Thursday, August 27, 2015

ಯಕ್ಷಕವಿಗೆ ಗಾನಮೇಧದ ಅಭಿಷೇಕ

 ಕುಮಾರ ವಿಜಯ ಪ್ರಸಂಗ ಪುಸ್ತಕ
 ಗಾನಾರಾಧನೆಯಲ್ಲಿ ಶ್ರೀ ದಿನೇಶ ಅಮ್ಮಣ್ಣಾಯ, ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ
 ನಂದಳಿಕೆಯ ಲಕ್ಷ್ಮೀನಾರ್ಣಪ್ಪಯ್ಯ (ಮುದ್ದಣ)


             ಯಕ್ಷಗಾನ ಕೂಟಾಟಗಳಲ್ಲಿ ಪ್ರಸಂಗ ಕವಿಯ ನೆನವರಿಕೆ ತೀರಾ ಕಡಿಮೆ. ಪ್ರಸಂಗದೊಂದಿಗೆ ಆತನ ಹೆಸರು ಹೊಸೆಯುವುದು ಅಪರೂಪ. ಕವಿಯೆಂದೂ ಹೆಸರಿಗೆ ಕೊಸರಾಡಿದವನಲ್ಲ. ರಾಡಿ ಎಬ್ಬಿಸಿದವನಲ್ಲ. ಅನೂಚಾನವಾಗಿ ಬೆಳೆದ ಪರಂಪರೆ. ಇದನ್ನು ಅನಾದರ ಎಂದು ಭಾವಿಸಬೇಕಾಗಿಲ್ಲ. ಕೆಲವು ಪ್ರಸಂಗ ಪುಸ್ತಕದಲ್ಲಿ ಕವಿಯ ಹೆಸರು ಅಚ್ಚಾಗಿದೆ. ಕೆಲವು ಸಲ ಕವಿ ಯಾರೆಂದು ತಿಳಿಯದೆ ಗೊಂದಲವಾಗಿರುವುದೂ ಇದೆ. ಮುದ್ರಕ,  ಪ್ರಕಾಶಕನಿಗೆ ಪ್ರಸಂಗವೇ ಮುಖ್ಯ ಹೊರತು ಕವಿಯಲ್ಲ! ಶೋಧಬುದ್ಧಿಯ ಮಸುಕಿನಲ್ಲಿ ಕವಿಯೂ ಅಜ್ಞಾತ.
              ಯಕ್ಷಗಾನ ಕವಿ, ಕಾವ್ಯಕ್ಕೆ ಮಾನ ಕೊಡುವ ಮೊದಲ ಯತ್ನವೊಂದು ಶ್ರೀ ಕ್ಷೇತ್ರ ಪಾವಂಜೆಯಲ್ಲಿ ನಡೆಯಿತು. ನಂದಳಿಕೆಯ ಲಕ್ಷ್ಮೀನಾರ್ಣಪ್ಪಯ್ಯ (ಮುದ್ದಣ) ಕವಿ ವಿರಚಿತ 'ಕುಮಾರ ವಿಜಯ'        
ಪ್ರಸಂಗಗಳ ಪದ್ಯಗಳಿಗೆ ಇಪ್ಪತ್ತೆರಡು ಭಾಗವತರು ದನಿಯಾದರು. ಪೂರ್ವಾಹ್ನ ಆರು ಗಂಟೆಯಿಂದ ರಾತ್ರಿ ಎಂಟರ ತನಕ ಗಾನಾರಾಧನೆಯ ಮೇಧ. ಮುದ್ದಣನ ಸಾಹಿತ್ಯ ಮಟ್ಟುಗಳ ಪರಿಚಯ. ತೆಂಕುತಿಟ್ಟಿನ ಹಿರಿ-ಕಿರಿಯ ಭಾಗವತರ ಸಮ್ಮಿಲನ.
              ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಅಗರಿ ರಘುರಾಮ ಭಾಗವತರು, ಕುರಿಯ ಗಣಪತಿ ಶಾಸ್ತ್ರಿ, ಪದ್ಯಾಣ ಗಣಪತಿ ಭಟ್.... ಮೊದಲಾದ ಹಿರಿಯರು ಮುದ್ದಣನ ಹಾಡಿನ ಜಾಡನ್ನರಿಸಿ ಸುಲಲಿತವಾಗಿ ಹಾಡಿದರು. ಹೊಸಬರಿಗೆ ಮಟ್ಟಿನ ರೂಢಿಯಿಲ್ಲದೆ ಎಡವಟ್ಟಾದುದೂ ಇಲ್ಲದಿಲ್ಲ. "ಹಾಡಿನ ಮಟ್ಟುಗಳು