Saturday, December 29, 2018

ಪ್ರಸಂಗ ಪುಸ್ತಕವು ಕಲಾವಿದನ ‘ಗೀತೆ’!



                ಅಂದಿನ ಆಟದಲ್ಲಿ ಬಹುತೇಕ ಅನುಭವಿ ಕಲಾವಿದರೇ ವೇಷಧಾರಿಗಳು. ಪೌರಾಣಿಕವಾದರೂ, ತೀರಾ ಅಪರೂಪದ್ದಾದ ಪ್ರಸಂಗ. ಭಾಗವತರು ಪ್ರಸಂಗ ಪುಸ್ತಕದೊಂದಿಗೆ ಚೌಕಿಯಲ್ಲಿ ಕಲಾವಿದರೊಂದಿಗೆ ಸಮಾಲೋಚಿಸುತ್ತಿದ್ದರು. ಸವ್ಯಸಾಚಿತ್ವವನ್ನು ಸ್ವತಃ ಆವಾಹಿಸಿಕೊಂಡ ಒಂದಿಬ್ಬರು ಮುಖವನ್ನು ಹುಳ್ಳಗೆ ಮಾಡಿ  ಮುಸಿಮುಸಿ ನಗುತ್ತಾ, “ಇವರ್ಯಾಕೆ ಹವ್ಯಾಸಿಗಳ ಹಾಗೆ ಮಾಡ್ತಾರೆ. ಸ್ಟೇಜಲ್ಲಿ ಎಲ್ಲಾ ಸರಿಯಾಗ್ತದೆ,” ಎನ್ನುವ ತೀರ್ಪನ್ನು ಪಕ್ಕದ ಕಲಾವಿದನಿತ್ತ ಹರಿಯಬಿಟ್ಟರು!  
                ವೈಭವ, ರಂಜನೆಗಳೇ ಪ್ರದರ್ಶನಗಳ ಮಾನದಂಡವಾಗಿರುವ ಕಾಲಘಟ್ಟದಲ್ಲಿ ವಿಮರ್ಶೆಗಳನ್ನು ಉಡಾಫೆಯ ಮೂಲಕ ಹಗುರಗೊಳಿಸಲಾಗುತ್ತದೆ. ಹಾಗಾಗಿ ಎಲ್ಲರನ್ನು, ಎಲ್ಲವನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯ ರೂಢನೆಯನ್ನು ಕಲಿಯುತ್ತಿದ್ದೇನೆ! ಕೆಲವೊಮ್ಮೆ ಕಣ್ಣಮುಂದೆ ಅಸಂಗತಗಳು ನಡೆಯುತ್ತಿದ್ದಾಗ ಅದಕ್ಕೆ ಮಾತು ಕೊಡುವ ಹಳೆಯ ಚಾಳಿ ಎಚ್ಚೆತ್ತುಕೊಳ್ಳುತ್ತದೆ! ‘ಎಲ್ಲವನ್ನೂ ಸ್ಟೇಜಲ್ಲಿ ಸರಿಮಾಡೋಣಎನ್ನುವಾತ ಪ್ರತೀ ಪದ್ಯಕ್ಕೂ ರಂಗದಲ್ಲಿ ಅಸಹಾಯಕತೆಯಿಂದ ಭಾಗವತರತ್ತ ನೋಡುವ, ಅವರ ಸೂಚನೆಗಾಗಿ ಕಾಯುವ ಎಷ್ಟೋ ಮನಸ್ಸುಗಳನ್ನು ನೋಡಿದ್ದೇನೆ. ರಂಗದ ವರ್ತನೆಗಳು ಕ್ರಮೇಣಸ್ಟೈಲ್ಎಂದು ಅಂಗೀಕಾರವಾಗುತ್ತದೆ.
