Monday, August 17, 2015

ಕಲೆ ಮೆಚ್ಚಿದ ಕಲಾವಿದ - ರೆಂಜಾಳ

               ಜುಲೈ ಕೊನೆ ವಾರ ಪುತ್ತೂರಿನಲ್ಲಿ 'ದಮಯಂತಿ ಪುನರ್ ಸ್ವಯಂವರ' ಯಕ್ಷಗಾನ ಪ್ರದರ್ಶನ. ರೆಂಜಾಳರ 'ಬಾಹುಕ'ನ ಪಾತ್ರ. ಹಾಸ್ಯಗಾರರನೇಕರ ಬಾಹುಕನನ್ನು ನೋಡಿದ್ದೆ. ಅವರೆಲ್ಲರಿಗಿಂತ ಇವರದು ಭಿನ್ನ. ಮುಖವರ್ಣಿಕೆಯಲ್ಲಿ ಹೊಸತನ. ರಂಗನಡೆಯಲ್ಲಿ ಸ್ವ-ನಿಲುವು. ಬಾಹುಕನೊಳಗೆ ನಳನೊಬ್ಬನಿದ್ದಾನೆ ಎನ್ನುವ ಎಚ್ಚರ. ಸತ್ಯವನ್ನು ಬಿಡದ ಸೂಕ್ಷ್ಮತೆ. ಹಾಸ್ಯದ ಸೋಂಕಿಲ್ಲದ ಗಂಭೀರತೆ. ಪಾತ್ರ ತುಂಬಾ ಇಷ್ಟವಾಯಿತು.
              ಎರಡೂವರೆ ದಶಕದಿಂದ ರೆಂಜಾಳ ರಾಮಕೃಷ್ಣ ರಾವ್(71) ಅವರನ್ನು ನೋಡುತ್ತಿದ್ದೇನೆ. ಅವರ ಪಾತ್ರಾಭಿವ್ಯಕ್ತಿಯಲ್ಲಿ ಪೂರ್ಣ ಪ್ರಮಾಣದ ಯಕ್ಷಗಾನವಿದೆ. ಬದಲಾವಣೆಯ ಕಾಲಘಟ್ಟದ ಹೊಸತನದ ಮುಂದೆ ಇವರ ವೇಷಕ್ಕೆ ಪ್ರತ್ಯೇಕ ಮಣೆ. ಪಾತ್ರ, ಕಾಲ, ಔಚಿತ್ರಕ್ಕೆ ಅನುಸರಿಸಿದ ನಡೆ. ಈ ಸಿದ್ಧಿಗೆ ಐದು ದಶಕದ ತಪಸ್ಸಿದೆ. 'ದಿಢೀರ್ ಕಲಾವಿದ'ರಾಗಿ ಮೇಲೆದ್ದು ಬಂದವರಲ್ಲ!
             ರಾಮಕೃಷ್ಣ ರಾಯರ ತನು ಮಾಗಿದೆ. ಮನ ಮಾಗಿಲ್ಲ. ಕಲೆಯಲ್ಲಿ ಅದೇ ಭಕ್ತಿ, ಶ್ರದ್ಧೆ. ಹಗಲಿಡೀ ವಯೋಸಹಜ ಅಸಹಾಯಕತೆ. ರಾತ್ರಿ ಹೊಂತಕಾರಿ ಹಿರಣ್ಯಾಕ್ಷ, ರಕ್ತಬೀಜ, ಇಂದ್ರಜಿತು ಆವೇಶವಾಗುತ್ತಾರೆ. ತನ್ನ ಇಪ್ಪತ್ತೆರಡನೇ ಹರೆಯದಲ್ಲಿ ರಂಗಪ್ರವೇಶ. ಅಗರಿ ಶ್ರೀನಿವಾಸ ಭಾಗವತರ ಪೂರ್ಣಾಾಶೀರ್ವಾದ. ಅಡ್ಕಸ್ಥಳ ನಾರಾಯಣ ಶೆಟ್ಟಿ ಮತ್ತು ಕುಡಾನ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಕುದ್ಕಾಡಿ ವಿಶ್ವನಾಥ ರೈ ಅವರಿಂದ ಭರತ ನಾಟ್ಯ ಕಲಿಕೆ. ಹಾಗಾಗಿ ಆರಂಭದ ದಿವಸಗಳ  ಸ್ತ್ರೀಪಾತ್ರಗಳ ಲಾಲಿತ್ಯ, ವೈಯಾರ, ಬಿನ್ನಾಣಗಳು ಗಮನ ಸೆಳೆಯುತ್ತಿದ್ದುವು.
