Saturday, December 29, 2018

ಇವು ಬೊಂಬೆಗಳಲ್ಲ, ಸಾಂಸ್ಕøತಿಕ ಸ್ಥಳಿಯತೆಯ ಪ್ರತಿನಿಧಿಗಳು

  ಬೊಂಬೆಗಳ ಅಂದಕ್ಕೆ ಮಾರುಹೋದ ವಿದೇಶಿ ಕಲಾಸಕ್ತೆಯೊಂದಿಗೆ ರಮೇಶ್.

ರಮೇಶರ ಮನೆಯಲ್ಲಿ ಫ್ರೆಂಚ್ ವಿದ್ಯಾರ್ಥಿಗಳು



ಅಂದು ಪುತ್ತೂರು ಫಿಲೋಮಿನಾ ಕಾಲೇಜಿನ ಸಭಾಭವನದಲ್ಲಿ ಯಕ್ಷಗಾನ ಬೊಂಬೆಯಾಟ. ಕಾಸರಗೋಡಿನ ರಮೇಶ್ ಕೆ.ವಿ. ತಂಡ ಪ್ರದರ್ಶನದ ಯಶದ ಖುಷಿಯಲ್ಲಿದ್ದರು. ಮಕ್ಕಳ ಕೈಗೆ ಬೊಂಬೆಗಳನ್ನು ನೀಡಿದ್ದರು. ಕುಣಿಸುವ ವಿಧಾನಗಳನ್ನು ಹೇಳಿಕೊಟ್ಟಿದ್ದರು. ಎಳೆಯ ಮನಸ್ಸುಗಳನ್ನು ಬೊಂಬೆಗಳು ಸೆಳೆದಿದ್ದುವು. ಬಹುತೇಕರು ಅವುಗಳನ್ನು ವೀಕ್ಷಿಸುತ್ತಾ ಬೊಂಬೆಗಳಾದರು! ಇದು ಹತ್ತು ವರುಷಗಳ ಹಿಂದಿನ ದಿನ.  ರಮೇಶರ ಸಾರಥ್ಯದಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ, ಕಾಸರಗೋಡುಇದಕ್ಕಾಗ ತ್ರಿಂಶತಿಯ ಸಿಹಿ. ಮೂವತ್ತು ಪ್ರದರ್ಶನಗಳ ಮೂಲಕ ಸಂಭ್ರಮ

ಮೊನ್ನೆಯಷ್ಟೇ ಪುತ್ತೂರಿನ ವಿವೇಕಾನಂದ ಕಾಲೇಜಿನ ಗಣೇಶೋತ್ಸವದ ಸಂದರ್ಭದಲ್ಲಿ ಬೊಂಬೆಯಾಟವಿತ್ತು. ಕೊನೆಗೆ ವಿಧ್ಯಾರ್ಥಿಗಳ ಕೈಗೆ ಬೊಂಬೆಯನ್ನು ಕೊಟ್ಟು ಕುಣಿಸಲು ಅಭ್ಯಾಸ ಮಾಡುತ್ತಿದ್ದುದನ್ನು ನೋಡಿದಾಗ ಎಂಟು ವರುಷಗಳ ಹಿಂದಿನ ಘಟನೆ ನೆನಪಾಯಿತು. ಆಗೊಂದು ಮಾತು ಹೇಳಿದ್ದರು – “ಅಪರೂಪದ್ದಾದ ಯಕ್ಷಗಾನ ಬೊಂಬೆಯಾಟವು ತೆಂಕುತಿಟ್ಟು ಪ್ರಕಾರದಲ್ಲಿ ಉಳಿದಿರುವುದು ನಮ್ಮದು ಮಾತ್ರ. ಇದನ್ನು ಉಳಿಸಿ, ಬೆಳೆಸುವುದು ಅಗತ್ಯ, ಅನಿವಾರ್ಯ. ಮುಂದಿನ ತಲೆಮಾರಿಗೆ ಇಂತಹುದೊಂದು ಕಲಾಪ್ರಕಾರವಿದೆ ಎಂಬ ಅರಿವು ಉಂಟಾಗಲಿ ಎನ್ನುವುದಕ್ಕಾಗಿ ಶಾಲೆಗಳಿಗೆ ಹೊರಟಿದ್ದೇವೆ.” ರಮೇಶರು ಅಂದಿನ ಮಾತು ಏನಿದೆಯೋ ಅದೇ ಮಾತಿಗೆ ಈಗಲೂ ಬದ್ಧರು