                ಭಾಗವತರು ಪ್ರಸಂಗಪಟ್ಟಿಯನ್ನು ಹಿಡಿದು ಸಮಾಲೋಚನೆ ಮಾಡುವುದು ಅವಮಾನ! ಅದ್ಯಾಕೆ ಆವರಿಗೆಹವ್ಯಾಸಿಎನ್ನುವ ಹಣೆಪಟ್ಟಿ ಕಟ್ಟಿ ಸುಭಗರಾಗುವುದು? ಹವ್ಯಾಸಿಯೆಂದರೆ ಯಾಕಷ್ಟು ಹಗುರ ಭಾವ? ಒಂದು ಕಥಾನಕವು ಪ್ರಸಂಗದ ಚೌಕಟ್ಟಿನೊಳಗಿದೆ. ಇದನ್ನು ಕಲಾವಿದರೋ, ಭಾಗವತರೋ, ಮೇಳದ ಯಜಮಾನರೋ ಸೃಷ್ಟಿಸಿದ್ದಲ್ಲ. ಪ್ರಸಂಗದ ಆಶಯವನ್ನು ತಿಳಿದು ಮತ್ತು ಅರ್ಥಮಾಡಿಕೊಂಡು ಪ್ರದರ್ಶನದ ಸರ್ವಾಂಗಸುಂದರತೆಗೆ ಶ್ರಮಿಸಬೇಕಾದುದು ಬದ್ಧತೆ. ಪ್ರದರ್ಶನ ಯಶಸ್ಸಿಗೆ ಹಿಮ್ಮೇಳ, ಮುಮ್ಮೇಳ ಸಾಂಗತ್ಯವೂ ಅಗತ್ಯ ಮತ್ತು ಅನಿವಾರ್ಯ. ಯಾವುದೇ ಸಮಾಲೋಚನೆಗೆ ಸಿದ್ಧವಿಲ್ಲದವರು ಹೇಗೆ ಪಾತ್ರವನ್ನು ನಿರ್ವಹಿಸುತ್ತಾರೋ? ಕೊನೆಗೆ ಹಗುರವಾದ ಮತ್ತು ಲೌಕಿಕ ವಿದ್ಯಮಾನಗಳನ್ನು ಅರ್ಥದೊಳಗೆ ತುರುಕಿ, ಸಭಾಸದರಲ್ಲಿ ನಗೆಯನ್ನು ತರಿಸಿ, ತಾನೂ ನಗೆಪಾಟಲಾಗಿ, ತನ್ನ ದೌರ್ಬಲ್ಯಗಳನ್ನು ಮುಚ್ಚಿಡುವ ದೃಷ್ಟಾಂತಗಳು ಎಷ್ಟು ಬೇಕು?
                ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳು ಆಟದ ಚೌಕಿಯೊಂದರಲ್ಲಿ ರಾತ್ರಿ ಎಂಟು ಗಂಟೆಗೆ ಉಪಸ್ಥಿತರಿದ್ದರು. ವೃತ್ತಿಪರ ಕಲಾವಿದರನ್ನೊಳಗೊಂಡ ಪ್ರದರ್ಶನವು ಹತ್ತೂವರೆಗೆ ಶುರು. ಅವರಲ್ಲಿ ಅಂದಿನ ಆಟದ ಪ್ರಸಂಗ ಪುಸ್ತಕವಿತ್ತು. ಒಂದಿಬ್ಬರು ಕಲಾವಿದರನ್ನು ಹೊರತುಪಡಿಸಿ ಮಿಕ್ಕ ಒಂದಷ್ಟು ಮಂದಿ  ಗೇಲಿ, ತಮಾಶೆಯ ಲಹರಿಯೊಳಗೆ ಜಾರಿದ್ದರು. ಹಿಂದಿನ ಆಟಗಳ ಕೊಂಕುಗಳು, ಸಂಭಾವನೆ ವಿಚಾರಗಳು ತೇಲುತ್ತಿದ್ದುವು. “ಕಲಾವಿದರ ಇಂತಹ ವರ್ತನೆಯನ್ನು ಕಾಲದ ಬದಲಾವಣೆ ಅಂತೀರಾ? ಮೇಳವಾದರೆ ಸರಿ. ನಿನ್ನೆಯ ಕಲಾವಿದರೂ ಇಂದು ಇರುತ್ತಾರೆ. ಇಂದು ಹಾಗಲ್ಲವಲ್ಲ. ಕನಿಷ್ಠ ಸಮಾಲೋಚನೆ ಬಯಸದ ಕಲಾವಿದರಿಂದ ರಂಗದಲ್ಲಿ ಏನನ್ನು ನಿರೀಕ್ಷಿಸಬಹುದು. ಪ್ರದರ್ಶನ ಯಶಸ್ಸು ಆಗದಿದ್ದರೆ ಭಾಗವತರ ಮೇಲೆ ಆರೋಪಿಸುತ್ತಾರೆ.” ಎಂದರು.