              ಕೂಡ್ಲು ಮೇಳದಿಂದ ಮೇಳದ ಬದುಕು ಆರಂಭ. ಅಲ್ಲಿ ನಾಲ್ಕು ವರ್ಷ ತಿರುಗಾಟ. ಬಳಿಕ ಮೂರು ವರುಷ ಬಣ್ಣದ ಬದುಕಿಗೆ ಹಿನ್ನಡೆ. ಮುಂದೆ ಚೌಡೇಶ್ವರಿ ಮೇಳದ ಒಂದು ವರುಷದ ತಿರುಗಾಟ. ಆ ನಂತರ ನಾಲ್ಕು ದಶಕಕ್ಕೂ ಮಿಕ್ಕಿ ಕಟೀಲು ಶ್ರೀ ದುರ್ಗಾಾಪರಮೇಶ್ವರಿ ಮೇಳವೊಂದರಲ್ಲೇ ವ್ಯವಸಾಯ. ಈಗವರು ಪ್ರಧಾನ ವೇಷಧಾರಿ.
             ದೇವಿ ಮಹಾತ್ಮೆಯ 'ಶ್ರೀದೇವಿ' ಪಾತ್ರವು ರೆಂಜಾಳರಲ್ಲಿ ಹೆಚ್ಚು ಗೌರವ ಪಡೆಯುತ್ತದೆ. ಅಭಿವ್ಯಕ್ತಿಯಲ್ಲಿ ದೇವಿಯ ಅಲೌಕಿಕ ಶಕ್ತಿಯ ಅನಾವರಣ. ರಂಗವನ್ನು ನೋಡುತ್ತಾ ನಿಂತರೆ ಯಕ್ಷಗಾನ ಮರೆತುಹೋಗಿ ದೈವತ್ವದ ಭಾವ ಮೂಡುವಂತಹ ಛಾಪು. ಉಯ್ಯಾಲೆಯಲ್ಲಿ ಕುಳಿತ ದೇವಿಗೆ ಕೈಮುಗಿದು, ತಲೆಬಾಗಿ ನಮಸ್ಕರಿಸಿದವರೆಷ್ಟೋ. ಒಂದು ಪಾತ್ರವು ಪ್ರೇಕ್ಷಕರಲ್ಲಿ ಎಷ್ಟು ಮತ್ತು ಹೇಗೆ ಪರಿಣಾಮ ಬೀರಬಹುದು ಎನ್ನುವುದಕ್ಕೆ ರೆಂಜಾಳರ ದೇವಿ ಸಾಕ್ಷಿಯಾಗಿ ಕಣ್ಣೆದುರು ನಿಲ್ಲುತ್ತದೆ.
              ಈಚೆಗೆ ಕಟೀಲಿನಲ್ಲಿ 'ಯಕ್ಷಮಿತ್ರ ನಮ್ಮ ವೇದಿಕೆ' ವಾಟ್ಸಪ್ ಬಳಗವು ಪ್ರದರ್ಶನವೊಂದನ್ನು ಆಯೋಜಿಸಿತ್ತು. ಅಂದಿನ ಕೊನೆಯ ಪ್ರಸಂಗ ಶ್ರೀನಿವಾಸ ಕಲ್ಯಾಣ. ರೆಂಜಾಳರದು 'ಕೊರವಂಜಿ'. ಕಲಾಭಿಮಾನಿಗಳು ಮೆಚ್ಚಿದ ಪಾತ್ರ. ಪಾತ್ರಶಿಲ್ಪವೊಂದು ವಾಸ್ತವತೆಯತ್ತ ಇಣುಕದೆ ಪಾತ್ರಕಾಲದಲ್ಲೇ ಸಂಚರಿಸುವಂತೆ ಮಾಡುವ ಕೆಲವೇ ಕೆಲವು ಕಲಾವಿದರ ಸಾಲಲ್ಲಿ ರೆಂಜಾಳರಿದ್ದಾರೆ. ಸುಭದ್ರೆ, ದಮಯಂತಿ, ಕೊರವಂಜಿ, ಶಶಿಪ್ರಭೆ.. ವೇಷಗಳು ನೂತನ.
             ಸ್ತ್ರೀಪಾತ್ರಗಳು ವಶವಾಗುತ್ತಲೇ ಪುರುಷ ಪಾತ್ರದತ್ತ ವಾಲಿದರು. ದೇವೇಂದ್ರ, ಅರ್ಜುುನ, ಕಾರ್ತವೀರ್ಯ, ಕೌಂಡ್ಲಿಕ, ಅತಿಕಾಯ, ಇಂದ್ರಜಿತು, ರಕ್ತಬೀಜ. ಹರಿಶ್ಚಂದ್ರ.. ಹೀಗೆ ವಿವಿಧ ಸ್ವರೂಪದ, ಭಾವಗಳ ಪಾತ್ರಗಳನ್ನು, ಅದರ ಸ್ವಭಾವದಂತೆ ಚಿತ್ರಿಸುವ ಸಾಮಥ್ರ್ಯವೇ ಅವರ ಯಶದ ಗುಟ್ಟು. ಸಂದರ್ಭ ಬಂದಾಗ ಬಾಹುಕ, ವಿಜಯ, ಪಂಡಿತ, ಮಕರಂದ.. ಪಾತ್ರಗಳಿಗೂ ಸೈ.