ಬೊಂಬೆಯಾಟ ಇತಿಹಾಸದತ್ತ ರಮೇಶ್ ಗಮನ ಸೆಳೆಯುತ್ತಾರೆ, “1900 ಸುಮಾರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವತ್ತು ಬೊಂಬೆಯಾಟ ತಂಡಗಳಿದ್ದುವಂತೆ. 1981ರಲ್ಲಿ ಎಂಟಕ್ಕೆ ಇಳಿಯಿತು. 2010ರಲ್ಲಿ ಕೇವಲ ಎರಡು ಮಾತ್ರ! ಒಂದು ಬಡಗುತಿಟ್ಟಿನ ಉಪ್ಪಿನಕುದ್ರು ಕೊಗ್ಗ ಕಾಮತರ ತಂಡ. ಮತ್ತೊಂದು ಕಾಸರಗೋಡಿನದು.” ರಮೇಶ್ ಮಾತನಾಡುತ್ತಿದ್ದಾಗ ಸಾಂಸ್ಕøತಿಕ ಪಲ್ಲಟವೊಂದರ ಚಿತ್ರ ಹಾದು ಹೋಯಿತು

ಬೊಂಬೆಯಾಟ ಸಂಘದ ಸಾಧನೆ ಮಹತ್ತರ. ಸದ್ದುಗದ್ದಲವಿಲ್ಲದ ಕಾಯಕ. ದೇಶ, ವಿದೇಶಗಳಲ್ಲಿ ಎರಡೂವರೆ ಸಾವಿರಕ್ಕೂ ಮಿಕ್ಕಿ ಪ್ರದರ್ಶನ. ಪಾಕಿಸ್ತಾನ, ಲಹೋರ್, ದುಬಾಯಿ, ಪ್ಯಾರೀಸ್, ಜೆಕೋಸ್ಲಾವಿಯಾದ ಫ್ರಾಗ್, ಚೀನಾ.. ಹೀಗೆ ಕಡಲಾಚೆಯ ಅನೇಕ ಬೊಂಬೆಯಾಟ ಉತ್ಸವಗಳಲ್ಲಿ ಭಾಗವಹಿಸಿದೆ. ಒಂದೊಂದು ಪ್ರದೇಶದ ಅವರ ಅನುಭವ ರೋಚಕ. ವಿಶ್ವದ ಅತೀ ಸುಂದರ ಮತ್ತು ಅತಿ ಚಿಕ್ಕ ಬೊಂಬೆಗಳು ಎನ್ನುವ ನೆಗಳ್ತೆಯನ್ನೂ ಪಡೆದಿವೆ. ಕಡಲಾಚೆಯ ಅನೇಕ ಕಲಾ ತಂಡಗಳಲ್ಲಿ, ಮ್ಯೂಸಿಯಂಗಳಲ್ಲಿ ಕಾಸರಗೋಡಿನ ಬೊಂಬೆಗಳಿವೆ. ಭಾರತದ ಕಲಾ ಪರಂಪರೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.   
        