                ಪ್ರಸಂಗ ಪುಸ್ತಕವನ್ನು ಮಾನಿಸುವಂತಹ ಎಷ್ಟೋ ಹಿರಿಯರನ್ನು ನೋಡಿದ್ದೇನೆ, ಗೌರವಿಸಿದ್ದೇನೆ. ಅವರೆಲ್ಲರ ಕಾಳಜಿಯನ್ನು, ಶ್ರದ್ಧೆಯನ್ನು ಗಮನಿಸಿದ್ದೇನೆ. ಚಾಲ್ತಿ ಪ್ರಸಂಗವಾದರೂ ಒಮ್ಮೆ ಪ್ರಸಂಗದೊಳಗೆ ಕಣ್ಣೋಡಿಸುವಂತಹ ಹಿರಿಯರು ನೆನಪಿಗೆ ಬರುತ್ತಾರೆ. ಹಾಗೆಂತ ಒಮ್ಮೆಯೂ ಪ್ರಸಂಗ ಪುಸ್ತಕವನ್ನು ಪೂರ್ವಸಿದ್ಧತೆಗಾಗಿ ನೋಡದವರೂ ಇದ್ದಾರೆ! ಹೊಸ ಕಥಾನಕ ಬಂದಾಗ ಇನ್ನೇನು ರಂಗ ಪ್ರವೇಶಿಸಲು ಒಂದೈದು ನಿಮಿಷ ಇರುವಾಗ ಪ್ರಸಂಗ ಪುಸ್ತಕ ನೆನಪಾಗುವುದೂ ಇದೆ. ಇವರೆಲ್ಲಾ ಹೇಗೆ ಪಾತ್ರಾಭಿವ್ಯಕ್ತಿ ಮಾಡುತ್ತಾರೋ? ನಿಜಕ್ಕೂ ವಿಸ್ಮಯ! ಅಭಿಮಾನಿಗಳ ಭಾಗ್ಯ!
                ತನ್ನ ಪಾತ್ರ ಯಾವುದೇ ಇರಲಿ ಇಡೀ ಪ್ರಸಂಗವನ್ನು ಕಲಾವಿದ ಓದದಿದ್ದರೆ ಕಥಾನಕದ ಪರಿಚಯವಾಗದು. ಚಾಲ್ತಿ ಪ್ರಸಂಗವಾದರೂ ತನ್ನ ಪಾತ್ರಕ್ಕಿರುವ ಪದ್ಯಗಳನ್ನು ಮಾತ್ರ ಬಾಯಿಪಾಠ ಮಾಡಿದರೆ ಸಾಲದು, ಇತರ ಪಾತ್ರಗಳ ಪದ್ಯಗಳನ್ನು ಅಧ್ಯಯನ ಮಾಡಿರಬೇಕು. “ಕಲಾವಿದನಾಗಬೇಕಾದರೆ ಪ್ರಸಂಗದ ಎಲ್ಲಾ ಪದ್ಯಗಳನ್ನು ಓದಬೇಕು. ಬಾಯಿಪಾಠ ಮಾಡಬೇಕು. ರಂಗದಲ್ಲಿ ಪದ್ಯಕ್ಕಾಗಿ ಒದ್ದಾಡಬಾರದು. ಇದಿರು ಅರ್ಥದಾರಿಯ ಪದ್ಯಗಳೂ ಗೊತ್ತಿರಬೇಕು. ಆಗ ಮಾತ್ರ ಆಟ, ಕೂಟದಲ್ಲಿ ಯಶ ಕಾಣಬಹುದು.” ಇದು ಹಿರಿಯ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರ ಅನುಭವ. 
