗಾಗಿದ್ದೆ. ’ತಾಳಮದ್ದಳೆಗೆ ಇಷ್ಟೆಲ್ಲಾ ನಿಯಮಗಳು ಬೇಕಿತ್ತ” ಎನ್ನುವ ಪ್ರಶ್ನೆ ಆಗ ಮೂಡಿಸಿತ್ತು. ಸ್ಪರ್ಧೆಯ ದಿವಸ ಏನೋ ಬಿಗುವಿನ ವಾತಾವರಣ. ತೀರ್ಪುುಗಾರರು ಮತ್ತು ಕಲಾವಿದರು ಜತೆಯಲ್ಲಿ ಉಪಾಹಾರ ಸೇವಿಸುತ್ತಿದ್ದರೂ ಕಣ್ಣಿಗೆ ಕಾಣದ ಅಂತರ. ಎಷ್ಟು ಬೇಕು ಅಷ್ಟೇ ನಗು-ವ್ಯವಹಾರ. ಅವ್ಯಕ್ತವಾದ ಶಿಸ್ತು, ದುಗುಡ. ಸಮಯಕ್ಕೆ ಹೆಚ್ಚು ಮಹತ್ವ. ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದಾಗ ಅವರ್ಣನೀಯ ಖುಷಿ. ಆಗ ನಿಯಮಗಳೊಳಗೆ ಅವಿತ ಪಾತ್ರ ಸೌಂದರ್ಯಗಳು ಕಣ್ಣು ಮಿಟುಕಿಸಿದುವು.
             "ಅರ್ಥಧಾರಿಗೆ ಪ್ರಸಂಗದ ಚೌಕಟ್ಟಿದೆ. ಸಂಘಟಕರಿಗೂ ಚೌಕಟ್ಟು ಬೇಕಲ್ವಾ. ಗುಣಮಟ್ಟದ ಕೂಟ  ಪ್ರಸ್ತುತಿಯಾಗಲು ಶಿಸ್ತು, ನಿಯಮಗಳನ್ನು ತರಬೇಕಾಯಿತು. ಯಾವುದೇ ರಾಜಿ, ವಶೀಲಿಗೆ ಆಸ್ಪದವಿಲ್ಲದ  ಮೌಲ್ಯಮಾಪನ. ಪಾರದರ್ಶಕ ನಡವಳಿಕೆ. ಹಾಗಾಗಿ ನೋಡಿ, ನಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ಅವ್ಯಕ್ತವಾದ ಶಿಸ್ತೊಂದು ಅನಾವರಣಗೊಳ್ಳುತ್ತದೆ," ಎನ್ನುತ್ತಾರೆ ಕಿನ್ನಿಗೋಳಿ ಯಕ್ಷಲಹರಿಯ ಅಧ್ಯಕ್ಷ ಲ|ಇ.ಶ್ರೀನಿವಾಸ ಭಟ್. ಯಕ್ಷಲಹರಿಗೆ ಈಗ ರಜತದ ಖುಷಿ. ಜುಲೈ 30ರಿಂದ ಆಗಸ್ಟ್ 8ರ ವಿವಿಧ ತಾಳಮದ್ದಳೆಗಳ ಸಂಪನ್ನತೆ.