ಪಾಕಿಸ್ತಾನದ ಲಾಹೋರಿನಲ್ಲಿ 1998ರಲ್ಲಿ ನಾಲ್ಕನೇ ಅಂತಾರಾಷ್ಟ್ರೀಯ ಗೊಂಬೆಯಾಟ ಉತ್ಸವ ಜರುಗಿತ್ತು. ಮೊದಲ ಬಾರಿಗೆ ಕಡಲಾಚೆಗೆ ಜಿಗಿದ ಖುಷಿ. ಮೂವತ್ತಮೂರು ದೇಶಗಳ ನೂರಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದುವು. ದಿನಗಳನ್ನು ರಮೇಶ್ ನೆನಪಿಸಿಕೊಳ್ಳುತ್ತಾರೆ, “ಭಾರತ - ಪಾಕಿಸ್ತಾನ ಅಂದಾಗ ರಕ್ಷಣೆಯ ದೃಷ್ಟಿಯಿಂದ ಬಿಗು ಪರಿಸ್ಥಿತಿ! ನೀವು ಹೋದರೆ ಹಿಂತಿರುಗುವುದು ಕಷ್ಟ ಎಂದು ಅಪ್ತೇಷ್ಟರು ಆಡಿದ್ದರು. ಮನಸ್ಸು ಹಿಂಜರಿದಿತ್ತು. ಹಿಂಜರಿಕೆಯ ನಡುವೆ ಅವಕಾಶವನ್ನು ಕೈ ಚೆಲ್ಲಬಾರದೆಂಬ ಸಂಕಲ್ಪವೂ ಇತ್ತು. ದುಬಾರಿ ವೆಚ್ಚದ ಪ್ರಯಾಣ. ವೈಯಕ್ತಿಕವಾಗಿ ಹೊಂದಿಸಲು ಕಷ್ಟದ ದಿನಮಾನಗಳು. 

 ಕೇರಳ, ಕರ್ನಾಟಕ ಸರಕಾರಗಳಲ್ಲಿ ವಿನಂತಿಸಿದಾಗ ಆಗಸ ನೋಡಿದುವಷ್ಟೇ! ಹೇಗೋ ಹೊಂದಿಸಿ ಲಾಹೋರ್ ತಲಪಿದೆವು. ಅಲ್ಲಿನ ಬಿಗು ರಕ್ಷಣೆಯನ್ನು ನೋಡಿದಾಗ ಊರು ಸೇರಿದರೆ ಸಾಕೆಂಬ ಭಯವೂ ಕಾಡಿತ್ತು. ಆದರೆ ಉತ್ಸವ ಸಂಘಟಕರ ಆತಿಥ್ಯ, ಅಲ್ಲಿನ ಕಲಾ ಮನಸ್ಸುಗಳ ಸ್ಪಂದನ, ಪ್ರದರ್ಶನಕ್ಕೆ ಪ್ರೋತ್ಸಾಹ ನೋಡಿದಾಗ ಲಾಹೋರ್ ಕೂಡಾ ನಮ್ಮ ದೇಶವೆಂಬಂತೆ ಭಾಸವಾಯಿತು.”

2010ರಲ್ಲಿ ಯುರೋಪಿಗೆ ಜಿಗಿತ. ಜೆಕೊಸ್ಲಾವಾಕಿಯಾದ ಪ್ರಾಗ್ನಲ್ಲಿ ಹದಿನಾಲ್ಕನೇ ಅಂತಾರಾಷ್ಟ್ರೀಯ ಬೊಂಬೆಗಳ ಉತ್ಸವ. ಮೂವತ್ತೆಂಟು ದೇಶಗಳ ನೂರು ತಂಡಗಳು ಭಾಗವಹಿಸಿದ್ದುವು. ರಮೇಶರ ತಂಡದ ಪ್ರವಾಸಕ್ಕೆ ಇನ್ಫೋಸಿಸ್ ಶ್ರೀಮತಿ ಸುಧಾಮೂರ್ತಿಯವರು ದೊಡ್ಡ ಮೊತ್ತದ ಕೊಡುಗೆ ನೀಡಿದ್ದರು. ಸ್ಥಳೀಯವಾಗಿ ಅಷ್ಟಿಷ್ಟು ಸಂಗ್ರಹವಾಗಿತ್ತು. ಪ್ರಾಗ್ ಉತ್ಸವ ತಂಡದ ಪಾಲಿಗೆ ಹೊಸ ಅನುಭವ ಕಟ್ಟಿ ಕೊಟ್ಟಿತ್ತು. ಬೊಂಬೆಗಳನ್ನು ನೋಡಿ ಅಲ್ಲಿನವರು ದಂಗಾಗಿದ್ದರು. “ಅತ್ಯುತ್ತಮ ಪಾರಂಪರ್ಯ ಬೊಂಬೆಗಳ ಪ್ರಶಸ್ತಿಯನ್ನು ಪಡೆದ ರಮೇಶ್ ಎಲ್ಲಾ ದೇಶಗಳ ಗಮನ ಸೆಳೆದಿದ್ದರು. ಬೇರೆ ಬೇರೆ ದೇಶಗಳ ಕಲಾವಿದರು ಇವರ ಬೊಂಬೆಗಳನ್ನು ಖರೀದಿಸಿದ್ದರಂತೆ. ಖುಷಿಯಲ್ಲಿ ಊರು ಸೇರಿದಾಗ ಹಲವು ಕನಸುಗಳು ಗೂಡು ಕಟ್ಟಿತ್ತು