                ಕಾಲಮಿತಿಯ ಪ್ರದರ್ಶನದಲ್ಲಿ ಪದ್ಯಗಳ ಆಯ್ಕೆಯೂ ಮುಖ್ಯವಾಗುತ್ತದೆ. ತಾಳಮದ್ದಳೆಯ ಸ್ಥಾಪಿತ ಪ್ರಸಂಗಗಳಲ್ಲಿ ಇಂತಿಷ್ಟೇ ಪದ್ಯ ಎನ್ನುವ ಶಾಸನವಿದೆ! ಸಮಯವಿದೆಯೆಂದು ಗೊತ್ತುಪಡಿಸಿದ ಪದ್ಯಗಳಿಗಿಂತ ಒಂದೆರಡು ಪದ್ಯಗಳನ್ನು ಭಾಗವತರು ಹಾಡಿದರೋ ಅರ್ಥದಾರಿ ಚಡಪಡಿಸುತ್ತಾನೆ. ಮುಖದ ನೆರಿಗೆ ಬಿಗುವಾಗುತ್ತದೆ. ವೇಷಧಾರಿಯಾದರೆ ಕುಣಿದು ಮಾತಿಗೆ ತಡವರಿಸುತ್ತಾನೆ. ಭಾಗವತರತ್ತ ದೀನಮುಖ ಬೀರುತ್ತಾರೆ. ಪರಿಣಾಮ, ಮುಂದಿನ ಕಾರ್ಯಕ್ರಮಗಳಿಗೆ ಭಾಗವತರಿಗೆ ಕರೆಯಿರುವುದಿಲ್ಲ!
                ಕಲಾವಿದನ ಸಂಸ್ಕಾರಗಳು ಹೇಗಿರುತ್ತದೋ ಅದರಂತೆ ವರ್ತನೆ. ಆತನಲ್ಲಿ ಬೌದ್ಧಿಕತೆ ಗಟ್ಟಿಯಿದ್ದರೆ ವೇಷ, ಅರ್ಥದಿಂದ ತೊಡಗಿ ದೈನಂದಿನ ಇತರ ವ್ಯವಹಾರದಲ್ಲೂ ಶುಚಿ, ರುಚಿ ಕಾಣಬಹುದು. ಕೀರ್ತಿಶೇಷ ದಾಸರಬೈಲು ಚನಿಯ ನಾಯ್ಕರಲ್ಲಿರುವ ಪ್ರಸಂಗ ಪುಸ್ತಕ ಸಂಗ್ರಹಗಳ ಒಪ್ಪ, ಓರಣವೇ ಅವರ ಕಲಾಗಾರಿಕೆಯ ಬದ್ಧತೆಯನ್ನು ಸೂಚಿಸುತ್ತಿತ್ತು. ಮುದ್ರಿತ ಪ್ರಸಂಗ ಪುಸ್ತಕವಿದ್ದರೂ ಅದನ್ನು ಮತ್ತೊಮ್ಮೆ ಬೇರೊಂದು ಪುಸ್ತಕದಲ್ಲಿ ಬರೆದು ಅಂದವಾಗಿ ಬೈಂಡ್ ಮಾಡಿಸಿ ಪ್ರದರ್ಶನಗಳಿಗೆ ಒಯ್ಯುತ್ತಿದ್ದರು. ಹೊಸಬ ಕಲಾವಿದ ಪುಸ್ತಕವನ್ನೊಮ್ಮೆ ಓದಿದರೆ ಸಾಕು, ಪಾತ್ರವೊಂದರ ವಿವರಗಳು, ರಂಗಕ್ರಿಯೆಗಳು ಗೊತ್ತಾಗಿಬಿಡುತ್ತದೆ. ಪ್ರವೇಶದಿಂದ ನಿರ್ಗಮನ ತನಕದ ಸೂಕ್ಷ್ಮ ವಿಚಾರಗಳನ್ನು ಕೆಂಪುಶಾಯಿಯಲ್ಲಿ ಎದ್ದು ಕಾಣುವಂತೆ ಬರೆದ ಪ್ರಸಂಗದ ಪುಸ್ತಕದ ಪ್ರತಿಗಳನ್ನು ನೋಡುವಾಗ ಕಣ್ಣು ದಣಿಯುವುದಿಲ್ಲ, ಅಕ್ಷರಗಳು ಮಯಮಯ ಕಾಣುವುದಿಲ್ಲ! 