               ಪೀಠಿಕೆ ವೇಷಗಳ ಸಭಾಕ್ಲಾಸಿನ ಸೊಗಸು, ರಂಗ ತುಂಬು ಹೆಜ್ಜೆಗಳು, ಪಾತ್ರಕ್ಕನುಸಾರವಾದ ಅರ್ಥಗಾರಿಕೆ, ಅಧಿಕವಲ್ಲದ ನಾಟ್ಯ, ಸಾಂಪ್ರದಾಯಿಕ ಬಣ್ಣಗಾರಿಕೆ, ಪೌರಾಣಿಕ ಆವರಣದೊಳಗೆ ತುಂಬಿಕೊಳ್ಳುವ ಅಭಿವ್ಯಕ್ತಿ, ನಿಜ ಬದುಕಿನಲ್ಲೂ ಹೊರೆಯಾಗದ ಸ್ನೇಹಶೀಲತೆ, ಪುರಾಣ ಜ್ಞಾನ, ಪಾತ್ರಗಳ ನಡೆಗಳಲ್ಲಿ ನಿಖರತೆ. ಚೌಕಿ ಮತ್ತು ರಂಗಸ್ಥಳ ನಿಷ್ಠ. ಅಗ್ಗದ ಪ್ರಚಾರಕ್ಕಾಗಿ ಪಾತ್ರವನ್ನು ಹಿಗ್ಗಾಮುಗ್ಗಾ ಜಗ್ಗಿಸುವ ಮನಃಸ್ಥಿತಿ ಇವರದಲ್ಲ.
               ನಿಜ ಬದುಕಿನ ವಿನಯ ವ್ಯಕ್ತಿತ್ವದ ಶೋಭೆ. ಏರಿದ ಮೆಟ್ಟಿಲನ್ನು ಮರೆಯದ ಕೃತಜ್ಞ.  ಹಿರಿತನಕ್ಕೆ ತಲೆಬಾಗುವ, ಪಾಂಡಿತ್ಯವನ್ನು ಗೌರವಿಸುವ, ಕಿರಿಯರ ಪ್ರತಿಭೆಯನ್ನು ಮೆಚ್ಚಿಕೊಳ್ಳುವ ರೆಂಜಾಳರ ಗುಣಗಳು ನೂರಾರು ಸ್ನೇಹಿತರನ್ನು ಸಂಪಾದಿಸಿ ಕೊಟ್ಟಿದೆ. ಕಲೆಯು ಇವರನ್ನು ಮೆಚ್ಚಿದೆ.
                 'ಕಲಾವಿದ ಪರಿಪೂರ್ಣನಾಗಲು ಮೇಳದ ತಿರುಗಾಟದಿಂದ ಮಾತ್ರ ಸಾಧ್ಯ. ಈಗೀಗ ಯುವಕರು ಯಕ್ಷಗಾನತ್ತ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ಕೇವಲ ನಾಟ್ಯ ಕಲಿತರೆ ಕಲಾವಿದನಾಗಲಾರ. ರಂಗ ಮಾಹಿತಿ, ಪುರಾಣ ಜ್ಞಾನದ ಕಲಿಕೆಯೂ ಮುಖ್ಯ ಎನ್ನುತ್ತಾರೆ. ಹಲವು ಪ್ರಶಸ್ತಿ, ಸಂಮಾನಗಳು ರಾಯರನ್ನು ಅರಸಿ ಬಂದಿವೆ.
                 ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರವು ಕೀರ್ತಿಶೇಷ ವನಜಾಕ್ಷಿ ಜಯರಾಮ ಅವರ ನೆನಪಿನಲ್ಲಿ ನೀಡುವ 'ವನಜ ರಂಗಮನೆ ಪ್ರಶಸ್ತಿ'ಗೆ ರೆಂಜಾಳರು ಭಾಜನರಾಗಿದ್ದಾರೆ. ಆಗಸ್ಟ್ 16ರಂದು ಸಂಜೆ ರಂಗಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಈ ಪ್ರಶಸ್ತಿಯು ರಾಮಕೃಷ್ಣ ರಾಯರಿಗೆ ಎಪ್ಪತ್ತರ ಕಾಣ್ಕೆ.  (ಯಕ್ಷ ಚಿತ್ರಗಳು: ನಟೇಶ್ ವಿಟ್ಲ)


No comments:

Post a Comment