ಆಗ ಸಂಘಕ್ಕೆ ತ್ರಿಂಶತಿಯ ಸಡಗರ. ಸಂಭ್ರಮಿಸಬೇಕಾದ ಸುಸಮಯ. ಅಬ್ಬರ, ಗೌಜಿಯಲ್ಲಿ ರಮೇಶರಿಗೆ ವಿಶ್ವಾಸವಿದ್ದಿರಲ್ಲ. ಸಂಭ್ರಮವು ಅಕಾಡೆಮಿಕ್ ಆಗಿ ಹರಿಯಬೇಕೆನ್ನುವುದು ದೂರದೃಷ್ಟಿ. ಹೆಚ್ಚು ಆರ್ಥಿಕ ಹೊರೆ ಬೀಳುವ ಪ್ರದರ್ಶನಗಳು ಮನೋರಂಜನೆಯನ್ನು ನೀಡಬಲ್ಲುದಷ್ಟೇ. ಅದು ಜ್ಞಾನವಾಗಿ ಹರಿದಾಗ ಮಾತ್ರ ಬೊಂಬೆಯಾಟದ ಮಹತ್ವ ತಿಳಿಯಲು ಸಾಧ್ಯವೆಂಬ ನಿರ್ಧಾರಕ್ಕೆ ಬಂದಿದ್ದರು. ಒಂದು ಹಂತದಲ್ಲಿ ರಮೇಶ್ ಕೈಕೈ ಹಿಸುಕಿ ಮೌನಕ್ಕೆ ಜಾರಿದ್ದರು.
ಒಂದು ಪೂರ್ವಾಹ್ನ. ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರ ದೂರವಾಣಿ - ‘ಸಂಘಕ್ಕೆ ಒಂದು ಬಸ್ ಖರೀದಿಸಿ. ಪ್ರದರ್ಶನಕ್ಕೆ ಅನುಕೂಲವಾಗುತ್ತದೆ! ರಮೇಶ್ ಚಿಂತೆಗೆ ಬಿದ್ದರು. ಸುಧಾಮೂರ್ತಿಯವರ ಕೊಡುಗೆ ಅಪಾತ್ರ ದಾನವಾಗಬಾರದೆನ್ನುವ ಎಚ್ಚರ. ವರುಷಕ್ಕೆ ಇಪ್ಪತ್ತೋ ಮೂವತ್ತೋ ಪ್ರದರ್ಶನ. ಅದರ ಹೊರತಾಗಿ ಬಸ್ ಶೆಡ್ಡಿನಲ್ಲೇ ಉಳಿಯಬೇಕಷ್ಟೇ. ಬಸ್ ಖರೀದಿಸಿದರೆ ನಿರ್ವಹಣೆಯು ಭಾರವಾದೀತೆನ್ನುವ ಭಯ

 ಪ್ರಜಾವಾಣಿ / ದಧಿಗಿಣತೋ / 21-9-2018

 