                ಹವ್ಯಾಸಿ, ವೃತ್ತಿ ಕ್ಷೇತ್ರದಲ್ಲಿ ಪ್ರಸಂಗ ಪುಸ್ತಕಗಳ ಆಸಕ್ತಿ ಹೊಂದಿರುವವರು ಅನೇಕರಿದ್ದಾರೆ. ತುಂಬಾ ಕಷ್ಟಪಟ್ಟು ಪುಸ್ತಕಗಳನ್ನು ಸಂಗ್ರಹಿಸಿ ಜತನದಿಂದ ಕಾಪಾಡುವವರೂ ಇದ್ದಾರೆ. ಹೀಗೆ ಕಾಪಿಟ್ಟ ಪುಸ್ತಕಗಳು ಹಸ್ತಾಂತರವಾದರೆ ಮುಗಿಯಿತು, ಮರಳುವಾಗ ಅದರೊಳಗೆ ಚಿತ್ತಾರಗಳ ಸೌಂದರ್ಯ! ಪದ್ಯಗಳಿಗೆ ಟಿಕ್ ಹಾಕಿದ ರೇಖೆಗಳ ರಾಶಿಗಳು.  ಎರವಲು ಪುಸ್ತಕ ಎನ್ನುವ ಕನಿಷ್ಠ ಜ್ಞಾನವಿರುವುದಿಲ್ಲ. ಒಂದು ಪುಸ್ತಕವನ್ನು ಕಲೆಹಾಕಲು ಎಷ್ಟು ಕಷ್ಟಪಟ್ಟಿರಬಹುದೆಂದು ಯೋಚಿಸಿದರೆ ಪುಸ್ತಕದ ಅಂದವನ್ನು ಕೆಡಿಸುವ ಸಾಹಸಕ್ಕೆ ಕೈಹಾಕಲಾರರು.  ಹಾಲು, ಅಕ್ಕಿ ಬೆಲ್ಲ.. ಸಿಕ್ಕಿದ ಹಾಗೆ ಪುಸ್ತಕದಂಗಡಿಯಲ್ಲಿ ಪ್ರಸಂಗ ಪುಸ್ತಕಗಳು ಬೇಕಾದಂತೆ ಸಿಕ್ಕುವಂತಾಗಿದ್ದರೆ ನಾನಿಷ್ಟು ಗೊಣಗಾಡುತ್ತಿರಲಿಲ್ಲ.
                ನನಗೊಮ್ಮೆ ಅನುಭವವಾಗಿತ್ತು. ತೆಂಕು-ಬಡಗು ತಿಟ್ಟುಗಳ ಪ್ರಸಿದ್ಧರೊಬ್ಬರಿಗೆಚಂದ್ರಹಾಸಪ್ರಸಂಗ  ಬೇಕಾಗಿತ್ತು. ಸಕಾಲಕ್ಕೆ ನನ್ನ ವೆಚ್ಚದಲ್ಲಿಸಾಹಸಪಟ್ಟುತಲುಪಿಸಿದ್ದೆ. ನಾಲ್ಕೈದು ನೆನಪೋಲೆಗಳ ಬಳಿಕ ಪುಸ್ತಕವು ಮರಳಿತು. ಪುಸ್ತಕ ಬಿಡಿಸಿ ನೋಡ್ತೇನೆ, ಐದಾರು ಪುಟಗಳಲ್ಲಿ ಜಾಗ ಇದ್ದಲ್ಲೆಲ್ಲಾ ಸ್ವ-ಪದ್ಯಗಳನ್ನು ಕೆಂಪು ಶಾಯಿ ಪೆನ್ನಿನಲ್ಲಿ ಬರೆದಿದ್ದರು! ಪದ್ಯಗಳಿಗೆಲ್ಲಾ ಟಿಕ್ ಮಾಡಿದ್ದರು. ಪುಸ್ತಕದ ಒಟ್ಟಂದ (ನನ್ನ ದೃಷ್ಟಿಯಿಂದ) ಕೆಟ್ಟಿತ್ತು. ಅದನ್ನುನಿಮಗೆ ಪ್ರೀತಿಯ ಕೊಡುಗೆಎಂಬ ಹಿಂಬರಹದೊಂದಿಗೆ ಅವರಿಗೇ ಕಳುಹಿಸಿಕೊಟ್ಟಿದ್ದೆ! ನಂತರದ ದಿವಸಗಳಲ್ಲಿ ಮುಖಾಮುಖಿಯಾದರೂ ಪುಸ್ತಕ ಪ್ರಕರಣದ ಉಲ್ಲೇಖವೇ ಇಲ್ಲದೆ ಸಹಜವಾಗಿದ್ದರು. ಇಂತಹ ವರ್ತನೆಗಳು ಕಲೆಯ ಗುಣವೋ ಏನೋ? ಹೀಗಿರುವುದರಿಂದ ಯಕ್ಷಗಾನ ಕ್ಷೇತ್ರದಲ್ಲಿ ಬಹು ಕಾಲ ಬಾಳಬಹುದು ಎನ್ನುವ ಸಂದೇಶವನ್ನು ರವಾನಿಸಿದಂತೆ ಕಂಡಿತು!