ತಿಳಿದರೆ ಮುದ್ದಣನ ಸಾಹಿತ್ಯ ಕಷ್ಟವಲ್ಲ. ಸಾಹಿತ್ಯದ ನಡೆ, ಛಂದಸ್ಸುಗಳ ಗತಿಗಳು ವಿಭಿನ್ನ. ಯಕ್ಷಗಾನ ಕ್ಷೇತ್ರದ ಕವಿಯೊಬ್ಬರಿಗೆ ಮೊಟ್ಟಮೊದಲ ಬಾರಿ ಸಂದ ಗೌರವವಿದು," ಎನ್ನುತ್ತಾರೆ ಪ್ರಸಂಗಕರ್ತ, ಕವಿ ಕಿನ್ನಿಗೋಳಿಯ ಶ್ರೀಧರ್ ಡಿ.ಎಸ್.
               ಎರಡೆರಡು ಘಂಟೆಗಳಂತೆ ಒಟ್ಟು ಏಳು ಪಾಳಿಗಳು. ಒಂದೊಂದು ಪಾಳಿಗೆ ಮೂರು, ನಾಲ್ಕು ಭಾಗವತರು. ಎಲ್ಲರಿಗೂ ನಿರ್ಧರಿತ ಹಾಡಿನ ಸೂಚಿ. ಪ್ರಸಂಗದ ನಡೆಯಂತೆ ಪದ್ಯಗಳ ಮಾಲೆ. ಭಾಗವತರಿಗೆ ವಿವಿಧ ಮಟ್ಟುಗಳಲ್ಲಿ ಹಾಡಲು ಅನುಕೂಲವಾಗುವಂತೆ ಕೆಲವೆಡೆ ಹಾಡುಗಳಲ್ಲಿ ಪುನರಾವರ್ತನೆ. ಪ್ರತೀ ಪಾಳಿ ಮುಗಿದಾಗಲೂ ಕವಿಗೆ ನಮನ. ಕಾರ್ಯಕ್ರಮದುದ್ದಕ್ಕೂ ಕಾವ್ಯದ ವರ್ಣನೆ. ಪ್ರಸಂಗ ಸಾಹಿತ್ಯ ಗಟ್ಟಿತನದ ವಿವರಣೆ. ಕವಿಯ ವ್ಯಕ್ತಿತ್ವದ ದರ್ಶನ.
ಮುದ್ದಣ ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿ 'ಕುಮಾರ ವಿಜಯ' ಪ್ರಸಂಗವನ್ನು ರಚಿಸಿದರಂತೆ. ಪಾವಂಜೆಯ ಕಾವ್ಯಾರಾಧನೆಯಲ್ಲಿ ಇಪ್ಪತ್ತೆರಡು ಭಾಗವತರು ಭಾಗವಹಿಸಿದ್ದರು. ಈ ಸಂಖ್ಯಾ ಚಮತ್ಕೃತಿ ಕಾಕತಾಳೀಯ.
             'ರತ್ನಾವತಿ ಕಲ್ಯಾಣ' ಪ್ರಸಂಗ ರಚಿಸುವಾಗ ಮುದ್ದಣ ಕವಿಗೆ ಹತ್ತೊಂಭತ್ತು ವರುಷ. ಮುದ್ದಣ ಕವಿಯ ಸಾಹಿತ್ಯದಲ್ಲಿ ಶೇ.50ರಷ್ಟು ಛಂದಸ್ಸುಗಳು ಆತನದ್ದೇ ಸಂಶೋಧನೆ ಎನ್ನಬಹುದು. ಸುಮಾರು ನೂರಹತ್ತಕ್ಕೂ ಮೀರಿ ಮಟ್ಟುಗಳಿವೆ. ಮುದ್ರಿತ ಪುಸ್ತಕದಲ್ಲಿ ಏಳುನೂರ ಇಪ್ಪತ್ತು ಪದ್ಯಗಳು ಸಿಗುತ್ತವೆ. ಸಾವಿರಕ್ಕೂ ಮಿಕ್ಕಿ ಪದ್ಯಗಳಿವೆ ಎಂದು ಬಲಿಪ ನಾರಾಯಣ ಭಾಗವತರ ಅಭಿಮತ, ಪ್ರಸಂಗವನ್ನು ಅಧ್ಯಯನ ಮಾಡಿದ ಶ್ರೀಧರ್ ಡಿ.ಎಸ್. ಹೇಳುತ್ತಾರೆ.