               1990, ಆಗಸ್ಟ್ 12ರಂದು ಯಕ್ಷಲಹರಿಯ ಹುಟ್ಟು. ವಿವಿಧ ಪ್ರದೇಶಗಳಿಂದ ಉದ್ಯೋಗ ನಿಮಿತ್ತ ಕಿನ್ನಿಗೋಳಿಯ ಪರಿಸರದಲ್ಲಿ ತಾಳಮದ್ದಳೆಯ ನಂಟಿದ್ದವರು ಒಟ್ಟಾಗಿ ರೂಪಿಸಿದ ಸಂಸ್ಥೆಯಿದು. ತೊಂಭತ್ತರ ಕಾಲಘಟ್ಟದಲ್ಲಿ ತಾಳಮದ್ದಳೆಗಳ ಬೀಸು ದಿವಸಗಳೇನೂ ಆಗಿರಲಿಲ್ಲ. ವಿಶೇಷ ಸಂದರ್ಭಗಳಲ್ಲಿ ಮತ್ತು ಖ್ಯಾತರ ಕೂಟಗಳು ನಡೆಯುತ್ತಿದ್ದುವು. ಹವ್ಯಾಸಿ ಕಲಾವಿದರಿಗೆ ಪ್ರತ್ಯೇಕವಾದ ವೇದಿಕೆಯಿರಲಿಲ್ಲ. ಹೀಗಾಗಿ ಸಂಸ್ಥೆಯು ತಾಳಮದ್ದಳೆಗೆ ಆದ್ಯತೆ ನೀಡಿತು. ವಿಶೇಷ ಕೂಟಗಳನ್ನು ಏರ್ಪಡಿಸಿತು. ಬೆಳಕಿಗೆ ಬಾರದ ಕಲಾವಿದರನ್ನು ಆಹ್ವಾನಿಸಿತು. ಪ್ರಸಿದ್ಧರೊಂದಿಗೆ ಕಲೆಯದ, ಕಲೆಯಲಾಗದ ಹವ್ಯಾಸಿಗಳಿಗೆ ವೇದಿಕೆ ನೀಡಿತು.
              ಕೂಟಗಳಿಂದ ಬೌದ್ಧಿಕ ಅನುಭವ ಗಟ್ಟಿಯಾಗುತ್ತಿದ್ದಂತೆ ತಂಡದೊಳಗೆ ಜಿಜ್ಞಾಸೆ. ಪ್ರಸಂಗಕ್ಕೆ ಸರಿಯಾಗಿ ಕಲಾವಿದರನ್ನು ಆಯ್ಕೆ ಮಾಡಬೇಕೋ ಅಥವಾ ಕಲಾವಿದರಿಗೆ ತಕ್ಕಂತೆ ಪ್ರಸಂಗವನ್ನು ಹೊಂದಾಣಿಸಬೇಕೋ? ಕಲಾವಿದರಿಗೆ ತಕ್ಕಂತೆ ಪ್ರಸಂಗ ನಿಶ್ಚಯ ಮಾಡಿದರೆ ಪಾತ್ರ ಹಂಚುವಿಕೆಯಲ್ಲಿ ಗೊಣಗಾಟ. ಬದಲಿಗೆ, ನಿಶ್ಚಯಿತ ಪ್ರಸಂಗಕ್ಕೆ ಹೊಂದುವ ಕಲಾವಿದರನ್ನು ಆಯ್ಕೆ ಮಾಡುವ ಪರಿಪಾಠವನ್ನು ಆರಂಭಿಸಿತು. ಅದಕ್ಕೆ ಸಮಯದ ಚೌಕಟ್ಟು ಹಾಕಿತು. ಸಪ್ತಾಹಗಳ ಮೂಲಕ ಪ್ರಯೋಗವೂ ನಡೆಯಿತು. ಮೊದಮೊದಲು ಕಲಾವಿದರಿಂದ ಧನಾತ್ಮಕ ಅಭಿಪ್ರಾಯಗಳು ಬಾರದಿದ್ದರೂ ನಂತರದ ದಿವಸಗಳಲ್ಲಿ ಕಲಾವಿದರೇ ಸಮರ್ಥಸಿಕೊಂಡಿದ್ದರು.