                ಪ್ರಸಂಗ ಪುಸ್ತಕವು ಕಲಾವಿದನಿಗೆಗೀತೆಇದ್ದಂತೆ. ಭಾಗವತರಿಗೆ ಪದ್ಯ ಕಂಠಸ್ಥವಾದರೂ ಪುಸ್ತಕ ಎದುರಿಗಿರಲೇ ಬೇಕು. ಬಲಿಪ ನಾರಾಯಣ ಭಾಗವತರು ಹೇಳಿದ ಮಾತು ನೆನಪಾಗುತ್ತದೆ, “ಪದ್ಯ ಬಾಯಿಗೆ ಬಂದರೂ ಪುಸ್ತಕವು ಧೈರ್ಯಕ್ಕಾಗಿ ಎದುರಿನಲ್ಲಿರಬೇಕು.” ಹಲವಾರು ಪ್ರಸಂಗಗಳ ಪದ್ಯಗಳನ್ನು ಪುಸ್ತಕದ ಸಹಾಯ ಇಲ್ಲದೆ ಹಾಡುವ ಬಲಿಪರಿಗೆ ಇನ್ನೆಂತಹ ಧೈರ್ಯ? ಅಂದರೆ ಭಾಗವತನಾದವನು ಸದಾ ಎಚ್ಚರದಲ್ಲಿರಬೇಕು, ಫಕ್ಕನೆ ಕ್ಷಣಕಾಲ ಅನ್ಯಮನಸ್ಕನಾಗಿ ಕ್ಷಣಕ್ಕೆ ನೆನಪು ಕೈಕೊಟ್ಟರೆ ಎನ್ನುವುದಕ್ಕಾಗಿ ಪ್ರಸಂಗ ಪುಸ್ತಕ ಜತೆಯಲ್ಲಿರಬೇಕು ಎಂದಿದ್ದರು.
                ನವಮಾಧ್ಯಮಗಳಲ್ಲಿ ಪ್ರಸಂಗ ಪುಸ್ತಕಗಳನ್ನು ಅತ್ತಿತ್ತ ವಿನಿಮಯ ಮಾಡಿಕೊಂಡು ಸಂಗ್ರಹಿಸುವ ಹವ್ಯಾಸ ಆರಂಭವಾಗಿದೆ. ಅದಕ್ಕಾಗಿಯೇ ಜಾಲತಾಣಗಳನ್ನು ರೂಪಿಸುವ ಸುದ್ದಿಗಳನ್ನು ಓದುತ್ತಿದ್ದೇವೆ. ಯಕ್ಷಗಾನದ ಕವಿಗಳನ್ನು ಮಾನಿಸುವ ಸುಸಂಸ್ಕøತತೆ ಮೂಡುತ್ತಿದೆ. ಪ್ರದರ್ಶನದ ಜತೆಜತೆಗೆ ಪ್ರಸಂಗ ಪುಸ್ತಕಗಳತ್ತ ಆಸಕ್ತಿಯೂ ಹೆಚ್ಚುತ್ತಿರುವುದು ಖುಷಿಯ ಸಂಗತಿ. ಯಕ್ಷಗಾನದ ವಾಙ್ಮಯ ಲೋಕಕ್ಕಿದು ಗೌರವ.
(ಸಾಂದರ್ಭಿಕ ಚಿತ್ರ : ರಾಮ್ ನರೇಶ್ ಮಂಚಿ)

No comments:

Post a Comment