ಬೇರೇನು ಮಾಡಬಹುದು. ಪ್ರೊಪೋಸಲ್ ಕೊಡಿಸುಧಾಮೂರ್ತಿಯವರಿಂದ ಪುನಃ ಕೊಡುಗೆಯ ಅವಕಾಶ. “ಸಂಘಕ್ಕೆ ಮೂವತ್ತು ವರುಷವಾಯಿತು. ಮೂವತ್ತು ಶಾಲೆಗಳಲ್ಲಿ ಬೊಂಬೆಯಾಟದ ಪ್ರದರ್ಶನದ ವ್ಯವಸ್ಥೆಗೆ ನೆರವು ನೀಡಬಹುದೇ?” ರಮೇಶರಿಂದ ಹಿಮ್ಮಾಹಿತಿಯ ಮನವಿ. ಸುಧಾಮೂರ್ತಿಯವರಿಂದ ಹಸಿರು ನಿಶಾನೆ. ಮೂವತ್ತು ಶಾಲೆಗಳಲ್ಲಿ ವ್ಯವಸ್ಥಿತವಾಗಿ ಬೊಂಬೆಯಾಟ ಪ್ರದರ್ಶನ ಜರುಗಿತು. ‘ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ ಯಾನವು ನಿಜಾರ್ಥನ ತ್ರಿಂಶತಿ ಸಡಗರವಾಯಿತು.  

ರಮೇಶ್ ಪುತ್ಥಳಿ ಯಾತ್ರೆಯ ಅನುಭವ ಹೇಳುತ್ತಾ ಮೌನವಾದರು. ರಮೇಶರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಮೌನವು ಸುಲಭದಲ್ಲಿ ಅರ್ಥವಾದೀತು. ತಾನು ಕೈಗೊಳ್ಳುವ ಎಲ್ಲದರಲ್ಲೂ ಅಂತರ್ಮುಖಿ ಭಾವ. ಅದು ಯಶದ ಟಾನಿಕ್ ಕೂಡಾ. ವರ್ತಮಾನದ ಮನಸ್ಥಿತಿಯನ್ನು ರಮೇಶ್ ಹೊಂದಿದವರಾಗುತ್ತಿದ್ದರೆ ಸುಧಾಮೂರ್ತಿಯವರ ಕೊಡುಗೆಯನ್ನು ಬೇಗನೆ ಒಪ್ಪಿಕೊಳ್ಳುತ್ತಿದ್ದರು! “ಕೊಡುವವರು ಇದ್ದಾರೆಂದು ಯೋಚಿಸದೆ ಪಡೆಯಕೂಡದುಇದು ರಮೇಶರ ಬದುಕಿನ ಬದ್ಧತೆ.
ನಮ್ಮ ಶೈಕ್ಷಣಿಕ ಸ್ಥಿತಿ, ಗತಿ ರಮೇಶರಿಗೆ ಗೊತ್ತು. ಒಂದು ಕಾಲಘಟ್ಟದಲ್ಲಿ ಬದುಕಿಗಂಟಿದ್ದ ಕಲೆ, ಕಲಾ ಮನಸ್ಸುಗಳು ಶುಷ್ಕವಾಗಿವೆ. ಶೈಕ್ಷಣಿಕ ಪಠ್ಯಗಳಲ್ಲಿ ಕಲೆಯ ಸೋಂಕಿಲ್ಲ. ಕಲಿಕೆಯಲ್ಲಿ, ಸಾಹಿತ್ಯದಲ್ಲಿ ಕಲೆಯು ಮಿಳಿತವಾಗದಿದ್ದರೆ ಸುಭಗತೆ ಹೇಗೆ ಸಾಧ್ಯ? ವಿಷಾದವು ರಮೇಶರನ್ನು ಕಾಡುತ್ತಿತ್ತು. ಬೊಂಬೆಯಾಟದ ಸೊಬಗನ್ನು ಮಕ್ಕಳಿಗೆ ಮನಗಾಣಿಸಬೇಕು. ಯಕ್ಷಲೋಕದ ವೈಭವವು ಅವರಲ್ಲಿ ಬೆರಗನ್ನು ಹುಟ್ಟಿಸಬೇಕು. ಬೆರಗಿನೊಳಗೆ ಕಲೆಯನ್ನು ಕಾಣಬೇಕೆನ್ನುವ ಆಸೆ ಬಹು ಕಾಲದಿಂದ ಸುಪ್ತವಾಗಿತ್ತು. ಯಾವಾಗ ಸುಧಾಮೂರ್ತಿಯವರ ಕೊಡುಗೆಯ ಪ್ರಸ್ತಾಪ ಬಂದಾಗ ಬೊಂಬೆಗಳೇ ಅವರನ್ನು ಎಚ್ಚರಿಸಿದುವು