            ಕಾವ್ಯಾರಾಧನೆಯು ಪಾವಂಜೆಯ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಯಕ್ಷ ಕಲಾ ವಿಭಾಗದ ಕಲ್ಪನೆ. ಇದರ ಸಾಕಾರದಲ್ಲಿ ಸಶಕ್ತ ಯಕ್ಷಗಾನ ವಿದ್ವಾಂಸರ ಹೆಗಲೆಣೆ. ಕುಮಾರ ವಿಜಯದ ಎಲ್ಲಾ ಪದ್ಯಗಳನ್ನು ತೆಗೆದುಕೊಂಡು ಏಳು ದಿವಸದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುವ ಯೋಚನೆಯಿದೆ. ಅಲ್ಲದೆ ಕವಿಯ ವಿವಿಧ ಮಟ್ಟುಗಳನ್ನು ಗಾನಾರಾಧನೆಯ ಮೂಲಕ ಪ್ರಸ್ತುತ ಪಡಿಸಬೇಕೆಂಬ ಯೋಜನೆಯಿದೆ,  ಹೊಸ ಸುಳಿವನ್ನು ವಿದ್ಯಾಶಂಕರ್ ನೀಡಿದರು. ಇವರು ವೇದಿಕೆಯ ಕಾರ್ಯದರ್ಶಿಗಳು.
             ಪಾವಂಜೆ ಶ್ರೀಕ್ಷೇತ್ರ ಯಕ್ಷಗಾನ ಸರಸ್ವತಿಯ ತಾಣವಾಗಿ ರೂಪುಗೊಳ್ಳುತ್ತಿರುವುದು ಹೆಮ್ಮೆ. ಭಾಗವಹಿಸಿದ ಎಲ್ಲರಿಗೂ ಊಟೋಪಚಾರದ ಆತಿಥ್ಯ. ಆಚೆ ಉಡುಪಿಗೂ, ಈಚೆ ಮಂಗಳೂರಿಗೂ ಮಧ್ಯದಲ್ಲಿರುವ  ಪಾವಂಜೆಯು ಕಾವ್ಯಾರಾಧನೆ ನಡೆಸುವ ಮೂಲಕ ಹೊಸ ಉಪಕ್ರಮಕ್ಕೆ ಹಾದಿ ತೋರಿದೆ. ಕವಿ-ಕಾವ್ಯವನ್ನು ಮಾನಿಸುವ ಹೊಸ ಸಂಪ್ರದಾಯಕ್ಕೆ ಶ್ರೀಕಾರ ಬರೆದಿದೆ. ಅಜ್ಞಾತ ಕವಿಯನ್ನು ಪ್ರಸಂಗದ ಮೂಲಕ ಜನಮಾನಸಕ್ಕೆ ಬಿಂಬಿಸುವ ಕಲಾಪೋಷಕ ವೇದಿಕೆಯ ದೂರದೃಷ್ಟಿ ಶ್ಲಾಘ್ಯ.
            ಮುದ್ದಣ (1870-1901) - ಸಾಹಿತ್ಯ ಲೋಕದ ವಿಸ್ಮಯ. 'ಮುದ್ದಣ ಸ್ಮಾರಕ ಮಿತ್ರ ಮಂಡಳಿ'ಯ ಮೂಲಕ ನಂದಳಿಕೆ ಬಾಲಚಂದ್ರ ರಾವ್ ಮತ್ತು ಅವರ ತಂಡ ಸದ್ದಿಲ್ಲದ ಕೆಲಸ ಮಾಡುತ್ತಿದೆ. ಮುದ್ದಣ ಪ್ರಕಾಶನವು 'ರಾಮಾಶ್ವಮೇಧ'ವನ್ನು ಪ್ರಕಟಿಸಿದೆ. ಕುಮಾರ ವಿಜಯ, ರತ್ನಾವತಿ ಕಲ್ಯಾಣ ಪ್ರಸಂಗಗಳ ಅಡಕ ತಟ್ಟೆಯನ್ನು ರೂಪಿಸಿದೆ. ಮುದ್ದಣ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದೆ.
            ಕಲಾಪೋಷಕ ವೇದಿಕೆಯು ಯಕ್ಷಗಾನ ಕವಿಗಳಿಗೆ ಮಾನ ಕೊಡುವ ಮೊದಲ ಹೆಜ್ಜೆ ಯಶವಾಗಿದೆ. ಗಾನಮೇಧದ ಅಭಿಷೇಕದಲ್ಲಿ ಪೂರ್ಣ ಮಿಂದು ಪುಳಕಿತರಾದ ಶ್ರೋತೃಗಳ ಸಾಕ್ಷಿಯಾಗಿ ಮುದ್ದಣ ಕವಿಗೆ ನಿಜಾರ್ಥನ ನಮನ ಸಲ್ಲಿಸಲ್ಪಟ್ಟಿದೆ.
(ಯಕ್ಷ ಚಿತ್ರ : ರಾಮ್ ನರೇಶ್ ಮಂಚಿ)


No comments:

Post a Comment