               ಈಗ ’ಕಿನ್ನಿಗೋಳಿ ತಾಳಮದ್ದಳೆ ಸಪ್ತಾಹ ’ಎಂದಾಗಲೇ ಅದರ ಲಿಖಿತ, ಅಲಿಖಿತ ಶಾಸನಗಳು ಕಣ್ಣ ಮುಂದೆ ಹಾಯುತ್ತದೆ. ಕಲಾವಿದರಿಂದ ಸ್ವೀಕೃತಿ ಪಡೆದಿದೆ. ಕೂಟಕ್ಕೆ ಮೂರು ಗಂಟೆಯ ಅವಧಿ.  ಸಂಸ್ಥೆಯ ಸದಸ್ಯರು ಪ್ರಸಂಗವನ್ನು ಗೊತ್ತು ಮಾಡುತ್ತಾರೆ. ಯಾವ್ಯಾವ ಪಾತ್ರಗಳಿಗೆ ಎಷ್ಟೆಷ್ಟು ಪದ್ಯಗಳು ಬೇಕೆಂಬುದನ್ನು ನಿಶ್ಚಯ ಮಾಡಿ ಎಲ್ಲಾ ಕಲಾವಿದರಿಗೂ ಲಿಖಿತವಾಗಿ ತಿಳಿಸುತ್ತಾರೆ. ಸೆಕೆಂಡ್ ಸಮಯವೂ ವ್ಯರ್ಥವಾಗದ ಕಾಳಜಿ. ಮುಗಿಯುವಾಗಲೂ ಅಷ್ಟೇ - ನಿಗದಿತ ಸಮಯಕ್ಕೆ ಮಂಗಲವೂ ಆಗಿಬಿಡಬೇಕು. ಇಷ್ಟೆಲ್ಲಾ ಲಿಖಿತವಾಗಿ ಸ್ಪಷ್ಟ ಸೂಚನೆ ನೀಡಿದ್ದರೂ, ಸಮಯದ ಮಿತಿಯೊಳಗೆ ಪದ್ಯಗಳನ್ನು ಬದಲಾಯಿಸುವ ಸ್ವಾತಂತ್ರ್ಯ ಭಾಗವತರಿಗಿದೆ. ಕಲಾವಿದರು ತಂತಮ್ಮೊಳಗೆ ಮಾತನಾಡಿಕೊಂಡು ಒಟ್ಟೂ ಕೂಟವನ್ನು ಯಶಸ್ವಿಗೊಳಿಸುತ್ತಿರುವುದು ಯಕ್ಷಲಹರಿಯ ಮೇಲಿಟ್ಟಿರುವ ವಿಶ್ವಾಸ, ಎನ್ನುತ್ತಾರೆ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ. ಆರಂಭದ ದಿವಸಗಳಲ್ಲಿ ಯಕ್ಷಲಹರಿಯು ಸಪ್ತಾಹ, ಸ್ಪರ್ಧೆಗಳಿಗೆ ಕಟ್ಟುನಿಟ್ಟಿನ ಬೇಲಿ ಹಾಕದಿರುತ್ತಿದ್ದರೆ 'ಹತ್ತರೊಟ್ಟಿಗೆ ಹನ್ನೊಂದು' ಆಗುತ್ತಿತ್ತಷ್ಟೇ.