ಮೂವತ್ತು ಶಾಲೆಗಳಲ್ಲಿ ರಮೇಶರ ಕಲಾಯಾನ ಯಶಕಂಡಿದೆ. “ಬೊಂಬೆಗಳ ಅಂದಕ್ಕೆ, ರಂಗದಲ್ಲಿ ಅವುಗಳ ಮೋಡಿಗೆ ವಿದ್ಯಾರ್ಥಿಗಳು ಆಕರ್ಷಿತರಾಗಿದ್ದಾರೆ. ಎಳೆಯ ಮನಸ್ಸುಗಳಲ್ಲಿ ಕುತೂಹಲಗಳಿವೆ. ಎಲ್ಲಿ ಕುತೂಹಲ ಸದಾ ಜಾಗೃತವಾಗಿರುತ್ತದೋ ಅಲ್ಲಿ ಆಸಕ್ತಿಗಳು ಜೀವಂತವಾಗಿರುತ್ತವೆ. ನಮ್ಮ ಬೊಂಬೆಗಳು ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು, ಬೆರಗನ್ನು ಮೂಡಿಸಿವೆ. ಬೊಂಬೆಗಳನ್ನು ಕುಣಿಸಲು ವಿದ್ಯಾರ್ಥಿಗಳೊಳಗೆ ಪೈಪೋಟಿ ನೋಡಿದಾಗ ಆಶ್ಚರ್ಯವಾಗುತ್ತದೆ. ಹೃದಯ ತುಂಬಿ ಬಂತು.” ರಮೇಶ್ ಭಾವುಕರಾಗುತ್ತಾರೆ.

ರಮೇಶರ ಮುಂದಿರುವ ಕನಸುಸುಸಜ್ಜಿತ ಬೊಂಬೆಮನೆ (ಮ್ಯೂಸಿಯಂ) ಸಜ್ಜಾಗುತ್ತಿದೆ. ಸುಮಾರು ಮೂರ್ನಾಲ್ಕು ಕೋಟಿ ರೂಪಾಯಿಯ ಯೋಜನೆ. ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಿಹಿಯ ಸುದ್ದಿ ಮಾತನಾಡುತ್ತಿದ್ದಾಗಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘಕ್ಕೆ ಅಹ್ಮದಾಬಾದಿಗೆ ಬುಲಾವ್! ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಆಶ್ರಯ. 2018 ಸೆ.24ರಿಂದ 28 ತನಕಭಾರತ ಸಾಂಸ್ಕøತಿಕ ವೈಭವಕ್ಕೆ ವಿಶೇಷ ಆಹ್ವಾನ. ಅಲ್ಲಿನರಕಾಸುರ ವಧೆಪ್ರಸಂಗದಲ್ಲಿ ಕುಣಿಯಲು ಬೊಂಬೆಗಳು ಕಾಯುತ್ತಿವೆ. ಇವರಲ್ಲಿರುವ ಬೊಂಬೆಗಳು ನಿಜಾರ್ಥದಲ್ಲಿ ಸಾಂಸ್ಕøತಿಕ ಸ್ಥಳೀಯತೆಯ ಪ್ರತಿನಿಧಿಗಳು! 

No comments:

Post a Comment