                ಪ್ರಸಂಗ ಕೇಂದ್ರಿತ ತಾಳಮದ್ದಳೆಯನ್ನು ಪ್ರೇಕ್ಷಕರು ಸ್ವೀಕರಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಆಗಮಿಸುವ ಪ್ರೇಕ್ಷಕರ ಬದ್ಧತೆಯು ಯಕ್ಷಲಹರಿಗೆ ಬೆನ್ನೆಲುಬು. ಇಲ್ಲಿ ವೃತ್ತಿ ಮತ್ತು ಹವ್ಯಾಸಿ ಕಲಾವಿದರಿಗೆ ಸಮಾನ ಮಣೆ. ವ್ಯಕ್ತಿ ಆರಾಧನೆಯಿಂದ ದೂರ. ಪ್ರಸಂಗಕ್ಕೆ ಆದ್ಯತೆ. ರಂಗದಲ್ಲಿ ಸನ್ನಿವೇಶವು ತೀರಾ ಲಂಬಿಸಿ, ಪ್ರೇಕ್ಷಕರು ಆಕಳಿಸುವ ಮೊದಲೇ ಸಂಬಂಧಪಟ್ಟ ಕಲಾವಿದರಿಗೆ ಸಾತ್ವಿಕ ಸೂಚನೆ ತಲುಪಿಸಲು ಅಧ್ಯಕ್ಷರು ಮುಜುಗರ ಪಡುವುದಿಲ್ಲ! ಕಾರ್ಯಕ್ರಮದ ಒಟ್ಟಂದದ ದೃಷ್ಟಿ. ಸಂಘಟನೆಯ ಬಲವರ್ಧನೆ ಮತ್ತು ವಿಶ್ವಾಸವರ್ಧನೆಗೆ ಇಂತಹ ಅಲಿಖಿತ ನಿಯಮಗಳು ಪೂರಕ. ಪ್ರೇಕ್ಷಕರ ಸೃಷ್ಟಿಗೂ ಸಹಾಯಕ. ಕೆಲವು ವರುಷಗಳಿಂದ ಸಪ್ತಾಹ ತಾಳಮದ್ದಳೆಯನ್ನು 'ನಮ್ಮ ಕುಡ್ಲ' ವಾಹಿನಿಯು ನೇರ ಪ್ರಸಾರವನ್ನು ಮಾಡುತ್ತಿದೆ.
              ಇಪ್ಪತ್ತೈದು ವರುಷಗಳ ಕಾಲ ಕಲೆಯೊಂದರ ಸರ್ವಾಂಗ ಸುಂದರ ಬೆಳವಣಿಗೆಯಲ್ಲಿ ಯಕ್ಷಲಹರಿಯ ಹೆಜ್ಜೆ ದೊಡ್ಡದು. ಬದಲಾದ ಕಾಲಘಟ್ಟದಲ್ಲಿ ಸಮಯ ಕೇಂದ್ರಿತ ತಾಳಮದ್ದಳೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪೂರಕ. ಸಮಯದೊಳಗೆ ಕಥಾನಕವನ್ನು ಚಂದಗೊಳಿಸುವ ಜಾಣ್ಮೆ ಕಲಾವಿದರಲ್ಲಿ ರೂಪುಗೊಳ್ಳುತ್ತದೆ. ಅದಕ್ಕಾಗಿ ಯತ್ನವನ್ನೂ ಮಾಡುತ್ತಾರೆ. ಸಪ್ತಾಹದಲ್ಲಿ ಹೊಸ ಪ್ರಸಂಗಗಳ ಪ್ರಯೋಗ ನಡೆದಿದೆ. ಯಕ್ಷ ಕವಿಗೆ ಮನ್ನಣೆಯ ಗೌರವ ನೀಡುತ್ತಿದೆ. ಆಟ, ಯಕ್ಷಗಾನ ತರಬೇತಿ, ಹಿರಿಯ ಕಲಾವಿದರಿಗೆ ಸಂಮಾನ, ಯಕ್ಷ-ಗಾನ ವೈಭವ... ಮೊದಲಾದುಗಳನ್ನು ಯಕ್ಷಲಹರಿಯು ತನ್ನ ಕಾರ್ಯಹೂರಣದಲ್ಲಿ ಸೇರಿಸಿಕೊಳ್ಳುತ್ತಾ ಇಪ್ಪತ್ತೈದರ ತರುಣನಾಗಿ ಎದ್ದು ನಿಂತಿದೆ. ಕಿನ್ನಿಗೋಳಿಯ 'ಯುಗಪುರುಷ'ದ ಸಭಾಂಗಣದಲ್ಲೀಗ ದಿನಕ್ಕೆರಡು ತಾಳಮದ್ದಳೆಗಳ ಸಂಪನ್ನವಾಗುತ್ತಿವೆ. ಆಗಸ್ಟ್ ಎಂಟರಂದು ಬೆಳ್ಳಿಹಬ್ಬದ ಸಂಭ್ರಮ.


No comments:

Post a Comment